- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಜಗತ್ತೆಲ್ಲ ದೊಡ್ಡಣ್ಣನೆಂದು ಯಾರನ್ನು ಕರೆಯುವುದು ಎಂದು ನಮಗೆಲ್ಲ ಗೊತ್ತು. ಅತಿ ದೊಡ್ಡ ವಿಸ್ತ್ರೀರ್ಣ, ಅತ್ಯಂತ ಹಿರಿದಾದ ಸಂಪನ್ಮೂಲಗಳು, ವಲಸಿಗರ ನಾಡು, ಭಿನ್ನ ಸಂಸ್ಕೃತಿಗಳ ನೆಲೆವೀಡು, ಭೂತಲ ಸ್ವರ್ಗವೆಂದೇ ಹೆಸರು ವಾಸಿ, ಎಲ್ಲ ಕನಸಿಗರ ಮಜಲು ಆದ ಸಂಯುಕ್ತ ಅಮೆರಿಕಾ ರಾಷ್ಟ್ರ. ಎರಡನೆಯ ವಿಶ್ವಯುದ್ಧವನ್ನು ತನ್ನ ಬಾಂಬಿನ ದಾಳಿಯಿಂದಲೇ ಮುಗಿಸಿ ಗೆಲುವಿನ ಶ್ರೇಯಕ್ಕೆ ಪಾತ್ರರಾದ ದಿನದಿಂದ ತಾನೇ ದೊಡ್ಡಣ್ಣನೆಂದು ಬೀಗುತ್ತ ಎಲ್ಲ ದೇಶದ ಆಂತರಂಗಿಕ ವ್ಯವಹಾರಗಳಲ್ಲಿ ಮೂಗು ತೂರಿಸುತ್ತ, ತನ್ನ ರಹಸ್ಯ ಏಜೆನ್ಸಿಗಳ ಮೂಲಕ ತಮಗೆ ವಿರುದ್ಧವಾದ ನಿಲುವು ತಾಳಿದ ಇತರೆ ದೇಶಗಳ ಪ್ರತಿಪಕ್ಷಗಳಿಗೆ ಸೇನೆಯ ನೆರವು ನೀಡುತ್ತ ಜಗತ್ತಿನೆಲ್ಲೆಡೆ ತಾನೇ ತಾನಾಗಿ ಮೆರೆದಿರುವ ದೊಡ್ಡಣ್ಣ ಅಮೆರಿಕಾ. ವಿಯತ್ನಾಂ ಯುದ್ಧದಲ್ಲಿ ಸೋತರೂ ಮೂಗು ಮಣ್ಣಾಯಿತು ಎನ್ನಲಿಲ್ಲ. ಕೊಲ್ಲಿ ರಾಷ್ಟ್ರವಾದ ಕುವೈಟ್ ನ ಮೇಲೆ ಇರಾಕಿನ ಸದ್ದಾಂ ಹುಸ್ಸೇನ್ ದಾಳಿ ನಡೆಸಿದಾಗ ಅಮೆರಿಕಾ ಕುವೈಟಿಗೆ ಸೇನೆಯ ಬೆಂಬಲ ನೀಡಿತು. ಅದರ ಮಿಸ್ಸೈಲ್ ಗಳು ಇನ್ನೇನು ಇರಾಕಿನ ಸೇನೆಯನ್ನು ಒಂದು ವಾರದಲ್ಲಿ ಮಣ್ಣು ಕಚ್ಚಿಸುತ್ತವೆ ಎಂದು ಭಾವಿಸಿದ ಅಮೆರಿಕಾಗೆ ಇರಾಕಿನ ಮಿಸ್ಸೈಲ್ ಗಳು ತಕ್ಕ ಉತ್ತರವನ್ನು ನೀಡಿ ತತ್ತರಿಸುವಂತೆ ಮಾಡಿದ್ದವು. ಆದರೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ತನ್ನ ಹಸ್ತಕ್ಷೇಪ ನಿಲ್ಲಿಸಲಿಲ್ಲ. ಕೊನೆಗೆ ಅಲ್ ಕೈದಾ ಗುಂಪಿನ ಭಯೋತ್ಪಾದಕರು ವಿಮಾನಗಳನ್ನು ಸ್ಫೋಟಿಸಿ ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಕೇಂದ್ರದ ಎರಡು ಗೋಪುರಗಳನ್ನು ಕೆಡವಿಹಾಕಿ ಅಟ್ಟಹಾಸ ಗೈದಿದ್ದರು. ಅದು ದೊಡ್ಡಣ್ಣನ ಪ್ರತಿಷ್ಠೆಗೆ ಬಿದ್ದ ಮೊಟ್ಟಮೊದಲ ಪೆಟ್ಟೆನ್ನಬಹುದು. ನಂತರ ಸುಮಾರು ವರ್ಷಗಳ ಹುಡುಕಾಟದ ನಂತರ ಅಲ್ ಕೈದಾನ ಮುಖ್ಯಸ್ಥ ಒಸಾಮಾ ಬಿನ್ ಲ್ಯಾಡೆನ್ ನನ್ನು ಪಾಕಿಸ್ಥಾನದಲ್ಲಿಯ ಅವನ ನೆಲೆಯಲ್ಲೇ ಕೊಂದು ಸಮಾಧಾನ ಪಟ್ಟುಕೊಂಡ.
ತನ್ನದು ಅತಿ ದೊಡ್ಡ ಪ್ರಜಾ ತಂತ್ರದ ಸರಕಾರ, ತನ್ನ ದೇಶದಲ್ಲಿದ್ದಷ್ಟು ನಾಗರಿಕ ಹಕ್ಕುಗಳು ಜಗತ್ತಿನ ಮತ್ತೆಲ್ಲೂ ಕಾಣುವುದಿಲ್ಲ ಎಂಬ ಬಿಮ್ಮು. ದೇಶದ ಅತಿ ಹೆಚ್ಚು ಜಿಡಿಪಿ ಅದರ ಸಿರಿವಂತಿಕೆಯ ಸಂಕೇತವಾಗಿದೆ. ಜನರಿಗೆ ಎಲ್ಲ ಸವಲತ್ತುಗಳು ಸಿಕ್ಕುತ್ತವೆ. ಜನ ಬರೀ ಕಾರುಗಳಲ್ಲೇ ಓಡಾಡುವಷ್ಟು ಸಿರಿವಂತರು ಎನ್ನುವ ಹಿರಿಮೆ. ಹೀಗೆ ಸಾಮಾನ್ಯ ಜನ ಜೀವನವೆಲ್ಲ ನೆಮ್ಮದಿಯಿಂದ ನಡೆದಿರುವಾಗ ಅಲ್ಲಿಯ ಹಾಲಿವುಡ್ ಚಿತ್ರರಂಗಕ್ಕೆ ಚಿತ್ರ ತೆಗೆಯಲು ಯಾವ ಸಮಸ್ಯೆಯು ವಿಷಯವಾಗುತ್ತದೆ ಹೇಳಿ. ನಮ್ಮ ದೇಶದ ಬಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಸಿನಿಮಾಗಳಿಗೆ ಇಲ್ಲಿ ದೈನಂದಿನ ಹೋರಾಟದ ಬದುಕಿನ ಬೇಕಾದಷ್ಟು ವಿಷಯಗಳು. ಹಾಗಾಗಿ ನಮ್ಮ ಚಿತ್ರಗಳೆಲ್ಲ ನಮ್ಮ ಸುತ್ತ ಮುತ್ತ ನಡೆದವುಗಳಂತೆ ಕಾಣುತ್ತವೆ. ಆದರೆ ಹಾಲಿವುಡ್ ನವರಿಗೆ ವಿಷಯ ಸಿಗದೇ ಅವರು ಯಾವುದೋ ಸಮಸ್ಯೆಯನ್ನು ಊಹಿಸಿ ಅದಕ್ಕೊಂದು ವಿಪರೀತ ಪರಿಣಾಮ ಕಲ್ಪಿಸಿ ಅದನ್ನು ಅಲ್ಲಿಯ ಸರಕಾರ ಮತ್ತು ಪ್ರಜೆ ಹೇಗೆ ಎದುರಿಸಿ ವಿಜಯೀಯಾಯಿತು ಎನ್ನುವ ವಿಷಯಗಳ ಮೇಲೆ ಚಿತ್ರ ತೆಗೆಯುವುದು ವಾಡಿಕೆ. ಅವುಗಳಿಗೆ ತಮ್ಮಲ್ಲಿರುವ ಅತ್ಯಂತ ಉತ್ಕೃಷ್ಟ ತಂತ್ರಜ್ಞಾನದ ಲೇಪನ ಕೊಟ್ಟು, ನೋಡಲು ಕಣ್ಣು ಜಿಗೇಲ್ ಎನ್ನುವ ಹಾಗೆ ಮಾಡುತ್ತಾರೆ. ಆ ಚಿತ್ರಗಳು ನಮ್ಮ ದೇಶದಲ್ಲಿ ಬಿಡುಗಡೆಯಾದಾಗ ನಮ್ಮ ವೀಕ್ಷಕರು ಅವುಗಳ ಬಗ್ಗೆ ಹುಚ್ಚು ಹಿಡಿಸಿಕೊಂಡು, ನೋಡಿ ಅಲ್ಲಿಯ ನಿರ್ಮಾಪಕರಿಗೆ ಹಣ ಮಾಡಿಕೊಡುತ್ತಾರೆ.
ಆದರೆ ಮೊನ್ನೆ ಇಡೀ ಜಗತ್ತಿಗೆ ಕೊರೋನಾ ಎಂಬ ಮಹಾಮಾರಿ ಬಂದು ಬಡೆಯಿತು. ವಿಪರೀತ ವೇಗದಲ್ಲಿ ಎಲ್ಲೆಡೆ ಹರಡಿತು. ಸಾವಿರಗಟ್ಟಲೆ ಸಾವುಗಳಾದವು. ನಮ್ಮ ದೇಶಕ್ಕೆ ಕಾಲಿಡುವ ವೇಳೆಗೆ ಅದು ಯೂರೋಪ್ ನ ಅನೇಕ ದೇಶಗಳಲ್ಲಿ ಸಾವುಗಳ ಗುಡ್ಡೆಯನ್ನೇ ಸೃಷ್ಟಿಸಿತ್ತು. ಅಮೆರಿಕದಲ್ಲೂ ಅದರ ಹಾವಳಿ ವಿಪರೀತವಾಗಿತ್ತು. ಅಲ್ಲಿ ಸತ್ತ ಜನರ ಅಂದಾಜಿನ ಮೇಲೆ ಅದು ಭಾರತದಲ್ಲಿ ದೊಡ್ಡ ಕೋಲಾಹಲವೆಬ್ಬಿಸಬಹುದೆಂದು, ಹೆಣಗಳ ರಾಶಿ ಬೀಳಿಸುತ್ತದೆಂದು ಎಲ್ಲರ ಎಣಿಕೆಯಾಗಿತ್ತು. ಅವರಿಗೆ ಭಾರತದ ಮೇಲಿರುವ ಅಸಡ್ಡೆಯ ದೃಷ್ಟಿಯೇ ಇದಕ್ಕೆ ಕಾರಣವಾಗಿತ್ತು. ನಮ್ಮಲ್ಲಿ ಜನಸಂಖ್ಯೆ ಜಾಸ್ತಿ. ಸಾಂದ್ರತೆ ಜಾಸ್ತಿ. ಕೊರೋನಾ ಹೇಳಿ ಕೇಳಿ ಸ್ಪರ್ಶೆಯಿಂದ, ಉಸಿರಿನಿಂದ ಹರಡುವುದು. ಮತ್ತೆ ನಮ್ಮಲ್ಲಿ ಅನಕ್ಷರಸ್ತರು ಜಾಸ್ತಿ. ಶುಚಿ, ಶುಭ್ರತೆಗಳ ಕಡೆ ಗಮನ ಕಮ್ಮಿ. ನಮ್ಮಲ್ಲಿರುವ ವೈದ್ಯಕೀಯ ಸೌಲಭ್ಯ ಪ್ರಶ್ನಿಸುವಂಥದ್ದು. ಹಾಗಾಗಿ ಭಾರತ ತತ್ತರಿಸಬಹುದು, ಕೈಕಾಲು ಬಿಡುತ್ತದೆ ಎಂದು ಲೆಕ್ಕ ಹಾಕಿದ್ದರು. ಆದರೆ ಸುಮಾರು ಹತ್ತು ತಿಂಗಳ ನಂತರ ಭಾರತದ ಜನಸಂಖ್ಯೆಗೆ ಹೋಲಿಸಿ ನೋಡಿದಾಗ ಮೃತರ ಸಂಖ್ಯೆ ತುಂಬಾ ಕಮ್ಮಿ. ನಮ್ಮ ಸೋ ಕಾಲ್ಡ್ ಮೂಢ ಜನರು ಕೊರೋನವನ್ನು ಸಮರ್ಥವಾಗಿ ಎದುರಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಯಕ್ಕೆ ಸರಿಯಾಗಿ ಸ್ಪಂದಿಸಿ, ಬೇಕಾದ ಚಿಕಿತ್ಸೆಯನ್ನು ಒದಗಿಸಿದ್ದವು. ವೈದ್ಯರು, ಆಸ್ಪತ್ರಿಯ ಸಿಬ್ಬಂದಿ ಜೀವದ ಹಂಗು ತೊರೆದು ಕರೋನಾ ಸೋಂಕಿನ ರೋಗಿಗಳಿಗ ಚಿಕಿತ್ಸೆ ನೀಡಿದ್ದರು. ಪರಿಶುದ್ಧ ಕಾರ್ಮಿಕರು, ಬ್ಯಾಂಕುಗಳ ಸಿಬ್ಬಂದಿ ಸಂಕಟದ ವೇಳೆಯಲ್ಲಿ ದೇಶಕ್ಕೆ ಆಸರೆಯಾಗಿ ಕರ್ತವ್ಯ ಪೂರೈಸಿದ್ದರು. ಮೊದಲ ಕೆಲ ತಿಂಗಳು ಮಾತ್ರ ಹೊರ ಬರಬೇಡಿ, ಮಾಸ್ಕ್ ಹಾಕಿ ಎನ್ನುವ ಸರಕಾರದ ಆದೇಶಗಳನ್ನು ಪಾಲಿಸಲು ಸಿದ್ಧರಿಲ್ಲದ ಜನರು ಮತ್ತೆ ತಮ್ಮ ಹೊಣೆಗಾರಿಕೆಯನ್ನು ಅರಿತು ಆರೋಗ್ಯ ಸಲಹೆಗಳನ್ನು ಪಾಲಿಸಿ ತಮ್ಮನ್ನು ತಾವು ರಕ್ಷಿಕಿಕೊಳ್ಳುವುದಲ್ಲದೇ ದೇಶಕ್ಕೂ ಹೆಸರು ತಂದಿದ್ದಾರೆ. ಅಮೆರಿಕೆಯಲ್ಲಿ ತರ ಮುಗಿಬಿದ್ದು ಟಾಯ್ಲೆಟ್ ಪೇಪರ್ ಕೊಳ್ಳುವುದು, ಮಾಸ್ಕ್ ಹಾಕಲು ಹೇಳಲು ಸರಕಾರ ಯಾರು ಎಂದು ಕೇಳುವುದು, ತಮ್ಮ ವೈಯಕ್ತಿಕ ಸ್ವಾತಂತ್ರ್ಯ ಮುಖ್ಯ ಎಂದು ಬೀಸಿಕೊಂಡು ತಿರುಗುವುದು ನಮ್ಮಲ್ಲಿ ನಂತರದ ತಿಂಗಳುಗಳಲ್ಲ ಕಾಣಲಿಲ್ಲ. ಈಗಂತೂ ದಿನವಹಿ ಕೇಸುಗಳು ತುಂಬಾ ಕಮ್ಮಿಯಾಗಿದ್ದು ಹಲವಾರು ನಿಬಂಧನೆಗಳು ಸಡಿಲಗೊಂಡು ಜನ ಜೀವನ ಪುನಃ ಹಳಿಗಳ ಮೇಲೆ ಬರುತ್ತಿದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ.
ಈಗಂತೂ ನಮ್ಮ ದೇಶದಲ್ಲೇ ಎರಡು ಲಸಿಕೆಗಳು ತಯಾರಾಗುತ್ತಿವೆ. ಇತರೆ ದೇಶಗಳಿಗೆ ರಫ್ತಾಗುತ್ತಿವೆ. ಈಗ ಒಮ್ಮೆ ನೋಡೋಣ. ದೊಡ್ಡಣ್ಣ ಅಂತ ಯಾರನ್ನು ಕರೆಯೋದು ಅಂತ ? ಯಾವೋ ಕಪೋಲಕಲ್ಪಿತ ಕತೆಗಳಲ್ಲಿ ಹೀರೋ ಆಗಿ ಕಂಡು ಯಥಾರ್ಥಕ್ಕೆ ಬರುವ ಕೈ ಚೆಲ್ಲಿದ ಅಮೆರಿಕಾನಾ ಅಥವಾ ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಜನಹಿತ ಕಾದ ನಮ್ಮ ಭಾರತಾನಾ ಅಂತ. ಅಲ್ಲವೇ ?
ಇದಕ್ಕೂ ಮುಂಚೆ ಮೊದಲ ಪೆಟ್ಟೆಂದು ಹೇಳಲಾದ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯ ನಂತರವಂತೂ ಅಮೆರಿಕದ ಪ್ರಜೆ ತುಂಬಾ ಭೀತಿಗೊಂಡಿತ್ತು. ತುಂಬಾ ಜನ ನಷ್ಟದ ಅನುಭವ ಪಡೆದ ಅಲ್ಲಿಯ ಜನ ಚೇತರಿಸಿಕೊಳ್ಳಲು ಎರಡು ಮೂರು ತಿಂಗಳೇ ಬೇಕಾಯಿತು. ಅಲ್ಲಿಯ ವಿಮಾನಗಳಂತೂ ( ಅಲ್ಲಿ ಕಾರು ಬಿಟ್ಟರೆ ವಿಮಾನಗಳಲ್ಲೇ ಪ್ರಯಾಣ ಮಾಡುವುದು ) ಎರಡು ತಿಂಗಳ ಮಟ್ಟಿಗೆ ಪ್ರಯಾಣಿಕರೇ ಇಲ್ಲದೆ ಹಾರಾಡಿದ್ದವು. ಇದಕ್ಕೆ ತೀರ ವಿರುದ್ಧವಾಗಿ ನಮ್ಮ ಮುಂಬೈಯಲ್ಲಿ ಅದರ ಜೀವನಾಡಿಯಾದ ಲೋಕಲ್ ಟ್ರೈನ್ ನಲ್ಲಿ ಬಾಂಬು ಸಿಡಿದು ತುಂಬಾ ಜನ ಮೃತಪಟ್ಟಿದ್ದರು. ಆದರೆ ಮರುದಿನ ಲೋಕಲ್ ಗಾಡಿಗಳ ಓಡಾಟ ನಿಲ್ಲಲಿಲ್ಲ, ಅವುಗಳೇನೂ ಖಾಲಿಯಾಗಿ ಓಡಾಡಲಿಲ್ಲ. ಮುಂಬೈಯ ಪ್ರಜೆ ಅಂದರೆ ನಮ್ಮ ಭಾರತದ ಪ್ರಜೆಗಳ ಮನೋಧೈರ್ಯ ಕುಂದಿರಲಿಲ್ಲ.
ಮತ್ತೊಂದು ಇಂಥದೇ ಸನ್ನಿವೇಶ. ೨೦೦೫ ಜುಲೈ ತಿಂಗಳಲ್ಲಿ ಮುಂಬೈಯಲ್ಲಿ ಭೀಕರ ಮಳೆಯಾಗಿದ್ದು ಹಲವಾರು ಪ್ರದೇಶಗಳು ಮುಳುಗಡೆಗೆ ಒಳಗಾಗಿದ್ದವು. ಅನೇಕ ಅಪಾರ್ಟ್ ಮೆಂಟ್ ಗಳ ಮೊದಲ ಮಹಡಿಯ ವರೆಗೆ ನೀರು ತುಂಬಿತ್ತು. ರಸ್ತೆಗಳೆಲ್ಲ ಮಡುಗಳಾಗಿದ್ದವು. ಅಂದು ರಾತ್ರಿ ತುಂಬಾ ಜನರಿಗೆ ಕರಾಳರಾತ್ರಿಯಾಗಿತ್ತು. ಆದರೂ ನಮ್ಮ ಜನರು ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಈ ಅನಾಹುತವನ್ನು ಅಧಿಗಮಿಸಿದ್ದರು. ಯಾವುದೇ ವ್ಯವಸ್ಥೆ ಕೆಡದಂತೆ ರಾಜ್ಯ ಸರಕಾರವೂ ತನ್ನ ಕರ್ತವ್ಯವನ್ನು ಪೂರೈಸಿತ್ತು. ಒಂದು ತಿಂಗಳ ನಂತರ ಅಮೆರಿಕದಲ್ಲಿ ಕಟ್ರಿನಾ ಎನ್ನುವ ಭೀಕರ ಚಂಡಮಾರುತ ಅಲ್ಲೋಲಕಲ್ಲೋಲವನ್ನ ಸೃಷ್ಟಿ ಮಾಡಿತ್ತು. ತುಂಬಾ ಜನ ನಷ್ಟ, ಆಸ್ತಿನಷ್ಟ ಆಗಿತ್ತು. ಆದರೆ ಅಲ್ಲಿಯ ರಾಜ್ಯ ಸರಕಾರಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ವರದಿಗಳು ಬಂದಿದ್ದವು. ಈ ತರದ ಅನಾಹುತ ತಮ್ಮನ್ನು ತಟ್ಟುವುದೆಲ್ಲವೆಂಬ ಸುಳ್ಳು ಭರವಸೆ ಅವರನ್ನು ಬೇಕಾದ ತಯಾರಿ ಮಾಡಿಕೊಳ್ಳಲು ಅಡ್ಡ ಬಂದಿತ್ತು.
ಮತ್ತೊಂದು ಸಂಗತಿ. ನವೆಂಬರ್ ತಿಂಗಳಲ್ಲಿ ನಡೆದ ಅಮೆರಿಕಾದ ಅಧ್ಯಕ್ಷರ ಚುನಾವಣೆಯಲ್ಲಿ ಅಲ್ಲಿಯ ವರೆಗೂ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ರವರು ಸೋತಿದ್ದರು. ಅದು ಅವರಿಗೆ ಜೀರ್ಣಿಸಿಕೊಳ್ಳಲು ಆಗದೇ ನಂತರ ಗೆದ್ದು ಬಂದ ಜೋ ಬೈಡನ್ ಅವರಿಗೆ ತುಂಬಾ ತಲೆ ನೋವನ್ನುಂಟು ಮಾಡಿದ್ದರು. ಅವರ ಅನುಯಾಯಿಗಳು ಕ್ಯಾಪಿಟಲ್ ಭವನವನ್ನು ಸುತ್ತುವರೆದು ಗಲಾಟೆ ಮಾಡಿದ್ದರು. ಕೊನೆಯಲ್ಲಿ ಹೇಗೋ ತನ್ನ ಸೋಲನ್ನು ಒಪ್ಪಿ ತೊಲಗಿದರು. ಅದೇ ನವೆಂಬರ್ ತಿಂಗಳಲ್ಲಿ ನಮ್ಮ ದೇಶದ ಬಿಹಾರ್ ಶಾಸನ ಸಭೆಯ ಚುನಾವಣೆ ನಡೆದವು. ಯಾವ ತರದ ಗದ್ದಲವಿಲ್ಲದೇ ಬಹುಮತ ಬಂದವರು ಸರಕಾರ ರಚಿಸಿದ್ದರು. ಈಗ ನೋಡಿ ವ್ಯತ್ಯಾಸ. ಅಶಿಕ್ಷಿತರು ಎಂದು ಪಟ್ಟಿ ಹಚ್ಚಿದ ಭಾರತದ ಜನತೆ ತಮಗೆ ಬೇಕಾದ ಸರಕಾರವನ್ನು ಯಶಸ್ವಿಯಾಗಿ ಚುನಾಯಿಸಿ ಗದ್ದಲವಿಲ್ಲದೇ ಸರಕಾರ ಗದ್ದುಗೆ ಏರುವಂತೆ ಮಾಡಿದರೆ, ತುಂಬಾ ಅತಿಶಯದ ಅಮೆರಿಕೆಯ ಜನತೆ ತಮ್ಮ ದೇಶಕ್ಕೆ ಹೊಸದಾಗಿ ಗೆದ್ದು ಬಂದ ಅಧ್ಯಕ್ಷರು ಗದ್ದುಗೆ ಏರಲು ಅದೆಷ್ಟು ಕಿರುಕುಳ ಕೊಟ್ಟರು ಅಂತ. ಇನ್ನು ಯಾವ ತಳಹದಿಯ ಮೇಲೆ ಇವರನ್ನು ದೊಡ್ಡಣ್ಣ ಎನ್ನುವುದು ?
ನಾನಂದುಕೊಳ್ಳುವುದು ಇಷ್ಟೇ. ಬರೀ ಸಂಪನ್ಮೂಲಗಳು, ಸಂಪತ್ತು, ಸವಲತ್ತು, ಐಶಾರಾಮೀ ಜೀವನ ಇವು ಮಾತ್ರ ಜೀವನವನ್ನು ನಿರ್ವಚಿಸುವುದಿಲ್ಲ. ಕಷ್ಟಗಳು ಬಂದಾಗ ಕಲ್ಲೆದೆಯಿಂದ ಎದುರಿಸಿ, ಮತ್ತೆ ಮುಂದೆ ಸಾಗುವ ದೃಷ್ಟಿಕೋನ ಜನರಲ್ಲಿ ಬೇಕು. ಇದು ನಮಗೆ ನಮ್ಮ ಆಧ್ಯಾತ್ಮಿಕ ಪುಸ್ತಕಗಳು, ಸಮಾಜ ನಡೆದು ಬಂದ ದಾರಿ, ಕನಿಷ್ಟ ಸವಲತ್ತುಗಳಲ್ಲಿಯೇ ಬದುಕುವ ರೂಢಿ ಇವೆಲ್ಲವೂ ಕಲಿಸಿವೆ. ನಮ್ಮ ಭಾರತಕ್ಕೇ ಅಲ್ಲ. ನಮ್ಮ ಸಂಸ್ಕೃತಿಯನ್ನು ಅನುಸರಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಅನೇಕ ದೇಶಗಳ ಪ್ರಜೆಗಳಲ್ಲಿ ಈ ತರದ ಅಳುಕದೆ ಇರುವ ನಿಲುವನ್ನು ಕಾಣ ಬಹುದು. ಇದೊಂದೇ ಅಲ್ಲದೇ ತನ್ನ ಯೋಗಾಭ್ಯಾಸ ಮತ್ತು ಸಾಧನೆಯಿಂದ ಸಹ ನಮ್ಮಲ್ಲಿ ಒಂದು ತರದ ಸ್ಥಿತಪ್ರಜ್ಞತೆ ಕಾಣಸಿಗುತ್ತದೆ. ಅದು ನಮ್ಮನ್ನು ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಕೊಡುತ್ತದೆ. ಹಲವಾರು ಭಾರತದ ದಾರ್ಶನಿಕರು ಕಷ್ಟಗಳು ಬಂದಾಗ ಹೇಗೆ ಅವುಗಳನ್ನು ನಮ್ಮ ಜೀವನದ ಭಾಗಗಳಾಗಿ ಎಣಿಸಿ ಅವುಗಳ ಜೊತೆಗೆ ಬದುಕುವುದು ಎಂದು ಹೇಳಿಕೊಟ್ಟಿದ್ದಾರೆ. “ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ … ಎಂದು ನಮ್ಮ ಡಿವಿಜಿ ಯವರು ಹೇಳಿಲ್ಲವೇ ! ಖಿನ್ನತೆಗಾಗಿ ಮಾತ್ರೆಗಳು ಸೇವಿಸುವುದು, ಮಾನಸಿಕ ಶಾಂತಿಗಾಗಿ ಕೌನ್ಸೆಲಿಂಗ್ ಸೆಂಟರ್ ಗಳ ಮೊರೆ ಹೋಗುವುದು, ಮಾದಕ ದ್ರವ್ಯಗಳು, ಕುಡಿತಗಳಿಗೆ ಜೋತು ಬಿದ್ದು ಜೀವನವನ್ನು ಹಾಳು ಮಾಡಿಕೊಳ್ಳುವುದು ಇವು ನಮ್ಮಲ್ಲಿ ಜಾಸ್ತಿ ಕಾಣುವುದಿಲ್ಲ. ಜೀವನವನ್ನು ಎದುರಿಸುವುದನ್ನೇ ಒಂದು ಮಾಪಕವಾಗಿಸಿದರೆ ಬಹುಶಃ ಭಾರತ ದೊಡ್ಡಣ್ಣನಾಗಿ ಗುರುತಿಸಲ್ಪಡುತ್ತದೇನೋ !
ಜೈ ಭಾರತ್ ! ಮೇರಾ ಭಾರತ್ ಮಹಾನ್ !!
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ