ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

೧.ಆತಂಕ

ಸ್ವಪ್ನದ ನೌಕೆ
ಬಂದಿದೆಯೆಂದರು
ನಾವು ನಂಬಲಿಲ್ಲ

ಊಟ ಮಾಡಿ
ಹೋಗಿ ನೋಡಿದರೆ
ಈಗ ತಾನೆ
ಹೊರಟೋಯಿತೆಂದರು
ನಾವು ನಂಬಲಿಲ್ಲ

ಆದರು ಒಂದು ಆತಂಕ
ವುಳಿಯಿತು
ಅಂದಿನಿಂದಲೂ ಅದು
ಕಾಡುತ್ತಿರುವುದು
ಏನೋ
ನಷ್ಟಗೊಂಡಂತೆ

೨.ಮುಂದೆ ಹಿಂದೆ

ಅವನು ಬರೆದುದನ್ನು
ಕಲವರು ಓದಿ
ಇಷ್ಟಪಡುತ್ತಾರೆ
ಕೆಲವರು
ಪರವಾಯಿಲ್ಲ ಎನ್ನುತ್ತಾರೆ
ಇನ್ನು ಕೆಲವರು
ಸತ್ತ ಜಿರಲೆಯನ್ನು
ಎತ್ತಿ ಬಿಸಾಕುವಂತೆ
ಕಿತ್ತೆಸೆಯುತ್ತಾರೆ

ಅವನೆಲ್ಲಿದ್ದಾನೆ
ಯಾರಿಗೂ ಗೊತ್ತಿಲ್ಲ
ಬಹುಶಃ
ದೂರದ ಒಂದು ಊರಿನಲ್ಲಿ

ಹಲ್ಲು ನೋವಿನಿಂದ ನರಳುತ್ತ
ಕನ್ನಡಿ ನೋಡಿಕೊಳ್ಳುತ್ತಿದ್ದ
ಕಣ್ಣುಗಳಾಗಿವೆ ಮೊಂಗೋಲಿಯನ್
ಸೀಳು
ಹ್ಹಾ ಚೆಂಗಿಷ್ ಖಾನ್
ಹ್ಹಾ ತೈಮೂರ್ ಲಾಂಗ್

ಭಯವಾಗುತ್ತದೆ
ಮುಂದೆ ನೋಡಲು ಮತ್ತು
ಹಿಂದೆ ತಿರುಗಲು

೩.ಬ್ಲೂ ವ್ಹೇಲ್

ಕಳೆದ ಸಲ ಕಂಡಾಗ
ಆಕ್ರ್ಟಿಕ್‍ನಲ್ಲಿತ್ತು

ಬ್ಲೂ ವ್ಹೇಲ್

ಈಗ
ಅಂಟಾಕ್ರ್ಟಿಕಾದಲ್ಲಿದೆ

ಧ್ರುವದಿಂದ ಧ್ರುವಕ್ಕೆ

ಆದರೆ
ಅದಕ್ಕವುಗಳ
ಸ್ಪೆಲ್ಲಿಂಗ್ ಕೂಡ ಗೊತ್ತಿಲ್ಲ
ಪಾಪ!

೪.ಒಂದು ಹಲಸಿನ ಹಣ್ಣಿನ ಹಂಬಲ

ಕೋಣನಿಗೆ ಆಶ್ಚರ್ಯ
ಇದೇನು ಎಲ್ಲೆಡೆ
ಹಬ್ಬದ ವಾತಾ
ವರಣ

ಬೆಳಿಗ್ಗೆಯೆ ಸ್ನಾನ ಭರ್ಜರಿ ಫಲಾಹಾರ
ಕೊರಳಿಗೆ ಚೆಂಡು
ಮಲ್ಲಿಗೆ ಹಾರ
ಕಪ್ಪು ಮೈಗೆ ಕುಂಕುಮ ನಾಮ
ಗುಡಿಗೆ ಪ್ರದಕ್ಷಿಣೆ ನೇಮ

ಆದರೆ ಯಾಕೀ ಪೂ
ಜಾರಿಯ ಕೈಯಲ್ಲಿ ಮಚ್ಚು
ಓಹೋ! ಸಿಹಿ ಹಲಸಿನ
ಹಣ್ಣಿನ ಕೊಚ್ಚು

ಅಷ್ಟರಲೇ ಹಾ
ರಿತು ಕೋಡು ಸಹಿತ
ಕೋಣನ ರುಂಡ
ಈಚೆಗೆ ಅದರ ರಣಭಾರದ ಮುಂಡ
ಎಲ್ಲೊ ಎಡವಟ್ಟು ಎಂದಿತು ಜೀವ