ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಂದು ಸ್ವಗತ

ಅಬ್ಳಿ ಹೆಗಡೆ
ಇತ್ತೀಚಿನ ಬರಹಗಳು: ಅಬ್ಳಿ ಹೆಗಡೆ (ಎಲ್ಲವನ್ನು ಓದಿ)

ಯಾವಾಗಾದರೊಮ್ಮೆ
ಅಪರೂಪಕ್ಕೆ ನಾನು
ನನ್ನ ಕನ್ನಡಿಯಲ್ಲೇ..
……………………………..
ಮುಖ ನೋಡುವದುಂಟು.
ನೆರೆತು ಹಣ್ಣಾದ ಕೂದಲು,
ತಲೆ, ಗಡ್ಡ, ಕನ್ನಡಕ-
ದೊಳಗಿನ ಮಾಸಿದ ಕಣ್ಣು,
ಪೇಲವ ಮುಖದ ಸುಕ್ಕು,
ಅದರೊಳಗೊಂದು-
ಮಾಸಿದ ನಗು….-
ಎಲ್ಲ ಕಂಡಾಗ–
ನೆನ​ಪಾಗುವದು ಒಣಭೂಮಿ–
ಯಲ್ಲಿ ಸುರಿದ ಅಲ್ಪ, ಸ್ವಲ್ಪ
ಮಳೆಗೆ, ಸ್ವಲ್ಪವಾದರೂ
ಹಸಿರುಕ್ಕಿಸಲು ,
ಕಾಯುತ್ತಿರುವ ಮರ.
ನಿಲುಕದೆತ್ತರದಲ್ಲಿ ಚಿಗುರಿ-
ಹೂ ಬಿಟ್ಟು-ಸೀತೆ ದಂಡೆ
ಯಾಗಲು ಆತುರ-
ದಲ್ಲಿರುವ ಬಂದಳಿಕೆ.
ತೆವಳಿ, ಅಂಬೆಗಾಲಿಟ್ಟು,
ಪುಟ್ಟ ನುಣುಪು ಕೈಗಳಿಂದ,
ನುಣುಪುಗೋಡೆಯನ್ನೇ
ಆಸರೆಯಾಗಿಸಿ,
ನಿಲ್ಲಲು ತಿಣಕಾಡುವ ಪುಟ್ಟ-
ಪುಟಿಯುವ ಹೃದಯದ,
ಮುದ್ದು ಮುಖದ ಪುಟ್ಟಮಗು.
ನಾನೇನು ಕವಿಯಲ್ಲ.
ರಾಶಿ, ರಾಶಿ ಬರೆದು-
ಗುಡ್ಡೆಹಾಕಿ, ಕವಿಯೆಂದು-
ವಿಜೃಂಭಿಸುವ ಆಸೆ
ಕಿಂಚಿತ್ತೂ ಇಲ್ಲದ,
ಮನದ ಭಾವನೆಗಳನ್ನು
ಅಕ್ಷ​ರವಾಗಿಸಲು ,
ಹೆಣಗಾಡುವ ವಿದ್ಯಾರ್ಥಿ.
ಸತಿಗೊಬ್ಬ ಒಳ್ಳೆಯ ಪತಿ,
ಮಕ್ಕಳಿಗೆ ಒಳ್ಳೆಯ ಅಪ್ಪ,
ಮೊಮ್ಮಕ್ಕಳಿಗೊಬ್ಬ-
ಒಳ್ಳೆಯ ಅಜ್ಜನಾಗುವ
ಆಸೆ ಹೊತ್ತ ಶ್ರೀ ಸಾಮಾನ್ಯ.
ಈವರೆಗಿನ ಅಲ್ಪ,ಸ್ವಲ್ಪ-
ಗಳಿಕೆಯನ್ನೆಲ್ಲ ವ್ಯಯಿಸಿ,
ಒಳ್ಳೆಯ ಬೆಳೆಯನ್ನು-
ನಿರೀಕ್ಷಿಸುತ್ತಿರುವ ರೈತ.
ಕಳೆದ ಕೀಲಿಕೈ ಹುಡುಕುತ್ತ,
ಗೊತ್ತಿಲ್ಲದ ದಾರಿಯಲಿ,
ಗುರಿಯಿಲ್ಲದಲೆಯುವ-
ಅಲೆಮಾರಿ, ಪಥಿಕ…….!!!!