- ‘ಜೀವದನಿ’ ಜೀವಪರ ದನಿ ಎತ್ತುವ ಕೃತಿ - ಮಾರ್ಚ್ 8, 2026
- ಸ್ನೇಹವೆಂದರೆ… - ಆಗಸ್ಟ್ 3, 2025
- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ನಾನು ಓದಿದ ಪುಸ್ತಕ ‘ಇಸೆಬೆಲ್ ಆಯಿಂದೆಯ ಜೀವದನಿ’ ಅನ್ನುವ ಆತ್ಮಕತೆ.ಮೂಲತಃ ಸ್ಪ್ಯಾನಿಶ್ ಭಾಷೆಯ ಈ ಕೃತಿಯನ್ನು ಕನ್ನಡಕ್ಕೆ ತಂದಿರುವವರು ಎಮ್.ಆರ್. ಕಮಲರವರು.ಈ ಕೃತಿಯನ್ನು ಓದುತ್ತಿದ್ದರೆ ಕಾಲ, ದೇಶ, ಭಾಷೆ, ಬಣ್ಣ ಯಾವುದಾದರೆ ಏನಂತೆ ಅದು ಹೆಣ್ಣಿನದ್ದಾಗಿರಲಿ ಅಥವಾ ಗಂಡಿನದ್ದಾಗಿರಲಿ ಭಾವನೆಗಳು, ತುಮುಲಗಳು, ದರ್ಪ, ದಾಷ್ಟ್ರ್ಯಗಳು ಒಂದೇ ಆಗಿರುತ್ತದೆ ಆದರೆ ಆಡುವ ಭಾಷೆ ಮತ್ತು ಧ್ವನಿ ಮಾತ್ರ ಬೇರೆ ಅನಿಸುತ್ತದೆ. ಇಷ್ಟು ಕಾಲ ಮುಂದುವರೆದರೂ ಇನ್ನೂ ಹೆಣ್ಣುಮಕ್ಕಳ ಶೋಷಣೆ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವುದನ್ನು 2020 ಅಂದರೆ ಕೊರೊನಾ ಸಂದರ್ಭದವರೆಗೂ ಈ ಆತ್ಮಕತೆ ದಾಖಲಿಸುತ್ತಾ ಹೋಗುತ್ತದೆ.
“ನಾನು ಶಿಶುವಿಹಾರದಲ್ಲಿದ್ದಾಗಲೇ ಸ್ತ್ರೀವಾದಿಯಾಗಿದ್ದೆ” ಎನ್ನುವದರೊಂದಿಗೆ ಹುಟ್ಟು ಸ್ತ್ರೀವಾದಿಯಾಗಿ ಕಡೆಯವರೆಗೂ ಹಾಗೆ ಇದ್ದೇನೆ ಎಂದು ಫೌಂಡೇಶನನ್ನು ಸ್ಥಾಪಸಿ ಆ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡಿದವರು ಆಯಿಂದೆ. ಸ್ತ್ರೀವಾದವೆಂದರೆ ಬ್ಯಾನರ್ ಹಿಡಿದು ಹೋರಾಟ ಮಾಡುವುದಲ್ಲ ಬದಲಾಗಿ ಅಂಥ ವರ್ಗಕ್ಕೆ ಸಹಾಯ ಮಾಡುವುದು ಎನ್ನುವುದು ಈಕೆಯ ವಾದ. ಅಜ್ಜ-ಅಜ್ಜಿ ಜೊತೆ ಲೇಖಕಿ ಬಾಲ್ಯವನ್ನು ಕಳೆಯುತ್ತಾರೆ. ಅಜ್ಜಿಯ ಕಾಲಾನಂತರದಲ್ಲಿ ಅಜ್ಜನ ನಿರ್ಭಂದಗಳ ನಡುವೆ ಇದ್ದು ಅದನ್ನು ಪ್ರತಿರೋಧಿಸುವವರೆಗೂ ಮಾನಸಿಕ ಪ್ರಬುದ್ಧತೆಯನ್ನು ಬೆಳಿಸಿಕೊಳ್ಳುತ್ತಾರೆ. ಇನ್ನು ಮದುವೆಯಾಗುವವರೆಗೂ ಇರುವುದು ತಾಯಿ ಪಚಿಂತ ಹಾಗು ಮಲತಂದೆಯ ಸಂಗಡ. ಆ ಮಲತಂದೆಗೆ ಪಚಿಂತ ಎರಡನೆ ಹೆಂಡತಿಯಾದರೂ ಮೊದಲ ಹೆಂಡತಿಯನ್ನು ಬಿಡಲೊಲ್ಲದವನಾಗಿದ್ದ ಒಂದರ್ಥದಲ್ಲಿ ಭಾವುಕಜೀವಿ ಆ ಮಲತಂದೆಯೇ ಕಟುಸ್ತ್ರೀಪರ ಹೋರಾಟದಿಂದ ಲೇಖಕಿಯನ್ನು ವಿಮುಖವಾಗುವಂತೆ ತನ್ನ ಮಾತು-ಕೃತಿಯ ಮೂಲಕ ಮಾಡುತ್ತಾನೆ. ಸ್ತ್ರೀವಾದ ಎಂಬುದು ರೆಕ್ಕೆಯನ್ನು ಬಡಿದು ರೈಲನ್ನು ನಿಲ್ಲಿಸ ಹೊರಟು ಅಸ್ತಿತ್ವವನ್ನೆ ಕಳೆದುಕೊಂಡ ಗಿಳಿಯಂತಾಗುತ್ತದೆ ಎಂದು ನಿದರ್ಶನ ಕೊಡುತ್ತಿದ್ದ ಅಜ್ಜನ ಆತ್ಮಸ್ಥೈರ್ಯ ಕೆಡಿಸುವ ಮಾತುಗಳ ನಿರಂತರತೆಯ ನಡುವೆ, ಜೈವಿಕ ತಂದೆ ಜವಾಬ್ದಾರಿ ಇಲ್ಲದೆ ಒಮ್ಮೆ ಕಾಲ್ತೆಗೆದು ಹೋದವನು ತಿರುಗಿ ನೋಡಲಿಲ್ಲ ಎನ್ನುವ ಕೊರಗು ಸ್ತ್ರೀಪರ ಹೋರಾಟಗಳಲ್ಲಿ ಆಯಿಂದೆಯನ್ನು ಧುಮುಕುವಂತೆ ಮಾಡುತ್ತದೆ. ಆಯಿಂದೆಗೆ ಮೂರು ಮದುವೆಗಳು ಎರಡು ಮಕ್ಕಳು. ಮೊದಲನೆಯವನು ಮಿಗ್ವೆಲ್, ಎರಡನೆಯವನು ಅರ್ಜೆಂಟೀನಾದ ಸಂಗೀತಕಾರ, ಮೂರನೆಯವನು ರೋಜರ್ ಎಂಬ ವಕೀಲ. ಮೊದಲೆರಡು ವೈವಾಹಿಕ ಸಂಬಂಧ ಆಕೆಯ ಮನಸ್ಸಿಗೆ ಯಾತನಾಮಯವಾಗಿದ್ದರೂ ಮೂರನೆಯ ಮದುವೆಯಲ್ಲಿ ನೆಮ್ಮದಿ ಕಾಣುತ್ತಾರೆ. “ಯಾರಿಗೂ ಹೊರೆಯಾಗಿರಬಾರದೆಂಬುದು . ಇತರರಿಗಿಂತ ಎನ್ನುವುದಕ್ಕಿಂದ ನನಗೆ ನಾನು ಚಂದ ಕಾಣಬೇಕು ಎನ್ನುವ ಹಂಬಲ ಅದಕ್ಕಾಗಿ ಬೇಗ ಎದ್ದು ರೆಡಿಯಾಗುತ್ತಿದ್ದೆ” ಎನ್ನುವ ಮಾತನ್ನು ಬಹುತೇಕಬಾರಿ ಉಲ್ಲೇಖಿಸಿ ಹೆಣ್ಣುಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಾರೆ. ಪಾಕಿಸ್ಥಾನ, ಚಿಲಿ, ಸರ್ಬಿಯಾ,ಕೀನ್ಯಾ , ನೇಪಾಳ ಅಷ್ಟೇ ಏಕೆ ಭಾರತದ ರಾಜಸ್ಥಾನದ ಹಳ್ಳಿಯಹೆಣ್ಣುಗಳು ಹೆಣ್ಣು ಹೆತ್ತು ಯಾತನೆ ಪಡುವ ಬದುಕನ್ನೂ ತಮ್ಮ ಕೃತಿಯಲ್ಲಿ ಘಟನೆಗಳ ಸಮೇತ ಅನಾವರಣಗೊಳಿಸುತ್ತಾ ಪ್ರಾಪಂಚಿಕ ಮಟ್ಟದಲ್ಲಿ ಚರ್ಚೆಯಾಗಿರುವ ಇನ್ನೂ ಚರ್ಚೆಯಾಗಬೇಕಿರುವ, ಸುಧಾರಣೆಯಾಗಬೇಕಿರುವ, ನಿರ್ಮೂಲನೆಯಾಗಬೇಕಿರುವ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ.


ತಾನೂ ಸೈಬರ್ ವಂಚನೆಗೆ ಒಳಗಾಗಿದ್ದೆ ಎಂದು ತನ್ನದೇ ಕಹಿ ಅನುಭವದ ಮೂಲಕ ನಯವಂಚಕತನವನ್ನು ತೆರೆದಿಡುತ್ತಾರೆ. ಅದರಲ್ಲಿ ಈಕೆ ವಧು ವರರ ಕೇಂದ್ರಕ್ಕೆ ನೋಂದಣಿ ಮಾಡಿಕೊಂಡಿರುತ್ತಾರೆ ಈಕೆಯಿಂದ ಹಣಕಟ್ಟಿಸಿಕೊಂಡು ಡೇಟ್ ಗೆ ಬರತ್ತಿದ್ದುದು ಅಲ್ಲಿಯ ಸಿಬ್ಬಂದಿಗಳೆ ಆಗಿರುತ್ತಾರೆ. ಇನ್ನು ಬ್ರಿಟಿಷ್ ವ್ಯಕ್ತಿಯೊಬ್ಬ ಓರ್ವ ಹುಡುಗಿಯ ಎಲ್ಲಾ ಪೂರ್ವಾಪರಗಳನ್ನು ತಿಳಿದುಕೊಂಡು ಯಾವುದೋ ಕಾರಣಕ್ಕೆ ಜೈಲು ಸೇರಿ ಬೇರೆಯವರ ಮೂಲಕ ಹಣಕ್ಕಾಗಿ ಬೇಡಿಕೆ ಇಡುವುದು ಕಡೆಗೆ ಅವನು ಹುಟ್ಟುವಂಚನೆಗಾರ ಎಂದು ತಿಳಿಯುವುದು. ಇನ್ನೊಬ್ಬ ಹುಡುಗಿ ನೋಡಲು ಚನ್ನಾಗಿಲ್ಲ ಎಂದು ಹುಡುಗಿಯೇ ನೋಡಲು ಹೋದಾಗ ಅದೇ ರೆಸ್ಟೊರೆಂಟಲ್ಲಿದ್ದೂ ಮಾತನಾಡಿಸದೇ ಇರುವುದು . ಈ ಎಲ್ಲಾ ಘಟನೆಗಳು ರಂಜನೆಯನ್ನು ಒದಗಿಸುವಂಥಲ್ಲ ಪುರುಷರ ಹೀನ ಮನಃಸ್ಥಿತಿಯನ್ನು ಅನಾವರಣಗೊಳಿಸುವಂಥವು. ಹಾಗಾಗಿ ನಮಗೆ ‘ಜೀವದನಿ’ ಆತ್ಮಕತೆ ಎನಿಸುವುದಿಲ್ಲ ಬದಲಾಗಿ ಹೆಣ್ಣುಮಕ್ಕಳ ಮಾರ್ಗಸೂಚಿ ಎನಿಸುತ್ತದೆ. ಕೌಟುಂಬಿಕೆ ಹಿಂಸೆ, ದಾಂಪತ್ಯ ದ್ರೋಹ ಇವುಗಳ ಬಗ್ಗೆ ಮಾತನಾಡುತ್ತಾ ಇವುಗಳು ಸಾರ್ವಕಾಲಿಕ ಸಮಸ್ಯೆ ಎನ್ನುತ್ತಾರೆ ಈ ಸಲುವಾಗಿ ಕೋಪ ಬರಬಹುದು ಹಾಗಂತ ಉದ್ದೇಶವಿಲ್ಲದೆ ಕೋಪ ಮಾಡಿಕೊಳ್ಳುವುದು ವ್ಯರ್ಥ ಮತ್ತು ಹಾನಿಕಾರಕ ಬದಲಾಗಿ ಅದರಿಂದ ಆಚೆ ಬರಲು ಕ್ರಿಯಾಶೀಲತೆ ಬೇಕು ಎನ್ನುವ ಮಾತುಗಳನ್ನಾಡುತ್ತಾರೆ. ಎಷ್ಟೋ ಹೆಣ್ಣುಗಳು ತಮ್ಮ ಪರಿಸ್ಥಿತಿ ತೃಪ್ತಿಕರವೆಂದು ಅದೆಲ್ಲಾ ಶಾಪವೆಂದು ತೀರ್ಮಾನಿಸುವ ಬದಲು ತಮ್ಮದೇ ಮಾರ್ಗವನ್ನು ಕಂಡುಕೊಂಡು ಆಚೆ ಬರಬೇಕು ಎನ್ನುತ್ತಾ ನಮ್ಮ ಕೀಳರಿಮೆ ನಮ್ಮನ್ನು ಗುಲಾಮರನ್ನಾಗಿಸುತ್ತದೆ ಎನ್ನುವ ಎಚ್ಚರಿಕೆಯನ್ನೂ ಕೊಡುತ್ತಾರೆ.
ನಮ್ಮಲ್ಲಿ ಕ್ರಿಯಾಶೀಲತೆಗೆ ಇನ್ನೊಂದು ಒಂದು ಹೆಸರು ಹೆಣ್ಣುಮಕ್ಕಳು ಅವರ ಕರಕುಶಲತೆ ಇತ್ಯಾದಿಗಳನ್ನು ಅಗ್ಗದ ದರಕ್ಕೆ ಸರಕಾಗಿ ಕೊಂಡುಕೊಳ್ಳುವುದು ವಿಪರ್ಯಾಸ ಅದೇ ಗಂಡಸಿನ ವಿಚಾರಕ್ಕೆ ಬಂದರೆ ಅವೆಲ್ಲ ಅನೇಕ ಡಾಲರುಗಳಿಗೆ ಬಿಕರಿಯಾಗುವ ದುಬಾರಿ ಸರಕುಗಳಾಗಿ ಬಿಡುತ್ತವೆ. ಮೂಲತಃ ಅನೇಕ ಗಂಡಸರಿಗೆ ಹೆಣ್ಣೆಂದರೆ ದ್ವೇಷ ಮತ್ತು ಆಸೆ ಎಂದು ಒತ್ತಾಯಪೂರ್ವಕವಾಗಿ ಹೇಳುತ್ತಾರೆ. “ಹೆಂಗಸರು ಮೇಲಾಧಿಕಾರಿಗಳಾಗಿದ್ದರಂತೂ ತಮ್ಮನ್ನು ನೋಡಿ ನಗುತ್ತಾರೆ ಎಂದೇ ಭಾವಿಸುತ್ತಾರೆ” ಎನ್ನುವ ಮಾರ್ಗರೆಟ್ ಅಟ್ವುಡ್ ಬರೆಹವನ್ನು ಜೊತೆಗೆ ಉಲ್ಲೇಖಿಸುತ್ತಾರೆ. ಅಷ್ಟಾದರೂ ಗಂಡಸರು ಯಾವಾಗಲು ಹೆಣ್ಣು ಮಕ್ಕಳನ್ನು ಆಕರ್ಷಿಸುತ್ತಾರೆ ಅವರದು ಆಳವಾದ ಗರ್ವ ಪ್ರದರ್ಶನ ಎನ್ನುವುದನ್ನು ಪಕ್ಷಿಗಳ ಪ್ರತಿಮೆಗಳ ಮೂಲಕ ವಿವರಿಸುತ್ತಾರೆ. ಹದಿನಾಲ್ಕು ವರ್ಷದಿಂದ ನಲವತ್ತು ವರ್ಷಗಳವರೆಗೆ ಹೆಣ್ಣೊಬ್ಬಳ ಸಾವಾಗುತ್ತದೆ ಎಂದರೆ ಅದು ಹಿಂಸೆಯೇ ಆಗಿರುತ್ತದೆ ಎನ್ನುವುದನ್ನು ಸಾಬೀತು ಘಟನೆಗಳ ಮೂಲಕ ಮಾಡುತ್ತಾರೆ.
ಆಯಿಂದೆ ಉಲ್ಲೇಖಿಸಿರುವ ತಮ್ಮ ಸಮೀಕ್ಷೆಯ ಹೆಣ್ಣು ಎಲೆನಾ ಆಡುವ ಮಾತುಗಳಂತೂ ಮೊನಚಾಗಿವೆ. ಆಕೆಡಯ ಗಂಡನನ್ನು ಅಮೆರಿಕಾದಿಂದ ಗಡಿಪಾರು ಮಾಡಿದ್ದರು ಆಕೆ 22 ವರ್ಷದಿಂದ ಅಲ್ಲಿಯೇ ಯಾವಾಗ ನನ್ನನ್ನೂ ಹೊರದಬ್ಬುತ್ತಾರೆ ಎನ್ನುವ ಭೀತಿಯಿಂದ ನೆಲೆಸಿದ್ದಾಳೆ ಅಷ್ಟು ಸಂಕಟದ ಬದುಕು ಅವಳದ್ದು ಅಕೆಯನ್ನು ಕೇಳಿದಾಗ “ನೀನು ಹೆಣ್ಣಾಗಿರುವುದಕ್ಕೆ ಇಷ್ಟ ಪಡುತ್ತೀಯ” ಎಂದಾಗ “ಇನ್ನೇನಾಗುವುದಕ್ಕೆ?” ಎಂದು ಕೇಳಿದ್ದಳಂತೆ. ಇನ್ನೊಂದು ಸಮೀಕ್ಷೆಯಲ್ಲಿ ಬಹುತೇಕರು ಹೆಣ್ಣಾಗಿರಲು ಏಕೆ ಇಷ್ಟಪಡುತ್ತಾರೆ? ಎಂಬ ಆಯಿಂದೆಯ ಪ್ರಶ್ನೆಗೆ ಕೊಡುವ ಉತ್ತರ ಬಹಳ ಕುತೂಹಲಕಾರಿಯಾಗಿದೆ. ಅವುಗಳೇನೆಂದರೆ “ನಾವು ಗಂಡಸರಿಗಿಂತ ಸಹಾನುಭೂತಿ ಉಳ್ಳವರು ಹೆಂಗಸರು! ಎಂದಿಗೂ ಒಗ್ಗಟ್ಟಾಗಿ ಇರಬಲ್ಲವರು ! ಎಷ್ಟೇ ವಿರೂಪ ಗೊಳಿಸಿದರೂ ಮೊದಲಿನ ಸ್ಥಿತಿಗೆ ಬೇಗ ಬರುವ ಸ್ಥಿತಿ ಸ್ಥಾಪಕ ಗುಣವುಳ್ಳವರು ಎನ್ನುವುದನ್ನು ಹೇಳಿ ಪೋಷಿಸುವುದು ನಮ್ಮ ಗುಣ” ಎನ್ನುವುದನ್ನು ಘಂಟಾಘೋಷವಾಗಿ ಹೇಳುತ್ತಾರೆ. ನೂರಕ್ಕೆ ನೂರು ಸರಿಯಾದ ಕರಾರುವಕ್ಕಾದ ಸ್ಪಷ್ಟ ನುಡಿಗಳು ಇವು ಅಲ್ವೆ!
ಆಯಿಂದೆ ಮಿಗ್ವೆಲನನ್ನು ಮದುವೆಯಾಗಿ ಪೌಲ್ ಮತ್ತು ನಿಕೊಲಾಸ್ ಇಬ್ಬರು ಮಕ್ಕಳನ್ನು ಪಡೆದು ಹೆಂಡತಿಯಾಗಿ ಮತ್ತು ತಾಯಿಯಾಗಿ ಕರ್ತವ್ಯ ನಿರ್ವಹಿಸುವಾಗ ನನ್ನ ತಲೆ ‘ನೂಡಲ್ ಸೂಪ್’ ಆಗಿತ್ತು ಎಂದು ಸಾಂಸಾರಿಕ ಜೀವನದ ಜಂಜಡವನ್ನು ಹೇಳುತ್ತಾ ಮಗಳಿಗೆ ಭಯ ಬಿಟ್ಟು ಬದುಕುವುದನ್ನು ಕಲಿಸಿದೆ . ಮಗನಿಗೆ ಹೆಣ್ಣು ಮಗಳಿಗೆ ಒಳ್ಳೆಯ ಸಂಗಾತಿ ಅಗಬೇಕು ಎಂಬುದನ್ನು ಕಲಿಸಿದೆ ಎನ್ನುತ್ತಾರೆ. ಗಂಡುಗಳನ್ನು ಪ್ರಾರಂಭದಲ್ಲಿಯೇ ತಿದ್ದುವುದನ್ನು ಪ್ರತಿ ಹೆಣ್ಣುಗಳು ಮಾಡಬೇಕು ಎನ್ನುತ್ತಾರೆ. ‘ಪೌಲ’ ಎಂಬ ಪತ್ರಿಕೆಯಲ್ಲಿ ‘ಸಿವಿಲೈಸ್ ಯುವರ್ ಟ್ರಾಗ್ಲೋಡೈಟ್’ ಎಂಬ ಅಂಕಣವನ್ನು ಆಯಿಂದೆ ಬರೆಯಲು ಪ್ರಾರಂಭಿಸುತ್ತಾರೆ ಅದನ್ನು ಓದಿದ ಹಲವರು “ನಿನ್ನ ಅಂಕಣದ ಟ್ರಾಗ್ಲೋಡೈಟ್ ರೀತಿಯಲ್ಲಿ ನನಗೊಬ್ಬ ಗೆಳೆಯನಿದ್ದಾನೆ” ಎನ್ನುತ್ತಿದ್ದರಂತೆ. ಅಂಕಣ ಪ್ರಖರವಾಗಿ ಬರುತ್ತಿದ್ದುದರಿಂದ ಇಸಬೆಲ್ ಆಯಿಂದ ಮತ್ತು ಇತರ ಸಹೊದ್ಯೋಗಿಗಳು ಹಲ್ಲಿನ ನಡುವೆ ಚಾಕು ಇಟ್ಟುಕೊಂಡು ಬರೆದೆವು ಎಂಬ ಹೇಳಿಕೆಯನ್ನು ಕೊಡುತ್ತಾರೆ ಅಷ್ಟು ಸಂಕ್ಷೋಭೆಯನ್ನು ಆಯಿಂದೆಯ ಅಂಕಣ ಸೃಷ್ಟಿಸಿತ್ತಂತೆ.
ಮುಂದುವರೆದಂತೆ ಆಯಿಂದೆ ಸಿಲ್ವಿಯಾ ಪ್ಲಾತ್ ಎಂಬ ಕವಿ ಮತ್ತು ಹೋರಾಟಗಾರ್ತಿಯ ಸಹಾಯದಿಂದ ಸ್ತ್ರೀಪರ ಹೋರಾಟಗಳನ್ನು ಮುಂದುವರೆಸುತ್ತಾರೆ . ಆಗ ಅವರಿಗೆ ಈ ಹೋರಾಟಗಳು ನಿಧಾನಗತಿಯಲ್ಲಿ ನಾಗರಿಕತೆಯನ್ನು ಬದಲಿಸುತ್ತಿದೆ ಅನ್ನಿಸಿತಂತೆ. “ಹೆಣ್ಣಿನ ಅತೀತ ಅನುಭವಗಳನ್ನು ಗಂಡು ಪಡೆಯಲು ಸಾಧ್ಯವೆ ಇಲ್ಲ” ಎಂಬ ಸಿಲ್ವಿಯಾ ಪ್ಲಾತ್ ಅವರ ಸಾರ್ವಕಾಲಿಕ ಹೇಳಿಕೆಯನ್ನು ಹೋರಾಟಗಾರರು ಒಕ್ಕೊರಲಿನಿಂದ ಅಂಗೀಕರಿಸಿದ್ದನ್ನು ಇಲ್ಲಿ ಗಮನಿಸಬಹುದು. ಬಾಲ್ಯದಲ್ಲಿ ಸಹೋದರರಿಗೆ ಸಿಗುತ್ತಿರುವ ಸವಲತ್ತುಗಳು ನನಗೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಗಂಡಾಗಿ ಹುಟ್ಟಬೇಕು ಎಂದು ಅಯಿಂದೆ ತಿಳಿದಿದ್ದರಂತೆ ಆದರೆ ಅದನ್ನು ಧೃಢತೆ ಪ್ರಯತ್ನ ಮತ್ತು ಅದೃಷ್ಟದಿಂದ ಸಾಧಿಸಿದೆ ಎಂದು ಅವರದೆ ಹೆಸರಿನ ಫೌಂಡೇಷನ್ ಸ್ಥಾಪಿಸಿ ಹೇಳುತ್ತಾರೆ.
“ಜಗತ್ತಿನ ಕಟ್ಟುಕತೆ ಎಂದರೆ ಹೆಣ್ಣು ಮಕ್ಕಳು ನಿಷ್ಪ್ರಯೋಜಕರು” ಎಂಬ ಅನಾದರದ ಹೇಳಿಕೆಯನ್ನು ಉಲ್ಲೇಖಿಸುತ್ತಾ ಜಗತ್ತಿನ ಹೆಚ್ಚಿನ ಭಾಗದಲ್ಲಿ ಹೆಣ್ಣಿನ ಮೌಲ್ಯವನ್ನು ‘ಸೌಂದರ್ಯ ಮತ್ತು ಯೌವನಕ್ಕೆ’ ಕಟ್ಟಿ ಹಾಕಲಾಗಿದೆ ಎನ್ನುವ ಅಸಮಾಧಾನವನ್ನು ತೋಡಿಕೊಳ್ಳುತ್ತಾರೆ. ಹೆಣ್ಣನ್ನು ದೈಹಿಕವಾಗಿ ಅಲ್ಲ ಹೆಣ್ಣನ್ನು ಹೃದಯದ ಕಣ್ಣಿನಿಂದ ನೋಡುವವರು ಬೇಕು ಅದು ನನ್ನ ಗಂಡ ರೋಜರ್ನಿಂದ ಸಾಧ್ಯವಾಯಿತು ಎಂದು ತಮ್ಮ ಪತಿಯ ಉಲ್ಲೇಖವನ್ನು ಮಾಡುತ್ತಾರೆ.
ಮೊದಲನೆ ಪ್ರಾಪಂಚಿಕ ಯುದ್ಧದನಂತರ ಯುವ ಜನಾಂಗ ಲಿಂಗಾಧಾರಿತ ಸರ್ವನಾಮಗಳನ್ನು ಆಡುವುದನ್ನು ಬಿಟ್ಟರು ಅಂದರೆ ಅಲ್ಲಿ ಕೊಂಚ ಮಟ್ಟಿಗೆ ಸುಧಾರಣೆ ಆಗುತ್ತಿತ್ತು ಎಂದು ನಾವು ತಿಳಿಯಬಹುದು. ಅದರ ಉಲ್ಲೇಖವನ್ನು ಆಯಿಂದೆ ಮಾಡಿದ್ದಾರೆ. ಲೇಖಕಿಯ ಬದುಕಿಗೆ ಬಂದಾಗ ಕಾರ್ಮೆನ್ ಬಲ್ಎಲ್ಸ್ ಅವರಿಗೆ ಆಯಿಂದೆ ಯಾವಾಗಲೂ ಋಣಿಯಾಗಿರುತ್ತಾರೆ ಆಕೆ ‘ದ ಹೌಸ್ ಆಫ್ ದ ಸ್ಪಿರಿಟ್’ ಪುಸ್ತಕದ ಪರಿಚಯ ಮಾಡಿಸುವ ಸಲುವಾಗಿ ಭೋಜನ ಕೂಟ ಏರ್ಪಡಿಸಿದ್ದಾಗ ಕರೆಂಟ್ ಹೋಗುತ್ತದೆ ಧೃತಿಗೆಡದೆ ‘ಚಿಲಿಯ ಹೆಂಗಸರ ಆತ್ಮಗಳು ಈಕೆಯ ಕೃತಿಗೆ ಗೌರವ ಸೂಚಿಸಲು ಬಂದಿವೆ” ಎಂದು ಹೇಳಿ ಇಡೀ ಭೋಜನಕೂಟದಲ್ಲಿ ಹೊಸ ಸಂಚಲನ ಮೂಡುವಂತೆ ಮಾಡುತ್ತಾರೆ. ಲೇಖಕಿಯರ ಪುಸ್ತಕಗಳಿಗೆ ವಿಮರ್ಶೆಗಳು ಬರುವುದಿಲ್ಲ ಎನ್ದನುವ ಕೊರಗು ಆಯಿಂದೆಗೂ ಇತ್ತು. ಚಿಲಿಯಲ್ಲಿ ಅವರಿಗಿಂತ ಮುಂದೆ ಯಾರಾದರು ಬಂದರೆ ಅವರನ್ನು ಕುಟ್ಟಿ ಪುಡಿ ಮಾಡಲಾಗುತ್ತದೆ ಎಂದು ಎಲ್ಲಾ ಕಾಲ ದೇಶದಲ್ಲಿಯೂ ಇರುವ ಸಂಚನೆಗಳನ್ನು ಹೇಳುತ್ತಾರೆ. ಹೆಸರು ಹೇಳಲು ಇಚ್ಛಿಸದ ಒಬ್ಬ ವ್ಯಕ್ತಿ ಇವರನ್ನು “ ಬರಹಗಾರ್ತಿಯಲ್ಲ ಟೈಪಿಸ್ಟ್” ಎಂದಿದ್ದನಂತೆ ಭಾರತದಲ್ಲೂ ಅಮೃತಾಪ್ರೀತಂ ಅವರಿಗೂ ಇಂಥ ಟೀಕೆಗಳೆ ಬಂದಿದ್ದವು ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ಆತ್ಮಕತೆಯ ಮುಂದುವರೆದ ಭಾಗದಲ್ಲಿ ಓಲ್ಗಾ ಮುರ್ರೆ ನೇಪಾಳದ ಯೂಥ್ ಫೌಂಡೇಶನ್ ಪ್ರಾರಂಭಿಸಿ ಹದಿನೈದು ಸಾವಿರ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿದ ಯಶೋಗಾಥೆಯನ್ನು ಹೇಳುತ್ತಾರೆ. ನೇಪಾಳಿ ಸರ್ಕಾರ ಕಮ್ಲಾರಿ ಸಂಪ್ರದಾಯವನ್ನು ಅಕ್ರಮವೆಂದು ಘೋಷಣೆ ಮಾಡಿದ್ದು ಓಲ್ಗಾ ಮುರ್ರೆಗೆ ಸಮದ ಗೌರವ ಎನ್ನುತ್ತಾರೆ. ಗೆಳತಿ ಲೊರಿ ಜೊತೆಗೆ ಕೀನ್ಯಾ ಪ್ರವಾಸ ಮಾಡಿದಾಗ “ಹೆಣ್ಣುಮಕ್ಕಳು ಗುಂಪಿನಲ್ಲಿದ್ದಾಗ ಹೆಚ್ಚು ಸಂತೋಷ ಪಡುತ್ತಾರೆ” ಎಂದಿದ್ದನ್ನು ಸ್ಫೂರ್ತಿಯ ವಾಕ್ಯವಾಗಿ ಬರೆದಿದ್ದಾರೆ. ಕೆನ್ಯಾದ ಸಮುದಾಯ ದಲ್ಲಿ ಏಡ್ಸ್ ಹರಡುವುದನ್ನು ಕಡಿಮೆ ಮಾಡುತ್ತಾರೆ ಎಸ್ತರ್ ಒಡಿಯಾಂಬೋ ಎಂಬ ಮಹಿಳೆ ನಿವೃತ್ತಿಯ ನಂತರ ಮಾಡುವ ಸುಧಾರಣೆಯನ್ನು ಕುರಿತು ಹೇಳುತ್ತಾರೆ. ಮಿಚೆಲ್ ಬಚಲೆಟ್ ಪ್ರಥಮ ಚಿಲಿಯ ಪ್ರಥಮ ಮಹಿಳಾ ಅಧ್ಯಕ್ಷರಾಗಿರುತ್ತಾರೆ ಕ್ಯಾಥೊಲಿಕ್ ಚರ್ಚ್ಗಳು ಮತ್ತು ಬಲಫಂಥೀಯ ಪಕ್ಷಗಳು ಇರುತ್ತವೆ ಆದರೆ ಅದರ ವಿರುದ್ಧ ಹೋರಾಟ ಮಾಡುತ್ತಾಲೆ ಗರ್ಭ ನಿರೋಧಕ ಮಾತ್ರೆಗಳನ್ನು 14 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳಿಗೆ ಕೊಡುವುದೇ ಸಾಧನೆಯೆಂದೆ ತಿಳಿದಿದ್ದರು ಮಿಚೆಲ್ ಬಚಲೆಟ್ ಎನ್ನುವಲ್ಲಿ ಆ ಹೆಣ್ಣುಮಕ್ಕಳ ಯಾತನಾಮಯ ಸನ್ನಿವೇಶವನ್ನು ಊಹಿಸಬಹುದು.
ಗಂಡಸರಿಗೆ ನಿವೃತ್ತಿ ಎನ್ನುವುದು ಜೀವನದ ಅಂತ್ಯ ಆದರೆ ಅದು ಹೆಣ್ಣು ಮಕ್ಕಳಿಗೆ ಕ್ರಿಯಾಶೀಲತೆಯ ಆರಂಭ ವ್ಯಾಯಾಮ ಮತ್ತು ಆಹಾರ ಕ್ರಮ ವಯಸ್ಸಾದಂತೆ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ ಮಹಿಳೆಯರಿಗೆ ಆರೋಗ್ಯದ ಕಾಳಜಿ ವಹಿಸುವಂತೆ ಸಲಹೆ ಕೊಡುತ್ತಾರೆ. ಗಂಡಸಿಗೆ ಬೆದರಿಕೆಯ ಭಾವ ಮೂಡಿದಾಗ ಅಡ್ರಿನಲಿನ್, ಟೆಸ್ಟೋಸ್ಟೆರಾನ್ ಹಾರ್ಮೋನ್ ಇಂದ ಸಾಮಾನ್ಯವಾಗಿ ಗಂಡಸರು ಹೊಡೆದಾಟಕ್ಕೆ ನಿಲ್ಲುತ್ತಾರೆ ಅದೇ ಹೆಣ್ಣು ಮಕ್ಕಳು ಆಕ್ಸಿಟೋಸಿನ್ ಮತ್ತ ಈಸ್ಟ್ರೋಜನ್ ಹಾರ್ಮೋನ್ ಸಹಾಯದಿಂದ ಹೋರಾಟ ಮಾಡಲು ಸಹಾಯ ಮಾಡುತ್ತಾರೆ. ಯಾವ ಗಂಡಸಿಗಾದರು ಹೊಡೆತ ಬಿದ್ದರೆ ಅದು ಚಿತ್ರ ಹಿಂಸೆ ಎಂದೇ ಈ ಕ್ಷಣದವರೆಗೂ ಬಿಂಬಿತವಾಗುತ್ತದೆ ಅದೇ ಹೆಣ್ಣಿಗೆ ಅದರ ಅನುಭವವಾದಾಗ ‘ಕೌಟಿಂಬಿಕ ಹಿಂಸೆ’ ಎಂದು ನಗಣ್ಯವಾಗುತ್ತದೆ ವರದಿಯೇ ಅಗುವುದಿಲ್ಲ! ಸಾಮಾಜಿಕರೆಲ್ಲಾ ಗಂಡಿನ ಮರ್ಯಾದೆಯ ಸಂರಕ್ಷಕರಾಗುತ್ತಾರೆ ಎಂಬ ವಿಷಾದವನ್ನು ವ್ಯಕ್ತಪಡಿಸುತ್ತಾರೆ.
“ಅತೀ ಅಗತ್ಯವಾಗಿ ಇಂದಿನ ಹೆಣ್ಣಿಗೆ ಏನು ಬೇಕು”? ಎನ್ನುವ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಅದರಲ್ಲಿ ಸಾಕ್ಷರತೆ ಪ್ರಮುಖವಾದುದು. ಸಾಕ್ಷರತೆ ಎಂದರೆ ಕೇವಲ ಅಕ್ಷರ ಜ್ಞಾನವಲ್ಲ! ಹೆಣ್ಣಿನ ಬದುಕು, ಜೈವಿಕಸಂರಚನೆ, ದೈಹಿಕಬದಲಾವಣೆ, ವೈಜ್ಞಾನಿಕ ನಿಲುವುಗಳನ್ನು ಅರಿತಿರಬೇಕು ಇದರ ಸಂಗಡ ಆರ್ಥಿಕ ಸ್ವಾತಂತ್ರ್ಯ, ಮನೋಸಾಂಗತ್ಯ ಹೆಣ್ಣು ಮಕ್ಕಳಿಗೆ ಬೇಕು ಎನ್ನುವ ನಿಲುವನ್ನು ಇಸಬೆಲ್ ಆಯಿಂದೆ ತಮ್ಮ ಆತ್ಮಕತೆಯಲ್ಲಿ ಹೇಳಿದ್ದಾರೆ ಇದನ್ನು ‘ಜೀವದನಿ’ ಎಂಬ ಹೆಸರಿನಲ್ಲಿ ಎಂ. ಆರ್ ಕಮಲರವರು ಕನ್ನಡಕ್ಕೆ ಸರಳ ಸುಲಲಿತ ಭಾಷೆಯಲ್ಲಿ ತಂದಿದ್ದಾರೆ. ಈ ಕೃತಿಯನ್ನು ಓದುತ್ತಿದ್ದರೆ ಇದು ವಿದೇಶಿ ಮಹಿಳೆಯೊಬ್ಬರ ಆತ್ಮಕತನವಲ್ಲ ಬದಲಾಗಿ ನಮ್ಮ ನಡುವಿನ ಹೆಸರು ಹೇಳಲು ಇಚ್ಛಿಸದ ಸಾಧನೆಗೈದ ಮಹಿಳೆಯೊಬ್ಬರ ಕಥೆಯೇ ಅನ್ನಿಸುತ್ತದೆ.




ಹೆಚ್ಚಿನ ಬರಹಗಳಿಗಾಗಿ
ಸಾಂಸ್ಕೃತಿಕ ನಗರಿಯಲ್ಲೊಂದು ಶಿಕ್ಷಣ ಕ್ರಾಂತಿ
ಬೇಂದ್ರೆಯವರ ನಾಕುತಂತಿಯ ಮರು ಓದು
ಗಣೇಶನ ಕೈಯಲ್ಲಿಯ ಲಾಡು