ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಪರಿಚಿತರು

ಸಿಂಧೂರಾ ಹೆಗಡೆ
ಇತ್ತೀಚಿನ ಬರಹಗಳು: ಸಿಂಧೂರಾ ಹೆಗಡೆ (ಎಲ್ಲವನ್ನು ಓದಿ)

ಕೃಷ್ಣ ಬಿದಿಗೆಯ ಚಂದ್ರಮನ ಹೊನಲು ಆಗಸದಲ್ಲಿ ಮಿನುಗುವ ಪ್ರತೀ ತಾರೆಗೂ ಚಿರಪರಿಚಿತವೇ? ಸಾಗರದಾಳದಿಂದ ಹೊಮ್ಮುವ ತರಂಗಗಳು ಕಿನಾರೆಗೆ ಅಪರಿಚಿತರಲ್ಲವೇ? ಆದರೂ ಸಹ ಅಪ್ಪಿ ಒಪ್ಪುವ ಭಾವ ಕೇವಲ ಪ್ರಕೃತಿಯ ಕೂಸುಗಳದ್ದು.

ಮೊನ್ನೆ ಮೊನ್ನೆಯಷ್ಟೇ ೨೦೨೩ರೆಂಬ ಹೊಸ ದಿನಾಂಕ ಬರೆವ ಅಭ್ಯಾಸ ಪ್ರಾರಂಭವಾಗಿತ್ತು. ಇದೀಗ ಕೊನೆಯದಾಗೊಮ್ಮೆ ದಿನಾಂಕದ ಕೊನೆಯಲ್ಲಿ ೨೦೨೩ರ ಭರ್ತಿ. ದಿನಗಳುರುಳಿದವು, ಬದುಕೂ ಸಹ. ಪುಟ ತಿರುವಿದರೆ ಪುಸ್ತಕದ ಕೆಲವು ಅಧ್ಯಾಯಗಳು ಹೊಸದಾದ ಅರ್ಥಗಳನ್ನೇ ನೀಡುತ್ತವೆ. ಓದುಗರು ಬದಲಾಗದಿದ್ದರೂ, ಓದಿಸಿಕೊಂಡು ಹೋದ ಲೇಖಕನ ಪದಪುಂಜಗಳು ತಾನಾಗಿಯೇ ಉಳಿದರೂ, ದೃಷ್ಟಿ ಹಾಗೂ ಅವಲೋಕನ ಬದಲಾಗುತ್ತದೆ, ಬದಲಾಗಲೇಬೇಕು. ಕೇವಲ ಕೆಲವೇ ಕೆಲವು ಅಧ್ಯಾಯಗಳು ಮನ್ವಂತರದ ಹಾದಿಯನ್ನು ಅನುಸರಿಸದೇ ಉಳಿದುಬಿಡುತ್ತವೆ, ಎಂದಿನಂತೆ, ತಾಯಿಯಪ್ಪುಗೆಯಂತೆ ಚಿರನೂತನ. ಮನದಲ್ಲಚ್ಚಾದ ಕೆಲವು ಅಧ್ಯಾಯಗಳನ್ನು ತಿರುವಿ ನೋಡಿ. ವಸಂತದ ಮೇರುಪರ್ವದಲ್ಲಿ ಪಲ್ಲವಿಸುವ ಚಿಗುರಿನಂತೆ ಮನದಾಳದಿಂದ ಮಂದಹಾಸವೊಂದು ಮೂಡುತ್ತದೆಯಲ್ಲವೇ! ಸ್ನೇಹವೋ, ಕಲ್ಪನೆಯೋ, ಪ್ರೇಮವೋ, ಕಾಳಜಿಯೋ, ಕಾತುರವೋ, ಕೌತುಕವೋ; ಯಾವುದೋ ಒಂದು ಅತ್ಯುನ್ನತ ಭಾವದ ಭರಪೂರ ಮುಸಲಧಾರೆಯದು. ಆ ಭಾವವೊಂದಕ್ಕೆ ಹೆಸರಿಡಲಾಗದ ಸಂದಿಗ್ಧತೆಯೂ ಕಾಡಬಹುದು ಒಮ್ಮೊಮ್ಮೆ. ನೋಡಿ, ಕೇವಲ ಪ್ರಕೃತಿಯಷ್ಟೇ ಅಲ್ಲದೇ ನಿಸರ್ಗದ ಅಂಗವಾದ ನಾವು ನೀವುಗಳೂ ಸಹ ಕೆಲವೊಮ್ಮೆ ಹಸಿರು ತಾಯಿಯ ಗುಣಗಳನ್ನು ಅನುನಯಿಸುತ್ತೇವೆ. ಅಪರಿಚಿತ ಭಾವನೆಗಳನ್ನು, ಹೆಸರಿಟ್ಟು ಪೋಷಿಸದ ಅನಾಮಿಕ ಭಾವಗಳನ್ನು ಒಪ್ಪಿ ಅಪ್ಪುತ್ತೇವೆ, ಅಂತೆಯೇ ಅಪರಿಚಿತರನ್ನೂ ಸಹ.

ತೀರ ಸನಿಹವೆನಿಸದಿದ್ದರೂ, ಸಾಮಾಜಿಕ ಜಾಲತಾಣಗಳ ತಂತುವಿನಿಂದಲೋ, ನಿರೀಕ್ಷಿಸದೆಯೋ, ಅನಪೇಕ್ಷಿತವಾಗಿಯೋ ಕೆಲವು ಬಿಂದುಗಳು ಜೋಡಣೆಯಾಗುತ್ತವೆ, ಚಿತ್ರ ರೂಪಿಸುವ ಕಲೆಗಾರನ ಕೈಗಳಲ್ಲಿ. ಆಡುವ ಭಾಷೆ, ಓದುವ ಪುಸ್ತಕ, ರುಚಿಸುವ ಖಾದ್ಯ, ಕೇಳುವ ಸಂಗೀತ, ಆಲಿಸುವ ಸಾಹಿತ್ಯಗಳೆಂಬ ಹಲವಾರು ಭಾವನೆಗಳು ಒಗ್ಗೂಡಿ, ಎಂದಿಗೂ ಎದುರುಬದುರಾಗಿ ಸಿಗಲಾಗದ ಸ್ನಿಗ್ಧವದನದ ಸೌಮ್ಯ ಹೃದಯಗಳನ್ನು ಸ್ನೇಹವೆಂಬ ಎಳೆಯಲ್ಲಿ ತಾತ್ಕಾಲಿಕವಾಗಿಯೋ ಅಥವಾ ಚಿರಂತನವಾಗಿಯೋ ಬಂಧಿಸಬಹುದು. ನುಡಿವ ನಾಲ್ಕು ಮಾತು ಸಮಾಧಾನವ ನೀಡಬಹುದು, ಬರೆದ ಎಂಟು ಸಾಲು ಹಿತವೆನಿಸಬಹುದು, ಕ್ಲಿಕ್ಕಿಸಿದ ಪಟಗಳು ತನ್ನದೇ ಕಥೆಯನ್ನು ಬಿಂಬಿಸಿದಂತಾಗಬಹುದು. ಇದಾವುದೂ, ನಮ್ಮವರಿಂದ ಮಾತ್ರವೇ ದೊರೆತಿರಬೇಕೆಂಬ ಭಾವ ಸಮ್ಮತವಲ್ಲದ್ದು. ನಮ್ಮವರಲ್ಲದೆಯೂ ನಗು ಮೂಡಿಸುವ ಭಾರ ಹೊತ್ತ ಅಪರಿಚಿತರದ್ದಾಗಿರಬಹುದು. ಅಪರಿಚಿತರು ಪರಿಚಿತರ ಪಟ್ಟಿಗೆ ಸೇರ್ಪಡೆಯಾಗಬಹುದು. ಅಂತೆಯೇ, ಮನದ ಪುಟಗಳಲ್ಲಿ ಉಳಿವುದು ನೆನಪುಗಳಷ್ಟೇಯಲ್ಲವೇ? ಉಳಿವು ಅಳಿವಿನ ಪ್ರಶ್ನೆಯಿರದೇ, ಮನದ ಸರೋವರದಲ್ಲಿ ಹುಟ್ಟುವ ಅದಷ್ಟೂ ಪ್ರಶ್ನೆಗಳಿಗೂ ಉತ್ತರವ ನೀಡದಿದ್ದರೂ, ಬೀಸುವ ಸುಂಟರಗಾಳಿಯ ರಭಸದಲ್ಲಿ ಜೊತೆಯಿರದಿದ್ದರೂ, ಹತ್ತಾರು ಸಂದಿಗ್ಧತೆಗೆ ತಿಳಿಯದೆಯೂ ಉತ್ತರಿಸಿ, ಕಣ್ಣೀರಿನ ಕೊನೆಯ ಹನಿಯು ಕಪಾಲ ತಲುಪುವುದರೊಳಗೆ ನಗುವೊಂದು ಲೀಲಾಜಾಲವಾಗಿ ಮೂಡಿ ಮಾಯವಾಗುವಂತೆ, ತಿಳಿಯದೆಯೇ ನೀಡಿದ ಸಹಾಯಹಸ್ತಕ್ಕೆ, ಸಹೃದಯಗಳಿಗೆ ಅಪರಿಚಿತರೆಂಬ ಅಭಿದಾನಕ್ಕಿಂತ ಹಿತೈಷಿಗಳೆಂಬ ಬಿರುದು ಸೂಕ್ತವಲ್ಲವೇ?

೨೦೨೩ ಸಹ ಪರಿಚಿತವಿರಲಿಲ್ಲ ಮೊದಲು. ಅಂತೆಯೇ ಕೆಲವು ಹೃದಯಗಳೂ ಸಹ. ಮಾತುಗಳ ವಿನಿಮಯವಿರದೆಯೂ ಕೇವಲ ಅಕ್ಷರಗಳ ಬಂಧದಿಂದ, ಚಿತ್ರಪಟಗಳಿಂದ, ಅಡಿಬರಹಗಳಿಂದ, ಲೇಖನಗಳಿಂದಲೇ ಅದೆಷ್ಟೋ ಭಾವಗಳನ್ನು ರವಾನಿಸಿ, ಅದೆಷ್ಟೋ ಹೃದಯಗಳನ್ನು ಸಂತೈಸಿದ, ಅಪರಿಚಿತರಾದರೂ ಅಪೂರ್ವತೆಯ ಪರಿಚಿತ ಭಾವ ತೋರಿದ ಸಹೃದಯಗಳಿಗೆ ಕೃತಜ್ಞತೆಯೊಂದರ ಪೂರ್ಣಭಾವದರ್ಪಣೆ. ಅಲ್ಪಕಾಲದಲ್ಲಿಯೂ, ಕಂಬನಿ ಬತ್ತದ ಸಂದರ್ಭದಲ್ಲಿಯೂ,ಮಂದಹಾಸವ ಹೊಮ್ಮಿಸಿದ ಮನಸುಗಳಿಗೆ ಸಾವಿರದ ಸಾವಿರ ಕೃತಜ್ಞತೆಗಳು. ೨೦೨೪ ಪ್ರೀತಿಯನ್ನು, ಒಲವನ್ನು, ಹಾಗೆಯೇ ಸ್ನೇಹವನ್ನು ಸ್ವಾತಿ ಮಳೆಯಂತೆ ನಿಮ್ಮ ಮಡಿಲ ತುಂಬಲಿ.

– ಅಪರಿಚಿತೆ