ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪರಿಮಳದ ಹಾದಿ

ಸ್ಮಿತಾ ಅಮೃತರಾಜ್
ಇತ್ತೀಚಿನ ಬರಹಗಳು: ಸ್ಮಿತಾ ಅಮೃತರಾಜ್ (ಎಲ್ಲವನ್ನು ಓದಿ)

ಬೇಸಗೆಯ ಬಿರುಬಿಸಿಲ ದಿನ
ಮೊದಲ ಹನಿಮಳೆ ಉದುರಿದ್ದಕ್ಕೆ
ಮಣ್ಣ ಕಣ್ಣೊಡೆದು ಘಮ ಅರಳಿಕೊಳ್ಳುವಾಗಲೆಲ್ಲಾ
ಧಾವಿಸಿ ಹೊರಬಾಗಿಲಲ್ಲಿ ನಿಂತು
ಇನ್ನಿಲ್ಲದಂತೆ ಅವಳು ಅದನ್ನು ಒಳಗೆಳೆದುಕೊಳ್ಳುವ
ವಿಸ್ಮಯಕ್ಕೆ ಕುತೂಹಲ ಹೆಚ್ಚಾಗುತ್ತದೆ
ಮಗಳಿಗೆ

ಮಣ್ಣಗಂಧವನ್ನ ಯಾವ ಅತ್ತರಿನ ಡಬ್ಬಿಗೂ
ತುಂಬಲಾಗಲಿಲ್ಲವಲ್ಲ ಈವರೆಗೂ
ಮತ್ತೂ
ಮುಟ್ಟಿದಾಗಲೆಲ್ಲಾ‌ ದೂಳು, ಕೆಸರು
ಪದೇ ಪದೇ ಬಗೆಬಗೆಯ
ಪರಿಮಳದ ಸೋಪು ತಿಕ್ಕಿ ಕೈ ಮೈ ತೊಳೆದುಕೊಳ್ಳುತ್ತೇವಲ್ಲ?

ಮತ್ತೆ ಮತ್ತೆ‌ ಮುಟ್ಟಿದರೆ ಎಲ್ಲವೂ
ಕೊಳೆಯಾಗುತ್ತದೆ,ಕಲೆಯಾಗುತ್ತದೆ
ಪರಿಮಳದ ಸೋಪೂ.. ಅತ್ತರಿನ ಹನಿಯೂ
ದಿನ ಕಳೆದರೆ ಘಮಲು ಕಳೆದುಕೊಳ್ಳುತ್ತದೆ
ಕೆಲವು ನೆತ್ತಿಗೇರಿ ಚಿತ್ತ ಕದಡಿ ಬಿಡುತ್ತದೆ

ಇಹಕ್ಕೂ ಪರಕ್ಕೂ ಲಗ್ಗೆಯಿಡುವ ಹಿತದ
ಕಂಪ‌ ಮೂಲ ಅರಸುವುದು
ತುಸು ಪ್ರಯಾಸವೇ ಸರಿ.

ಮಗೂ..
ಮೈಗಂಟಿದ ಪರಿಮಳವೂ
ಮನಸಾವರಿಸುವ ಪರಿಮಳವೂ
ಈ‌ ಪರಿಯದು ನೋಡು
ಅಂಟುವ ಮತ್ತು ಆವರಿಸುವ ಬೆಡಗ
ಬಿಡಿಸಿ ಹೇಳೆಂದರೆ..
ಸಾಧ್ಯವ ಹೇಳು?!