ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕ್ರಿಯೆಯ ಹೊರತಾಗಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಆಗಬಹುದಿತ್ತು ನಾನು ಒಬ್ಬ
ದನಗಾಹಿ
ದನ ಮೇಯಿಸುತ್ತ ಮೈ ತೊಳೆಯುತ್ತ
ಅವುಗಳ ಮೈಯ ಉಣ್ಣೆ ಹೆಕ್ಕಿ
ಸಾಯಿಸುತ್ತ
ಗಂಗೆದೊಗಲು ನೀವುತ್ತ

ಅವು ಕೋಡು ಬೀಸುವಾಗ
ಕೊಂಚ ಹುಷಾರಾಗಿರಬೇಕು
ಕಣ್ಣಿಗೆ ಬಡಿಯದಂತೆ

ಆಗೀಗ ಬಿದಿರು ಕತ್ತರಿಸಿ
ತೂತು ಕೊರೆದು ಊದಲು
ಪುರುಸೊತ್ತಾಗಿ
ಹಸಿರಿನ ಹುಲ್ಲು ಬೇಣದಲ್ಲಿ
ನೀಲಿ ಆಕಾಶದಲ್ಲಿ
ಮೈಚೆಲ್ಲಿ ಧೇನಿಸುತ್ತ

ಒಂದೇ ಒಂದು ಹುಲ್ಲು ಎಸಳಲ್ಲಿ
ಬ್ರಹ್ಮಾಂಡ ಕಾಣುತ್ತ
ಇಲ್ಲವೇ ರಾಶಿರಾಶಿ ಕತ್ತರಿಸಿ
ದನದ ಮುಂದೆ ಒಟ್ಟುತ್ತ

ಎಲ್ಲವೂ ನಿಜ ಅಥವಾ
ಯಾವುದೂ ಅಲ್ಲ

ಎಲ್ಲದಕ್ಕೂ ಅರ್ಥ
ನೆನಪುಗಳಲ್ಲಿ ಮಾತ್ರ
ಆ ಹಕ್ಕಿಯ ಇಂಪಾದ ಕೂಗು
ಆ ಹೂವಿನ ಮೈಮರೆಸುವ ಗಂಧ
ಅವಳ ಕಮ್ಮನೆಯ ಮೈ ಬಿಸುಪು

ಕವಿತೆ ಬರೆಯುವುದು ಮತ್ತು
ಜೀವಿಸುವುದರ ನಡುವೆ
ಅಂಥ ಫರಕ್ಕೇನೂ ಇಲ್ಲ

ಕ್ರಿಯೆಯ ಹೊರತಾಗಿ.

ಡಾ.ಗೋವಿಂದ ಹೆಗಡೆ

ಟಿಪ್ಪಣಿ: ಈ ಕವಿತೆಗಾಗಿ ಉಪಯೋಗಿಸಿದ ಚಿತ್ರ ಜಾರ್ಜೆಸ್ ೧೮೮೧ ರ ಚಿತ್ರ..ಸೌಜನ್ಯ: Yale ವಿಶ್ವವಿದ್ಯಾಲಯ ಆರ್ಟ್ಸ್ ಗ್ಯಾಲರಿ