- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
ಮನುಕುಲದ ಮಹತಿ ಭಾಷೆ. ಮನುಷ್ಯ ಲಾಗಾಯಿತಿನಿಂದ ರೂಢಿಸಿಕೊಂಡು ಬಂದ ಭಾಷಾ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಭಾಷೆ ಅಂದರೆ ಶಬ್ದ ಮತ್ತು ಅರ್ಥಗಳ ನಡುವಿನ ಆಟ. ಸಾಮಾಜಿಕ, ಐತಿಹಾಸಿಕ, ರಾಜಕೀಯ, ಸಾಂಸ್ಕೃತಿಕ ಅಂಶಗಳನ್ನೂ ಒಳಗೊಂಡಂತೆ ಭಾಷೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದವರು ತಿರುಮಲೇಶರು. ಕವಿ, ಕಾದಂಬರಿಕಾರ, ಅಂಕಣಕಾರ, ನಾಟಕಕಾರ,ಅನುವಾದಕ ಹೀಗೆ ಬಹುಮುಖಿ ಆಯಾಮಗಳಲ್ಲಿ ತಿರುಮಲೇಶರು ಸಾಹಿತ್ಯಾರ್ಥಿಗಳಿಗೆ ಚಿರಪರಿಚಿತವಾಗಿದ್ದಾರೆ. ಪ್ರಸ್ತುತ ‘ಅಕ್ಷರ ಲೋಕದ ಅಂಚಿನಲ್ಲಿ’ ಕೃತಿ ಮುಖೇನ ಪ್ರಸ್ತುತ ತಿರುಮಲೇಶರನ್ನು ಭಾಷಾವಿಜ್ಞಾನಿಯಾಗಿ ನೋಡುವ ಕಿರುಪ್ರಯತ್ನ ಈ ಬರೆಹದಲ್ಲಿದೆ. ಶಬ್ದಗಳ ತಲ್ಲೀನತೆಯಿಂದ ಬಿಡುಗಡೆ ಶಬ್ದಗಳ ವಿಶ್ಲೇಷಣೆಯಿಂದ ಮಾತ್ರವೇ ಸಾಧ್ಯ. ಆದರೆ ಶಬ್ದಗಳಿಂದ ಮಾತ್ರ ಎಂದೂ ಬಿಡುಗಡೆ ಎಂಬುದಿಲ್ಲ ಎಂದು ತಿರುಮಲೇಶರೆ ಉಲ್ಲೇಖಿಸಿರುವಂತೆ ಶಬ್ದ ಚರಿತ್ರೆ ಕುತೂಹಲಕಾರಿ ವಿಷಯ ಒಮದು ಪದದ ಜಾಡನ್ನು ಹಿಡಿದರೆ ಪದರು ಪದರುಗಳಾಗಿ ಅನೇಕ ಸಂಗತಿಗಳು ಗೋಚರಿಸುತ್ತವೆ.
ಅಂಕಣ ಬರೆಹಗಳ ಒಟ್ಟು ಸಂಗ್ರಹ “ಅಕ್ಷರ ಲೋಕದ ಅಂಚಿನಲ್ಲಿ” ಕೃತಿ “ಮರೆತ ಮಾತು ಮರೆಯಾಗದ ನೆನಪು” ಎಂಬ ಉಪ ಶೀರ್ಷಿಕೆಯೊಡನೆ ಈಗಾಗಲೆ ಓದುಗರ ಕೈಸೇರಿದೆ ತಿರುಮಲೇಶರ ಹುಟ್ಟೂರು ಕಾಸರಗೋಡಿನ ಕಾರಡ್ಕ . ‘ಕಾರಡ್ಕ’ ಪದವನ್ನೆ ಮೊದಲಿಗೆ ವಿವರಣೆಗೆ ತೆಗೆದುಕೊಳ್ಳುವುದಾದರೆ ‘ಕಾರಡ್ಕ’ವೆಂಬುದು ಗ್ರಾಮದ ಹೆಸರು ಮಲೆಯಾಲದಲ್ಲಿ ‘ಕಾಡಗಂ’. ‘ಅಡ್ಕ’ ಎಂದರೆ ಉಳುಮೆ ಮಾಡದ ಇಳಿಜಾರಾದ ಪ್ರದೇಶ ಎಂಬ ಅರ್ಥವಿದೆ.
ಈ ಕೃತಿಯ ಮೊದಲ ಬರೆಹದ ಶೀರ್ಷಿಕೆಯೇ ‘ಅ’ಕಾರದಿಂದ ಆರಂಭವಾಗುತ್ತದೆ. ಭಗವದ್ಗೀತೆಯ ಕೃಷ್ಣ, ಗ್ರೀಕನಲ್ಲಿ ‘ಅಲ್ಫ’, ಅರೆಬಿಕ್ನಲ್ಲಿ ‘ಅಲಿಫ್’, ಇಂಗ್ಲಿಷ್ನ ‘A’ ಎನ್ನುತ್ತಾ ಭಾರತೀಯ ಬಾಷೆಗಳಲ್ಲಿ ‘ಅ’ ಎಂದು ಕರೆಯಲ್ಪಡುವ ಸ್ವರ, ಹರ್ಷ,ದುಃಖ, ಕಳವಳ, ಕಾಮ ಆಶ್ಚರ್ಯವೇ ಮುಂತಾದ ಭಾವವಿಕಾರಗಳ ಆದಿಯಲ್ಲಿರುತ್ತದೆ ಎಂದು ಬರೆಯುತ್ತಾರೆ. ಇದಿಷ್ಟೇ ಸಾಕು ತಿರುಮಲೇಶರ ಭಾಷಾವಿಜ್ಞಾನದ ಅರಿವಿನ ಸೀಮೆಯನ್ನು ಊಹೆ ಮಾಡಲು (ಆದರೆ ಅವರ ಜ್ಞಾನವನ್ನಲ್ಲ). ಲಿಪಿಗಳ ವ್ಯತ್ಯಾಸದ ಕುರಿತು ಹೇಳುವಾಗ ಅರೆಬಿಕ್ ಲಿಪಿಯ ಡೊಂಕಾದ ಕೋಲಿನಂತೆ, ಮಲೆಯಾಳದ ‘ಅ’ ಬದಿಗೆ ತೆರೆದುಕೊಂಡ ಇರಾಣಿ ಹೋಟೇಲು( ಇವರ ತರಂಗಾಂತರ ಕಾದಂಬರಿಯಲ್ಲಿ ಇರಾಣೀ ಹೋಟೆಲ್ ಕುರಿತಂತೆ ಮಾಹಿತಿ ಇದೆ ) ಇದ್ದಂತೆ ಆದರೆ ಕನ್ನಡ ಮತ್ತು ತೆಲುಗಿನಲ್ಲಿ ಮುದ್ದಾದ ಹೆಣ್ಣಿನ ಮುಖವಿದ್ದಂತೆ ಇರುವುದು ಎನ್ನುತ್ತಾರೆ. ಓರ್ವ ಭಾಷಾ ವಿಜ್ಞಾನಿಯಾಗಿ ಅವರು ನಮಗೆ ಈ ಕೃತಿಯಲ್ಲಿ ಪರಿಚಯವಾಗುವುದು ತಾನೆ ಸ್ಲೇಟ್ ಬಳಪ ಹಿಡಿದು ‘ಅ’ ಅಕ್ಷರಾಭ್ಯಾಸ ಮಾಡುವ ಚಕ್ಕಳಮಕ್ಕಳ (ಕನ್ನಡ>ಚಕ್ಕಳಮಕ್ಕಳ, ಹವ್ಯಕ> ಚಕ್ಕನಾಟಿ) ಹಾಕಿದ ಹುಡುಗನ ಮೂಲಕ.
ಭಾಷೆಯಲ್ಲ ಭಾಷಾ ಬಳಕೆಯಲ್ಲಿ ಅನೇಕ ಮಗ್ಗುಲುಗಳಿರುತ್ತವೆ. ನಿಂದನೆಗೆ, ವಂದನೆಗೆ, ಹೊಗಳಿಕೆಗೆ, ತೆಗಳಿಕೆಗೆ, ಬದುಕಿಗೆ ಭಾಷೆಯನ್ನು ಬಳಸುವುದಿದೆ. ಈ ಬಳಸುವಿಕೆಗೆ ಗುರಿಯಾದವೆಂದು ಬರೆಯುವುದರ ಬದಲು ತಿರುಮಲೇಶರು ಕುರಿಯಾದವನೆಂದು ಬರೆಯಬಹುದಿತ್ತು ಎಂದು ಲಘು ಹಾಸ್ಯ ಮಾಡುತ್ತಲೇ “ಭಾಷೆಯ ಆಟವು ಆಟ” ಎನ್ನುತ್ತಾ ಮರು ಪದದಲ್ಲಿಯೆ ‘ಭಾಷೆ’ ಪದಕ್ಕಿರುವ ವಾಗ್ದಾನ, ಕೊಟ್ಟಮಾತು ಎಂಬರ್ಥವನ್ನು ಎತ್ತಿ ಹಿಡಿಯುತ್ತಾರೆ.
# ‘ಕಡ್ಡಿ’ ಪದದ ಉಲ್ಲೇಖ ಇಲ್ಲಿ ಬರುತ್ತದೆ ‘ಕಡ್ಡಿ’ ಎಂದರೆ ಬಳಪ. ಹಳೆಮೈಸೂರು ಪ್ರಾಂತ್ಯದಲ್ಲಿ ‘ಬಳಪ’ ತಾವು ಬಳಪ>ಪೆನ್ಸಿಲ್>ಪೆನ್ನಿಗೆ ಬದಲಾದ ರೀತಿಯನ್ನು ಸುಂದರವಾಗಿ ನಿರೂಪಿಸಿದ್ದಾರೆ. ಹಳೆಮೈಸೂರು ಪ್ರಾಂತ್ಯದಲ್ಲಿ ಯಾವುದಾದರೂ ಗಿಡದ ಒಣಗಿದ ಗಿಡದ ಕಾಂಡಕ್ಕೆ ಕಡ್ಡಿ ಎನ್ನುತ್ತಾರೆ.
‘ಸುಬ್ರಹ್ಮಣ್ಯ ಜಾತ್ರೆ’ ಕುರಿತಾದ ಮಾತು ಬರುತ್ತದೆ. ಸಂಸ್ಕೃತದ ‘ಯಾತ್ರಾ’ ಪದವೆ ಕನ್ನಡದಲ್ಲಿ ‘ಜಾತ್ರೆ’ ಎಂದು ತದ್ಭವಗೊಂಡಿದೆ ಅಂದರೆ ಪದದ ಮೊದಲ ಅಕ್ಷರ ಯ>ಜ ಆಗಿ ಬದಲಾವಣೆಯಾಗಿರುವುದು. ಆದರೆ ಸಂಸ್ಕೃತ ಮತ್ತು ಕನ್ನಡದಲ್ಲಿ ಯಾತ್ರಾ>ಜಾತ್ರಾದ ಅರ್ಥ ಬೇರೆ ಇದೆ. ‘ಯಾತ್ರೆ’ ಎಂದರೆ ತೀರ್ಥ ಯಾತ್ರೆ ಅಥವಾ ಬೇರೆಡೆಗೆ ಕೈಗೊಂಡ ಪ್ರಯಾಣ. ಕನ್ನಡದಲ್ಲಿ ‘ಜಾತ್ರೆ’ ಎಂದರೆ ಪ್ರಯಾಣ . ಜಾತ್ರೆಗೆ ಕನ್ನಡದಲ್ಲಿ ‘ಪರಿಷೆ’ ಎಂಬ ಅರ್ಥವಿದೆ.
ಕನ್ನಡದ ಬೆಂಕಿ ಪೆಟ್ಟಿಗೆ ಹವ್ಯಕದಲ್ಲಿ ಕಿಚ್ಚಿನ ಪೆಟ್ಟಿಗೆ , ತುಳುವಿನಲ್ಲಿ ಸೂತ ಪೆಟ್ಟಿಕೆ, ಮಲೆಯಾಳದಲ್ಲಿ ತೀಪೆಟ್ಟಿಕೋಲ್ ಆಗುತ್ತದೆ. ಹವ್ಯಕ ಭಾಷೆಯಲ್ಲಿ ಬೆಂಕಿಗೆ ‘ಕಿಚ್ಚು’ ಎಂಬ ಪದವನ್ನು ಉಪಯೋಗಿಸಲಾಗುತ್ತದೆ. ಹಾಗೆ ಅಸೂಯೆಗೆ, ಜ್ವರದ ತಾಪಕ್ಕೂ ‘ಕಿಚ್ಚು’ ಎಂದೇ ಕರೆಯುವುದಿದೆ ಇದೇ ಕನ್ನಡದಲ್ಲಿ ‘ಕಿಚ್ಚು’ ಪದ ದ್ವೇಷ, ಕಾಡಿನ ಬೆಂಕಿ ಇತ್ಯಾದಿ ಅರ್ಥದಲ್ಲಿ ಬಳಕೆಯಾಗುತ್ತದೆ. ಬೆಂಕಿ ಮತ್ತು ಪೊಟ್ಟಣ ಎರಡೂ ಕನ್ನಡ ಶಬ್ದಗಳು. ಬೆಂಕಿಯನ್ನು ಉತ್ಪಾದಿಸುವ ಕಡ್ಡಿಗಳನ್ನು ಕೂಡಿಸಿಟ್ಟಿರುವ ಪೊಟ್ಟಣ ಬೆಂಕಿಪೊಟ್ಟಣ. ಇದು ಇಂಗ್ಲಿಷಿನ ಮ್ಯಾಚ್ ಬಾಕ್ಸ್ ಅಥವಾ ಸೇಫ್ಟಿಮ್ಯಾಚಸ್ಗೆ ಸಂವಾದಿಯಾಗಿದೆ. ಅಂದರೆ ತುರ್ತಾಗಿ ಅಗತ್ಯಕ್ಕಾಗಿ ಬೇಕಾಗಿರುವುದು ಎಂದರ್ಥ, ಸೇಫ್ಟಿಪಿನ್, ಸೇಫ್ಟಿ ರೇಜರ್ ಇದೇ ಅರ್ಥದಲ್ಲಿ ಬರುತ್ತವೆ. ಪೆಟ್ಟಿಗೆ>ಪೆಟ್ಟಿಗೆ ಆಗಿರುವಲ್ಲಿ ಕ>ಗ ಪರಿವರ್ತನೆಯನ್ನು ಕಾಣಬಹುದು
‘ಬ್ಯಾರಿ’ ಪದವು ‘ವ್ಯಾಪಾರಿ’ (ವ>ಬ ಆಗಿ ಪರಿವರ್ತನೆಗೊಂಡಿರುವುದು) ಪದದ ಅಪಭ್ರಂಶವಾಗಿದೆ. ‘ಬ್ಯಾರಿ’ ಈಗ ಒಂದು ಸಮುದಾಯ ಸೂಚಕವಾಗಿದೆ. ಅವರು ಮಾಡುವ ಚೌಕಾಸಿ ವ್ಯಾಪಾರದ ವೈಶಿಷ್ಟ್ಯತೆಯನ್ನು ತಿಳಿ ಹಾಸ್ಯದ ಮೂಲಕ ಹೇಳಿದ್ದಾರೆ. ನಮ್ಮ ಕನ್ನಡದ ವಸುದೇವ ಬಂಗಾಳದಲ್ಲಿ ಬಸುದೇವ ಆಗುವ ಉದಾಹರಣೆಯನ್ನು ಹೇಳಬಹುದು
ಕೇಶವಿನ್ಯಾಸ ಎಂಬ ಅಧ್ಯಾಯದಲ್ಲಿ ‘ಬಾರ್ಬರ್’ ಪದ ಲ್ಯಾಟಿನ್ ಮೂಲದ್ದು .ಲ್ಯಾಟಿನ್ ನಲ್ಲಿ ಬಾರ್ಬ ಎಂದರೆ ಗಡ್ಡ(ದಾಡಿ) ಎಂದು ಹಿಂದಿನ ಕಾಲದಲ್ಲಿ ಕ್ಷೌರಿಕರು ಸಣ್ಣ ಶಸ್ತ್ರ ಚಿಕಿತ್ಸಕರಾಗಿದ್ದರು ಎಂಬ ವಿಚಾರ ತಿಳಿಸುತ್ತಾ ‘ಸೀಸರ್ ಲ್ಯಾಟಿನ್ ಮೂಲದಲ್ಲಿ ‘ರೋಮ/ಕೂದಲು’ ಎಂಬ ಅರ್ಥವಿದೆ. ಆದ್ದರಿಂದ ‘ಸೀಸರ್’ ಎಂದರೆ ಧಾರಾಳ ರೋಮ ಇರುವವನು ಎಂದು ಅರ್ಥ. ಅಂಥವನಿಗೆ ಕತ್ತರಿಯ ಅಗತ್ಯ ಇದ್ದೇ ಇದೆ! ಹೀಗೆ ಸೀಸರ್ಸ್ ಮತ್ತು ಸಿಸೇರಿಯನ್ ಪದಗಳು ಮೂಲದಲ್ಲಿ ಕತ್ತರಿ ಪ್ರಯೋಗಕ್ಕೆ ಸಂಬಂಧಪಟ್ಟ ವಿಷಯಗಳೇ!” ಎಂಬ ಮಾಹಿತಿ ನೀಡುತ್ತಾರೆ. ಅಕ್ಷರ ಲೋಪವಾಗುವುದಕ್ಕೆ ಉದಾಹರಣೆಯಾಗಿ ನಂಭೂದಿರಿ >ನಂಬೂರಿ ಪದವನ್ನು ಹೇಳಿದರೆ, ಪಕಾರಕ್ಕೆ ಭಕಾರ ಬರುವುದನ್ನು ಪಟ್ಟರೆ ಕನ್ನಡಕ್ಕೆ ಬಂದಾಗ ಭಟ್ಟರ್ ಆಗುವುದನ್ನು ಉದಾಹರಿಸುತ್ತಾರೆ.
ಅಪರೂಪ ಎಂಬಂತೆ ಮೇಲ್ಶ್ಯಾಂತಿ ಮತ್ತು ಕೀಳ್ಶ್ಯಾಂತಿ ಪದ ಪ್ರಯೋಗ . ಇದನ್ನು ಕನ್ನಡ ವರ್ಗ ಬೇಧ ಎಂಬರ್ಥದಲ್ಲಿ ಬಳಕೆಯಾದರೆ ಮಲೆಯಾಳದಲ್ಲಿ ಅವರ ಅಧಿಕಾರವನ್ನು , ಜವಾಬ್ದಾರಿಯನ್ನು ಸೂಚಿಸುತ್ತದೆ. ಪೂರ್ವ-ಪಶ್ಚಿಮ ಎಂದು ದಿಕ್ಕುಗಳನ್ನು ಹೇಳುವ ಅರ್ಥದಲ್ಲಿ ತಮಿಳು ಹಾಗು ಮಲೆಯಾಳಂ ಭಾಷೆಯಲ್ಲಿ ಮೇಲ್-ಕಿಱಿಕ್ಕು ಪದಗಳು ಬಳಕೆಯಲ್ಲಿವೆ.ಶಾಂತಿ ಪದಕ್ಕೆ ಸಮಾಧಾನ ಎಂಬ ಅರ್ಥವಿದ್ದು ಉಪಶಾಂತಿ, ಪರಿಶಾಂತಿ ಪದಗಳು ಬಳಕೆಯಲ್ಲಿವೆ. ಶಾಂತಿಕ್ಕಾರರ್ ಎಂದರೆ ಕಾಸರಗೋಡಿನ ಮಲೆಯಾಳಿ ಅರ್ಚಕರು ಎಂದರ್ಥ. ಅಪರೂಪ ಎಂಬಂತೆ ಮೇಲ್ಶ್ಯಾಂತಿ ಮತ್ತು ಕೀಳ್ಶ್ಯಾಂತಿ ಪದ ಪ್ರಯೋಗ . ಇದನ್ನು ಕನ್ನಡ ವರ್ಗ ಬೇಧ ಎಂಬರ್ಥದಲ್ಲಿ ಬಳಕೆಯಾದರೆ ಮಲೆಯಾಳದಲ್ಲಿ ಅವರ ಅಧಿಕಾರವನ್ನು , ಜವಾಬ್ದಾರಿಯನ್ನು ಸೂಚಿಸುತ್ತದೆ.
‘ಮಿನ್ನಾಂಪುಳ’ ಅಂದರೆ ಮಿಂಚುಹುಳ ‘ಪ’ಕಾರ ‘ಹ’ಕಾರವಾಗುವುದಕ್ಕೆ ಉದಾಹರಣೆಯಾಗಿದೆ.
ಹವ್ಯಕರ ‘ಕರ್ಗಾಣಕತ್ತಲು’ ಪದವನ್ನು ಹಳೆಮೈಸೂರು ಪ್ರಾಂತ್ಯದಲ್ಲಿ ಗವಿಗತ್ತಲು , ಕಾರ್ಗತ್ತಲು ಎಂದು ಪ್ರಚಲಿತವಿದೆ.
ಎಣ್ಣೆ ಪದದ ವಿವರಣೆ ನೀಡುವಾಗ ಎಳ್+ನೆಯ್ = ಎಳ್ಳೆಣ್ಣೆ ಇದು ಶುದ್ಧ ದ್ರಾವಿಢ ಸಮಾಸ. ಇಲ್ಲಿ ‘ನೆಯ್ ‘ ಎಂದರೆ ಜಿಡ್ಡು ಎಂದರ್ಥ. ಹವ್ಯಕ ಹಾಗು ಕೊಡವ ಭಾಷೆಗಳಲ್ಲಿ ‘ನೆಯ್’ ಎಂದರೆ ತುಪ್ಪ ಎಂಬ ಅರ್ಥವಿದೆ.
ಚಿಮಣಿ ದೀಪ, ಕಲ್ಲೆಣ್ಣೆ, ಮಣ್ಣೆಣ್ಣೆ, ಮಿಟ್ಟೀಕಾ ತೇಲ್ ಮೊದಲಾದ ಪದಗಳು ಇಲ್ಲಿ ಬರುತ್ತವೆ. ಸೀಮೆಣ್ಣೆಯ ಹೊರತಾಗಿ ಒಂದಷ್ಟು ಎಣ್ಣೆಗಳ ಬಗ್ಗೆ ಮಾಹಿತಿ ನೀಡಿ ಇತರೆ ಅದೇ ಸಾಸುವೆ, ಎಳ್ಳೆಣ್ಣೆ ,ಹರಳೆಣ್ಣೆ ,ಹೊನ್ನೆಣ್ಣೆ, ಕಾಳೆಣ್ಣೆಗಳು ಕೊಬ್ಬರಿ ಎಣ್ಣೆ ಮುಂತಾದುವುಗಳನ್ನು ಪಟ್ಟಿಮಾಡುತ್ತಾರೆ. ಇಲ್ಲಿ ಸೀಮೆಣ್ಣೆ ಪದ ‘ಸೀಮೆ’ ಪದ ಬೇರೆ ಪ್ರದೇಶದಿಂದ ಬಂದ ‘ಎಣ್ಣೆ’ ಎಂಬ ಅರ್ಥವನ್ನು ಕೊಡುತ್ತದೆ ಸೀಮೆಬದನೆಕಾಯಿ,ಸೀಮೆಸುಣ್ಣ ಪದಗಳನ್ನೂ ಇಲ್ಲಿ ಉದಾಹರಿಸಬಹುದು.
ಸೂಜಿ ಪದ ಸೂಚೀ ಪದದ ಬದಲಾದ ರೂಪ . ಸಂಸ್ಕೃತದ ಪದದಲ್ಲಿ ಇದ್ದ ದೀರ್ಘಸ್ವರ ಕನ್ನಡಕ್ಕೆ ಬಂದಾಗ ಹೃಸ್ವೀಕರಣಗೊಳ್ಳುವುದಕ್ಕೆ ಒಂದು ಉದಾಹರಣೆ
‘ತುರಿ ಕಜ್ಜಿ’ ಎಂಬ ಪದ ಹಳೆಮೈಸೂರು ಭಾಗದಲ್ಲಿ ಕಜ್ಜಿ ತುರಿ ಎಂದು ಪ್ರಸಿದ್ಧ.
ಪುಟ.ಸಂ, 177 ರಲ್ಲಿ ಬೇಳದ ಕ್ರಿಶ್ಚಿಯನ್ ಗಂಡಾಳುಗಳಿಗೆ ‘ಸೋಜ’ ಎಂಬ ಉಪನಾಮವಿದೆ ಇದು ಪೋರ್ಚುಗೀಸ್ ಡಿ’ಸೋಜ ಎಂಬುದರಿಂದ ಬಂದುದು ಎಂಬ ಮಾಹಿತಿ ನೀಡುತ್ತಾರೆ.
‘ಪಿಶಾತಿ’ ಎಂಬ ಪದ ‘ಪಿಶಾಕತ್ತಿ’ ಎಂಬುದರಿಂದ ಬಂದಿದೆ . ಇಲ್ಲಿ ಎರಡು ಪದ ಸೇರಿ ಒಂದೇ ಪದವಾಗುವಾಗ ಒಂದು ಅಕ್ಷರ ಲೋಪವಾಗುತ್ತದೆ . ಇದಕ್ಕೆ ಮಹಾಲಯ>ಮಾಲಯ,ಆದಿತ್ಯವಾರ>ಆಯ್ತಾರ ಪದಗಳನ್ನೂ ಉದಾಹರಿಸಬಹುದು.
‘ಬಾಳ್’ ಅಂದರೆ ‘ಕತ್ತಿ’, ‘ಬಾಳೆ’ ಒಂದು ಜಾತಿಯ ‘ಮೀನು’ ಇನ್ನೊಂದು ‘ಬಾಳ್’ ಅಂದರೆ ‘ಬದುಕು’, ‘ಜೀವನ’ ಎಂಬ ಅರ್ಥವೂ ಇದೆ.
‘ಅರಸ’ ಪದ ಅಚ್ಚಗನ್ನಡದ್ದಲ್ಲ ತಮಿಳು ಮೂಲದ ಪದ ಎಂಬ ಮಾಹಿತಿ ಇದೆ.
ಕವಡೆ: ಸಂಸ್ಕೇತ ಪದ ಕಪರ್ದದ ತದ್ಭವ ರೂಪ. ಚೌಕಾಬಾರ ಆಟದಲ್ಲಿ ಗರಗಳನ್ನು ಹಾಕಲು ಬಳಸುವುದು . ಸಾಗರದಲ್ಲಿ ದೊರಕುವ ಪ್ರಾಣಿಯ ಚಿಪ್ಪು. ಇದು ಹಿಂದೆ ನಾಣ್ಯವಾಗಿಯೂ ಇದರ ಉಪಯೋಗವಾಗುತ್ತಿತ್ತು.
# ಮಲೆನಾಡು,ದಕ್ಷಿಣಕನ್ನಡ ಕೊಡಗು ಮುಂತಾದೆಡೆ ‘ಬರೆ’ ಎಂದರೆ ಕಡಿದಾದ ಜಾಗ. ಹಳೆಮೈಸೂರು ಪ್ರಾಂತ್ಯದಲ್ಲಿ ‘ಮೈಮೇಲೆ ಬರೆ’, ‘ಬಾಸುಂಡೆ’, ‘ಬರೆಯುವುದು’, ‘ಕೇವಲ’ ಇತ್ಯಾದಿ ಅರ್ಥವಿದೆ ಅದರೆ
ಬೆದರು ಬೊಂಬೆಗಳನ್ನು ಬೆರ್ಚಪ್ಪಗಳೆಂದು ಕರೆಯುತ್ತಾರೆ. ತೆಲುಗಿನ ‘ಬೊಮ್ಮ’ ಪದದಿಂದ ‘ಬೊಂಬೆ’ ಪದ ಬಂದಿದೆ ಆದರೆ ಸಂಸ್ಕೃತದ ‘ಬ್ರಹ್ಮ’ ಪದಕ್ಕೆ ಕನ್ನಡದ ತದ್ಭವ ರೂಪವೇ ಬೊಮ್ಮ. ಪೆರ್ಚು>ಬೆರ್ಚು ಪದವಾಗಿದೆ ಪ>ಬ ಆಗುವಂತೆ ಬೆರ್ಚು+ ಅಪ್ಪ ಬೆರ್ಚಪ್ಪ ಆಗಿದೆ. ಬ್ರಹ್ಮ ಎಂದರೆ ಸೃಷ್ಟಿಕರ್ತ ಎಂಬ ಅರ್ಥ ಸಂಸ್ಕೃತ ಮತ್ತು ಕನ್ನಡದಲ್ಲಿದ್ದರೆ ಅದರ ತದ್ಭವ ‘ಬೊಮ್ಮ’ನಿರ್ಜೀವ ಬೊಂಬೆ ಎಂಬ ಅರ್ಥವಿದೆ.
ಮಲೆಯಾಳದಲ್ಲಿ ವಚನ ,ಪುರುಷ,ಲಿಂಗಭೇದಗಳಲ್ಲದೆ ಕ್ರಿಯಾಪದ ಒಂದೇ ರೂಪದಲ್ಲಿ ಬಳಕೆಯಾಗುತ್ತದೆ. ಇದಕ್ಕೆ ತಿರುಮಲೇಶರು ಉದಾಹರಣೆಯಾಗಿ ಕೊಟ್ಟಿರುವ ವಾಕ್ಯ “ಎನಿಕ್ಕು ವಿಷಕ್ಕುನ್ನು” (ನನಗೆ ಹಸಿವಾಗುತ್ತದೆ).
ಮಲಬಾರ್ ಮಲೆಯಾಳ ‘ಖಿಲಾಫತ್’ ಚಳವಳಿ ಮಾಪಿಳ್ಳೆ ಕನ್ನಡದಲ್ಲಿ ‘ಕಿಲಾಪತ್ ‘ಕಾರಣ ಅವರಲ್ಲಿ ಮಹಾ ಪ್ರಾಣದ ಬಳಕೆ ತೀರಾ ಕಡಿಮೆ ಎಂದು ಮಲೆಯಾಳಿ ಭಾಷೆಯಲ್ಲಿ ಮಹಾಪ್ರಾಣಗಳು ಕಡಿಮೆ ಎಂಬುದನ್ನು ಹೇಳುತ್ತದೆ.
ಲಿಪಿ:ಇಟ್ಟಿಗೆಯ ಮೇಲೆ ಬರೆಯುವ ಮೊದಲು ಅದಕ್ಕೆ ಲೇಪ ಹಚ್ಚಿ ಅದರಲ್ಲಿ ಅಕ್ಷರ ಕೊರೆಯುತ್ತಿದ್ದರು . ಅದಕ್ಕೆ ‘ಲಿಪಿ’ ಶಬ್ದ ಬಂದಿರುವುದು. ಪುಟ. ಸಂ. 123 ಕನ್ನಡ ಭಾಷಾ ಬೆಳವಣಿಗೆ ಮತ್ತು ಪೂರಕ ಸಾಹಿತ್ಯ
ರೂಪಾಂತರ ಸ್ವೀಕರಣೆಗೆ ಉದಾಹರಣೆ ಸಂಸ್ಕೃತ ಪ್ರಾಕೃತ ಕನ್ನಡಗಳಿಂದ ಕ್ರಮವಾಗಿ ಕಷಾಯ >ಕಸಾಯ> ಕಸಾಯ, ಆಜ್ಞಾ> ಆಣಾ > ಆಣೆ ಆಗಿರುವುದು.
‘ಅತ್ತಿಗೆ’ ಸಂಸ್ಕೃತದ ‘ಅಕ್ತಿಕಾ’ ಪದದಿಂದ ಬಂದಿದೆ ಸಂಸ್ಕೃತದಲ್ಲಿ ‘ಅಕ್ತಿಕಾ’ ಎಂದರೆ ಹಿರಿಯ ಭಗಿನಿ ಅಥವಾ ಅತ್ತಿಗೆ ಎಂದಾದರೆ ತಮಿಳಿನಲ್ಲಿ ಅತ್ತಾಚಿ ಆಗಿದೆ ಅಂದರೆ ಅಣ್ಣನ ಹೆಂಡತಿ ಅಥವಾ ಗಂಡನ ಸಹೋದರಿ ಎಂದರ್ಥ.
ಅವಲಕ್ಕಿ:ಅವಲ್ ಮತ್ತು ಅಕ್ಕಿ ಸೇರಿ ಆಗಿರುವ ಪದ ‘ಅವಲ್’ ಎಂದರೆ ಕುಟ್ಟುವಿಕೆ ಅಕ್ಕಿಯನ್ನು ಕುಟ್ಟಿದ್ದು ಬತ್ತವನ್ನು ಕುದಿಯುವ ನೀರಿನಲ್ಲಿ ಹಾಕಿ ಸ್ವಲ್ಪ ಮಾತ್ರ ಬೇಯಿಸಿ ಆರಸಿ ಕೂಡಲೆ ಒರಳಲ್ಲಿ ಕುಟ್ಟುವುದರಿಂದ ಆದ ಅಕ್ಕಿ.
ಔತಣ ದ್ರಾವಿಢ ಪದ . ಕನ್ನಡ ಮತ್ತು ಹವ್ಯಕ ಭಾಷೆಗಳಲ್ಲಿ ‘ಅವ್’ ಶಬ್ದವಿದೆ ತೆಳ್ಳಗಿನ ಆಹಾರ (ತೆಳ್ಳೇವು) ಆವುಗು ತೆಳ್ಳಗಿನ ಸಿಹಿ ತಿಂಡಿ. ಆವುಗಳನ್ನು ತಣಿಸುವುದು ಔತಣ ಆಗಿದೆ ಈಗ ಊಟ ಎಂಬ ತಪ್ಪು ಗ್ರಹಿಕೆ ಕೊಡುತ್ತದೆ.
ಕುಂಬಾರ ಸಂಸ್ಕೃತದ ಕುಂಭಕಾರ ಪದದಿಂದ ಬಂದಿದೆ.
ಕುಡುಗೋಲು: ಇದು ಕುಡು ಮತ್ತು ಕೋಲ್ ಎಂಬ ಎರಡು ಪದಗಳು ಸೇರಿ ಆಗಿದೆ. ಕುಡು ದೇಶೀ ಪದ ಕೋಲು ಕ>ಗ ಆಗಿ ಗೋಲು ಆಗಿದೆ. ಕೊಂಕಿದ ಅಲಗುಳ್ಳ ಒಂದು ಕೊಯ್ಯುವ ಸಾಧನ ಇದಕ್ಕೆ ಕುಡುಲು, ಕುಡ್ಳು, ಕುಡುಗಾಲು ಎಂಬ ಹೆಸರುಗಳೂ ಇವೆ.
ಗಡಿಯಾರ: ಇದು ಪ್ರಾಕೃತ ಮೂಲ ಘಡಿ ಆಲಯ ( ದಿನದ ಘಳಿಗೆ ತಿಳಿಯುವ ಾವರಣ ಹಿಂದಿ ಘಡಿಯಾಲ ಮರಾಠಿಯಲ್ಲಿ ಘಡಿಯಾಳ, ಕನ್ನಡದಲ್ಲಿ ಘಳಿಯಾರ ಎಂಬುದರ ರೂಪವೇ ಗಡಿಯಾರ ) ಅಂದರೆ ಕಾಲವನ್ನು ತಿಳಿಸುವ ಯಂತ್ರ
ಶಾಲಾ; ಇದು ಸಂಸ್ಕೃತ ಪದ ಕನ್ನಡದಲ್ಲಿ ಶಾಲೆ ಆಗಿದೆ. ಸಾಲೆ ಪಾಕಶಾಲೆ ಭೋಜನ ಶಾಲೆಗಳಂತೆ ಕನ್ನಡದಲ್ಲಿ ಕೈಸಾಲೆ, ಮೊಗಸಾಲೆ, ಪಡಸಾಲೆ ಪದಗಳನ್ನು ಗುರುತಿಸಬಹುದು. ಇದೇ ರೀತಿ ಶ>ಸ ಆಗುವುದಕ್ಕೆ ಅರಿಶಿಣ>ಅರಿಸಿಣ ಆಗುವುದನ್ನೂ ಉದಾಹರಿಸಬಹುದು. ಈ ವ್ಯತ್ಯಾಸ ಕೇವಲ ಭಾಷೆಗೆ ಸಂಬಂಧಿಸಿದ್ದಲ್ಲ ವರ್ಗ ಮತ್ತು ಸಮಾಜಕ್ಕೂ ಸಂಬಂಧಿಸಿದ್ದು.
‘ಪೆದ್ದಣ ಆಳ್ವರು’ ತೆಲುಗಿನಲ್ಲಿ ಪೆದ್ದ ಎಂದರೆ ಕನ್ನಡದಲ್ಲಿ ದೊಡ್ಡ ಎನ್ನುವ ಅರ್ಥದಲ್ಲಿ ಬರುತ್ತದೆ.
ಬ್ಯಾರಿ ಭಾಷೆಯಲ್ಲಿ ಪಳ್ಳಿ ಅಂದರೆ ಮಸೀದಿ, ಕನ್ನಡದಲ್ಲಿ ಪ >ಹ ಆಗಿ ಪರಿವರ್ತನೆ ಆಗಿ ಹಳ್ಳಿ ಆಗಿ ಗ್ರಾಮೀಣ ಪ್ರದೇಶ ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ . ಬ್ಯಾರಿ ಭಾಷೆ ಅರೆಬಿಯನ್ ಮೂಲದಿಂದ ಬಂದಿರುವುದು.
ಗದ್ದೆ> ವಿಜಾತಿಯ ದ್ವಿತ್ವಾಕ್ಷರ ಸಜಾತೀಯವಾಗುವುದು. ಫುರ್ವದ ಹಳಗನ್ನಡ ಮತ್ತು ಹಳಗನ್ನಡದ ವಿಜಾತೀಯ ದ್ವಿತ್ಯಾಕ್ಷರಗಳು ನಡುಗನ್ನಡ ಮತ್ತು ಹೊಸಗನ್ನಡದಲ್ಲಿ ಸಜಾತೀಯವಾಗಿವೆ.
ಪೂರ್ವದ ಹಳಗನ್ನಡದ ವಿಜಾತೀಯ ದ್ವಿತ್ವಾಕ್ಷರ ಹೊಸಗನ್ನಡಕ್ಕೆ ಬರುವಾಗ ಸಜಾತೀಯದ್ದಾಗಿರುವುದಕ್ಕೆ ಉದಾಹರಣೆ ಗಱ್ದೆ> ಗಱ್ದೆ>ಗದ್ದೆ>ಗದ್ದೆ. ಹಾಗೆ ಪೊಸಂತಿಲ್>ಪೊಸ್ತಿಲ್>ಹೊಸ್ತಿಲು>ಹೊಸಲು ಪದವೂ ಹೊಸಗನ್ನಡಕ್ಕೆ ರೂಪಾಂತರವಾಗಿ ಬಂದಿರುವ ಪದ.
‘ಞ’ ಕನ್ನಡದಲ್ಲಿ ಉಪಧ್ವನಿಮಾ. ಆದರೆ ಮಲೆಯಾಳಂ ಮತ್ತು ತುಳುವಿನಲ್ಲಿ ಪ್ರಧಾನ ಧ್ವನಿಮಾ. ಪ್ರಸ್ತುತ ಕೃತಿಯಲ್ಲಿ ಞಂಡ್ ಎಂಬ ನಂಜುಂಡ ಎಂಬ ಹೆಸರಿನ ಅಧ್ಯಾಯವಿದೆ. (ಪುಟ. ಸಂ.209-213)
ಹವ್ಯಕರ ಭಾಷೆಯಲ್ಲಿ ತಾಯಿಯನ್ನು ಅಬ್ಬೇ ಎಂದು ಇಂದಿಗೂ ಹೇಳುವುದು ಹಳಗನ್ನಡದ ಪ್ರಭಾವವನ್ನು ಸೂಚಿಸುತ್ತದೆ. ಬಹುವಚನ ಸಂದರ್ಭದಲ್ಲಿ ‘ಅಕ್ಕೊ’ ಪ್ರತ್ಯಯಗಳು ಸೇರುತ್ತದೆ ಉದಾಹರಣೆಗೆ ‘ಅಬ್ಬೆಕ್ಕೋ’(ತಾಯಂದಿರು). ಹವ್ಯಕ ಗ್ರಾಂಥಿಕ ಪದ ಆದರೆ ಇದು ಆಡು ಭಾಷೆಯಲ್ಲಿ ಒತ್ತಕ್ಷರ ಕಳೆದುಕೊಂಡು ದೀರ್ಘ ಸ್ವರ ಪಡೆದುಕೊಂಡು ಹವೀಕ ಎಂದು ಬಳಕೆಯಲ್ಲಿದೆ.
ಅಪ್ಪ, ಅಣ್ಣ, ಅಜ್ಜ ಮೊದಲಾದ ಪದಗಳು ಅಪ್ಪನ್, ಅಣ್ಣನ್ ಅಜ್ಜನ್ ಮೊದಲಾಗಿ ಕರೆಸಿಕೊಳ್ಳುವುದು ಅನುನಾಸಿಕಾಂತ್ಯಕ್ಕೆ ಉದಾಹರಣೆಯಾಗಿದೆ.
ಹಳೆಗನ್ನಡದ ‘ಗಡ’ ಹೊಸಗನ್ನಡದಲ್ಲಿ ಅಂತೆ ಆಗಿದೆ ಹವ್ಯಕದಲ್ಲಿ ‘ಅಡ’ ಆಗಿದೆ ಅರೆಭಾಷೆಯಲ್ಲಿ ಗಡ ಪದ ಇನ್ನೂ ಮೂಲಸ್ವರೂಪದಲ್ಲಿಯೇ ಉಳಿದಿದೆ.
ಹವ್ಯಕ ಮತ್ತು ಮಲೆಯಾಳ ಲಿಂಗರೂಪದಲ್ಲಿ ಇಳಿತ ಕನ್ನಡದಲ್ಲಿ ಪ್ರಥಮ ಪುರುಷ ಏಕವಚನದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕ, ಲಿಂಗಗಳೆಂಬ ವ್ಯತ್ಯಾಸವಿದೆ. ಈ ವ್ಯತ್ಯಾಸ ಕ್ರಿಯಾಪದದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಹವ್ಯಕದಲ್ಲಿ ಪುಲ್ಲಿಂಗ ಮತ್ತು ನಪೂಂಸಕ ಲಿಂಗ ಮಾತ್ರವಿದೆ.(ಹೆಚ್ಚಿನ ವಿವರಣೆಗೆ ಪುಟ.ಸಂ79ಮತ್ತು 80ರಲ್ಲಿ)
ಮಲೆಯಾಳದ ‘ಮಾರರ್’ ಕನ್ನಡದಲ್ಲಿ ‘ಮಾರಾಯ’ ಆಗಿದೆ.ಪೂಜೆ ಕಾಲದಲ್ಲಿ ಚಂಡೆ ಬಡಿಯುವವನನ್ನು ಮಲೆಯಾಳಂನಲ್ಲಿ ‘ಮಾರಾರ್’ ಎನ್ನುತ್ತಾರೆ.
‘ತಾಮ್ರ’ ಪದ ಪ್ರಾಕೃತ ಭಾಷೆಯಿಂದ ಕನ್ನಡಕ್ಕೆ ಬಂದಿದೆ ಅದರೆ ಹವ್ಯಕ ಬಾಷೆಯಲ್ಲಿ ಚೆಂಬು ಪದಕ್ಕೆ ತಾಮ್ರ ಎನ್ನುತ್ತಾರೆ.
ಅಬಿಂದುಕ ಆಗುವುದಕ್ಕೆ ಡಾಂಬರು>ಡಾಮರು , ಕಿಲುಬು>ಕಿಲುಂಬು, ದಾರಂದ>ದಾರಣ,ಕಾಲಿಂಗೆ>ಕಾಲಿಗೆ, ಕೊರಳಿಂಗೆ>ಕೊರಳಿಗೆ, ಕಣ್ಣಿಂಗೆ>ಕಣ್ಣಿಗೆ ಪದಗಳನ್ನು ಉದಾಹರಿಸಬಹುದು
ಪ್ರತಿಧ್ವನಿ ಪದಗಳು : ಸಲೂನ್>ಗಿಲೂನ್,ವಿಮ್>ಗಿಮ್ ಮೂಲ ಪದದ ಶಬ್ದಾರಂಭದ ಧ್ವನಿ ಯಾವುದೇ ಇದ್ದರೂ ಪ್ರತಿಧ್ವನಿ ರೂಪದ ಮೊದಲ ಅಕ್ಷರ’ಗಿ’ ಆಗುವುದು.
ಅನುಪ್ರಾಸ ಪದಗಳು: ಪಾತ್ರೆಪಗಡೆ ಇದಕ್ಕೆ ಉದಾಹರಣೆ ಮಾತಿನ ಓಘಕ್ಕೆ ಒಗ್ಗಿಕೊಂಡ ಪದ ಇಲ್ಲಿರುವುದು ಪಾತ್ರೆ ಅಡುಗೆ ತಯಾರಿಸುವಂಥವು ಎಂಬ ಅರ್ಥ ಬಂದರೆ ಪಗಡೆ ದಾಳದ ಇನ್ನೊಂದು ಹೆಸರು
# ಮುಟ್ಟಿ ಪದ ಇಲ್ಲಿ ವಿಶೇಷವಾಗಿದೆ ಇದನ್ನು ಪೊಳಿಮ್ಮಣೆ ಎನ್ನುತ್ತಾರೆ. ಪೊಳಿ+ಮಣೆ=ಪೊಳಿಮಣೆ,ಪೊಳಿಮ್ಮಣೆ ಅಮದರೆ ಹೊಡೆಯುವ ಮಣೆ ಎಂಬ ಅರ್ಥವನ್ನು ಕೊಡುತ್ತದೆ. ಹಾಗೆ ಚದುರ ಹವ್ಯಕ ಭಾಷೆಯಲ್ಲಿ ಸುಂದರವಾದ ,ಸೊಗಸಾದ ಎಂಬ ಅರ್ಥವನ್ನು ಹೊಂದಿದ್ದರೆ ಕನ್ನಡದಲ್ಲಿ ‘ಚದುರ’ ಎಂದರೆ ಒಂದು ಅಳತೆಯ ಪ್ರಮಾಣವಾಗಿ ಬಳಕೆಯಲ್ಲಿದೆ
# ಅ>ಎ ಕಾರವಾಗುವುದಕ್ಕೆ ಕನ್ನಡದಲ್ಲಿ ಇಂಗ್ಲಿಷಿನ ಆನೊಟೇಷನ್ ಎಂದರೆ ಕರಾವಳಿ ಭಾಗದಲ್ಲಿ ಎನೋಟೇಷನ್ ಎನ್ನುತ್ತಾರೆ. ಅಲರ್ಜಿ>ಎಲರ್ಜಿ,ಆಂಟಿಹಿಸ್ಟಮಿನ್> ಎಂಟಿ ಹಿಸ್ಟಮಿನ್ ಇತ್ಯಾದಿ…..
ರಾಕ್ ಪದದ ವಿಶ್ಲೇಷಣೆ : ಇದು ಅರೆಬಿಯನ್ ಮೂಲದಿಂದ ಇಂಗ್ಲಿಷಿಗೆ ಅರಾಕ್ ಪದದಿಂದ ಬಂದಿದೆ . ಅರೆಬಿಕ್ನಲ್ಲಿ ಇದಕ್ಕೆ ಭಟ್ಟಿಯಿಳಿಸು ಎನ್ನುತ್ತಾರೆ. ಈ ಪದದ ಬಗ್ಗೆ ಸಹಮತವಿಲ್ಲವಾದರೂ ಅರಿಕ ಪದದ ಮೂಲ ಅಡಿಕೆ ಯಾಗಿದೆ ಎಂದೂ ಹೇಳುವುದಿದೆ.
ಕುಪ್ಪಿ: ಮಲೆನಾಡು,ಕರಾವಳಿ ತೀರದಲ್ಲಿ ಬಾಟಲಿಗೆ ಹೇಳುವ ಪದ ಇದು ಬುಡ್ಡಿ, ಸೀಸೆ, ಸೀಶ ಎಂಬ ಹೆಸರಿನಿಂದ ಕರ್ನಾಟಕದ ಇತರೆಡೆ ಬಳಕೆಯಲ್ಲಿದೆ.
‘ಅಕ್ಷರ ಲೋಕದ ಅಂಚಿನಲ್ಲಿ’ ಕೃತಿಯಲ್ಲಿ ಬಂದಿರುವ ಅನ್ಯದೇಶೀ ಪದಗಳು
ಅರಾಬಿಕ್. ಸೈತಾನ, ಗೈರು ಹಾಜರು, ರಸ್ತೆ,ಊದುಬತ್ತಿ, ಮೇಣ ,( ಮೇಣ ಪದ ಮಯಣ ಎಂಬುದಾಗಿ ಬಳಕೆಯಲ್ಲಿದೆ)
ಪಾರಸಿ ಭಾಷೆ:ಬೇಕೂಫ >ಬೇವಕೂಫ್, ಕಾಗದ, ಕಾರ್ಖಾನೆ, ವರಾಂಡ,ಚೌಕಾಸಿ, ಶಿಸ್ತು,ಫಾತಿ, ಶರಬತ್,ಜೇಬು,ಚಮಚೆ
# ಪೋರ್ಚುಗೀಸ್:ಮೇಜು,ಕಂದೀಲು ಕಾಫಿ,ಚೊಂಬು,ಲ್ಯಾಟೀನು,
ಮರಾಠಿ: ಪುಢಾರಿ
ಜರ್ಮನ್: ‘ಇಗರ್ಜಿ’ ಇದು ‘ಕೊರ್ಕೋಸ್’ ಎಂಬ ಪದದಿಂದ ಬಂದಿದೆ. ಚರ್ಚ್ ಎಂಬರ್ಥ ಹೊಂದಿರುವ ಈ ಪದವನ್ನು ಹಿಂದಿಯಲ್ಲಿ ‘ಇಗರ್ಜಿ’,ತುಳುವಿನಲ್ಲಿ ‘ಇಗ್ರೆಜಿ’, ಮಲೆಯಾಳದಲ್ಲಿ ‘ಇಗ್ರೆಷಿಯಾ’ ಎಂಬುದಾಗಿ ಕರೆಯುತ್ತಾರೆ.
# ಇಂಗ್ಲಿಷ್: ಬಸ್>ಬಸ್ಸು,ಸ್ಕೂಲ್>ಸ್ಕೂಲು,ಕಾಲೇಜ್>ಕಾಲೇಜು,ಪೆನ್>ಪೆನ್ನು, ಲೈಟ್>ಲೈಟು ವ್ಯಂಜನಾಂತಗಳು ಕನ್ನಡಕ್ಕೆ ಬಂದಾಗ ಸ್ವರಾಂತಗಳಾಗುವುದಕ್ಕೆ ಉದಾಹರಣೆಗಳು (ಭಾಷಾವಿಜ್ಞಾನದ ದೃಷ್ಟಿಯಿಂದ ಕೆಲವೇ ಪದಗಳನ್ನು ಆರಿಸಿದೆ ಇದಕ್ಕೂ ಹೊರತಾಗಿ ಅನೇಕ ಇಂಗ್ಲಿಷ್ ಪದಗಳು ಈ ಕೃತಿಯಲ್ಲಿವೆ)
ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಲು ಆಲಿಸುವುದು, ಹಾಡುವುದು, ಓದುವುದು, ಬರೆಯುವುದು ಮಾಡಬೇಕು.ಸ್ಪಷ್ಟವಾಗಿ,ದೊಡ್ಡದಾಗಿ ನಿಧಾನವಾಗಿ ಓದುವುದೂ ಕೂಡ ಭಾಷಾ ಕೌಶಲವನ್ನು ಹೆಚ್ಚಿಸಿಕೊಳ್ಳುವ ಮಾರ್ಗೋಪಯಾಗಳು ಎಂದು ಓರ್ವ ಭಾಷಾ ಶಿಕ್ಷಕನಾಗಿ, ಭಾಷಾ ವಿಜ್ಞಾನಿಯಾಗಿ ತಿರುಮಲೇಶರು ಅಕ್ಷರ ಲೋಕದ ಅಂಚಿನಲ್ಲಿ ಕೃತಿಯಲ್ಲಿ ಹೇಳುತ್ತಾರೆ ಇವುಗಳು ಭಾಷಿಕರನ್ನು ತಮ್ಮ ಭಾಷೆಯಲ್ಲಿ ಹಿಡಿತ ಹೊಂದಲು ಸಹಾಯಕ . ಇದೇ ಆಶಯವನ್ನು ಇರಿಸಿಕೊಂಡು ಅಕ್ಷರ ಲೋಕದ ಅಂಚಿನಲ್ಲಿ ಬರುವ ಕೆಲವು ಪದಗಳನ್ನು ಕೃತಿಯ ಹಿನ್ನೆಲೆಯಲ್ಲಿಯೇ ಡಾ. ಸಾ.ಶಿ. ಮರುಳಯ್ಯ ಅವರ ಕನ್ನಡ ಭಾಷಾಲೋಕ ಮತ್ತು ಪೂರಕ ಸಾಹಿತ್ಯ ಕೃತಿಯಲ್ಲಿನ ಮಾಹಿತಿಯೊಂದಿಗೆ ವಿಶ್ಲೇಷಿಸುವ ಕಿರುಪ್ರಯತ್ನ ಇದಾಗಿದೆ.
“ಭಾಷೆಯ ಅವಸಾನ ಕೇವಲ ಭಾಷೆಯದ್ದಲ್ಲ ಜನಜೀವನದ್ದು” ಎಂದು ತಿರುಮಲೇಶರು ( ಪುಟ ಸಂ 170 ) ಹೇಳಿರುವಂತೆ ನಮ್ಮ ಅಸ್ಮಿತೆ ಭಾಷೆ. ನಮ್ಮತನವನ್ನು ಸಾಬೀತುಮಾಡುವ ನಮ್ಮ ಮಾತೃಭಾಷೆಯನ್ನು ಇತರ ಭಾಷೆಗಳೊಂದಿಗೆ ಜತನದಿಂದ ಪೋಷಿಸುವುದು ನಮ್ಮೆಲ್ಲರ ಬದ್ಧತೆಯಾಗಬೇಕು ಎಂಬ ಆಶಯದೊಂದಿಗೆ ಈ ಬರೆಹಕ್ಕೆ ಪೂರ್ಣವಿರಾಮವನ್ನಿಡುವೆ.
ಸುಮಾವೀಣಾ
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ