- ಕಾಡು ಗುಲಾಬಿ, ಪ್ರಯಾಣ ಸುರಕ್ಷಿತವಾಗಿರಲಿ - ಮೇ 28, 2022
- ಜೀವನ ಪ್ರೀತಿಯ ಹರಿವು - ಜನವರಿ 14, 2021
‘ಪ್ರೀತಿ’ ಪದವೇ ಎಷ್ಟೊಂದು ಭಾವತುಂಬಿದ ಸಮುದ್ರ ಅಲ್ಲವೇ! ಬಹುಶಃ ನಮ್ಮ ಅಸ್ತಿತ್ವದ ಚಿಕ್ಕ ತುಣುಕೊಂದು ಜಗತ್ತನ್ನು ನೋಡುವ ಮುಂಚಿತವಾಗಿಯೇ ನಾವೆಲ್ಲರೂ ಪ್ರೀತಿಗೆ ಸಹಜವಾಗಿಯೇ ಬೆಸೆದುಕೊಂಡಿರುತ್ತೇವೆ ಎಂದರೆ ತಪ್ಪಾಗಲಾರದು. ತನ್ನೆಲ್ಲಾ ಪರೀಕ್ಷೆಗಳನ್ನು-ಅಡೆತಡೆಗಳನ್ನು ಮೀರಿ ಪುಟಾಣಿ ವೀರ್ಯಾಣುವೊಂದು ಅಂಡಾಣುವಿನೊಡನೆ ಸಂಯೋಗಿಸಿ ತಾಯಿಯ ಗರ್ಭದ ಅಗಾಧ ಕತ್ತಲೆಯಲ್ಲಿ ಬೆಚ್ಚಗೆ ದೀರ್ಘ ಯಾನಕ್ಕೆ ಧ್ಯಾನಿಸಲು ಕುಳಿತಾಗಲೇ ಪ್ರೀತಿಯ ವಿವಿಧ ಆಕಾರಗಳನ್ನೂ ಅಳೆಯುವ ಕಠಿಣ ಪ್ರಯತ್ನ ಆರಂಭಗೊಳ್ಳುತ್ತದೆ. ತನ್ನೊಳಗೇ ರೂಪುಗೊಳ್ಳುತ್ತಿರುವ ತನ್ನದೇ ಮತ್ತೊಂದು ಜೀವದ ಬಗೆಗಿನ ಅನುಭವಗಳು, ತನ್ನಲ್ಲಾಗುವ ಬದಲಾವಣೆಗಳು ತಾಯಿಗೆ ಪ್ರೀತಿಯ ಮತ್ತೊಂದು ಕೊಂಡಿಯ ಪರಿಚಯವನ್ನು ನೀಡುವಾಗ, ತನ್ನದೇ ಕಲ್ಪನೆಗಳಿಗೆ ಬಣ್ಣಗಳನ್ನು ಹಚ್ಚುತ್ತಾ, ಖುಷಿಯ ದೀಪಾವಳಿಯಲ್ಲಿ ತಂದೆಯಾದವನು ನಕ್ಷತ್ರಕಡ್ಡಿಯನ್ನು ಹಿಡಿದು ನಿಂತಿರುತ್ತಾನೆ. ಮೊದಲ ಬಾರಿಗೆ ಕಣ್ತೆರೆದು ಜಗತ್ತನ್ನು ನೋಡಿ ಅಳುವ ಮಗುವಿನ ಧ್ವನಿಯಲ್ಲೂ ಪ್ರೀತಿಯಿರುತ್ತದೆ. “ನಿನ್ನೊಳಗೇ ಇಷ್ಟು ದಿನಗಳ ಕಾಲ ಬೆರೆತು ಕುಳಿತಿದ್ದ ನನಗೆ ನಿನ್ನ ಮುಖ ನೋಡುವ ಭಾಗ್ಯ ದಕ್ಕಿತಲ್ಲ ಅಮ್ಮಾsss” ಎನ್ನುವ ಧನ್ಯತೆಯಿರುತ್ತದೆ. ಹೀಗೆ ಹಂತ ಹಂತವಾಗಿ ಪ್ರೀತಿಸುವುದನ್ನು ಕಲಿಯುತ್ತಲೇ ಬೆಳೆಯುತ್ತಿರುತ್ತೇವೆ ನಾವೆಲ್ಲರೂ.
ಬಹಳಷ್ಟು ಬಾರಿ ಪ್ರೀತಿ, ಮಮತೆ, ಕಾಳಜಿ, ವಾತ್ಸಲ್ಯ ಮೊದಲಾದ ಆಪ್ತ ಭಾವಗಳ ಜೊತೆ ಜೊತೆಗೆ ಅವಿಭಾಜ್ಯ ಅಂಗವೇ ಎನ್ನುವಂತೆ ನೋವು, ದುಃಖ, ಹತಾಶೆ ಎಲ್ಲವೂ ಕೂಡಿಕೊಂಡಿರುತ್ತವೆ, ಉನ್ಮತ್ತವೆನಿಸಿದಾಗ ಕಣ್ಣೀರು ತನ್ನೂರಿನಿಂದ ತಂದ ಹಳೆಯ ಉಡುಗೊರೆಯಂತೆ ಆಗಾಗ ಅಪ್ಪಿಕೊಳ್ಳುತ್ತಿರುತ್ತದೆ. ಮನುಷ್ಯ ಸಂಬಂಧಗಳ ಮೇಲೆ ಪ್ರೀತಿ ಹುಟ್ಟಿದಾಗ ಭೇದಗಳ ಗೆರೆಯನ್ನು ದಾಟಿ ಹೊಂದಾಣಿಕೆಯು ಮೊದಲುಗೊಳ್ಳುತ್ತದೆ. ಎಲ್ಲವನ್ನೂ-ಎಲ್ಲರನ್ನೂ ಗೌರವಿಸುವ ವಿವಿಧ ಆಯಾಮಗಳು ಹುಟ್ಟಿಕೊಳ್ಳುತ್ತವೆ. ನಾನಾ ವಿಚಾರಗಳು, ಜಾತಿ-ಧರ್ಮಗಳು, ಸಂಸ್ಕೃತಿ-ಸಂಸ್ಕಾರಗಳು, ರೀತಿ-ರಿವಾಜು-ನಂಬಿಕೆಗಳು, ಅಕ್ಷರಸ್ಥ-ಅನಕ್ಷರಸ್ಥ ಸ್ತರಗಳು, ಊರು-ನಗರ-ದೇಶಗಳು, ವೇಷ-ಭಾಷೆಗಳು ಈ ಎಲ್ಲಾ ಭೇದಗಳ ನೆಂಟಸ್ತಿಕೆಯೊಂದಿಗೆ ಮನುಷ್ಯ ಮನುಷ್ಯನ ನಡುವೆ ಬಾಂಧವ್ಯಗಳು ಮತ್ತೆ ಮತ್ತೆ ಬೆಸೆಯುತ್ತಿರುತ್ತವೆ. ಬದುಕಿನ ತಿರುವುಗಳಲ್ಲಿ ಒಂದಷ್ಟು ಅಪರಿಚಿತ ಪಾತ್ರಗಳು ನಮ್ಮ ಪರಿಧಿಯಲ್ಲಿ ಸಂಧಿಸುತ್ತಿರುತ್ತವೆ, ಆತ್ಮೀಯ ಎನಿಸಿ ನೆನಹುಗಳ ಶರಧಿಯೊಳಗೆ ಬಿಂದುಗಳಾಗಿ ಮಿಲನವಾಗುತ್ತಿರುತ್ತವೆ. ಕೆಲವೊಂದು ಸನ್ನಿವೇಶಗಳು, ಕೆಲ ವ್ಯಕ್ತಿಗಳು ನಮ್ಮ ವ್ಯಕ್ತಿತ್ವದ ಮೇಲೆ ವಿಭಿನ್ನ ರೀತಿಯಲ್ಲಿ ಪ್ರಭಾವ ಬೀರುತ್ತಾ ಸದಾ ಹರಿಯುತ್ತಿರುತ್ತಾರೆ. ಹೀಗೆ ಪ್ರತಿ ಬಾರಿ ಹೊಸ ಚಿಗುರಿನೊಂದಿಗೆ ಹಬ್ಬುತ್ತಾ ಸಾಗುವ ಈ “ಪ್ರೀತಿ” ಎಂಬ ಲತೆಯ ತಂತುಬೇರುಗಳು ಎಲ್ಲೆಲ್ಲಿ ಜೀವನದ ಭೂಮಿಯನ್ನು ಆಲಂಗಿಸುತ್ತವೆಯೋ ಅಲ್ಲಲ್ಲಿ ಪುಟ್ಟ ಪುಟ್ಟ ಹೂವಿನ ತರಹದ ಕಥೆಗಳು ಅರಳಿಕೊಳ್ಳುತ್ತವೆ. ಅಂತಹ ಕೆಲ ಹೂಗಳ ಕಥೆಗಳನ್ನು ಇಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ.
ನಿರಾಶ್ರಿತರ ಹಾಡಿಗೆ ಶ್ರುತಿಯಾದವನು:
ಪ್ರಪಂಚದ ಹಲವು ಭಾಗಗಳು ಅಧಿಪತ್ಯದ ದುರಾಸೆಯಲ್ಲಿ ಇಂದಿಗೂ ಸಹ ಯುದ್ಧಭೂಮಿಗೆ ರಕ್ತತರ್ಪಣ ಎರೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಒಂದಷ್ಟು ರಾಷ್ಟ್ರಗಳು ನೇರವಾಗಿ ಭಾಗಿಯಾಗುತ್ತಿದ್ದರೆ ಮತ್ತೊಂದಷ್ಟು ಶೀತಲಸಮರದ ಕಹಳೆಯನ್ನು ಎಂದಿನಿಂದಲೋ ಊದುತ್ತಿವೆ. ಈ ಎಲ್ಲಾ ರಕ್ಕಸ ರಣತಂತ್ರಗಳ ಎಡೆಯಲ್ಲಿ ಯುದ್ಧ ಯಜ್ಞಕ್ಕೆ ಆಹುತಿಯಾಗುತ್ತಿರುವುದು ಮಾತ್ರ ಸಾಮಾನ್ಯ ಜೀವನ ನಡೆಸುತ್ತಾ, ಇವುಗಳಾವುದರ ಅರಿವೂ ಇಲ್ಲದ ಬಡಪಾಯಿ ಜೀವಗಳು. ಕಡಲೇಕಾಯಿಯನ್ನು ಎಳ್ಳಿನೊಂದಿಗೆ ಹುರಿವಾಗ, ಕಡಲೆಯು ಗರಿಗರಿಯಾಗಿ ತಿನ್ನಲು ತಯಾರಾಗುವಾಗ ಎಳ್ಳು ಸುಟ್ಟು ಕರಕಲಾಗಿ ಹೋಗುವಂತಹ ಸ್ಥಿತಿ ಇಲ್ಲಿನ ಜನ ಸಾಮಾನ್ಯರದ್ದು. ಉಸಿರುಗಟ್ಟುವಾಗ ಎಲ್ಲರೂ ಗಾಳಿಯನ್ನು ಅರಸುತ್ತಾ ದಿಕ್ಕೆಟ್ಟು ಓಡುವಂತೆ, ಇವರೂ ಓಡಲು ಆರಂಭಿಸಿ ವರ್ಷಗಳೇ ಕಳೆದಿವೆ. ಎಲ್ಲಿ ಎಷ್ಟೇ ಆಶ್ರಯ-ಆಹಾರ ದೊರೆತರೂ ಹುಟ್ಟಿದ ಭೂಮಿಯ ಆತ್ಮೀಯತೆ ದೊರೆಯುವುದಕ್ಕೆ ಸಾಧ್ಯವೇ? ಈ ರೀತಿ ನಿರಾಶ್ರಿತರಾಗಿ ಪರದೇಶಗಳ ಆಸರೆಯಲ್ಲಿ ಬದುಕಲು ಆರಂಭಿಸಿ ಪೀಳಿಗೆಯ ಕಾಲವಾದರೂ ‘ನಿರಾಶ್ರಿತ’ರೆನ್ನುವ ಬಿರುದೂ, ಜೊತೆಗೆ ಒಂದಿಷ್ಟೂ ಎದುರಿಗೆ ಕಾಣಸಿಗದ ಆದರೆ ಇಂದಿಗೂ ಅನುಭವಕ್ಕೆ ಬರುವ ‘ತಾರತಮ್ಯ’ವನ್ನೂ ದಿನನಿತ್ಯ ಎದುರಿಸುತ್ತಿದ್ದಾರೆ. ಈ ರೀತಿಯ ಬದುಕಿನಿಂದಾಗಿ ಅವೆಷ್ಟೋ ಪುಟ್ಟ ಮಕ್ಕಳು ತಿಳಿಯದೇ ತಪ್ಪುದಾರಿ ಹಿಡಿಯುತ್ತಿದ್ದಾರೆ. ಇಂತಹ ಅನೇಕ ಮಕ್ಕಳ ಶ್ರುತಿ ತಪ್ಪಿದ ಬದುಕಿಗೆ ಜೀವ ತುಂಬುವುದಕ್ಕೋಸ್ಕರ ತನ್ನ ಸಂಗೀತದ ಜ್ಞಾನವನ್ನು ಧಾರೆಯೆರೆಯುತ್ತಿದ್ದಾನೆ ಒಬ್ಬ ಕಲಾ ಆರಾಧಕ. ಆತ ಬೆಳೆದ ಊರಿನಲ್ಲಿ ವಿದ್ಯೆ ಎಂದರೆ ಅದು ಕೇವಲ ಸಂಗೀತವಂತೆ. ಅಲ್ಲಿ ದಿನಕ್ಕೆ ಕನಿಷ್ಟ ೧೨-೧೪ ಗಂಟೆಗಳ ಕಾಲ ಸಂಗೀತ ಅಧ್ಯಯನ ನಡೆಸಲೇಬೇಕಿತ್ತು. ಸಂಗೀತ ಸ್ಪರ್ಧೆಗಳಲ್ಲಿ ಗೆದ್ದಾಗ ಬರುವ ಬಹುಮಾನಗಳಲ್ಲೇ ದಿನನಿತ್ಯದ ಹೆಚ್ಚಿನ ವಹಿವಾಟುಗಳು ನಡೆಯುತ್ತಿದ್ದುದು. ತನ್ನ ಕಲಾಸಕ್ತಿಯ ಮೂಲಕ ಮನುಷ್ಯ ಪ್ರೀತಿಯನ್ನು ಪಸರಿಸುವ ಉದ್ದೇಶದೊಂದಿಗೆ ಪ್ರಪಂಚ ಪರ್ಯಟನೆಗೆ ಮುಂದಾಗುತ್ತಾನೆ ಒಂದು ದಿನ. ಅಲ್ಲಲ್ಲಿ ಇಂತಹ ನಿರಾಶ್ರಿತರ ಮಕ್ಕಳನ್ನು ಭೇಟಿಯಾಗುತ್ತಾನೆ, ಅವರ ಕನಸುಗಳಿಗಾಗಿ ತುಡಿಯಲು ಪ್ರಾರಂಭಿಸುತ್ತಾನೆ. ತನಗೆ ಎಷ್ಟೇ ತೊಡಕುಗಳು ಎದುರಾಗಿದ್ದರೂ ಸಂಗೀತವು ತನ್ನೊಂದಿಗೆ ಇದ್ದಿದ್ದಕ್ಕೆ ತಾನು ಎಲ್ಲವನ್ನೂ ಸಂಭಾಳಿಸುವುದನ್ನು ಕಲಿತಿರುವುದಾಗಿಯೂ, ಅದೇ ರೀತಿಯಲ್ಲಿ ಈ ಪುಟ್ಟ ಮನಸುಗಳ ಒಳಗೆ ಕಲಾ ಸರಸ್ವತಿಯನ್ನು ಕೂರಿಸಿದಾಗ ಅವಳು ಸಂಗೀತವನ್ನಷ್ಟೇ ಅಲ್ಲದೇ ಜೀವನದ ಸರಿ-ತಪ್ಪುಗಳ ವಿಮರ್ಶೆಯನ್ನು ಮಾಡಿಸುತ್ತಾಳೆ ಎನ್ನುವ ನಂಬಿಕೆಯೊಂದಿಗೆ ಸಂಗೀತ ಶಿಕ್ಷಣವನ್ನು ಆರಂಭಿಸುತ್ತಾನೆ. ಪ್ರಪಂಚದ ನಾನಾ ಭಾಗಗಳಲ್ಲಿ ಉಚಿತ ತರಬೇತಿ-ಶಿಬಿರಗಳನ್ನು ಆಯೋಜಿಸಿ ಪುಟ್ಟ ಪುಟ್ಟ ವಾದ್ಯವೃಂದಗಳನ್ನು ತಯಾರಿಸುತ್ತಾನೆ. ಆ ಮೂಲಕ ನಾಳಿನ ಸಮಾಜಕ್ಕೆ ರೂಪವೊಂದನ್ನು ಕೊಡುವ ಸಣ್ಣ ಪ್ರಯತ್ನವೊಂದನ್ನು ತನ್ನ ಕಲೆಯ ಮಾಧ್ಯಮದಿಂದ ನಡೆಸುತ್ತಾ ತೃಪ್ತಿಯ ಬದುಕನ್ನು ಸಾಗಿಸುತ್ತಿದ್ದಾನೆ.
ಕೇಳಿಸದ ಸ್ವರಗಳ ಕಥೆಗಳನ್ನು ಸೃಷ್ಟಿಸುವ ಅವಳೊಬ್ಬಳು ಹವ್ಯಾಸಿ ಡಾಕ್ಯುಮೆಂಟರಿ ಫಿಲ್ಮ್ ಮೇಕರ್:
‘ಕಿವಿ’ ಎಂದಾಕ್ಷಣ ನಮ್ಮ ಸುತ್ತಮುತ್ತಲ ಶಬ್ದಗಳು ನಮಗೆ ಕೇಳುವಂತೆ ಸಹಕರಿಸುವ ದೇಹದ ಒಂದು ಭಾಗ, ಪಂಚೇಂದ್ರಿಯಗಳಲ್ಲಿ ಒಂದು ಎಂಬ ಮೊದಲಾದ ವಿಚಾರಗಳು ಹೊಳೆಯುತ್ತವೆ. ವೈಜ್ಞಾನಿಕವಾಗಿ ಕಿವಿಯು ದೇಹದ ಸಮತೋಲನವನ್ನು ಕಾಪಾಡಲು ಸಹಕರಿಸುವ ಅತಿ ಪ್ರಮುಖವಾದ ಪುಟಾಣಿ ಅಂಗ. ಹಾಗಾಗಿಯೇ ಕಿವಿಯ ನರಗಳಲ್ಲಿ ಸಮಸ್ಯೆಗಳು ಬಂದಾಗ ಕಿವುಡುತನ ಮಾತ್ರವಲ್ಲದೆ ಮಾನಸಿಕ ಸಮಸ್ಯೆಗಳೂ ಕಾಣಿಸುತ್ತವೆ. ಈ ದೃಷ್ಟಿಯಲ್ಲಿ ಕಿವಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಹೆಚ್ಚಿನ ಕಾಳಜಿಯೊಂದಿಗೆ ನೋಡಿಕೊಳ್ಳುವುದು ಅತಿ ಅಗತ್ಯ. ನಮ್ಮೆಲ್ಲರಂತೆಯೇ ಮೊಬೈಲ್ ಫೋನ್ ಕ್ಯಾಮರಾದಲ್ಲಿ ವೀಡಿಯೋ ಮಾಡುತ್ತಾ ತಾನು ಕಂಡದ್ದನ್ನು ಚಲನಚಿತ್ರದಂತೆ ಪೋಣಿಸುತ್ತಾ ತನಗನಿಸಿದ ಅಚ್ಚರಿ-ವಿಪರ್ಯಾಸಗಳಿಗೆ ಬಣ್ಣಹಚ್ಚುತ್ತಾ ತನ್ನ ಗೆಳೆಯರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಳು ಆ ಮರುಭೂಮಿಯ ಹುಡುಗಿ. ಮರುಭೂಮಿ ಎಂದರೆ ಕಣ್ಣರಳಿಸಿದಷ್ಟೂ ಮೌನ ಕಾಣುವ ದಿಗಂತಗಳು ಸಂಧಿಸುವ ಅನಂತ ತವರು. ಬಾಲ್ಯದಿಂದಲೂ ಆ ಮೌನವನ್ನು ಆಕೆ ಅಳೆಯುತ್ತಿದ್ದದ್ದು ಪ್ರಕೃತಿಯ ಲಯವನ್ನು ಅನುಸರಿಸುತ್ತಾ; ಸೂರ್ಯನ ಚಲನೆ, ಸಲಿಲ ವಾಸನೆಯ ಕಡೆಗೆ ದಿಕ್ಸೂಚಿ ಇಲ್ಲದೆಯೇ ನಡೆಯುವ ಒಂಟೆಗಳ ನೆರಳುಗಳ ಗಂಭೀರ ದಾಪು, ಬೀಸುವ ಗಾಳಿಗೆ ವಿವಿಧ ಆಕಾರಗಳನ್ನು ಪಡೆಯುವ ಮರಳಿನ ನೃತ್ಯ, ಶೀತಲತೆಯ ಆಗರವೆನ್ನುವಂತೆ ಅನಿಸುವ ರಾತ್ರಿಗಳಲ್ಲಿ ಫಳಫಳ ಎನ್ನುತ್ತಾ ನಗುವ ನಕ್ಷತ್ರಗಳು ಇತ್ಯಾದಿ ಇತ್ಯಾದಿ ಸರಳ ಅದ್ಭುತಗಳ ಲಯವನ್ನು ಮೌನದಲ್ಲಿಯೇ ಅರಿಯುವ ವಿದ್ಯೆಯನ್ನು ಅವಳಿಗೆ ಮರುಭೂಮಿ ಕಲಿಸಿತ್ತು. ಉನ್ನತ ವ್ಯಾಸಂಗಕ್ಕಾಗಿ ಆಕೆ ಜಗತ್ತಿನ ಮತ್ತೊಂದು ಭಾಗದ ಗದ್ದಲದ ನಗರವೊಂದಕ್ಕೆ ತೆರಳುತ್ತಾಳೆ. ಗದ್ದಲದ ನಡುವೆ ಅವಳು ಮೌನವನ್ನು ಹುಡುಕುತ್ತಾ ಹೊರಟಾಗ ವಿಶೇಷ ಚೇತನ ಮಕ್ಕಳ ಆಶ್ರಮವೊಂದರಲ್ಲಿ ಕಿವುಡು ಮಕ್ಕಳ ಗುಂಪೊಂದು ಅವಳನ್ನು ಆಕರ್ಷಿಸುತ್ತದೆ. ಅವರೆಲ್ಲರಿಗೂ ಮೌನದ ರವಗಳನ್ನು ಪರಿಚಯಿಸಲು ಮೊದಲುಗೊಳ್ಳುತ್ತಾಳೆ. ಈ ಪ್ರಯತ್ನಕ್ಕೆ ತನ್ನ ವೀಡಿಯೋಗ್ರಾಫಿ ಹವ್ಯಾಸವನ್ನು ಬಳಸಲು ಆರಂಭಿಸುತ್ತಾಳೆ. ಆ ಮಕ್ಕಳಿಗೆ ಪುಟ್ಟ ಪ್ರಮಾಣದಲ್ಲಿ, ವೀಡಿಯೋಗ್ರಾಫಿ ತರಗತಿಗಳನ್ನು ನೀಡಲು ಆರಂಭಿಸುತ್ತಾಳೆ, ಅವರಿಗೆ ಕಲಿಸುವ ಸಲುವಾಗಿ ತಾನೂ ಕಲಿಯುತ್ತಾ ಕಲಿಯುತ್ತಾ ಇಂದು ಅವೆಷ್ಟೋ ವಿಶೇಷಚೇತನರು ತಮ್ಮ ಭಾವನೆಗಳನ್ನು ಚಿತ್ರಿಸುತ್ತಾ ಹೊಸತನದಿಂದ ಕೂಡಿದ ಡಾಕ್ಯುಮೆಂಟರಿಗಳನ್ನು ಪ್ರಸ್ತುತಪಡಿಸಲು ಸಹಕರಿಸುತ್ತಿದ್ದಾಳೆ.
ಹೀಗೆ ಪ್ರತಿನಿತ್ಯ ನಮ್ಮೆಲ್ಲರ ಜೀವನದಲ್ಲೂ ಅನುಭವಗಳ ಗುಚ್ಛಗಳನ್ನು ಹೊತ್ತು ಓಡಾಡುತ್ತಿರುವವರು ಬಂದು ಹೋಗುತ್ತಿರುತ್ತಾರೆ. ನಾವೇ ಅವೆಷ್ಟೋ ಮಂದಿಯ ಬದುಕಿನಲ್ಲಿ ತಿಳಿಯದೆಯೇ ಉಳಿದುಹೋಗಿರಬಹುದೂ ಕೂಡ. ಯಾವುದೋ ಜಾಗದಲ್ಲಿ ಒಂದೇ ಸನ್ನಿವೇಶದೊಳಗೋ, ಸಮಾನ ಹವ್ಯಾಸ-ಆಸಕ್ತಿಗಳಿಂದಲೋ, ಪರಿಸ್ಥಿತಿ-ಆಕಸ್ಮಿಕಗಳಿಂದಲೋ ಇತ್ಯಾದಿ ಕಾರಣಗಳಿಂದ ಹೊಸ ವ್ಯಕ್ತಿತ್ವಗಳು ಭೇಟಿಯಾಗುತ್ತಲೇ ಇರುತ್ತವೆ. ಯಾರು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಾರೆ ಎಂಬುದು ನಾವೆಷ್ಟು ನಮ್ಮ ಸುತ್ತಲಿನ ಜಗತ್ತಿಗೆ ನಮ್ಮ ಗಮನವನ್ನು ನೀಡುತ್ತೇವೆ, ಎಷ್ಟನ್ನು ಉಳಿಸಿಕೊಂಡು ಯೋಚನಾ ಲಹರಿಯೊಳಗೆ ಸೇರಿಸುತ್ತೇವೆ, ಎಷ್ಟು ಜನರೊಡನೆ ತೆರೆದ ಮನಸಿನೊಂದಿಗೆ ಸಂವಹಿಸುತ್ತೇವೆ ಮೊದಲಾದವುಗಳೆಲ್ಲದರ ಮೇಲೆಯೂ ಅವಲಂಬಿತವಾಗಿರುತ್ತವೆ. ನಮ್ಮ ಒಂದು ಕ್ಷಣದಷ್ಟಿನ ಗಮನ ಬದುಕಿಗೊಂದು ಹೊಸ ಅರ್ಥವನ್ನೇ ಕೊಡಿಸಬಹುದು. ಈ ಜೀವನ ಪ್ರೀತಿಯ ಹರಿವಿನ ವೈಶಿಷ್ಟ್ಯವೇ ಅದು – ವಿವಿಧೆಡೆಯ ಭೂಮಿಯ ಸಾರಗಳು ಬೆರೆತು, ಅಲ್ಲಲ್ಲಿ ಕವಲೊಡೆಯುತ್ತಾ-ಸಂಗಮಿಸುತ್ತಾ ಅಪಾರವಾಗಿ ಬೆಳೆಯುತ್ತಾ ಸಾಗುವುದನ್ನು ನಿರಂತರ ಕಲಿಸುತ್ತಿರುತ್ತದೆ. ತೆರೆದ ಮನಸ್ಸಿನೊಂದಿಗೆ ಕಲಿಯುತ್ತಾ ಸಾಗೋಣ…
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ