ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಉತ್ತರ ಪ್ರಭೆಯ ಜಾಡು ಹಿಡಿದು….

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಡಿಸೆಂಬರ್ ನಿಂದ ಮಾರ್ಚ್ ವರೆಗೆ ನಾರ್ವೆ, ಸ್ವೀಡನ್ ಸೇರಿದಂತೆ ನಾರ್ಡಿಕ್ ದೇಶಗಳಲ್ಲಿ ಹಿಮಗಟ್ಟುವ ಚಳಿಗಾಲ. ಕೆಲವೊಮ್ಮೆ ಮೈನಸ್ ಇಪ್ಪತ್ತಕ್ಕಿಂತ ಕೆಳಗಿಳಿಯುವ ಹವಾಮಾನದಲ್ಲಿ ನದಿ ಸರೋವರಗಳೆಲ್ಲ ಹೆಪ್ಪುಗಟ್ಟುವ ದೃಶ್ಯ ಸಾಮಾನ್ಯವಾಗಿರುವ ಕಾಲ ಅದು. ಆಗ ನೀರಿನ ಮೇಲೆ ನಿಂತು ನಡೆಯುವ ವಿಧ್ಯೆ ನಮಗೆ ನಿರಾಯಾಸವಾಗಿ ಕೈಗೆಟಕುತ್ತಲ್ಲ ಎಂದು ನೀವು ತಿಳಿ ಹಾಸ್ಯ ಮಾಡಬಹುದು…..

ಇಂತಹ ಹೆಪ್ಪುಗಟ್ಟುವ ಚಳಿಗಾಲದಲ್ಲಿ ಕೂಡ ಪ್ರವಾಸಿಗರು ಭೇಟಿ ಕೊಡಲು ಇಷ್ಟಪಡುವ ತಾಣ ಸ್ವೀಡನ್ ನ ಉತ್ತರ ಪ್ರಾಂತದ ಲಾಪ್ ಲಾಂಡ್. ಅಲ್ಲಿನ ಮುಖ್ಯ ಆಕರ್ಷಣೆ ಉತ್ತರ ಪ್ರಭೆ ಅಥವಾ ನಾರ್ಥರ್ನ್ ಲೈಟ್ಸ್ ಅಥವಾ ಆರೋರಾ ಬೋರಿಯಾಲಿಸ್ . ರಾತ್ರಿ ಮೋಡವಿರದ ಆಕಾಶದಲ್ಲಿ ಆಗಾಗ ಕಾಣುವ ನೈಸರ್ಗಿಕ ಬೆಳಕಿನ ಅಲೆಗಳ ಆಟ. ಹಸಿರು, ನೇರಳೆ,ಕೆಂಪು, ನೀಲಿ ಬಣ್ಣಗಳಲ್ಲಿ ನರ್ತಿಸುವ ಬೆರಗಿನ ಬೆಳಕನ್ನು ಕಣ್ಣಾರೆ ಕಾಣುವುದು ಮರೆಯಲಾಗದ ವಿಸ್ಮಯಕಾರಿ ಅನುಭವಗಳಲ್ಲಿ ಒಂದು..

ಉತ್ತರ ಪ್ರಭೆ- ನಾರ್ಥರ್ನ್ ಲೈಟ್ , ಹೆಸರೇ ಹೇಳುವಂತೆ ಇದು ಉತ್ತರ ಧ್ರುವದಲ್ಲಿ ಅದರಲ್ಲೂ ಅರ್ಕ್ಟಿಕ್ ವೃತ್ತದ ಸಮೀಪದ ಭೂಭಾಗದಲ್ಲಿ ಹೆಚ್ಚು ಕಂಡು ಬರುವ ಆಕಾಶದ ವಿದ್ಯಮಾನ. ಅಲಾಸ್ಕಾ, ಐಸ್ ಲ್ಯಾಂಡ್, ಕೆನಡಾ , ಗ್ರೀನ್ ಲ್ಯಾಂಡ್, ನಾರ್ವೆ, ಸ್ವೀಡನ್ ಹಾಗೂ ಫಿನ್ ಲ್ಯಾಂಡ್ ದೇಶಗಳಲ್ಲಿ ಪ್ರವಾಸಿಗರು ಇದನ್ನು ಕಾಣಬಹುದಾಗಿದೆ.

ಸ್ವೀಡನ್ ನಲ್ಲಿ ನಾರ್ಥರ್ನ್ ಲೈಟ್ಸ್ ವೀಕ್ಷಣೆ ಕುರಿತು

ಸ್ವೀಡನ್ ನಲ್ಲಿ ಸ್ಟಾಕ್ ಹೋಂ ನಿಂದ ಏಳುನೂರಾ ಎಪ್ಪತ್ತು ಮೈಲಿ ಉತ್ತರಕ್ಕೆ ಕಿರುನಾ ಹಾಗೂ ಅಲ್ಲಿಂದ ಐವತ್ತು ಮೈಲಿ ದೂರದ ಅಬಿಸ್ಕೋ ಎನ್ನುವ ಎರಡೂ ಪ್ರದೇಶಗಳು ನಾರ್ಥರ್ನ್ ಲೈಟ್ ವೀಕ್ಷಿಸಲು ಬರುವ ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ. ಅಲ್ಲಿಗೆ ಪ್ರಯಾಣಿಸಲು ವಿಮಾನ ಮತ್ತು ರೈಲು ಸಂಪರ್ಕಗಳೂ ಲಭ್ಯವಿವೆ. ಆ ಊರಿನ ಕೇಂದ್ರ ಭಾಗದಿಂದ ಹೊರ ವಲಯದಲ್ಲಿ, ವಿದ್ಯುತ್ ದೀಪಗಳಿಲ್ಲದ ಬಯಲಿನ ಸ್ವಚ್ಚಂದ ಆಗಸದಲ್ಲಿ ಈ ನಾರ್ಥರ್ನ್ ಲೈಟ್ ವೀಕ್ಷಿಸಬಹುದಾಗಿದೆ. ಹವಾಮಾನ ಮೈನಸ್ ಇಪ್ಪತ್ತಕ್ಕೂ ಕೆಳಕ್ಕೆ ಇರುವುದರಿಂದ ತಕ್ಕುದಾದ ಉಡುಗೆಗಳು ಅಲ್ಲಿ ದೊರೆಯುತ್ತದೆ. ಐಸ್ ಹೋಟೆಲ್ , ಟ್ರೀ ಹೋಟೆಲ್ ಹಾಗೂ ಬಯಲು ಕ್ಯಾಂಪ್ ಶಿಬಿರಗಳ ವ್ಯವಸ್ಥೆ ಕೂಡ ಇರುತ್ತದೆ.

ಇದೊಂದು ಸಾರ್ವಕಾಲಿಕ ವಿದ್ಯಮಾನವಾದರೂ, ಸಾಮಾನ್ಯವಾಗಿ ಸೆಪ್ಟಂಬರ್ ನಿಂದ ಮಾರ್ಚ್ ವರೆಗಿನ ಕಾಲ ಘಟ್ಟದಲ್ಲಿ, ಹೆಚ್ಚು ಕಮ್ಮಿ ಚಳಿಗಾಲದ ಸುದೀರ್ಘ ಕತ್ತಲಿನ ಆಕಾಶದಲ್ಲಿ ನಾರ್ಥರ್ನ್ ಲೈಟ್ ನಿಚ್ಚಳವಾಗಿ ಕಾಣುವ ಸಾಧ್ಯತೆಗಳು ಹೆಚ್ಚು. ಈ ಉತ್ತರ ಪ್ರಭೆ ಯಾವಾಗ, ಎಷ್ಟು ಹೊತ್ತು ಇರುತ್ತದೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಹಾಗಾಗಿ, ಪ್ರವಾಸಿಗರು ಎರಡು ಮೂರು ರಾತ್ರಿಗಳನ್ನು ಅಲ್ಲಿ ಕಳೆಯ ಬಯಸುತ್ತಾರೆ. ಕೆಲವೇ ಕ್ಷಣಗಳಲ್ಲಿ ಮಿಂಚಿ ಮರೆಯಾಗುವ ಹಾಗೆಯೇ ಸತತವಾಗಿ ಗಂಟೆಗಟ್ಟಲೆ ಕೂಡ ಇದನ್ನು ಕಾಣಬಹುದಾಗಿದೆ. ಮೋಡಗಳಿದ್ದರೆ ಅಥವಾ ಆ ದಿನದಲ್ಲಿ ಸೌರಮಾರುತಗಳ ವಿದ್ಯಮಾನ ಜರುಗದಿದ್ದರೆ, ನಾರ್ತರ್ನ್ ಲೈಟ್ಸ್ ಕಾಣದೆ ನಿರಾಸೆಗೊಳಬೇಕಾದ ಸಾಧ್ಯತೆಗಳೂ ಇವೆ.

ಹಾಗಾಗಿಯೇ ಕಿರುನಾಗೆ ಭೇಟಿ ನೀಡಬಯಸುವವರು ನಾರ್ಥರ್ನ್ ಲೈಟ್ ಜೊತೆಗೆ, ಅಲ್ಲಿನ ಸೋಲಾರ್ ಎಗ್ ಎಂಬ ಅವಿ ಸ್ನಾನ ಗೃಹ (Sauna), ಜಗತ್ತಿನಲ್ಲಿಯೇ ಅತ್ಯಂತ ಆಳ ಎಂದು ಪರಿಗಣಿಸಲ್ಪಡುವ, ಭೂಗರ್ಭದ ಉಕ್ಕಿನ ಗಣಿಯೊಳಕ್ಕೆ ಭೇಟಿ ನೀಡಬಹುದು. ಶಕ್ತಿಯುತ ಹಿಮನಾಯಿಗಳು ಎಳೆದೊಯ್ಯುವ ಜಾರುಬಂಡಿಯಲ್ಲಿ ಸವಾರಿ ಮಾಡಬಹುದು. ಹಿಮ ಪರ್ವತಗಳ ಆರೋಹಣ ಕೈಗೊಳ್ಳಬಹುದು. ಮಂಜುಗಡ್ಡೆಯ ಕೆಳಗಿಂದ ಮೀನು ಹಿಡಿಯಬಹುದು. ಆರ್ಕಟಿಕ್ ಹಿಮಪ್ರದೇಶದ ವನ್ಯ ಜೀವಿಗಳ ಸಫಾರಿ ಮಾಡಬಹುದು. ಫೋಟೋಗ್ರಫಿಗೂ ಪ್ರಶಸ್ತವಾಗಿದ್ದು, ಅಲ್ಲಿನ ಸಾಮಿ ಎನ್ನುವ ಬುಡಕಟ್ಟಿನ ಜನಾಂಗದ ಜೀವನ ಸಂಸ್ಕೃತಿಯ ಬಗ್ಗೆ ಕೂಡ ಅರಿತು ಅಚ್ಚರಿಗೊಳ್ಳಬಹುದು.

ಉತ್ತರ ಪ್ರಭೆ (northern lights) ನಿಜಕ್ಕೂ ಏನು?

ಉರಿಯುವ ಸೂರ್ಯನಿಂದ ಹೊರಚೆಲ್ಲುವ ವಿದ್ಯುದಾವೇಶದ ಕಣಗಳ ಮಾರುತ, ಸುಮಾರು ನಲವತ್ತು ಗಂಟೆಗಳ ಕಾಲ ವೇಗವಾಗಿ ಸಾಗಿ ವಾಯುಮಂಡಲಕ್ಕೆ ಅಪ್ಪಳಿಸಿದಾಗ, ಭೂಮಿಯ ಮೇಲಿನ ಕಾಂತೀಯ ಕ್ಷೇತ್ರ ಅವನ್ನು ತಡೆದು ಉತ್ತರ ಧ್ರುವದ ಕಡೆಗೆ ತಿರುಗಿಸುತ್ತದೆ. ಈ ಪ್ರಕ್ರಿಯೆಯಲ್ಲಿ , ಸೌರ ಮಾರುತದ ಎಲೆಕ್ಟ್ರಾನ್ ಮತ್ತು ಪ್ರೋಟಾನುಗಳು ವಾಯುಮಂಡಲದ ಅನಿಲ ಕಣಗಳ (ಒಕ್ಸಿಜನ್ ಮತ್ತು ನೈಟ್ರೋಜನ್ ಆಯಾನುಗಳ) ಜೊತೆಗೆ ಡಿಕ್ಕಿ ಹೊಡೆದ ಪರಿಣಾಮ ಹುಟ್ಟುವ ಚೈತನ್ಯ ಬೆಳಕಿನ ರೂಪಕ್ಕೆ ಬದಲಾಗಿ ನಾರ್ತರ್ನ್ ಲೈಟ್ಸ್ ಉತ್ಪತ್ತಿಗೆ ಕಾರಣವಾಗುತ್ತದೆ. ಹೀಗೆ ಅನಿಲ ಕಣಗಳು ಮತ್ತು ಯಾವ ಮಟ್ಟದ ಮೇಲೆ ಈ ಪ್ರಕ್ರಿಯೆ ಜರಗುತ್ತದೋ ಅದಕ್ಕೆ ಅನುಗುಣವಾಗಿ ಬೆಳಕಿನ ಬಣ್ಣ ನಿರ್ಧರಿತವಾಗುತ್ತದೆ. ಉದಾಹರಣೆಗೆ ಅರವತ್ತು ಕಿಲೋಮೀಟರು ಕೆಳಗೆ ನೀಲಿ ಬೆಳಕು, ಅರವತ್ತರ ಮೇಲೆ ನೇರಳೆ,ನೂರರವತ್ತರ ಮೇಲೆ ಹಸಿರು ,ಇನ್ನೂರೈವತ್ತರ ಮೇಲೆ ಕೆಂಪು ಹೀಗೆ. ಒಕ್ಸಿಜನ್ ಕಣಗಳು ಹಸಿರು ಮತ್ತು ಹಳದಿ ಮಿಶ್ರಿತ ಬಣ್ಣಗಳಿಗೆ ಕಾರಣವಾದರೆ ನೈಟ್ರೋಜನ್ ನೀಲಿ, ಜಾಂಬಳೀ ಮಿಶ್ರಿತ ಬಣ್ಣಗಳ ಪ್ರಭೆಯನ್ನು ಹುಟ್ಟಿಹಾಕುತ್ತದೆ.

ಜಾನಪದ ಮತ್ತು ಪುರಾಣಗಳಲ್ಲಿ ನಾರ್ತರ್ನ್ ಲೈಟ್ಸ್

ಹದಿನಾರು ನೂರಾ ಹತ್ತೊಂಬತ್ತರಲ್ಲಿ ಇಟಲಿಯ ಖಗೋಳ ತಜ್ಞ ಗೆಲಿಲಿಯೋ ಗೆಲಿಲಿ ಉತ್ತರ ಪ್ರಭೆಯನ್ನು ಅರೋರಾ ಬೋರಿಯಾಲಿಸ್ ಎಂದು ಕರೆದ. ರೋಮನ್ ಪುರಾಣ ಹಾಗೂ ಲ್ಯಾಟಿನ್ ಕವಿತೆಗಳಲ್ಲಿ ಬರುವ ಆರೋರಾ ಎಂಬ ಬೆಳಗಿನ ದೇವತೆ ಹಾಗೂ ಬೋರಿಯಾಸ್ ಎಂಬ ಗ್ರೀಕ್ ಪುರಾಣದಲ್ಲಿ ಬರುವ ನೇರಳೆ ರೆಕ್ಕೆಗಳ ಉತ್ತರ ಮಾರುತಗಳ ದೇವತೆ ಮೂಲದಿಂದ ಬಂದಿದ್ದ ಹೆಸರು ಅದು. ಹಾಗೆ ನೋಡಿದರೆ, ಸುಮಾರು ಮೂವತ್ತು ಸಾವಿರ ವರ್ಷಗಳ ಹಿಂದೆ ಫ್ರಾನ್ಸ್ ನ ಗುಹೆಗಳಲ್ಲಿ ಭಿತ್ತಿ ಚಿತ್ರಗಳಲ್ಲಿ ಕೂಡ ನಾರ್ಥರ್ನ್ ಲೈಟ್ ಗಳ ಬಗೆಗಿನ ಐತಿಹ್ಯ ಕಂಡು ಬರುತ್ತದೆ.

ಕುಣಿಯುವ ಈ ವಿಚಿತ್ರ ಬಣ್ಣಗಳ ಬೆಳಕನ್ನು ಜಗತ್ತಿನ ನಾನಾ ಕಡೆಯ ಜನಾಂಗ ಬೇರೆ ಬೇರೆ ಯಾಗಿ ಕಂಡವು. ಉತ್ತರ ಅಮೆರಿಕನ್ನರು ಇದನ್ನು ಪೈಶಾಚಿಕ ಆತ್ಮಗಳ ಆಟ ಎಂದುಕೊಂಡರೆ, ವೈಕಿಂಗ್ ಯುಗದ ಓಲ್ಡ್ ನೂರ್ಸ್ ನ ಜನ ಇದನ್ನು ಸಂಜೀವಿನಿ ಶಕ್ತಿಯ ಯುದ್ಧ ದೇವತೆ ವಲ್ಕೈರಿಯ ಶಸ್ತ್ರ ಗುರಾಣಿಯ ಬೆಳಕು ಎಂಬಂತೆ ಕಂಡರು. ಉತ್ತರ ಚೀನಾ ಹಾಗೂ ಜಪಾನಿನಲ್ಲಿ, ನಾರ್ಥರ್ನ್ ಲೈಟ ಬೆಳಕಲ್ಲಿ ಹುಟ್ಟಿದ ಮಗು ಅತ್ಯಂತ ಸುಂದರವಾಗಿರುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದರು. ಸ್ಥಳೀಯ ಸ್ವೀಡನ್ ನ ಸಾಮಿ ಎಂಬ ಬುಡಕಟ್ಟಿನ ಜನ ಇದನ್ನು ಮೃತ ಆತ್ಮಗಳ ಕೆಲಸ ಎಂದು ಭಾವಿಸುತ್ತಾರೆ.

ಕೌತುಕದ ವಿದ್ಯಮಾನ

ವೈಜ್ಞಾನಿಕವಾಗಿ ನಾರ್ಥರ್ನ್ ಲೈಟ್ ನ ಬಗ್ಗೆ ತನ್ಮೂಲಕ, ಸೂರ್ಯ ಗರ್ಭದ ಬಗ್ಗೆಯೂ ಇನ್ನಷ್ಟು ತಿಳಿದುಕೊಳ್ಳಲು ಖಗೋಳ ವಿಜ್ಞಾನಿಗಳು ಹೆಚ್ಚಿನ ಅಧ್ಯಯನದಲ್ಲಿ ತೊಡಗಿದ್ದಾರೆ. ಇದಕ್ಕಾಗಿಯೇ ಉಪಗ್ರಹವನ್ನೂ ಕೂಡ ಉಪಯೋಗಿಸಲಾಗುತ್ತಿದೆ.

ಒಮ್ಮೊಮ್ಮೆ ಸ್ಟಾಕ್ ಹೋಂ ನಗರದಲ್ಲೂ ಅಪರೂಪಕ್ಕೆ ಕಾಣಿಸಿದ ಉತ್ತರ ಪ್ರಭೆ … ಹತ್ತು ಫೆಬ್ರುವರಿ ರಾತ್ರಿ ಎಂಟೂವರೆಗೆ ಸೆರೆ ಹಿಡಿದದ್ದು

ಸುತ್ತಲೂ ಹಿಮಗಟ್ಟಿದ ಬಯಲು , ಹೆಪ್ಪುಗಟ್ಟಿದ ಸರೋವರ , ದೂರದ ಪೈನ್ ಮರಗಳ ಕಾಡಿಂದ ಮೆಲುವಾಗಿ ಕೇಳುವ ಗಾಳಿಯ ಸದ್ದು. ಹಿಮಾಚ್ಚ್ಹಾದಿತ ಪರ್ವತಗಳು, ಕತ್ತಲಿನಲ್ಲೂ ತಕ್ಕ ಮಟ್ಟಿನ ಹೊಳಪು. ಮೇಲೆ ಪ್ರಶಾಂತ ವಿಶಾಲ ಆಗಸದಲ್ಲಿ ಇದ್ದಕ್ಕಿದ್ದಂತೆಯೇ ಮೂಡುವ ಬಣ್ಣ ಬಣ್ಣಗಳ ಉತ್ತರ ಪ್ರಭೆ ಸೃಷ್ಟಿಯ ಚಮತ್ಕಾರದ ಬಗ್ಗೆ, ವಿಶ್ವದ ಅಸ್ತಿತ್ವದ ಬಗ್ಗೆ ಹುಲು ಮಾನವನಲ್ಲಿ ಕೌತುಕವನ್ನು ಮೂಡಿಸುತ್ತದೆ. ಸೌರ ಮಂಡಲದ ಈ ವಿಶ್ವ ವಿದ್ಯಮಾನಕ್ಕೆ ಸಾಕ್ಷಿಯಾಗುವ ಮತ್ತು ಬೆಕ್ಕಸ ಬೆರಗಾಗುವ ಗಳಿಗೆ ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.


ಸೌಜನ್ಯ- ಶೌರ್ಯ ಪತ್ರಿಕೆ. ನಯನ ಮನೋಹರ ಉತ್ತರ ಪ್ರಭೆಗಳ ಬಗ್ಗೆ ಗೊತ್ತೇ? -ಈ ಹಿಂದೆ ಶೌರ್ಯ ಪತ್ರಿಕೆಯಲ್ಲಿ ಮೊದಲು ಪ್ರಕಟವಾಗಿದ್ದು.