- ಎದುರುಮನೆ ಗೋಡೆ - ಜನವರಿ 14, 2021
ನಮ್ಮ ಮನೆಯಲಿ ಸಂಜೆಯೆಂದರೆ
ಹಳದಿ ಬಣ್ಣದ ಹಳೆಯ ಸುಣ್ಣದ ಎದುರುಮನೆ ಗೋಡೆ
ಅದರ ಮೇಲೆ
ನೆರಳ ಬೀಸಿ ಲಲ್ಲೆಗರೆಯುವ ಸಂಪಿಗೆ ಮರದ ಚಿಗುರೆಲೆ
ಹೊಸ ಮನೆಯ ಕಟ್ಟಲು ಕೆಡವಬೇಕಿತ್ತು ಹಳೆ ಮನೆ
ಬಂದೇ ಬಂತು ಮುಹೂರ್ತ
ಬಂತು ಕಡು ಹಳದಿ ಬಣ್ಣದ ಜೆ.ಸಿ.ಬಿ
ಸೊಂಡಿಲ ಎತ್ತೆತ್ತಿ ಕೆಡವಿತು
ಮೇಲ್ಛಾವಣಿ ಮೊದಲು
ನಂತರ ಒಳಗಿಂದ ಒಂದೊಂದೇ ಗೋಡೆ
ಹಾವು ತೊರೆದ ಪೊರೆಯಂತೆ ನಿಂತಿದೆ ಹೊರಗೋಡೆ ಬಾಗಿಲು
ಅಂತರಂಗವೇ ಒಡೆದು ಚೂರಾದ ಹಾಗೆ
ಒಳಗೆ ಇಟ್ಟಿಗೆಯ ರಾಶಿ
ಒಂದನ್ನೊಂದು ಸಂತೈಸುತ್ತ ಒಂದರ ಮೇಲೊಂದು ನಿದ್ದೆ ಹೋಗಿವೆ
ಕೊನೆಗೊಂದು ಮೆದುವಾದ ಗುದ್ದು
ಕಡು ಹಳದಿಯಡಿಗೆ ತಿಳಿ ಹಳದಿ ಇಡಿಯಾಗಿ ಬಿತ್ತು
ನಿಂತ ಮನೆ ಅಂಗಾತ ಮಲಗಿ ನಿರಾಳವಾಗಿ
ಕಂಡುಕೊಂಡಿದೆ ಹಿಗ್ಗಿಕೊಂಡಿದೆ ತನ್ನೊಳಗಿನ ಆಕಾಶ
ಬಿಟ್ಟುಕೊಂಡಿದೆ ಬಿಸಿಲು ಮಳೆ ಬೆಳದಿಂಗಳನು
ಇಳಿಸಿಕೊಂಡಿದೆ ತನ್ನೊಡಲಿಗೆ ಹಿಡಿವಷ್ಟು ತಾರೆಗಳನು
ಬಾಗಿಲು ತೆರೆದರೆ ಈಗ
ರಾಚುವುದು ಬೆಳಕು ಕಣ್ಣಿಗೆ
ಬಾಚಿ ಹೋಗಿದೆ ದೋಚಿ ಹೋಗಿದೆ ಜೆ.ಸಿ.ಬಿ
ನಮ್ಮ ಮನೆಯ ಸಂಜೆಗಳನು
ಇನ್ನೆಂದೂ ಸಿಗದು….
ಇನ್ನೆಂದೂ ಸಿಗದು
ಸಂಪಿಗೆ ಮರದ ನೆರಳಿಗೆ
ಅಂಥ ತಿಳಿಯಾದ ಆಸರೆ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ