- ★ ಗ್ರೀಟಿಂಗ್ ಕಾರ್ಡುಗಳ ನೆನಪಿನಲ್ಲಿ ★ - ಜನವರಿ 14, 2021
- ಬಾಲ್ಕನಿಯ ಬೆಳಗು? - ಸೆಪ್ಟೆಂಬರ್ 22, 2020
- ಹಳೆ ಮಾರ್ಗಗಳ ಮಧ್ಯದಲ್ಲಿ - ಸೆಪ್ಟೆಂಬರ್ 10, 2020
ಜನವರಿ ತಿಂಗಳು ಬಂತೆಂದರೆ ನನಗೆ ಬಣ್ಣಬಣ್ಣದ, ಬಗೆಬಗೆಯ ವಿನ್ಯಾಸಗಳ ಗ್ರೀಟಿಂಗ್ ಕಾರ್ಡುಗಳು ನೆನಪಾಗುತ್ತವೆ; ಹೊಸವರ್ಷದ ಶುಭಾಶಯ ಹೇಳಲೆಂದೋ ಅಥವಾ ಸಂಕ್ರಾಂತಿಕಾಳುಗಳನ್ನು ಹಂಚಲೆಂದೋ ಸಂಭ್ರಮದಿಂದ ಖರೀದಿಸುತ್ತಿದ್ದ ಗ್ರೀಟಿಂಗ್ ಕಾರ್ಡುಗಳ ಮೋಹದಲ್ಲೊಮ್ಮೆ ಮುಳುಗೇಳುತ್ತೇನೆ. ಗ್ರೀಟಿಂಗ್ ಕಾರ್ಡುಗಳನ್ನು ಕಳುಹಿಸಲೆಂದೇ ಜೋಪಾನವಾಗಿ ಬರೆದಿಟ್ಟುಕೊಂಡಿರುತ್ತಿದ್ದ ಅಡ್ರೆಸ್ಸುಗಳು, ಡಿಸೆಂಬರ್ ತಿಂಗಳಿನಲ್ಲಿಯೇ ಪೋಸ್ಟಾಫೀಸಿಗೆ ಹೋಗಿ ಖರೀದಿಸುತ್ತಿದ್ದ ಅಂಚೆಚೀಟಿಗಳು, ಲಕೋಟೆಯ ಭಾರ ಜಾಸ್ತಿಯಾಗದಿರಲೆಂದು ಲೆಕ್ಕಮಾಡಿ ತುಂಬಿಸುತ್ತಿದ್ದ ಹಳದಿ-ಗುಲಾಬಿ ಬಣ್ಣಗಳ ಸಂಕ್ರಾಂತಿಕಾಳುಗಳು ಎಲ್ಲವೂ ಊರಿಂದೂರಿಗೆ ಪ್ರೀತಿ ಹೊತ್ತು ಚಲಿಸುತ್ತಿದ್ದ ದಿನಗಳು ನೆನಪಾಗಿ ಹಾದುಹೋಗುತ್ತವೆ. ಆ ಚಲನೆಯಲ್ಲೊಂದು ಆಗಷ್ಟೇ ಅಕ್ಷರಕಲಿತ ಪುಟ್ಟಮಗುವಿನ ಶುಭಾಶಯ ಪ್ರೀತಿಯ ಚಿಕ್ಕಮ್ಮನನ್ನು ತಲುಪಿದರೆ, ನಗರದಲ್ಲಿ ಓದುತ್ತಿರುವ ಮೊಮ್ಮಗಳ ಪ್ರೀತಿ ತಾತನ ಕೈಸೇರುತ್ತಿತ್ತು; ಕಾಲೇಜು ಸೇರಿದ ವಿದ್ಯಾರ್ಥಿಯ ಪ್ರಾಮಾಣಿಕ ಪ್ರಣಾಮವೊಂದು ಅಚ್ಚುಮೆಚ್ಚಿನ ಹೈಸ್ಕೂಲು ಟೀಚರನ್ನು ತಲುಪಿದರೆ, ವ್ಯಕ್ತಪಡಿಸಲಾಗದ ಮುಗ್ಧಪ್ರೇಮವೊಂದು ಮೊದಲ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಹುಡುಗಿಯನ್ನು ತಲುಪಿ ಪರ್ಸಿನೊಳಗೆ ಅವಿತುಕೊಳ್ಳುತ್ತಿತ್ತು. ಬೇರೆಬೇರೆ ಊರುಗಳಲ್ಲಿ ನೌಕರಿ ಮಾಡುತ್ತಿದ್ದ ಗಂಡ-ಹೆಂಡತಿ, ಹೊಸದಾಗಿ ಮದುವೆಯಾಗಿ ತವರುಮನೆ ತೊರೆದ ಹೆಣ್ಣುಮಗಳು, ವಿದ್ಯಾಭ್ಯಾಸಕ್ಕೆಂದು ಊರುಬಿಟ್ಟ ಬಾಲ್ಯಸ್ನೇಹಿತರು ಹೀಗೇ ಎಲ್ಲರ ಹೃದಯಗಳನ್ನೂ ಲಕೋಟೆಯೊಳಗೆ ಭದ್ರವಾಗಿ ಸಲಹುತ್ತಿದ್ದವು ಗ್ರೀಟಿಂಗ್ ಕಾರ್ಡುಗಳು.
ಈ ಗ್ರೀಟಿಂಗ್ ಕಾರ್ಡುಗಳೆಡೆಗೆ ನನಗೆ ಯಾವಾಗ ಪ್ರೀತಿ ಹುಟ್ಟಿಕೊಂಡಿತೋ ನೆನಪಿಲ್ಲ. ಆದರೆ ಅಪ್ಪ ಬಸ್ ಪಾಸಿಗೆಂದು, ಹೈಸ್ಕೂಲು-ಕಾಲೇಜಿನ ಫೀಸಿಗೆಂದು, ಕಂಪಾಸ್ ಬಾಕ್ಸು-ಪೆನ್ನು ಖರೀದಿಸಲೆಂದು, ಜಾತ್ರೆ-ತೇರುಗಳಿಗೆಂದು ಕೊಡುತ್ತಿದ್ದ ಕಾಸಿನಲ್ಲಿಯೇ ಚಿಲ್ಲರೆಯನ್ನು ಉಳಿಸಿಕೊಂಡು ಆ ವರ್ಷದ ಗ್ರೀಟಿಂಗ್ ಕಾರ್ಡಿನ ಬಜೆಟ್ ರೆಡಿ ಮಾಡುತ್ತಿದ್ದದ್ದು ನೆನಪಿದೆ; ಅಂಗೈಯಗಲದ ಪುಟ್ಟಪುಟ್ಟ ಕಾರ್ಡುಗಳ ಮೇಲೆ ಅರಳಿರುತ್ತಿದ್ದ ಕೆಂಪುಗುಲಾಬಿ, ಹಳದಿ ಮೈಬಣ್ಣದ ಕಾರ್ಡಿನ ಮೇಲೆ ಕುಳಿತಿರುತ್ತಿದ್ದ ಹಸಿರುಗಿಳಿ, ಹೃದಯಾಕಾರದ ಕಾರ್ಡಿನೊಳಗೆ ಪದರುಪದರುಗಳಾಗಿ ಒಂದಕ್ಕೊಂದು ಅಂಟಿಕೊಂಡಿರುತ್ತಿದ್ದ ಬೇರೆಬೇರೆ ಗಾತ್ರಗಳ ಹೃದಯಗಳು ಎಲ್ಲ ನೆನಪಿನಲ್ಲಿವೆ. ಈ ಕಾರ್ಡುಗಳೊಂದಿಗೆ ಸಂಕ್ರಾಂತಿಕಾಳುಗಳಷ್ಟೇ ಅಲ್ಲದೆ ಅಡಿಕೆಕೊಯ್ಲಿನಿಂದ ಹಿಡಿದು ಪಕ್ಕದಮನೆಯ ಮದುವೆಗೆ ಬಂದಿದ್ದ ಚಂದದ ಹುಡುಗನವರೆಗೆ ವಿಸ್ತೃತವಾದ ವಿವರಗಳಿರುತ್ತಿದ್ದ ನಾಲ್ಕಾರು ಪುಟಗಳ ಪತ್ರಗಳು, ಮೆಚ್ಚಿನ ಸಿನೆಮಾ ನಾಯಕನ ಹೊಸ ಹೇರ್ ಸ್ಟೈಲಿನ ಫೋಟೋ ಇರುವ ನ್ಯೂಸ್ ಪೇಪರಿನ ಪುರವಣಿಯ ಕಟಿಂಗುಗಳು, ಮುಸ್ಸಂಜೆಯ ಮೆಲ್ಲನೆಯ ಗಾಳಿಗೆ ಮೆತ್ತಗೆ ನೆಲಕ್ಕುರುಳಿದ ಸಂಪಿಗೆಯ ಮೃದುವಾದ ಎಸಳುಗಳು, ಬಾಲ್ಯದ ನೆನಪುಗಳನ್ನು ವರ್ಣಮಯವಾಗಿಸುವ ಕಪ್ಪು-ಬಿಳುಪು ಭಾವಚಿತ್ರಗಳು ಎಲ್ಲವೂ ನಮೂದಿಸಿದ ವಿಳಾಸವನ್ನು ಆಯಾಸವಿಲ್ಲದೆ ತಲುಪುತ್ತಿದ್ದವು.
ಹಾಗೆ ತಲುಪಿದ ಶುಭಾಶಯ ಪತ್ರಗಳು ಸೊಗಸಾದ ಸಂವಹನಗಳನ್ನು ಹುಟ್ಟುಹಾಕಿ, ನಾಜೂಕಾಗಿ ಸಂಬಂಧಗಳನ್ನು ನವೀಕರಿಸುತ್ತಿದ್ದವು. ದಿನಪತ್ರಿಕೆ, ವಾರಪತ್ರಿಕೆಗಳೊಂದಿಗೆ ಟಿಪಾಯಿಯ ಮೇಲೆ ಬಂದು ಕೂರುತ್ತಿದ್ದ ಕಾರ್ಡುಗಳಿಗೆ ಅವುಗಳದ್ದೇ ಆದ ಗತ್ತು ಹಾಗೂ ಗೌಪ್ಯತೆ ಎರಡೂ ಇರುತ್ತಿದ್ದವು. ಇಂಚುಪಟ್ಟಿಯ ಸಹಾಯದಿಂದ ನಿಧಾನಕ್ಕೆ ಲಕೋಟೆಯ ಅಂಟು ಬಿಡಿಸಿ, ಕಾರ್ಡಿನ ಮೇಲಿರುವ ನವಿಲು-ಗಿಳಿ-ಜಿಂಕೆಗಳೆಲ್ಲ ಜೀವಂತವಾಗಿ ಕೈಗೆ ಸಿಕ್ಕಿರುವಷ್ಟು ಸಂಭ್ರಮದಲ್ಲಿ ಹಿಂದೆ-ಮುಂದೆ ನಾಲ್ಕಾರು ಬಾರಿ ತಿರುಗಿಸಿ ನೋಡಿ, ಪ್ರಿಂಟ್ ಆಗಿರುತ್ತಿದ್ದ ಶುಭಾಶಯದ ಮೆಸೇಜನ್ನು ಮತ್ತೆಮತ್ತೆ ಓದಿ, ಹಸ್ತಾಕ್ಷರದ ಸಂದೇಶವನ್ನು ಸಂತೋಷದಿಂದ ಆಲಂಗಿಸಿ, ಲಕೋಟೆಯ ತಳದಲ್ಲಿರುತ್ತಿದ್ದ ಸಂಕ್ರಾಂತಿಕಾಳುಗಳನ್ನೆಲ್ಲ ಅಂಗೈಗೆ ಸುರಿದುಕೊಂಡು ಮನೆಯವರೆಲ್ಲರಿಗೂ ಒಂದೊಂದೇ ಕಾಳನ್ನು ಹಂಚುವಲ್ಲಿಗೆ ಶುಭಾಶಯ ಪತ್ರಕ್ಕೆ ಸಲ್ಲಬೇಕಾದ ಗೌರವಾದರಗಳು ಸಲ್ಲುತ್ತಿದ್ದವು. ಶುಭಾಶಯದ ಸಂದೇಶವನ್ನು ಪ್ರಿಂಟ್ ಹಾಕುವವನಿಂದ ಹಿಡಿದು ಮನೆಗೆ ತಲುಪಿಸುವ ಪೋಸ್ಟ್ಮ್ಯಾನನವರೆಗೂ ಹಲವರ ಕಾವಲು, ಪ್ರೀತಿ, ಹೊಣೆಗಾರಿಕೆಗಳೊಂದಿಗೆ ಗ್ರೀಟಿಂಗ್ ಕಾರ್ಡುಗಳು ಸ್ನೇಹ, ಪ್ರೀತಿ, ವಿಶ್ವಾಸ, ಮಾನವೀಯ ಮೌಲ್ಯಗಳನ್ನು ಮೈಲುಗಳುದ್ದಕ್ಕೂ ಸಾಗಿಸುತ್ತಿದ್ದವು.
ಹಾಗೆ ಪೋಸ್ಟಾಫೀಸುಗಳನ್ನು ಬದಲಾಯಿಸುತ್ತ, ಟ್ರೇನು-ಬಸ್ಸುಗಳನ್ನು ಹತ್ತಿಳಿಯುತ್ತ, ಸೈಕಲ್ಲಿನ ಕ್ಯಾರಿಯರ್ಗಳ ಮೇಲೆ ಕುಳಿತು ಮನೆಮನೆಗೆ ತಲುಪುತ್ತಿದ್ದ ಗ್ರೀಟಿಂಗ್ ಕಾರ್ಡುಗಳ ಪ್ರೀತಿಯಲ್ಲಿ ಬೀಳದವರೇ ಇಲ್ಲ. ಶಾಲೆಗೆ ಹೋಗುವ ಮಗುವಿನ ಪಾಟಿಚೀಲವನ್ನು, ಹದಿಹರೆಯದವರ ಡೈರಿಯ ಪುಟಗಳನ್ನು, ಮನೆಯೊಡತಿಯ ಮಜ್ಜಿಗೆ ಕಪಾಟುಗಳನ್ನು ಅಕ್ಕರೆಯಿಂದ ಸೇರಿಕೊಳ್ಳುತ್ತಿದ್ದ ಕಾರ್ಡುಗಳೊಳಗಿನ ಹೂವುಗಳೆಂದೂ ಬಾಡಿದ್ದಿಲ್ಲ; ಹಕ್ಕಿಗಳೆಂದೂ ಹಾರಿಹೋಗಿದ್ದಿಲ್ಲ; ನದಿಗಳೆಂದೂ ಬತ್ತಿದ್ದಿಲ್ಲ. ನೆನಪಿನ ಪೆಟ್ಟಿಗೆಯ ಜಾಗತುಂಬುವ ಸಂಗತಿಗಳೆಂದೂ ಹಳತಾಗುವುದಿಲ್ಲ ಎನ್ನುವ ಸತ್ಯವನ್ನು ಸರಾಗವಾಗಿ ಸಾರುವ ಗ್ರೀಟಿಂಗ್ ಕಾರ್ಡುಗಳು ಮಾತಿನ ಹಂಗಿಲ್ಲದೆ ತಲೆಮಾರುಗಳ ಸಂಬಂಧಗಳನ್ನು ಸಲಹಿದ ಆತ್ಮಬಂಧುಗಳು! ವಯಸ್ಸಿನ ಅಂತರವಾಗಲೀ, ಲಿಂಗಭೇದವಾಗಲೀ, ಜಾತಿ-ಧರ್ಮಗಳ ಸಂಕೋಲೆಯಾಗಲೀ ಈ ಕಾರ್ಡುಗಳೊಳಗೆ ಜೀವಂತವಾಗಿರುತ್ತಿದ್ದ ಅನುಬಂಧಗಳನ್ನು ಬಾಧಿಸಿದ್ದಿಲ್ಲ. ಹತ್ತಿಪ್ಪತ್ತು ಅಕ್ಷರಗಳಲ್ಲಿ ಹೊಸವರ್ಷಕ್ಕೆ ಹೊಸ ಹೊಳಹುಗಳನ್ನು, ಪುಟ್ಟಪುಟ್ಟ ಸಂಕ್ರಾಂತಿಕಾಳುಗಳಲ್ಲಿ ಸಂಬಂಧಗಳಿಗೆ ಜೀವಂತಿಕೆಯನ್ನು, ನಾಲ್ಕೇ ಸಾಲುಗಳ ಅಡ್ರೆಸ್ಸುಗಳಲ್ಲಿ ಸಂವಹನಕ್ಕೊಂದು ಸಾಮೀಪ್ಯವನ್ನು ಕರುಣಿಸುತ್ತಿದ್ದ ಗ್ರೀಟಿಂಗ್ ಕಾರ್ಡುಗಳು ಸ್ಪರ್ಶಕ್ಕೆ ಸಿಕ್ಕುವ ಭಾವಗುಚ್ಛಗಳು; ಅಕ್ಷರಗಳಿಗೆ ಜೀವತುಂಬುವ ಭಾವಗೀತೆಗಳು; ಪೇಂಟಿಂಗುಗಳಿಗೆ ಪ್ರೀತಿ ಬೆರೆಸಿದ ಮಧುರ ನೆನಪುಗಳು!
ಮನೆ ಶಿಫ್ಟ್ ಮಾಡುವಾಗ ಫೈಲುಗಳಲ್ಲಿ ಜೋಪಾನವಾಗಿ ಜೋಡಿಸಿಟ್ಟಿರುವ ಕಾರ್ಡುಗಳನ್ನು, ಹಳೆಯ ಡೈರಿಗಳಲ್ಲಿ ಕಾಣಸಿಗುವ ವಿಳಾಸಗಳನ್ನು, ವಾಟ್ಸಾಪ್-ಫೇಸ್ಬುಕ್ಕುಗಳಲ್ಲಿ ಹರಿದಾಡುವ ಹಳೆಯ ಫೋಟೋಗಳನ್ನು, ಮಾರ್ಕೆಟುಗಳಲ್ಲಿ ಮಾರಾಟಕ್ಕಿರುವ ಅಚ್ಚಬಿಳಿಯ ಸಂಕ್ರಾಂತಿಕಾಳುಗಳ ಮಧ್ಯೆ ಹೊಳೆವ ಹಸಿರು-ಹಳದಿ-ಕೆಂಪು ಕಾಳುಗಳನ್ನು ನೋಡಿದಾಗಲೆಲ್ಲ ನೆನಪಿನ ಅಂಗಳಕ್ಕಿಳಿದು ಒಮ್ಮೆ ಆಚೀಚೆ ಕಣ್ಣಾಡಿಸುತ್ತೇನೆ. ಅಪ್ಪ ಕೊಡುತ್ತಿದ್ದ ಹತ್ತು ರೂಪಾಯಿಯ ನೋಟುಗಳು, ಅಮ್ಮ ಬಾಗಿಲೆದುರು ಬಿಡಿಸುತ್ತಿದ್ದ ಹೂವಿನ ರಂಗೋಲಿ, ಆಫೀಸಿನ ಸಂಕ್ರಾಂತಿ ಸೆಲೆಬ್ರೇಷನ್ನಿಗೆಂದು ಖರೀದಿಸಿದ್ದ ಹೊಸ ಸೀರೆ ಎಲ್ಲವೂ ನೆನಪಿನ ನೋಟಕ್ಕೆ ದಕ್ಕಿ ಗ್ರೀಟಿಂಗ್ ಕಾರ್ಡಿನ ಮೋಹದೊಂದಿಗೆ ತಳುಕು ಹಾಕಿಕೊಳ್ಳುತ್ತವೆ; ಕಾರ್ಡಿನ ಮೇಲಿದ್ದ ನವಿಲುಗಳ ಜೋಡಿಯೊಂದು ಸೀರೆಯ ಸೆರಗಿನ ಮೇಲೆ ಚಿತ್ತರವಾದಂತೆ ಸಂಭ್ರಮಿಸುತ್ತೇನೆ. ವರ್ಷವರ್ಷವೂ ಅಪ್ಡೇಟ್ ಆಗುವ ಶುಭಾಶಯದ ಮೆಸೇಜುಗಳು ಮೊಬೈಲನ್ನು ತುಂಬಿಕೊಳ್ಳುವಾಗಲೆಲ್ಲ ಉಚಿತ ಸಂದೇಶಗಳ ನಡುವಿನಲ್ಲೆಲ್ಲೋ ಸಡಿಲವಾಗುತ್ತಿರುವ ಸಂಬಂಧಗಳ ನೇಯ್ಗೆಗಳನ್ನು ನೆನೆದು ಕೊಂಚ ಕಳವಳಗೊಳ್ಳುತ್ತೇನೆ. ರೂಪಾಂತರಗೊಂಡ ಸಂವಹನಗಳನ್ನು, ರೋಮಾಂಚಕವೆನ್ನಿಸದ ಸಂದೇಶಗಳನ್ನು, ಸಾಮರಸ್ಯವಿಲ್ಲದ ಸಾಮೀಪ್ಯವನ್ನು ನಮ್ಮದಾಗಿಸಿಕೊಳ್ಳುವ ಜೀವನಶೈಲಿಗೆ ಹೊಂದಿಕೊಳ್ಳಲು ಹೆಣಗಾಡುವಾಗಲೆಲ್ಲ ಹೊಸ ವಿನ್ಯಾಸದ ಗ್ರೀಟಿಂಗ್ ಕಾರ್ಡೊಂದು ಹತ್ತಿರ ಬಂದು ಸಂತೈಸಿದಂತೆ ಭಾಸವಾಗಿ ಸಂಭ್ರಮಗೊಳ್ಳುತ್ತೇನೆ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್