ಹೈದರಾಬಾದ್: ನವೆಂಬರ್ ೪, ೨೦೨೪
ಕನ್ನಡ ಸಾಹಿತ್ಯ ಪರಿಷತ್ತಿನ ತೆಲಂಗಾಣಾ ಗಡಿನಾಡ ಘಟಕವು ಈ ೦೪-೧೧-೨೦೨೪ ರಂದು ಅದರ ಸದಸ್ಯರು ಮತ್ತು ಸಂಘಟನಾ ಕಾರ್ಯದರ್ಶಿಯಾದ ಶ್ರೀ ಚಂದಕಚರ್ಲ ರಮೇಶ ಬಾಬು ಅವರ ಅನುವಾದ ಕೃತಿಯಾದ “ಒಬ್ಬಂಟೀಕರಣ”ದ ಲೋಕಾರ್ಪಣೆಯ ಸಮಾರಂಭವನ್ನು ಸ್ಥಳೀಯ ರವೀಂದ್ರ ಭಾರತಿ ಸಭಾ ಭವನದಲ್ಲಿ ಆಯೋಜಿಸಿತ್ತು. ಈ ಕೃತಿಯ ಮೂಲ ಲೇಖಕರಾದ ಡಾ. ಮಾಮಿಡಿ ಹರಿಕೃಷ್ಣ ಅವರು ಸ್ಥಳೀಯ ತೆಲಂಗಾಣ ಸರಕಾರದ ಭಾಷಾ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದಾರೆ.
ಕಾರ್ಯಕ್ರಮ ಸಂಜೆ ೬ ಗಂಟೆಗೆ ದೀಪ ಬೆಳಗುವಿಕೆ ಮತ್ತು ನಾಡಗೀತೆಯೊಂದಿಗೆ ಪ್ರಾರಂಭವಾಯಿತು. ಇಲ್ಲಿಯ ಆಂಗ್ಲ ಮತ್ತು ವಿದೇಶೀ ಭಾಷಾ ವಿಶ್ವವಿದ್ಯಾಲಯದ ಅನುವಾದ ವಿಭಾಗದ ಮುಖ್ಯಸ್ಥರು ಮತ್ತು ಕನ್ನಡದವರು ಆದ ಶ್ರೀ ವಿ.ಬಿ. ತಾರಕೇಶ್ವರ್ ಅವರು ತಮ್ಮ ಅಮೃತ ಹಸ್ತದಿಂದ ಕೃತಿಯನ್ನು ಲೋಕಾರ್ಪಣೆ ಮಾಡಿದರು. ನಂತರ ಮೂಲ ಕವಿಗಳಾದ ಡಾ. ಮಾಮಿಡಿ ಹರಿಕೃಷ್ಣ ಅವರು ತಮ್ಮ ಮೂಲ ಕವಿತಾ ಸಂಕಲನದಿಂದ ಒಂದು ಪದ್ಯವನ್ನು ತೆಲುಗಿನಲ್ಲಿ ಓದಲು, ಅದೇ ಪದ್ಯವನ್ನು ಅನುವಾದಕರಾದ ಶ್ರೀ ರಮೇಶಬಾಬು ಅವರು ಕನ್ನಡದಲ್ಲಿ ಓದಿದರು.
ನಂತರ ಕೃತಿಯನ್ನು ಲೋಕಾರ್ಪಣೆ ಮಾಡಿದ ಶ್ರೀ ವಿ.ಬಿ. ತಾರಕೇಶ್ವರ್ ಅವರು ಕೃತಿಯ ಬಗ್ಗೆ ಮಾತನಾಡುತ್ತಾ ಕನ್ನಡ ಮತ್ತು ತೆಲುಗಿನ ಬಾಂಧವ್ಯ ತುಂಬಾ ಹಳೆಯದು ಎಂದು ಹೇಳುತ್ತ ಅದನ್ನು ಶ್ರೀ ರಮೇಶಬಾಬು ಅವರು ಮುಂದುವರೆಸಿದ್ದಾರೆ ಎಂದು ಹೇಳಿದರು. ಅನುವಾದ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಭೀಮಕವಿಯನ್ನು ಅವರು ನೆನೆದರು. ಈ ಎರಡು ಭಾಷೆಗಳ ನಡುವೆಯೇ ಜಾಸ್ತಿ ನೇರ ಅನುವಾದಗಳು ಆಗ್ತಾ ಇವೆ ಎಂಬ ಸಂಗತಿಯನ್ನು ಹಂಚಿಕೊಂಡರು ಹೇಳಿದರು. ಇದಕ್ಕೆ ಇತರೆ ರಾಜ್ಯಗಳಿಗಿಂತ ಜಾಸ್ತಿ ಗಡಿಪ್ರದೇಶವನ್ನು ಹಂಚಿಕೊಂಡಿರುವ ಭೌಗೋಳಿಕ ವಿಷಯಗಳು ಸಹ ನೆರವಾಗಿವೆ ಎಂದರು. ಎರಡೂ ಭಾಷೆಗಳ ಸೇವೆಯಲ್ಲಿ ತುಂಬಾ ಬರಹಗಾರರು ತೊಡಗಿದ್ದಾರೆ ಎಂದು ಹೇಳಿದರು.
ನಂತರ ಇಲ್ಲಿಯ ಕನ್ನಡ ಸಾಧಕರಾದ ಶ್ರೀಮತಿ ಪ್ರವೀಣಾ ದೇಶಪಾಂಡೆ ಮತ್ತು ಡಿ.ಬಿ.ರಾಘವೇಂದ್ರರಾವ್ ಅವರನ್ನು ಕ.ಸಾ.ಪ ವತಿಯಿಂದ ಸತ್ಕಾರ ಮಾಡಲಾಯಿತು.
ನಂತರ ಮಾತಾಡಿದ ನಸುಕು.ಕಾಮ್ ಸಂಪಾದಕರಾದ ಮತ್ತು ಒಬ್ಬಂಟೀಕರಣ ಪುಸ್ತಕಕ್ಕೆ ಮುನ್ನುಡಿ ಬರೆದ ಶ್ರೀ ವಿಜಯ್ ದಾರಿಹೋಕ ಆಂಗ್ಲದಲ್ಲಿ ಮಾತನಾಡುತ್ತ ಐನ್ ಸ್ಟೀನಿನ ಸಾಪೇಕ್ಷ ಸಿದ್ಧಾಂತ ಕವಿಗೂ ಮತ್ತು ಓದುಗನಿಗೂ ಸಹ ಅನ್ವಯವಾಗುತ್ತದೆ ಎಂದರು. ಪ್ರತಿ ಕವಿತೆಯನ್ನು ಓದುವಾಗ ಓದುಗ ತನ್ನದೇ ಜಗತ್ತನ್ನು ಸೃಷ್ಟಿಸಿಕೊಳ್ಳುತ್ತಾನೆ ಎಂದರು. ಅವರ ಪ್ರಕಾರ ಒಬ್ಬಂಟೀಕರಣದಿಂದ ಆರಂಭಗೊಳ್ಳುವ ವಿಚಾರಗಳು ಸಾಮೂಹಿಕೀಕರಣಗೊಂಡು ಸಮುದಾಯದ ನೆಲೆಯಲ್ಲಿ ಒದಗಿಬರುತ್ತವೆ ಎಂದರು. ತೊಂಬತ್ತರ ದಶಕದಲ್ಲಿ ಬರೆದ ಈ ಕವಿತೆಗಳಲ್ಲಿ ಒಂದು ಚಿರಂತನತ್ವವಿದೆ ಎಂದರು. ಹಾಗೇ ಈ ಸಂಕಲನದ ಬಗ್ಗೆ ಕರ್ನಾಟಕದಲ್ಲಿ ವಿಚಾರ ಗೋಷ್ಟಿಗಳನ್ನು ಹಮ್ಮಿಕೊಳ್ಳುವ ಸಲಹೆ ನೀಡಿದರು. ಓದುಗರು ಈ ಹಿನ್ನೆಲೆಗಳಲ್ಲಿ ಕವಿತೆಗಳನ್ನು ಓದಬೇಕೆಂದು ಹೇಳಿದರು. ಕವಿ ತಿರುಮಲೇಶರನ್ನು ಸಹ ಅವರು ಈ ಸಂದರ್ಭದಲ್ಲಿ ನೆನೆದರು.
ನಂತರ ಕೇಂದ್ರ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾದ ಡಾ. ಪದ್ಮಿನಿ ನಾಗರಾಜ ಅವರು ಮಾತನಾಡುತ್ತ ತಾವು ಈ ರೀತಿ ಹೊರನಾಡಿನಲ್ಲಿ ಕನ್ನಡ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ನಡುವೆ ಈ ಕೃತಿ ಲೋಕಾರ್ಪಣವಾಗುತ್ತಿರುವ ಸಂದರ್ಭದಲ್ಲಿ ಸಾಕ್ಷಿಯಾಗಿದ್ದೇನೆ ಅಂತ ಹೇಳಿದರು. ಅವರ ಭಾಷಣದಲ್ಲಿ ಆದಿಕವಿ ಪಂಪ, ಕುವೆಂಪು ಕವಿಗಳ ಸಾಲುಗಳನ್ನು ಉಲ್ಲೇಖಿಸಿದರು.ಭಾಷೆ ಮತ್ತು ಸಂಸ್ಕೃತಿಯನ್ನ ವಿಸ್ತಾರವಾಗಿಸುವುದರಲ್ಲಿ ಅನುವಾದ ಮಹತ್ತರವಾದ ಪಾತ್ರವನ್ನು ಪೋಷಿಸುತ್ತಿದೆ ಎನ್ನುವ ಅಭಿಪ್ರಾಯ ಪಟ್ಟರು. ಅನುವಾದವೆಂದರೆ ಒಂದು ಆತ್ಮವನ್ನು ಮತ್ತೊಂದು ಆತ್ಮಕ್ಕೆ ಜೋಡಿಸುವುದು ಎನ್ನುವ ಹೆಚ್. ಎಸ್. ವೆಂಕಟೇಶಮೂರ್ತಿಯವರ ಮತ್ತು ಕವಿತೆಯ ಅನುವಾದದ ಬಗ್ಗೆಗಿನ ಯು.ಆರ್. ಅನಂತ ಮೂರ್ತಿಯವರ ಹೇಳಿಕೆಗಳನ್ನು ಸಭೆಗೆ ತಿಳಿಸಿದರು. ಕೃತ್ರಿಮ ಬುದ್ಧಿಮತ್ತೆ ಸೃಜನಾತ್ಮಕತೆಗೆ ಮಾರಕವಾಗುತ್ತದೆ ಎಂದರು. ಇತ್ತೀಚಿಗೆ ನಡೆದ ಕೃತಿಚೌರ್ಯದ ಒಂದು ಸನ್ನಿವೇಶವನ್ನು ಸಭಿಕರಿಗೆ ತಿಳಿಸಿದರು. ಅನುವಾದಗಳಲ್ಲಿ ಹಲವಾರು ಅಚಾತುರ್ಯಗಳು ಆಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ತಿಳಿಸಿದರು. ಪ್ರಶಸ್ತಿಗಳು ಬಂದವರ ಬಗ್ಗೆ ಸಹ ಸಂಶಯಗಳು ವ್ಯಕ್ತವಾಗುತ್ತಿವೆ ಎಂದು ವ್ಯಥೆಪಟ್ಟರು.
ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ತೆಲಂಗಾಣ ಗಡಿನಾಡ ಘಟಕದ ಅಧ್ಯಕ್ಶರಾದ ಶ್ರೀ ಗುಡುಗುಂಟಿ ವಿಠಲ್ ಜೋಶಿಯವರು ಮಾತನಾಡುತ್ತಾ ಜಂಟಿ ನಗರಗಳಲ್ಲಿಯ ಕನ್ನಡ ಸಂಸ್ಥೆಗಳನ್ನು ಒಂದು ಸೂರಿನಡಿಯಲ್ಲಿ ತರುವ ತಮ್ಮ ಪ್ರಯತ್ನವನ್ನು ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಕನ್ನಡದ ಸೇವೆ ಮಾಡಿದ್ದ ಶ್ರೀ ಕೆರೋಡಿ ಗುಂಡೂರಾಯರ ಮತ್ತು ಈಗ ಮಾಡುತ್ತಿರುವ ಶ್ರೀ ಧರ್ಮೇಂದ್ರ ಪೂಜಾರಿಯವರ ಸೇವೆಗಳನ್ನು ಸ್ಮರಿಸಿದರು. ಕರ್ನಾಟಕ ಸಾಹಿತ್ಯ ಮಂದಿರದಿಂದ ಹೊರಬಂದ “ಪರಿಚಯ” ಪತ್ರಿಕೆ ಮತ್ತು ಅಲ್ಲಿ ನಡೆಯುತ್ತಿದ್ದ “ಸಾಹಿತ್ಯ ಸಂಜೆ” ಕಾರ್ಯಕ್ರಮಗಳ ಬಗ್ಗೆ ಸಭೆಗೆ ತಿಳಿಸಿದರು.
ನಂತರ ಅತಿಥಿಗಳಿಗೆ ಗೌರವ ಸನ್ಮಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ತೆಲಂಗಾಣ ಘಟಕದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಸುಮತಿ ನಿರಂಜನ್ ರಾವ್ ಅವರು ಕಾರ್ಯಕ್ರಮವನ್ನು ದಕ್ಷತೆಯಿಂದ ನಿರೂಪಿಸಿದರು.
ಕೊನೆಯದಾಗಿ ತೆಲಂಗಾಣ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಧರ್ಮೇಂದ್ರ ಪೂಜಾರಿಯವರು ವಂದನಾರ್ಪಣೆ ಮಾಡಿ, ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ನಾನು USA ದಲ್ಲಿದ್ದರೂ ಈ ಕಾರ್ಯಕ್ರಮ ನಡೆಯುವಾಗ ಆನ್ ಲೈನನಲ್ವಿ ನೋಡಿದೆ.ಆಶ್ರಿತ ಮತ್ತು ಸಂಗಾತಿಯವರು ನಾಡಗೀತೆ ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಒಳ್ಳೆಯ ನಾಂದಿ ಹಾಕಿದರು.ಕಾರ್ಯಕ್ರಮದ ನಿರೂಪಕಿಯಾದ ಸುಮತಿ ನಿರಂಜನರವರು ಪ್ರಾರಂಭದಿಂದ ಕೊನೆಯ ವರೆಗೆ ಸಂದರ್ಭಕ್ಕೆ ತಕ್ಕಂತೆ ತಮ್ಮ ಮಾತುಗಳಿಂದ ಹಾಗೂ ಮಧ್ಯದಲ್ಲಿ ನಸು ಹಾಸ್ಯದಿಂದ ವೀಕ್ಷಕರ ಆಸಕ್ತಿಯನ್ನು ಹಿಡಿದಿಟ್ಚಿದ್ದರು. ಇವರಿಬ್ಬರ ಹೆಸರುಗಳು ವರದಿಯಲ್ಲಿ ತಪ್ಪಿ ಹೋಗಿವೆ. ಪುಸ್ತಕದಲ್ಲಿಯ ಒಂದು ಪದ್ಯವನ್ನು ತೆಲುಗು ಹಾಗೂ ಕನ್ನಡದ ಅನುವಾದಿತ ಕೃತಿಯನ್ನು ಓದಿದ್ದರಿಂದ ಪುಸ್ತಕದ ಮೂಲ ಬರಹಗಾರ ಹಾಗೂ ಅನುವಾದ ಮಾಡಿದ ಲೇಖಕರ ಬರಹದ ಸಮರ್ಥತೆಯ ಪರಿಚಯವಾದಂತಾಯಿತು.ಪುಸ್ತಕವನ್ನು ಓದುವ ಆಸಕ್ತಿ ಉಂಟಾಯಿತು. ಮೇಲಿನ ವರದಿಯಲ್ಲಿ ತಿಳಿಸಿದಂತೆ ಎಲ್ಲರ ಭಾಷಣಗಳು ಕನ್ನಡಾಭಿಮಾನವನ್ನು ಜಾಗೃತಗೊಳಿಸುವಂತಿದ್ದವು.ರಮೇಶ ಬಾಬು, ಡಿ ಬಿ ರಾಘವೇಂದ್ರರಾವ, ಪ್ರವೀಣಾ ದೇಶಪಾಂಡೆಯವರನ್ನು ಸನ್ಮಾನಿಸಿ ಕನ್ನಡ ಸಾಹಿತ್ಯ ಪರಿಷತ್ತು ಹೊರನಾಡಿನಲ್ಲಿದ್ದು ಕನ್ನಡದ ಸೇವೆ ಮಾಡಿದವರನ್ನು ಗುರುತಿಸಿದ್ದು ಸ್ತುತ್ಯಾರ್ಹ.
ನಾನು
ನಿರೂಪಕರು ಎಂದರೆ ಕಾರ್ಯಕ್ರಮದ ಸರದಲ್ಲಿ ಕೊಂಡಿ (link)ಇದ್ದಂತೆ. ಪದಕ, ಮುತ್ತು, ರತ್ನ ಚೆನ್ನಾಗಿದೆ ಎನ್ನಬಹುದು. ಕೊಂಡಿ ಚೆನ್ನಾಗಿದೆ ಎಂದು ಬೇರೆ ಹೇಳುವರೇ?
ಆದರೆ ನಾಡಗೀತೆ ಹಾಡಿದ ಆಶ್ರಿತ- ಮಧ್ವ idol- ನಮ್ಮ ಕೋರಿಕೆಯ ಮೇರೆಗೆ ಹೊಸಪೇಟೆಯಲ್ಲಿ ಸಿಕ್ಕಿ ಹಾಕಿಕೊಂಡವರು ಟಿಕೆಟ್ ಸಿಗದೆ ಅದೆಷ್ಟು ಪ್ರಯತ್ನ ಪಟ್ಟು ಆ ದಿನ ಮಧ್ಯಾಹ್ನ ಇಲ್ಲಿಗೆ ಬಂದರೆಂದು ನಮ್ಮಿಬ್ಬರಿಗೇ ಗೊತ್ತು. ಅದಾದರೆ ವರದಿಯಲ್ಲಿ missing link ಎಂದು ನನಗೂ ಅನಿಸಿತು. ಹೋಗಲಿ ಬಿಡಿ. ಇಂತಹ ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಇಂತಹ ಚಿಕ್ಕ ಚಿಕ್ಕ ವಿಷಯಗಳು ಆಗುತ್ತಲೇ ಇರುತ್ತವೆ!
“ಕೊಂಡಿ” ಗೂ ಪ್ರಾಮುಖ್ಯತೆ ನೀಡುವ ಉದಾರಿಗಳು ನೀವು !
The pun on ಕೊಂಡಿ is unintended !