- ಭಾರತದಲ್ಲಿ ಕಳೆದುಹೋಗುತ್ತಿರುವ ವೈಜ್ಞಾನಿಕ ಪ್ರಜ್ಞೆ - ಸೆಪ್ಟೆಂಬರ್ 3, 2022
- ನವ ಭಾರತ ಹಿಂಸೆಯ ತಾಣವಾಗುತ್ತಿದೆಯೇ ? - ಮೇ 1, 2022
- ಯುದ್ಧೋನ್ಮಾದದ ಅಲೆಯೂ ಪ್ರಜಾತಂತ್ರದ ಆಶಯಗಳೂ - ಮಾರ್ಚ್ 1, 2022
ಫೆಬ್ರವರಿ ೨೮ರಂದು ಮೈಸೂರಿನ ಕಲಾಸುರುಚಿ ಸಾಹಿತ್ಯ ಚಾವಡಿಯಲ್ಲಿ ನಡೆದ ಒಂದು ಸಂವಾದದಲ್ಲಿ ಭಾಗವಹಿಸಿದ್ದೆ. ಅಂದು ಮಾನ್ಯ ಭದ್ರಪ್ಪನವರು ನೆನಪಿನ ಕಾಣಿಕೆಯಾಗಿ ಒಂದು ಪುಸ್ತಕ ಕೊಟ್ಟರು. ಮನೆಗೆ ಬಂದು ನೋಡಿದಾಗ ಅದು ಡಾ. ಎಚ್ ಕೆ ರಂಗನಾಥ್ ಅವರ “ ಕರ್ನಾಟಕ ರಂಗಭೂಮಿ ”. ನಾಟಕಗಳನ್ನು ಓದಿ, ನೋಡಿ ಆಸ್ವಾದಿಸುವುದನ್ನು ಬಿಟ್ಟು ರಂಗಭೂಮಿಯ ಬಗ್ಗೆ ಯಾವ ಕೃತಿಯನ್ನೂ ಈವರೆಗೂ ಓದಿರದ ನನಗೆ ಇದೂ ಸಹ ಹತ್ತರೊಳಗೊಂದು ಎನಿಸಿ ಪಕ್ಕಕ್ಕಿರಿಸಿಬಿಟ್ಟೆ. ಆದರೂ ಓದಿಗಾಗಿ ಕಾಯುತ್ತಿದ್ದ ಪುಸ್ತಕಗಳ ನಡುವೆ ಇದ್ದ ಈ ಪುಸ್ತಕವನ್ನು ಓದಿ ನೋಡಿಯೇಬಿಡುವ ಎನಿಸಿ ಕೈಗೆತ್ತಿಕೊಂಡೆ. ಹಾ ಮಾ ನಾಯಕರ ಮುನ್ನುಡಿ ಓದಿದ ಮೇಲೆ ಮುಂದುವರೆಯೋಣ ಎನಿಸಿ, ಒಂದೇ ಉಸಿರಿಗೆ ಓದಿ ಮುಗಿಸಿದೆ.
ಪೂರ್ತಿ ಓದಿದ ನಂತರ ನನಗನಿಸಿದ್ದು ಹೀಗೆ. :- ನಾವು ಕೆಲವೊಮ್ಮೆ ನಮ್ಮದೇ ಆದ ಚೌಕಟ್ಟುಗಳಲ್ಲಿ ಬಂಧಿಸಿಕೊಂಡುಬಿಡುತ್ತೇವೆ ಎನಿಸುತ್ತದೆ. ನಮ್ಮ ಅಧ್ಯಯನವೂ ಸಹ ಈ ಚೌಕಟ್ಟಿನೊಳಗೇ ಗಿರಕಿ ಹೊಡೆಯುತ್ತಾ ನಮಗೆ ಅತ್ಯವಶ್ಯ ಎನಿಸಿದ ಅಥವಾ ನಮ್ಮ ಆಸಕ್ತಿ-ಹಿತಾಸಕ್ತಿಗೆ ಅನುಗುಣವಾದ ಕೃತಿಗಳನ್ನು ಮಾತ್ರ ಓದಲು ತೊಡಗುತ್ತೇವೆ. ಎಷ್ಟೇ ಗಹನವಾದ ವಿಚಾರಗಳನ್ನು ಹೊಂದಿದ್ದರೂ, ನಮ್ಮ ಈ ಹೊತ್ತಿನ ತಾತ್ವಿಕ ನಿಲುಮೆಗಳಿಗೆ ನಿಲುಕದ ಕೃತಿಗಳನ್ನು ಕಪಾಟಿನಲ್ಲಿಟ್ಟುಬಿಡುತ್ತೇವೆ. ಕೆಲವೊಮ್ಮೆ ಸಮಯದ ಅಭಾವವೂ ಹೀಗೆ ಮಾಡಲು ಪ್ರೇರೇಪಿಸುತ್ತದೆ. ಈ ಚೌಕಟ್ಟಿನ ಕಟ್ಟುಪಾಡುಗಳಿಗೆ ಒಳಗಾಗಿ ಎಷ್ಟೋ ಅಮೂಲ್ಯ ಸಾಹಿತ್ಯ ಕೃತಿಗಳಿಂದ ದೂರವೇ ಉಳಿದುಬಿಡುತ್ತೇವೆ. ಈ ಅಪರಾಧಿ ಪ್ರಜೆಯನ್ನು ಹೊತ್ತುಕೊಂಡೇ ಎಚ್ ಕೆ ರಂಗನಾಥ್ ಅವರ ಅಮೂಲ್ಯ ಕೃತಿಯನ್ನು ಓದಲಾರಂಭಿಸಿದೆ.
ಕೃತಿಯನ್ನು ಕುರಿತು ಏನನ್ನಾದರೂ ಬರೆಯುವ ವಿಷಯ ಪ್ರೌಢಿಮೆ ನನ್ನಲ್ಲಿಲ್ಲ. ಆದರೆ ಈ ಪುಸ್ತಕವನ್ನು ಓದುತ್ತಾ ಹೋದಂತೆ ನಮ್ಮ ಕನ್ನಡ ರಂಗಭೂಮಿಯ ಎರಡು ಶತಕಗಳ ಇತಿಹಾಸದ ಪುಟಗಳು ಒಂದೊಂದಾಗಿಯೇ ತೆರೆದುಕೊಳ್ಳುತ್ತಾ ಹೋದವು. ನಮ್ಮ ಪೀಳಿಗೆಯವರು ನಾಟಕಗಳನ್ನು ನೋಡುವ ವೇಳೆಗೆ ವಿಲಾಸಿ ರಂಗಭೂಮಿ, ಹವ್ಯಾಸಿ ರಂಗಭೂಮಿ, ಸಮುದಾಯ, ಹೊಸ ಪ್ರಯೋಗಗಳು, ಬಂಡಾಯ ಹೀಗೆ ಹಲವು ಆಯಾಮಗಳು ತೆರೆದುಕೊಂಡಿದ್ದವು. ಹಾಗಾಗಿ ೧೯೭೮ರಲ್ಲಿ ಬರೆದಿರುವ ಈ ಪುಸ್ತಕದಲ್ಲಿರುವ ವಸ್ತು ಒಂದು ರೀತಿಯಲ್ಲಿ ಬೌದ್ಧಿಕ ಸಂಗ್ರಹಾಲಯದಂತೆ ವರ್ಣರಂಜಿತವಾಗಿ ಕಂಡಿದ್ದು ಅಚ್ಚರಿಯೇನಲ್ಲ. ಅಭಿನಯ, ನಟನೆ, ಅಭಿನಯ ಕೌಶಲ್ಯ ಮತ್ತು ಇವುಗಳ ಸುತ್ತ ಇರುವ ಕೆಲವು ಸೂಕ್ಷ್ಮ ಸಂಗತಿಗಳನ್ನು ಗ್ರಹಿಸುವುದರಲ್ಲಿ ನನಗೆ ನೆರವಾಗಿರುವುದು ಗುರುದತ್, ಸತ್ಯಜಿತ್ ರೇ, ಮೃಣಾಲ್ ಸೆನ್, ಶ್ಯಾಂ ಬೆನಗಲ್, ಋತ್ವಿಕ್ ಘಟಕ್, ಕನ್ನಡದ ಗಿರೀಶ್ ಕಾರ್ನಾಡ್, ಕಾಸರವಳ್ಳಿ, ಬಿ ವಿ ಕಾರಂತ್, ಅಡೂರ್ ಗೋಪಾಲಕೃಷ್ಣನ್, ಬಸು ಭಟ್ಟಾಚಾರ್ಯ, ಹೃಷಿಕೇಷ್ ಮುಖರ್ಜಿ ಹೀಗೆ ಹಲವು ವಿಶಿಷ್ಟ ಚಿತ್ರ ನಿರ್ದೇಶಕರ ಮೂಲಕ.
ಈ ಚೌಕಟ್ಟಿನಿಂದ ಹೊರನಿಂತು ಅಭಿನಯ ಮತ್ತು ನಟನಾ ಕೌಶಲ್ಯದ ಬಗ್ಗೆ ಕೆಲವು ಸೂಕ್ಷ್ಮ ಒಳಸುಳಿಗಳನ್ನು ಗ್ರಹಿಸಲು “ ಕರ್ನಾಟಕ ರಂಗಭೂಮಿ ” ಬಹಳಷ್ಟು ನೆರವಾಗುವುದಂತೂ ಹೌದು. ರಂಗಭೂಮಿಯ ಇತಿಹಾಸವನ್ನು ಹಂತಹಂತವಾಗಿ ಅನಾವರಣಗೊಳಿಸುತ್ತಾ ಹೋಗುವ ಡಾ. ರಂಗನಾಥ್ ಅವರ ಬರಹದ ಶೈಲಿ ಮತ್ತು ಆ ಪರಿಭಾಷೆ ಒಂದು ಹೊಸ ಅನುಭವವನ್ನೇ ಕೊಡುತ್ತದೆ. ಓದು ಮುಂದುವರೆಸಲು ನೆರವಾಗುವಂತೆ ಪುಟದ ತುದಿಯನ್ನು ಮಡಚಿದರೆ ಮುರಿದುಹೋಗುವಷ್ಟು ಹಳೆಯ ಪ್ರತಿ. ನಾನು ಪೂರ್ತಿ ಓದುವಷ್ಟರಲ್ಲಿ ಕೆಲವು ಪುಟಗಳು ಹರಿದುಹೋದದ್ದೂ ಉಂಟು. ೧೯೭೮ರ ನಂತರ ಈ ಕೃತಿ ಮರುಮುದ್ರಣವಾಗಿದೆಯೋ ಇಲ್ಲವೋ ತಿಳಿಯದು. ಆಗಿಲ್ಲ ಎಂದರೆ ಅದು ಕನ್ನಡ ರಂಗಭೂಮಿಯ ದುರಂತ ವೈಫಲ್ಯ ಎಂದೇ ಹೇಳಬೇಕಾಗುತ್ತದೆ.
ಶ್ರೀಯುತ ರಂಗನಾಥರು ಕರ್ನಾಟಕದ ರಂಗಭೂಮಿಯ ಇತಿಹಾಸವನ್ನು ೧೭ನೆಯ ಶತಮಾನದ ದೊರೆ ಚಿಕ್ಕದೇವರಾಜರ (೧೬೭೨-೧೭೦೪) ಕಾಲಘಟ್ಟದಿಂದ ೧೯೭೮ರ ಹವ್ಯಾಸಿ-ಬಂಡಾಯ ನಾಟಕದವರೆಗೂ ಅನಾವರಣಗೊಳಿಸುತ್ತಾ ಬರುತ್ತಾರೆ. ಚಿಕ್ಕದೇವರಾಜರ ಆಸ್ಥಾನದಲ್ಲಿದ್ದ ಸಿಂಗಾರಾರ್ಯ ಎಂಬ ಕವಿ ರಚಿಸಿದ “ ಮಿತೃವಿಂದಾ ಗೋವಿಂದ ” ಎಂಬ ನಾಟಕದಿಂದ ೧೯೭೮ರ ಲಂಕೇಶರ “ ಕ್ರಾಂತಿ ಬಂತು ಕ್ರಾಂತಿ ” ನಾಟಕದವರೆಗೂ ಕನ್ನಡ ರಂಗಭೂಮಿ ನಡೆದು ಬಂದ ಹಾದಿ, ಅದು ಸೃಷ್ಟಿಸಿದ ಕಲಾ ಪ್ರೌಢಿಮೆ, ನಟನಾ ಕೌಶಲ್ಯ ಮತ್ತು ರೂಪಿಸಿದ ಹಲವು ಆಯಾಮಗಳ ರಂಗಭೂಮಿ ಇವೆಲ್ಲವನ್ನೂ ಈ ಪುಸ್ತಕದಲ್ಲಿ ಕಣ್ಣಿಗೆ ಕಟ್ಟುವಂತೆ ವಿವರಿಸಲಾಗಿದೆ. ಎಷ್ಟೋ ಕಡೆ ಓದುತ್ತಾ ಓದುತ್ತಾ ನಾಟಕವನ್ನು ನೋಡುತ್ತಿದ್ದೇವೆ ಎನ್ನುವ ಭಾವನೆ ಮೂಡುವಂತೆ ಹಲವು ನಾಟಕಗಳ ವಿವರಣೆಯೂ ಈ ಕೃತಿಯಲ್ಲಿದೆ.
ಜಾನಪದ ರಂಗಭೂಮಿಯ ಉಗಮ, ಬೆಳವಣಿಗೆ ಮತ್ತು ವಿಸ್ತಾರ ಮತ್ತು ಅದರ ಒಳಸುಳಿಗಳು ಹೊಸ ಲೋಕವೊಂದನ್ನು ತೆರೆಯುವಂತಿವೆ. ಭೂತಾರಾಧನೆ, ಬಯಲು ಸೀಮೆಯ ನೃತ್ಯ ನಾಟಕ, ಹಳೆಯ ಮೈಸೂರಿನ ಜಾನಪದ ನಾಟಕ ಪ್ರಕಾರಗಳು, ಗೊಂಬೆಯಾಟ, ತೊಗಲುಬೊಂಬೆ, ಯಕ್ಷಗಾನ, ತಾಳಮದ್ದಳೆ, ಮೂಡಲಪಾಯ ಅಥವಾ ದೊಡ್ಡಾಟ, ಸಣ್ಣಾಟ ಹೀಗೆ ಜಾನಪದ ರಂಗಭೂಮಿ ಬೆಳೆದುಬಂದ ಹಾದಿ, ಅದು ಪ್ರಭಾವಿಸಿದ ಇತರ ರಾಜ್ಯಗಳು ಮತ್ತು ಅದರ ಪ್ರಭಾವದಿಂದಲೇ ಮೂಡಿದ ಹೊಸ ರಂಗಪ್ರಯೋಗಗಳು, ಇಂದಿನ, ಅಂದರೆ ಕೃತಿ ರಚನೆಯ ಸಂದರ್ಭದ, ಯಕ್ಷಗಾನದ ಸ್ವರೂಪ, ಕಾರಂತಜ್ಜರ ಕೊಡುಗೆ ಹೀಗೆ ಒಬ್ಬ ರಂಗಭೂಮಿಯ ವಿದ್ಯಾರ್ಥಿಗೆ ಅಧ್ಯಯನದ ಸಾಗರವನ್ನೇ ಉಣಬಡಿಸುತ್ತಾರೆ ರಂಗನಾಥರು.
ಇನ್ನು ೨೦೦ ಪುಟಗಳಷ್ಟು ಹರವಿನ ವೃತ್ತಿರಂಗಭೂಮಿಯ ಇತಿಹಾಸವನ್ನು ಓದುತ್ತಾ ಹೋದಂತೆ ನಮ್ಮ ಕಣ್ಣೆದುರು ಗರುಡ ಸದಾಶಿವರಾಯರು, ವರದಾಚಾರ್ಯರು, ರಾಘವಾಚಾರ್ಯರು, ಡಂಬಳ ಹುಚ್ಚಾಚಾರ್ಯರು, ಶಾಂತಕವಿ ಎಂದೇ ಹೆಸರಾಗಿದ್ದ ಸಕ್ಕರಿ ಬಾಳಾಚಾರ್ಯರು, ವಾಮನರಾವ್ ಮಾಸ್ತರು, ಶಿರಹಟ್ಟಿ ವೆಂಕೋಬರಾಯರು, ಹೀಗೆ ಹತ್ತಾರು ಅಪೂರ್ವ ಕಲಾವಿದರ ಜೀವನ ಚರಿತ್ರೆಯೇ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. ಹೆಚ್ಚಾಗಿ ಸ್ತ್ರೀ ಪಾತ್ರವನ್ನೇ ಮಾಡುತ್ತಿದ್ದ ಡಂಬಳ ಹುಚ್ಚಾಚಾರ್ಯರು “ ಹಲವಾರು ವೇಳೆ ಹಗಲು ಹೊತ್ತಿನಲ್ಲಿ ಸೀರೆಯುಟ್ಟು ಹೆರಳು ಮುಡಿದು ಸ್ತ್ರೀಯರ ಕಾರ್ಯಕ್ರಮಗಳಿಗೆ, ಅರಿಶಿನ ಕುಂಕುಮಕ್ಕೆ ಹೋಗಿಬಿಡುತ್ತಿದ್ದರಂತೆ, ಯಾರಿಗೂ ಸುಳಿವು ಸಿಕ್ಕುತ್ತಿರಲಿಲ್ಲ ” ಎಂದು ಬಣ್ಣಿಸುವಾಗ ನಗೆ ಹೊಮ್ಮಿದ ಹಾಗೆಯೇ ಅಚ್ಚರಿಯ ಭಾವವೂ ಮೂಡುತ್ತದೆ. ಇಂತಹ ಪ್ರಸಂಗಗಳು ಇಡೀ ಕೃತಿಯಲ್ಲಿ ನೂರಾರು ಸಂಖ್ಯೆಯಲ್ಲಿರುವುದು ಕೃತಿಯ ವೈಶಿಷ್ಟ್ಯ.
ಗರುಡ ಸದಾಶಿವರಾಯರು ಮತ್ತು ವರದಾಚಾರ್ಯರ ಬಗ್ಗೆ ಮತ್ತು ಶಾಂತಕವಿಗಳ ಬಗ್ಗೆ ತುಸು ವಿಸ್ತೃತವಾಗಿಯೇ ಬರೆದಿರುವ ರಂಗನಾಥರು ಈ ಅಪೂರ್ವ ಕಲಾವಿದರು ಯಶಸ್ಸಿನ ಉತ್ತುಂಗಕ್ಕೇರಿ, ವಿಜೃಂಭಿಸಿ ಕರ್ನಾಟಕದ ರಂಗಭೂಮಿಯ ವೈಭವವನ್ನು ಅನ್ಯ ರಾಜ್ಯಗಳಿಗೂ ಹರಡಿದುದನ್ನು ಅದ್ಭುತವಾಗಿ ವಿವರಿಸುತ್ತಾರೆ. ಹಾಗೆಯೇ ಈ ಕಲಾವಿದರು ತಮ್ಮ ಕೊನೆಯ ದಿನಗಳಲ್ಲಿ ಎದುರಿಸಿದ ಬಡತನ, ಹಣಕಾಸಿನ ಕೊರತೆ ಇವುಗಳನ್ನೂ ಹೇಳುತ್ತಾರೆ. ಕರ್ನಾಟಕದಲ್ಲಿ ಮೈಸೂರು ಒಡೆಯರ ರಾಜಾಶ್ರಯದಲ್ಲಿ ಬೆಳೆದ ನಾಟಕ ರಂಗ, ಇದನ್ನು ಹೊರತಾಗಿಯೇ ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸ್ವತಂತ್ರವಾಗಿ ರೂಪುಗೊಂಡ ವೃತ್ತಿ ರಂಗಭೂಮಿ ಮತ್ತು ಈ ವೃತ್ತಿ ರಂಗಭೂಮಿ ಮರಾಠಿ ರಂಗಭೂಮಿಯಿಂದ ಪಡೆದ ಪ್ರೇರಣೆ ಹಾಗೆಯೇ ಮರಾಠಿ ರಂಗಭೂಮಿಯ ಮೇಲೆ ಬೀರಿದ ಪ್ರಭಾವ ಎರಡನ್ನೂ ಕೃತಿಯಲ್ಲಿ ವಿಹಂಗಮವಾಗಿ ವಿವರಿಸಲಾಗಿದೆ. ಗುಬ್ಬಿ ವೀರಣ್ಣ ಮತ್ತು ಸುಬ್ಬಯ್ಯ ನಾಯ್ಡು ಅವರ ಸ್ವತಂತ್ರ ರಂಗಭೂಮಿಯ ಪ್ರಯೋಗಗಳೂ ಹಲವು ಪೀಳಿಗೆಗಳಿಗೆ ಮಾರ್ಗದರ್ಶಕವಾಗುವಂತಹವು.
ವಿಶೇಷವಾಗಿ ಎ ಬಿ ವರದಾಚಾರ್ಯರ ಪ್ರಯೋಗಗಳು ಮತ್ತು ಅವರು ಕಟ್ಟಿ ಬೆಳೆಸಿದ ರತ್ನಾವಳಿ ನಾಟಕ ಮಂಡಳಿಯ ಏಳು ಬೀಳುಗಳನ್ನೂ ಕೃತಿಯಲ್ಲಿ ಮನಮುಟ್ಟುವಂತೆ ವಿವರಿಸಲಾಗಿದೆ. ಅಷ್ಟೇ ಆಸಕ್ತಿ, ಕುತೂಹಲ ಮತ್ತು ಅಭಿರುಚಿಯನ್ನು ಬೆಳೆಸುವಂತಹ ವಿವರಣೆಯನ್ನು ಗರುಡ ಸದಾಶಿವರಾಯರ ರಂಗಪಯಣದಲ್ಲಿ ಕಾಣಬಹುದು. ತಮ್ಮ ಕೊನೆಯ ದಿನಗಳಲ್ಲಿ ಸನ್ಯಾಸ ಸ್ವೀಕರಿಸಿ ಪ್ರಭೋದಾನಂದರಾಗಿದ್ದರೂ, ಆ ಇಳಿವಯಸಿನಲ್ಲೂ ನಾಟಕದ ಗೀಳು ಬಿಡದೆ ಮುಂದುವರೆದ ಸದಾಶಿವರಾಯರ ರಂಗಶ್ರದ್ಧೆ ಎಲ್ಲ ಪೀಳಿಗೆಗಳಿಗೂ ಮಾರ್ಗದರ್ಶಕವಾಗಬೇಕು. ಅಭಿನಯ ಎಂದರೆ ಗರುಡರ ನಿಘಂಟಿನಲ್ಲಿ ಅನುಭವದ ಚಿತ್ರಣ ಎಂದು ಹೇಳುವ ಕೃತಿಕಾರರು ಒಂದು ಪ್ರಸಂಗವನ್ನು ನೆನಪಿಸುತ್ತಾರೆ. ಅದು ಹೀಗಿದೆ :
“ಎಚ್ಚಮನಾಯಕ ನಾಟಕದ ತಾಲೀಮು ನಡೆಯುತ್ತಿರುತ್ತದೆ. ಗರುಡರು ನಾಟ್ಯಾಚಾರ್ಯ ಪೀಠದಲ್ಲಿ ನಿರ್ದೇಶಕರಾಗಿ ಕುಳಿತಿರುತ್ತಾರೆ. ಆಗಲೇ ಅವರಿಗೆ ೬೦ ಮೀರಿದ ವಯಸ್ಸು. ನಾಟಕದ ನಾಯಕ ಒಂದು ದೃಶ್ಯದಲ್ಲಿ ‘ ನನಗೆ ರೋಮಾಂಚನವಾಗುತ್ತಿದೆ ’ ಎಂದು ಹೇಳುತ್ತಾ ಮೈ ಸೆಟೆಸಿ, ಕೈಬೀಸಿ ಉಗ್ಗಡಿಸಿದಾಗ, ಗರುಡರು ಕೈ ಎತ್ತಿದರು. “ ಬಾ ಇಲ್ಲಿ ಹಾಗೆ ಹೇಳಿದಾಗ ನಿನಗೆ ನಿಜವಾಗಿ ರೋಮಾಂಚನವಾಯಿತೇ ? ” ಎಂದು ಕೇಳಿದಾಗ ಆ ನಟ ತಬ್ಬಿಬ್ಬಾಗುತ್ತಾನೆ. “ ರೋಮಾಂಚನವನ್ನೇ ಅನುಭವಿಸದೆ ಹಾಗೆ ಆ ಮಾತನ್ನು ಹೇಳಿದರೆ ಅಭಿನಯ ಸಹಜವಾದೀತೇ, ಪ್ರೇಕ್ಷಕರು ನಂಬುತ್ತಾರೆಯೇ ? ” ಎಂದು ಹೇಳುತ್ತಾ, ಇಲ್ಲಿ ನೋಡು ನಾನು ಆ ಮಾತು ಆಡುತ್ತೇನೆ ಎಂದು ಹೇಳಿ ಮೊಣಕಾಲಿನ ಮೇಲಿದ್ದ ಪಂಚೆಯನ್ನು ಇನ್ನೂ ಮೇಲೆತ್ತಿಕೊಂಡು “ ನನಗೀಗ ರೋಮಾಂಚನವಾಗುತ್ತಿದೆ ” ಎಂದು ಹೇಳುತ್ತಾರೆ. ಅವರು ಧ್ವನಿ ಉಗ್ಗಡಿಸಿದಾಗ ಅವರ ಮೈತುಂಬ ಮುಳ್ಳು ಎದ್ದಿತು. ನಿಂತ ರೋಮರಾಶಿಯನ್ನು ಮಲಗಿಸುವ ಸಲುವಾಗಿ ಕಾಲ ಮೇಲೆ ಕೈಗಳನ್ನು ಸವರಿ ಮತ್ತೆ ಮತ್ತೆ ಆರು ಬಾರಿ ಹಾಗೆ ಮಾಡಿ ತೋರಿಸುತ್ತಾರೆ. ಪ್ರತಿಬಾರಿಯೂ ಮೈರೋಮ ಎದ್ದು ನಿಂತಿತು ” ಎಂದು ಈ ಪ್ರಸಂಗವನ್ನು ರಂಗನಾಥರು ನೆನಪಿಸುತ್ತಾರೆ.(ಪುಟ ೨೨೭).
ಇದು ಒಂದೆಡೆ ಗರುಡರ, ಅನುಭವ ಮತ್ತು ಅನುಭಾವದ ಅಭಿನಯ ಕೌಶಲ್ಯದ ದರ್ಶನವಾದರೆ ಮತ್ತೊಂದೆಡೆ ರಂಗನಾಥರ ಬರಹದ ಶೈಲಿಯ ವೈಶಿಷ್ಟ್ಯವೂ ಇಲ್ಲಿ ಎದ್ದು ಕಾಣುತ್ತದೆ. ಹೀಗೆ ವೃತ್ತಿ ರಂಗಭೂಮಿಯ ಹಲವು ದೃಷ್ಟಾಂತಗಳನ್ನು ನಮ್ಮೆದುರು ತೆರೆದಿಡುವ ರಂಗನಾಥರು ಓದುಗರನ್ನು ಶತಮಾನದಷ್ಟು ಹಿಂದಕ್ಕೆ ಕರೆದೊಯ್ದುಬಿಡುತ್ತಾರೆ. ನಟನೆ, ಅಭಿನಯ, ಅಭಿನಯ ಕೌಶಲ, ಪರಕಾಯ ಪ್ರವೇಶದ ಅನುಭಾವ ಮುಂತಾದ ಕಲ್ಪನೆಗಳನ್ನೇ ಅರಿಯದ ಇಂದಿನ ಬಹುತೇಕ ಎಲ್ಲ ಸಿನಿಮಾ ನಟರೂ ಇಂತಹ ಕೃತಿಯನ್ನಾದರೂ ಒಮ್ಮೆ ಓದಿದರೆ ತಮ್ಮ ಹೆಸರುಗಳ ಹಿಂದಿನ ಬಿರುದಾವಳಿಗಳ ಸಾರ್ಥಕತೆಯ ಬಗ್ಗೆ ಯೋಚಿಸಲು ಸಾಧ್ಯವಾಗಬಹುದು. ನಾಯಕ ಅಥವಾ ಹೀರೋ ಎನ್ನುವ ಪದವಿಗೂ, ಪ್ರಬುದ್ಧ ನಟನೆಗೂ ಇರುವ ಅಂತರವನ್ನು ಆಗಲಾದರೂ ಅರಿಯಲು ಸಾಧ್ಯವಾಗಬಹುದು.
ಕೊನೆಯದಾಗಿ ವಿಲಾಸಿ ಅಥವಾ ಹವ್ಯಾಸಿ ರಂಗಭೂಮಿಯ ಆಧುನಿಕ ಪರಿಕಲ್ಪನೆ, ಪಾಶ್ಚಿಮಾತ್ಯ ಪ್ರಭಾವ, ನೂತನ ಪ್ರಯೋಗಗಳು, ಇದರ ವಿಶಿಷ್ಟತೆಗಳು ಮತ್ತು ನ್ಯೂನತೆಗಳು, ಈ ಅವಧಿಯಲ್ಲಿ ಕರ್ನಾಟಕ ಕಂಡ ಅದ್ಭುತ ನಿರ್ದೇಶಕರು, ನಟರು, ಇತರ ಕಲಾವಿದರು , ನಿರ್ಮಾಪಕರು, ರಂಗಸಜ್ಜಿಕೆಯ ವೈವಿಧ್ಯತೆ ಮತ್ತು ರಾಷ್ಟ್ರೀಯ ನಾಟಕ ಶಾಲೆಯ ಪ್ರಭಾವ ಹೀಗೆ ಹೊಸ ತಲೆಮಾರಿನ ಹಲವು ವೈಶಿಷ್ಟ್ಯಗಳನ್ನು ರಂಗನಾಥರು ವಿಶ್ಲೇಷಿಸಿ, ಒರೆಹಚ್ಚಿ ನೋಡುತ್ತಾರೆ. ವಿಲಾಸಿ ರಂಗಭೂಮಿಯ ಏಳು ಬೀಳುಗಳನ್ನು ಗುರುತಿಸುವುದರೊಂದಿಗೆ ಆ ಕಾಲಘಟ್ಟದ ಸಾಮಾಜಿಕ ಪಲ್ಲಟಗಳ ಹಿನ್ನೆಲೆಯಲ್ಲಿ ರೂಪುಗೊಂಡ ಹಲವು ನಾಟಕಗಳನ್ನು ಸ್ಥೂಲವಾಗಿ ಪರಿಚಯಿಸುವ ಮೂಲಕ ಕರ್ನಾಟಕ ರಂಗಭೂಮಿ ಕೃತಿ ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ.
ನನಗೆ ದೊರೆತಿರುವುದು ೧೯೭೮ರ ಮುದ್ರಣ. ನಂತರದಲ್ಲಿ ಮರುಮುದ್ರಣವಾಗಿಲ್ಲ ಎನ್ನುವುದು ನನಗೆ ದೊರೆತಿರುವ ಮಾಹಿತಿ. ಮತ್ತೊಂದು ಮುದ್ರಣ ಆಗಿರಲೂ ಸಾಧ್ಯ. ಹಾಗೊಮ್ಮೆ ಇಲ್ಲ ಎಂದಾದರೆ ಈಗಲಾದರೂ ಇರು ಮರುಮುದ್ರಣಕ್ಕೆ ಅರ್ಹವಾದ ಒಂದು ಮೇರು ಕೃತಿ. ಕೇವಲ ರಂಗಭೂಮಿಯ ಇತಿಹಾಸ ಮಾತ್ರವೇ ಅಲ್ಲ, ಕರ್ನಾಟಕದ ಜಾನಪದ ಸಂಸ್ಕೃತಿಯ ಪರಿಚಯವೂ ಇಲ್ಲಿದೆ ಹಾಗೆಯೇ ಅಭಿನಯ ಎನ್ನುವ ಒಂದು ಕಲಾ ಪ್ರಕಾರದ ಇತಿಹಾಸದ ಅನಾವರಣ ಇದೆ. ಇಂದಿನ ರಂಗಭೂಮಿಯ ಕಲಾವಿದರಿಗೆ ಮಾತ್ರವಲ್ಲದೆ, ಚಿತ್ರರಂಗದಲ್ಲಿರುವ ನಟರಿಗೂ “ ಪ್ರಬುದ್ಧ ನಟನೆ ” ಎಂದರೇನು, ಅಭಿನಯ ಎಂದರೇನು, ಪರಕಾಯ ಪ್ರವೇಶದ ಅರ್ಥವೇನು, ಪರದೆಯ ಮೇಲಿನ ಪಾತ್ರಕ್ಕೂ ಚಿತ್ರಮಂದಿರದಲ್ಲಿನ ಪ್ರೇಕ್ಷಕರಿಗೂ ಇರುವ ಸಂಬಂಧವೇನು ಇವೆಲ್ಲಕ್ಕೂ ಈ ಕೃತಿಯಲ್ಲಿ ಸೂಕ್ತ ಉತ್ತರ ದೊರೆಯುತ್ತದೆ.
ಇಂತಹ ಅಮೂಲ್ಯ ಕೃತಿಯನ್ನು ನೀಡಿದ ಕಲಾಸುರುಚಿ ಮತ್ತು ಭದ್ರಪ್ಪನವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತಾ, ನನಗೆ ತಿಳಿದ ಮಟ್ಟಿಗೆ, ನನ್ನದಲ್ಲದ ಒಂದು ಕ್ಷೇತ್ರವನ್ನು ಕುರಿತ ಕೃತಿಯ ಬಗ್ಗೆ, ನನಗೆ ತಿಳಿದಂತೆ ಬರೆದಿದ್ದೇನೆ. ನನ್ನ ವಿವರಣೆಯಲ್ಲಿ ಏನಾದರೂ ತಪ್ಪುಗಳಿದ್ದರೆ ಅನುಭವಸ್ಥರು ಕ್ಷಮಿಸಬೇಕು. ವಿಶ್ವರಂಗ ಭೂಮಿ ದಿನದಂದು ಇದನ್ನು ಬರೆಯಬೇಕೆಂದೆನಿಸಿತು. ಹಾಗಾಗಿ ನಿಮ್ಮ ಮುಂದೆ,,,,,.
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..