ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಾಗಿನೆಲೆ ಅವರ ‘ಹಿಜಾಬ್’ ನ ಕುರಿತು..

ಡಾ. ಗುರುಪ್ರಸಾದ್ ಕಾಗಿನೆಲೆ ಅವರ ಬಹು ನಿರೀಕ್ಷಿತ ಪುಸ್ತಕ 'ಹಿಜಾಬ್' ಕುರಿತು ವಿಮರ್ಶಕ, ಬರಹಗಾರ ಶ್ರೀಧರ್.ಕೆ.ಬಿ ಅವರು ಬರೆದಿದ್ದು ಹೀಗೆ…

ಡಾ. ಗುರುಪ್ರಸಾದ್ ಕಾಗಿನೆಲೆ ಅವರ ಬಹು ನಿರೀಕ್ಷಿತ ಪುಸ್ತಕ ‘ಹಿಜಾಬ್’ ಕುರಿತು ವಿಮರ್ಶಕ, ಬರಹಗಾರ ಶ್ರೀಧರ್.ಕೆ.ಬಿ ಅವರು ಬರೆದಿದ್ದು ಹೀಗೆ…

ಅಮೇರಿಕ ದೇಶದ, ರಾಜ್ಯವೊಂದರ ಯಾವುದೊ ಮೂಲೆಯಲ್ಲಿರುವ ಸಣ್ಣ ಊರಿನೊಂದರಲ್ಲಿ ನಡೆಯುವ ಕಥೆ. ಬಹಳ ಹಿಂದೆಯೇ ನನ್ನ ಗಮನಕ್ಕೆ ಈ ಪುಸ್ತಕವು ಬಂದಿದ್ದರೂ, ವಲಸೆಬಂದ ಸೊಮಾಲಿ ಹೆಂಗಸರ ಜನನಾಂಗ ಊನದ (ಅವರ ಸಂಸ್ಕೃತಿಯ ಪ್ರಕಾರ) ಬಗ್ಗೆ ಬರೆದಿರುವ ಕಥೆಯೆಂಬ ಅಭಿಪ್ರಾಯಗಳನ್ನು ಓದಿದ್ದರಿಂದ, ‘ನಂತರ ಓದುವ’ ಎಂದು ಕಪಾಟಿನಲ್ಲಿ ಎತ್ತಿಟ್ಟಿದ್ದೆ. ಹತ್ತು ಪುಟಗಳನ್ನು ಮುಗಿಸುವುದರೊಳಗೆ ಈ ಕಾದಂಬರಿಯನ್ನು ಒಂದು ಪರಿಧಿಗೆ ಸೀಮಿತಗೊಳಿಸಲಾಗದು ಎಂಬ ಅರಿವಾಗಿ, ‘ಛೇ ಮೊದಲೇ ಓದಬೇಕಾಗಿತ್ತು’ ಎಂಬಂತೆ ಬೇಜಾರಾಗಿ, ಜ್ವರ ಹತ್ತಿದವರಂತೆ ಕೊನೆಯ ಪುಟದವರೆಗೂ ಬಿಡುವು ಕೊಡದೆ ಓದಿಮುಗಿಸಿದೆ.

ಪುಸ್ತಕ ಓದಲು ಶುರುಮಾಡಿದಾಗ, ಮಧ್ಯಭಾಗದಲ್ಲಿದಾಗ, ಅಂತ್ಯಕ್ಕೆ ಬಂದಾಗ ಮತ್ತು ಮುಗಿಸಿ ಎತ್ತಿಟ್ಟ ನಂತರವೂ ಕಾಡಿದ ಅನೇಕ ಅನುಭವಗಳಲ್ಲಿ ಕೆಲವನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ.

ಯಾವತ್ತೂ ಕೇಳದ ಚೀನಾ ದೇಶದ ವುಹಾನ್ ಎಂಬ ಯಾವುದೋ ಊರಿನ ಮೂಲೆಯೊಂದರಲ್ಲಿರುವ live market ನಿಂದ ಹೊರಬಂದ ವೈರಾಣುವೊಂದು ಜಗತ್ತಿನ ಇಡೀ ಮಾನವ ಸಮಾಜವನ್ನು ಹೈರಾಣುಮಾಡುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. 2017 ರಲ್ಲೇ ಕಾದಂಬರಿಯಲ್ಲಿ ಈ ಸತ್ಯವು ಇನ್ನೊಂದು ತರಹದಲ್ಲಿ ಪ್ರತಿಫಲಿಸಿರುವುದು, ನಿಜವಾಗಿಯೂ ಲೇಖಕರ ಮನಸ್ಸಿನ ಸೂಕ್ಮಗ್ರಹಿಕೆಗೆ ಮತ್ತು ಸೃಜನಾತ್ಮಕ ಬರವಣಿಗೆಗೆ ಹಿಡಿದ ಕನ್ನಡಿಯಾಗಿದೆ. ಕಂಡು ಕೇಳರಿಯದ ಸೊಮಾಲಿ ಸಂಸ್ಕೃತಿಯ ಕೆಲವು ಅಂಶಗಳು, ಅಮೇರಿಕ ಸಮಾಜದ ಮತ್ತು ಅದರ ಭಾಗವಾಗಿರುವ ವಿಭಿನ್ನ ವಲಸೆ ಸಂಸ್ಕೃತಿಗಳ ಮೇಲೆ ಬೀರುವ ಗಾಢಪ್ರಭಾವವು; ವಿಕಸಿಸುತ್ತಿರುವ ಮಾನವ ಪ್ರಜ್ಞೆಯು ಹೇಗೆ ಜನಾಂಗಳ ಸೀಮೆಗಳನ್ನು ಧಾಟಿ ಸಂಸ್ಕೃತಿಗಳ ಎಲ್ಲೆಯನ್ನು ಮೀರಿ ವಿಸ್ತರಿಸುತ್ತಿದೆ ಎಂಬುದಕ್ಕೆ ಪುರಾವೆಯಾಗಿದೆ. ಅಮೇರಿಕದ ಯಾವುದೋ ಮೂಲೆಯಲ್ಲಿ ಕಥೆಯು ಜರುಗಿದ್ದರೂ, ಪ್ರಪಂಚದ ಯಾವುದೇ ಪ್ರದೇಶದಲ್ಲಿಯಾದರೂ ಅದನ್ನು ಊಹಿಸಿಕೊಳ್ಳಬಹುದು.

ಕಾದಂಬರಿಯ ನಿರೂಪಣ ಶೈಲಿಯು ವಿಭಿನ್ನವಾಗಿದೆ. ಲೇಖಕರು ತಮ್ಮ ಅನುಭವಗಳನ್ನು, ಹಳೆಯ ನೆನಪುಗಳನ್ನು ಹಂಚಿಕೊಳ್ಳುವಂತೆ first person narrative ಬಳಸಿದ್ದಾರೆ. ಆದರೆ ಶುರುವಿನಲ್ಲಿ ಇದು ಸೃಜನಾತ್ಮಕ ಬರವಣಿಗೆಯೇ ಹೊರತು, ಡಾಕ್ಯುಮೆಂಟರಿಯಲ್ಲ ಎಂಬ ಮಾತನ್ನೂ ಹೇಳಿದ್ದಾರೆ. ಇದೊಂದು ಕಾಲ್ಪನಿಕ ಕೃತಿ-ಕಟ್ಟುಕಥೆಯೆಂದು ಒತ್ತಿಹೇಳಿದ್ದಾರೆ. ಪರಕೀಯ ಸಂಸ್ಕೃತಿಯ ಬಗ್ಗೆ ಬರೆಯುತ್ತಿರುವಾಗ, ಆ ವ್ಯಕ್ತಿಗಳ ಮನಸ್ಸಿನ ವ್ಯಾಪಾರ ಅರ್ಥವಾಗದೆ, ಸೃಜನಾತ್ಮಕವಾಗಿ ಕಥೆಯನ್ನು ಸೃಷ್ಟಸಿರುವುದರಿಂದ ಕಥೆಯು ಬಯಸುವ ಸತ್ಯದಿಂದ ದೂರವಾಗಿರಬಹುದು ಎಂಬ ಸಂಶಯವನ್ನು ಲೇಖಕರು ವ್ಯಕ್ತಪಡಿಸಿದ್ದಾರೆ. ಆದರೆ ಒಬ್ಬ ಓದುಗನಾಗಿ ಕಾದಂಬರಿಯು ಸತ್ಯದಿಂದ ದೂರಾಗಿದೆ ಎಂದು ಅನ್ನಿಸಲೇಯಿಲ್ಲ. ಅಪರಿಚಿತ ಜನಾಂಗದ ಆಚರಣೆಗಳು, ಅವುಗಳೆಡೆಗೆ ಅವರಿಗಿರುವ ಭಾವನಾತ್ಮಕ ಸಂಬಂಧ, ಇವುಗಳೆಡೆಗೆ ಉಳಿದ ಸಮಾಜದ ಅಸಹನೆ-ಆಕ್ರೋಷ-ತಾತ್ಸಾರ-ತಪ್ಪಿತಸ್ಥ ಭಾವನೆಗಳು, ಇವುಗಳೆಲ್ಲವೂ ಒಂದರೊಳಗೊಂದು ತಾಳೆಹಾಕಿಕೊಂಡು ಸೃಷ್ಟಿಯಾಗಿರುವ ಕಥಾಹಂದರವು ಸತ್ಯಕ್ಕೆ ಅತ್ಯಂತ ಸಮೀಪದಲ್ಲಿದೆ ಎನ್ನುವುದು ನನ್ನ ವೈಯಕ್ತಿಕ ಅನುಭವ.

ಸುಮಾರು ಒಂದು ದಶಕದವರೆಗೆ ಆಸ್ಟ್ರೇಲಿಯ ದೇಶದಲ್ಲಿ ಬದುಕ್ಕಿದ್ದ ನನಗೆ; ಇಂತಾ ಕಥಾವಸ್ತುವಿನ ಬಗ್ಗೆ, ಅತ್ಯಂತ ಕೂತೂಹಲಕಾರಿಯಾಗಿರುವ ಕಾದಂಬರಿಯೊಂದನ್ನು ಓದಿ ಮನಸ್ಸಿಗೆ ಬಹಳ ಸಂತೋಷವಾಗಿದೆ. ನಮಸ್ಕಾರಗಳು.