ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೃಷ್ಣನ ಕೊಳಲ ದನಿಯಾಗುವುದು ಹೇಗೆ ಎನ್ನುತ್ತಾ ಕೃಷ್ಣ ರಾಧೆಯ ಸಂಬಂಧದ ಅಮೂರ್ತತೆಯ ಬಗ್ಗೆ ಕಟ್ಟಿ ಕೊಟ್ಟವರು ಲೇಖಕಿ ಅಕ್ಷತಾ ಕೃಷ್ಣಮೂರ್ತಿ...
ಅಕ್ಷತಾ ಕೃಷ್ಣಮೂರ್ತಿ
ಇತ್ತೀಚಿನ ಬರಹಗಳು: ಅಕ್ಷತಾ ಕೃಷ್ಣಮೂರ್ತಿ (ಎಲ್ಲವನ್ನು ಓದಿ)

ಕೃಷ್ಣ ರಾಧೆ ಮುಗಿಯದ ಚಿತ್ರ
ಮುಚ್ಚಿಟ್ಟರು ಮುನ್ನೆಲೆಗೆ
ಬಂದು ನಿಲ್ಲುವ ಪಾತ್ರ

ಆ ರಾಧೆಗೆ ಅದೆಂತಹ ಶಕ್ತಿ ಇತ್ತು..!?
ಕೃಷ್ಣನ ಕೊಳಲ ಗಾನದಲಿ ಬೆರೆತು
ರಾಧಾ ಮಾಧವ ಆಗುವಷ್ಟು
ನಾನೂ ಪರಿತಪಿಸುತಿರುವೆ
ಕೊನೆ ಪಕ್ಷ ಅವನ ಅಕ್ಷರದಲಿ
ಹುಟ್ಟುವ ಒಲವ ಪದ ನಾನೇ
ಆಗಲೆಂಬಷ್ಟೇ ಆಸೆ
ಅಥವಾ ಒಂದು ನಮೂನಿ ಹುಚ್ಚು

ಬದುಕಿನ ಒಂದೇ ಒಂದು
ಕಿರಣ ನೀನಾದರೂ
ಏಳು ಬಣ್ಣದ ಕನಸು
ಕಟ್ಟಿದವನು ಕೃಷ್ಣ ನೀನು
ಕಾಲ ಸರಿದಂತೆ ಬಣ್ಣ ಮಾಸುವ
ಸತ್ಯಕ್ಕೆ ರುಜು ಹಾಕುವುದನು ಮರೆತು
ಪ್ರೀತಿಸುವೆ ಎಂದು ಬಿಡು
ಒಮ್ಮೆ ಮಣ್ಣು ಮಣ್ಣಾಗುವ ಮುನ್ನ

`ಆ ಮಾಧವನೇ ರಾಧೆಯಂತೆ’
ಅಚ್ಚರಿ ಅನಿಸುವುದಿಲ್ಲವೇ?
ಇವನ ನೆರಳು ನೋಡಲು
ಸೋತಿರುವೆ ನಾನು
ಕಣ್ಣೊಳಗೆ ಇವನ ಬಿಂಬವಿರಿಸಿಕೊಂಡು
ಓಡಾಡುವ ನಾನಲ್ಲದ ನಾನು

ಮಣ್ಣಿನ ಮೌನ ಮುರಿಯಲು
ಮಣ್ಣೊಳಗಾಡಬೇಕು
ಮೊಳಕೆಯೊಡೆಯುವುದನು ನೋಡಬೇಕು
ಅದು ಬಿಟ್ಟು
ಒಂದೇ ಸಲ
ಹೆಮ್ಮರವೇ ಹುಟ್ಟಲಿ ಎಂದರೆ
ಕೊನೆಯ ಬಾಗಿಲಿಗೆ
ನೀ ತಂದು ನಿಲ್ಲಿಸಿದಂತೆ

ಇದು ಒಲವೊ ನೇಹವೊ
ಗೆಲುವೊ ಸಂದೇಹವೋ
ಮಲ್ಲಿಗೆ ಮುಡಿಯುವ ಮಾತಾಡಿದರೆ
ಕೆಂಡಸಂಪಿಗೆ ತೋರಿಸುತ್ತಾನೆ
ರಾತ್ರಿ ರಾಣಿಯ ಮಾತಾಡಿದರೆ
ಭೂತಕಾಲವ ಅಗೆಯುತ್ತಾನೆ
ಹಾಗಾದಾಗಲೇ ನನ್ನ
ಬುಡ ಕಿತ್ತು ಬಂದು
ಒಂಥರಾ ಮಳ್ಳು ನಗೆ ನಗುವುದು
ಇಷ್ಟೇ
ಎಲ್ಲ ಮಾಯದ ಗಾಯ

ಒಂದು ಮಾತು ಕೇಳಲೇ ರಾಧೆ

ಒಂದಿಷ್ಟು ದಿನ ದೂರವಿದ್ದು ಬಿಡಲೇ…
ಗಾಯ ತುಂಬುವವರೆಗೆ
ಅಥವಾ
ತರಬೇತಿಯನ್ನಾದರೂ ನೀಡು
ಕೃಷ್ಣನ ಕೊಳಲ ದನಿಯಾಗುವುದು
ಹೇಗೆಂದು?