- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಸೋಜುಗಾದ ಸೂಜುಮಲ್ಲಿಗೆಯಿಂದ ಕೃತಕ ಅರೋಮ್ಯಾಟಿಕ್ ಮಲ್ಲಿಗೆಯವರೆಗೆ
ಹರಿಹರನ ‘ಪುಷ್ಪರಗಳೆ’ ಕನ್ನಡದ ವಿಶಿಷ್ಟ ಕೃತಿ . ಶಿವನಿಗೆ ಅರ್ಚಿಸುವ ಹೂಗಳನ್ನು ಅವಲಂಬಿಸಿಯೇ ಬರೆದ ಕೃತಿ ಅದರ ಹೊರತಾಗಿಯೂ ಕನ್ನಡ ಸಾಹಿತ್ಯದ ಎಲ್ಲಾ ಕಾಲಘಟ್ಟಗಳಲ್ಲಿಯೂ ಹೂವಿನ ಕುರಿತು ಮಾಹಿತಿ ಇದ್ದೇ ಇದೆ .ಹಾಗೆ ಲೇಖನವೆಂಬ ಈ ಕಿರುಬುಟ್ಟಿಯಲ್ಲಿ ಅಲ್ಪ ಕಾಲದಲ್ಲಿ ಸಿಕ್ಕ ಕೆಲವು ಹೂಗಳನ್ನು ಇಟ್ಟು ನೋಡುವ ಕಿರು ಪ್ರಯತ್ನ ಇಲ್ಲಿದೆ.
“ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರಿತಿಹಳು ಘಮ ಘಮ ಹೂಗಳು ಬೇಕೇ ಎನ್ನುತ ಹಾಡುತ ಬರುತಿಹಳು” ಬಿಳುಪಿನ ಮಲ್ಲಿಗೆ, ಹಳದಿಯ ಸಂಪಿಗೆ, ಹಸುರಿನ ಮರುಗ, ಹೊಸ ಸೇವಂತಿಗೆ ಹೊಸ ಇರುವಂತಿಗೆ ಅರಸಿನ ತಾಳೆ, ಅರಳಿದ ಹೊಸಕಮಲ,ಬಿಳುಪಿನ ಜಾಜಿ ಅರಳಿದ ಬಿಳಿ ಕಮಲ ಎಂದ ಪ್ರೊ. ಎಂ.ವಿ. ಸೀತಾರಾಮಯ್ಯನವರ “ಹೂವಾಡಗಿತ್ತಿ” ಪದ್ಯ ಹೆಚ್ಚಿನವರಿಗೆ ನೆನಪಿದೆ ಅನ್ನಿಸುತ್ತಿದೆ. ಹಳೆಗನ್ನಡ ಸಾಹಿತ್ಯದಿಂದ ಮೊದಲ್ಗೊಂಡು ಆಧುನಿಕ ಸಾಹಿತ್ಯದವರೆಗೂ ಹೂಗಳ ಉಲ್ಲೇಖ ಕಂಪು ಇದ್ದೇ ಇದೆ. ಇವುಗಳೆಲ್ಲ ದೇಸಿ ಹೂಗಳು. ಇತರ ಕಾವ್ಯಗಳಿಗೆ ಹೋಲಿಸಿಕೊಂಡರೆ ಲಕ್ಷ್ಮೀಶನ ‘ಜೈಮಿನಿಭಾರತ’ದಲ್ಲಿ ಹೂಗಳ ಹೆಸರಿನ ಉಲ್ಲೇಖ ಹೆಚ್ಚೇ ಎನ್ನಬಹುದು. ಹಾಗೆ ಹಳಗನ್ನಡ ನಡುಗನ್ನಡ ಕಾವ್ಯಗಳಲ್ಲಿ ಹೂಗಳ ಪ್ರಸ್ತಾಪ ಅನೂಚಾನವಾಗಿ ಬಂದೇ ಇದೆ ಅವುಗಳ ಪರಿಮಳವನ್ನು ಕಿಂಚಿತ್ ಆಘ್ರಾಣಿಸುವ ಪ್ರಯತ್ನ ಇಲ್ಲಿದೆ.
“ಸೋಜುಗಾದ ಸೂಜು ಮಲ್ಲಿಗೆ …..” ಈ ಹಾಡು ಎಲ್ಲರ ಬಾಯಲ್ಲಿ ಇರುವಂಥದ್ದೆ ಮಂಡೆಮ್ಯಾಲೆ ದುಂಡು ಮಲ್ಲಿಗೆ ಹೊತ್ತ ಶಿವನ್ನು ಸ್ತುತಿಸುವ ಹಾಡು ಮೈಸೂರು ಪ್ರದೇಶವನ್ನು ಸಂಕೇತಿಸುವ ಮಲ್ಲಿಗೆಯ ಎರಡು ಪ್ರಕಾರಗಳಾದ ಸೂಜು ಮಲ್ಲಿಗೆ ಮತ್ತು ದುಂಡುಮಲ್ಲಿಗೆಗಳನ್ನು ಹೇಳುತ್ತದೆ. ‘ಚೆಲ್ಲಿದರೂ ಮಲ್ಲಿಗೆಯಾ’ ಈ ಹಾಡೂ ಕೂಡ ಮಾದೇವನನ್ನು ಕುರಿತಾಗಿರುವುದು . ಅಂತೆಯೇ ಮೈಸೂರಿನ ಅದಿದೇವಿ ಚಾಮುಂಡಿಯನ್ನು ಕುರಿತಾದ ಹಾಡಿನಲ್ಲೂ “ನೋಡವಳಂದಾವ ಮೊಗ್ಗಿನ ಮಾಲೆಚಂದಾವ ತಾಳೆಹೂ ತಂದೀವ್ನಿ ತಾಳ್ತಾಯೆ ಮೇಗಲ ತೋಟದ ಮರುಗ” ಎಂದು.ಶ್ರೀಕೃಷ್ಣನ ತಂಗಿ ನಮ್ಮ ಪರಶಿವನ ಮಡದಿ ಮೈಸೂರಿನ ಚಾಮುಂಡಿದೇವಿ ಮುಡಿದಿರುವ ಮಲ್ಲಿಗೆ ಮಾಲೆ, ತಾಳೆ, ಮರುಗಗಳ ಹೆಸರುಗಳಿವೆ ಅಂತೆಯೇ ಮಲ್ಲಿಗೆಯ ಹೆಸರಿನಲ್ಲೇ ಇರುವ “ಚೆಲ್ಲಿರೆಲ್ಲಾ ಮಲ್ಲಿಗೆಯಾ ಶ್ರೀ ಲಕ್ಷ್ಮಿಚರಣದ ಮ್ಯಾಲೆ” ಎಂದು ಲಕ್ಷ್ಮಿಯನ್ನು ಸ್ತುತಿಸುವ ದೇವರನಾಮವೂ ನಮ್ಮಲ್ಲಿ ಜನಜನಿತವಾಗಿದೆ.
“ಘಮಘಮ ಘಮಾಡಿಸ್ತಾವ ಮಲ್ಲಿಗೆ ನೀನು ಹೊರಟ್ಟಿದ್ದೀಗ ಎಲ್ಲಿಗೆ………?” ಹಾಡಿನಲ್ಲೇ ಮಲ್ಲಿಗೆಯ ಪರಿಮಳವಿದೆ. ‘ಮಲ್ಲಿಗೆ’ ಕನ್ನಡನಾಡಿನಲ್ಲಿ ಪ್ರಸಿದ್ಧವಾದ ಪರಿಮಳಭರಿತವಾದ ಹೂವನ್ನು ಸಂಸ್ಕೃತದಲ್ಲಿ ಇದನ್ನು ‘ಮಲ್ಲಿಕಾ’ ಎನ್ನುತ್ತಾರೆ. ‘ಸೂಜಿಮಲ್ಲಿಗೆ’, ‘ದುಂಡು ಮಲ್ಲಿಗೆ’ ಎಂಬ ಪ್ರಭೇದಗಳೂ ‘ಮೈಸೂರು ಮಲ್ಲಿಗೆ’, ‘ಅಂಬೂರು ಮಲ್ಲಿಗೆ’ ಎಂಬ ಪ್ರಭೇದಗಳೂ ಇವೆ. “ಮಲ್ಲಿಕಗೆ ವಿಚಕಿಳಂ” ಎಂದು “ಅಭಿದಾನ ವಸ್ತುಕೋಶದಲ್ಲೂ ಮಲ್ಲಿಗೆಯ ಕುರಿತು ಹೇಳಿದೆ.
ಜಾನಪದ ತ್ರಿಪದಿಗಳಲ್ಲಿ ಹೂಗಳು
ಕಲ್ಲು ಕೊಟ್ಟವ್ವಗೆ ಎಲ್ಲ ಭಾಗ್ಯವೂ ಬರಲಿ
ಪಲ್ಲಕ್ಕಿ ಮೇಲೆ ಮಗ ಬರಲಿ ಆ ಮನೆಗೆ
ಮಲ್ಲಿಗೆ ಮುಡಿಯೋ ಸೊಸೆ ಬರಲಿ|| ಈ ಸಾಲುಗಳನ್ನು ಸಹಾಯ ಪಡೆದ ಹೆಣ್ಣೊಬ್ಬಳು ಕೃತಜ್ಞತೆಯಿಂದ ಹೇಳಿದ ಸಾಲುಗಳು ಇಲ್ಲಿ “ಮಲ್ಲಿಗೆ ಮುಡಿಯುವ ಹೆಣ್ಣು ಬರಲಿ ಅವಳಿಂದ ಅವರ ವಂಶೋದ್ಧಾರವಾಗಲಿ” ಎಂಬ ತುಂಬು ಆಶಯ ಜಾನಪದರ ಸ್ವಚ್ಛಂದ ಮನಸ್ಸಿನ ಅನಾವರಣ ಮಾಡುತ್ತದೆ.
ಗಂಡು ಹೆಣ್ಣುಗಳ ಸಂಬಂಧವನ್ನು ಹೂಗಳೊಂದಿಗೆ ಬೆಸೆದ ತ್ರಿಪದಿಯಲ್ಲಿ “ ಕೂಲಿ ಮಾಡಿದರೇನು ಕೋರಿ ಹೊತ್ತರೇನು ?ನನಗೆ ಪತಿರಾಯ ಚಂದ” ಎಂದು ಹೆಂಡತಿ ಹೇಳಿದರೆ ಗಂಡ ಹೆಂಡತಿಯ ಮೇಲಿನ ಪ್ರೇಮದಿಂದ “ಕಮಲದ ಹೂ ನಿನ್ನ ಕಾಣದೆ ಇರಲಾರ ಮಲ್ಲಿಗೆ ಮಾಲೆ ಬಿಡಲಾರೆ ಕೇದಿಗೆ ಗರಿ” ನಿನ್ನನಗಲಿ ಇರಲಾರೆ ಎನ್ನುತ್ತಾನೆ. ನಿಷ್ಕಲ್ಮಷ ಪ್ರೀತಿಯ ಸ್ವಚ್ಛಂದತೆ ಇಲ್ಲಿ ತಿಳಿಯುತ್ತದೆ .
ಬೆಳಗಾಗೆದ್ದು ನೆನೆಯುವ ದೇವರುಗಳಲ್ಲಿ ಹೂಗಳು
ಗಣನಾಯ್ಕನನ್ನು ಸ್ತುತಿಸುವ ಗೀತೆಯಲ್ಲಿ “ಮರುಗ ಮಲ್ಲಿಗೆ ಜಾಜಿ ಗಣನಾಯ್ಕ” ಎಂದೂ ಮುತ್ತಿನ “ಚಿಬ್ಬಲ ತಕ್ಕೊಳ್ಳಿ ಬೆಳಗಾಯ್ತು ಹೂ ಜಾಜಿಗಳು ಅರಳ್ಯಾವೆ ಎಂದು ಕೃಷ್ಣನ ಸ್ತುತಿಸುವ ತ್ರಿಪದಿಯಿದೆ. “ಮುಡಿದು ಬಂದವರೆ ಮುರುಗನ- ಚೆಲುವಯ್ಯಾ ಅವರಿಡಿದು ಬಂದವರೆ ಜವನವ” ಎಂದು ಮೇಲುಕೋಟೆ ಚೆಲುವರಾಯನನ್ನು ಭಜಿಸುವ ತ್ರಿಪದಿಯೂ“ಚೆಲ್ಲಿರೆಲ್ಲಾ ಮಲ್ಲಿಗೆಯಾ ಶ್ರೀ ಲಕ್ಷ್ಮಿಚರಣದ ಮ್ಯಾಲೆ’ ಎಂದು ಲಕ್ಷ್ಮಿಯನ್ನು ಸ್ತುತಿಸುವ ದೇವರನಾಮವೂ ನಮ್ಮಲ್ಲಿ ಜನಜನಿತವಾಗಿದೆ, ನಮ್ಮಿಷ್ಟದ ದೇವತೆಗಳನ್ನು ನಮ್ಮಿಷ್ಟದ ಹೂಗಳೊಂದಿಗೆ ಭಜಿಸುವ ಭಾವದೀಪ್ತಿ ಜನಪದರ ಭಕ್ತಿಯ ಅನನ್ಯತೆಯನ್ನು ಹೇಳುತ್ತದೆ.
ಸಾಂಸಾರಿಕ ಗೀತೆಗಳಲ್ಲಿ “ಅಚ್ಚ ಮಲ್ಲಿಗೆ ಹೂಗಳ ಮುಚ್ಚಿ ಮಾರುವ ಜಾಣ, ಸರದಾರ ಬರುವಾಗ ಸುರಿದಾವೋ ಮಲ್ಲಿಗೀ”,”ಅಣ್ಣ ದಂಡಿಗೆ ಹೋದ ದುಂಡೂ ಮಲ್ಲಿಗೆ ತಂದ”, “ಆಚೆ ಅಣ್ಣನ ಮನೆ ಈಚೆಲೀ ತಂಗಿ ಮನೆ ನಟ್ಟನಡುವೇ ಜಾಜಿ ವನದಲ್ಲಿ ತಂಗ್ಯಮ್ಮ ಸುರಗಿಯ ಹೂವ ಕೊಯ್ದಾಳೂ”, “ತಾವರೀಯ ಗಿಡ ಹುಟ್ಟಿ ದೇವರಿಗೆ ನೆರಳಾಧಿ”, ಎಂದು ಸೋದಾಹರಣವಾಗಿ ಹೂಗಳ ಹೆಸರುಗಳು ಬಂದು ಸಂಸಾರದ ಭಾಂಧವ್ಯವನ್ನು ಹೇಳುತ್ತವೆ .
ಪ್ರೇಮ ಗೀತೆಗಳಲ್ಲಿ ‘ಸಂಪಿಗೆ ತನಿಯಂಥ ಹುಡುಗ’ ಎಂಬನ ಹೆಸರಿನ ಗೀತೆಯೇ ಇದೆ. “ಮಲ್ಲಗೀ ಹೂವಿಗೂ ಬೆಳ್ಳನ ಹೆಣ್ಣಿಗೂ”, “ಪದುಮಜಾತಿಯ ಹೆಣ್ಣು,ಬೆಳ್ಳೀಯ ಬಳೆಯೋಳೆ ದುಂಡು ಮಲ್ಲಿಗೆ ಮುಡಿಯೋಳೆ”, “ಪಾರಿಜಾತದ ಹೂವೆ ಪಾರ್ವತಿಯ ಕೊರಳ ಪದಕಾವೆ”, “ದಾಳಿಂಬೆ ಹೂವಾದರೇನು ಕೂಡಿದ ಹೆಣ್ಣು ಕಡುಚೆಲುವು” ಎಂಬ ಮಾತುಗಳು ಮಾಧುರ್ಯಭರಿತ ನಲ್ಲ- ನಲ್ಲೆಯರ ಒಡನಾಟದ ಒಳಹುಗಳನ್ನು ವಿವರಿಸುತ್ತವೆ.
ನಿಸರ್ಗಕ್ಕೆ ಸಂಬಂಧಿಸಿದ ಗೀತೆಗಳಲ್ಲಿ ಹಿಪ್ಪಿ ಹೂ, ಜಾಲದಹೂ, ಅಂಟಿಕೆ ಪಿಂಟಿಕೆ ಪದಗಳಲ್ಲಿ ಸ್ಯಾವಂತಿ, ಎಂಬ ಹೆಸರುಗಳು ಬಂದಿವೆ. ಪೌರಾಣಿಕ ಗೀತೆ ಗೌರಿಕಲ್ಯಾಣದಲ್ಲಿ ಪಾರಿಜಾತ ಪುಷ್ಪ ಮಾಲೆಯ ಜೊತೆಗೆ ಚೆಂಡುಹೂ, ದಾಳಿಂಬೆ ಹೂ,ಎಳ್ಳು ಹೂಗಳ ಉಲ್ಲೇಖ ಅಲ್ಲಲ್ಲಿ ಬರುತ್ತದೆ. ಹೆಣ್ಣಿನ ಜಾತಿ ಪದ್ಮಿನಿ ಜಾತಿ ಎಂದು ಕಮಲದ ಹೆಸರನ್ನು ಉಲ್ಲೇಖಿಸಿದೆ. ನಿಸರ್ಗದ ನಾನಾ ರೀತಿಯ ಹೂಗಳು ಇಲ್ಲಿ ಕಷ್ಟ ಸುಖ ದುಃಖ ದುಮ್ಮಾನಗಳನ್ನು ವಿವರಿಸುವಂಥವು.
ವಡ್ಡಾರಾಧನೆಯಲ್ಲಿ ಹೂ
‘ವಿದ್ಯುಚ್ಛೋರನೆಂಬ ರಿಸಿ’ಯ ಕಥೆಯಲ್ಲಿ “ಕಳ್ಳರನ್ನು ಕಂಡು ಹಿಡಿದ ಸುರಖ ಎಂಬ ವಿದ್ಯೆಯನ್ನು ಕಲಿತನು , ನಾವು ಕಳವು ಮಾಡುವ ಉಪಾಯುವನ್ನು ತಿಳಿಸುವ ಕಪಟ ಶಾಸ್ತ್ರವನ್ನು ಕಲಿತನು. ಒಂದು ದಿವಸ ನಾವಿಬ್ಬರೂ ಕಾಡಿನಲ್ಲಿ ಆಟವಾಡಲೆಂದು “ಇಂದ್ರೋಪಮ” ಎಂಬ ಕಾಡಿಗೆ ಹೋದೆವು . ಅಲ್ಲಿ ಅಶೋಕ, ಪುನ್ನಾಗ, ರಂಜಿ, ತಿಲಕ, ಹೊಂಗೆ ಮುಂತಾದ ಮರಗಳನ್ನು ಕಂಡೆವು ಎಂಬಲ್ಲಿ ಪ್ರಸ್ತಾಪವಿದೆ. ರಮ್ಯತೆಯನ್ನು ಹೇಳುವಲ್ಲಿ ಹೂಗಳ ಹೆಸರುಗಳನ್ನೂ ಉಲ್ಲೇಖಿಸಿದೆ.
ಪಂಪನಲ್ಲಿ ಪುಷ್ಪಗಳು
ಆದಿಕವಿಪಂಪ ತನಗೆ ಬನವಾಸಿಯ ನೆನಪನ್ನು ತರುವ ವಸ್ತುಗಳ ಕುರಿತು ಹೇಳುವಾಗ “ಬಿರಿದಮಲ್ಲಿಗಂಡೊಡಂ…….. ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎಂದು ಪಂಪಭಾರತದಲ್ಲಿ ಮಲ್ಲಿಗೆಯನ್ನು ಉಲ್ಲೀಖಿಸಿದ್ದಾನೆ. “ಸೊಗಯಿಸಿ ಬಂದ ಮಾಮರವನೆ ತಳ್ತೆಲೆವಳ್ಳಿಯೆ ಪೂತಜಾತಿ” ಈ ಪದ್ಯದಲ್ಲಿ ಬರುವ ‘ಸುರಯಿ’ ಎಂದರೆ ಸುರಗಿ ಮರ ಕಂಪಿನ ಹೂಗಳನ್ನು ಬಿಟ್ಟು ಸುತ್ತಲೂ ಹರಿಯುತ್ತಿರುವ ನದಿ, ಪಕ್ಷಿ, ಪ್ರಾಣಿ ಇತ್ಯಾದಿಗಳನ್ನು ವರ್ಣಿಸಿದ್ದಾರೆ.
ಪಗೆಯ ಕುಕಿಲ್ವ ಕೋಗಿಲೆಯ ಪಾಡುವ ತುಂಬಿಯೆ ನಲ್ಲರೊಳ್ಮೊಗಂ
ನಗೆಮೊಗದೊಳ್ ಪಳಂಚಲೆಯ ಕೂಡುವ ನಲ್ಲರೆ ನೊಳ್ಪಾಡಾವ ಬೆ
ಟ್ಟಗಳೊಳೊಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್
ಆ ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ ದಟ್ಟವಾಗಿ ಸೇರಿಕೊಂಡಿರುವ ವೀಳ್ಯದೆಲೆಯ ಬಳ್ಳಿಗಳೇ ಹೂವನ್ನು ಬಿಟ್ಟರೆ ಜಾಜಿ…. ಸಂಪಗೆ ಗಿಡಗಳೇ ಎಂಬುದಾಗಿ ಬನವಾಸಿ ಸುತ್ತ ಮುತ್ತಲಿದ್ದ ಜಾಜಿ ಸಂಪಿಗೆಗಳ ಬಾಹುಳ್ಯವನ್ನು ಹೇಳಿದೆ.
“ಕಮಳಾಕರರಂ ಪೊಕ್ಕಾಕಾಶಧ್ವನಿ ಕುಶೇಶಯ” (ಚತುರ್ಥಾಶ್ವಾಸದ 47ನೆ ಪದ್ಯದಲ್ಲಿ) ಅಂದರೆ ದುರವಸ್ಥೆಯಲ್ಲಿ ನಿಂತಂತೆ ದುಂಬಿಗಳು ಅನೇಕ ಕೇಸರಗಳ ಇಕ್ಕಟ್ಟಿನ ಸಂಕಟಕ್ಕೊಳಗಾಗಿ ತಾವರೆಯ ಮೊಗ್ಗೆಂಬ ಗುಡಿಸಿಲಿನೊಳಗೆ ಸಿಕ್ಕಿಬಿದ್ದುವು ಎಂದು ದುಂಬಿಗಳನ್ನು ವರ್ಣಿಸಲಾಗಿದೆ.
(ಕಲ್ಹಾರ 7-93 ಸೌಗಂಧಿಕಾಪುಷ್ಪ)
ಚತುರ್ಥಾಶ್ವಾಸದ(75 ನೆ ಪದ್ಯ)ಲ್ಲಿ “ನಿರೇಜಮಿಮ್ಮಾವು, ಮಲ್ಲಿಗೆಯೆಂದಿಂತಿ, ಮತ್ತು ವೃತ್ತದಲ್ಲಿ ಕೊಸಗು” ಪದ ಬಳಕೆಯಾಗಿದೆ. ಕನ್ಯೆಯನ್ನು ಸೃಷ್ಟಿಸುವಾಗ ಮನ್ಮಥನೆಂಬ ಬ್ರಹ್ಮನು ಚಂದ್ರ ಮಲಯಮಾರುತ ಶ್ರೀಗಂಧ, ತಾವರೆ ಮಲ್ಲಿಗೆ ಮತ್ತು ಕೊಸಗು ಅಂದರೆ ಬೆಟ್ಟದಾವರೆಯ ಎಸಳುಗಳನ್ನು ಅಮೃತರಸದಲ್ಲಿಯೂ ಶೃಂಗಾರರಸದಲ್ಲಿಯೂ ನೆನಸಿದನೆಂದು ಹೇಳಿದೆ. ಶೃಂಗಾರದ ಪರಾಕಾಷ್ಠತೆಯನ್ನು ಹೇಳುವಾಗ ಹೂಗಳ ಹೆಸರನ್ನು ಔಚಿತ್ಯಪೂರ್ಣವಾಗಿ ಬಳಸಿಕೊಂಡಿದ್ದಾರೆ.
ಐದನೆ ಆಶ್ವಾಸ (30ನೆ ಪದ್ಯ)ದಲ್ಲಿ ಪೂತ ಗೊಜ್ಜಗೆಗಳ……….. ಗಂಪನೆ ಬೀರುತಿರ್ಪ ಮಲ್ಲಿಗೆಯೊಳರಲ್ವ ಸಂಪಗೆಯೊಳಗ್ಗಲಿಸಿತ್ತು ಎಂಬಲ್ಲಿ ಗೊಜ್ಜಗೆ ಎಂದರೆ ಬೆಟ್ಟದಾವರೆ ಹೂಗಳಿಗೆ ಅನ್ವಯಿಸಿ ಹೇಳಿರುವುದು. ಇದೇ ಆಶ್ವಾಸದ 56ನೆ ಪದ್ಯದಲ್ಲಿ ವಿದಳಿತ ನುತ ‘ಶತಪತ್ರ’ ,58 ನೆ ಪದ್ಯದಲ್ಲಿ ‘ತಾಮರಸಂತಿ’ರೆ ಎಂದು ತಾವರೆಯನ್ನು ಉಲ್ಲೇಖಿಸಿದೆ. ಹೂಬಿಟ್ಟಿದ್ದ ಸೇವಂತಿಗೆ ಮತ್ತು ಸಿಂಧೂರ ವರ್ಣದಲ್ಲಿದ್ದ ಹೂವುಗಳಲ್ಲಿದ್ದ ಆಸಕ್ತಿ ಮಿಶ್ರಗಂಧವನ್ನು ಬೀರುತ್ತಿರುವ ಮಲ್ಲಿಗೆಯಲ್ಲಿಯೂ ಅರಳಿದ ಸಂಪಿಗೆಯಲ್ಲಿಯೂ ಅತಿಶಯವಾಯಿತು ಎಂಬ ಅರ್ಥ ಬರುವ ಪದ್ಯವಿದು. ಹಾಗೆ 33 ನೆ ಪದ್ಯದಲ್ಲಿ “ಮಲ್ಲಿಗೆಗೆ ನಲ್ಲರ ಮೆಲ್ಲೆರ್ದೆ”, (34ರಲ್ಲಿ) “ಪೊಸ ಪೂವಿನೊಳ್ ಪೊರೆದು ಪೊಣ್ಮಿದ ಕಂಪು ಮೊಗಂಗಳಂ ಚಳಿಲ್ಲನೆ ಕೊಳೆ ಪೊಯ್ಕೆ” ಎಂದಿದೆ. ಒಟ್ಟಾರೆಯಾಗಿ ಎಲ್ಲ ಹೂಗಳ ಕಂಪನ್ನೂ, ವರ್ಣವನ್ನು ಸೌಂದರ್ಯಕ್ಕನ್ವಯಿಸಿ ಹೇಳಿದ್ದಾರೆ
ರನ್ನ ಗಧಾಯುದ್ದದಲ್ಲಿ ಕುಸುಮ
ಭೀಮಸೇನಾಡಂಬರಮ್ ಅಧ್ಯಾಯದಲ್ಲಿ 31ನೆ ಪದ್ಯದಲ್ಲಿ ಕಮಲಾಕರ “ಅರೆ ಸೀದುವು ತಾವರೆ” ಎಂಬ ಮಾತು ಸುಕೋಮಲವಾದ ತಾವರೆ ಹೂಗಳೇ ಭೀಮನ ಸಿಂಹಧ್ವನಿಗೆ ಸೀದು ಕರಕಲಾದವು ಅಂದರೆ ಭೀಮನ ಆಡಂಬರದ ಧ್ವನಿಗೆ ಸೌಕುಮಾರ್ಯವಾಗಿದ್ದವೆಲ್ಲ ತತ್ತರಿಸುದುವು ಎಂಬರ್ಥ ಇಲ್ಲಿ ಬರುತ್ತದೆ. ನೇಮಿಚಂದ್ರನ ‘ಲೀಲಾವತಿಪ್ರಬಂಧ’ದಲ್ಲಿಯೂ “ಮಲ್ಲಿಕಾವೃತಿಯೊಳ್ವಲ್ಲಭೆಯುಂ ತೊಳಲ್ದರಸಿಯುಂವಿದ್ಯಾವಧೂವಲ್ಲಭಂ “ ಎಂಬ ಉಲ್ಲೇಖವಿದೆ.
ಮುತ್ತುಗದ ಹೂ
‘ಮುತ್ತುಗ; ಇದೊಂದು ಮರ.ಅಗಲವಾದ ಎಲೆಗಳಿಂದಲೂ ಕಡುಗೆಂಪು ಹೂಗಳಿಂದಲೂ ಕೂಡಿರುವುದು. ‘ಮುತ್ತುಗ’ ಮೂಲತಃ ದ್ರಾವಿಡ ಪದ. ಕನ್ನಡದಲ್ಲಿ ಮುತ್ತ, ಮುತ್ತುಕ, ಮುತ್ತುಲು, ಮುಂತಾದ ಹೆಸರುಗಳಿಂದಲೂ ಕರೆಯುವುದು ರೂಢಿಯಲ್ಲಿದೆ. ಸಂಸ್ಕೃತದಲ್ಲಿ ಪಲಾಶ, ತಾಪಿಚ್ಛ ಎಂಬ ಹೆಸರುಗಳಿಂದ ಕರೆಯುತ್ತಾರೆ. ಶಬ್ದಮಣಿದರ್ಪಣದಲ್ಲಿ “ ಮುಳ್ತುಗಮೆಂದು ಮರಂ “ ಎಂದಿದ್ದಾರೆ. ಆಂಡಯ್ಯನ ಕಬ್ಬಿಗರ ಕಾವದಲ್ಲಿ “ಸುತ್ತಲುಂ ಪೂತ ಮುಳ್ತುಗದ ಮರಂಗೊಳೊಳಮ್” ಎಂಬ ಮಾತಿದೆ.
ಜನ್ನನ ಯಶೋಧರ ಚರಿತೆಯಲ್ಲಿ ಮುತ್ತುಗದ ಹೂ
ಸಿಸರಮನೆ ಪಿಡಿದು ಪರಕೆಗೆ
ವಸಂತನಲರ್ವೋದ ಮಾವಿನಡಿ ಮಂಚಿಕೆಯೊಳ್
ಕುಸುರಿದರಿದಡಗಿನಂತವೊ
ಲೆಸುದುವು ತದ್ವನದೊಳಿರ್ದ ಮುತ್ತದ ಮುಗ್ಗುಳ್ಗಳ್
ಅಂದರೆ ಚಂಡಮಾರಿದೇವತೆಗೆ ಹರಕೆ ಒಪ್ಪಿಸುವುದಕ್ಕಾಗಿ ವಸಂತನು ಶಿಶಿರ ಋತುವನ್ನು ಹಿಡಿದು , ಹೂವನ್ನು ಬಿಟ್ಟ ಮಾವಿನ ಮರದ ಮಣೆಯ ಮೇಲೆ ಕತ್ತರಿಸಿದ ಮಾಂಸದ ತುಂಡುಗಳಂತೆ ಆ ವನದಲ್ಲಿ ಎದುರಿದ್ದ ಮುತ್ತುಗದ ಹೂವಿನ ಮೊಗ್ಗುಗಳು ಕಂಗೊಳಿಸಿದವು ಎಂಬ ಅರ್ಥ ಬರುತ್ತದೆ.
ವಚನದಲ್ಲಿ ಸಂಪಗೆ, ಮಲ್ಲಿಗೆ
“ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದಡೆ ರಂಜನೆಯಹುದಲ್ಲದೆ ಅದರ ಗಂಜಳ ಬಿಡದು” ಎಂಬಲ್ಲಿ ಹೂ ಹೂವಿನ ಪರಿಮಳ ಯಾವಾಗಲೂ ಧನಾತ್ಮಕತೆ ಹೊಂದಿರುವುದು ಎಂಬ ತತ್ವವಿದೆ ಇದನ್ನೆ ನಮ್ಮ ಜಾನಪದರು ಹೂವಿನಿಂದ ನಾರೂ ಕೂಡ ಸ್ವರ್ಗಕ್ಕೆ ಹೋದಂತೆ ಎಂದಿರುವುದು. ಅಂದರೆ ಹೂಗಳಿದ್ದಲ್ಲಿ ಇಡೀ ಪರಿಸರವೇ ಸದಾಶಯದಿಂದ ಕೂಡಿರುತ್ತದೆ ಎಂಬ ತಾತ್ಪರ್ಯವಿದೆ. ಅಕ್ಕಮಹಾದೇವಿಯ ಅಂಕಿತ ‘ಚನ್ನಮಲ್ಲಿಕಾರ್ಜುನ’, ಸಿದ್ಧರಾಮನ ಅಂಕಿತ ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಇಲ್ಲಿ ‘ಮಲ್ಲಿಕ’ ಎಂದರೆ ಮಲ್ಲಿಗೆಯೇ.
ಸಕಲೇಶ ಮಾದರಸ ತನ್ನವಚನದಲ್ಲಿ
ಸರೋವರದ ಮಂಡುಕನು ತಾವರೆಯ ನೆಳಲ; ಸಾರಿದಡೆ
ಎಂದರೆ ಒಂದೇ ಸರೋವರದಲ್ಲಿರುವ ಕಪ್ಪೆ- ದುಂಬಿಗಳೆರಡೂ ಕಮಲದ ಬಳಿಯಿದ್ದರೂ ದುಂಬಿಗೆ ಮಾತ್ರ ಸುವಾಸನೆ ತಿಳಿಯುತ್ತದೆ ಎಂದು ತಾವರೆಯ ಘನತೆಯನ್ನು ಎತ್ತಿ ಹಿಡಿದಿದ್ದಾನೆ.
ದಾಸ ಸಾಹಿತ್ಯದಲ್ಲಿ ಪುಷ್ಪಗಳು
ಸಕಲೇಶ ಮಾದರಸನ ಒಂದು ಕೀರ್ತನೆಯಲ್ಲಿ “ಸಂಪಗೆಯ ಮರನನೇರಿ ಪರಿಮಳದ ಕಂಪ ಕೊಯ್ವನರೆಲೊ ಇಂಪುಳ್ಳ ಜಾಣನಲ್ಲಮ ಕಾಣೆ ಕೆಳದಿ” ಎಂದು ವಚನಗಳನ್ನು ಬರೆಯುವಷ್ಟೇ ಚಂದ ಬರೆದಿದ್ದಾರೆ. ಈ ಗೀತೆ ಶಂಕರಾಭರಣ ರಾಗದಲ್ಲಿದೆ.
ಪುರಂದರದಾಸರು ಕೂಡ “ಒಲ್ಲನೋ ಹರಿ ಕೊಳ್ಳನೋ ಎಂಬ ಕೀರ್ತನೆಯಲ್ಲಿ ಹೂವಿನಶ್ರೇಷ್ಠತೆಯನ್ನು ಉದಾಹರಣೆಯೊಂದಿಗೆ ಬರೆದಿದ್ದಾರೆ. ಕಮಲ , ಮಲ್ಲಿಗೆ, ಜಾಜಿ, ಸಂಪಿಗೆ, ಕೇದಿಗೆ, ವಿಮಲ ಘಂಟೆ ಪಂಚವಾದ್ಯವಿದ್ದು. ಅಮಲ ಪಂಚಭಕ್ಷ್ಯ ಪರಮಾನ್ನಗಳಿದ್ದು ಕಮಲನಾಭನು ತನ್ನ ತುಳಸಿ ಇಲ್ಲದ ಪೂಜೆ ಎಂಬ ಕೀರ್ತನೆಯಲ್ಲಿ ಹೂ ಮತ್ತು ತುಳಸಿಯ ಪ್ರಸ್ತಾಪ ಮಾಡಿದ್ದಾರೆ.
ಕನಕದಾಸರ ನಳಚರಿತ್ರೆಯಲ್ಲಿ
ಶೋಕದಲ್ಲಿದ್ದ ದಮಯಂತಿಯನ್ನು ವರ್ಣಿಸುವಾಗ “ಭೀಕರ ಧ್ವನಿಗಳಿಗೆ ಹೆದರಿದಳಾ ಕಮಲಲೋಚನೆಯ ಕಂಡು ವಿವೇಕನಿಧಿ ಸಂತೈಸಿ ಬಿಗಿಯಪ್ಪಿದನು”
ಕೀರ್ತನೆಯೊಂದರಲ್ಲಿ ಜಾತ್ಯಾತೀತತೆಯನ್ನು ಕುರಿತು ಹೇಳುವಾಗ
ಕೆಸರೊಳು ತಾವರೆ ಪುಟ್ಟಲು ಅದ ತಂದು ಕುಸುಮನಾಭನಿಗೆ ಅರ್ಪಿಸರೇನಯ್ಯ?
ಜಗನ್ನಾಥದಾಸರೂ “ವ್ಯೋಮ ಮಂಡಲ ಛತ್ರಯಾಮಾಷ್ಟಕಗಳಷ್ಟದಳದ ಪದ್ಮವೆಂದು” ಎಂದು ಕಮಲಗಳ ಬಗ್ಗೆ ಬರೆದಿದ್ದಾರೆ.
ಮುಂಡಿಗೆಯಲ್ಲಿಯೂ ಹೂ
ಕನಕದಾಸರು “ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ ತುಂಬಿ ನಾಳತುದಿ ತುಂಬಿ ಭಾನುಪ್ರಭೆ ಚಂದಮಾಮ” ಎಂದು ನಮ್ಮ ದೇಹಕ್ಕೆ ಅನ್ವಯಿಸಿ ಹೇಳಿರುವ ಮುಂಡಿಗೆಯಾಗಿದೆ.
“ಇಂದಿರೆ ಮುಡಿದಂಥ ಕುಂದಮಂದಾರ, ನಂದಿವರ್ಧನ, ನಾಗಸಂಪಿಗೆ ಕುಸುಮ ಮಲ್ಲಿಗೆ ದಂಡೆ ಎಸೆವೊಕ್ಯಾದಿಗೆ ಪಾರಿಜಾತದ ವರಗಳ” ಎಂಬುದಾಗಿ ಕುಂದಮಂದಾರ, ನಂದಿವರ್ಧನ, ನಾಗಸಂಪಿಗೆ ಮೊದಲಾದ ದೇಸಿ ಹೂಗಳ ಹೆಸರನ್ನು ಹರಪನಹಳ್ಳಿ ಭೀಮವ್ವ ಪ್ರಸ್ತಾಪ ಮಾಡಿದ್ದಾರೆ. ವಿದ್ಯಾಪ್ರಸನ್ನತೀರ್ಥರು ತಮ್ಮ ಕೀರ್ತನೆಯಲ್ಲಿ ತುಳಸಿ ಸ್ವೀಕರಿಸೆನ್ನಯ ಪೂಜೆಯ ತುಳಸೀ ಲೋಕೋತ್ತರನರಸಿಪ ಈ ಕರಗಳು ಧನ್ಯಗಳಾಗಲಿ ಎಂಬಲ್ಲಿಯೂ ಮಲ್ಲಿಗೆ , ಸಂಪಿಗೆ, ಜಾಜಿ, ಸೇವಂತಿಗೆಪುಲ್ಲ ಕುಸುಮವಿರಲು ಎಂದು ಹೂಗಳ ಹೆಸರನ್ನು ಹೇಳಿದ್ದಾರೆ.
ಹರಿಹರನ ರಗಳೆಗಳಲ್ಲಿ ಹೂಗಳು
ಮಾದಾರ ಚೆನ್ನಯ್ಯ ಶಿವನ ಮೇಲಿನ ಗುಪ್ತ ಭಕ್ತಿಗೆ ಹೆಸರಾದವನು ಅವನ ಭಕ್ತಿಯನ್ನು ಹರಿಹರ “ಭೂಮಿಯೊಳಗೆ ಅಡಗಿಸಿ ಇಟ್ಟ ಗುಪ್ತ ನಿಧಿ” ಎಂದು ಕರೆಯುತ್ತಾನೆ ಅಂಥ ಶ್ರೇಷ್ಠ ಶಿವಭಕ್ತ ಯಾವ ಯಾವ ಹೂಗಳಿಂದ ಶಿವನನ್ನು ಅರ್ಚಿಸುತ್ತಿದ್ದ ಎಂಬ ಮಾಹಿತಿ ನೀಡುವಾಗ ಸಂಪಿಗೆ, ಮರುಗ, ದವನ, ಪಚ್ಚೆ, ಕೆಂಜಾಜಿ , ಸುರಹೊನ್ನೆ, ಸುರಗಿ , ಕಣಿಗಿಲೆ ಮೊದಲಾದ ಹೂಗಳ ಹೆಸರನ್ನು ಪ್ರಸ್ತಾಪಿಸುತ್ತಾನೆ. ಮುಖ್ಯವಾಗಿ ಹರಿಹರನ ಪುಷ್ಪ ರಗಳೆ 71ರಿಂದ 110 ನೆ ಸಾಲಿನವರೆಗೆ ಮೇಲೆ ಹೇಳಿದ ಹೂಗಳ ಹೆಸರನ್ನು ಉಲ್ಲೇಖಿಸಿದೆ.
ಹರಿಹರ ಅಕ್ಕಮಹಾದೇವಿ ರಗಳೆ ‘ತಲ್ಲಿ ತಿಳಿಗೊಳದಲ್ಲಿ ಮಲ್ಲಿನಾಥನ ಪೂಜೆ’, ‘ಹೂವಿನ ಮೆಳೆಗಳ ನಾತ ನೆತ್ತಿಯಲಿ’ ಎಂಬಲ್ಲಿ ಮಲ್ಲಿಗೆಯ ಪ್ರಸ್ತಾಪವಿದೆ. ಬಸವರಾಜ ದೇವರ ರಗಳೆಯಲ್ಲಿ ಕೇದಗೆ ಹೂವಿನ ಪ್ರಸ್ತಾಪವನ್ನು ಕತೆಯ ಮೂಲಕ ಹೇಳಿರುವುದು ವಿಶೇಷ. (ಕಾಲಾಂತರದಲ್ಲಿ ವಿಷ್ಣು ಮತ್ತು ಬ್ರಹ್ಮರಿಗೆ ಬೃಹತ್ತಾದ ಶಿಲಿಂಗ ಗೋಚರಿಸಿತಂತೆ ಶಿವಲಿಂಗವನ್ನು ಆದಿ ಅಂತ್ಯವನ್ನು ನೋಡಬೇಕೆಂಬ ತವಕವಿರುತ್ತದೆ. ವಿಷ್ಣು ವರಾಹರೂಪಿಯಾಗಿ ಭೂಮಿಯನ್ನು ಅಗೆಯುತ್ತಾ ಹೋದರೆ ಶಿವನು ಹಂಸ ರೂಪಿಯಾಗಿ ಶಿವನ ಅಂತ್ಯವನ್ನು ನೋಡಬೇಕೆಂದು ಹೊರಡುತ್ತಾನೆ. ವಿಷ್ಣು ಸೋಲೊಪ್ಪಿದರೆ ಬ್ರಹ್ಮ ಮೇಲಿಂದ ಬೀಳುತ್ತಿರುವ ಕೇದಗೆ ಪುಷ್ಪದೊಂದಿಗೆ ಸೇರಿ ಸುಳ್ಳು ಹೇಳುತ್ತಾನೆ ಅದಕ್ಕೆ ಕೋಪಗೊಂಡ ಶಿವ ಬ್ರಹ್ಮನಿಗೆ ಎಲ್ಲಿಯೂ ಪೂಜಿಸಬಾರದೆಂದು, ಕೇತಕಿಯನ್ನೂ ಪೂಜೆಗೆ ಬಳಸಬಾರದೆಂದು ಶಾಪ ಕೊಡುತ್ತಾನೆ.)
ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ತಾವರೆ
ಹರಿಶ್ಚಂದ್ರ ಕಾವ್ಯದ ಮೂರನೆ ಸಂಧಿ ಅಂದರೆ ಮಾಯಾಮೃಗ ಪ್ರಸಂಗದಲ್ಲಿ 17 ನೆ ಪದ್ಯದಲ್ಲಿ ಸೇನೆ ನೆರೆಯಿತ್ತು ರಿಪು ಕುಮುದ ಮಾರ್ತಾಂಡ ಎಂದಿದೆ.ವಿಶ್ವಾಮಿತ್ರ ಪ್ರವೇಶದ ಸಂದರ್ಭದಲ್ಲಿ
ಸಮೃದ್ಧಿಯಾಗಿ ಬೆಳೆದ ತೋಟ ಮತ್ತು ಕೊಳವನ್ನು ವಿವರಿಸುವ ಸಂದರ್ಭದಲ್ಲಿ “ ತಳಿರ ತಿಳಿಗೊಳಗ ಪುಳಿನಸ್ಥಳದ ಕಮಲಕೈರವ ತಾವರೆ ಮತ್ತು ನೈದಿಲೆಯನ್ನು ಒಂದೇ ಪದದಲ್ಲಿ ಹೇಳಿದೆ.
ಆಂಡಯ್ಯನ ಕಾವ್ಯದಲ್ಲಿ ಹೂವಿನಹೊಳಲ್
ಕಬ್ಬಿಗರ ಕಾವ್ಯದ 25 ನೆ ಪದ್ಯದಲ್ಲಿ ತನ್ನ ಪರಿಚಯವನ್ನು ಹೇಳುವಾಗ ‘ಪೂವಿನ ಪೊಳಲ್’ ಎಂದಿರುವುದರಿಂದ ‘ಹೂವಿನ ಹೊಳಲ್’ ಅಂದರೆ ಹೂವಿನ ಪಟ್ಟಣವೇ ಇತ್ತು ಎಂಬ ಉಲ್ಲೇಖವೂ ಬರುತ್ತದೆ.
ಮಲ್ಲಗೆಯಲ್ಲದೆ ಸಂಪಗೆ
ಯಲ್ಲದೆ ದಾಳಿಂಬಮಲ್ಲದೊಪ್ಪುವ ಚೆಂದಂ
ಗಲ್ಲದೆ ಮಾವಲ್ಲದೆ ಕೌಂ
ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್ ಅಂದರೆ ಆಂಡಯ್ಯ ಕನ್ನಡ ನಾಡಿನ ಸಸ್ಯ ಸಂಪತ್ತನ್ನು ಕುರಿತು ಕನ್ನಡ ನಾಡಿನಲ್ಲಿ ಮಲ್ಲಿಗೆ ಅಲ್ಲದೆ ಮಾವು ಅಡಿಕೆ ಮರಗಳೂ ಇವೆ ಎನ್ನುತ್ತಾನೆ. .
ತಾವರೆಯಂತೆ ಸಿರಿಯೊಳೊಂದಿಯುಂ ಪೊಡೆಯಲರನೆನಿಸಿ ಸಿಡಿಲಂ ಕಾಯ್ವನಾಂತುಂ ಬಿಸುಗದಿರನೆನಿನಿಸದಂ …… ಬಾನಂತೆ . ಎಂದು ಸೂರ್ಯನೂ ಕೂಡ ಸಿಡಿಲು ಬಡಿದರೆ ತೊಂದರೆಯಾಗುತ್ತದೆ ಎಂದು ತಾವರೆಗೆ ರಕ್ಷಣೆ ಕೊಡಲೆಂಬಂತೆ ನಿಧಾನಕ್ಕೆ ಸರಿದನು ಎಂಬುದನ್ನು ಸವಿವರವಾಗಿ ವಿವರಿಸಿದ್ದಾನೆ.
ಷಡಕ್ಷರ ದೇವನ ‘ಶಬರ ಶಂಕರವಿಳಾಸದಲ್ಲಿ’ ಶಿವ ಪಾರ್ವತಿಯರು ಕಿರಾತ -ಕಿರಾತಿಯರ ವೇಷದಲ್ಲಿ ಬರುವಾಗ ಸರ್ಪವೇ ತಲೆಯ ಬಳ್ಳಿಯಾಗಿ ಗಂಗೆಯೇ ಮಲ್ಲಿಗೆಯ ಹಾರವಾಗುತ್ತದೆ. ಇಲ್ಲಿ ಪಾರ್ವತಿಯ ಮೂಲಕ ಮಲ್ಲಿಗೆಯ ಉಲ್ಲೇಖವಾಗಿದೆ.
ನಯಸೇನನಲ್ಲಿ ಪುಷ್ಪಗಳು
ನಯಸೇನ ತನ್ನ ಕೃತಿಯಲ್ಲಿ ಪಟ್ಟಣಗಳಲ್ಲಿ ಮಾಲೆಗಾರರ ಸಾಲುಗಳೆ ಇರುತ್ತಿದ್ದವು ಎಂದಿದ್ದಾನೆ.ಇದನ್ನು ಮಾಲೆಗಾರರ ಹೂವಿನ ಸಂತೆ ಹಾಗು ಅಲ್ಲಿ ಮಾರಾಟಗೊಳ್ಳುತ್ತಿದ್ದ ಸುರಗಿ, ಮಲ್ಲಿಗೆ, ಜಾಜಿ ಮೊಲ್ಲೆ, ಕೇದಗೆ ಪಾರಿಜಾತ ಮೊದಲಾದ ಹೂಗಳನ್ನು ತಾನೂ ಮುಡಿದು , ಧೂರ್ತಜನರಿಗೂ ಮುಡಿಯಲು ಕೊಟ್ಟು, ಕರುಳು ಹರಿಯುವ ಹಾಗೆ ವಿನೋದದಿಂದ ನಗುತ್ತಿದ್ದನಂತೆ(2.24) ಎಂಬ ಉಲ್ಲೇಖ ಬರುತ್ತದೆ. ಮುಳಗುಂದದಲ್ಲಿ ಐವತ್ತೆಂಟು ಮಾಲೆಗಾರರಿದ್ದರೆಂದು ಅಲ್ಲಿಯ ಶಾಸನ ತಿಳಿಸುತ್ತದೆ. ಒಮ್ಮೆ ಲಲಿತಾಂಗನೆಂಬ ರಾಜಕುಮಾರ ಮಾಲೆಗಾರರ ಮಧ್ಯೆ ಪದರವೆನಿಸಿದ ಅವರೆಲ್ಲ ಕಾಗೆ ಕಂಡ ಕೋಗಿಲೆಯಂತೆ ಹೆದರಿ ಓಡಿದರೆಂದೂ ನಂತರ ರಾಜಕುಮಾರ ಪೂವಿನ ಸಂತೆಯನ್ನು ಹೊಕ್ಕು ಸುರಗಿ, ಮಲ್ಲಿಗೆ, ಜಾಜಿ , ಸಂಪಿಗೆ, ಮೊಲ್ಲೆ, ಕೇದಗೆ, ಪಾದರಿ ಮೊದಲಾದ ಹೂಗಳನ್ನು ಅಪಹರಿಸದನೆಂದು ನಯಸೇನ ಹೇಳಿದ್ದಾನೆ. ಮತ್ತೊಂದು ಶಾಸನದಲ್ಲಿ ನಾಗೇಶ್ವರ ದೇವರಿಗೆ ಇಪ್ಪತ್ತು ಕಣಗಿಲೆ ಹೂಗಳನ್ನು ದವನ ಮರುಗಗಳನ್ನು ಕೊಡಬೇಕೆಂದು ನಿಯಮವನ್ನು ಒಬ್ಬ ಮಾಲೆಗಾರನು ಹಾಕಿಕೊಂಡಿದ್ದನೆಂದು ತಿಳಿದು ಬರುತ್ತದೆ. ಅಂದರೆ ನಯಸೇನನಲ್ಲಿಯೂ ದೇಸಿ ಹೂಗಳು ಸ್ಥಿರ ಅಸ್ತಿತ್ವವನ್ನು ಪಡೆದುಕೊಂಡಿರುವುದನ್ನು ನೋಡಬಹುದು.
ಪಾರಿಜಾತ ಹೂವಿನ ಉಲ್ಲೇಖ:
ದಂಪತಿಗಳ ಮೇಲೆ ದೇವಕಿ ಯಶೋದಾದೇವಿ|
ಕುಂತಿಯರ್ ಪೊರಮಟ್ಟೆದೆ ಬಳಿವಿಡಿದು ಸೀ|
ಮಂತಿನೀ ಗಣ ಸಹಿತ ರುಕ್ಮಿಣಿಯ ತೆರಳ್ವುದು ವಿಭವದಿಂದೆ||
ತಿಂತಿಣಿ ಗಗನದೊಳ್ ತುಂಬಿಗಳ್ ಕಾರಮುಗಿ|
ಲಂತೆ ನವ ಪಾರಿಜಾತದ ಕುಸುಮ ಪರಿಮಳಕೆ |
ಸಂತತಂ ಮುಸುಕುಲಂದಣದೊಳೈದಿದಳಾಳೀಯರೈವರನಿ ಸತ್ಯಭಾಮೆ||
ಆನೆಗಳ ಮೇಲೆ ದೇವಕಿ,ಯಶೋದಾ ದೇವಿ ಕುಂತಿಯರು ಹೊರಟರು . ಅವರ ಬಲಿಯೇ ಹಿಂದಿನಿಂದ ವನಿತೆಯರು ನ ಸಮೂಹಸಹಿತ ರುಕ್ಮಿಣಿಯ ಪಲ್ಲಕಿ ದಂಡಿಗೆಯು ಅತಿ ವೈಭವದಿಂದ ಹೊರಟಿತು: ಆಕಾಶದಲ್ಲಿ ತುಂಬಿಗಳು ಕಪ್ಪು ಮುಗಿಲಿನಂತೆ ಹೊಸ ಪಾರಿಜಾತದ ಕುಸುಮ ಪರಿಮಳಕ್ಕೆ ಗುಂಪಾಗಿ ಒಂದೇ ಸಮನೆ ಮುತ್ತಲು ಸತ್ಯಭಾಮೆ ಸಖಿಯರೊಡನೆ ಅಂದಣದಲ್ಲಿ ಬಂದಳು.
ಕುಮಾರವ್ಯಾಸನಲ್ಲಿ ಕುಸುಮಗಳು
ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯ ಮೇಲೆ ಹಾಯ್ದುವು (ಆದಿಪರ್ವದ 5ನೆ ಸಂದಿ 9ನೆ ಪದ್ಯ)
ವಸಂತ ಮಾಸವನ್ನು ವರ್ಣಿಸುವಾಗ ನೀರಿನ ಮೇಲೆ ದೋಣಿ ತೇಲುವ ಹಾಗೆ ತಾವರೆ ಹೂವಿನ ದುಂಬಿಗಳು ಮಕರಂದವನ್ನು ಹೀರಲು ದುಂಬಿಗಳು ಸೇರಿದವು ಎಂದು ಬರೆದಿದ್ದಾರೆ.
ಸೌಗಂಧಿಕಾ ಪುಷ್ಪ ಪ್ರಕರಣದಲ್ಲಿ
ಕುಮಾರವ್ಯಾಸನ ಗದುಗಿನ ಭಾರತದ ಅರಣ್ಯಪರ್ವದಲ್ಲಿಯೂ ಅರಸಿಕನೆಂದುಕೊಂಡಿದ್ದ ಭೀಮಕಾಯದಲ್ಲಿ ಸುಕುಮಾರ ಶೃಂಗಾರ ಸೊಗಡು ಘಮ್ಮೆನ್ನುತ್ತದೆ. ಇಂಥ ಭೀಮ ಸೌಗಂಧಿಕಾ ಪುಷ್ಪತರಲು ಹೊರಟಾಗ ಅವನ ನಡಿಗೆ ಸಂಪೂರ್ಣ ವನವನ್ನು ಅಲುಗಿಸಿತು ಎಂದು ಬರೆಯುತ್ತಾರೆ.
ಲಕ್ಷ್ಮೀಶನ ಜೈಮಿನಿಭಾರತದಲ್ಲಿ ಹೂಗಳು
ಶ್ರೀಕೃಷ್ಣನನ್ನು ವರ್ಣನೆ ಮಾಡುವ ಸಂದರ್ಭದಲ್ಲಿ “ಪೊಸಮಲ್ಲಿಗೆ ಸೂಸುವ ಎಳೆನಗೆಯ ಎಂದೇ ಬರೆಯುತ್ತಾನೆ.
ಮಲ್ಲಿಗೆಯಲರ್ವಿಡಿದು ಕೆಂಜಾಜಿಯೆಂದೀವ| ರುಲ್ಲಾಸದಿಂದೆ
ನೀಲೋತ್ಪನವನೆಳನಗೆಯ|ಸೊಲ್ಲಿಂದೆ
ಕುಮುದವೆಂದುಸಿರುವರ್ ಸುರಹೊನ್ನಯ ಮಾಲೆಯನೊಪ್ಪುವ||
ಸಲ್ಲಲಿತ ಕಾಯದ ಸರಸಕೆತ್ತಿ ಸರುಗಿಯಂದೆಲರ್ಗೆ
ತೋರಿಸುವರರುಣ ತಾಮರಸಮಂ|ಚೆಲ್ಲಣ ಗಣ್ಗೊನರೆಯೊಳೀಕ್ಷಿಸಿ
ಪುಂಡರೀಕಮೆಂದೆಚ್ಚರಿಪರೆಳೆವೆಣ್ಗಳು||8||
ಅಂದರೆ ಮಲ್ಲಿಗೆ ಹೂವನ್ನು ಹಿಡಿದುಕೊಂಡು ಕೆಂಜಾಜಿ ಎಂದು ಕೊಡುವರು ಸಂತೋಷದಿಂದ : ಕನ್ನೈದಿಲೆಯನ್ನು ಎಳನಗೆಯ ಮಾಡುತ್ತಾ ಕಮಲದ ಹೂ ಎಂದು ಹೇಳುವರು . ಸುರಹೊನ್ನೆಯ ಹೂವಿನ ಮಾಲೆಯನ್ನು ಒಪ್ಪುವ ಸುಂದರ ದೇಹಸಮಕ್ಕೆ ಎತ್ತಿಹಿಡಿದು ಸುರಗಿಯ ಹೂಮಾಲೆ ಎಂದು ಎಲ್ಲರಿಗೂ ತೋರಿಸುವರು , ಕೆಂಪು ತಾವರೆಯನ್ನು ಚೆಲುವಾದ ಕಣ್ಣಿನಲ್ಲಿ ನೋಡುತ್ತಾ “ಬಿಳಿತಾವರೆ” ಎಂದು ನಲ್ಮೆಯೆಳೆ ಬಾಲೆಯರಯ ಆಶ್ಚರ್ಯ ಪಡಿಸುವರು. ಅವರು ಏನು ಹೇಳಿದರೂ ವಿಟರು ಬಾಲೆಯರ ಅದೇ ಬಗೆಯ ದೇಹ ಲಕ್ಷಣ ನೋಡಿ ಮರುಳಾಗಿ ಸಮ್ಮತಿಸುವರು. ಎಂದಿದೆ.
ಹದಿನೇಳನೆಯ ಸಂಧಿಯಲ್ಲಿ
ಜಾತನವ ಶಾಡ್ವಲದ ಸೊಡಿದೆಸೆವ ನೆಲದ ಪೂತಸೆವ ಜಾಜಿಗಳ ವರಕುಟಗಳ
ಕೇತಕಿ ಧೂಲಗಳ ಕೆದರುತಿಹ ಗಾಲಿಗಳ ಲಸದಿಂದ್ಗೋಪಚುಯದ
ಕಾತೆಳಯ ಬನದ…….. ಅಂದರೆ
ಮಳೆಗಾಲದ ಬರುವಿನಿಂದ ಹೊಸದಾಗಿ ಹುಟ್ಟಿದ ಹಸಿರುಹುಲ್ಲಿನ ಸೊಗಸನ್ನು ಪಡೆದು ಶೋಭಿಸುವ ನೆಲದಿಂದಲೂ ಹೂವು ಬಿಟ್ಟು ಶೋಭಿಸುವ ಜಾಜಿಗಳ ಮತ್ತು ಶ್ರೇಷ್ಟ ಕೇತಕಿ, ಕುಟಜ/ಕೊಡಸದ/ಹೂವಿನ ಸಾಲುಗಳಿಂದಲೂ ಶೋಭಿಸುವ ಕಾಮನಬಿಲ್ಲಿನಂತಯೆ ಎಂದು ಬರೆದಿದ್ದಾನೆ.
ಮಂದಾರ ಪುಷ್ಪ
ಜೈಮಿನಿಭಾರತದ ಮೂವತ್ತೊಂದನೆಯ ಸಂಧಿಯಲ್ಲಿ “ಮೊರೆವ ಮರಿದುಂಬಿಗಳ ಮಾಲೆಯಂ ತಾಳ್ದ ನವ ಪರಿಮಳದ ಮಂದಾರ ಮಾಲೆಯಂ ವಿಷಯೆ ಸೌಂದರ್ಯದ ಶಿರಿಷದ ಮಾಲೆಯಂ” ಅಂದರೆ ವಿಷಯೆ ಚಂದ್ರಹಾಸನನ್ನು ಮದುವೆಯಾಗುವಾಗ ಝೇಂಕರಿಸುತ್ತಿರುವ ಮರಿದುಂಬಿಗಳ ಮಾಲೆಯನ್ನು ಕಟ್ಟಿದ ಪರಿಮಳದ ಹೊಸ ಮಂದಾರ ಮಾಲೆಯನ್ನು ವಿಷಯೆಯು ಸುಂದರ ಶಿರಿಷದ ಮಾಲೆಯನ್ನು ಹೋಲುವ ನಳಿತೋಳನ್ನು ಎತ್ತಿ ಚಂದ್ರಹಾಸ ಕುತ್ತಿಗೆಯಲ್ಲಿ ಇಟ್ಟಳು ಎಂಬ ಮಾತು ಸೊಗಸಾಗಿ ಬರುತ್ತದೆ.
(ಹದಿನೇಳನೆ ಸಂಧಿಯ 40 ನೆ ಪದ್ಯ) “ತಂಗಾಳಿ ಖಗನಿಖರಮುಲಿದೆದ್ದುವರಳಿದುವು ತಾವರೆಗಳ್”. ತಂಗಾಳಿ ಬೀಸಿತು ಹಕ್ಕಿಗಳ ಗುಂಪು ಹಾಡಿದವು ತಾವರೆ ಅರಳಿದವು.ಇದೇ ಸಂಧಿಯ 41 ನೆ ಪದ್ಯದಲ್ಲಿ “ಅರಳ್ದ ಶೋಣಾಂಬುಜಚ್ಛಾಯೆಗಳಡರ್ದುವನೆ|ಅರಳಿದ ಕೆಂಪು ತಾವರೆಯ ಕೆಂಪುನೆರಳುಗಳು ಮೆತ್ತಿದವು” ಎನ್ನುವಂತೆ ತಾವರೆಯ ಉದಾಹರಣೆ ಸೋದಾಹರಣವಾಗಿ ಬಂದಿದೆ.
ಸರ್ವಜ್ಞ
ಯಾತರದು ಹೂವಾದರೂ ನಾತರೆ
ಸಾಲದೆ ಜಾತಿ ವಿಜಾತಿ ಎನಬೇಡ
ಶಿವನೊಲುಇದಾತನೇ ಜಾತ ಸರ್ವಜ್ಞ
‘ಮೇಲು- ಕೀಳು’ ಎಂಬ ಜಾತಿ ಬೇಡ ಎಂದು ಹೂವಿನ ರೂಪಕವೊಂದರಲ್ಲಿ ಹೇಳುವ ಪ್ರಯತ್ನ ಮಾಡಿದ್ದಾನೆ. ಯಾವ ಹೂವಾದರೂ ಪರವಾಗಿಲ್ಲ ಕಮ್ಮನೆಯ ಸುವಾಸನೆ ಬಂದರೆ ಸಾಕು ಎಂಬುದು ಇದರ ತಾತ್ಪರ್ಯ.
ಇಷ್ಟು ಹೂಗಳ ಮಾಹಿತಿ ನಮ್ಮ ಕಾವ್ಯಗಳಲ್ಲಿಯೇ ಆಗಿದೆ ಎಂದ ಮೇಲೆ ಅವುಗಳ ಉಪಯೋಗ ಈ ಮುಂದಿನ ಮಾತುಗಳಲ್ಲಿದೆ.
ತಾವರೆಹೂ: ತಾವರೆ ಹೂವಿನ ಎಸಳು, ದಂಟು, ಗಡ್ಡೆಗಳು ಔಷಧಿಯಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗುತ್ತವೆ.ಇದರ ಗಡ್ಡೆ ಮಲಬದ್ಧತೆಯನ್ನು, ದೇಹದ ಕಟ್ಟ ಕೊಬ್ಬನ್ನು ಕಡಿಮೆಮಾಡುತ್ತದೆ. ವಿಟಮಿನ್ ‘ಸಿ’ ಅಂಶವುಳ್ಳ ಇದು ಆ್ಯಂಟಿ ಆ್ಯಕ್ಸಿಡೆಂಟ್. ಹೃದಯ ಸಂಬಂಧಿ ರೋಗಗಳು ಹಾಗು ನರದೌರ್ಬಲ್ಯಕ್ಕೆ ಇದರ ಔಷಧ ರಾಮಬಾಣ, ಕಮಲ ಹೂವಿನ ನಾಳ ಎದೆಹಾಲಿನ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಹೂವಿನ ಎಸಳಿನ ರಸ ಗರ್ಭಿಣಿಯರಲ್ಲಿ ಉಂಟಾಗುವ ರಕ್ತಸ್ರಾವವನ್ನು ತಡೆಯುತ್ತದೆ.
ಜಾಜಿ ಹೂ:
‘ಜಾಜಿ’ ಅಥವಾ ‘ಜಾಜಿಮಲ್ಲಿ’ಗೆ ಸುಂದರವಾದ ಸುವಾಸನಾಭರಿತವಾದ ಹೂಗಳನ್ನು ಬಿಡುವ ಒಂದು ಬಳ್ಳಿ. ಜಾಜಿ ಮನೆಯಂಗಳಕ್ಕೆ ಮೆರಗನ್ನು ತರುತ್ತದೆ. ನೀರಿನಾಸರೆಯಿರುವಲ್ಲಿ ಸುಲಭವಾಗಿ ಬೆಳೆಯುತ್ತದೆ. ಜಾಜಿಮಲ್ಲಿಗೆಯ ಹೂ ಎಲೆ ಮತ್ತು ಬೇರು ಅತ್ಯುತ್ತಮ ಔಷಧ ದ್ರವ್ಯಗಳು, ಹಲ್ಲು ನೋವು, ಬಾಯಿ ಹುಣ್ಣು, ಆಣಿ, ಸೋರುವ ಕಿವಿ, ಗಾಯದಿಂದಾದ ಸಣ್ಣ ರಕ್ತಸ್ರಾವ ಮತ್ತು ಚರ್ಮ ರೋಗಗಳಲ್ಲಿ ಬಹಳ ಉಪಯೋಗಕಾರಿ. ಚೆನ್ನಾಗಿ ತೊಳೆದ ಜಾಜಿ ಎಲೆಗಳನ್ನು ಬಾಯಲ್ಲಿಟ್ಟು ಜಗಿಯುವುದರಿಂದ ಹಲ್ಲು ನೋವು, ಬಾಯಹುಣ್ಣು ಕಡಿಮೆಯಾಗುತ್ತದೆ.
ಶುಭ್ರವಾದ ಜಾಜಿ ಎಲೆಗಳನ್ನು ಚೆನ್ನಾಗಿ ಅರೆದು ಹಚ್ಚುವುದರಿಂದ ಸಾಮಾನ್ಯ ಗಾಯಗಳಿಂದಾದ ರಕ್ತಸ್ರಾವ ಕಡಿಮೆಯಾಗುತ್ತದೆ. ಹಾಗೆ ಗಾಯವು ಬೇಗ ಮಾಗುತ್ತದೆ.
ಕೇತಗೆ/ಕೇದಗೆ
ವಿಶಿಷ್ಟವಾದ ಕಂಪುಳ್ಳ ಹೂವಿದು . ಸುಗಂಧ ದ್ರವ್ಯಗಳಲ್ಲಿ ಹೆಚ್ಚಾಗಿ ಉಪಯೋಗವಾಗುತ್ತಿದೆ. ಇದನ್ನು ಪೋಣಿಸಿ ಮುಡಿಯಲಾಗದು ತ್ರಿಕೋನಾಕಾರದಲ್ಲಿ ಮಡಿಸಿ ಹೇರ್ ಪಿನ್ನಿನಲ್ಲಿ ಮುಡಿಯುತ್ತಾರೆ. ಉದ್ದ ಕೂದಲಿದ್ದರೆ ಜಡೆಯ ಜೊತೆಗೆ ಹೂವನ್ನು ಸೇರಿಸಿ ಹೆಣೆಯುತ್ತಾರೆ. ನಾಗದೇವರಿಗೆ ಪ್ರಿಯವಾದ ಹೂ ಎನ್ನುತ್ತಾರೆ. ಶ್ರಾವಣ ಮಾಸದ ಪಂಚಮಿಯಂದು ಇದಕ್ಕೆ ಬೇಡಿಕೆ ಹೆಚ್ಚು.
ಪಾರಿಜಾತ:
ಪಾರಿಜಾತ ಬಹುಕಾಲ ಬದುಕುವ ಒಂದೊಂದು ಪುಟ್ಟ ಮರ, ಸಂಜೆಯಲ್ಲಿ ಅರಳಿ ರಾತ್ರಿಯಿಡೀ ಸುಗಂಧ ಬೀರುವ ಪುಟ್ಟ ಬಿಳಿಯ ಹೂಗಳನ್ನು ಬಿಡುವ ಈ ಗಿಡ ಮನೆಯಂಗಳಕ್ಕೆ ಒಂದು ಶೋಭೆ, ಬೀಜನೆಟ್ಟ ಒಂದು ವರ್ಷದ ನಂತರ ಔಷಧಕ್ಕಾಗಿ ಬಳಸಲು ಯೋಗ್ಯವಾದ ಎಲೆಗಳನ್ನು ಪಡೆಯಬಹುದು. ಇದರ ಎಲೆ ಮತ್ತು ಹೂ ಚಕ್ಕೆಗಳು ಉಪಯೋಗಕ್ಕೆ ಬರುತ್ತವೆ. ಮಲೇರಿಯಾ ಜ್ವರ ಜಂತು ಹುಳ ಭಾದೆ ನಿವಾರಿಸುವಲ್ಲಿ ಇದು ಬಹಳ ಉಪಯೋಗಕಾರಿಯಾಗಿದೆ. ತಲೆಹೊಟ್ಟುನಿವಾರಣೆ, ಕಫನಿವಾರಣೆಗೆ, ಸಂಧಿವಾತದಂಥ ಸಮಸ್ಯೆಗಳಿದ್ದಲ್ಲೂ ಬಳಸಬಹುದು.
ಕಣಿಗೆಲೆ ಹೂ:
ಕಣಿಗಿಲೆ ಹೂ ಮತ್ತು ತೊಗಟೆ ಔಷಧಿಯ ಉಪಯೋಗಕ್ಕೆ ಬರುತ್ತದೆ. ಇದನ್ನು ಕುಷ್ಟರೋಗಿಗಳ ಗಾಯಕ್ಕೆ ಲೇಪಿಸಿದರೆ ಗಾಯವು ವಾಸಿಯಾಗುತ್ತದೆ. ಮೂಲವ್ಯಾದಿ ನಿವಾರಣೆಯಲ್ಲೂ ಇದು ಉಪಯೋಗಕ್ಕೆ ಬರುತ್ತದೆ. ಇದರ ಬೇರು ತಲೆನೋವು ಮತ್ತು ಉಗುರು ಸುತ್ತು ನಿವಾರಣೆಯಲ್ಲೂ ಸಹಾಯವಾಗುತ್ತದೆ.
ಮಂದಾರ ಹೂ :
ಭಾರತ ಮೂಲದ ಹೂ ಇದು. ಎಲೆಯುದಿರಾಗ ಹಳದಿ ಮತ್ತು ಕೆಂಪುಬಣ್ಣದ ಹೂಗಳು ಬಿಡುತ್ತವೆ ದೂರದಿಂದ ನೋಡಿದಾಗ ಮರಕ್ಕೆ ಬೆಂಕಿ ಬಿದ್ದಿದೆಯೇನೋ ಅನ್ನಿಸುತ್ತದೆ. ಕನ್ನಡದಲ್ಲಿ ಹಾಲಿವಾಣ, ಕೀಚಿಗೆ ಎಂದೂ ಕರೆಯುತ್ತಾರೆ. ಇದು ಅನೇಕ ಕೀಟ ಮತ್ತು ಪಕ್ಷಿಗಳನ್ನು ಆಶ್ರಯಕೊಟ್ಟು ಕಾಪಾಡುತ್ತದೆ. ಇದರಿಂದ ರೈತನಿಗೆ ಪ್ರಯೋಜನವಿದೆ ಹಾಗೆ ದೇಶಿ ವೈದ್ಯ ಪದ್ಧತಿಯಲ್ಲಿ ಇದರ ಉಪಯೋಗವಿದೆ.
ನಾಗಸಂಪಿಗೆ:
ಬಹಳ ಎತ್ತರಕ್ಕೆ ಬೆಳೆಯುವ ಮರವಿದು. ಇದರಿಂದ ಸಿಗುವ ಎಣ್ಣೆಯ ಲೇಪದಿಂದ ಚರ್ಮ ಕಾಯಿಲೆ ದೂರವಿಡಬಹುದು. ಇದರ ಬೇರಿನಿಂದ ಪ್ರತಿವಿಷವನ್ನೂ ತಯಾರಿಸಬಹುದು. ಇದರ ಎಲೆಗಳನ್ನು ಅರೆದು ತಲೆಗೆ ಲೇಪಿಸುವುದರಿಂದ ತಲೆನೋವು ಗುಣವಾಗುತ್ತದೆ. ಹೂಗಳನ್ನು ಒಣಗಿಸಿ ಪುಡಿಮಾಡಿ ಮಾಡಿದ ಕಷಾಯವನ್ನು ಸೇವಿಸುವುದರಿಂದ ಆಮಶಂಕೆ ನಿವಾರಣೆಯಾಗುತ್ತದೆ.
ಸುರಗಿ;
ಇದು ಬಾಡಿದರೂ ಸುವಾಸನೆಯನ್ನು ಹೊಂದಿರುತ್ತದೆ. ಜೇನ್ನೊಣವನ್ನು ಬಹುಬೇಗ ಆಕರ್ಷಿಸುವ ಗುಣ ಇದಕ್ಕಿದೆ. ಸುರಂಗಾ ಸೊರಗಿ ಮೊದಲಾದ ಹೆಸರುಗಲಿಂದಲೂ ಈ ಹೂವನ್ನು ಕರೆಯುತ್ತಾರೆ. ಒಣಗಿದ ಹೂವನ್ನೂ ಮದುವೆ ಮುಂತಾದ ಕಾರ್ಯಗಳಲ್ಲಿ ಬಳಸುವುದಿದೆ.
ಇದು ಬಾಡಿದರೂ ಸುವಾಸನೆಯನ್ನು ಹೊಂದಿರುತ್ತದೆ. ಜೇನ್ನೊಣವನ್ನು ಬಹುಬೇಗ ಆಕರ್ಷಿಸುವ ಗುಣ ಇದಕ್ಕಿದೆ. ಸುರಂಗಾ ಸೊರಗಿ ಮೊದಲಾದ ಹೆಸರುಗಲಿಂದಲೂ ಈ ಹೂವನ್ನು ಕರೆಯುತ್ತಾರೆ. ಒಣಗಿದ ಹೂವನ್ನೂ ಮದುವೆ ಮುಂತಾದ ಕಾರ್ಯಗಳಲ್ಲಿ ಬಳಸುವುದಿದೆ.
ಸುರಹೊನ್ನೆ;
ಇದೊಂದು ಮರ ಇದರ ಹೂಗಳು ಬೆಳ್ಳಗೆ ಇರುತ್ತವೆ. ಇದರ ತೊಗಟೆಯನ್ನು ಔಷದಿಯಲ್ಲಿ ಬಳಸುತ್ತಾರೆ. ಇದರ ಎಣ್ಣೆಯನ್ನು ನೋವು ನಿವಾರಕವಾಗಿ ಬಳಸುತ್ತಾರೆ.
ಇತರ ಹೂಗಳ ಉಪಯೋಗದ ಚುಟುಕು ಮಾಹಿತಿ
ದಾಸವಾಳ: ಬಿಳಿಸೆರಗು,ತಲೆಹೊಟ್ಟು ತಡೆಯುವಲ್ಲಿ ಸಹಕಾರಿ
ಸೇವಂತಿ: ತಲೆಹೊಟ್ಟುನಿವಾರಣೆ ಮತ್ತು ಹೇನು ಉತ್ಪತ್ತಿ ತಡೆಯುತ್ತದೆ. ಇದರ ರಸ ಸೇವನೆ ಅರೆತಲೆನೋವು ಮತ್ತು ಮಾನಸಿಕ ಕಾಯಿಲೆಗಳಿಗೆ ರಾಮಬಾಣ ಎನ್ನುತ್ತಾರೆ.
ನಂದಿಬಟ್ಟಲು(ನಂದಿವರ್ಧನ): ಅರೆತಲೆನೋವು, ಕಾಡಿಗೆಯಲ್ಲಿ ಉಪಯೋಗ
ಗುಲಾಬಿ: ಗುಲ್ಕಾನ್ ಮತ್ತು ಗುಲಾಬಿ ಜಲದಲ್ಲಿ ಬಳಕೆ
ಕರ್ಣಕುಂಡಲ: ಕ್ಯಾನ್ಸರ್ ನಿವಾರಕ ಉಳ್ಳದ್ದಾಗಿದೆ.
ನಿತ್ಯಪುಷ್ಟ: ಕೆಮ್ಮು, ಕಫನಿವಾರಕ ,ನೆನಪಿನ ಶಕ್ತಿ ಹೆಚ್ಚಿಸುತ್ತದೆ.
ತುಳಸಿ: ಕೆಮ್ಮು,ಶೀತನೆಗಡಿ ನಿವಾರಣೆಗೆ ಸಹಾಯವಾಗುತ್ತದೆ
ಕಾಮಕಸ್ತೂರಿ: ದೇಹವನ್ನು ತಂಪಾಗಿ ಇರಿಸುತ್ತದೆ
ಮುತ್ತುಗದ ಹೂ: ತಲೆಗೂದಲು ಬರಲು ಸಹಾಯಕಾರಿ
ಹೂಗಳನ್ನೆ ಕೇಂದ್ರವಾಗಿಸಿಕೊಂಡು ಆಚರಿಸುವ ಶ್ರಾವಣದ ವಿಶೇಷ ಸೂಡಿ (ಚೂಡಿ) ಪೂಜೆ ನಮ್ಮ ನಾಡಿನಲ್ಲಿದೆ.ನಿಸರ್ಗದ ಸುಂದರ ಸೃಷ್ಠಿಗಳಲ್ಲಿ ಹೂ ಕೂಡ ಒಂದು. ಸೌಂದರ್ಯಕ್ಕೇ ಅನ್ವರ್ಥವಾಗಿರುವ ಹೂಗಳನ್ನು ಒಪ್ಪಓರಣವಾಗಿ ಜೋಡಿಸಿದರೆ ಅದರ ಅಂದ ಇಮ್ಮಡಿಯಾಗುತ್ತದೆ. ಹೂಗಳೂ ಸಾರ್ಥಕಗೊಳ್ಳುತ್ತವೆ. ಆಧ್ಯಾತ್ಮ, ಅಲಂಕಾರ, ಆರೋಗ್ಯ ಈ ಮೂರೂ ಹಿನ್ನೆಲೆಯಿಂದಲೂ ಈ ಹೂಗಳನ್ನು ನಾವು ಬಳಸಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವ್ಯಕಭಾಷೆ,ತುಳು, ಕೊಂಕಣಿ, ಕನ್ನಡ ಮುಂತಾದ ಭಾಷೆಗಳನ್ನು ಮಾತನಾಡುವ ಜನರಲ್ಲಿ ಸೂಡಿ (ಚೂಡಿ ) ಆಚರಣೆ ಬಳಕೆಯಲ್ಲಿದೆ. ‘ಸೂಡಿ’ ಎಂದರೆ ಗುಂಪು. ಈ ಸೂಡಿ ಆಚರಣೆ ಪ್ರಕೃತಿಯ ಆರಾಧನೆಯ ಒಂದು ಭಾಗವಾಗಿದೆ. ಮನೆ ಹಾಗು ಮನದ ಸಂಸ್ಕೃತಿಯನ್ನು ಜಾಗೃತಗೊಳಿಸುವ ಇದು ಸ್ನೇಹದ ಸಂಕೇತವೂ ಹೌದು.ಬದುಕಿನ ಹಲವು ಒತ್ತಡಗಳನ್ನು ಬದಿಗಿರಿಸಿ ಪೂಜೆಯ ಹೆಸರಿನಲ್ಲಿ ಅಲಂಕಾರ ಮಾಡಿಕೊಂಡು ಸಂಭ್ರಮಿಸುವ ಹೆಣ್ಣು ಮಕ್ಕಳ ಸಂತಸಕ್ಕೆ ಬೆಲೆಕಟ್ಟಲು ಸಾಧ್ಯವೇ. ಇತ್ತೀಚೆಗೆ ಮನೆಗಳಲ್ಲಿ ಸೂಡಿ ಆಚರಣೆ ನೇಪಥ್ಯಕ್ಕೆ ಸರಿಯುತ್ತಿದೆ ಅದರ ಬದಲು ದೇವಸ್ಥಾನಗಳಲ್ಲಿ ಸಾಮೂಹಿಕವಾಗಿ ಸೂಡಿ ಆಚರಣೆ ಮಾಡಿಕೊಳ್ಳುತ್ತಾರೆ. ದಕ್ಷಿಣ ಜಿಲ್ಲೆಯ ಜನರ ವಿಶೇಷ ಆಚರಣೆಯಾಗಿರುವ ಇದು ಆಟಿಯ ಜಡ್ಡುತನವನ್ನು ಕಳೆದು ನಿರುತ್ಸಾಹವನ್ನು ಬದಿಗಿರಿಸಿ ಪ್ರಕೃತಿಯ ನವಚೈತನ್ಯವನ್ನು ಶ್ರಾವಣದ ಹೆಸರಿನಲ್ಲಿ ದಾಖಲು ಮಾಡುತ್ತದೆ.
ಆಧುನಿಕ ದಿನಮಾನಗಳಲ್ಲಿ ಹೂವಿನ ಪರಿಮಳಗಳ ಬಳಕೆ
“ಹೂಗಳಿಲ್ಲದ ಸತ್ಕಾರ ಅದೊಂದು ತಿರಸ್ಕಾರ” ಎಂಬ ಮಾತು ಹೂವಿನ ಶ್ರೇಷ್ಟತೆಯನ್ನು ಹೇಳುತ್ತದೆ. ಹೂವಿನಲ್ಲಾಗುವುದು ಹೂವಿನ ಎಸಳಿನಲ್ಲಿ ಅನ್ನುವುದು ಅಲ್ಪ ಸೇವೆ ಅನ್ನುವ ಅರ್ಥದಲ್ಲಿ ಬಳಕೆಯಾಗುತ್ತದೆ. “ಪುಷ್ಪವಿಲ್ಲದೆ ಗಂಧನರಿಯಬಲ್ಲುದೆ” ಎಂದ ವಚನವಿದೆ ಆದರೆ ಇದಕ್ಕೆ ಅಪವಾದವೆಂಬಂತೆ ಸುಗಂಧ ದ್ರವ್ಯಗಳಲ್ಲಿ, ಅಗರಬತ್ತಿಗಳಲ್ಲಿ ಟಾಲ್ಕಮ್ ಪೌಡರ್ಗಳಲ್ಲಿ , ರೂಮ್ ಫ್ರೆಷ್ನರ್ಗಳಲ್ಲಿ, ನೆಲ ಒರೆಸುವ ಫ್ಲೋರ್ ಕ್ಲೀನರ್ಗಳಲ್ಲಿ ಸುಗಂಧ ದ್ರವ್ಯಗಳನ್ನು ಬಳಸುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕ
ರೂಮ್ ಫ್ರೆಷ್ನರ್ಸ್ ಮತ್ತು ಏರ್ಫ್ರೆಷ್ನರಸ್
ಇವುಗಳು ಯಾವ ಪರಿಮಳ ಮತ್ತು ಯಾವ ರಾಸಯನಿಕಗಳ ಸಂಯೋಜನೆಗಳೊಂದಿಗೆ ಕೂಡಿರುತ್ತವೆ ಎಂಬುದರ ಮೇಲೆ ಸಮಸ್ಯೆಯನ್ನು ತಂದೊಡ್ಡುತ್ತವೆ. ಮೊದಲಿಗೆ ಉಸಿರಾಟದ ಸಮಸ್ಯೆಯನ್ನು ಶ್ವಾಸಕೋಶ ಸಮಸ್ಯೆಯನ್ನು ಚರ್ಮದ ಸೋಂಕನ್ನು ತಂದೊಡ್ಡಬಲ್ಲವು. ಆಸ್ತಮ ರೋಗಕ್ಕೆ ಮೂಲ ರಹದಾರಿ ಎಂದರೆ ಇದೆನೆ.
ಮಕ್ಕಳಲ್ಲಿ ಉಸಿರಾಟ ಹಾಗು ಜೀರ್ಣ ಕ್ರಿಯೆಯ ಸಮಸ್ಯೆ ಕಾಡುತ್ತದೆ. ವೊಸಿ ಅಸೊಟೋನ್ ಎಥೆನಾಲ ಡಿ-ಲಿಮೊನೆನ, ಪಿನ್ನೆ ಅಸಿಟೇಟ್ ಇವುಗಳು ಆರೋಗ್ಯಕ್ಕೆ ಮಾರಕ ಇವುಗಳು ಗಾಳಿಯಲ್ಲಿ ಓಜೋನ್ ನೊಂದಿಗೆ ಪ್ರತಿಕ್ರಿಯಿಸಿದಾಗ ಅವು ಫಾರ್ಮಾಲ್ಡಿಹೈಡ್ ಮತ್ತು ಅಲ್ಟ್ರಾ ಫೈನ್ ಕಣಗಳಂಥ ದ್ವಿತೀಯಕ ಮಾಲಿನ್ಯಕಾರಕಗಳನ್ನು ಉತ್ಪಾದಿಸುತ್ತವೆ ಈ ಅಲ್ಟ್ರಾ ಫೈನ್ ಕಣಗಳು ಹೃದಯ ಮತ್ತು ಶ್ವಾಸಕೋಶದ ಕಾಯಿಲೆ ಮತ್ತು ಉಸಿರಾಟದ ತೊಂದರೆಗಳಿಗೆ ಕಾರಣವಾಗುತ್ತವೆ.
ಎಲೆಕ್ಟ್ರಿಕ್ ಏರ್ ಫ್ರಶ್ನರ್ ಕ್ಯಾನ್ಸರ್ಕಾರಕ ಎಂದು ಡಾ|| ಸೈಮನಸ್ ಹೇಳುತ್ತಾರೆ. ಮೂಗು ಗಂಟಲಿನ ಕಿರಿಕಿರಿ ಕೆಮ್ಮು ಉಬ್ಬಸ, ಬ್ರಾಂಕ್ಐಟಿಸ್ ಮತ್ತು ತಲೆ ತಿರುಗಿವಿಕೆಯನ್ನು ವ್ಯಕ್ತಿ ಅನುಭವಿಸಬಹುದು ಅಲ್ಲದೆ ಇದು ವ್ಯಕ್ತಿಯ ದೈಹಿಕ ಕ್ಷಮತೆಯ ಮೇಲೆಪರಿಣಾಮ ಬೀರುತ್ತದೆ. ಪರಿಮಳ ಯುಕ್ತ ಮೇಣದ ಬತ್ತಿಗಳು ಇತರ ಮನೆಯ ಕ್ಲೀನರಗಗಳು ಸಾರ್ವಜನಿಕ ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲ. ವಾರ್ನಿಷ್, ಫ್ಲೈವುಡ್ ಇತ್ಯಾದಿಗಳಲ್ಲಿ ಕಾಣಬಹುದು.
ರೂಂ ಫ್ರೆಷ್ನರ್ಸಗಳಲ್ಲಿ ಬಳಸಲಾಹಗುವ ಥಾಲೇಟ್ಸ್ಗಳು ( ಸುಗಂಧ ಕರಗಿಸಲು ಬಳಸುವ ಥಾಲೇಟ್ಸ್ಗಳು). ಕಳಪೆ ವೀರ್ಯ ಗುಣಮಟ್ಟ, ಜನ್ಮ ದೋಷ, ಸಂತಾನೋತ್ಪತ್ತಿಗೆ ಸಂಬಂಧಿಸಿವೆ. . ಅಸ್ತಮಾ , ಅಲರ್ಜಿಕ್ ಹೊಂದಿರುವ ರೋಗಿಗಳೂ ಇದನ್ನು ಬಳಸುವಂತಿಲ್ಲ.. ಇಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲು ಬಳಸುವ ಎಲೆಕ್ಟ್ರಿಕ್ ಕಾಯಿಲ್ಗಳು ಮತ್ತು ಲಿಕ್ವಿಡ್ಗಳೂ ಬರುತ್ತವೆ
ಬಾಡಿ ಸ್ಪ್ರೇಗಳು, ಸುಗಂಧ ದ್ರವ್ಯಗಳು
ಇವುಗಳು ಹದಿಹರೆಯದವರಿಗೆ ಅತ್ಯಂತ ಅಗತ್ಯವಾಗಿರುವ ಮೂಲಭೂತ ಅಗತ್ಯ ಎಂದರೆ ತಪ್ಪಿಲ್ಲ ಸ್ನಾನ ಮಾಡಿದ ಕೂಡಲೆ ಸಗಂಧ ದ್ರವ್ಯ ,ಬಾಡಿ ಸ್ಪ್ರೇ ಮಾಡಿಕೊಳ್ಳುವವರು ಹೆಚ್ಚು . ಇವಲ್ಲದೆ ಸೋಪುಗಳು, ಶಾಂಪುಗಳು, ಲೋಷನ್ಗಳು . ಮೇಕಪ್ ಮತ್ತು ಸೌಂದರ್ಯ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇರುತ್ತವೆ ಎಂದು ಹೇಳುತ್ತಾರೆ.
ಇವುಗಳು ಉಪಯೋಗಿಸುವ ವ್ಯಕ್ತಿಯ ಆರೋಗ್ಯ ಮಾತ್ರವಲ್ಲ ಸುತ್ತ ಮುತ್ತಲಿರುವ ವ್ಯಕ್ತಿಯ ಮೇಲೆಯೂ ಅಡ್ಡ ಪರಿಣಾಮ ಬೀರುತ್ತದೆ. . ಇದರ ಸಿಂಪಡಣೆಯಿಂದ ಹೊರಬರುವ ಹೊಗೆ ದೇಹದಲ್ಲಿ ಅಲರ್ಜಿಯನ್ನು ತರಿಸುತ್ತದೆ. ಇವುಗಳ ಪರಿಣಾಮವೇ ವಾಕರಿಕೆ , ವಾಂತಿ,ತಲೆನೋವು ಉಸಿರಾಟದ ತೊಂದರೆ. ದೇಹವು ಇವುಗಳನ್ನು ಒಮ್ಮೆ ಹೀರಿಕೊಂಡರೆ ವಿಟಮಿನ ‘ಡಿ’ ಯಂಥ ನಮ್ಮ ದೇಹದಲ್ಲಿ ಪ್ರಮುಖ ಪೋಷಕಾಂಶಗಳ ಸ್ಥಗಿತಗೊಳಿಸುತ್ತದೆ. ಆದ್ದರಿಂದ ವಿಟಮಿನ್ ‘ಡಿ’ ಕೊರತೆ ಉಂಟಾದರೆ ಸಹಜವಾಗಿ ಚರ್ಮ ಸಮಸ್ಯೆಗಳು ಬಂದೇ ಬರುತ್ತವೆ..
ಅಲ್ಯೂಮಿನಿಯಂಕ್ಲೋರೋಹೈಡ್ರೇಟ್, ಅಲ್ಯೂಮಿನಿಯಂಜಿರಕೋನಿಯಮ್ ,ಟೆಟ್ರಾಕ್ಲೋರೊಹೈಡ್ರೆಕ್ಸ್ ಜಿ ಎಲ್ವೈ ಅನ್ನು ಬಳಸುತ್ತವೆ. ಇವುಗಳು ಚರ್ಮದ ರಂಧ್ರಗಳನ್ನು ಮುಚ್ಚುವುದರಿಂದ ಬೆವರು ಸೋರಿಕೆಯಾಗದಂತೆ ತಡಿಯುತ್ತದೆ. ಮೂತ್ರಪಿಂಡದ ಸಮಸ್ಯೆ ಹೃದಯ ಸಮಸ್ಯೆಗಳೂ ಕೂಡ ಇವುಗಳಿಂದಲೇ ಬರುವುದು .
ಅಲ್ಯೂಮಿನಿಯಂ ಹೊಂದಿರುವ ಡಿಯೋಡರೆಂಟ್ಗಳ ಅತಿಯಾದ ಬಳಕೆಯಿಂದ ಆಲ್ಜಿಮರ್ ಕಾಯಿಲೆ ಉಂಟಾಗುತ್ತದೆ. ಅಂಡರ್ ಆರ್ಮ್ ಕೂದಲನ್ನು ತೆಗೆಯುವ ಮತ್ತು ಅಲ್ಯೂಮಿನಿಯಂ ಹೊಂದಿರುವ ಡಿಯೋಡರೆಂಟ್ಗಳಲ್ಲಿ ಸ್ತನ ಕ್ಯಾನ್ಸರ್ಗಳು ಉಂಟಾಗುತ್ತವೆ.
ಧೂಪಗಳು ಹಾಗು ಅಗರಬತ್ತಿಗಳು
ಮಲ್ಲಿಗೆ, ಸಂಪಿಗೆ ಹೂವಿನ ಪರಿಮಳವಿರುವ ಧೂಪಗಳಲ್ಲಿ ಅಗರಬತ್ತಿಗಳಲ್ಲಿ ರಾಸಯನಿಕಗಳು ಹೆಚ್ಚಾಗುತ್ತಿವೆ ಅಮೆರಿಕದ ಚಾಪೆಲ್ ಹಿಲ್ನ ಗಿಲ್ಲಿಂಗ್ಸ್ ಸ್ಕೂಲ್ ಆಫ್ ಗ್ಲೋಬಲ್ ಪಬ್ಲಿಕ್ ಹೆಲ್ತ್ ಯೂನಿವರ್ಸಿಟಿ ಆಪ್ ನಾರ್ತ ಕೊರೊಲಿನ ನಡೆಸಿರುವ ತಾಜಾ ಸಂಶೋಧನೆಯ ಪ್ರಕಾರ ಊದು ಬತ್ತಿ ಹಚ್ಚಿದಾಗಲೂ ಕಾರ್ಬನ್ ಮೊನಾಕ್ಸೈಡನಂಥ ವಿಷಯುಕ್ತ ಮಲಿನಕಾರಕ ಅಂಶಗಳು ಹೊರಬರುತ್ತವೆ. ಪಾಲಿ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಗಳು, ನೈಟ್ರೋಜನ್ ಮತ್ತು ಸಲ್ಫರ್ ಡೈ ಆಕ್ಸೈಡ್ಗಳು ಇರುತ್ತವೆ. ಉಸಿರಾಟದ ತೊಂದರೆ ಜೀವಕೋಶದ ಶಕ್ತಿ ಕಣ್ಣಗಳ ಅಲರ್ಜಿ ಇವುಗಳಿಂದ ಹೆಚ್ಚು ಸಂಭವಿಸುತ್ತದೆ.
ಹೂವಿನಂಥ ಮಾತುಗಳು
ಪುಷ್ಪಾಂಜಲಿ, ಏಳು ಮಲ್ಲಿಗೆ ತೂಕದ ರಾಜ ಕುಮಾರಿ, ಹೂ ಎತ್ತಿದಂತೆ, ಬೇಲಿ ಮೇಲಿನ ಹೂ, ಹೂವಿನಂತೆ ಹಗುರ ಮುಂತಾದವು ಹೂವನ್ನು ಅನುಸರಿಸಿ ಇರುವ ನುಡಿಗಟ್ಟುಗಳು. ಅಕ್ಕಮಹಾದೇವಿಯ “ತನುಕರಗದವರಲ್ಲಿ ಪುಷ್ಪವನ್ನೊಲ್ಲೆಯಯ್ಯಾ” ಎಂಬಲ್ಲಿ ತನು ಕರಗದವರಲ್ಲಿ ಹೂವನ್ನೂ ಕೂಡ ಒಲ್ಲೆ ಎಂಬಲ್ಲಿ ಘನತೆ ಅಡಗಿದೆ. “ಕಟ್ಟಿಯುಮೆನೊ ಹೊಸ ಮಾಲೆಯೊಂದನ್ ಮುಡಿವ ಭೋಗಿಗಳಿಲ್ಲದೆ ಬಾಡಿ ಹೋಗದೆ” ಎಂದು ಕವಿ ಜನ್ನ ಒಂದೆಡೆ ಹೂಗಳನ್ನು ಉಪಯೋಗಿಸಿದರೆ ಅದಕ್ಕೆ ಸಾರ್ಥಕ್ಯ ಎನ್ನುತ್ತಾನೆ. ಇದ್ದು ಪ್ರಯೋಜನಕ್ಕೆ ಬಾರದೆ ಇರುವವರನ್ನು ಟೀಕಿಸುವ ಸಂದರ್ಭದಲ್ಲಿ ಜಾಲಿ ಮರದಂತೆ ಇದ್ದು ವ್ಯರ್ಥವಾಗುವುದಕ್ಕಿಂತ ಯಾವಾಗಲೂ ಸೌಕುಮಾರ್ಯವುಳ್ಳ ಗಂಧವಿರುವ ಕುಸುಮಗಳಾಗುವುದು ಉತ್ತಮ ಎನ್ನುತ್ತಾರೆ. ಇದೇ ಅಭಿಪ್ರಾಯವನ್ನು “ಇಂಪಿಲ್ಲದೆ ಕೇದಗೆಯಂ ಕಂಪಿಲ್ಲದ, ಪೆಂಪಿಲ್ಲದ ಕುಲವಧು ಒಪ್ಪಗುವೇಂ”? ಎಂಬ ರನ್ನನ ಮಾತೂ ಹೇಳುತ್ತದೆ. ಹೂಗಳು ತಾವೂ ಅರಳಿ ಇತರರ ಮನಸ್ಸನ್ನೂ ಅರಳಿಸುತ್ತವೆ. ತಾನರಳಿ ಕಂಪು ಸೂಸಿ ಸದಾ ಉಪಯೋಗಿಯಾಗುವ ಹೂ ತಾಜತನ ಕಳೆದುಕೊಂಡರೆ ವ್ಯರ್ಥ ಆದರೆ ಸಾಮಾಜಿಕರು ಕೃತಕವಲ್ಲದ ತಾಜತನ ಕಳೆದುಕೊಳ್ಳದ ನಿಜ ಪರಿಮಳ ಪುಷ್ಪವಾದರೆ ಎಷ್ಟು ಚಂದ ಅಲ್ವ!
ಆಧಾರ ಗ್ರಂಥಗಳು
ಜನಪದ ಗೀತಾಂಜಲಿ- ಡಾ. ದೇ.ಜವರೇಗೌಡ
ಕರ್ನಾಟಕ ಜಾನಪದ ಗೀತೆಗಳು- ಆರ್. ಎಸ್ ಪಂಚಮುಖಿ
ಪಂಪಭಾರತಂ. ಗದ್ಯಾನುವಾದ ಎನ್. ಅನಂತರಂಗಾಚಾರ್
(ಕನ್ನಡ ಸಾಹಿತ್ಯ ಪರಿಷತ್)
ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ; ವಚನ ಸಾಹಿತ್ಯ ಸಂಪುಟ ೫
ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ
ಶ್ರೀಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಷಟ್ಪದಿ ಸಾಹಿತ್ಯ ಸಂಪುಟ 6
ಶ್ರೀಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂಪುಟ 8
ಗಧಾಯುದ್ಧ ಸಂಗ್ರಹ; ತೀ. ನಂ ಶ್ರೀ
ಪುಷ್ಪ ರಗಳೆ:ಸವಿಗನ್ನಡ 1994 ರಲ್ಲಿದ್ದ ಕನ್ನಡ ಐಚ್ಚಿಕ ಪಠ್ಯ ಪುಸ್ತಕ
ಕರ್ನಾಟ ಭಾರತ ಕಥಾಮಂಜರಿ: ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ
ಹರಿಶ್ಚಂದ್ರ ಕಾವ್ಯ ; ಮೈಸೂರು ವಿಶ್ವವಿದ್ಯಾನಿಲಯ
(ಸಂಪಾದಕರು ಟೆ ಎಸ್ ವೆಂಕಣ್ಣಯ್ಯ ಮತ್ತು ಎ.ಆರ್ ಕೃಷ್ಣಶಾಸ್ತ್ರಿ)
ಸಸ್ಯ ಸಂಜೀವಿನಿ: ಅರಣ್ಯ ಇಲಾಖೆ, ಭಾರತೀಯ ವೈದ್ಯಪದ್ಧತಿ ನಿರ್ದೇಶನಾಲಯ,
ಆಕಾಶವಾಣಿ ಬೆಂಗಳೂರು, ಸಾಮಾಜಿಕ ಅರಣ್ಯ ಯೋಜನೆಯ
ಸಹಯೋಗದಲ್ಲಿ ಪ್ರಕಟಿತ ಕೃತಿ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್