- ಟಿಬೆಟಿಯನ್ ಕ್ಯಾಂಪಿಗೆ ಭೇಟಿ - ಏಪ್ರಿಲ್ 30, 2023
- ಥಿಯರಿ ಆಫ್ ರಿಲೇಟಿವಿಟಿ - ಅಕ್ಟೋಬರ್ 13, 2022
- ಎರಡು ಕವಿತೆಗಳು - ಆಗಸ್ಟ್ 3, 2021
ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ. ಅದು ನಮ್ಮ ಪ್ರಕೃತಿ, ಬದುಕು, ಜನ, ಸಂಸ್ಕೃತಿಯ ಕತೆ. ಅದು ನೆಲದ ಕತೆ. ಅಂಥ ಹಲವು ಅನುಭವಗಳನ್ನು ದಾಟಿಸಬಲ್ಲ ಅಂಕಣ ಮಾಲಿಕೆ ‘ಟೂರ್ ಡೈರೀಸ್’ನ ಏಳನೇ ಸಂಚಿಕೆ ನಿಮ್ಮ ಮುಂದೆ…
ನಾವು ಫೆಬ್ರವರಿ ೪ರಂದು ಮುಂಡಗೋಡ ಹತ್ತಿರದ ಟಿಬೆಟಿಯನ್ ಕ್ಯಾಂಪಿಗೆ ಒಂದು ದಿನದ ಪ್ರವಾಸಕ್ಕೆ ಹೋಗಿಬರುವ ಎಂದು ನಮ್ಮ ಯೋಗಶಿಕ್ಷಕರಾದ ಶ್ರೀ ವಿನಾಯಕ ತಲಗೇರಿ ಗುರುಗಳು ಹೇಳಿದಾಗ ನಮಗೆಲ್ಲ ಒಂದು ರೀತಿಯ ರೋಮಾಂಚನವಾಯಿತು. ಟಿಬೆಟಿಯನ್ ಕ್ಯಾಂಪನ್ನು ನಾನು ಈ ಮೊದಲೂ ನೋಡಿದ್ದೆನಾದರೂ ಈ ಬಾರಿ ಹೊಸತೊಂದೇನೋ ಕಲಿಯಲು ಸಿಗಬಹುದು ಎಂಬ ನಿರೀಕ್ಷೆ ಗರಿಗೆದರಿತು.
ನಾನು ಮನೆಯ ಹತ್ತಿರವೇ ಇದ್ದ ‘ಧನ್ಯೋಸ್ಮಿ’ ಯೋಗಕೇಂದ್ರಕ್ಕೆ ಹೋಗತೊಡಗಿ ಸುಮಾರು ೫-೬ ವರ್ಷಗಳೇ ಆಗಿವೆ. ವಿನಾಯಕ ತಲಗೇರಿ ಗುರುಗಳು ನಮ್ಮ ಬ್ಯಾಚಿಗಲ್ಲದೆ ಇನ್ನೂ ೩-೪ ತಂಡಗಳಿಗೆ ವಿವಿಧ ಸಮಯದಲ್ಲಿ ಯೋಗವನ್ನು ಕಲಿಸುತ್ತಿದ್ದಾರೆ. ಅವರ ಮುಂದಾಳತ್ವದಲ್ಲೇ ಎಲ್ಲ ಬ್ಯಾಚಿನವರು ಸೇರಿ ಒಂದು ಬಸ್ಸಿನಲ್ಲಿ ಟಿಬೆಟಿಯನ್ ಕ್ಯಾಂಪಿನ ಪ್ರವಾಸಕ್ಕೆ ಹೋಗಿಬರುವುದೆಂದು ತೀರ್ಮಾನಿಸಲಾಯಿತು. ಅದರಂತೆ ಫೆಬ್ರವರಿ ೪ರಂದು ಶನಿವಾರ ಬೆಳಿಗ್ಗೆ ಸರಿಯಾಗಿ ೭ಗಂಟೆಗೆ ಎಲ್ಲರೂ ಬಸ್ಸೊಂದರಲ್ಲಿ ಹೊರಟೆವು.
ಈ ಮೊದಲೇ ನಿರ್ಧರಿಸಿದಂತೆ ಮುಂಡಗೋಡಕ್ಕಿಂತ ಕೊಂಚ ಮೊದಲು ಸಿಗುವ ಬಾಚಣಕಿ ಜಲಾಶಯದ ಪಕ್ಕ ಉಪಾಹಾರ ಸೇವನೆಗೆ ಬಸ್ಸನ್ನು ನಿಲ್ಲಿಸಿದೆವು. ಜಲಾಶಯದ ಹಿನ್ನೀರಿನ ವಿಹಂಗಮನೋಟವನ್ನು ಸವಿಯುತ್ತ, ಹುಬ್ಬಳ್ಳಿಯಿಂದ ತಂದ ಇಡ್ಲಿ-ವಡೆಗಳನ್ನು ಮೆಲ್ಲುತ್ತ ಉಪಾಹಾರವನ್ನು ಮುಗಿಸಿದೆವು. ಬಳಸಿದ ತಟ್ಟೆ, ಚಮಚ ಇತರ ಸಾಮಗ್ರಿಗಳನ್ನು ಅತ್ತಿತ್ತ ಎಸೆಯದೆ ಒಂದು ಚೀಲದೊಳಗೇ ಹಾಕಿಟ್ಟು ನಂತರ ಅದರ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಆಯೋಜಕರು ಮೊದಲೇ ಮಾಡಿಕೊಂಡಿದ್ದರು.
ಸುಮಾರು ೯ ಗಂಟೆಗೆ ನಾವು ಮುಂಡಗೋಡವನ್ನು ದಾಟಿ ಅಲ್ಲಿಂದ ೮-೧೦ ಕಿಮಿ ದೂರದಲ್ಲಿರುವ ಟಿಬೆಟಿಯನ್ ಕ್ಯಾಂಪನ್ನು ತಲುಪಿದಾಗ ಅಲ್ಲಿ ನಮ್ಮನ್ನು ಸ್ವಾಗತಿಸಲು ಭಾರತ್-ಟಿಬೆಟ್ ಸಹಯೋಗ ಮಂಚ್ ಇದರ ಸಂಚಾಲಕರಾದ ಶ್ರೀಯುತ ಅಮೃತ ಜೋಶಿಯವರು ತಮ್ಮ ಟಿಬೆಟಿಯನ್ ಸಹಚರರಾದ ಶ್ರೀ ತೆನಜಿನ್ ಗುರ್ಮೆ, ಶ್ರೀ ಕರ್ಮಾ ಹಾಗೂ ಶ್ರೀ ತೆನಜಿನ್ ಟಾಕ್ಫೋ ಅವರೊಂದಿಗೆ ಕಾಯುತ್ತಿದ್ದರು. ಅವರು ತಡಮಾಡದೇ ನಮ್ಮನೆಲ್ಲ ಮೊಟ್ಟಮೊದಲಿಗೆ ಗಾದೆನ್ ಜಾಂಗತ್ಸೆ ಮೊನಾಸ್ಟರಿಗೆ (ಬೌದ್ಧಮಠ) ಕರೆದುಕೊಂಡು ಹೋದರು. ಅಲ್ಲಿನ ವಿಶಾಲ ಮೆಟ್ಟಿಲುಗಳ ಮೇಲೆ ನಮ್ಮನೆಲ್ಲ ಕೂಡ್ರಿಸಿ ಮೊದಲಿಗೆ ತಮ್ಮ, ತಮ್ಮ ಜೊತೆಗಾರರ ಪರಿಚಯವನ್ನು ಮಾಡಿಕೊಟ್ಟರು. ನಂತರ ಭಾರತ ಮತ್ತು ಟಿಬೆಟ್ ನಡುವಿನ ಶತಮಾನಗಳಷ್ಟು ಹಿಂದಿನ ಸಂಬಂಧ, ಅಲ್ಲಿನ ಜನರ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ವಿವರಣೆ ನೀಡಿದರು. ಆಮೇಲೆ ನಾವೆಲ್ಲ ಆ ಮೊನಾಸ್ಟರಿಯ ಒಳಗೆ ಪ್ರವೇಶಿಸಿದೆವು. ಅಲ್ಲಿ ಗೋಡೆಯ ಹತ್ತಿರ ಎತ್ತರದಲ್ಲಿ ಸ್ಥಾಪಿಸಿದ ಬುದ್ಧನ ಹಾಗೂ ಇನ್ನಿತರ ಟಿಬೆಟಿಯನ್ ದೇವ-ದೇವತೆಗಳ ಸುಂದರ ಪ್ರತಿಮೆಗಳನ್ನು ನೋಡಿದೆವು. ಟಿಬೆಟಿಯನ್ನರ ಹಾಗೂ ಸನಾತನ ಭಾರತೀಯರ ಧರ್ಮಾಚರಣೆಯಲ್ಲಿ ತುಂಬಾ ಸಾಮ್ಯತೆಗಳಿವೆ. ಅಷ್ಟಕ್ಕೂ ಬೌದ್ಧಧರ್ಮ ಟಿಬೆಟಿಗೆ ಪಸರಿಸಿದ್ದು ಇಲ್ಲಿಂದಲೇ ಅಲ್ಲವೇ.
ನಂತರ ನಾವೆಲ್ಲರೂ ಮರಳಿ ಬಸ್ಸಿನಲ್ಲಿ ಕುಳಿತು ಆಡಳಿತ ಸಮುಚ್ಛಯಕ್ಕೆ ತೆರಳಿದೆವು. ಇಲ್ಲಿ ಅನೇಕ ಕಟ್ಟಡಗಳಿವೆ. ಅವುಗಳಲ್ಲಿ ಪ್ರಮುಖವಾದುದೆಂದರೆ ಟಿಬೆಟಿಯನ್ನರ ಧರ್ಮಗುರು ದಲಾಯಿ ಲಾಮಾ ಅರಮನೆ. ಅವರು ಇಲ್ಲಿ ಪ್ರಾರಂಭದ ದಿನಗಳಲ್ಲಿ ಬಂದಾಗ ವಾಸ ಮಾಡಲು ಇದನ್ನು ನಿರ್ಮಿಸಲಾಗಿತ್ತು.ಇದರಲ್ಲಿ ಅವರ ವಾಸಕ್ಕೆ, ಪ್ರಾರ್ಥನೆಗೆ ಮತ್ತು ಅವರ ಸಹಚರರಿಗಾಗಿ ಸಕಲವ್ಯವಸ್ಥೆಯನ್ನೂ ಮಾಡಲಾಗಿದೆ. ಸದ್ಯಕ್ಕೆ ಈ ಅರಮನೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯನಡೆಯುತ್ತಿದೆ. ೧೯೪೯ರಿಂದ ೧೯೫೯ರ ವರೆಗೆ ಚೀನಾ ಟಿಬೆಟ್ ಮೇಲೆ ಸತತ ದಾಳಿ ನಡೆಸಿತು. ಆಗ ಧರ್ಮಗುರು ದಲಾಯಿ ಲಾಮಾ ಮತ್ತವರ ಅನುಯಾಯಿಗಳು ರಕ್ಷಣೆ ಕೋರಿ ಭಾರತಕ್ಕೆ ಬಂದರು. ಆಗ ಭಾರತ ಸರಕಾರ ಅನುಕಂಪದ ಆಧಾರದ ಮೇಲೆ ಭಾರತದ ಕೆಲಸ್ಥಳಗಳನ್ನು ಗುರುತಿಸಿ ಅವರೆಲ್ಲರಿಗೂ ವಾಸಿಸಲು ಅನುವು ಮಾಡಿಕೊಟ್ಟಿತು. ಮುಂಡಗೋಡದ ಹತ್ತಿರವಿರುವ ಈ ಕಾಲೊನಿ ಅಲ್ಲದೆ ರಾಜ್ಯದ ಕುಶಾಲನಗರ, ಹುಣಸೂರು, ಕೊಳ್ಳೇಗಾಲಗಳ ಜೊತೆ ಇತರ ರಾಜ್ಯಗಳಾದ ಲಡಾಖ್, ಹಿಮಾಚಲ, ಮಹಾರಾಷ್ಟ್ರ, ಒರಿಸ್ಸಾ ಹಾಗೂ ಇನ್ನಿತರ ಸ್ಥಳಗಳಲ್ಲಿ ಟಿಬೆಟಿಯನ್ನರ ಕಾಲೊನಿಗಳಿವೆ. ಸುಮಾರು ಒಂದು ಲಕ್ಷ ಟಿಬೆಟಿಯನ್ನರು ಇಂದು ಭಾರತದ ವಿವಿಧ ಕಾಲೋನಿಗಳಲ್ಲಿ ನೆಲೆಸಿದ್ದಾರೆ. ಇವೆಲ್ಲ ಸಂರಕ್ಷಿತ ಪ್ರದೇಶವಾಗಿದ್ದು ಯಾವುದೇ ವಿದೇಶಿಯರಿಗೆ ಇಲ್ಲಿ ಪರವಾನಗಿ ಇಲ್ಲದೇ ಪ್ರವೇಶವಿಲ್ಲ. ೧೪ ನೇ ಧರ್ಮಗುರು ದಲಾಯಿ ಲಾಮಾ ಅವರ ದಿನಚರಿ, ಅವರ ಬೆಂಗಾವಲು ಪಡೆಗಳು ಮತ್ತು ಚೀನಾದೇಶದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಅವರು ನಡೆಸುತ್ತಿರುವ ಹೋರಾಟದ ಬಗ್ಗೆ ಅನೇಕ ಕುತೂಹಲಕಾರಿ ಅಂಶಗಳನ್ನು ಜೋಶಿಯವರು ನಮ್ಮೆದುರು ತೆರೆದಿಟ್ಟರು.
ಅಲ್ಲಿ ಅರಮನೆಯಲ್ಲದೇ ಇನ್ನೂ ಅನೇಕ ಕಟ್ಟಡಗಳಿವೆ. ಅವುಗಳಲ್ಲಿ ಪ್ರಮುಖವಾದುವುಗಳೆಂದರೆ ಟಿಬೆಟಿಯನ್ನರ ಆಡಳಿತ ಭವನ, ಸಹಕಾರಿ ಸಂಘ, ಸರಕು ಮಾರಾಟ ಸಂಘ, ಸರಕಾರೇತರ ಸಂಸ್ಥೆಗಳ ಕಚೇರಿಗಳು ಮತ್ತು ಗ್ರಂಥಾಲಯ. ಇಲ್ಲಿನ ಆಡಳಿತ ಭವನದ ಮೂಲಕ ಟಿಬೆಟಿಯನ್ನರ ಸರಕಾರ ತನ್ನ ಜನರ ಬೇಕು-ಬೇಡಗಳ ಕಾಳಜಿ ವಹಿಸುತ್ತದೆ. ಇಲ್ಲಿನ ಟಿಬೆಟಿಯನ್ ಆಡಳಿತಾಧಿಕಾರಿ ಭಾರತ ಸರಕಾರದ ಪ್ರತಿನಿಧಿಗಳೊಂದಿಗೆ ಮತ್ತು ಸರಕಾರೇತರ ಸಂಘ-ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಕಾನೂನು-ಸುವ್ಯವಸ್ಥೆ, ಕೃಷಿ ಮತ್ತಿತರ ವಿಭಾಗಗಳ ನಿಗಾ ವಹಿಸುತ್ತಾರೆ. ಇಲ್ಲಿನ ಜನರು ಬಹುತೇಕ ಕೃಷಿಕರಾಗಿದ್ದು ತಮ್ಮ-ತಮ್ಮ ಜಮೀನುಗಳಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದಲ್ಲದೆ ಇಲ್ಲಿನ ಸ್ವೆಟರ್ ಮತ್ತು ಕರಕುಶಲ ವಸ್ತುಗಳಿಗೂ ಭಾರಿ ಬೇಡಿಕೆ ಇದೆ.
ನಂತರ ಸನಿಹದಲ್ಲೇ ಇದ್ದ ಯುದ್ಧಸ್ಮಾರಕವೊಂದಕ್ಕೆ ನಮ್ಮೆಲ್ಲರ ತಂಡ ತೆರಳಿತು. ಟಿಬೆಟ್ ಮೂಲತಃ ಸ್ವಂತ ಸೈನ್ಯವಿಲ್ಲದ ರಾಷ್ಟ್ರ. ಭಾರತಕ್ಕೆ ವಲಸೆ ಬಂದ ನಂತರ ಭಾರತ ಸರಕಾರ ನಿರಾಶ್ರಿತ ಟಿಬೇಟಿಯನ್ನರನೊಳಗೊಂಡ ವಿಶೇಷ ಸೈನಿಕ ತುಕಡಿ ‘ಎಷ್ಟಾಬ್ಲೀಷಮೆಂಟ್ ೨೨’ ಅನ್ನು ಸ್ಥಾಪಿಸಿತು. ಇವರು ನೈಸರ್ಗಿಕವಾಗೇ ಹಿಮ, ಚಳಿ ಮತ್ತು ದುರ್ಗಮ ಪ್ರದೇಶಗಳಲ್ಲಿ ಸಲೀಸಾಗಿ ಓಡಾಡುವ ಶಕ್ತಿಯನ್ನು ಹೊಂದಿದ್ದಾರೆ, ಸುಮಾರು ೪೦೦೦ ಕಿಮಿಗೂ ಉದ್ದದ ಹಿಮಾಲಯದಗುಂಟ ಭಾರತದ ಗಡಿರೇಖೆಯನ್ನು ಸಂರಕ್ಷಿಸುವಲ್ಲಿ ಇವರ ಪಾತ್ರ ಬಹುದೊಡ್ಡದು. ಭಾರತದ ಪರ ಯುದ್ಧ ಮಾಡಿ ಹುತಾತ್ಮರಾದ ಟಿಬೆಟಿಯನ್ ಸೈನಿಕರ ಹೆಸರುಗಳನ್ನು ಇಲ್ಲಿಯ ಈ ಸ್ಮಾರಕದಲ್ಲಿ ಉಲ್ಲೇಖಿಸಲಾಗಿದೆ. ನಮ್ಮನ್ನು ಭೇಟಿಯಾದ ೮೪ ವರ್ಷದ ಮಾಜಿ ಯೋಧರೊಬ್ಬರೊಂದಿಗೆ ಮಾತನಾಡಿದಾಗ ಅವರು ‘ನಾವು ಮೊದಲಿನಿಂದಲೂ ಸೇನೆ ಕಟ್ಟಲು ಹೋಗಿಲ್ಲ. ಗಡಿರೇಖೆಯ ಗೋಜಿಗೂ ಹೋಗಿಲ್ಲ. ಏಕೆಂದರೆ ನಾವು ಒಳ್ಳೆಯವರಾಗಿ ವರ್ತಿಸಿದರೆ ಉಳಿದವರೂ ಕೂಡ ನಮ್ಮ ಜೊತೆ ಹಾಗೆಯೇ ವರ್ತಿಸುತ್ತಾರೆ ಎಂಬ ಸದ್ಭಾವನೆಯಲ್ಲೇ ಎಷ್ಟೋ ವರ್ಷ ಜೀವನ ನಡೆಸಿದೆವು. ಆದರೆ ಈಗ ನಮಗನಿಸುತ್ತಿದೆ ನಮ್ಮದೊಂದು ಸೇನೆ ಮೊದಲಿನಿಂದಲೂ ಇದ್ದರೆ ಬಹುಶಃ ನಾವೆಲ್ಲರೂ ಇಂದು ನಮ್ಮ ತಾಯ್ನಾಡು ಟಿಬೇಟಿನಲ್ಲೇ ಇರುತ್ತಿದ್ದೆವೇನೋ’ ಎಂದು ಹೇಳಿದರು. ಅವರ ಈ ಉನ್ನತ ಮಟ್ಟದ ಭಾವನೆಯ ಬಗ್ಗೆ ಕೇಳಿ ನಮಗೆಲ್ಲ ಹೆಮ್ಮೆಯಾಯಿತು. ಇಲ್ಲಿನ ಅಕ್ಕಪಕ್ಕದ ವ್ಯಾಪಾರಮಳಿಗೆಗಳಲ್ಲಿ ಸ್ವೆಟರ್ ಮತ್ತು ಕರಕುಶಲ ವಸ್ತುಗಳನ್ನು ಕೊಳ್ಳಬಹುದು.
ನಂತರ ನಾವು ಟಿಬೆಟಿಯನ್ ವೃದ್ಧಾಶ್ರಮದ ಕಡೆಗೆ ಹೆಜ್ಜೆ ಹಾಕಿದೆವು. ಆ ವೃದ್ಧಾಶ್ರಮದಲ್ಲಿ ೮೦-೯೦ ವರ್ಷ ದಾಟಿದ ಅನೇಕ ವೃದ್ಧರು ಇದ್ದರು. ಅವರೆಲ್ಲರೂ ಹಸನ್ಮುಖರಾಗೇ ನಮಗೆ ನಮಸ್ಕರಿಸುತ್ತಾ ಓಡಾಡುತ್ತಿದ್ದರು. ಅಲ್ಲಿನ ವಾರ್ಡನ್ ಅವರ ಬಗ್ಗೆ ಅನೇಕ ವಿಸ್ಮಯಕಾರಿ ಸಂಗತಿಗಳನ್ನು ನಮಗೆಲ್ಲ ವಿವರಿಸಿದರು. ಕೆಲವರು ಇಂದಿಗೂ ಹಳೆಯ ಬಾಲಿವುಡ್ ಹಾಡುಗಳನ್ನು ಗುಣಗುಣಿಸುತ್ತಾರೆ! ಇಲ್ಲಿನ ಜನತೆ ಅವರನ್ನು ತಮ್ಮ ಅಮೂಲ್ಯ ಪರಂಪರೆ ಎಂಬಂತೆ ಕಾಳಜಿ ವಹಿಸುತ್ತದೆ. ಚಿಕ್ಕಮಕ್ಕಳು ಅಲ್ಲಿಗೆ ನಿಯಮಿತವಾಗಿ ಭೇಟಿನೀಡಿ ವೃದ್ಧರ ಜೊತೆ ಆಟವಾಡುತ್ತಾರೆ. ಅವರ ಜೀವನೋತ್ಸಾಹ, ಲವಲವಿಕೆ ನೋಡಿ ನಾವು ಧನ್ಯರಾದೆವು.
ಅಷ್ಟರಲ್ಲಿ ಮಧ್ಯಾಹ್ನವಾಗಿ ನಮ್ಮೆಲ್ಲರ ಹೊಟ್ಟೆ ಚುರುಗುಟ್ಟುತ್ತಿತ್ತು. ನಾವು ಮತ್ತೆ ಮಹಿಳಾ ಸಂಘದ ಕಟ್ಟಡದೆಡೆಗೆ ಹೆಜ್ಜೆಹಾಕಿದಾಗ ಅಲ್ಲಿ ಊಟ ತಯಾರಿತ್ತು. ಈ ಸಂಘದಲ್ಲಿ ಅನೇಕ ಮಹಿಳೆಯರು ಹೊಲಿಗೆ ಮತ್ತು ಕಸೂತಿ ಕೆಲಸಗಳನ್ನು ಮಾಡುತ್ತಾರೆ. ಊಟದ ನಂತರ ಅಲ್ಲಿನ ಚೆಂದದ ಚೀಲಗಳ ಖರೀದಿಯೂ ನಡೆಯಿತು. ನಂತರ ಬಸ್ಸನ್ನೇರಿ ನಾವು ಇನ್ನೊಂದು ಮೊನಾಸ್ಟರಿಯ ಕಡೆಗೆ ಹೊರಟೆವು. ದಾರಿಯುದ್ದಕ್ಕೂ ಅಲ್ಲಿನ ಜನರು ಕೃಷಿಮಾಡುವ ಹೊಲಗಳೂ, ಮಾವಿನ ತೋಟಗಳೂ ಮತ್ತು ಶಾಲಾ-ಕಾಲೇಜು- ಆಸ್ಪತ್ರೆಗಳೂ ಕಂಡುಬಂದವು.
ನಾವು ರಾಟೋ ಮೊನಾಸ್ಟರಿಯನ್ನು ತಲುಪಿದಾಗ ಅಲ್ಲಿ ಶುಭಪೂಜೆಯೊಂದನ್ನು ನೋಡುವ ಅವಕಾಶ ದೊರೆಯಿತು. ಈ ಮೊನಾಸ್ಟರಿಯು ಬೃಹದಾಕಾರವಾಗಿಲ್ಲವಾದರೂ ಸಾಂಪ್ರದಾಯಿಕ ಟಿಬೆಟ್ ವಾಸ್ತುಶಿಲ್ಪದ ಜೊತೆಗೆ ನಮ್ಮ ಮಣ್ಣಿನ ಸೊಗಡನ್ನೂ ಹೊಂದಿದೆ. ಅಲ್ಲಿನ ಪೂಜೆಯು ಕೆಲದಿನಗಳಿಂದ ನಡೆಯುತ್ತಿದ್ದು ಬೆಳಿಗ್ಗೆ ೭ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೂ ಮಂತ್ರಪಠಣ ನಡೆಯುತ್ತದೆ. ಆಶ್ಚರ್ಯವೇನೆಂದರೆ ಅಲ್ಲಿ ಮಂತ್ರಪಠಣಕ್ಕೆ ಕುಳಿತಿರುವ ಬೌದ್ಧಭಿಕ್ಕುಗಳಲ್ಲಿ ಅನೇಕರು ತಮ್ಮೆದುರಿಗೆ ಮೊಬೈಲ್ ಅಥವಾ ಲ್ಯಾಪ್ಟಾಪ್ ಇಟ್ಟುಕೊಂಡು ಮಂತ್ರಗಳ ಪಠಣ ಮಾಡುತ್ತಿದ್ದರು. ಪಕ್ಕದಲ್ಲೇ ಗಂಟಲು ತೇವಮಾಡಿಕೊಳ್ಳಲು ತಂಪುಪಾನೀಯಗಳ ಟಿನ್ನುಗಳು ಕೂಡ ಇದ್ದವು! ಈ ಮೊನಾಸ್ಟರಿಯನ್ನು ಕಟ್ಟಿದ್ದು ನಿಕೋಲಸ್ ವ್ರೀಲ್ಯಾಂಡ್ ಎಂಬ ಅಮೆರಿಕ ಮೂಲದ ಸನ್ಯಾಸಿ. ಹಾಗಾಗಿ ಇದು ಆಧುನಿಕತೆಯ ಜೊತೆ ಸ್ಥಳೀಯ ಸೊಗಡಿನ ಸ್ಪರ್ಶವನ್ನೂ ಹೊಂದಿದೆ. ಇಲ್ಲಿನ ಅತಿಥಿಗೃಹದಲ್ಲಿ ನಮಗೆ ಚಹಾ-ಪಾನೀಯಗಳ ವ್ಯವಸ್ಥೆಯನ್ನೂ ಮಾಡಿದ್ದರು.
ಈ ಮೊನಾಸ್ಟರಿಗಳೆಲ್ಲ ಪ್ರಾಚೀನ ಟಿಬೆಟಿನ ವಿಶ್ವವಿದ್ಯಾಲಯಗಳ ಪ್ರತಿರೂಪಗಳು. ಅಲ್ಲಿನ ವಿಶ್ವವಿದ್ಯಾಲಯಗಳೆಲ್ಲಾ ದಾಳಿಕೋರರಿಂದ ಲೂಟಿಯಾದಮೇಲೆ ಅವುಗಳ ಪುನರುಜ್ಜೀವನ ಭಾರತದಲ್ಲಿ ಈ ರೀತಿ ನಡೆಯುತ್ತಿದೆ. ಗಾದೆನ್ ಮಠದಲ್ಲಿ ಅಧ್ಯಾತ್ಮವನ್ನು ಕಲಿಸಿದರೆ, ಡ್ರೆಪುಂಗ್ ನಲ್ಲಿ ಅಧ್ಯಾತ್ಮದ ಜೊತೆಯಲ್ಲಿ ವಿಜ್ಞಾನವನ್ನೂ ಕಲಿಸುತ್ತಾರೆ. ಇಲ್ಲಿ ಕಲಿಯಲು ಅನೇಕ ದೇಶಗಳಿಂದ ಬೌದ್ಧಭಿಕ್ಕುಗಳು ಬರುತ್ತಾರೆ. ಇವರ ಒಟ್ಟು ಅಭ್ಯಾಸದ ಅವಧಿ ೩೫ ವರ್ಷಗಳು. ನಂತರ ೫ ವರ್ಷಗಳ ತರಬೇತಿಯ ನಂತರವೇ ಅವರ ಆಧ್ಯಾತ್ಮಿಕ ವಿದ್ಯಾಭ್ಯಾಸ ಪೂರ್ಣವಾಗುತ್ತದೆ. ಈ ಎಲ್ಲ ಮೊನಾಸ್ಟರಿಗಳಲ್ಲಿ ಉನ್ನತ ಪೀಠವೊಂದಿದ್ದು ದಲಾಯಿ ಲಾಮಾರ ಭಾವಚಿತ್ರವನ್ನು ಅದರ ಮೇಲೆ ಸ್ಥಾಪಿಸಿದ್ದಾರೆ.
ಚಿತ್ರ ಕೃಪೆ : ಬಿಷ್ಣು ಸಾರಂಗಿ
ನಮ್ಮ ಮುಂದಿನ ನಿಲ್ದಾಣ ಡ್ರೆಪುಂಗ್ ಮೊನಾಸ್ಟರಿ. ಇದು ಕೂಡ ಒಂದು ವಿಶ್ವವಿದ್ಯಾಲಯ. ಇಲ್ಲಿರುವ ಕಟ್ಟಡಗಳಲ್ಲೇ ಅತ್ಯಂತ ವಿಶಾಲವಾದ ಮತ್ತು ವೈಭವೋಪೇತ ಕಟ್ಟಡ. ಒಳಗೂ ಹೊರಗೂ ಮಾಡಿರುವ ಸುಂದರ ಪೇಂಟಿಂಗ್ ಗಳು ಕಣ್ಮನ ಸೆಳೆಯುತ್ತವೆ. ಇಲ್ಲೂ ಕೂಡ ಬೃಹದಾಕಾರದ ಸುಂದರ ಪ್ರತಿಮೆಗಳಿವೆ. ಮಧ್ಯದ ಆವರಣದಲ್ಲಿ ಸುಮಾರು ಮೂರು ಸಾವಿರ ಭಿಕ್ಕುಗಳು ಸಾಲಾಗಿ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಇಲ್ಲಿನ ಜನರು ಪ್ರತಿಮೆಗಳ ಎದುರು ಹಣ್ಣುಗಳ ಜೊತೆ ಬಿಸ್ಕತ್, ಕೇಕ್ ತಂಪು ಪಾನೀಯಗಳ ನೈವೇದ್ಯವನ್ನೂ ಸಲ್ಲಿಸುತ್ತಾರೆ.
ಈ ಮೊದಲೇ ಹೇಳಿದಂತೆ ದಲಾಯಿ ಲಾಮಾ ಟಿಬೆಟಿನ ೧೪ನೇ ಧರ್ಮಗುರು. ಇವರಿಗೆ ಸಮಾನಾಂತರವಾಗಿ ಪಂಚೇನ್ ಲಾಮಾ ಮತ್ತು ಕರ್ಮಪಾ ಎಂಬ ಧರ್ಮಾಧಿಕಾರಿಗಳೂ ಇದ್ದಾರೆ. ಇವರ ನಿವೃತ್ತಿ ಮತ್ತು ಉತ್ತರಾಧಿಕಾರಿಗಳ ಆಯ್ಕೆಯೂ ಕೂಡ ರೋಚಕವಾಗಿದೆ. ಅಲ್ಲದೇ ಟಿಬೆಟಿನ ಸರ್ಕಾರದಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವಾಗ ಮಹಾಕಾಲ ಮತ್ತು ನುಚುಂಗ್ ಎಂಬ ದೈವಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ನಮ್ಮ ಕೊನೆಯ ವೀಕ್ಷಣೆಯ ಸ್ಥಳ ಪದ್ಮಸಂಭವ ಬೆಟ್ಟ. ಅನತಿದೂರದಲ್ಲೇ ಇರುವ ಚಿಕ್ಕಬೆಟ್ಟವೊಂದರ ಮೇಲೆ ಗುರು ರಿಂಪೋಚೆ ಎಂದೇ ಪ್ರಸಿದ್ಧವಾದ ಪದ್ಮಸಂಭವ ರಾಜನ ಬೃಹತ್ ಮೂರ್ತಿಯಿದೆ. ಈತ ಭಾರತದಿಂದ ಟಿಬೆಟ್ಟಿಗೆ ಹೋಗಿ ಬೌದ್ಧಧರ್ಮವನ್ನು ಸ್ಥಾಪಿಸಿದ ಎಂದು ಪ್ರತೀತಿ. ಇಲ್ಲಿ ಕೂಡ ಅನೇಕ ತಿರುಗಿಸುವ ಗಂಟೆಗಳಿದ್ದು ಅವುಗಳನ್ನು ತಿರುಗಿಸುವುದರಿಂದ ಪಾಪನಾಶವಾಗುವುದೆಂದು ಜನರ ನಂಬಿಕೆ. ನಾವೆಲ್ಲರೂ ಇಲ್ಲಿ ಕೆಲಹೊತ್ತು ಕುಳಿತು ಗ್ರೂಪ್ ಫೋಟೋಗಳನ್ನು ಕ್ಲಿಕ್ಕಿಸಿದೆವು.
ಸಂಜೆ ಮರಳಿ ನಾವು ಸಹಕಾರಿ ಸಂಘಕ್ಕೆ ತಲುಪಿದಾಗ ಅಲ್ಲಿ ರುಚಿಕರ ಮೊಮೊ, ವಡೆ ಮತ್ತು ಚಹಾ ಸಿದ್ಧವಾಗಿದ್ದವು. ಅವುಗಳಿಗೆ ನ್ಯಾಯಸಲ್ಲಿಸಿ ಕೆಲಹೊತ್ತು ವಿಶ್ರಾಂತಿ ಪಡೆದೆವು. ಅದುವರೆಗೂ ನಮ್ಮ ಜೊತೆ ತಿರುಗಾಡಿ ಎಲ್ಲವನ್ನೂ ಸವಿಸ್ತಾರವಾಗಿ ವರ್ಣಿಸಿದ ಶ್ರೀ ಅಮೃತ ಜೋಶಿ ಅವರ ತಂಡಕ್ಕೆ ವಂದನೆ ಸಲ್ಲಿಸಿ ಬಸ್ಸನ್ನೇರಿದಾಗ ಯಾವುದೋ ಒಂದು ಅದ್ಭುತಲೋಕವೊಂದನ್ನು ಹೊಕ್ಕುಬಂದಂತಾಗಿತ್ತು ನಮ್ಮ ಮನಸ್ಥಿತಿ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ