- ಗಜಲ್ - ಫೆಬ್ರುವರಿ 27, 2024
- ಗಜಲ್ - ಜನವರಿ 19, 2023
- ಬನ್ನಿ,ಮತ್ತೆ ಬನ್ನಿ-ರೂಮಿ ಕವಿತೆಗಳು - ಸೆಪ್ಟೆಂಬರ್ 17, 2022
ಊಹ್ಞೂ, ಪ್ಯಾರಿಸ್ ಪ್ಲಾಸ್ಟರ್‌ನದು ಅಲ್ಲವೇ ಅಲ್ಲ
ಯಾವುದೋ ಕೆರೆಯಂಗಳದ ಅಸಲು ಮಣ್ಣು
ತಂದು ಸೋಸಿ ಕಲಸಿ ಮಿದ್ದು- ಪ್ರತಿಮೆ
ಸೊಂಡಿಲು, ಸಣ್ಣ ಕಣ್ಣು, ನಾಲ್ಕು ಕೈಗಳು
ಕಿವಿ ಕೊಂಚ ಸೊಟ್ಟ, ಹೊಟ್ಟೆ ತುಸು ಸಣ್ಣ
ಆಯಿತೇ, ಸ್ವಲ್ಪ ಸುಧಾರಿಸಿಕೊಳ್ಳಿ
ಗಣಪ ನಮ್ಮವನೇ
ಕೈಗಳಲ್ಲಿ ಪಾಶ, ಅಂಕುಶ, ಅಭಯಮುದ್ರೆ ಮತ್ತೆ ಮೋದಕ
ಚಿಕ್ಕದಾಯಿತೇ? ದುಬಾರಿ ಕಾಲ
ಚೂರು ಅಡ್ಜಸ್ಟ್…
ಚಂದದ ಅಂಗರಾಗ, ಜರತಾರಿ ಬಟ್ಟೆ
ಬೇಗಡೆಯ ಕಿರೀಟದಲ್ಲಿ
ಜರ್ಬಾಗಿ ಕೂತಿದ್ದಾನೆ ಬೆನಕ
ಗತ್ತಿನಲ್ಲಿ ಕೂತ ಅವನ ಇಲಿ
ಆಹಾ, ಆ ಜಂಭವನೇನೆಂಬೆ!
ಅರೇ ಆ ಪೋರ ಎಷ್ಟು ಜೋರಾಗಿ
ಕುಣಿಯುತ್ತಿದ್ದಾನೆ ! ಹಿಂದೆ ಮುಂದೆ
ಪಲ್ಟಿ ಹೊಡೆಯುತ್ತ ಗಿರಿ ಗಿರಿ ಕೈ ಕಾಲು
ತಿರುಗಿಸಿ ಬೀಸುತ್ತ ಪೆಂಡಾಲು ಅದುರುವಂತೆ
ಹುಷಾರು! ಬಿದ್ದು ಬಿಟ್ಟಾನು ಹುಡುಗ
ಅಬ್ಬರದಲ್ಲಿ ಮೈ ಮರೆತು
ಗಣಪನ ಕಾಯ್ದುಕೊಳ್ಳಿ
ಇಲಿ ಪರವಾಗಿಲ್ಲ
ಓಡಿ ಅಡಗಿ ಬಚಾವು
ಕಾದುಕೊಳ್ಳಿ ಗಣಪ್ಪನ ಮುಕ್ಕಾಗದಂತೆ
ಅವನು ನಮ್ಮ ಪೊರೆಯಲು-
ನಾವು ಅವನ ಕಾಯಬೇಡವೇ?
★ ಗೋವಿಂದ ಹೆಗಡೆ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ