ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

created by Polish

ಹೊಳಲು ದೇವಾಲಯಕ್ಕೆ ಹೊಳೆಯುವ ಯೋಗ ಎಂದು ??

ಟಿ. ವಿ. ನಟರಾಜ್ ಪಂಡಿತ್

ಯಾವುದೇ ಲೋಕೋಪಯೋಗಿ ಕಾರ್ಯಗಳಿಗೆ ಧನರಾಶಿ ಅಗತ್ಯವಿರುತ್ತದೆ. ಆದರೆ ಅದು ಇದ್ದಾಗ್ಯೂ ಇಚ್ಛಾ ಶಕ್ತಿ , ಪಾರಂಪರಿಕ ಐತಿಹಾಸಿಕ ವಸ್ತು , ತಾಣಗಳ ಬಗ್ಗೆ ಗೌರವಗಳು ನಮ್ಮ ಕಾಲದಲ್ಲಿ ಇಲ್ಲದಿರುವುದು ಒಳ್ಳೆಯ ಕೆಲಸವನ್ನು ಹೇಗೆ ಕುಂಠಿತಗೊಳಿಸುತ್ತದೆ ಎಂಬುದಕ್ಕೆ ಹೊಳಲು ನರಸಿಂಹ ದೇವಸ್ಥಾನದ ಪುನರುತ್ಥಾನದ ವಿಷಯದ ವಿಳಂಬ ಸಾಕ್ಷಿಯಾಗಿದೆ. ವಿವರಗಳಿಗೆ ಈ ಕ್ಷೇತ್ರದಲ್ಲಿ ಭಗೀರಥ ಪ್ರಯತ್ನ ನಡೆಸಿರುವ ನಟರಾಜ ಪಂಡಿತರ ಬರಹ ಓದಿ.

ಹಾಸನ ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಬರುವ “ಶಾಂತಿಗ್ರಾಮ (ಐತಿಹಾಸಿಕವಾದ ಶ್ರೀ ಚನ್ನಕೇಶವ ಮತ್ತು ಶ್ರೀ ವರದ ಯೋಗ ಭೋಗ ನರಸಿಂಹ ಸ್ವಾಮಿ ದೇವಾಲಯ. ” ಶ್ರೀ ವಿಷ್ಣುವರ್ಧನನ ಪಟ್ಟದ ಅರಸಿ ” ಶಾಂತಲಾ ದೇವಿ” ಜೀವನ ಚರಿತ್ರೆಯೊಂದಿಗೆ ಸಂಬಂಧವಿರುವ ಗ್ರಾಮ) ದಿಂದ 3 ಕಿ. ಮಿ ದೂರದಲ್ಲಿ ಮಳಲಿ ರಸ್ತೆಯಲ್ಲಿರುವ ಹೊಳಲು ಗ್ರಾಮದಲ್ಲಿ ಶ್ರೀ ಯೋಗಾನರಸಿಂಹ ಸ್ವಾಮಿಯ ಭವ್ಯವಾದ ವಿಗ್ರಹವನ್ನು ಹೊಂದಿರುವ ಪುಟ್ಟ ದೇವಾಲಯವಿದೆ.
ಈ ದೇವಾಲಯದ ಸ್ಥಿತಿಯನ್ನು ಗಮನಿಸಿದರೆ ಆಸ್ತಿಕ ಸಮುದಾಯವೇ ತಲೆ ತಗ್ಗಿಸುವಂತಹ ದುಸ್ಥಿತಿಯಲ್ಲಿದೆ.

ದೇವಾಲಯದ ಮೇಲೆ ಬೆಳೆದು ನಿಂತಿರುವ ಗಿಡ ಗಂಟೆಗಳು ಕುಸಿಯುತ್ತಿರುವ ಗೋಡೆಗಳು ಶ್ರೀ ನರಸಿಂಹನ ಭಕ್ತರನ್ನು ಅಣಕಿಸುವಂತಿದೆ. ಈ ದೇವಾಲಯ ಸ್ಥಿತಿಯು ಇತರೆ ಎಲ್ಲಾ ದೇವಾಲಯಗಳಂತೆ ಸಹಜವಾಗಿ ಪೂಜಾದಿಗಳೊಂದಿಗೆ 1975 ರ ಪೂರ್ವದಲ್ಲಿ ಇತ್ತು ಎಂದು ಸ್ಥಳೀಯರು ಹೇಳುತ್ತಾರೆ.

ಶ್ರೀ ಯೋಗಾ ನರಸಿಂಹ ಸ್ವಾಮಿ ಮೂಲ ವಿಗ್ರಹವು ಹೊಯ್ಸಳ ವಾಸ್ತು ಶಿಲ್ಪವಾಗಿದ್ದು ಎರಡು ಅಡಿ ಪಾನಿಪೀಠದ ಮೇಲೆ. ಸ್ಥಾಪಿತವಾಗಿರುವ ಆರು ಅಡಿಯ ವಿಗ್ರಹವಾಗಿದ್ದು ಒಟ್ಟು ಎಂಟು ಅಡಿ ಎತ್ತರವಿದೆ. ಯೋಗ ಮುದ್ರೆಯಲ್ಲಿರುವ ಶ್ರೀ ನರಸಿಂಹನ ಮುಖದ ಗಾಂಭೀರ್ಯತೆ ಗಮನ ಸೆಳೆಯುತ್ತದೆ. ಮೂಲ ವಿಗ್ರಹದ ಶಿಲೆಯನ್ನು ಬಡಿದರೆ “ಟಣ್ ಟಣ್ “ಎಂಬ ಶಬ್ದ ಬರುತ್ತದೆ (ಕಂಚಿನ) ವಿಗ್ರಹವೇನೋ ಅನ್ನಿಸುತ್ತದೆ. ಶ್ರೀ ನರಸಿಂಹ ದೇವರ ಕೈಗಳಲ್ಲಿನ ಉಗುರುಗಳ ಕೆತ್ತನೆ, ಮಧ್ಯದ “ಹಣೆ ಗಣ್ಣು” ದಂತ ಪಂಕ್ತಿಯ ಕೆತ್ತನೆ ಅದ್ಭುತವಾಗಿದೆ. ಕಿರೀಟದಲ್ಲಿನ ಸೂಕ್ಷ್ಮ ಕೆತ್ತನೆಯಂತೂ ನಿಬ್ಬೆರಗಾಗಿಸುವಂತಿದೆ.

ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ “ಯೋಗಾ ನರಸಿಂಹ ಮಾತ್ರ” ಸೂಕ್ತವಾದ ಆಲಯವಿಲ್ಲದೆ-ನಿತ್ಯ ಪೂಜೆಯಿಂದ ವಂಚಿತನಾಗಿ, ಏಕಾಂಗಿಯಾಗಿ ಕುಳಿತಿರುವುದು ಆಸ್ತಿಕ ಸಮಾಜವನ್ನು ಪ್ರಶ್ನಿಸುವಂತಿದೆ.
ಏನೇ ಆಗಲಿ ಅಂತಿಮವಾಗಿ ಹೊಯ್ಸಳರ ಶಾಸನಗಳಲ್ಲಿ ಉಲ್ಲೇಖಿಸಿರುವಂತೆ “ಶ್ರೀ ನರಸಿಂಹ ಇಚ್ಚಾ ಜಯತು” ಎಂಬುದು. ನೂರಕ್ಕೆ ನೂರು ಸತ್ಯವಾದರೂ ಅವನ ಇಚ್ಛೆಯಂತೆಯೇ ಆಗಲಿ ಎಂದು ಸುಮ್ಮನೆ ಕೂರುವಂತಿಲ್ಲ.
ದೇವಾಲಯದ ಗೋಡೆಗಳು ದಿನೇ ದಿನೇ ಕುಸಿಯುತ್ತಿರುವುದು. ಮಳೆ ಗಾಳಿಗಳಿಂದ ವಿಗ್ರಹವನ್ನು ಸಂರಕ್ಷಿಸಬೇಕಾದದ್ದು ಆಸ್ತಿಕ ಸಮಾಜದ- ಆದ್ಯ ಕರ್ತವ್ಯವೇ ಆಗಿದೆ.

1975 ರ ಸುಮಾರಿಗೆ ಜಾರಿಗೆ ಬಂದ ಭೂ ಸುಧಾರಣೆ ಕಾಯ್ದೆಯಿಂದ ದೇವಾಲಯದ ಭೂಮಿಯನ್ನು ಕಳೆದುಕೊಂಡ, ಇದನ್ನೇ ಜೀವನಕ್ಕೆ ಆಶ್ರಯಿಸಿದ್ದ ಕುಟುಂಬಗಳು ಇತರೆ ಉದ್ಯೋಗ ಅರಸಿ ಊರನ್ನು ತೊರೆದ ನಂತರ ದೇವಾಲಯ ಈ ದುಸ್ಥಿತಿಯನ್ನು ತಲುಪುವಂತಾಗಿದೆ.

ಹಾಗೆಂದು ದೇವಾಲಯದ ಸಂರಕ್ಷಣೆ ಪ್ರಯತ್ನಗಳು ನಡೆದಿಲ್ಲವೆಂದು ಹೇಳುವಂತಿಲ್ಲ. ಆದರೆ ಅನೇಕ ಬಾರಿ ನಡೆದ ಪ್ರಯತ್ನಗಳು ದೇವಾಲಯದ ಸಂರಕ್ಷಣೆ ಅಂತಿಮ ಹಂತ ತಲುಪಿಲ್ಲ. ಅರ್ಧದಲ್ಲಿಯೇ ಅನ್ಯ ಕಾರಣಗಳಿಂದ ನಿಂತು ಹೋಗಿದೆ.

ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ ಹಾಸನ ವತಿಯಿಂದ ದಿನಾಂಕ 05/07/2009 (ಭಾನುವಾರ) ನಡೆದ “ಶ್ರೀ ನಾರಸಿಂಹ ಹೋಮ ” ಕಾರ್ಯಕ್ರಮ ಉಲ್ಲೇಖನಿಯ. ಅಂದಿನ ಕಾರ್ಯಕ್ರಮದಲ್ಲಿ ದೇವಾಲಯ ಪೂರ್ಣ ಸ್ವಚ್ಛಗೊಂಡಿದ್ದೆ ಅಲ್ಲದೇ ಶ್ರೀ ನರಸಿಂಹ ಹೋಮದ ಕಾರ್ಯಕ್ರಮದಲ್ಲಿ ಗ್ರಾಮದ ಸಮಸ್ತ ಜನತೆಯೇ ಅಲ್ಲದೆ ಸುತ್ತ ಮುತ್ತಲಿನ ಗ್ರಾಮಗಳಾದ ಹೊನ್ನಾವರ ಹಿರೇಕಡಲೂರು, ಹೆರಗು ಗ್ರಾಮದ ಗ್ರಾಮಸ್ಥರು, ಹಾಸನದ ಶಂಕರ ಭಜನಾ ಮಂಡಳಿಯ ತಂಡದ ಹೆಚ್ಚಿನ ಸಂಖ್ಯೆಯ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಅಪೂರ್ವ ಶೋಭೆ ತಂದಿತ್ತು.

ಕಾರ್ಯಕ್ರಮದ ಸಂದರ್ಭದಲ್ಲಿಯೇ ಸಂಗ್ರಹವಾದ ರೂ 5,000/- ಮೊತ್ತದಲ್ಲಿ ಶಾಂತಿಗ್ರಾಮದವರು ನೀಡಿದ ಬಾಗಿಲನ್ನು ಅಳವಡಿಸಿ, ದೇವಾಲಯಕ್ಕೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತಾಯಿತು.

ನಂತರ ದೇವಾಲಯಕ್ಕೆ ಶಾಶ್ವತ ಹೊಸ ಕಟ್ಟಡ ನಿರ್ಮಾಣದ ಸಲುವಾಗಿ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ ಹಾಸನ ಇವರಿಂದ ಅಂದಾಜು ಪಟ್ಟಿ ತಯಾರಿಸುವಂತೆ ಆಯಿತು. ಈ ಪಟ್ಟಿಯನ್ನು ತಹಶೀಲ್ದಾರ್ ಮುಜರಾಯಿ ಇಲಾಖೆ ಹಾಸನ ರವರಿಂದ – ಆಯುಕ್ತರು ರಾಜ್ಯ ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ಇವರಿಂದ 1 ನೇ ಕಂತಾಗಿ ರೂ 3 ಲಕ್ಷ ಮತ್ತು 2 ನೇ ಕಂತಾಗಿ ರೂ 1.50 ಲಕ್ಷ ಆಯಿತು.

ಈ ಕಾರ್ಯದಲ್ಲಿ ಶ್ರೀ ಗೋ ಮಧುಸೂಧನ್ MIC ಯವರ ಸಹಕಾರ ನೆನೆಯಬೇಕು. ನಂತರ ಈ ಮೊತ್ತವು ಒಟ್ಟು 4.50 ಲಕ್ಷ ತಹಶೀಲ್ದಾರ್ ಮುಜರಾಯಿ ಇಲಾಖೆ ಹಾಸನ ಇವರಿಂದ ಕಾರ್ಯಪಾಲಕ ಇಂಜಿನಿಯರ್ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ ಹಾಸನ ಇವರಿಗೆ Deposit Contribution ಅಡಿಯಲ್ಲಿ ಹೊಸ ದೇವಾಲಯ ನಿರ್ಮಾಣ ಮಾಡುವಂತೆ ಕೋರಲಾಯಿತು. ಆದರೆ ಈ ಮೊತ್ತಕ್ಕೆ ನಡೆದ ಟೆಂಡರ್ ‌ ಪ್ರಕ್ರಿಯೆಯಲ್ಲಿ ಬಿಡ್ ದಾರರು ಭಾಗವಹಿಸದ ಮುಂದೆ ಬಾರದ ಕಾರಣ ತಹಶೀಲ್ದಾರ್ ಮುಜರಾಯಿ ಇಲಾಖೆ ಹಾಸನ ಇವರಿಗೆ ಕಾರ್ಯ ಪಾಲಕ ಇಂಜಿನಿಯರ್ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಿಂದ ಹಿಂತಿರುಗಿಸಲ್ಪಟ್ಟಿದೆ.

ದೇವಾಲಯದ ಸಂರಕ್ಷಣೆಯ ಇಲ್ಲಿಗೆ ಬಂದು ನಿಂತಿರುವ ದೇವಾಲಯದ” ರಥವನ್ನು ಎಳೆಯುವವರ ಸಲುವಾಗಿ ನಿರಂತರ ಹುಡುಕಾಟದ ಪ್ರಯತ್ನ ನಡೆದಿದೆ.
ಎಲ್ಲವೂ ಶ್ರೀ ನರಸಿಂಹನ ಇಚ್ಛೆ ಆಗಿರುವುದರಿಂದ. ದೈವ ಸಂಕಲ್ಪದ “ರಥ ಚಾಲಕರ” ನಿರೀಕ್ಷೆ ಮುಂದುವರೆದಿದೆ. “ಶ್ರೀ ನಾರಸಿಂಹ ಇಚ್ಛಾ ಜಯತು “