ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕುಮಾರಣ್ಣನ ಮಗನ ಮದ್ವೆ, ಬೆಂಗಳೂರು ಕರಗ ಮತ್ತೆ ತಬ್ಲಿಘಿಗಳ ಪುರಾಣ

ಕುಮಾರಸ್ವಾಮಿ ಅವರ ಮಗನ ಮದುವೆಗೂ, ತಬ್ಲಿಘಿಗಳಿಗೂ ಎತ್ತಣೆತ್ತಣ ಸಂಬಂಧ..? ಇವೆಲ್ಲದರ ಬಗ್ಗೆ ಬೇಕಾ ಬಿಟ್ಟಿಯಾಗಿ ಜನ ಆಡ್ತಿದ್ದರೆ, ಡಾ. ಅಭಿನವ ಅವರು ಮಾತ್ರ ವಸ್ತುನಿಷ್ಠವಾಗಿ ಬರೆಯುತ್ತಾರೆ. ಹಾಗಾದ್ರೆ ಅವರ ಒಟ್ಟಾರೆ ನಿಲುವು ನಿಮ್ಮ ನಿಲುವಿಗಿಂತ ಬೇರೆ ಏನು? ... ಓದಿ ನೋಡಿ...


ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್‌ ಕುಮಾರಸ್ವಾಮಿ-ರೇವತಿ ಅವರ ಮದುವೆ ವಿಚಾರ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಮತ್ತೊಂದೆಡೆ, ದೆಹಲಿಯ ನಿಜಾಮುದ್ದೀನ್‌ ನಗರದಲ್ಲಿ ನಡೆದ ತಬ್ಲಿಘಿ ಧಾರ್ಮಿಕ ಸಮಾವೇಶದ ಬಗ್ಗೆಯೂ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಲಾಕ್‌ಡೌನ್‌ ಉಲ್ಲಂಘಿಸಿ ಅಲ್ಲಲಿ ಜಾತ್ರೆ, ರಥೋತ್ಸವ, ಕರಗ, ನಮಾಜ್‌ ನಡೆಸಿರುವ ಪ್ರಕರಣಗಳೂ ನಡೆದಿದ್ದು, ಅವುಗಳಿಗೂ ಟೀಕೆ ವ್ಯಕ್ತವಾಗಿದೆ.
ಈ ಎಲ್ಲ ಪ್ರಕರಣಗಳಿಗೂ ಸಂಬಂಧಿಸಿದಂತೆ ಎದ್ದಿರುವ ಆಕ್ಷೇಪ ಬಹುತೇಕ ಒಂದೇ. ಕೊರೊನಾ ಸೋಂಕು ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ತಡೆಯುವ ದೃಷ್ಟಿಯಿಂದ ಲಾಕ್‌ಡೌನ್‌ ಜಾರಿ ಮಾಡಿರುವ ಹೊತ್ತಿನಲ್ಲೂ ಇಂಥ ಸಾಮೂಹಿಕ ಕಾರ್ಯಕ್ರಮಗಳನ್ನು ನಡೆಸುವ ಅಗತ್ಯವಿತ್ತೇ? ಎನ್ನುವುದು ಬಹುತೇಕರ ಆಕ್ಷೇಪ. ಹೆಚ್ಚು ಜನರು ಒಂದೆಡೆ ಸೇರಿದರೆ ಅಲ್ಲಿ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಯಿದ್ದು, ಅವರಿಂದ ಇನ್ನಷ್ಟು ಜನರಿಗೆ ವೈರಸ್‌ ಹರಿಯುತ್ತದೆ ಎನ್ನುವುದು ಆಕ್ಷೇಪಿಸುವವರ ಕಾಳಜಿ. ಇನ್ನು ಮೇಲಿನ ಘಟನೆಗಳ ಪರ ನಿಲ್ಲುವವರೂ ಕೂಡ ಇದೇ ನೆಲೆಯಲ್ಲಿ ಆಯೋಜಕರನ್ನು ಸಮರ್ಥಿಸಿಕೊಳ್ಳುತ್ತಾರೆ. ಅದೆಂದರೆ: ಅಲ್ಲಿ ಹೆಚ್ಚು ಜನ ಸೇರಿರಲಿಲ್ಲ; ಸೇರಿದ್ದರೂ ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು; ಸಂಬಂಧಪಟ್ಟವರಿಂದ ಸೂಕ್ತ ಅನುಮತಿ ಪಡೆಯಲಾಗಿತ್ತು; ಸೋಂಕಿನ ಭೀಕರತೆ ಆಗಿನ್ನೂ ವ್ಯಾಪಕವಾಗಿರಲಿಲ್ಲ ಎಂಬಿತ್ಯಾದಿ ಧಾಟಿ ಅವರದು.


ಇಲ್ಲಿ ಪರ ಮತ್ತು ವಿರೋಧಿಗಳ ನಡುವೆ ಸಹಮತವಿದೆ ಮತ್ತು ವಾದಕ್ಕೆ ಒಂದೇ ನೆಲೆಗಟ್ಟು ಇರುವುದನ್ನು ಗುರುತಿಸಬಹುದು. ಹೆಚ್ಚು ಜನ ಒಂದು ಕಡೆ ಗುಂಪು ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು, ಇದು ಅಪಾಯಕಾರಿ ಎನ್ನುವ ವಿಚಾರದಲ್ಲಿ ಎರಡೂ ಗುಂಪಿಗೂ ಸಂಶಯವಿಲ್ಲ. ‘ನೀವಂದುಕೊಂಡಂತೆ ಅಲ್ಲಿ ಲಾಕ್‌ಡೌನ್‌ ಉಲ್ಲಂಘನೆಯಾಗಿಲ್ಲ’ ಎನ್ನುವುದಷ್ಟೇ ಆಯೋಜಕರ ಪರ ನಿಂತವರ ಸಮರ್ಥನೆ.


ಆದರೆ, ನಾನು ಈ ಘಟನೆಯನ್ನು ಬೇರೆಯದೇ ದಿಕ್ಕಿನಿಂದ ವಿಶ್ಲೇಷಿಸಲು ಬಯಸುತ್ತೇನೆ. ಲಾಕ್‌ಡೌನ್‌ ನಿಯಮ ಜಾರಿಯಲ್ಲಿರುವುದು, ಗುಂಪು ಸೇರುವ ಮೂಲಕ ಅದನ್ನು ಉಲ್ಲಂಘಿಸುವುದು ನನ್ನ ದಿಕ್ಕಿನ ವಿಶ್ಲೇಷಣೆಗೆ ಮುಖ್ಯವೇ ಅಲ್ಲ. ನಾನು ಮೊದಲು ಮೇಲಿನ ಎಲ್ಲ ಘಟನೆಗಳಲ್ಲೂ ಇರುವ ಒಂದು ‘ಕಾಮನ್‌ ಫ್ಯಾಕ್ಟರ್‌’ ಅನ್ನು ಗುರುತಿಸಿಕೊಳ್ಳಬಯಸುತ್ತೇನೆ. ಮೇಲಿನ ಎಲ್ಲ ಘಟನೆಗಳೂ ‘ಸಾಂಪ್ರದಾಯಿಕವಾಗಿ ಪಾಲಿಸಿಕೊಂಡು ಬಂದಿರುವ ಆಚರಣೆಗಳು’. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಮ್ಮ ಧರ್ಮ, ನಂಬಿಕೆಲೋಕಕ್ಕೆ ಸಂಬಂಧಿಸಿದ ವಿಚಾರಗಳು ಎನ್ನುವುದು ಆ ಕಾಮನ್‌ ಫ್ಯಾಕ್ಟರ್‌. ಈಗ ನಾನು ಎತ್ತಿಕೊಳ್ಳುವ ಪ್ರಶ್ನೆ: “ನಮ್ಮ ಸಂಪ್ರದಾಯ ಇಲ್ಲವೇ ಆಚರಣೆಗಳನ್ನು ಯಾವ ಸಂದರ್ಭದಲ್ಲಿ ಎಷ್ಟು ಅನುಸರಿಸಬೇಕು?” ಎನ್ನುವುದು.


ಕುಮಾರಸ್ವಾಮಿ ಕಟ್ಟುಬಿದ್ದಿದ್ದು ಯಾಕೆ?

ಎಚ್ ಡಿ ಕುಮಾರಸ್ವಾಮಿ ಅವರು ಮದುವೆಯನ್ನು ಮುಂದಕ್ಕೆ ಹಾಕಬಹುದಿತ್ತು. ಲಾಕ್‌ಡೌನ್‌ ಜಾರಿಯಲ್ಲಿದ್ದು ಯಾರೂ ಬರಲಾಗದ ಸಂದರ್ಭದಲ್ಲಿ ಮಗನ ಮದುವೆ ಮಾಡಿದ್ದು ಯಾಕೆ? ಇದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ. ಕುಮಾರಸ್ವಾಮಿ ಅವರ ಮುಂದೆ ಎರಡು ಆಯ್ಕೆಗಳಿದ್ದವು ಎಂದು ಭಾವಿಸೋಣ. 1) ನಿಮ್ಮ ಮಗನಿಗೆ ಈ ಮುಹೂರ್ತವನ್ನು ಬಿಟ್ಟರೆ ಮುಂದೆ ಕಂಕಣ ಬಲ ಇಲ್ಲ ಎಂದು ಜ್ಯೋತಿಷಿಯೊಬ್ಬ ಹೇಳಿರಬಹುದು. 2) ರಾಜ್ಯಕ್ಕೆ ಕೊರೊನಾ ಇರಬಹುದು. ಆದರೆ ನಿಮ್ಮ ಮಗನಿಗೆ ಇದು ರಾಜಯೋಗ. ಈ ಮುಹೂರ್ತದಲ್ಲಿ ಮದುವೆಯಾದರೆ ಆತ ಮುಂದೆ ರಾಜಕೀಯವಾಗಿ ಸಾಕಷ್ಟು ಏಳ್ಗೆ ಸಾಧಿಸುತ್ತಾನೆ ಎಂದು ಮತ್ತೊಬ್ಬ ಜ್ಯೋತಿಷಿ ತಲೆ ಕೆಡಿಸಿರಬಹುದು. ಜ್ಯೋತಿಷ್ಯವನ್ನು ಸರ್ವಥಾ ಪಾಲಿಸುವ ಕುಮಾರಣ್ಣ, ಜ್ಯೋತಿಷಿಗಳ ಮಾತು ನಂಬಿ ಮದುವೆಗೆ ಮುಂದಾಗಿರಬಹುದು.

ಇಲ್ಲಿನ ಯಾವ ಕಾರಣಗಳಿಗೂ ಖಂಡಿತಾ ಸಮರ್ಥನೆಗಳಿಲ್ಲ. ಯಾಕೆಂದರೆ, ಎಂಥದೇ ನಂಬಿಕೆಗಾದರೂ ಒಂದು ಮಿತಿ ಇರಲೇಬೇಕಲ್ಲ? ಇಲ್ಲಿ ನಂಬಿಕೆಗಳನ್ನು ನಂಬುವ ಗಡಿಯನ್ನೇ ಕುಮಾರಣ್ಣ ಮೀರಿದ್ದಾರೆ. ಇನ್ನು, ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ, ಅನುಭವಿ ರಾಜಕಾರಣಿಯಾಗಿ, ರಾಜ್ಯದ ಹಿತ ಕಾಯುವ, ಇಲ್ಲಿನ ಜನರ ಹಿತಾಸಕ್ತಿಗಾಗಿಯೇ ಅಸ್ತಿತ್ವ ಪಡೆದಿರುವ ಒಂದು ಪ್ರಾದೇಶಿಕ ಪಕ್ಷದ ಮುಖ್ಯಸ್ಥರಾಗಿ ರಾಜ್ಯದ ಜನರ ಹಿತ ಬಯಸುವುದು ಅವರ ಕರ್ತವ್ಯ. ಆದರೆ ಇಲ್ಲಿ ದೇವೇಗೌಡರ ಕುಟುಂಬ ರಾಜ್ಯದ ಜನರ ಹಿತ ಬಯಸಿದ್ದು ಯಾವ ದಿಕ್ಕಿನಿಂದಲೂ ಕಾಣುತ್ತಿಲ್ಲ. ಇನ್ನು, ಅವರೇ ಹೇಳುವಂತೆ ಮದುವೆ ಮನೆಯಲ್ಲಿ ನೂರು ಜನರಷ್ಟೇ ಇರಲು ಸಾಧ್ಯವೇ ಇಲ್ಲ. ಯಾಕೆಂದರೆ, ಆ ನೂರು ಜನ ಬಹುಶಃ ಪರದೆಯಲ್ಲಿ ಕಾಣುವ ಪಾತ್ರಧಾರಿಗಳಷ್ಟೇ. ಆ ಪರದೆಯ ಹಿಂದೆ ದೊಡ್ಡ ಪರಿವಾರವೇ ಇರಬೇಕಲ್ಲ? ಒಟ್ಟಿನಲ್ಲಿ ಇಲ್ಲಿ ಕುಮಾರಸ್ವಾಮಿ ಅವರ ಮಾಡಿದ್ದೂ ಒಬ್ಬ ‘ಸಂಪ್ರದಾಯವಾದಿ’ಯ ಜಿಗುಟುತನ.

ಸಂಪ್ರದಾಯವನ್ನು ಮುರಿಯಲಾರದ ಜಮಾತೆ
ಇನ್ನು ಜಮಾತೆ ಸಂಘಟನೆಯವರು ಸಮಾವೇಶ ಮಾಡಿದ್ದೂ ಕೂಡ ಅದು ಸಂಪ್ರದಾಯವೆಂದೇ. ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಸಮಾವೇಶವನ್ನು ಈಗ ನಿಲ್ಲಿಸುವುದು ಬೇಡವೆಂದು ನಿಗದಿಯಂತೆ ಕಾರ್ಯಕ್ರಮ ನಡೆಸಿದ್ದಾರೆ. ಅವರು ಸಮಾವೇಶ ಹಮ್ಮಿಕೊಳ್ಳುವ ಕಾಲಕ್ಕೆ ದಿಲ್ಲಿಯಲ್ಲಿ ಕಠಿಣ ನಿಯಮಗಳು ಆಗಲೇ ಜಾರಿಯಲ್ಲಿದ್ದವು. ಆದರೂ ಸಮಾವೇಶ ರದ್ದಾಗಿಲ್ಲ. ಇದಕ್ಕೆ ಆಯೋಜಕರೇ ಕೊಟ್ಟ ಸಮರ್ಥನೆಯೂ ಇದೇ ಆಗಿತ್ತು. ಈ ಸಮಾವೇಶ ಈಗ ಶುರು ಮಾಡಿದ್ದಲ್ಲ. ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎನ್ನುವುದು. ಇಲ್ಲಿ ನನ್ನ ಪ್ರಶ್ನೆಯೂ ಆದೇ. ಅದು ಸಂಪ್ರದಾಯ ಎನ್ನುವ ಕಾರಣಕ್ಕೇ ಅದನ್ನು ಆಚರಿಸಬೇಕಿಲ್ಲ. ಸಾಮುದಾಯಿಕ ಹಿತದೃಷ್ಟಿಯಿಂದ ಸಮಾವೇಶವನ್ನು ಮುಂದಕ್ಕೆ ಹಾಕಬಹುದಿತ್ತು. ಆದರೆ ತಬ್ಲಿಘಿ ಜಮಾತೆ ಸಂಘಟನೆ ಇಲ್ಲಿ ತನ್ನ ಸಂಪ್ರದಾಯದ ಕುರಿತು ತನ್ನ ರಿಜಿಡಿಟಿಯನ್ನೇ ತೋರಿಸಿದೆ.

ಇನ್ನು ಕರ್ನಾಟಕದ ಬಹುತೇಕ ಕಡೆಗಳಲ್ಲಿ ನಮಾಜ್‌ಗೆ ನಿಷೇಧವಿದ್ದರೂ ಕದ್ದು ಮುಚ್ಚಿ ನಮಾಜ್‌ ಮಾಡಿರುವುದು ವರದಿಯಾಗಿದೆ. ಪೊಲೀಸರು ಮಸೀದಿಗೇ ನುಗ್ಗಿ ಲಾಠಿಚಾರ್ಜ್‌ ಮಾಡಿದ ಬಳಿಕವೂ ಕೆಲವೆಡೆ ನಮಾಜ್‌ ಮುಂದುವರಿದಿದ್ದನ್ನು ನೋಡಬಹುದು. ಹಳೆಯ ಸಂಪ್ರದಾಯ ಮುರಿಯಬಾರದು ಎಂಬ ಕಾರಣಕ್ಕೆ ಸರಳವಾಗಿ ಕರಗವನ್ನು ಆಚರಿಸಲಾಗಿದೆ. ಕೆಲವು ಕಡೆ ಸಂಪ್ರದಾಯದ ಭಾಗವಾಗಿ ಜಾತ್ರೆಗಳನ್ನೂ ನಡೆಸಿದ್ದಾರೆ. ಇಲ್ಲೆಲ್ಲ ಸಂಪ್ರದಾಯವನ್ನು ಪಾಲಿಸಲೇಬೇಕೆಂಬ ಹಠವೇ ಎದ್ದು ಕಾಣುತ್ತಿದೆ. ಸಂಪ್ರದಾಯದ ನಮತ್ಯೆಯ ಗುಣವನ್ನು ಇಲ್ಲಿ ಎಲ್ಲರೂ ಮರೆತಿದ್ದಾರೆ.

ಹಾಗಿದ್ದರೆ ಸಂಪ್ರದಾಯ ರಿಜಿಡ್ಡಾ?
ನಮ್ಮ ಸಂಪ್ರದಾಯಗಳನ್ನು ನಮ್ಮ ಹಿರಿಯರು ಹೇಗೆ ಪಾಲಿಸಿಕೊಂಡು ಬಂದಿದ್ದಾರೆ ಎಂದು ಗಮನಿಸಿದರೆ ಇದಕ್ಕೆ ಉತ್ತರ ಸಿಗುತ್ತದೆ. ಯಾವುದೇ ಊರಿನಲ್ಲಿ ಜಾತ್ರೆ, ಊರ ಹಬ್ಬ ಹೊರಬೀಡು ಮುಂತಾದ ಊರಿಗೇ ಸೀಮಿತವಾದ ವಿಶಿಷ್ಟ ಹಬ್ಬ ಆಚರಣೆಗಳಿರುತ್ತವೆ. ಕೆಲವು ಹಬ್ಬಗಳಂತೂ 1, 3, 5, 7, 9, 14 ವರ್ಷಗಳಿಗೊಮ್ಮೆ ಜನರು ಆಚರಿಸುತ್ತಾರೆ. ಊರ ಹಬ್ಬಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡು ಇನ್ನೇನು ಹಬ್ಬ ಆಚರಿಸಬೇಕು ಎನ್ನುವಷ್ಟರಲ್ಲಿ ಹಿಂದಿನ ರಾತ್ರಿ ಊರಿನಲ್ಲಿ ಯಾರಾದರೂ ತೀರಿಹೋದರೆ ದಿಢೀರನೆ ಹಬ್ಬವನ್ನು ನಿಲ್ಲಿಸಲಾಗುತ್ತದೆ. ಸಾವು ಸೂತಕ ಎಂದು ಭಾವಿಸಿ ಹಬ್ಬವನ್ನು ಮುಂದಕ್ಕೆ ಹಾಕುತ್ತಾರೆ. ಇಲ್ಲಿ ಹಬ್ಬ ಎಷ್ಟೋ ವರ್ಷಗಳಿಂದ ನಡೆದುಬಂದಿದೆ ಎನ್ನುವ ಕಾರಣಕ್ಕೆ ಅವರು ಸೂತಕ ಮುರಿದು ಹಬ್ಬ ಆಚರಿಸುವುದಿಲ್ಲ. ಇಲ್ಲಿ ಸಂಪ್ರದಾಯವನ್ನು ಸಾವಿನ ಕಾರಣಕ್ಕೆ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ಇನ್ನೂ ಕೆಲ ಸಂದರ್ಭಗಳಲ್ಲಿ ಹಬ್ಬವನ್ನು ಆಚರಿಸಲೇಬೇಕಾದ ಅನಿವಾರ್ಯತೆ ಕಂಡುಬಂದರೆ ಸತ್ತವರನ್ನು ರಾತ್ರೋ ರಾತ್ರಿ ಸಂಸ್ಕಾರ ಮಾಡಿ, ಸೂತಕ ಕಳೆದುಕೊಂಡು ಬೆಳಗ್ಗೆ ಹಬ್ಬ ಮಾಡುವುದಿದೆ. ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, ಜನರು ಹಬ್ಬವೆಂಬ ಸಂಪ್ರದಾಯಕ್ಕೋಸ್ಕರ ಸಾವಿನ ಸೂತಕ ನಿರ್ಲಕ್ಷಿಸುವುದಿಲ್ಲ. ಇಲ್ಲವೇ ಒಂದು ಸಾವಿಗೋಸ್ಕರ ಅನಿವಾರ್ಯವಾದ ಹಬ್ಬವನ್ನು ನಿಲ್ಲಿಸುವದೂ ಇಲ್ಲ. ಎಂದರೆ, ಸಂಪ್ರದಾಯವನ್ನುಜನರು ತಮ್ಮ ಅಗತ್ಯಕ್ಕೆ ತಕ್ಕಂತೆ ಬಾಗಿಸಿಕೊಳ್ಳುವುದು ಇಲ್ಲಿ ಕಾಣುತ್ತದೆ. ನಮ್ಯತೆಯೇ ಸಂಪ್ರದಾಯಿಕ ಆಚರಣೆಗಳ ಮೂಲ ಗುಣ.
ಮದುವೆಯ ಸಂಪ್ರದಾಯವನ್ನು ನೋಡಿದರೆ, ಯಾವುದೇ ಮದುವೆಯಲ್ಲಿ ಪುರೋಹಿತರು ಬಂದು ಮಂತ್ರ ಹೇಳಿ ತಾಳಿ ಕಟ್ಟಿಸುವುದು ಸಂಪ್ರದಾಯ. ಪುರೋಹಿತನನ್ನು ಕರೆಸಲು ಸಾಧ್ಯವಿಲ್ಲವಾದರೆ ಅಥವಾ ಸರಳವಾಗಿ ಮಾಡಬೇಕೆಂದು ಬಯಸಿದರೆ ಪುರೋಹಿತನಿಲ್ಲದೆ ದೇವರ ಮುಂದೆ ತಾಳಿ ಕಟ್ಟುವುದೂ ನಮ್ಮಲ್ಲಿ ಸಾಧ್ಯ. ತಾಯಿ ಅಥವಾ ತಂದೆ ತೀರಿ ಹೋದಾಗ ಗಂಡು ಮಕ್ಕಳು ಸಂಸ್ಕಾರ ನೆರವೇರಿಸುವುದು ಸಂಪ್ರದಾಯ. ಆದರೆ ಗಂಡು ಮಕ್ಕಳೇ ಇಲ್ಲದಿದ್ದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಂದಲೂ ಸಂಸ್ಕಾರ ಮಾಡಿಸುವುದೂ ಉಂಟು, ವ್ಯಕ್ತಿ ಸತ್ತಾಗ ಅವರನ್ನು ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡುವುದು ಸಂಪ್ರದಾಯ. ಆದರೆ ಊರಿಗೆ ಪ್ಲೇಗ್‌, ಕಾಲರಾ ಮುಂತಾದ ಬರಬಾರದ ರೋಗ ಬಂದು ಹಲವರು ಸತ್ತಾಗ ಅಲ್ಲಿ ಶಾಸ್ತ್ರವನ್ನು ಬದಿಗೊತ್ತಿ ಸಾಮೂಹಿಕ ಸಂಸ್ಕಾರ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಹೀಗೆ ಅಗತ್ಯಕ್ಕೆ ಅನುಗುಣವಾಗಿ ಸಂಪ್ರದಾಯಗಳನ್ನು ಬದಲಿಸುವ, ಕೈಬಿಡುವ, ಹೊಸ ರೂಪದಲ್ಲಿ ಮುಂದುವರಿಸುವ ತಂತ್ರಗಳನ್ನು ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ವಿದ್ಯಮಾನ ಮತ್ತು ಅದರ ಕುರಿತ ಚರ್ಚೆಯನ್ನು ಗಮನಿಸೋಣ.
ಆಚರಣೆಗಳನ್ನು ಹಠಕ್ಕೆ ಬಿದ್ದು ಆಚರಿಸುವುದು ಸೂಕ್ತವಲ್ಲ. ನಮ್ಮ ಅಸ್ತಿತ್ವ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಗಮನದಲ್ಲಿರಿಸಿಕೊಂಡೇ ಎಲ್ಲಾ ಸಂಪ್ರದಾಯಗಳು ಆಚರಣೆಗೊಳ್ಳಬೇಕು. ಭಾರತದ ಎಲ್ಲ ಸಂಪ್ರದಾಯಗಳಿಗೂ ಸಂದರ್ಭಕ್ಕನುಗುಣವಾಗಿ ಬದಲಾಗುವ ಗುಣ ಸಾಂಪ್ರದಾಯಿಕವಾಗಿಯೆ ಬಂದಿದೆ.

ಇಲ್ಲಿ ನಾನು ಹೇಳ ಹೊರಟಿರುವುದು ಇಷ್ಟೇ. ಕುಮಾರಣ್ಣ ಮಗನ ಮದುವೆ ಮಾಡಿದ್ದಾಗಲೇ, ಜಮಾತೆ ಸಂಘಟನೆಯವರು ಧಾರ್ಮಿಕ ಸಮಾವೇಶವನ್ನು ಮಾಡಿದ್ದಾಗಲೀ. ಕರಗ ಮತ್ತು ಜಾತ್ರೆಗಳನ್ನು ಹಮ್ಮಿಕೊಂಡಿದ್ದಾಗಲೀ ‘ಸಂಪ್ರದಾಯಸ್ಥರ ಹಠಮಾರಿತನ’ವನ್ನು ತೋರಿಸುತ್ತದೆ. ಆದರೆ, ಸಂಪ್ರದಾಯ ಹಠಮಾರಿಯಲ್ಲ. ಜಿಗುಟುತನ ಸಂಪ್ರದಾಯದ ಗುಣವಲ್ಲ, ಆದರೆ ಕೆಲವು ‘ಸಂಪ್ರದಾಯಸ್ಥರು’ ಜಿಗುಟುತನವನ್ನು ಪ್ರದರ್ಶಿಸಬಹುದು. ಇಂಥ ಸಂದಿಗ್ಧ ಸಂದರ್ಭದಲ್ಲೂ ತಮ್ಮ ಸಂಪ್ರದಾಯಗಳನ್ನು ಆಚರಿಸುವ ಮೂಲಕ ‘ಸಂಪ್ರದಾಯಸ್ಥರು’ ತೋರಿಸಿದ್ದು ಇದೇ ಜಿಗುಟುತನ ಎನ್ನುವುದು ನನ್ನ ವಾದ.