- ಗಜಲ್ - ಫೆಬ್ರುವರಿ 27, 2024
- ಗಜಲ್ - ಜನವರಿ 19, 2023
- ಬನ್ನಿ,ಮತ್ತೆ ಬನ್ನಿ-ರೂಮಿ ಕವಿತೆಗಳು - ಸೆಪ್ಟೆಂಬರ್ 17, 2022
ಗಜ಼ಲ್ – ೧
ನನಗಿಲ್ಲಿ ತಪ್ಪುಗಳ ಲೆಕ್ಕ ಬೇಡ
ಯಾವೆಲ್ಲ ಒಪ್ಪುಗಳ ಲೆಕ್ಕ ಬೇಡ
ಕೈ ಹಿಡಿದೆತ್ತಿ ನಿಲ್ಲಿಸು ಬಾ ನನ್ನ
ಬಿದ್ದೆಲ್ಲ ಕಪ್ಪುಗಳ ಲೆಕ್ಕ ಬೇಡ
ಬಿಗಿಯಾಗಿ ತಬ್ಬಿ ಬಿಡು ಒಮ್ಮೆ
ಬೇರೆಲ್ಲ ಅಪ್ಪುಗಳ ಲೆಕ್ಕ ಬೇಡ
ಒಂದು ಮುತ್ತು ಸಾಕು ಜೀವಕ್ಕೆ
ಕಡಲ ಚಿಪ್ಪುಗಳ ಲೆಕ್ಕ ಬೇಡ
ಒಮ್ಮೆ ಮುಖ ಅರಳಿಸಿ ನಗಬೇಕು
ಬಿಗಿದೆಲ್ಲ ಸೊಪ್ಪುಗಳ ಲೆಕ್ಕ ಬೇಡ
ಎದೆಯಲುಗಿಸುವ ನುಡಿ ಬೇಕು
ಸವೆದ ನೆಪ್ಪುಗಳ ಲೆಕ್ಕ ಬೇಡ
ಘನಮೌನಕ್ಕೆ ಸಲ್ಲೋಣ ‘ಜಂಗಮ’
ಬಡಿದ ಡಪ್ಪುಗಳ ಲೆಕ್ಕ ಬೇಡ
★★
ಕಪ್ಪು- ಕಂದಕ
ಸೊಪ್ಪು- ಚಿಂತೆ, ಮುಪ್ಪುಗಳಿಂದ ಮುಖದಲ್ಲಿ ಮೂಡುವ ಗೆರೆ,ಸುಕ್ಕು
ನೆಪ್ಪು – ನೆನಪು, ಗುರುತು, ಅಂದ,ಕ್ರಮ
ಡಪ್ಪು- ಒಂದು ಬಗೆಯ ಚರ್ಮವಾದ್ಯ
ಗಜ಼ಲ್-೨
ಹೇಳಲಿರುವುದ ಹೇಳಿಯಾಯಿತು ಏನೂ ಉಳಿದಿಲ್ಲ ಬಾಕಿ
ಮನದ ಮಾತನ್ನೆಲ್ಲ ಬರೆದಾಯಿತು ಏನೂ ಉಳಿದಿಲ್ಲ ಬಾಕಿ
ಪಾತ್ರೆಯನ್ನು ಎತ್ತಿ ಸುರಿಯುತ್ತ ಹೋದೆ ಲೀಲೆಯಲ್ಲಿ
ಮಧು ಪೂರ ಖಾಲಿಯಾಯಿತು ಏನೂ ಉಳಿದಿಲ್ಲ ಬಾಕಿ
ಸಂತೆಯ ಸಂಭ್ರಮದಲ್ಲಿ ಕಣ್ಣು ಕೀಲಿಸಿ ನಡೆದೆ
ಎಲ್ಲ ನೋಡಿ ದಣಿದಿದ್ದಾಯಿತು ಏನೂ ಉಳಿದಿಲ್ಲ ಬಾಕಿ
ಮೊಗೆಮೊಗೆದು ಕೊಟ್ಟಳು ಸಖ, ಅವಳು ಪ್ರೀತಿಯನ್ನು
ಒಡಲುದುಂಬಿ ಪಡೆದಿದ್ದಾಯಿತು ಏನೂ ಉಳಿದಿಲ್ಲ ಬಾಕಿ
ಅದೊಂದು ಕಪ್ಪು ಚಿತ್ರ ಸೀಳುತ್ತಲೇ ಇತ್ತು ಎದೆಯ
ಬಿಡದೆ ಅದನೂ ಹೂಳಿದ್ದಾಯಿತು ಏನೂ ಉಳಿದಿಲ್ಲ ಬಾಕಿ
ಹೇಗೆ ಪರಚುತ್ತಿತ್ತು ಕೊಕ್ಕು ಮಸೆಯುತ್ತಿತ್ತು ಪಾರಿವಾಳ
ಬಿಚ್ಚಿದೆ ಕಟ್ಟು,ಹಾರಿ ಮರೆಯಾಯಿತು ಏನೂ ಉಳಿದಿಲ್ಲ ಬಾಕಿ
ನೆರಳು-ಬೆಳಕಿನ ಆಟದಲ್ಲಿ ಮಗ್ನ ನೀನು ‘ಜಂಗಮ’
ನೆರಳು ಕರಗಿ ಬಯಲಾಯಿತು ಏನೂ ಉಳಿದಿಲ್ಲ ಬಾಕಿ
★★
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ