ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಣೇಶ್ ಭಟ್ ನೆಲೆಮಾವ್
ಇತ್ತೀಚಿನ ಬರಹಗಳು: ಗಣೇಶ್ ಭಟ್ ನೆಲೆಮಾವ್ (ಎಲ್ಲವನ್ನು ಓದಿ)

ಹೆಚ್ ಜಿ ವೆಲ್ಸ್ ಅವರು ಆಂಗ್ಲ ಭಾಷೆಯಲ್ಲಿ ಬರೆದ ‘ದಿ ಸ್ಟೋಲನ್ ಬ್ಯಾಸಿಲಸ್’ ( The Stolen Bacillus ) ಅನ್ನುವ ಕತೆಯ ಕನ್ನಡಾನುವಾದ​

“ಇದರೊಳಗೆ ಕಾಣಿಸುತ್ತಿರುವುದೇ ಕಾಲರಾ ಸೋಂಕಿಗೆ ಕಾರಣವಾಗುವ ಬ್ಯಾಸಿಲಸ್ ರೋಗಾಣು” ಎನ್ನುತ್ತ ವಿಜ್ಞಾನಿ ಸೂಕ್ಷ್ಮದರ್ಶಕದತ್ತ ಕೈ ತೋರಿದ.

ಅದನ್ನು ಕೇಳಿದ ಆ ಬಿಳುಚಿದ ಮುಖದ ವ್ಯಕ್ತಿ ಸೂಕ್ಷ್ಮದರ್ಶಕದೊಳಗೆ ಇಣುಕಿದ. ಇಂಥದ್ದೆಲ್ಲಾ ಉಪಕರಣಗಳನ್ನು ಬಳಸಿ ಅಭ್ಯಾಸವಿಲ್ಲದ ಅವನಿಗೆ ಏನೂ ಸ್ಪಷ್ಟವಾಗಿ ಕಾಣಿಸಲಿಲ್ಲ. ” ನನಗೇನೂ ಕಾಣುತ್ತಿಲ್ಲ” ಎಂದ ಆತ. “ಇದೋ ಈ ಸ್ಕ್ರೂವನ್ನು ತಿರುಗಿಸಿ ನಿನ್ನ ದೃಷ್ಟಿಗೆ ಸರಿಯಾಗಿ ಹೊಂದಿಸಿಕೋ” ಎಂದ ವಿಜ್ಞಾನಿ.

“ಆಹಾ! ಈಗ ಸ್ಪಷ್ಟವಾಗಿದೆ, ಗುಲಾಬಿ ಗೀಟುಗಳಂತೆ ಕಾಣುತ್ತಿದೆ” ಎಂದ ಆ ವ್ಯಕ್ತಿ ಮಾತು ಮುಂದುವರೆಸಿದ. “ಕಣ್ಣಿಗೆ ಕಾಣದ ಈ ಜೀವಿ ಇಡೀ ದೇಶವನ್ನೇ ಮಕಾಡೆ ಮಲಗಿಸಬಲ್ಲದು! ಅದ್ಭುತ!”. ಸೂಕ್ಷ್ಮದರ್ಶಕದಿಂದ ತಲೆಯೆತ್ತಿ ಆತ ಕೇಳಿದ, “ಈ ರೋಗಾಣುಗಳು ಬದುಕಿವೆಯಾ? ಇವು ಅಪಾಯಕಾರಿಯಾ?”

“ಇಲ್ಲ, ಅವೆಲ್ಲ ಸತ್ತ ರೋಗಾಣುಗಳು” ಎಂದ ವಿಜ್ಞಾನಿ, “ಭೂಮಿಯ ಮೇಲಿನ ಎಲ್ಲ ರೋಗಾಣುಗಳನ್ನೂ ಸಾಯಿಸಲು ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿತ್ತು” ಎಂದು ನಿಡುಸುಯ್ದ.

“ಜೀವಂತ ರೋಗಾಣುಗಳನ್ನು ನಿಮ್ಮ ಲ್ಯಾಬಿನಲ್ಲಿ ಸಂಗ್ರಹಿಸುವುದಿಲ್ಲ ಅನಿಸುತ್ತದೆ, ಅಲ್ಲವೇ? ಎಂದು ಕೇಳಿದ ಆ ಬಿಳುಚಿದ ವ್ಯಕ್ತಿ.

“ಓಹ್, ಹಾಗೇನೂ ಇಲ್ಲ. ನನ್ನ ಸಂಶೋಧನೆಗೆ ಜೀವಂತ ರೋಗಾಣುಗಳೂ ಬೇಕು” ಎನ್ನುತ್ತಾ ವಿಜ್ಞಾನಿ ಸಣ್ಣ ಬಾಟಲಿಯೊಂದನ್ನು ತಿಜೋರಿಯಂತಹ ಕಪಾಟಿನಿಂದ ಹೊರತೆಗೆದು ತೋರಿಸಿ ಹೇಳಿದ, “ಇದರೊಳಗಿರುವುದು ಜೀವಂತ ರೋಗಾಣು.”

ಅದನ್ನು ಕಂಡೊಡನೆ ಆ ವ್ಯಕ್ತಿಯ ಬಿಳುಚಿದ ಮುಖದಲ್ಲೊಂದು ತೃಪ್ತಿಯ ಭಾವ ಮಿಂಚಿ ಮರೆಯಾಯಿತು. ಆ ಬಾಟಲಿಯನ್ನೇ ನುಂಗುವಂತೆ ದಿಟ್ಟಿಸುತ್ತ ಆತ ಹೇಳಿದ, “ಬಹಳ ಅಪಾಯಕಾರಿ ವಸ್ತುವನ್ನು ಇಟ್ಟುಕೊಂಡಿದ್ದೀರಾ!”. ಆ ವ್ಯಕ್ತಿಯ ಮುಖದಲ್ಲಿದ್ದ ವಿಲಕ್ಷಣ ಸಂತಸವನ್ನು ವಿಜ್ಞಾನಿ ಗಮನಿಸಿದ. ಆ ಅಪರಿಚಿತ ವ್ಯಕ್ತಿ ವಿಜ್ಞಾನಿಯ ಒಬ್ಬ ಹಳೆಯ ಗೆಳೆಯನ ಪರಿಚಯ ಹೇಳಿಕೊಂಡು ಅವನ ಬಳಿ ಬಂದಿದ್ದ. ಅವನ ಇಳಿಬಿದ್ದ ಉದ್ದನೆಯ ಕೂದಲು, ಅಂಜಿಕೆಯ ವರ್ತನೆ , ಇದೆಲ್ಲ ವಿಜ್ಞಾನಿಗೆ ವಿಚಿತ್ರವಾಗಿ ಕಂಡಿತ್ತು. ಪ್ರಯೋಗಶಾಲೆಯಲ್ಲಿ ತನ್ನ ಸಹೋದ್ಯೋಗಿಗಳ ಹೊರತಾಗಿ ಸಾಮಾನ್ಯ ವ್ಯಕ್ತಿಯನ್ನು ವಿಜ್ಞಾನಿ ಕಂಡಿದ್ದು ಇದೇ ಮೊದಲು. ಇಂತಹ ಭಯಾನಕ ರೋಗಾಣುಗಳ ಬಗ್ಗೆ ಆಸಕ್ತಿ ಇರುವುದು ಸಹ ಸಹಜವೇ ತಾನೇ ಎಂದು ಭಾವಿಸಿ ವಿಜ್ಞಾನಿ ಸುಮ್ಮನಾಗಿದ್ದ.

ಆ ಬಾಟಲಿಯನ್ನು ಕೈಯಲ್ಲಿ ಹಿಡಿದು ಯೋಚನೆಯಲ್ಲಿ ಮುಳುಗಿದ ವಿಜ್ಞಾನಿ ಹೇಳತೊಡಗಿದ, ” ನಿಜ, ಇದು ಬಹಳ ಅಪಾಯಕಾರಿಯೇ ಹೌದು. ಬಾಟಲಿಯಲ್ಲಿ ಬಂಧಿಯಾದ ಮಹಾಮಾರಿ ಇದು. ಇಂತಹ ಒಂದು ಒಂದು ಸಣ್ಣ ಬಾಟಲಿಯನ್ನು ಕುಡಿಯುವ ನೀರಿನ ಮೂಲಕ್ಕೆ ಬೆರೆಸಿದರೂ ಸಾಕು, ಕಣ್ಣಿಗೆ ಕಾಣದ ಈ ಯಃಕಶ್ಚಿತ್ ಕ್ರಿಮಿ ನದಿ, ತೊರೆ, ಹಳ್ಳಗಳನ್ನು ಸೇರಿ ವೃದ್ಧಿಯಾಗಿ, ಇಡೀ ನಗರವನ್ನು ಸಾವಿನ ತೆಕ್ಕೆಗೆ ದೂಡುತ್ತದೆ. ಸಾವು, ನಿಗೂಢವಾದ ಭಯಾನಕ ಸಾವು. ನೋವು, ಹತಾಶೆ ತುಂಬಿದ ಸಾವು, ಇಡೀ ನಗರವನ್ನು ಆವರಿಸುತ್ತದೆ. ಈ ಕ್ರಿಮಿ ನಗರದ ಬೀದಿ ಬೀದಿಗಳಿಗೆ, ಮನೆ ಮನೆಗೆ ನುಗ್ಗಿ ಜನರನ್ನು ಬಲಿ ಪಡೆಯುತ್ತದೆ, ಮಕ್ಕಳು – ಮುದುಕರು ಎಂಬ ಬೇಧವಿಲ್ಲದೆ. ನಾವಿದನ್ನು ತಡೆಯುವಷ್ಟರಲ್ಲಿ ಊರೇ ಸ್ಮಶಾನವಾಗಿದೆ ಹೋಗುತ್ತದೆ.” ಎಂದು ಮಾತು ನಿಲ್ಲಿಸಿದ ವಿಜ್ಞಾನಿ ಕ್ಷಣಕಾಲ ತಡೆದು ಹೇಳಿದ, ” ಆದರೆ ಇಲ್ಲಿ ಈ ರೋಗಾಣುಗಳು ಭದ್ರವಾಗಿರುವುದರಿಂದ ಏನೂ ಅಪಾಯವಿಲ್ಲ”

ಆ ವ್ಯಕ್ತಿ ಸರಿ ಎಂಬಂತೆ ತಲೆ ಆಡಿಸಿದ. ಅವನ ಕಂಗಳಲ್ಲಿ ಹೊಳಪು ತುಂಬಿತ್ತು. ಗಂಟಲನ್ನು ಸರಿಪಡಿಸಿಕೊಳ್ಳುತ್ತಾ ಆತ ಹೇಳಿದ “ಈ ಅರಾಜಕತೆ ಹರಡಲು ಗಲಭೆ ಮಾಡುತ್ತಿದ್ದಾರಲ್ಲ ನೀಚರು, ಅವರೆಲ್ಲ ಎಷ್ಟು ಮೂರ್ಖರು ನೋಡಿ. ಬಾಂಬು, ಗನ್ನುಗಳಂತಹ ಅಸ್ತ್ರ ಬಳಸುತ್ತಿದ್ದಾರೆ.ಅದರ ಬದಲು ಈ ರೋಗಾಣುವಿನಂತಹ ಭಯಂಕರ ಅಸ್ತ್ರವೇ ಲಭ್ಯವಿರುವಾಗ…..”

ಅಷ್ಟರಲ್ಲಿ ಕೋಣೆಯ ಬಾಗಿಲ ಬಳಿ ಸದ್ದಾಯಿತು. ಬಾಗಿಲು ತೆರೆದು ವಿಜ್ಞಾನಿಯ ಬಳಿ ಆತನ ಹೆಂಡತಿ ಹೇಳಿದಳು “ನಿಮ್ಮ ಬಳಿ ಸ್ವಲ್ಪ ಮಾತಾಡುವುದಿತ್ತು.”

ವಿಜ್ಞಾನಿ ಕೋಣೆಯಿಂದ ಹೊರಹೋಗಿ ಮಾತನಾಡಿ ಬರುವಷ್ಟರಲ್ಲಿ ಆ ವ್ಯಕ್ತಿ ತನ್ನ ಗಡಿಯಾರ ನೋಡುತ್ತ ಹೇಳಿದ “ಓಹ್, ಸಮಯ ಸರಿದದ್ದೇ ಗೊತ್ತಾಗಲಿಲ್ಲ ನೋಡಿ. ನಾಲ್ಕು ಗಂಟೆಗೆ ಹನ್ನೆರಡೇ ನಿಮಿಷಗಳಿವೆ. ನಾನಾಗಲೇ ಹೊರಡಬೇಕಿತ್ತು ನೀವು ಹೇಳುತ್ತಿದ್ದ ವಿಷಯ ಎಷ್ಟು ಆಸಕ್ತಿಕರವಾಗಿತ್ತೆಂದರೆ ಅದರಲ್ಲೇ ಮಗ್ನನಾಗಿ ಬಿಟ್ಟೆ. ಇನ್ನೂ ತಡ ಮಾಡುವಂತಿಲ್ಲ. ನಾನಿನ್ನು ಹೊರಡುತ್ತೇನೆ. ನಾಲ್ಕು ಗಂಟೆಗೆ ಒಬ್ಬರನ್ನು ಭೇಟಿ ಮಾಡುವುದಿದೆ. ನಿಮ್ಮ ಸಮಯಕ್ಕಾಗಿ ಧನ್ಯವಾದ” ಎನ್ನುತ್ತ ಆತ ಕೋಣೆಯಿಂದ ಹೊರನಡೆದ.

ಬಾಗಿಲವರೆಗೂ ಬಂದು ಆತನನ್ನು ಬೀಳ್ಕೊಟ್ಟ ವಿಜ್ಞಾನಿ ಹಿಂತಿರುಗುವಾಗ ಯೋಚನೆಯಲ್ಲಿ ಮುಳುಗಿದ. “ಆತ ಆ ರೋಗಾಣುಗಳನ್ನು ಬಳಸಬಹುದಾದ ಬಗ್ಗೆ ಹೇಳಿದ್ದು, ಅವುಗಳಲ್ಲಿ ಅವನ ಆಸಕ್ತಿ ಭಯ ಹುಟ್ಟಿಸುವಂತಿದೆ” ಎಂದು ವಿಜ್ಞಾನಿ ಯೋಚಿಸುತ್ತಿರುವಾಗಲೇ ಅವನ ಮನಸ್ಸಿನಲ್ಲಿ ಆಲೋಚನೆಯೊಂದು ಸಿಡಿಲಿನಂತೆ ಎರಗಿತು. ಒಮ್ಮೆಲೇ ಪ್ರಯೋಗಶಾಲೆಯ ಕೋಣೆಗೆ ಓಡಿ ಮೇಜಿನ ಮೇಲೆ ರೋಗಾಣುವಿನ ಬಾಟಲಿ ಇದೆಯೇ ಎಂದು ನೋಡಿದ. ಮೇಜು ಖಾಲಿಯಾಗಿತ್ತು. ತನ್ನ ಕಿಸೆಗಳಲ್ಲೆಲ್ಲಾ ತಡಕಾಡಿದ. ಕೂಡಲೇ ಕೋಣೆಯಿಂದ ಹೊರ ಓಡುತ್ತ ಹೆಂಡತಿಯ ಹೆಸರೆತ್ತಿ ಕೂಗಿದ “ಮಿನ್ನಿ, ನೀನು ಈಗಷ್ಟೇ ನನ್ನನ್ನು ಕರೆಯಲು ಬಂದಾಗ ನನ್ನ ಕೈಯಲ್ಲಿ ಯಾವುದಾದರೂ ಬಾಟಲಿ ಕಂಡೆಯಾ?”

ಅರೆಕ್ಷಣ ತಡೆದು ಹೆಂಡತಿಯ ಉತ್ತರ ಬಂತು,” ಇಲ್ಲವಲ್ಲ, ನಿಮ್ಮ ಕೈಯಲ್ಲಿ ಏನೂ ಇರಲಿಲ್ಲ”

ಗದ್ದಲ ಕೇಳಿದ ಮಿನ್ನಿ ಗಾಬರಿಯಾಗಿ ಕಿಟಕಿ ತೆರೆದು ನೋಡಿದರೆ, ರಸ್ತೆಯಲ್ಲಿ  ಆಕೆಯ ಗಂಡ ಸನ್ನಿ ಹಿಡಿದವನಂತೆ ಕುದುರೆ ಗಾಡಿಯೊಂದರ ಕಡೆಗೆ ಓಡುತ್ತಿದ್ದ , ಬಿಳುಚಿದ ಮುಖದ ಒಬ್ಬ ವ್ಯಕ್ತಿ ಆ ಕುದುರೆ ಗಾಡಿಯನ್ನು ಹತ್ತುತ್ತಿದ್ದ.  ಓಡುವ ಭರದಲ್ಲಿ ಒಂದು ಚಪ್ಪಲಿ ಕಾಲಿನಿಂದ ಜಾರಿದರೂ  ಅದರೆಡೆಗೆ ಗಮನವಿರಲಿಲ್ಲ ವಿಜ್ಞಾನಿಗೆ.  “ಆ ದರಿದ್ರ ವಿಜ್ಞಾನದ  ಪ್ರಯೋಗಗಳನ್ನು ಮಾಡಿ, ಮಾಡಿ ಇವರಿಗೆ ಹುಚ್ಚೇ ಹಿಡಿದಿದೆ” ಎಂದು ತನ್ನಷ್ಟಕ್ಕೇ ಗೊಣಗಿಕೊಂಡು ಗಂಡನನ್ನು ಕೂಗಿ ಕರೆದಳು ಆಕೆ. ಕುದುರೆಗಾಡಿ ಹತ್ತುತ್ತಿದ್ದ  ಬಿಳುಚಿದ ವ್ಯಕ್ತಿ   ಓಡಿಬರುತ್ತಿರುವ ವಿಜ್ಞಾನಿಯನ್ನು ನೋಡಿ ಬೇಗ ಹೊರಡುವಂತೆ ಕುದುರೆ ಹೊಡೆಯುವವನಿಗೆ ಸೂಚಿಸಿದ. ಚಾಟಿಯ ಏಟು ತಿಂದ ಕುದುರೆಗಳು ಕೂಡಲೇ ನಾಗಾಲೋಟ ಹೂಡಿದವು. ಕೆಲವೇ ಕ್ಷಣಗಳಲ್ಲಿ ಕುದುರೆಗಾಡಿಯೂ ಅದರ ಹಿಂದೆ ಓಡುತ್ತಿರುವ ವಿಜ್ಞಾನಿಯೂ ತಿರುವಿನಾಚೆ ಮರೆಯಾದರು.

ಕಿಟಕಿಯ ಮುಂದೆ  ಅರೆನಿಮಿಷ ದಂಗಾಗಿ ನಿಂತ ಮಿನ್ನಿ ಸಾವರಿಸಿಕೊಂಡವಳೇ ಅವಸರವಸರವಾಗಿ ತನ್ನ ಪತಿಯ ಬೂಟು, ಟೋಪಿ ಮತ್ತು ಕೋಟುಗಳನ್ನು ಎತ್ತಿಕೊಂಡು ಮನೆಯಿಂದ ಹೊರ ಬಂದಳು. ಸುದೈವವಶಾತ್ ಅಲ್ಲೇ ಹತ್ತಿರದಲ್ಲಿ ಕುದುರೆ ಗಾಡಿಯೊಂದು ಹೋಗುತ್ತಿದ್ದರಿಂದ ಆ ಗಾಡಿಯವನನ್ನು ಕರೆದು ಗಾಡಿಯನ್ನು ಹತ್ತುತ್ತ ಹೇಳಿದಳು ” ಬೇಗ ಹೊರಡು, ಇದೇ ರಸ್ತೆಯಲ್ಲಿ ಬರಿಗಾಲಿನಲ್ಲಿ ಓಡುತ್ತಿರುವ ವ್ಯಕ್ತಿಯನ್ನು ತಲುಪಬೇಕು, ತುರ್ತಾಗಿ”. ಮರುಕ್ಷಣ ಗಾಡಿ ಓಡಿಸುವವ ಬೀಸಿದ ಚಾಟಿಯ ರುಚಿಗೆ ಕುದುರೆಗಳು ಶರವೇಗದಲ್ಲಿ ಓಡತೊಡಗಿದವು.

ರಸ್ತೆಯ ಪಕ್ಕದ ಹರಟೆ ಕಟ್ಟೆ ಒಂದರ ಬಳಿ ಕೆಲಸವಿಲ್ಲದ ನಾಲ್ಕಾರು ಪಡ್ಡೆಹುಡುಗರೂ ಕೆಲವು ಕುದುರೆಗಾಡಿಯವರೂ ಸೇರಿ ಹರಟೆ ಹೊಡೆಯುತ್ತಿರುವಾಗ ಅವರ ಗಮನ, ಬೆಚ್ಚಿಬೀಳಿಸುವ ವೇಗದಲ್ಲಿ ಬರುತ್ತಿದ್ದ ಕುದುರೆ ಗಾಡಿಯೆಡೆಗೆ ಹರಿಯಿತು . “ಅದು ಹ್ಯಾರಿಯ ಕುದುರೆಗಾಡಿ!” ಎಂದ ಗುಂಪಿನಲ್ಲಿ ಒಬ್ಬ, “ಅವನೇಕೆ ಭೂತ ಹಿಡಿದವನಂತೆ ಗಾಡಿ ಓಡಿಸುತ್ತಿದ್ದಾನೆ?” ಎಂದು ಮುಂದುವರೆದು ಕೇಳಿದ. ಅಷ್ಟರಲ್ಲಿ ಶರವೇಗದಲ್ಲಿ ಬಂದ ಮತ್ತೊಂದು ಗಾಡಿಯತ್ತ ಬೊಟ್ಟು ಮಾಡಿ ಇನ್ನೊಬ್ಬ ಹೇಳಿದ ,” ಅದು ಜಾರ್ಜ್! ಅವನು ಹ್ಯಾರಿಯ ಬೆನ್ನಟ್ಟಿದಂತಿದೆ.” ಮೂರನೆಯವ ಹೇಳಿದ, ” ಅವರೇನು ಸ್ಪರ್ಧೆಗೆ ಬಿದ್ದಿದ್ದಾರೋ?” ಅಷ್ಟರಲ್ಲಿ ಮೂರನೆಯ ಗಾಡಿಯೊಂದು ಧಾವಿಸಿ ಬರುತ್ತಿರುವುದು ಗುಂಪಿನವರ ಕಣ್ಣಿಗೆ ಬಿತ್ತು. ಅದನ್ನು ನೋಡಿ ಯಾವ ಗಾಡಿ ಈ ಸ್ಪರ್ಧೆಯಲ್ಲಿ ಗೆಲ್ಲಬಹುದು ಎಂದು ತಮ್ಮತಮ್ಮಲ್ಲೇ ಬಾಜಿ ಕಟ್ಟತೊಡಗಿದರು ಆ ಗುಂಪಿನವರು.

ಮೂರನೆಯ ಗಾಡಿಯಲ್ಲಿ ಕುಳಿತಿದ್ದ ಮಿನ್ನಿ ಭಯ, ಕಾತರತೆ ತುಂಬಿದ ಕಂಗಳಿಂದ ತನಗಿಂತ ಮುಂದೆ ಧಾವಿಸುತ್ತಿದ್ದ ಗಾಡಿಯೆಡೆಗೆ ನೋಡುತ್ತಿದ್ದಳು. ಆಕೆಯ ಪತಿ ಕುಳಿತಿದ್ದ ಆ ಎರಡನೇ ಗಾಡಿ ಪ್ರತಿಕ್ಷಣವೂ ಅವಳಿಂದ ದೂರ ಹೋಗುತ್ತಿತ್ತು.

ಮೂರರಲ್ಲಿ ಎಲ್ಲಕ್ಕಿಂತ ಮುಂದಿದ್ದ ಗಾಡಿಯಲ್ಲಿ ಮುದುರಿ ಕುಳಿತಿದ್ದ ಬಿಳುಚು ಮುಖದ ವ್ಯಕ್ತಿ. ಅವನ ಬಿಗಿಹಿಡಿತದಲ್ಲಿ ಬಂಧಿಯಾಗಿ ಕುಳಿತಿತ್ತು ವಿನಾಶದ ಅಸಂಖ್ಯ ಸಾಧ್ಯತೆಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡ ಪುಟ್ಟ ಬಾಟಲಿ.

ಅವನ ಮನಸ್ಸಿನ ತುಂಬ ಭಯ ಹಾಗೂ ಸಂತಸಗಳೆರಡೂ ಮಿಶ್ರವಾದ ವಿಚಿತ್ರ ಭಾವ. ತಾನೆಲ್ಲಿ ಸಿಕ್ಕಿಬೀಳುವೆನೋ ಎಂಬ ಭಯ ಒಂದೆಡೆಯಾದರೆ ತಾನೀಗ ಮಾಡಲಿರುವ ಕೃತ್ಯದ ಮಹತ್ವದಿಂದ ಬಂದ ಸಂತಸ ಇನ್ನೊಂದೆಡೆ. ಇದುವರೆಗೂ ಯಾವ ಅರಾಜಕತಾವಾದಿಗೂ ಇಂತಹ ಅದ್ಭುತ ಉಪಾಯ ಹೊಳೆದಿರಲಿಲ್ಲ. ಅರಾಜಕತಾವಾದಿಗಳಲ್ಲೇ ಕುಖ್ಯಾತರೆನಿಸಿಕೊಂಡಿದ್ದ ರಾವಚೋಲ್, ವ್ಯಾಲಿಯಂಟ್‌ನಂಥ ನಾಯಕರು ಮಾಡಿದ ಕೆಲಸಗಳಿಗಿಂತಲೂ ಹೆಚ್ಚು ಮಹತ್ತಾದ ಕಾರ್ಯ ಈಗ ತನ್ನ ಕೈಯಿಂದ ನಡೆಯಲಿದೆ ಎಂಬ ಯೋಚನೆಯಿಂದ ಉಕ್ಕಿಬಂದ ಆನಂದ ಅವನ ಭಯವನ್ನು ಮೀರಿಸುತ್ತಿತ್ತು. ಅವನೀಗ ಇಡೀ ಲಂಡನ್ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿಗೆ ತಲುಪಬೇಕಿತ್ತು ಅಷ್ಟೇ. ಅಲ್ಲಿ ನೀರಿನೊಂದಿಗೆ ಬಾಟಲಿಯಲ್ಲಿ ತುಂಬಿರುವ ರೋಗಾಣುವನ್ನು ಬೆರೆಸಿದರೆ ಸಾಕು, ಕೆಲಸ ಮುಗಿದಂತೆಯೇ ಲೆಕ್ಕ.

ಅತ್ಯಂತ ಚಾಣಾಕ್ಷತನದಿಂದ ಈ ಕೆಲಸದ ಯೋಜನೆಯನ್ನು ಅವನು ರೂಪಿಸಿದ್ದ. ವಿಜ್ಞಾನಿಯ ಗೆಳೆಯನೊಬ್ಬನ ಸುಳ್ಳು ಪರಿಚಯವನ್ನು ಹೇಳಿಕೊಂಡು ಬಂದಿದ್ದ. ಜೊತೆಯಲ್ಲೇ ನಕಲಿ ಪರಿಚಯ ಪತ್ರವನ್ನೂ ತಂದಿದ್ದ. ಆ ಮೂಲಕ ಒಂದು ಅದ್ಭುತ ಅವಕಾಶವನ್ನು ಸೃಷ್ಟಿಸಿಕೊಂಡಿದ್ದ. ಇನ್ನು ಮುಂದೆ ಅವನ ಹೆಸರು ಜನರ ಗುಂಡಿಗೆಯಲ್ಲಿ ಭಯ ಬಿತ್ತುತ್ತದೆ. ಹಿಂದೆ ಅವನನ್ನು ತುಚ್ಛ​ವಾಗಿ ಕಂಡವರು, ಅವನನ್ನು ತಿರಸ್ಕರಿಸಿದವರು, ಅವಮಾನಿಸಿದವರೆಲ್ಲರಿಗೂ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡುವ ಸುವರ್ಣ ಘಳಿಗೆ ಬಂದಿತ್ತು. ಅವನನ್ನೊಂದು ಕ್ಷುದ್ರ ಹುಳುವಿನಂತೆ ನಡೆಸಿಕೊಂಡಿದ್ದರು ಅವರೆಲ್ಲ. ಅವರಿಗೆಲ್ಲ ಪಾಠ ಕಲಿಸುವ ಸಮಯ ಇದೀಗ ಬಂದೊದಗಿತ್ತು.

ಅವನಿದ್ದ ಗಾಡಿ ಸಂತ ಆಂಡ್ರ್ಯೂಸ್ ರಸ್ತೆಯಲ್ಲಿ ಸಾಗುತ್ತಿರುವಾಗ ಕಿಟಕಿಯಿಂದ ಆಚೆ ಇಣುಕಿ ನೋಡಿದ ಆತ. ವಿಜ್ಞಾನಿ ಇದ್ದ ಕುದುರೆಗಾಡಿ ಐವತ್ತು ಗಜಗಳಷ್ಟೇ ದೂರದಲ್ಲಿ ಧಾವಿಸುತ್ತಿತ್ತು. ವಿಜ್ಞಾನಿಯ ಕೈಗೆ ತಾನು ಸಿಕ್ಕಿಬೀಳುವ ಸಾಧ್ಯತೆಯಿದೆ ಎಂದೆನಿಸಿ ತನ್ನ  ಕೋಟಿನ ಕಿಸೆಯೊಳಗೆ ತಡಕಾಡಿ ಅರ್ಧ ಪೌಂಡಿನಷ್ಟು ಹಣವನ್ನು ಗಾಡಿ ಓಡಿಸುತ್ತಿದ್ದವನೆಡೆಗೆ ಚಾಚಿ ಹೇಳಿದ, “ಹಿಂದಿರುವ ಗಾಡಿಯಿಂದ ತಪ್ಪಿಸಿಕೊಂಡರೆ ಇನ್ನಷ್ಟು ಕೊಡುವೆ”

ಗಾಡಿಯವ ಹಣವನ್ನು ಜೇಬಿಗಿಳಿಸಿದವನೇ ಲಗಾಮು ಬಿಗಿಮಾಡಿ ಚಾಟಿಯಿಂದ ಕುದುರೆಯ ಪಕ್ಕೆಗೆ ಬಾರಿಸಿದ. ಒಮ್ಮೆಲೆ ಹೆಚ್ಚಿದ ಕುದುರೆಯ ವೇಗದಿಂದ ಗಾಡಿ ಹೊಯ್ದಾಡಿತು. ಒಳಗಿದ್ದ ಅರಾಜಕತಾವಾದಿ ಆಯ ತಪ್ಪಿ ಮುಗ್ಗರಿಸಿದ. ಅವನ ಕೆಯಲ್ಲಿದ್ದ ಬಾಟಲಿ ಗಾಡಿಯ ತಳಕ್ಕೆ ಬಡಿದು ಚೂರಾಯಿತು. ಆದರಿಂದ ಚೆಲ್ಲಿದ ದ್ರವವನ್ನು ನೋಡಿ ಗರ ಬಡಿದಂತಾಯ್ತು ಅರಾಜಕತಾವಾದಿಗೆ. ಭಯದಿಂದ ಅರೆಚಣ ನಡುಗಿದವ ತನಗೆ ತಾನೇ ಸಮಾಧಾನ ಮಾಡಿಕೊಳ್ಳುವಂತೆ ಹೇಳಿದ ” ನನ್ನ ಯೋಜನೆಯ ಮೊದಲ ಬಲಿ ನಾನೇ. ಇರಲಿ ಚಿಂತೆಯಿಲ್ಲ. ನಾನಿನ್ನು ಹುತಾತ್ಮರ ಸಾಲಿಗೆ ಸೇರಬಹುದು. ಹುತಾತ್ಮನಾಗುವುದೇನು ಸಣ್ಣ ವಿಷಯವಲ್ಲ. ಆದರೆ ಅಸಹ್ಯವಾದ ಸಾವನ್ನು ಅನುಭವಿಸಬೇಕು. ಸಾಯುವುದರೊಳಗೆ ಎಷ್ಟು ನರಳಬೇಕೋ?!”

ಅಷ್ಟರಲ್ಲಿ ಏನೋ ಹೊಳೆದವನಂತೆ ತನ್ನ ಕಾಲ ಬಳಿ ಬಿದ್ದಿದ್ದ ಗಾಜಿನ ಚೂರುಗಳನ್ನಾತ ಪರೀಕ್ಷಿಸಿದ. ಒಂದು ಚೂರಿನಲ್ಲಿ ಕೆಲವು ಹನಿಗಳು ಇನ್ನೂ ಉಳಿದಿದ್ದವು. ಅದನ್ನೆತ್ತಿ ಆ ದ್ರವವನ್ನು ಗಂಟಲಿಗೆ ಸುರಿದುಕೊಂಡ. ತನಗೆ ಕಾಲರಾ ಸೋಂಕು ತಗುಲಿ ತನ್ನ ಮೂಲಕ ಬೇರೆಯವರಿಗೂ ರೋಗ ಹರಡುವುದ ಖಾತ್ರಿ ಮಾಡಿಕೊಳ್ಳಬೇಕಿತ್ತು ,ಯಾವ ಕಾರಣಕ್ಕೂ ತಾನು ಗೆಲ್ಲುವುದ ಖಚಿತ ಮಾಡಿಕೊಳ್ಳಬೇಕಿತ್ತು ಅವನಿಗೆ.

ತಾನಿನ್ನು ವಿಜ್ಞಾನಿಯ ಕೈಯಿಂದ ತಪ್ಪಿಸಿಕೊಂಡು ಓಡುವ ಅಗತ್ಯವಿಲ್ಲ ಎಂದು ಅವನಿಗೆ ಮನದಟ್ಟಾಯಿತು. ವೆಲ್ಲಿಂಗ್ಟನ್ ರಸ್ತೆಗೆ ಬಂದಾಗ ಗಾಡಿ ನಿಲ್ಲಿಸುವಂತೆ ಗಾಡಿಯವನಿಗೆ ಸೂಚಿಸಿ ಕೆಳಗಿಳಿದ. ಒಮ್ಮೆ ತಲೆ ತಿರುಗಿದಂತಾಗಿ ಹೆಜ್ಜೆ ತಡವರಿಸಿತು. ಅದೆಷ್ಟು ಬೇಗ ಈ ಕ್ರಿಮಿ ಪರಿಣಾಮ ಬೀರಲು ಆರಂಭಿಸಿದೆ ಎಂದುಕೊಳ್ಳುತ್ತಾ ವಿಜ್ಞಾನಿ ಬರುವುದನ್ನೇ ಕಾಯುತ್ತ ನಿಂತ.

“ನೀನಿನ್ನು ನನ್ನ ತಡೆಯಲಾರೆ,ಗೆಳೆಯಾ. ಕಾಲ ಮಿಂಚಿಹೋಗಿದೆ. ನಾನು ಆ ರೋಗಾಣು ಇದ್ದ ದ್ರವವನ್ನು ಕುಡಿದುಬಿಟ್ಟೆ ಇನ್ನು ಎಲ್ಲೆಡೆ ಕಾಲರಾ ಹರಡಲಿದೆ” ಎಂದು ಗಾಡಿಯಲ್ಲಿ ಕುಳಿತಿದ್ದ ವಿಜ್ಞಾನಿಗೆ ಹೇಳಿದ. ತೀಕ್ಷ್ಣವಾಗಿ ಅವನನ್ನೊಮ್ಮೆ ದಿಟ್ಟಿಸಿದ ವಿಜ್ಞಾನಿ. ಆ ನೋಟದಲ್ಲೊಂದು ರೀತಿಯ ಕುತೂಹಲವಿತ್ತು. ಏನನ್ನೋ ಹೇಳಹೊರಟ ವಿಜ್ಞಾನಿ ಸುಮ್ಮನಾಗಿ, ತನ್ನ ಗಾಡಿಯಿಂದ ಕೆಳಗಿಳಿಯಲು ಮುಂದಾದ. ಅವನು ಗಾಡಿಯಿಂದ ಕೆಳಗಿಳಿವ ಮೊದಲೇ ಅರಾಜಕತಾವಾದಿ ನಾಟಕೀಯವಾಗಿ ನಮಸ್ಕರಿಸಿ ವಾಟರ್ಲೂ ಸೇತುವೆ ಕಡೆಗೆ ಹೆಜ್ಜೆ ಹಾಕತೊಡಗಿದ. ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ ಜನರಿಗೆ ತನ್ನ ಮೈ ಸೋಕುವಂತೆ ಅರಾಜಕತಾವಾದಿ ನಡೆಯುತ್ತಿದ್ದ . ಅವನನ್ನೇ ನೋಡುತ್ತಾ ಕುಳಿತ ವಿಜ್ಞಾನಿಗೆ ತನ್ನ ಮಡದಿ ಮಿನ್ನಿ ಅಲ್ಲಿಗೆ ಬಂದು ನಿಂತ ಪರಿವೆಯೂ ಇರಲಿಲ್ಲ. ಅವಳ ಕೈಯಲ್ಲಿ ವಿಜ್ಞಾನಿಯ ಕೋಟು, ಟೋಪಿ, ಬೂಟುಗಳಿದ್ದವು. “ಓ, ಇದನ್ನೆಲ್ಲ ತಂದು ಒಳ್ಳೆಯ ಕೆಲಸ ಮಾಡಿದೆ.” ಎಂದು ಮಿನ್ನಿಗೆ ಹೇಳಿ ಮತ್ತೆ ಯೋಚನೆಯಲ್ಲಿ ಮಗ್ನನಾದ. ತನ್ನ ಗಂಡನ ವರ್ತನೆ ನೋಡಿ ಆತನಿಗೆ ಹುಚ್ಚು ಹಿಡಿದಿದೆ ಎಂಬ ಭಾವ ಮಿನ್ನಿಗೆ ಮತ್ತಷ್ಟು ಬಲವಾಯಿತು . ಗಾಡಿಯನ್ನೇರಿ ಕುಳಿತ ಮಿನ್ನಿ ತನ್ನ ಮನೆಯ ವಿಳಾಸವನ್ನು ಗಾಡಿಯವನಿಗೆ ಹೇಳಿ ಅಲ್ಲಿಗೆ ಹೋಗುವಂತೆ ಸೂಚಿಸಿದಳು. ಗಾಡಿ ತಾನು ಬಂದ ದಿಕ್ಕಿಗೆ ತಿರುಗಿ, ದೂರದಲ್ಲಿ ಕಪ್ಪುಚುಕ್ಕೆಯಂತೆ ಕಾಣುತ್ತಿದ್ದ ಅರಾಜಕತಾವಾದಿ ಮರೆಯಾದಾಗ ವಿಜ್ಞಾನಿ ನಗತೊಡಗಿದ. “ನಿನಗೆ ಗೊತ್ತೇ? ಈ ದಿನ ನಮ್ಮ ಮನೆಗೆ ಒಬ್ಬ ವ್ಯಕ್ತಿ ಬಂದಿದ್ದನಲ್ಲ? ಅವನೊಬ್ಬ ಅರಾಜಕತಾವಾದಿ. ಅಷ್ಟಕ್ಕೇ ಗಾಬರಿಯಾಗಬೇಡ, ವಿಷಯ ಇನ್ನೂ ಇದೆ. ನಿನಗೆ ನಾನು ಒಂದು ಹೊಸ ಬ್ಯಾಕ್ಟೀರಿಯಾದ ಬಗ್ಗೆ ಹೇಳಿದ್ದೆನಲ್ಲ? ಅದೇ, ಕೋತಿಗಳ ಮೈಮೇಲೆ ನೀಲಿ ಚುಕ್ಕಿಗಳು ಮೂಡುವಂತೆ ಮಾಡಿದ್ದ ರೋಗಾಣು, ಅದನ್ನು ತೋರಿಸಿ ಕಾಲರಾ ರೋಗಾಣು ಎಂದು ಅವನಿಗೆ ಸುಳ್ಳು ಹೇಳಿದೆ. ಅವನು ಅದನ್ನು ಕದ್ದು ಓಡಿಹೋದ. ನಗರದ ಜನ ಕುಡಿಯುವ ನೀರಿಗೆ ಅದನ್ನು ಬೆರೆಸಲು ಹೊರಟಿದ್ದ. ತನ್ನ ಉಪಾಯ ಕೈಗೂಡದು ಎಂದೆನಿಸಿ ಅದನ್ನು ತಾನೇ ಕುಡಿದುಬಿಟ್ಟ. ಅವನಿಗೆ ಏನಾಗುತ್ತೋ ಗೊತ್ತಿಲ್ಲ. ರೋಗಾಣುವಿನ ಪ್ರಯೋಗಕ್ಕೆ ಒಳಗಾಗಿದ್ದ ನಾಯಿ,ಗುಬ್ಬಿ,ಬೆಕ್ಕಿನ ಮರಿಗಳ ಮೈಬಣ್ಣ ನೀಲಿಯಾಗಿದ್ದನ್ನು ನೀನೇ ನೋಡಿದ್ದೆಯಲ್ಲ. ಅವನಿಂದ ಲಂಡನ್ ನಗರಕ್ಕೆ ಏನೂ ತೊಂದರೆ ಇಲ್ಲ. ನನಗಿರುವ ಒಂದೇ ಚಿಂತೆಯೆಂದರೆ ಅವನು ಕದ್ದಷ್ಟು ಪ್ರಮಾಣದಲ್ಲಿ ಆ ರೋಗಾಣುವನ್ನು ಮತ್ತೆ ಬೆಳೆಸುವ ಶ್ರಮ, ಖರ್ಚು ಮತ್ತೆ ನನ್ನ ಪಾಲಿಗೆ ಬಂತಲ್ಲಾ” ಎಂದು ನಗುತ್ತಾ ಹೇಳಿದ ವಿಜ್ಞಾನಿ.

*****

ಆಂಗ್ಲ ಮೂಲ : ಹೆಚ್ .ಜಿ. ವೆಲ್ಸ್

ಹರ್ಬರ್ಟ್ ಜಾರ್ಜ್ ವೆಲ್ಸ್ (೧೮೬೬-೧೯೪೬) ಅವರೊಬ್ಬಇಂಗ್ಲಿಷ್ ಬರಹಗಾರ. ಕಾದಂಬರಿಗಳು, ಸಣ್ಣ ಕಥೆಗಳು ಮತ್ತು ಸಾಮಾಜಿಕ ವ್ಯಾಖ್ಯಾನ, ಇತಿಹಾಸ, ವಿಡಂಬನೆ, ಜೀವನಚರಿತ್ರೆ ಮತ್ತು ಆತ್ಮಚರಿತ್ರೆ ಹೀಗೆ ಅನೇಕ ಪ್ರಕಾರಗಳಲ್ಲಿ ಸಮೃದ್ಧವಾಗಿ ಸಾಹಿತ್ಯವನ್ನು ರಚಿಸಿದ್ದಾರೆ. ವೆಲ್ಸ್ ಅವರು ಈಗ ಅವರ ವೈಜ್ಞಾನಿಕ ಕಾದಂಬರಿಗಳಿಗಾಗಿ ಹೆಚ್ಚು ಪ್ರಸಿದ್ಧರು. ಜೂಲ್ಸ್ ವೆರ್ನ್ ಮತ್ತು ಪ್ರಕಾಶಕ ಹ್ಯೂಗೋ ಗೆರ್ನ್ಸ್‌ಬ್ಯಾಕ್ ಜೊತೆಗೆ ಇವರನ್ನು "ವೈಜ್ಞಾನಿಕ ಕಾದಂಬರಿಯ ಪಿತಾಮಹ" ಎಂದು ಕರೆಯಲಾಗುತ್ತದೆ.