- ಕವಿ ಸಮಯ – ಗೋಪಾಲ ತ್ರಾಸಿ ಕವಿತೆಗಳು - ಆಗಸ್ಟ್ 7, 2021
1.ಹಿಡಿಯಾಸೆ
ಸತ್ಯ, ದಾರಿಹೋಕರರನ್ನಲ್ಲ ರಾಜಾಧಿರಾಜ
ದರ್ಭಾರವನ್ನೂ ಅಲ್ಲ,
ಸತ್ಯಸಂದರ ಬರ ಕಾಯುವ ಶಬರಿ
ದೇವ ದೇವತೆಗಳ ಶಸ್ತ್ರಾಸ್ತ್ರ ಗುರಿ ನನ್ನೆದೆ ಗುಂಡಿಗೆ
ನಾನಾದೇನೋ ದೇವಾದಿ ಮಹಾದೇವ ?!
ಎತ್ತೆತ್ತಲಿಂದಣ ಎನಿತೀ ಇರಿತ ಜರ್ಜರಿತ
ಜೀವಾತ್ಮ ಆಹಾ! ಏನೀ ಸುಖ….. !
ಫರಮಾನು ಮೊದಲೇ ಸಿದ್ಧವಾಗಿದೆ ಕೊಲೆಗಡುಕ ನಾನೇ
ಕೊಲೆ ಘಟಿಸಿಲ್ಲವಲ್ಲ ಇನ್ನೂ !
ನಾನೇ ಸತ್ತು ಹೋಗಲೇನು ?
ಪ್ರೀತಿಸಿದ್ದು ಪ್ರೇಮಿಸಿದ್ದು ಕಾಮಿಸಿದ್ದು ಖಾತ್ರಿಯಿಲ್ಲ
ಧಮನಿ ಧಮನಿಗಳಲಿ ಜಿನುಗುವ ಜೀವದೊಲುಮೆ
ಈ ಕ್ಷಣವೂ ಸ್ಪಷ್ಟವಿದೆ
ಸಕಲವನು ತ್ಯಜಿಸಲೆ ಬ್ರಹ್ಮಾಂಡ ತೊರೆಯಲೆ
ಎದೆಕುದಿಯೊಂದ ಬಿಟ್ಟು ಬಿಡು
ಆತ್ಮ ಬೆಚ್ಚಗಿರಲು
ತಲೆಯ ಮೇಲಣ ಒಜ್ಜೆ ಒಯ್ಯಬಹುದು
ಒಯ್ಯಲೆಂತು ಮನದೊಳಗೆ ಬೇರು ಬಿಟ್ಟ ಬೆಟ್ಟ
ಒಪ್ಪಿಕೊ ಅಪ್ಪಿಕೊ ನಿನ್ನ ನೀನೆ
ಓ ಅನಾಪ್ತ ಆತ್ಮ
ಎಳೆ ಜೀವದೆಸಳ ಬೆಚ್ಚಗಿನ ಬೀಡು
ಪರಮೋಚ್ಚ ಗರ್ಭಗುಡಿ ತಾಯಿಗರ್ಭ
ಕರುಣಿಸುವೆಯಾ ಒಂದೇ ಒಂದು ಕ್ಷಣ
ಮನುಷ್ಯನಾಗಬೇಕೆಂಬ ಹಿಡಿ ಆಸೆ
2.ಶಿಲ್ಪ ಸಾನ್ನಿಧ್ಯ
ಅವನದ್ದು ಧ್ಯಾನಸ್ಥ ಬದುಕು
ಆಗಾಗ ಕಾಲದ
ಕರಾರುವಾಕ್ ಉಳಿಪೆಟ್ಟು
ಸೂಕ್ಷ್ಮ ಕೆತ್ತನೆ ಶಿಲ್ಪಿ
ತನ್ನ ತಾನೇ ಕೆತ್ತಿಸಿಕೊಂಡ
ಶಿಲೆ
ಬೆಣ್ಣೆಯಂತಹ
ಅವಳೋ ಪುತ್ಥಳಿ ತಿಳಿ
ಪುಷ್ಕರಣಿಯ ಪನ್ನೀರು
ತಂಪು ತಂಪಾಗಿ
ಎದೆಯೊಳಗಿಳಿದವಳು
ಶಿರಕ್ಕೇರಿಸಿಕೊಂಡ ಶಿವಗಂಗೆಯಂತೆ
ಸಂಭ್ರಮಿಸಿದಳು
ಮುಡಿಯಿಂದ ಅಡಿತನಕ ತೊಯ್ದಳು
ನಗ್ನ ಶಿಲೆಗೆ ಫಳಫಳ ಹೊಳಪು
ಕೆಳಗಿಳಿಯಬೇಕೆನಿಸಿತು
ಅವಳಿಗೆ ಹರಿಯಬೇಕೆನಿಸಿತು
ಹರಿಯುತ್ತ
ತಿಳಿಯಾಗಬೇಕೆನಿಸಿತು
ಅವನು ಶಿಲೆಯಾಗಿ
ಹನಿ ಬಿಡದೆ ಹೀರಿದ
ತಣ್ಣನೆ ಕೊರೆಯತೊಡಗಿದಳು
ಒಳಗಿಂದ
ಅವ ಚೀರಿದ
ಅವುಳು ಚಿಮ್ಮಿದಳು
3.……ಈ ಪರಿಯ ಪ್ರೀತಿ
ಗವ್ವವೆಂಬ
ಜಡಗತ್ತಲಲಿ ಪ್ರೀತಿ
ಆಶಾ ಕಿರಣ
ಚಲನಶೀಲ
ಪ್ರೀತಿ
ಪ್ರಕೃತಿಯ ಅಂತರಾತ್ಮ
ಪ್ರೀತಿಯಲಿ
ಅಹಂ ಸಾವು !
ಪಡೆದು ಧನ್ಯತೆ
ಪ್ರೀತಿ
ಕೊಟ್ಟು ಅಮರತ್ವ
ಪ್ರೀತಿ
ದಾರಿ ತೋರುವುದು
ಉತ್ಕಟವಾದರೆ
ಗುರಿ ತಪ್ಪಿಸುವುದು
ಪ್ರೀತಿಯ
ಏಕಮೇವ ಧ್ಯೇಯ
ಬಂಧನ ಮುಕ್ತಿ
ಬದುಕಿನದ್ದು;
ಉತ್ಕಟವಾದರೆ
ಅದರಾಚೆಯದ್ದೂ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್