ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

ಒಬ್ಬರಿಗೊಂದೊಂದು ನೈನವೆ
ಬಹುಶಃ
ನಮಗೂ ನಮ್ಮದೊಂದು ನೈನವೆ

ಸಾವಿರ ವರ್ಷಗಳ ಹಿಂದಕ್ಕೊ
ಮುಂದಕ್ಕೊ
ಸಿನ್ ಸಿಟಿ ನೈನವೆ
ದೇವರು ಶಪಿಸಿದ ಸಿಟಿ
ಎಂದೆಂದಿಗೂ ನೀವು ಹಾಳಾಗಿ ಹೋಗಿ ಎಂದು
ದಿ ಅನ್‍ರೀಯಲ್ ಸಿಟಿ

ಗಲ್ಲಿ ಗಲ್ಲಿಯ ಹೊಕ್ಕು ನೋಡಿದರೆ ದಾರಿ ತಪ್ಪಿ ಕೆಲವು
ಬೇಕೆಂದೆ ಹಲವು
ಎರಡರ ಮಧ್ಯೆ ದಾರಿ
ಗೊತ್ತಾಗದೆ ಎಲ್ಲವು ಏನಾದರೊಂದನ್ನು
ಅಪ್ಪಿ ಇದು ಮನುಷ್ಯಾವಸ್ಥೆಯೆಂದು

ಚಿನಿವಾರಕಟ್ಟೆಯಲಿ ಚಿನಿವಾರ
ಎತ್ತಿ ಹಿಡಿದ ಸುತ್ತಿಗೆ ಹಾಗೇ ಇದೆ
ನೇಕಾರ ಬೀದಿಯಲಿ ಮಗ್ಗ ನೇಯುತ್ತ
ಲಾಳ ಅರ್ಧಕ್ಕೆ ನಿಂತಿದೆ
ತುರುಫ್ ಎಸೆಯಲು ಚೀಟಿಯೆತ್ತಿದ
ಇಸ್ಪೀಟಾಟಗಾರ
ಎಸೆಯದೇ ಇದ್ದಾನೆ
ಬಯಲಲ್ಲಿ ಮಕ್ಕಳೇ ಇಲ್ಲ

ನರ್ತನಶಾಲೆಯಲ್ಲಿ ಮೇಲೇರಿದ
ನರ್ತಕಿಯ ಲಂಗ ಕೆಳಗಿಳಿಯುವುದೆ
ಇಲ್ಲ
ಬೆರಗಾಗಿ ನೋಡುತ್ತ ನಿಂತವರು ಈಗ
ಸ್ಟಾಚ್ಯೂಸ್
ಎಲ್ಲವೂ ಸ್ಗಬ್ದ ಚಲನೆಯೇ ಇಲ್ಲ
ಯುಗ ನಿಂತಿತೇ ಇದು
ಅಂತ್ಯವೇ
ಅಷ್ಟಕ್ಕೂ ಇವರೇನು ಮಾಡಿದರು
ನಾವು ಮಾಡದ ಪಾಪ ದೇವರೇ
ನಿನ್ನ ಧಿಕ್ಕರಿಸಿದರು
ನಾವಾದರೆ ನಿನ್ನ ಇರವನ್ನೆ ತಿರಸ್ಕರಿಸಿದೆವು

ನಿರಂತರ ಚಲನೆಯಲ್ಲಿ ಬಿದ್ದೆವು