- ನನ್ನ ಈ…ಮನೆ - ಜುಲೈ 25, 2022
- ಬದುಕ ಮಧ್ಯ - ಆಗಸ್ಟ್ 22, 2021
- ಒಂದು ಸ್ವಗತ - ಜೂನ್ 30, 2021
ನನ್ನೊಳಗೊಬ್ಬ ಚಿಣ್ಣ ಕುಳಿತಿರುವ
ಬಣ್ಣತುಂಬುತ್ತ ನನ್ನೆಲ್ಲ ಖಾಲಿಗಳಲ್ಲಿ.
ಅರಳುವ ಬಣ್ಣ,ಬಣ್ಣದ ಹೂಗಳೊಟ್ಟಿಗೆ
ತಾನೂ ಅರಳಿ,ಬೆಳ್ಳಿನಗು ಸೂಸುತ್ತ
ಹಕ್ಕಿಗಳ ಚಿಲಿ,ಪಿಲಿ ದನಿಗೆ ತಾನೂ
ದನಿಗೂಡಿಸುತ್ತ ಸಂತಸ ಪಡುತ್ತಿರುವ-
ಪ್ರಶಾಂತ,ಸುಂದರ ನನ್ನೆಲ್ಲ……
ಮುಂಜಾವುಗಳಲ್ಲಿ.
ಕಣ್ ಸೆಳೆವ ಪ್ರಖರ ಬಣ್ಣಗಳ ಆಸ್ವಾದಿಸಿ,
ಸವಿಯಾದ ರಸಭರಿತ ಹಣ್ಣುಗಳ
ಆಸೆಪಟ್ಟು ಚಪ್ಪರಿಸಿ ಸವಿದಂತೆ ಕನಸು
ಕಂಡು ಬಾಯಿಚಪ್ಪರಿಸುತ್ತಿರುವ ತುಡುಗ
ಹುಡುಗ ನನ್ನೆಲ್ಲ ದಿಗಿಲ ಹಗಲುಗಳಲ್ಲಿ.
ಕಣ್ಣಮಿಟುಕಿಸಿ ಕರೆವ ಚುಕ್ಕಿ,ತಂಪು
ಹಾಲ್ದಿಂಗಳ ಚೆಲ್ಲಿ ಮನ ಮುದಗೊಳಿಸುವ
ಚಂದ್ರಮನೊಡನೆ ತಾನೂ ಒಂದುಗೂಡಿ
ಪುಟ,ಪುಟ ಪುಟಿವ ಬಾಲ ಈ…..ತುಂಟ
ನಗುತ್ತ,ನೆಗೆದಾಡುತ್ತ,ನಲಿದಾಡುತ್ತಿರುವ
ನನ್ನ ಅಸಂಖ್ಯ ಸಂಜೆ,ರಾತ್ರಿಗಳಲ್ಲಿ.
ನನ್ನೆಲ್ಲ ಇಂದುಗಳಲ್ಲಿ ನನ್ನೊಡನಿದ್ದು
ನಾಳೆಗಳ ಕದ ತಟ್ಟುತ್ತ…..ನಿತ್ಯ
ನನ್ನಂತರಂಗದಲ್ಲಿ ಗುಪ್ತಗಾಮಿನಿಯಾಗಿ
ಹರಿವ ಅಂತರ್ಗಂಗೆಯ ಹರಿವಿನಗುಂಟ
ಪುಟ್ಟ ಕಾಗದದದೋಣಿಯೊಂದ
ತೇಲಿಬಿಟ್ಟು ಖುಷಿಪಡುತ್ತಿರುವ,
ಆಟ ಆಡುತ್ತಿರುವ ಮುಗ್ಧ ಪುಟ್ಟ ಹುಡುಗ
ಪ್ರತಿ ಕ್ಷಣ ನನ್ನ ಕವಿತಯಲ್ಲದ ಕವಿತೆಗಳಲ್ಲಿ.
ನನ್ನೊಳಗಿರುವ ‘ನನ್ನ’ನ್ನೂ ಲೆಕ್ಕಿಸದೆ…!!!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ