ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಿಂಧು ರಾವ್ ಟಿ
ಇತ್ತೀಚಿನ ಬರಹಗಳು: ಸಿಂಧು ರಾವ್ ಟಿ (ಎಲ್ಲವನ್ನು ಓದಿ)

ಕೆ.ವಿ.ತಿರುಮಲೇಶ್ ಬರೆದಿರುವ ನಾಟಕ – ಕಲಿಗುಲ – ನನ್ನ ಓದು ಕೆ.ವಿ.ತಿರುಮಲೇಶರ ಜನ್ಮದಿನದ ನೆಪದಲ್ಲಿ ನಾವಷ್ಟು ಜನ ಅವರ ಕಥೆ, ಕವಿತೆ, ನಾಟಕ ಮತ್ತು ಅಂಕಣಗಳನ್ನ ಆರಿಸಿ ಓದಿ ಅದರ ಕುರಿತು ಸ್ಪಂದನೆ ಬರೆಯುವ ಎಂದು ಮಾತಾಡಿಕೊಂಡೆವು. ಅವರ ಐತಿಹಾಸಿಕ ನಾಟಕ ಕಲಿಗುಲ ನನ್ನ ಓದಿಗೆ ದಕ್ಕಿದಂತೆ ಇಲ್ಲಿ ಬರೆಯುತ್ತಿದ್ದೇನೆ. ಒಬ್ಬ ಸಾಮಾನ್ಯ ಓದುಗಳಾಗಿ, ನಾಟಕ ನೋಡುವ ಆಸಕ್ತಿ ಇರುವವಳಾಗಿ ನನಗೆ ಈ ನಾಟಕ ಹೇಗೆ ಒದಗಿತು ಎಂಬುದನ್ನ ಇಲ್ಲಿ ಬರೆಯುತ್ತಿದ್ದೇನೆ. ಇದು ನಾಟಕದ ವಿಮರ್ಶೆಯಲ್ಲ.

ಲೇಖಕರೇ ಹೇಳಿದ ಹಾಗೆ ಇದು ಐತಿಹಾಸಿಕ ಪಾತ್ರಗಳನ್ನ ಅವಲಂಬಿಸಿ ಲೇಖಕರ ಕಲ್ಪನೆಯ ಮೂಸೆಯಲ್ಲಿ ಪಾಕಗೊಂಡ ನಾಟಕ. ಇತಿಹಾಸವಲ್ಲ. ರೋಮ್ ಇತಿಹಾಸ ಮತ್ತು ಸಾಮ್ರಾಜ್ಯ ಶತಮಾನಗಳಿಂದ ಜಗತ್ತಿನಾದ್ಯಂತ ಸಾಹಿತ್ಯಕ್ಕೆ ಆಕರಗಳಾಗಿವೆ. ರೋಮ್ ಎಂಬ ಗಣತಂತ್ರ ನಮ್ಮ ಮನಸಲ್ಲಿ ಮೊದಲು ಕನಸಾಗಿ, ನಂತರ ಅಲ್ಲಿನ ದುರಂತದ ಅರಿವಲ್ಲಿ ದೂರದಲ್ಲಿ ಉರಿವ ದೀಪವಾಗಿ, ಕಥೆ ಕವಿತೆ ನಾಟಕಗಳ ಪಾತ್ರಗಳಲ್ಲಿ ನಮ್ಮ ಮನಕ್ಕೆ ಮತ್ತೆ ಹತ್ತಿರವಾಗಿ ಆಗೀಗ ಸಿಗುತ್ತಲೆ ಇರುತ್ತದೆ.

ಅಲ್ಬರ್ಟ್ ಕಮೂ ಬರೆದ ಕಲಿಗುಲ ನಾಟಕವನ್ನ ಡಿ.ಎ.ಶಂಕರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ತಿರುಮಲೇಶರು ಬರೆದ ಕಲಿಗುಲ ಅವರ ಸ್ವತಂತ್ರ ಕೃತಿ. ಅನುವಾದ ಅಲ್ಲ. ಈ ಕಲಿಗುಲ ಎಂಬ ಪಾತ್ರ ಕಾರ್ನಾಡರ ತುಘಲಕ್ ನಾಟಕಕ್ಕೆ, ಲಂಕೇಶರ ಗುಣಮುಖ ನಾಟಕಕ್ಕೆ ಸ್ಫೂರ್ತಿ ಎಂಬ ಮಾತನ್ನು ಹಿರಿಯ ಸಾಹಿತ್ಯಾಸಕ್ತರಿಂದ ಕೇಳಿ ತಿಳಿದಿದ್ದೇನೆ. ತಿರುಮಲೇಶರ ಕಥೆ, ಕವಿತೆ, ಮತ್ತು ಅಂಕಣಗಳನ್ನು ಓದಿದ ನನಗೆ ಅವರು ಯಾಕೆ ಈ ಪ್ರಾಚೀನ ರೋಮ್ ಪಾತ್ರವನ್ನು ಅವಲಂಬಿಸಿ ಕನ್ನಡದಲ್ಲಿ ನಾಟಕ ಬರೆದರು ಎಂಬ ಕುತೂಹಲದಿಂದ ಈ ಓದಿಗೆ ತೊಡಗಿದೆ. ಪ್ರಾಚೀನ ಐತಿಹಾಸಿಕ ಕೃತಿಗಳು ಭವ್ಯ ನೋಟವನ್ನು ಕಟ್ಟಿಕೊಟ್ಟರೂ ಹೆಚ್ಚಿನ ಸಲ ಅವನ್ನು ನಾವು ನಮ್ಮ ವರ್ತಮಾನಕ್ಕೆ ಹೊಂದಿಸುವಲ್ಲಿ ಸೋಲುತ್ತೇವೆ. ಚರಿತ್ರೆಯಲ್ಲಿ ಕ್ರೂರಿ ಮತ್ತು ವಿಕೃತ ದೊರೆಯೆಂದು ಹೆಸರಾದ ಕಲಿಗುಲ ಈಗ ಯಾಕೆ, ಇದನ್ನು ಓದಿ, ಅಥವಾ ನಾಟಕ ನೋಡಿ ಏನುಪಯೋಗ ಎಂಬ ಆಲೋಚನೆ ನನಗೆ ಸಹಜವಾಗಿ ಇತ್ತು. ಅಥವಾ ಇದಿನ್ನೊಂದು ಕಪ್ಪು ಚಿತ್ರಣವನ್ನು ಮನೋವೈಜ್ಞಾನಿಕ ವಿಶ್ಲೇಷಣೆಯಲ್ಲಿ ಬೆಳ್ಳಗಾಗಿಸುವ ರಚನಾತಂತ್ರವೋ ಎಂಬ ಅನುಮಾನ ಭರ್ ಪೂರ ಇತ್ತು.

ನಾಟಕವನ್ನು ನಿಧಾನವಾಗಿ ಮೂರುದಿನ ಓದಿದೆ. ಪುಟ್ಟ ನಾಟಕವೇ. ಆದರೆ ಅದರ ಹಂತಗಳನ್ನ ಒಂದೊಂದಾಗಿ ದಾಟಿದೆ. ಒಂದು ಅಪ್ಪಟ ಓದಿನ ಸುಖ ನನ್ನದಾಯಿತು. ಕ್ಲಪ್ತ ಮತ್ತು ನಿರ್ದಿಷ್ಟ ಮಾತುಗಳು, ಬಹಳ ಕಡಿದಾಗಿ ನಿರ್ಮಿಸಿದ ಪಾತ್ರಗಳು, ಹೆಚ್ಚು ವಿವರಣೆ ಬೇಡದ ಒಂದೆರಡು ಮಾತುಗಳಲ್ಲಿ (ಡಯಲಾಗುಗಳಲ್ಲೆ) ಓದುಗರ/ನೋಡುಗರ ಮನಕ್ಕೆ ಅರ್ಥವಾಗಿಬಿಡುವ ಪಾತ್ರಚಿತ್ರಣ, ಎಲ್ಲೂ ನಿಧಾನವೆನಿಸದೆ ಪಟಪಟನೆ ಸಾಗಿಬಿಡುವ ಏರುಗತಿಯ ಚಲನೆ, ಬಿಗಿಯಾದ ನಿರೂಪಣೆ ಬಹಳವೇ ಇಷ್ಟವಾಯಿತು. ರೋಮಿನ ಅಥವಾ ಇನ್ಯಾವ ಹಿನ್ನೆಲೆಯೂ ಇಲ್ಲದೆ ಇವತ್ತಿನ ನಮ್ಮ ವರ್ತಮಾನಕ್ಕೆ, ರಾಜಕೀಯಕ್ಕೆ, ಪಟಕ್ಕನೆ ಅಂಟಿಸಿಬಿಡಬಹುದಾದ ಕಥೆ ಈ ನಾಟಕದಲ್ಲಿ ಬಂದಿದೆ. ಭಾರತವಿರಬಹುದು, ಅಮೆರಿಕವಿರಬಹುದು, ಮಧ್ಯ ಪೂರ್ವ ರಾಷ್ಟ್ರಗಳಿರಬಹುದು, ಯೂರೋಪಿನಲ್ಲಿರಬಹುದು ಎಲ್ಲೆಡೆಯ ಅಧಿಕಾರಶಾಹಿಗೂ ಇದು ಅಪ್ಲೈ ಆಗುತ್ತದೆ. ಬರಿದೆ ರಾಜಕೀಯ ಅಧಿಕಾರವಲ್ಲದೆ ಇದನ್ನು ಕಾರ್ಪೋರೇಟ್ ವಲಯಕ್ಕೂ ವಿಸ್ತರಿಸಬಹುದು, ನಾರ್ಸಿಸಿಷ್ಟಿಕ್ ಗುಣಗಳನ್ನ ಮೈಗೂಡಿಸಿಕೊಳ್ಳುತ್ತಿರುವ ನಮ್ಮ ದಿನದಿನದ ಬದುಕಿಗೂ ಈ ನಾಟಕ ಕನ್ನಡಿ ಹಿಡಿಯುತ್ತದೆ ಅನಿಸುತ್ತದೆ. ಒಬ್ಬ ಕ್ರೂರಿ ವಿಕೃತ ರಾಜನ ಕಪ್ಪು ಬಿಳುಪು ಚಿತ್ರಣ ಅಥವಾ ಮನಃಶಾಸ್ತ್ರೀಯ ವಿಶ್ಲೇಷಣೆಯಾಗಿದ್ದರೆ ಇದು ಹತ್ತರಲ್ಲಿ ಹನ್ನೊಂದಾಗುವ ನಾಟಕವೇ. ಆದರೆ ಆ ಯಾವ ದಾರಿಯನ್ನೂ ಹಿಡಿಯದೆ ಲೇಖಕರು ಇಲ್ಲೊಂದು ನಿರ್ಮಮ ತಂತ್ರವನ್ನ ಅನುಸರಿಸಿದ್ದಾರೆ. ಅವರ ಆಳವಾದ ಚರಿತ್ರೆಯ ಓದು, ಜಾಗತಿಕವಾದ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ, ಮನುಷ್ಯ ಸ್ವಭಾವದ ಒಳನೋಟ, ಅಧಿಕಾರದಾಹದ ಹುನ್ನಾರಗಳು, ಅಧಿಕಾರವೆಂಬ ಆಲ್-ಎನ್ ಕಂಪಾಸಿಂಗ್ ಯಶಸ್ಸು ಮತ್ತು ದುರಂತ ಇದರ ಗಾಢ ಅನುಭವ ಈ ಎಲ್ಲವನ್ನೂ ತಿರುಮಲೇಶರು ಈ ನಾಟಕದಲ್ಲಿ ತಮ್ಮ ಭಾಷೆಯ ಲಾಲಿತ್ಯವನ್ನು ಬಳಸಿಕೊಂಡು ಬಹಳ ಮನದಟ್ಟುವಂತೆ ಬರೆದಿದ್ದಾರೆ. ಉದ್ದೂದ್ದ ಡಯಲಾಗುಗಳು, ಸಿಕ್ಕಾಪಟ್ಟೆ ಪಾತ್ರಗಳು ತುಂಬಿಸಿ ಇದು ಓದಲು ಕಷ್ಟ ಎಂದೆಲ್ಲ ಇದನ್ನು ಓದುವ ಮೊದಲು ಕೆಲವು ಮಾತುಗಳನ್ನು ಕೇಳಿದ್ದೆ. ನನಗೆ ಎಲ್ಲಿಯೂ ಆ ಅಡೆತಡೆಗಳು ಕಾಣಿಸಲಿಲ್ಲ. ಈಗಿನ ಕಾಲಮಾನದ ಟ್ರೆಂಡಾಗಿರುವ ಚುಟುಕಾದ ಚುರುಕ್ ಡಯಲಾಗುಗಳ ಎಲ್ಲರೂ ಎಲ್ಲರನ್ನೂ ಖುಷಿಪಡಿಸುವ ನಾಟಕ ಅಲ್ಲ ಇದು. ನಾಟಕವಾಗಿ ಪ್ರಯೋಗಿಸುವಾಗ ಕೂಡ ಇಲ್ಲಿರುವ ಕೆಲವು ಉದೂದ್ದ ಡಯಲಾಗುಗಳು ರಂಗಪ್ರಯೋಗಕ್ಕೆ ತಕ್ಕಂತೆ ಹೊಂದಿಸಲ್ಪಡುತ್ತವೆ ಎಂಬಲ್ಲಿ ನನಗೆ ಸಂಶಯವಿಲ್ಲ. ಅಧಿಕಾರ ಎಂಬುದು ಯಃಕಶ್ಚಿತ್ ಮನುಷ್ಯನನ್ನು ಎಲ್ಲಿಗೆ ಬೇಕಾದರೂ ಎತ್ತಬಲ್ಲದು ಎಂಬುದು ನಮಗೆ ದಿನದಿನವೂ ಅನುಭವಕ್ಕೆ ಬರುತ್ತಲೇ ಇರುತ್ತದೆ. ಎಷ್ಟೇ ಮೇಲೆತ್ತಿದರೂ ಅವರವರ ಸ್ವಭಾವಕ್ಕೆ ತಕ್ಕಂತೆ ಅವರು ಹೇಗೆ ತಮ್ಮನ್ನು ತಾವೇ ಕೆಳಕ್ಕೆ ತಳ್ಳಿಕೊಂಡಿರುತ್ತಾರೆ ಎಂಬುದೂ ಗೊತ್ತಾಗುತ್ತಲೆ ಇರುತ್ತದೆ. ಯಾವುದೋ ಗೇಟೊಂದರ ಸೆಕ್ಯುರಿಟಿ, ಟ್ರಾಫಿಕ್ ಪೋಲಿಸ್, ಅಥವಾ ಕೈಲಾಸಕ್ಕೆ ಹೋದಾಗ ಗರುಡನನ್ನು ಹಾವು ಗತ್ತಿನಿಂದ ವಿಚಾರಿಸಿಕೊಂಡ ಹಾಗಿನ ನಡವಳಿಕೆಗಳು ಎಲ್ಲೆಲ್ಲೂ ಕಂಡುಬರುತ್ತಲೆ ಇರುತ್ತವೆ.

ಇವನ್ನ ಮಹಾನ್ ಚರಿತ್ರೆಯ ಸಂದರ್ಭದಲ್ಲಿಟ್ಟು ಅಲ್ಲಿನ ವಿಕ್ಷಿಪ್ತ ಪಾತ್ರಗಳ ಮೂಲಕ ಹಾಯಿಸಿದಾಗ ನಾವು ವರ್ತಮಾನದ ವಿಪತ್ತನ್ನು ಈ ಐತಿಹಾಸಿಕ ನಾಟಕದ ಮೂಲಕವೇ ಕಾಣಬಹುದು ಎಂಬುದನ್ನು ತಿರುಮಲೇಶ್ ನಿರೂಪಿಸಿದ್ದಾರೆ. ಈ ನಾಟಕದ ರಂಗಪ್ರಯೋಗವನ್ನು ನೋಡಲು ನಾನು ಕಾತುರಳಾಗಿದ್ದೇನೆ. ನಾಟಕದ ಮೊದಲಿಗೆ ಬರುವ ಎರಡು ಭಜನೆ ಗುಂಪುಗಳು ನನಗೆ ಈ ಕಾಲದ ಎರಡು ಎಕ್ಸ್ ಟ್ರೀಂ ಗುಂಪುಗಾರಿಕೆಯನ್ನು ನೆನಪು ಮಾಡಿದವು. ಒಂದು ವಿನೋದ ವಿಡಂಬನೆಯಲ್ಲಿ ಆ ಚಿತ್ರಣ ಕಟ್ಟಿಕೊಡುತ್ತಲೇ ನಾವು ಮಾಡುತ್ತಿರುವುದರ ನಿರರ್ಥಕತೆಯನ್ನೂ ಈ ಸನ್ನಿವೇಶ ಮನದಟ್ಟು ಮಾಡುತ್ತದೆ. ರಾತ್ರಿಯಲ್ಲಿ ತೋಳದಂತೆ ಊಳಿಡುವ ಕಲಿಗುಲನ ಚಿತ್ರಣವನ್ನು ಅವನ ಪ್ರಜೆಗಳ ಕೈಕೆಳಗಿನವರ ಮಾತುಕತೆಗಳಲ್ಲಿ ಕಟ್ಟಿಕೊಡುತ್ತಾ ಅವನ ವಿಕ್ಷಿಪ್ತತೆಯನ್ನು, ಒಂಟಿತನವನ್ನೂ, ಈ ಸ್ವಭಾವಗಳು ಅವನಲ್ಲಿ ಪ್ರೇರೇಪಿಸುವ ಅಧಿಕಾರದಾಹವನ್ನು, ಮನ್ನಣೆಯ ದಾಹವನ್ನೂ, ದಾಹ ತಣಿಯುತ್ತಲೇ ಕಳೆದುಕೊಳ್ಳುವ ಭಯದಲ್ಲಿ ಅವನು ತನ್ನ ಪರಿವಾರವನ್ನೇ ಕಗ್ಗೊಲೆಗೀಡು ಮಾಡುವುದನ್ನೂ ಬಹಳ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ.

ಕೆಲವು ಚಿಕ್ಕ ಚಿಕ್ಕ ಸಂಭಾಷಣೆಗಳು ಇಲ್ಲಿ ನಿಮ್ಮ ಓದಿಗಾಗಿ. ಇಡೀ ನಾಟಕವನ್ನು ಓದಿದರೆ, ಅಥವಾ ಎಲ್ಲಾದರೂ ಪ್ರಯೋಗವಾದಾಗ ನೋಡಿದರೆ ಪೂರ್ಣ ಅನುಭವ ನಿಮ್ಮದಾಗುತ್ತದೆ. ಎಷ್ಟೊಂದು ಇಲ್ಲಗಳ ಲೋಕ ಈ ಅಂಧ ಜಗತ್ತು! ಯಾವುದೂ ಆಕಸ್ಮಿಕವಲ್ಲ ಎಲ್ಲವನ್ನೂ ವಿಧಿ ಬರೆದಿರುತ್ತದೆ, ಕೆಲವು ಸಲ ನಾನವನ್ನು ತಿದ್ದಿರುತ್ತೇನೆ ಫೆಸ್ಟಿನಾ ಲೆಂಟೆ… (ಧಾವಿಸು…ಆದರೆ ನಿಧಾನವಾಗಿ) ಮೇಲೆ ಹೇಗೋ ಹಾಗೆ ಕೆಳಗೆ, ಕೆಳಗೆ ಹೇಗೋ ಹಾಗೆ ಮೇಲೆ! ಕಾರ್ಪೆ ಡಿಯೆಮ್, ಫಿದಿತೆ ನೆಮಿನಿ… ಗಾಳಿಬಂದಾಗ ತೂರಿಕೋ.. ಯಾರನ್ನೂ ನಂಬಬೇಡ ಹಾವಿನ ಮುಂದಿರುವ ಕಪ್ಪೆ ಕುಪ್ಪಳಿಸಬಾರದು, ತೆವಳಬಾರದು, ಕಣ್ಣು ಆಚೀಚೆ ಹೊರಳಿಸಬಾರದು, ಸತ್ತಂತಿರಬೇಕು – ಕೆಲವು ಊನಗಳೇ ರಕ್ಷಣೆಗಳಾಗಿರುತ್ತವೆ. ರಾಜ ಸತ್ತರೂ ರಾಜ ಸಾಯುವುದಿಲ್ಲ. ಈ ನಾಟಕ ನಮ್ಮದೇ ದೇಶವನ್ನು, ಪರಿಸ್ಥಿತಿಯನ್ನು, ಪ್ರಗತಿಯ ಹೆಸರಿನಲ್ಲಿ ನಾವು ಕುರುಡಾಗಿ ಕುರಿಮಂದೆಗಳಂತೆ ನಡೆಯುತ್ತಿರುವುದನ್ನು, ಸ್ವಂತಿಕೆ ಮರೆತಿರುವುದನ್ನು, ಅಧಿಕಾರದಾಹವು ನಟಿಸಬಹುದಾದ ಬಹುರೂಪವನ್ನು ಅರ್ಥಮಾಡಿಸಲು ಬಹಳ ಸಮರ್ಥ ರೂಪಕಗಳನ್ನು ಕೊಟ್ಟಿದೆ. ಈ ಓದು ಕೊಟ್ಟ ಖುಷಿಯನ್ನು ರಂಗಪ್ರಯೋಗದ ಮೂಲಕವೂ ಪಡೆಯಲು ಕಾಯುತ್ತಿದ್ದೇನೆ.