ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಒಳಗಿದ್ದವ ಹೊರಗಿದ್ದವನ ನಡುವೆ ಕಿಟಕಿಯಿಟ್ಟವರೇ ತಿರುಮಲೇಶರೆಂದರೆ
ಕವಿತೆಯ ಸಾಧ್ಯತೆಗಳಲ್ಲಿ ಪ್ರತಿದೈವವ ಕಂಡವರೇ ತಿರುಮಲೇಶರೆಂದರೆ

ಬೀದಿ ಬೆಳಕುಗಳು ಬರುವ ತನಕ ಕವಿ ಮತ್ತು ಕವಿತೆಯ ಸದ್ಯತೆಯ ಬಗೆದವರು
ಈ ದಾರಿಯಲಿ ನಮಗಿಂತ ಮೊದಲೆ ಧೇನಿಸಿದವರೇ ತಿರುಮಲೇಶರೆಂದರೆ

ಅಲ್ಲಿಂದ ಬಂದವ ಮತ್ತೆ ಕಳೆದುಹೋದವನ ನಡುವಿನ ಗೆರೆ-ಗಡಿ ಎಲ್ಲಿ
ಒಳಹೊರಗುಗಳಲ್ಲಿ ಅರ್ಥದ ಅಗ್ನಿದಿವ್ಯ ಹಾದವರೇ ತಿರುಮಲೇಶರೆಂದರೆ

ಮೋಡದ ಹೊರ ಅಂಚುಗಳಿಂದ ಬಿದ್ದು ಒಂಟಿ ಇರುವೆಯ ಮುಖಾಮುಖಿ
ಮುಖವಾಡಗಳ ಕಳಚು,ಕೊನೆಯ ಅವಕಾಶವೆಂದವರೇ ತಿರುಮಲೇಶರೆಂದರೆ

ಅಮೂರ್ತತೆಯಲ್ಲಿ ದೊರೆತ ಕವಿತೆಗಳು ವೇಷಧಾರಿ ಕಾಲದ ಕೈಗನ್ನಡಿ ಹೌದೇ
ಮನಸ್ಸಿಗೆ ಬಂದುದು ಅಕ್ಷರಕ್ಕೆ ಬರುವುದೇ,ತಪಿಸಿದವರೇ ತಿರುಮಲೇಶರೆಂದರೆ

ವಿನಾಕಾರಣದ ಸಂತೆಯಲ್ಲಿ ಕಾವ್ಯಕಾರಣದ ಶ್ರುತಿ ಹಿಡಿದು ಕುಣೀ ಕವಿತೆ ಕುಣೀ
ಆಳ ನಿರಾಳಗಳಲ್ಲಿ ವಾಗರ್ಥ ವಿಲಾಸದ ಮಾರ್ಗ ನಡೆದವರೇ ತಿರುಮಲೇಶರೆಂದರೆ

ಮೈಲಿಗಲ್ಲುಗಳ ಮೌನ ನಿಶ್ಚಲತೆಯಲ್ಲಿ ಮುಂದಿನ ಯುದ್ಧದ ಚಿತ್ರಗಳು ‘ಜಂಗಮ’
ಕಳವಳ ಸಮುದ್ರದಲ್ಲಿ ಆಗತ ಕವಿತೆಗಳ ವಿಳಾಸವಿಟ್ಟವರೇ ತಿರುಮಲೇಶರೆಂದರೆ

ಇದೊಂದು ವಿಶಿಷ್ಟ ಗಜ಼ಲ್.
ಇದರಲ್ಲಿ ಹಿರಿಯ ಕವಿ, ಲೇಖಕ ಡಾ ಕೆ ವಿ ತಿರುಮಲೇಶ್ ಅವರ ಮೂವತ್ತೈದಕ್ಕೂ ಹೆಚ್ಚು ಕವಿತೆಗಳ ಮತ್ತು ಕೆಲವು ಕೃತಿಗಳ ಹೆಸರುಗಳನ್ನು ಅಳವಡಿಸಲಾಗಿದೆ.

ಡಾ. ಗೋವಿಂದ ಹೆಗಡೆ