ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : https://www.tripiwiki.com/Karnataka/Arishina-Gundi-Falls-Attractions

ಅರಿಶಿನಗುಂಡಿ ಜಲಪಾತ​

ಮಧು ಕೆ
ಇತ್ತೀಚಿನ ಬರಹಗಳು: ಮಧು ಕೆ (ಎಲ್ಲವನ್ನು ಓದಿ)

ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ​, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ​. ಅದು ನಮ್ಮ ಪ್ರಕೃತಿ, ಬದುಕು, ಜನ​, ಸಂಸ್ಕೃತಿಯ ಕತೆ. ಅದು ನೆಲದ ಕತೆ. ಅಂಥ ಹಲವು ಅನುಭವಗಳನ್ನು ದಾಟಿಸಬಲ್ಲ ಅಂಕಣ ಮಾಲಿಕೆ ‘ಟೂರ್ ಡೈರೀಸ್’ನ ಎಂಟನೇ ಸಂಚಿಕೆ ನಿಮ್ಮ ಮುಂದೆ…

ಅರಿಶಿನಗುಂಡಿ ಫಾಲ್ಸ್ ಗೂಗಲ್ಲಲ್ಲಿ ನೋಡಿ, ಹೋಗೋಣ ಅಂತ ತುಂಬಾ ಹಿಂದೇನೇ ಅನ್ನಿಸಿತ್ತು.

ಈ ಬಾರಿ ಟ್ರಿಪ್ ಪ್ಲ್ಯಾನ್ ಮಾಡಿದ್ದು ಭಟ್ರು, ನಮ್ ಲೋಕಲ್ ಫ್ರೆಂಡ್. ಅವರಿಗೆಲ್ಲ ಗೊತ್ತಿರುತ್ತೆ ಬಿಡು ಅನ್ನಿಸಿತ್ತು. ಆದ್ರೂ ಇರ್ಲಿ ಅಂತ ಗೂಗಲ್ಲಲ್ಲೇ ಸರ್ಚ್ ಮಾಡಿದ್ದೆ. ಒಂದೆರಡು ಲೇಖನಗಳು ಸಿಕ್ಕಿದವು, ೨ ಕಿಮೀ ಚಾರಣ​, ೨-೩ ಗಂಟೆಗಳಲ್ಲಿ ಅಲ್ಲಿಗೆ ಹೋಗಿ ಬರಬಹುದು ಅಂತ ಇತ್ತು. ಆರಾಮಾಗಿ ಬೆಳಿಗ್ಗೆ ೧೦:೩೦ಕ್ಕೆ ಚಾರಣ ಶುರು ಮಾಡಿದೆವು. ಇಂಬಳಗಳ ರಾಶಿ, ನಾವು ಡೆಟಾಲ್ (Dettol) ಹಚ್ಚಿಕೊಂಡೇ ಹೋಗಿದ್ದೆವು , ಆದರೂ ಒಂದೆರಡು ಕಡೆ ಇಂಬಳಗಳು ಕಡಿದವು.

ಹೋಗ್ತಾ ಹೋಗ್ತಾ ಗೊತ್ತಾಯ್ತು ಭಟ್ರು ಮೊದಲ ಬಾರಿ ಈ ಚಾರಣ ಮಾಡ್ತಿರೋದು ಅಂತ. ಚೂರು ಭಯ ಶುರು ಆಯ್ತು; ನಾವೇ ೫ ಜನ ಇನ್ನ್ಯಾರೂ ಇಲ್ಲ. ಬಹುತೇಕ ೨.೫ಕಿಮೀ ಆಗಿತ್ತು, ಇನ್ನೆಷ್ಟು ದೂರ? ಈಗಾಗಲೇ ಮೂರು ರಸ್ತೆಯ ಬ್ಲಾಕ್ಗಳನ್ನು ದಾಟಿ ಬಂದಿದ್ದೇವೆ, ಮುಂದೆ ಹೋಗೋದಾ ಬೇಡ್ವಾ? ಗೊಂದಲ. ೧೦ ನಿಮಿಷ ರೆಸ್ಟ್ ಮಾಡೋಣ ಅಂದಿದ್ದೇ ತಡ, ಸಿಂಧು ಅಲ್ಲೇ ಕುಳಿತು ಬಿಟ್ಟಳು.

ದೂರದಲ್ಲಿ ನಾಯಿ ಬೊಗಳುವ ಸದ್ದು ಕೇಳಿತು , ನೋಡುತ್ತಿರುವಾಗಲೇ ನಾಯಿಯ ಜೊತೆಗೇ ಇಬ್ಬರು ಹಳ್ಳಿಯವರು ಬಂದರು. ಅವರನ್ನು ಕೇಳಿದರೆ, “ಬಂದಷ್ಟೇ ದೂರ ನಡೀಬೇಕು, ಕಾಲು ದಾರಿ ಇದೆ” ಅಂದರು. “ಅಯ್ಯಪ್ಪಾ” ಅಂತ ಅಂದುಕೊಂಡೆವು. ಕಾಡು ಪ್ರಾಣಿ ಏನಾದ್ರೂ ಇವೆಯಾ ಅಂತ ಕೇಳಿದ್ದಕ್ಕೆ , “ನಮ್ ಕಣ್ಣಿಗೆ ಯಾವ್ದೂ ಬಿದ್ದಿಲ್ಲ” ಅಂದರು; ಸಮಾಧಾನ ಆಯ್ತು.

ಸರಿ, ಆದಷ್ಟು ಮುಂದೆ ಹೋಗೋಣ ಅಂದುಕೊಂಡು , ಇನ್ನೊಂದ್ ಕಿಲೋ ಮೀಟರ್ ಹೋದೆವು, ಅರಿಶಿನಗುಂಡಿ ಫಾಲ್ಸ್ ಕಡೆ ದಾರಿ ಅನ್ನೋ ಬೋರ್ಡ್ ಕಾಣಿಸಿತು, ಫಾಲ್ಸ್ ಕಂಡಷ್ಟೇ ಖುಷಿ ಆಯ್ತು.

ಇಲ್ಲಿಂದ ಶುರು ಆಯ್ತು ಕಷ್ಟದ ದಾರಿ. ಇಳಿಜಾರು, ಹಸಿ ನೆಲ. ಕೈಲಿ ಮೊಬೈಲ್ ಹಿಡ್ಕೊಂಡು ವಿಡಿಯೋ ಮಾಡ್ಕೊಂಡು ಹೋಗೋದ್ ರಿಸ್ಕ್ ಅಂತ ಅನ್ನಿಸಿ, ಫೋನನ್ನು ಒಳಗೆ ಇಟ್ಟುಕೊಂಡೆವು. ಸಣ್ಣದಾಗಿ ನೀರು ಹರಿಯೋ ಶಬ್ದ ಕೇಳಿತು, ಇನ್ನೇನು ಹತ್ತಿರ ಇರಬಹುದು ಅಂದುಕೊಂಡು ೧.೫ ಕಿಮೀ ಅಷ್ಟು ನಡೆದೆವು. ಒಂದಿಷ್ಟು ಇಳಿಜಾರು, ಮತ್ತೆ ಏರೋದು, ೨ ಸಣ್ಣ ಝರಿ ಕೂಡ ಸಿಕ್ಕವು. ಒಂದು ಕಡೆ ಝರಿ ದಾಟಿ ಹೋಗಬೇಕಿತ್ತು.

ಆದರೆ ದಾರಿಯೇ ಕಾಣಲಿಲ್ಲ​, ಹಿಂದಕ್ಕೆ ಹೋಗೋಣ ಸಾಕು ಅಂದುಕೊಂಡೆವು, ಪವನ್ ಮತ್ತು ಪ್ರಸನ್ನ ಭಟ್ರದ್ದು ಬಿಡದ ಪಟ್ಟು. “ಇಷ್ಟ್ ದೂರ ಬಂದು, ಫಾಲ್ಸ್ ನೋಡದೇ ಹೋಗೋದಾ?”. ಚೂರು ಮುಂದೆ ಹೋಗಿ ನೋಡಿಕೊಂಡು ಬಂದು, ದಾರಿ ಇದೆ ಅಂದರು.

ಸರಿ, ನಡೆಯಿರಿ ನೋಡೇ ಬಿಡೋಣ ಅಂತ ಅನ್ನಿಸಿತು. ದಾರಿ ಅನುಮಾನಾಸ್ಪದವಾಗಿ ಇತ್ತು, ಬಿದ್ದರೆ ವಾಪಸ್ಸು ಹೋಗಲಿಕ್ಕೆ ಸಾಧ್ಯವಾ? ಈ ಹಾರರ್ ಮೂವೀ ೬-೫=೨ ಕೂಡ ನೆನಪಾಯಿತು ನನಗೆ.

ಮೊಬೈಲ್ ತೆಗೆದು ಒಂದ್ ಸೆಲ್ಫೀ ವಿಡಿಯೋ ಮಾಡಿದೆ; ಡಾಕ್ಯುಮೆಂಟೇಶನ್ನಿಗೆ ಇರಲಿ ಅಂತ. ವಸುಧಾ ಹತ್ತಿರ ಏನಾದರೂ ಹೇಳು ಅಂದಿದ್ದಕ್ಕೆ, ಅವಳೂ “ಮನೆಗ್ ವಾಪಸ್ ಹೋಗ್ತೀವಾ ಅಂತ ಅನುಮಾನ ಬರ್ತಿದೆ” ಅಂದಳು.

ಅವಳು ದಾರಿಯಲ್ಲಿ ಬಿದ್ದಿರುವ ಎಲೆ, ಕಾಯಿ, ಅದರ ಆಕಾರ ನೋಡಿಕೊಂಡು, ಡಿಫೆರೆಂಟ್ ಅನ್ನಿಸಿದ್ದನ್ನು ಆರಿಸಿಕೊಂಡು, ಜೇಬಲ್ಲಿ ಹಾಕಿಕೊಂಡು, ಈ ಕೀಟಗಳ ಕಿರುಚಾಟ​, ಕಪ್ಪೆಗಳ ಶಬ್ದವನ್ನು ಕೇಳುತ್ತಾ ಬರುತ್ತಿದ್ದರೆ, ಪವನ್ ಹಾಡುಗಳನ್ನು ಕೇಳುತ್ತಾ ಬರುತ್ತಿದ್ದರು. ಹೋಗುತ್ತಾ, ಹೋಗುತ್ತಾ ಫಾಲ್ಸ್ ಶಬ್ದ ಜೋರಾಯಿತು.

ಕೊನೆಗೂ ಫಾಲ್ಸ್ ತಲುಪಿದೆವು. ಮಧ್ಯಾಹ್ನ ೧:೧೫ ಆಗಿತ್ತು, ಹೊಟ್ಟೆ ಚುರ್ ಅಂತಿತ್ತು. ತಂದಿದ್ದ ಇಡ್ಲಿ, ಚಟ್ನಿ, ಚಿಪ್ಸ್, ಕೇಕ್ ಎಲ್ಲಾ ತಿಂದುಕೊಂಡು, ಒಂದಿಷ್ಟು ಫೋಟೋಗಳನ್ನು ತೆಗೆದುಕೊಂಡು, ವಿಡಿಯೋಗಳನ್ನು ಮಾಡಿಕೊಂಡು, ಅಲ್ಲಿಯೇ ಸ್ವಲ್ಪ ರೆಸ್ಟ್ ಮಾಡಿದೆವು.

ಚಿತ್ರ ಕೃಪೆ : ಮಧು ಕೆ

ನೀರಿನ ರಭಸ ನೋಡಿದ್ರೆ ಭಯ, ಕಲ್ಲುಗಳು ಜಾರುತ್ತಿದ್ದವು, ನೀರಿಗಿಳಿಯುವುದಕ್ಕೆ ಧೈರ್ಯ ಬರಲಿಲ್ಲ​. ಹಾಗೇ ಮುಖ ತೊಳೆದುಕೊಂಡೆವು. ಸ್ವಿಮ್ ಡ್ರೆಸ್ ಕೂಡಾ ತಂದಿದ್ದೆ ನಾನು, ಸ್ವಲ್ಪ ಬೇಜಾರ್ ಆಯ್ತು, ಇಳಿಯುವುದಕ್ಕೆ ಆಗಲಿಲ್ಲ ಅಂತ.

ಫಾಲ್ಸ್ ಅಂತೂ ನೋಡುವುದಕ್ಕೆ ಮನಮೋಹಕ! ಜನಗಳಿರದ ಜಾಗ ಬಿಟ್ಟು ಬರುವುದಕ್ಕೆ ಮನಸ್ಸಾಗುವುದಿಲ್ಲ​. ಈ ಇನ್ಸ್ಟಾಗ್ರಾಮಿನ್ ನೇಚರ್ ಟ್ರೆಂಡಿಂಗ್ ಆಡಿಯೋ ಎಲ್ಲಾ ತಲೆಯಲ್ಲಿ ಓಡುತ್ತಿದ್ದವು.

ಸ್ವಲ್ಪ ಹೊತ್ತು ಆದ ಮೇಲೆ, ಬೇರೆಯವರು ಇನ್ನೂ ಇಬ್ಬರು ಬಂದರು. ಮಂಡ್ಯದವರಂತೆ, ಈಜು ಚೆನ್ನಾಗಿಯೇ ಬರುತ್ತದೆ, ನೋಡೋಣ ಅಂದುಕೊಂಡು ಫಾಲ್ಸ್ ಹತ್ತಿರಕ್ಕೆ ಹೋದರು.

ಅಷ್ಟರಲ್ಲಿ ನಾವು ಮೇಲೆ ಹೋಗಿ, ನೋಡಿ ಬಂದಿದ್ದೆವು. ೩ ಗಂಟೆ ಆಗಿತ್ತು, ವಾಪಸ್ಸು ಹೊರಟೆವು. ಅವರಲ್ಲಿ ೪ ಜನ ಅಲ್ಲೇ ಝರಿ ಹತ್ರ ಕೂತಿದ್ದರು, ಮೇಲೆ ಬಂದವರ ಬಗ್ಗೆ ಕೇಳಿದರು. “೧೦ ನಿಮಿಷದ ದಾರಿ ಅಷ್ಟೇ, ನೀವು ಹೋಗಬಹುದು ನೋಡಿ” ಅಂತಂದು ಅಲ್ಲಿಂದ ಹೊರಟೆವು.

ನಾವು ವಾಪಸ್ಸು ದಾರಿ ಬೇಗ ಸಾಗುತ್ತಿದೆ ಅಂತ, ಆರಾಮಾಗಿ, ಬ್ರೇಕ್ ತೆಗೆದುಕೊಂಡು, ನೇಚರ್ ಎಂಜಾಯ್ ಮಾಡಿಕೊಂಡು ಬರುತ್ತಿದ್ದೆವು. ವಸುಧಾ ಕಾಡಿನ ಎಲ್ಲಾ ಶಬ್ದಗಳನ್ನು ರೆಕಾರ್ಡ್ ಮಾಡುತ್ತಿದ್ದಳು. ದಾರಿ ಉದ್ದಕ್ಕೂ ಜಿಗಣೆ ಕಾಟ, ಕಿತ್ತು ಕಿತ್ತು ಸಾಕಾಯಿತು.

ಚೂರು ಮಳೆ ಜಿನುಗಲು ಶುರು ಆಯಿತು. ಜೋರಾದರೆ ಕಷ್ಟ ಅಂತ, ಬೇಗ ಬೇಗ ನಡೆದು , ಸಂಜೆ ೫ ಗಂಟೆಗೆ ಗಾಡಿ ನಿಲ್ಲಿಸಿದ ಜಾಗ ಮುಟ್ಟಿದೆವು. ಶೂಗೆ ಹತ್ತಿದ ಜಿಗಣೆ ಎಲ್ಲಾ ಕಿತ್ತು ಬಿಸಾಕಿ, ಗಾಡಿ ಹತ್ತಿ ಕುಳಿತೆವು.

ನಿಟ್ಟೂರು ಹೋಗಿ, ಬೆಳಿಗ್ಗೆ ತಿಂಡಿ ತಿಂದ ಜಾಗದಲ್ಲೇ ಕಾಫಿ ಕುಡಿದು, ಮಸಾಲೆ ಪೂರಿ ತಿಂದು, ಹೊಸನಗರದಲ್ಲಿ ಬಸ್ ಹತ್ತಿ ಶಿವಮೊಗ್ಗ ಸೇರುವಷ್ಟರಲ್ಲಿ ರಾತ್ರಿ ೧೦ ಗಂಟೆ ಆಗಿತ್ತು. ನಿವೇದಿತಾ ಆಂಟಿ ಕಾಯುತ್ತಿದ್ದರು. ಒಟ್ಟಿನಲ್ಲಿ ಆವತ್ತೇ ಮನೆ ಮುಟ್ಟಿದೆವು, ಅಲ್ಲಿಗೆ ಮುಗಿಯಿತು ಒಂದು ಅದ್ಭುತ ಚಾರಣ.