ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೃತಿಗೆ ಮಾತಿಲ್ಲ

ಫಕೀರ​

ಉಸಿರಾಡುತ್ತಿವೆ ಹಲವು ಪಾತ್ರಗಳು
ಭಾವನೆ ಕಲ್ಪನೆಗಳ ರೆಕ್ಕೆಪುಕ್ಕಗಳೊಂದಿಗೆ
ಹಾರುತ್ತಿವೆ ದಿಗಂತದಾಚೆಯ ಕನಸಿನ ಮನೆಗೋ
ಮಿನುಗುತ್ತಿವೆ ಕಣ್ಣುಮುಚ್ಚಿ ತೆರೆಯುವುದರೊಳಗೆ
ನಿಲುಕದ ನಕ್ಷತ್ರಲೋಕದಂತೆ
ಕೃತಿಯ ಜೀವಂತಿಕೆಗೆ ಇಷ್ಟು ಮಾತ್ರ ಸಾಕು!

ಒಂದು ದಿನ ಕೃತಿಯ ಆ ಜೀವಗಳು
ಅಪ್ಪಣೆ ಇಲ್ಲದೇ ಹೊಸಿಲನ್ನು ದಾಟಿ ಒಳಗೆ ಬಂದುಬಿಟ್ಟಿವೆ
ಅನುಮತಿಯಿಲ್ಲದೇ ಪ್ರವೇಶವಿಲ್ಲ ಎಂಬ ಅಡಿಟಿಪ್ಪಣೆ ಇದ್ದರೂ
ನಗುವ ಬೀರುತ್ತಲೇ ನಡುಮನೆಯನ್ನು ಪ್ರವೇಶಿಸಿವೆ
ಲೇಖಕನ ಮಾತಿಗೆ ಬೆಲೆಯಿಲ್ಲ; ಗೌರವವಿಲ್ಲ
ಬಂದ ಅತಿಥಿಗಳಿಗೆ ಮಾನ ಮರ್ಯಾದೆಯಂತೂ ಇದ್ದಂತೆ ತೋರುತ್ತಿಲ್ಲ
ಬೆಳಗುವ ನಕ್ಷತ್ರಮಂಡಲದೊಳಗೆ ವಾಸವಿದ್ದರೂ
ಅರಸಿ ಬಂದ ಲೇಖಕನ ಕಲ್ಪನೆಯು ಮಾತ್ರ ಸುಳ್ಳಲ್ಲ!
ಅವನು ಕಂಡ ಆ ಪಾತ್ರಗಳು ಬರೆದ ಹಾಳೆಗಳಲ್ಲಿ
ಕಾಣೆಯಾಗಿವೆ
ಉಳಿದ ಖಾಲಿ ಹಾಳೆಗಳು ಕಾಯುತ್ತಿವೆ
ಲೇಖಕ ಬರೆಯಬೇಕಾದ ಕೃತಿ ಮಾತ್ರ ಅರ್ಧಕ್ಕೆ ನಿಂತಿದೆ

ಆ ಪಾತ್ರಗಳು ಲೇಖಕನ ಸೃಷ್ಟಿಯ ಕೂಸುಗಳೇ!
ತಿದ್ದುವುದು ತೀಡುವುದು ಬರವಣಿಗೆಯಲ್ಲಿ ನಿರಂತರ
ಜನಿಸಿದ ಆ ಕೂಸುಗಳಿಗೆ ಜೀವ ತುಂಬಿ ಉತ್ತಮ ಸಂಸ್ಕಾರ ಕೊಟ್ಟು
ಬದುಕು ರೂಪಿಸಿಕೊಳ್ಳುವ ಜವಾಬ್ದಾರಿ ನೀಡಿ ಕೊನೆಯಲ್ಲಿ
ಪಾತ್ರ ತರಬೇತಿಯ ತಾಲೀಮನ್ನು ಕೂಡ ನೀಡುವುದು
ಸಾಹಿತ್ಯ ಕೃಷಿಯ ವಾಡಿಕೆ
ಖಾಲಿ ಹಾಳೆಯ ಪುಟಗಳಲ್ಲಿ ಬರೆಯುವ ಮುನ್ನವೇ
ಅವು ಹೋರಾಡುತ್ತಿವೆ ತಮ್ಮ ತಮ್ಮ ಪಾತ್ರಗಳ ಬಗ್ಗೆ ತಲೆಕೆಡಿಸಿಕೊಂಡಿವೆ
ಲೇಖಕನ ಮೇಲೆ ಒತ್ತಡ ಹಾಕುತ್ತಿವೆ
ತಮ್ಮ ಪಾತ್ರವನ್ನು ಹೆಚ್ಚು ರಂಜಿಸು
ವೈಭವೀಕರಿಸು
ಕುಣಿದಾಡಿಸು
ಅರ್ಧಕ್ಕೆ ಕೊಲ್ಲದಿರು
ಜೀವನವನ್ನು ಸಂಪೂರ್ಣವಾಗಿ
ಕೃತಿಯಲ್ಲಿ ಅನುಭವಿಸುವಂತೆ ಮಾಡು ಎಂದು ಬೇಡುತ್ತಿವೆ

ಸೃಷ್ಟಿಸಿದ ಆ ಪಾತ್ರಗಳ ನಡುವೆ ಈಗ ಶೀತಲ ಸಮರ
ಲೇಖಕನ ಜೊತೆ ಅನವರತ ಹೋರಾಟವು
ಪ್ರತಿನಿತ್ಯ ಜಗಳ ಮನಸ್ತಾಪ ನಡೆಯುತ್ತಲೇ ಇದೆ
ಲಿಪಿಕಾರ ಬರೆಯಬೇಕಾದುದು ಮುಂದಕ್ಕೆ ಹೋಗುತ್ತಿಲ್ಲ
ಪಾತ್ರಗಳ ಜಗಳವನ್ನು ನೋಡುವುದೇ ದಿನಚರಿಯಾಗಿದೆ
ನಿಗದಿತ ಸಮಯದೊಳಗೆ ರಚಿಸಬೇಕಾದ ಕೃತಿ ಮುಗಿಯುತ್ತಿಲ್ಲ
ಕೂತು ಪೆನ್ನು ಹಿಡಿಯುವವನ ಮನಸ್ಥಿತಿಯಂತೂ ಹಾಳಾಗಿದೆ

ವರ್ಷಗಳು ಕಳೆದಿವೆ
ಕೃತಿಗೊಂದು ತಾರ್ಕಿಕ ಅಂತ್ಯ ಕೊಡಲು ಲೇಖಕನಿಗೆ ಆಗುತ್ತಿಲ್ಲ
ಇತ್ತೀಚೆಗೆ ಬದಲಾವಣೆ ಆಗಿದೆ
ಪಾತ್ರಗಳ ಮನಸ್ಥಿತಿಯಲ್ಲಿ
ಅವುಗಳ ವಿಚಾರಧಾರೆಗಳಲ್ಲಿ
ಮಾಡಿರುವ ತಪ್ಪುಗಳ ಪ್ರಾಯಶ್ಚಿತ್ತ ಅರಿವಾಗಿದೆ
ಮೆತ್ತಗಾಗಿವೆ ಅವು

ಇಂದು ಪಾತ್ರಗಳು
ಉಸಿರು ಬಿಗಿಹಿಡಿದಿವೆ
ಜೋರಾಗಿ ಮಾತನಾಡುತ್ತಿಲ್ಲ
ಸೋತ ಮುಖವನ್ನು ಹೊತ್ತು ನಿಂತಿವೆ
ಒಳಗಿನ ಹಮ್ಮು ಬಿಮ್ಮಿನ ಯುದ್ಧ ನಿಂತಂತಿದೆ
ಕಾಲದ ತಿರುವಿನ ಸಂಕೋಲೆಯಲ್ಲಿ ಬದಲಾಗಿವೆ
ಲೇಖಕ ಮತ್ತೆ ಪೆನ್ನು ಹಿಡಿದು ಕೃತಿ ರಚಿಸಲು
ಮುಂದಾಗುವನೇ?
ದಿಗಂತ ಸೂರ್ಯನ ನೆರಳಿನಲಿ
ಮತ್ತೆ ಕಲ್ಪನೆಯ ಸಾಮ್ರಾಜ್ಯವು
ವಿಸ್ತಾರಗೊಂಡಿದೆ
ಆಯಾ ಪಾತ್ರಗಳು ತಮ್ಮ ತಮ್ಮ ಹಳೆಯ
ಉಡುಗೆ ತೊಡುಗೆ ತೊಟ್ಟು ಸಿದ್ಧವಾಗಿವೆ
ನಿಂತ ಆ ರಥವು ಮತ್ತೆ ಮುಂದಕ್ಕೆ ಸಾಗಬೇಕಿದೆ
ಉತ್ಸವಮೂರ್ತಿಯ ಸ್ಥಾನ
ಇನ್ನೂ ಖಾಲಿಯಾಗಿದೆ.