ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಲ್ಲಾಗುವುದೆಂದರೆ

ಸ್ಮಿತಾ ಅಮೃತರಾಜ್
ಇತ್ತೀಚಿನ ಬರಹಗಳು: ಸ್ಮಿತಾ ಅಮೃತರಾಜ್ (ಎಲ್ಲವನ್ನು ಓದಿ)

ಸಾಗುವ ಆ ಹಾದಿಬದಿಯಲ್ಲಿ
ಅನಾದಿಯಿಂದ ಬಿದ್ದುಕೊಂಡ
ಆ ಪಾಟಿ ಬಂಡೆಗಲ್ಲುಗಳನ್ನು
ನೋಡಿ ಬಂದ ಮೇಲೆ ನಾನು
ತೀರಾ ಅಸ್ವಸ್ಥಳಾಗಿ ಕುಂತಿದ್ದೇನೆ.

ದೂರದಲ್ಲಿ ಬಂಡೆ ಸಿಡಿಯುತ್ತಿದೆ,
ಒಡೆಯುತ್ತಿದೆ , ಹೋಳಾಗುತ್ತಲೇ ಇದೆ
ಅಬ್ಬಾ! ಸದ್ದಿಗೆ ಗುಂಡಿಗೆಯೊಳಗೆ
ಗಂಟೆ ಹೊಡೆದುಕೊಳ್ಳುತ್ತಿದೆ

ಈಗೀಗ ಬೆಳ್ಳಗೆ, ಕೆಂಪನೆ ,ನುಣ್ಣಗೆ
ಹೊಳೆ ಹೊಳೆವ ಮನೆಯ ತಣ್ಣನೆ ನೆಲ
ಹಾಸುವಿಗೆ ಇಷ್ಟೆಲ್ಲಾ ಅನಿವಾರ್ಯವಂತೆ.

ಕಾಲದ ಕರುಣೆಗೂ, ಕಾಠಿಣ್ಯಕ್ಕೂ
ಬಂಡೆಗಲ್ಲಾಗುವ ಬಂಡೆಗೆ
ಹೃದಯವೇ ಇಲ್ಲವೆಂದು ಬಗೆದವರಿಗೆ
ಒಳಗಿನ ಮಿದು ಹೃದಯದ ಲಬ್ ಡಬ್ ಉಲಿತ ಕೇಳಿಸಿ ಇರುತ್ತದೆ.
ಅಹಲ್ಯ ಕಥೆ ಅವರಿಗೆ ಚೆನ್ನಾಗಿಯೇ
ಗೊತ್ತಿರುತ್ತದೆ.

ಒಂದೊಮ್ಮೆ ಮಾತಿನ ನಡುವೆ
ಗಂಟಲಿನಿಂದ ಒತ್ತಿ ಬಂದ
ಘನ ಭಾರವನ್ನು ಹೊತ್ತೇ..
ತೊಟ್ಟು ಹನಿ ಹನಿಸದೇ,
ನಾನೀಗ ಬಂಡೆಗಲ್ಲಾಗಿದ್ದೇನೆ
ಎಂದವಳು ಸಲೀಸಾಗಿ ಉತ್ತರಿಸಿದ ಮೇಲೆ
ನನ್ನ ಅನುಮಾನ ದಿಟವಾಗಿದೆ.

ಸದ್ದು ಎಲ್ಲೂ ,ಯಾವ ಕ್ಷಣದಲ್ಲೂ ಸ್ಫೋಟಗೊಳ್ಳಬಹುದು
ಹ್ಮಾಂ! ಇಲ್ಲೇ ಹತ್ತಿರದಲ್ಲೇ ಪದೇಪದೇ..
ಎದೆ ಗಟ್ಟಿಯಾಗುತ್ತಿದೆ..
ಕೈಕಾಲು ಮರಗಟ್ಟುತ್ತಿದೆ

ನಾನೂ… ಕಲ್ಲಾಗುತ್ತಿದ್ದೇನೆಯೇ..!