- ★ ಗ್ರೀಟಿಂಗ್ ಕಾರ್ಡುಗಳ ನೆನಪಿನಲ್ಲಿ ★ - ಜನವರಿ 14, 2021
- ಬಾಲ್ಕನಿಯ ಬೆಳಗು? - ಸೆಪ್ಟೆಂಬರ್ 22, 2020
- ಹಳೆ ಮಾರ್ಗಗಳ ಮಧ್ಯದಲ್ಲಿ - ಸೆಪ್ಟೆಂಬರ್ 10, 2020
ಕವಿತೆಯೊಂದು ಆಪ್ತವಾಗುತ್ತ ಹೋಗುವುದು ಆ ಕವಿತೆಯ ಭಾವ ನನ್ನದೇ ಆಗಿಬಿಡುವ ಗಳಿಗೆಗಳಲ್ಲಿ. ಅದರ ಯಾವುದೋ ಒಂದು ಸಾಲಿನಲ್ಲಿ ನನ್ನ ಈ ಕ್ಷಣದ ಖುಷಿಯೊಂದು ಅಕ್ಷರಗಳ ರೂಪದಲ್ಲಿ ಕುಳಿತಿರಬಹುದು; ಹೇಳಿಕೊಳ್ಳಲಾಗದ ದುಗುಡವೊಂದನ್ನು ಕವಿತೆಯ ಎರಡೇ ಸಾಲುಗಳು ಸರಳವಾಗಿ ಹೇಳಿಬಿಟ್ಟಿರಬಹುದು; ವ್ಯಕ್ತಪಡಿಸಲು ಪದಗಳೇ ಸಿಗಲಿಕ್ಕಿಲ್ಲ ಎಂದುಕೊಂಡಿದ್ದ ನನ್ನದೇ ಅನುಭವಗಳೆಲ್ಲ ಕೈಯೊಳಗೇ ಇವೆಯಲ್ಲ ಎನ್ನಿಸಿ ಕವಿತೆಯ ಮೇಲೊಂದು ಅಕ್ಕರೆ ಹುಟ್ಟಬಹುದು. ಹಾಗೆ ಕವಿಯ ಪರಿಧಿಯನ್ನು ದಾಟಿ ಓದುಗನ ತೆಕ್ಕೆ ಸೇರಿ, ಗ್ರಹಿಕೆಗಳನ್ನು ರವಾನಿಸುವ ಕೆಲಸ ಮಾಡುವ ಕವಿತೆಗಳೆಲ್ಲವೂ ಕಾಲ ಎನ್ನುವ ಮಿತಿಯನ್ನು ಮೀರಿ ನಿಲ್ಲುತ್ತವೆ. ಆ ರೀತಿಯ ಅಚ್ಚರಿಯನ್ನು, ಕವಿತೆಯೊಂದು ನನ್ನದೇ ಆಗಿಬಿಡುವ ಖುಷಿಯನ್ನು ಕಟ್ಟಿಕೊಡುವ ಕವಿತೆ ತಿರುಮಲೇಶರ ‘ಹಳೆ ಮಾರ್ಗಗಳು’.
ಈ ಕವಿತೆ ಆರಂಭವಾಗುವುದು ಆಗಿನ ದಕ್ಷಿಣ ಕನ್ನಡ ಜಿಲ್ಲೆಯ ಊರುಗಳ ಹೆಸರುಗಳೊಂದಿಗೆ. ಯಾವುದೋ ಒಂದು ಊರಿನ ಅಥವಾ ಜಾಗದ ಹೆಸರನ್ನು ಕೇಳಿದ ತಕ್ಷಣ ನಮ್ಮ ಯೋಚನೆಗಳೆಲ್ಲ ಆ ಊರಿನ ಸುತ್ತ ಸುತ್ತಲಾರಂಭಿಸುತ್ತವೆ. ನಮಗೆ ಪರಿಚಯವಿರುವ ಸ್ಥಳವಾದರೆ ಅದರ ಹಿನ್ನೆಲೆ, ವಿಶೇಷತೆಗಳು, ಅಲ್ಲಿ ನಮಗೆ ಪರಿಚಯವಿರುವ ಮನೆಗಳು ಅಥವಾ ಜನರು ಹೀಗೆ ಹಲವಾರು ಯೋಚನೆಗಳು ಥಟ್ಟನೆ ಸುಳಿಯುತ್ತವೆ; ಪರಿಚಯವಿಲ್ಲದ ಜಾಗವಾದರೆ ಆ ಯೋಚನೆಗಳ ಧಾಟಿ ಬೇರೆಯದೇ ಆಗಿರುತ್ತದೆ. ಹೀಗೆ ಒಂದು ಊರು ನಮ್ಮ ಬದುಕಿನೊಂದಿಗೆ, ಯೋಚನೆಗಳೊಂದಿಗೆ ಹಾಗೂ ಜೀವನಶೈಲಿಯೊಂದಿಗೆ ತನ್ನದೇ ಆದ ಸಂಬಂಧವನ್ನು ಬೆಳಸಿಕೊಂಡಿರುತ್ತದೆ. ಕೇವಲ ಒಂದೇ ಒಂದು ಸಲ ಭೇಟಿಕೊಟ್ಟ ಊರಾಗಿದ್ದರೂ ಸರಿಯೇ, ಅದರ ನೆನಪಿನ ತುಣುಕೊಂದು ಮನಸ್ಸಿನ ಯಾವುದೋ ಒಂದು ಮೂಲೆಗೆ ಅಂಟಿಕೊಂಡಿರುತ್ತದೆ. ಹಾಗಾಗಿಯೇ ಅದು ಯಾವುದೇ ಊರಾಗಿರಲಿ, ಅದು ಕಟ್ಟಿಕೊಡುವ ಸಾಧ್ಯತೆಗಳು ಹಾಗೂ ಆ ಸಾಧ್ಯತೆಗಳು ನಮ್ಮ ಯೋಚನೆಗಳನ್ನು ಹಿಡಿದಿಡುವ ರೀತಿ ಆಶ್ಚರ್ಯಕರವಾದದ್ದು. ಇಲ್ಲಿ ಕವಿ ಹಲವು ಊರುಗಳನ್ನು ಹೆಸರಿಸಿ, ಯಾರೂ ಕಡಿಯದ ಈ ಮಾರ್ಗಗಳು ‘ಇಲ್ಲಿಗೆ’ ಬಂದು ಸೇರಿದವು ಎನ್ನುತ್ತಾರೆ. ಹಾಗಾದರೆ ಆ ಮಾರ್ಗಗಳೆಲ್ಲ ‘ಎಲ್ಲಿಗೆ’ ಬಂದು ಸೇರಿರಬಹುದು ಎನ್ನುವ ಒಂದು ಪ್ರಶ್ನೆಯೇ ಇಡೀ ಕವಿತೆಯ ಧ್ವನಿಯಾಗಿ ಹಲವು ಮಾರ್ಗಗಳಲ್ಲಿ ಹರಿಯುತ್ತ ಹೋಗುತ್ತದೆ. ‘ಕವಿತೆಯ ಸಾಲುಗಳಂತೆ ಹುಟ್ಟಿದವು’ ಎನ್ನುವ ಒಂದು ಸಾಲು ಹಲವು ಅರ್ಥಗಳನ್ನು ಹುಟ್ಟಿಸುತ್ತ, ಕಲ್ಪನೆಯ ಎಲ್ಲ ಮಾರ್ಗಗಳನ್ನೂ ಓದುಗನೆದುರು ತೆರೆದಿಡುತ್ತದೆ.
ಹಾಗೆ ಹುಟ್ಟಿಕೊಂಡ ಮಾರ್ಗಗಳಲ್ಲಿ ಸಂಭವಿಸುವ ಸ್ಥಿತ್ಯಂತರಗಳ ನಿರಂತರತೆಯನ್ನು ಕವಿ ಯಾವುದೇ ಭಾವೋದ್ವೇಗಗಳಿಲ್ಲದೆ ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಾರೆ. ಮಾರ್ಗ ಎನ್ನುವುದು ಇಲ್ಲಿ ಪ್ರತಿಯೊಬ್ಬನೂ ಅನಿವಾರ್ಯವಾಗಿಯಾದರೂ ಚಲಿಸಲೇಬೇಕಾದ ದಾರಿಯಾಗಿ ನಮ್ಮೆದುರು ತೆರೆದುಕೊಳ್ಳುತ್ತ ಹೋಗುತ್ತದೆ. ‘ನಡೆದದ್ದೆ ಮಾರ್ಗ ಆಗ’ ಎನ್ನುವ ಸಾಲಿನ ‘ಆಗ’ ಎನ್ನುವ ಪದ ಘಟಿಸಿದ, ಮುಗಿದುಹೋದ, ಮರಳಿ ಪಡೆಯಲಾಗದ ಸಮಯವನ್ನೂ, ಸಂಗತಿಗಳನ್ನೂ ಎದುರು ತಂದು ನಿಲ್ಲಿಸುತ್ತದೆ. ಈ ‘ಆಗ’ ಎನ್ನುವುದು ಯಾವಾಗ ಬೇಕಾದರೂ ಆಗಿರಬಹುದು! ಅದೊಂದು ಬಾಲ್ಯದ ಮುಗ್ಧತೆಯಾಗಿರಬಹುದು; ಯೌವನದ ಹುಮ್ಮಸ್ಸಿರಬಹುದು; ಹುಂಬತನದ ಮನಸ್ಥಿತಿಯಿರಬಹುದು; ಆದರ್ಶಗಳ ಕನಸ ಹೊತ್ತ ಕಾಲವೂ ಆಗಿರಬಹುದು. ಅರಿವಿಗೇ ಬಾರದಂತೆ ಘಟಿಸಿದ ಸ್ಥಿತ್ಯಂತರಗಳು ಕೂಡಾ ‘ಆಗ’ ಎನ್ನುವ ಕಾಲಘಟ್ಟವೊಂದನ್ನು ಸೃಷ್ಟಿಸುತ್ತವೆ. ಬದುಕಿನ ಪ್ರತಿಯೊಂದು ಚಲನೆಯೂ ತನ್ನೊಂದಿಗೆ ಸೃಷ್ಟಿಸಿಕೊಂಡ ಗತಕಾಲಕ್ಕೆ ಮತ್ತೆ ಹಿಂದಿರುಗಲಾಗದ ಕ್ಷಣದಲ್ಲಿ ಮನುಷ್ಯ ಅದರ ಬಗ್ಗೆ ಯೋಚಿಸತೊಡಗುತ್ತಾನೆ ಹಾಗೂ ಆ ಕಾಲವನ್ನು ಮರಳಿ ಪಡೆಯಲಾಗದ ದುಃಖವೂ ಆತನನ್ನು ಒಂದಿಲ್ಲೊಂದು ರೀತಿಯಲ್ಲಿ ಬಾಧಿಸುತ್ತಲೇ ಇರುತ್ತದೆ. ‘ಹಾಗೇ ನಡೆದೇ ತಲುಪಿದೆವು’ ಎನ್ನುವ ಸಾಲು ಯಾವುದೇ ಕಟ್ಟುನಿಟ್ಟಾದ ನಿಯಮಗಳಿಲ್ಲದೇ ಹಳೆ ಮಾರ್ಗಗಳಲ್ಲಿ ಬದುಕು ರೂಪುಗೊಳ್ಳುತ್ತ ಬಂದ ಬಗೆಯಾಗಿ, ಮೊಣಕಾಲೆತ್ತರಕ್ಕೆ ಎಬ್ಬಿಸಿದ ಮಣ್ಣು ಹಾಗೂ ನೆರೆನೀರುಗಳೆಲ್ಲ ಸ್ವತಂತ್ರ ಮನಸ್ಥಿತಿಯ ಸಂಕೇತಗಳಾಗಿ ಹೊಸ ಹೊಳಹುಗಳನ್ನು ಕಾಣಿಸುತ್ತವೆ.
ನಡೆದವರಿಗೆ ಮಾತ್ರವೇ ಮಾರ್ಗಗಳ ಮರ್ಮ ಅರ್ಥವಾದೀತು ಎನ್ನುವ ಕವಿ, ಅವುಗಳ ಮಾತು ಮತ್ತು ಮೌನದ ಬಗ್ಗೆ ಹೇಳುತ್ತಾರೆ. ಇಲ್ಲಿಯವರೆಗೂ ಕೇವಲ ಊರುಗಳು ಸಂಧಿಸುವ, ಹಳ್ಳಿಗಳನ್ನು ಪೇಟೆಗಳಿಗೆ ಕೂಡಿಸುವ ಪ್ರಾಪಂಚಿಕ ದಾರಿಯಾಗಿದ್ದ ಹಳೆ ಮಾರ್ಗ ಇದ್ದಕ್ಕಿದ್ದಂತೆಯೇ ತಾತ್ವಿಕ ನೆಲೆಗಟ್ಟಿನಲ್ಲಿ ಮನುಷ್ಯನೊಂದಿಗೆ ಮುಖಾಮುಖಿಯಾಗುವ ಹೊಸದೊಂದು ಮಾರ್ಗವಾಗಿ ತೆರೆದುಕೊಳ್ಳುತ್ತದೆ. ಹಳೆ ಮಾರ್ಗಗಳಲ್ಲಿ ನಡೆಯುತ್ತಲೇ ಬಂಧನಗಳನ್ನು ಕಳಚಿಕೊಳ್ಳುತ್ತ ಹೊಸದೊಂದು ಮಾರ್ಗದೆಡೆಗೆ ನಮ್ಮನ್ನು ನಾವೇ ಒಯ್ಯಬೇಕಾದ ಒತ್ತಡವೊಂದು ಹುಟ್ಟಿಸುವ ದುಃಖವೂ ಕೇವಲ ನಮ್ಮದೇ ಆಗಿಬಿಡುವ ಒಂಟಿತನ ಓದುಗನನ್ನು ತಾಕುತ್ತದೆ. ಅನುಭವಗಳನ್ನು ನಮ್ಮದಾಗಿಸಿಕೊಳ್ಳದೇ ಬರಿಯ ಮಾತುಗಳಲ್ಲಿ ದಾರಿಯನ್ನು ಹುಡುಕುವವರಿಗೆ ಮಾರ್ಗದೊಂದಿಗಿನ ಮಾತುಕತೆ ಸಾಧ್ಯವಾದೀತು ಹೇಗೆ; ಮಾರ್ಗ ಮಧ್ಯದ ಮೌನ ದಕ್ಕೀತು ಹೇಗೆ!
ವಿಷಾದವಿಲ್ಲದೆ ಬರಿಗಾಲಲ್ಲಿ ಕೊರಕಲುಗಳನ್ನು ನಡೆದ ನೆನಪಿದೆ ನನಗೆ ಎನ್ನುವಾಗ ಕವಿ ಕೇವಲ ತಾನಾಗಿ ಉಳಿಯದೇ ಓದುಗನ ಅನುಭವಗಳೊಂದಿಗೆ ಸಂಧಿಸುವ ನೆನಪುಗಳನ್ನು ಕೆದಕುತ್ತಾರೆ. ಇಲ್ಲಿ ‘ಕೊರಕಲುಗಳು’ ಎನ್ನುವುದು ಸಂಘರ್ಷ-ಅಡೆತಡೆಗಳನ್ನು ಬಿಂಬಿಸಿದರೆ, ‘ಬರಿಗಾಲಲ್ಲಿ’ ಎನ್ನುವುದು ಖಾಲಿತನದ ಸಂಕಟದ ಸಂಕೇತವಾಗುತ್ತದೆ; ‘ವಿಷಾದವಿಲ್ಲದೆ’ ಎನ್ನುವ ಒಂದು ಪದ ಎಲ್ಲ ಸವಾಲುಗಳನ್ನು ಸಮಚಿತ್ತದಿಂದ ಸ್ವೀಕರಿಸಿದ ಮನಸ್ಥಿತಿಯನ್ನು ಚಿತ್ರಿಸುತ್ತದೆ. ಮೂವತ್ತು ವರ್ಷಗಳ ಹಿಂದೆ ಇದ್ದಿಲ ಬಸ್ಸು ಕಾಣಿಸಿಕೊಂಡು ಧೂಳು ಹಾರಿಸಿದ್ದನ್ನು ನೆನಪಿಸಿಕೊಳ್ಳುವ ಕವಿ, ನೆನಪುಗಳಲ್ಲಷ್ಟೇ ಉಳಿದುಹೋಗಲು ಸಾಧ್ಯವಿರುವ ಬದುಕಿನ ಚಿತ್ರಗಳೆಲ್ಲವನ್ನೂ ಕಣ್ಣೆದುರು ತಂದು ನಿಲ್ಲಿಸುತ್ತಾರೆ. ಬದಲಾವಣೆಗೆ ಹಾತೊರೆವ ಮನಸ್ಸಿಗೆ ‘ಇದ್ದಿಲ ಬಸ್ಸು’ ಒಂದು ದೊಡ್ಡ ಆವಿಷ್ಕಾರದಂತೆ ಭಾಸವಾಗಬಹುದು; ಬದಲಾವಣೆಗಳಿಗೆ ಹೊಂದಿಕೊಳ್ಳಲಾರದವನಿಗೆ ಅದೊಂದು ಧೂಳೆಬ್ಬಿಸಿ ಗದ್ದೆಗಳನ್ನು ಹಾಳುಮಾಡುವ ಬೆಳವಣಿಗೆಯಾಗಿ ಕಾಣಿಸಬಹುದು; ತಟಸ್ಥನಾಗಿ ಅದರೊಳಗೆ ಕೂತು ಪಯಣಿಸುವವನಿಗೆ ಅದೊಂದು ಪ್ರಯಾಣವನ್ನು ಸುಲಭಗೊಳಿಸುವ ಸಾಧನವೂ ಆಗಬಹುದು. ಹೀಗೆ ಇದ್ದಿಲ ಬಸ್ಸನ್ನು ನೋಡದಿರುವ ಓದುಗನಿಗೂ ಅದೊಂದು ರೂಪಕವಾಗಿ ಕಾಣಿಸಿಕೊಂಡು, ಬದಲಾವಣೆಯ ಮಾರ್ಗದಲ್ಲಿ ಎದುರಾಗುವ ಸಂದಿಗ್ಧತೆಯ ಸ್ವರೂಪವನ್ನು ಕಟ್ಟಿಕೊಡಲು ಸಫಲವಾಗುತ್ತದೆ.
ನಂತರದ ಸಾಲುಗಳ ‘ನಂತರ’ ಎನ್ನುವ ಶಬ್ದ ಓದುಗನನ್ನು ನೆನಪುಗಳಾಚೆಗಿನ ವಾಸ್ತವಕ್ಕೆ ತಂದು ನಿಲ್ಲಿಸುತ್ತದೆ. ಹಳೆಯ ಹಾದಿಗಳೆಲ್ಲ ಇದ್ದಲ್ಲೆ ಬೆಳೆದು, ಹೊಸ ರೂಪ ಧರಿಸಿ ನಿಂತು, ‘ದೂರ’ದ ಪರಿಕಲ್ಪನೆಯನ್ನೇ ಬದಲಾಯಿಸಿಬಿಟ್ಟಿರುವ ಬೆಳವಣಿಗೆಯೊಂದು ಗತಕಾಲವನ್ನೇ ಇಲ್ಲವಾಗಿಸುವ ಕಲ್ಪನೆಯನ್ನು ‘ಹಳೆ ಮಾರ್ಗಗಳೀಗ ಇದ್ದಲ್ಲೆ ಬೆಳೆದಿವೆ’ ಎನ್ನುವ ಸಾಲು ಕಟ್ಟಿಕೊಡುತ್ತದೆ. ‘ರಾಷ್ಟೀಯ ಹೆದ್ದಾರಿ’, ‘ಸಾರಿಗೆ ವ್ಯವಸ್ಥೆ’ಗಳೆಲ್ಲವೂ ಹಳೆ ಮಾರ್ಗಗಳ ಹೊಸ ಆವೃತ್ತಿಗಳಾಗಿ, ‘ಪೇಟೆಯ ಸೆರಗಿನಲ್ಲಿ’ ಹಳ್ಳಿಯ ಹೃದಯಗಳೆಲ್ಲ ಅವಿತು ಕುಳಿತಂತೆ ಭಾಸವಾಗುತ್ತದೆ. ಬೆಳವಣಿಗೆ-ಬದಲಾವಣೆಗಳನ್ನೆಲ್ಲ ಮುಕ್ತ ಹೃದಯದಿಂದ ಒಪ್ಪಿಕೊಂಡರೂ, ಮನಸ್ಸು ಹಳೆ ಮಾರ್ಗಗಳ ಬೆನ್ನು ಹತ್ತಿ ಓಡುವುದು ಭಾವಾತ್ಮಕ ಸೀಮೆಯ ಇತಿಮಿತಿಗಳನ್ನು ದಾಟಲಾಗದ ಕಟುವಾಸ್ತವವಾಗಿ ಕಣ್ಣಮುಂದೆ ನಿಲ್ಲುತ್ತದೆ. ಕಾಲಸಪ್ಪಳಗಳೆಲ್ಲ ಹಳೆ ಮಾರ್ಗಗಳ ಮಧ್ಯದಲ್ಲಿ ಉಳಿದುಹೋಗಿ, ಕ್ರಮಿಸುವ ಕ್ರಿಯೆಯೊಂದು ಅರ್ಧದಲ್ಲಿಯೇ ನಿಂತುಹೋದಂತಹ ವಿಷಾದವೊಂದು ಓದುಗನ ಮನಸ್ಸನ್ನು ಆವರಿಸಿಕೊಳ್ಳುತ್ತದೆ.
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ