ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಥೇಟರ್ ಕಮಾಂಡ್ಸ್, ಬಿಪಿನ್ ರಾವತ್ ಮತ್ತು ಆ ಇನ್ನೊಂದು ವಿಷಯ…!

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ದೇಶದ ಮೊಟ್ಟ ಮೊದಲ ಸಿ.ಡಿ.ಎಸ್. (chief of defence staff) ಬಿಪಿನ್ ರಾವತ್ ಅವರ ದುರಾದೃಷ್ಟವಶಾತ್ ನಿರ್ಗಮನ ಮತ್ತು ಅದರ ವಿಸ್ತೃತ ನಷ್ಟದ ಬಗ್ಗೆ ತಿಳಿಸುವ ಮುಂಚೆ ಕೆಲವು ಹಿನ್ನೆಲೆಗಳನ್ನೂ ಹಾಗೂ ಭಾರತದ ರಕ್ಷಣಾ ರಚನಾ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಲೇಬೇಕಾದೀತು.

ಸುಮಾರು ಎರಡು ದಶಕಗಳ ಹಿಂದೆ ನಡೆದ ಕಾರ್ಗಿಲ್ ಸಮರ. ಆಗ ನಮ್ಮ ವೀರ ಸೈನಿಕರು ಭಾರತ ಪಾಕಿಸ್ತಾನದ ಸೈನಿಕರನ್ನು ಸದೆ ಬಡಿದು, ಹಿಮ್ಮೆಟ್ಟಿಸಿ ಆಕ್ರಮಿಸಿದ್ದ ಭಾಗಗಳನ್ನು ಯಶಸ್ವಿಯಾಗಿ ಹಿಂಪಡೆಯಿತಾದರೂ, ನಮ್ಮ ರಕ್ಷಣಾ ವ್ಯವಸ್ಥೆಯ ಹಲವು ಕುಂದು ಕೊರತೆಗಳು ಕೂಡ ಬಹಳ ಸ್ಪಷ್ಟವಾಗಿ ಅನಾವರಣಗೊಂಡವು. ಆ ಯುದ್ಧದಲ್ಲಿ ಸುಮಾರು ಐನೂರ ಇಪ್ಪತ್ತೇಳು ಸೈನಿಕರು ಹುತಾತ್ಮರಾಗಿದ್ದರು. ಭೂ ದಳ ಹಾಗೂ ವಾಯು ದಳಗಳ ಸಮನ್ವಯದ ಕೊರತೆ ಸೇರಿದಂತೆ ಈ ಬಗ್ಗೆ ಅನೇಕ ಆತಂಕಕಾರಿ ವಿಷಯಗಳನ್ನು, ಸಲಹೆಗಳನ್ನು ಸುಬ್ರಮಣ್ಯಮ್ ನೇತೃತ್ವದ ಕಾರ್ಗಿಲ್ ಸಮೀಕ್ಷಾ ಸಮಿತಿ ಸರಕಾರಕ್ಕೆ ಸಲ್ಲಿಸಿತ್ತು .

ಕಾರ್ಗಿಲ್ ನಂತರವೂ ಅತ್ತ ಪಾಕಿಸ್ತಾನದ ಸೇನೆ, ಉಗ್ರಗಾಮಿಗಳ ನುಸುಳುವಿಕೆ, ಜೊತೆಗೆ ಭಾರತವನ್ನು ಗುರಿಯಾಗಿಸಿ ಕೈಗೊಂಡ ಚೈನಾದ ಆಕ್ರಮಣಕಾರಿ ನೀತಿಗಳು ಬೇಡಿದ್ದು ಭಾರತೀಯ ರಕ್ಷಣಾ ಕ್ಷೇತ್ರದ ಅಮೂಲಾಗ್ರ ಸುಧಾರಣೆಗಳನ್ನು .. … ಈ ವೇಳೆಯಲ್ಲಿ ಕೇಳಿ ಬಂದ ಪ್ರಮುಖ ಸಲಹೆಗಳಲ್ಲಿ ಒಂದು.. ಥಿಯೇಟರೈಜಶನ್ ಮಾಡೆಲ್..ಅರ್ಥಾತ್ ಥಿಯೇಟರ್ ಕಮಾಂಡ್ಸ್ ಗಳ ಸ್ಥಾಪನೆ ..? . ಹಾಗಾದರೆ ಏನಿದು ಥಿಯೇಟರೈಜೇಶನ್ ..?

What are the Defence Capabilities of India?

ಭಾರತೀಯ ಸೈನ್ಯ ಮುಖ್ಯವಾಗಿ ಭೂದಳ ,ವಾಯು ದಳ , ನೌಕಾ ದಳ – ಈ ಮೂರು ತಮ್ಮದೇ ರೀತಿಯಲ್ಲಿ ಪ್ರತ್ಯೇಕ ಕಾರ್ಯ ವ್ಯಾಪ್ತಿ, ವೈಖರಿಗಳಲ್ಲಿಯೇ ಕೆಲಸ ಮಾಡುತ್ತವೆ. ದೇಶದಾದ್ಯಂತ ನಮ್ಮ ಸೇನೆ (ಭೂ ದಳ) ಏಳು ಕಮಾಂಡ್ (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ,ಮಧ್ಯ, ನೈಋತ್ಯ ಮತ್ತೊಂದು ಟ್ರೈನಿಂಗ್ ಕಮಾಂಡ್ ) ಘಟಕಗಳಾಗಿ ಕಾರ್ಯ ನಿರ್ವಹಿಸುತ್ತಿವೆ.. ಇಂಥಹ ಒಂದು ಕಮಾಂಡ್ ಕೆಳಗೆ ಕಾರ್ಪ್, ಡಿವಿಷನ್, ಬ್ರಿಗೇಡ್,ಬಟಾಲಿಯನ್ , ಕಂಪನಿ, ತುಕಡಿಗಳೆಲ್ಲ ಬರುತ್ತವೆ. ಅಂತೆಯೇ ವಾಯು ದಳದಲ್ಲಿ ಕೂಡ ಐದು ಮತ್ತು ನೇವಿಯಲ್ಲಿ ಏಳು ಅವರದ್ದೇ ಕಮಾಂಡ್ ಗಳು ಕಾರ್ಯ ನಿರತವಾಗಿವೆ. ಎಲ್ಲ ಸೇರಿ ಒಟ್ಟು ಹದಿನೇಳು. ಇಲ್ಲಿಯ ಬಹುದೊಡ್ಡ ರಚನಾತ್ಮಕ ಸಮಸ್ಯೆ ಅಂದರೆ, ಶತ್ರುಗಳು ಆಕ್ರಮಣ ಮಾಡಿದಾಗ ಎಲ್ಲವೂ ಸರಾಗವಾಗಿ,ತಾಳಮೇಳದೊಂದಿಗೆ ಕಾರ್ಯ ನಿರ್ವಹಿಸಲು ಆಗುವುದಿಲ್ಲ ಎಂಬುದು. ಕಾರ್ಗಿಲ್ ಸಮಯದಲ್ಲಿಯೇ ಮೊದಲಿಗೆ ಕೆಳಭಾಗದಲ್ಲಿದ್ದ ಪದಾತಿ ದಳ ಸಂಕಷ್ಟ ಅನುಭವಿಸಿತು.ಎತ್ತರದ ಆಯಕಟ್ಟಿನ ಪ್ರದೇಶದಲ್ಲಿದ್ದ ಶತ್ರು ಸೇನೆಯನ್ನು ಮಣಿಸಲು,ಭಾರತೀಯ ವಾಯುದಳ ಅಂದುಕೊಂಡ ಹಾಗೆ ತಕ್ಷಣಕ್ಕೆ ಒದಗಲಿಲ್ಲ. ಏರ್ ಫೋರ್ಸ್ ಅನ್ನು ಕರೆಸುವುದು ಕೂಡ ಒಂದು ದೊಡ್ಡ ಪೇಪರ್ ಪ್ರಕ್ರಿಯೆಯಾಗಿ ಕೊನೆಗೂ ಏರ್ ಫೋರ್ಸ್ ಪ್ರವೇಶವಾದರೂ, ಭೂದಳಕ್ಕೆ ಬೆಂಬಲವಾಗಿ ನಿಂತು ಕಾರ್ಯಾಚರಣೆ ಮುಂದುವರೆಸುವಲ್ಲಿ ನಿರೀಕ್ಷಿಸಿದ ದಕ್ಷತೆ ಕಂಡು ಬರಲಿಲ್ಲ. ಹೀಗಾಗಿ ಅಂದುಕೊಂಡಕ್ಕಿಂತ ಹೆಚ್ಚು ಸಮಯ, ಪ್ರಾಣ ಹಾನಿ ಎದುರಿಸಬೇಕಾಯ್ತು. ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆದಂತೆ ಎನ್ನುವ ಹಾಗೆ. ಅಲ್ಲದೇ ಎಲ್ಲ ವಿಭಾಗದಲ್ಲೂ ಅಧಿಕಾರಿಶಾಹಿ ಕೂಡ ಇನ್ನಷ್ಟು ಸಮಸ್ಯೆಯನ್ನು ಜಟಿಲವಾಗಿಸಿದ್ದು ವಾಸ್ತವ ..!

ಇವಕ್ಕೆಲ್ಲ ಒಂದು ಪರಿಣಾಮಕಾರಿ ಪರಿಹಾರ ಹೊಸದಾಗಿ ಥಿಯೇಟರ್ ಕಮಾಂಡ್ಸ್ ಸ್ಥಾಪನೆ. ಭೂ ಸೈನ್ಯ, ವಾಯುಬಲ, ನೌಕಾಬಲ ಈ ಮೂರು ಯುದ್ಧ ವಿಭಾಗಗಳನ್ನು ಒಂದು ಕಮಾಂಡ್ ನಲ್ಲಿ ಇರುವಂತೆ ಮಾಡಿ, ಯುದ್ಧದಲ್ಲಿ ಈ ಎಲ್ಲ ಸಾಮರ್ಥ್ಯಗಳನ್ನೂ ಜೊತೆ ಜೊತೆಯಾಗಿ, ಒಬ್ಬರಿಗೊಬ್ಬರು ಪೂರಕವಾಗಿ, ವ್ಯೂಹಾತ್ಮಕ ವಾಗಿ ಉಪಯೋಗಿಸಿ ಗೆಲುವು ಸಾಧಿಸುವ ಉದ್ದೇಶದಿಂದ ನಿರ್ಮಿತವಾದ ಹೊಸ ವ್ಯವಸ್ಥೆ.

ಇಂತಹ ಸಂಯೋಜನಾತ್ಮಕ ಕೇವಲ ಆರ್ಮಿ,ಏರ್ ಫೋರ್ಸ್,ನೇವಿ ಎಂಬ ಮೂರು ಬಲಗಳನ್ನ ಸಮ್ಮಿಶ್ರಿತಗೊಳಿಸಿದ್ದಷ್ಟೇ ಅಲ್ಲದೇ ನಿಶ್ಚಿತ ಭೂಭಾಗ, ಶತ್ರುಗಳ ಆಯಾಮಗಳನ್ನೂ ಕೂಡ ಗಮನದಲ್ಲಿ ಇಟ್ಟುಕೊಂಡು ರಚಿತವಾದ ಸಂಯುಕ್ತ ವ್ಯವಸ್ಥೆಗೆ ಥಿಯೇಟರ್ ಕಮಾಂಡ್ ಎಂಬ ಹೆಸರು. ಈ ನಿರ್ಮಾಣದ ಪ್ರಕ್ರಿಯೆಗೆ ಥೇಟರೈಜೇಶನ್ ಎನ್ನುತ್ತಾರೆ. ಇದಕ್ಕೆ ಒಬ್ಬ ಥಿಯೇಟರ್ ಕಮಾಂಡರ್ ಇರುತ್ತಾನೆ. ಈತ CDS ಗೆ ಅಧೀನನಾಗಿರುತ್ತಾನೆ. ಸರ್ವ ರಂಗಗಳಿಂದ (ಥಿಯೇಟರ್) ಎದುರಿಸುವ ತಂತ್ರಗಾರಿಕೆ ಭಾರತ ಯುದ್ಧ ಮಾಡುವ ಪರಿಯನ್ನೇ ಬದಲಾಯಿಸಲಿದೆ. ಮೂರೂ ಬಲಗಳೂ ಒಟ್ಟೊಟ್ಟಿಗೆ ತಂಡವಾಗಿಯೇ ಇರುತ್ತದೆ. ಉತ್ತರದ ಚೀನಾಗೆ, ಪಶ್ಚಿಮದ ಪಾಕ್ ಗೆ ಉತ್ತರವಾಗಿ ಆರ್ಮಿ,ಏರ್ ಫೋರ್ಸ್ ಕೂಡಿ ಇರುವ ಸಮಗ್ರ ಥೇಟರ್ ಕಮಾಂಡ್ ಬರಲಿದೆ.

ಹಾಗೆ ನೋಡಿದರೆ ಥಿಯೇಟರೈಜಶನ್ ಹೊಸ ಕಲ್ಪನೆಯೇನೂ ಅಲ್ಲ. ಎರಡನೆಯ ವಿಶ್ವಯುದ್ಧ ದಲ್ಲಿ ಯುರೋಪಿನಲ್ಲಿ ಮೊದಲು ಕೇಳಿಬಂತು. ಇವತ್ತಿಗೆ, ಅಮೇರಿಕ, ಚೀನಾ, ರಶಿಯಾ,ಬ್ರಿಟನ್,ಫ್ರಾನ್ಸ್ ಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಇದೆ. ಅಮೆರಿಕವಂತೂ ಒಂದು ಹೆಜ್ಜೆ ಮುಂದೆ ಹೋಗಿ ಸ್ಪೇಸ್ ಕಮಾಂಡ್ ಕೂಡ ಸ್ಥಾಪಿಸಿದೆ. ಭಾರತದಲ್ಲಿ ಇದು ಇನ್ನೂ ಏಕಿಲ್ಲ. ಮುಖ್ಯ ಕಾರಣ ಬದಲಾವಣೆಯನ್ನು ವಿರೋಧಿಸುವ, ಸುಧಾರಣೆಗಳನ್ನು ಅರ್ಥ ಮಾಡಿಕೊಳ್ಳದ ದೇಶದ ವ್ಯವಸ್ಥೆ ಹಾಗೂ ರಾಜಕೀಯ ಇಚ್ಚಾ ಶಕ್ತಿಯ ಕೊರತೆ.. ಹಳೆಯ, ರೈಲ್ವೆಸ್, ಬಿ.ಎಸ.ಎನ್, ಸರಕಾರ ನಡೆಸುವ ಉದ್ಯಮಗಳನ್ನು ಕೇವಲ ಮುಟ್ಟಿ ನೋಡಿ..ವಿರೋಧಗಳು ಭುಗಿಲೇಳುತ್ತವೆ. ಇನ್ನೂ ಹಳೆಯ ಭಾರತದ ರಕ್ಷಣಾ ವ್ಯವಸ್ಥೆ ಅಂದರೆ ಸುಲಭವೇ ..! .. ಅಂತಹ ಇಂದಿರಾಗಾಂಧಿ ಕೂಡ ಮಾಣಿಕ್ ಶಾ ರನ್ನು, ‘ ನಮ್ಮ ಸರಕಾರ ಬೀಳಿಸಿ, ನೀವು ದೇಶವನ್ನು ಸೈನ್ಯದ ಸುಪರ್ದಿಗೆ ತೆಗೆದುಕೊಳ್ಳುವದಿಲ್ಲ ತಾನೇ ..’ ಎಂದು ಕೇಳಿದ್ದು ಬಿಟ್ಟರೆ, ವ್ಯವಸ್ಥೆಯನ್ನು ಬದಲಿಸುವ ದೊಡ್ಡ ಮಟ್ಟದ ಸಾಹಸಕ್ಕೆ ಕೈ ಹಾಕಿರಲಿಲ್ಲ.ಈಗ ಕೂಡ ಥಿಯೇಟರೈಜಶನ್ ಬಗ್ಗೆ ನೇವಿ ಓಕೆ. ಏರ್ಫೋರ್ಸ್ ಗೆ ತಮ್ಮ ಸಂಪನ್ಮೂಲ ಹಂಚಿಕೊಳ್ಳಲು ಕೊಂಚ ತಕರಾರು ಇದೆ.

ಜಿ.ಎಸ್.ಟಿ, ಕೃಷಿ, ಸಂಪರ್ಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತೋರಿದ ಹಾಗೆ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಕೂಡ ತೀವ್ಸುರಧಾರಣೆಗೆ ಪ್ರೈಮ್ ಮಿನಿಸ್ಟರ್ ಮೋದಿ ಗಂಭೀರರಾಗಿದ್ದಂತೆ ತೋರುತ್ತದೆ. ಭಾರತದ ಇವತ್ತಿನ ಅಪಾಯಗಳ ಮಟ್ಟಿಗೆ ಥಿಯೇಟರ್ ಕಮಾಂಡ್ ಬೇಕೇ ಬೇಕು ಎಂದು ಸರಕಾರ ಗಟ್ಟಿ ನಿಲುವು ತೆಗೆದುಕೊಳ್ಳುತ್ತದೆ. ಇದಕ್ಕೆ ಅನುಗುಣವಾಗಿ ಮೊದಲ ಯೋಜನೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ CDS ಎಂಬ ಹುದ್ದೆ ಮೂರು ದಳದ ಮುಖ್ಯಸ್ಥರ ಮೇಲೆ ಸೃಷ್ಟಿಸಲಾಯಿತು. ಇದನ್ನು ಪ್ರಧಾನಿ ಆಗಸ್ಟ್ ಹದಿನೈದರ ಭಾಷಣದಲ್ಲಿ ಪ್ರಸ್ತುತಪಡಿಸುತ್ತಾರೆ.. ಇರುವ ಹದಿನೇಳು ಕಮಾಂಡ್ ಗಳನ್ನು ತೆಗೆದು ಹೊಸದಾಗಿ ಸಂಯುಕ್ತ ಆರು ಥಿಯೇಟರ್ ಕಮಾಂಡ್ ರಚಿಸುವ ಬಗ್ಗೆ ಯೋಚಿಸಲಾಗುತ್ತದೆ.. ಇದೊಂದು ಕಠಿಣವಾದ ಕೆಲಸ. ಸಾಧನ, ಸಲಕರಣೆ, ಸಂಪನ್ಮೂಲಗಳ ಮರು ವಿತರಣೆ, ಜವಾನರಿಂದ ಹಿಡಿದು ಸೈನ್ಯಾಧಿಕಾರಿಗಳನ್ನು ಒಗ್ಗಿಸುವುದು , ತರಬೇತಿ ಇತ್ಯಾದಿಗಳು ಹೊಸ ಕಾರ್ಯ ವ್ಯವಸ್ಥೆಗೆ ಬದ್ಧವಾಗಬೇಕು. ಒಮ್ಮೆ ಆದರೆ, ಇದರಿಂದ ದೇಶದ ರಕ್ಷಣಾ ವ್ಯವಸ್ಥೆಗೆ ಹೊಸ ಬಲ ಬಂದಂತಾಗಿ ಪಾಕ್, ಚೀನಾದ ಅಪಾಯಗಳನ್ನು ಪರಿಣಾಮಕಾರಿಯಾಗಿ ಎದುರಿಸಬಹುದು.

ಹಾಗಾಗಿಯೇ ಮೋದಿ ಸರಕಾರ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಸಿಡಿಎಸ್ ಹುದ್ದೆಗೆ ಒಬ್ಬ ಅರ್ಹ, ಸೈನ್ಯ ಕಾರ್ಯಾಚರಣೆಗಳಲ್ಲಿ ನೇರವಾಗಿ ಕೆಲಸ ಮಾಡಿದ ಅನುಭವ, ಕಾರ್ಯೋನ್ಮುಖಿ, ಗುರಿಯೆಡೆಗೆ ಮುನ್ನಡೆಸುವ ಫಲಿತಾಂಶಕಾರೀ ಕ್ರಿಯಾಶೀಲ ಸೈನ್ಯಾಧಿಕಾರಿಯನ್ನು ಹುಡುಕುತಿತ್ತು. ಅದಕ್ಕಾಗಿ, ಕೇವಲ ಅನುಭವ ಶ್ರೇಣಿಯಲ್ಲಿ ಮುಂಚೂಣಿಯಲ್ಲಿ ಇರುವ ಇಬ್ಬರು ಆಫಿಸರ್ ಗಳನ್ನೂ ಬದಿಗಿರಿಸಲು ಅನುವಾದ ಸರಕಾರಕ್ಕೆ ಸಿಕ್ಕಿದ್ದೇ ೧೧ ಗೂರ್ಖಾ ರೈಫಲ್ಸ್ ಬಟಾಲಿಯನ್ ನ ಜನರಲ್ ಬಿಪಿನ್ ರಾವತ್.

ಜನರಲ್ ಬಿಪಿನ್ ರಾವತ್

ಬಿಪಿನ್ ರಾವತ್ ಎತ್ತರದ ದುರ್ಗಮ ಭಾಗಗಳಲ್ಲಿ ಯುದ್ಧ , ಪ್ರತಿ ಬಂಡುಕೋರ ಆಚರಣೆಗಳಲ್ಲಿ (ಕೌಂಟರ್ ಇನ್ಸರ್ಜನ್ಸಿ)ಯಲ್ಲಿ ನುರಿತವರು… ಕಾಶ್ಮೀರದಲ್ಲಿ ಹತ್ತು ವರ್ಷಗಳ ಅನುಭವ, ಅಸ್ಸಾಂ ನಲ್ಲಿ ಕೂಡ ಸೇರಿದಂತೆ ಮುಂಚೂಣಿಯಲ್ಲಿ ಸೇವೆ ಸಲ್ಲಿಸಿದ ರಾವತ್ ತಮ್ಮ ತಂದೆಯಂತೆ ಸೈನ್ಯಕ್ಕೆ ಜೀವನ ಮುಡಿಪಾಗಿಟ್ಟ ಭಾರತೀಯ ಯೋಧ. ೨೦೧೫ ರಲ್ಲಿ, ಸುಖಾ ಸುಮ್ಮನೆ ನಾಗಾ ನೇಷನಲಿಸ್ಟ್ ಸಪರೆಟಿಸ್ಟ್ ಗ್ರೂಪ್ ಭಾರತೀಯ ಸೈನಿಕರನ್ನು ಕೊಂದಾಗ, ಮೊದಲ ಬಾರಿಗೆ ಸೇನೆ ಆ ದೇಶದ ಗಡಿಯೊಳಗೆ ನುಗ್ಗಿ ನಡೆಸಿದ ಪ್ರತಿ ಕಾರ್ಯಾಚರಣೆಯ ಮುಖಂಡತ್ವ ವಹಿಸಿದ್ದು ಇದೇ ಬಿಪಿನ್ ರಾವತ್. ಆಗ ಇವರೊಂದಿಗೆ ಸತತ ಸಂಪರ್ಕದಲ್ಲಿ ಇದ್ದುದು ಸ್ವತಃ ಪ್ರಧಾನಿಯ ಸೆಕ್ಯುರಿಟಿ ಅಡ್ವೈಸರ್ ಅಜಿತ್ ಡೊವಲ್.. ಆಗ ಮೊದಲ ಬಾರಿಗೆ ಭಾರತ ಸರಕಾರದ ಬದಲಾದ ಆಕ್ರಮಣಕಾರಿ ರಕ್ಷಣಾ ನೀತಿಯ ಬಗ್ಗೆ ಜಗತ್ತಿಗೆ ಸುಳಿವು ಸಿಕ್ಕಿದ್ದು.

ಬಿಪಿನ್ ರಾವತ್ ಗೆ ಸೇನೆಯೇ ಒಂದು ಜೀವನ ಕ್ರಮವಾಗಿತ್ತು. ಮುಲಾಜಿಲ್ಲದೆ ಆಡುವ ನೇರ ಮಾತುಗಳು ಮಜುಗರ ಸೃಷ್ಟಿಸಿದರೂ , ಅವು ಹೆಚ್ಚಾಗಿ ದೇಶದ ರಕ್ಷಣೆಯ ಬಗ್ಗೆ ಪ್ರಾಮಾಣಿಕ ಕಳಕಳಿಯಿಂದ ಮೂಡಿ ಬಂದಂತವುಗಳು. ವಿಶ್ವ ಸಂಸ್ಥೆಯ ಪರವಾಗಿ ಕಾಂಗೋ ಬಂಡುಕೋರರ ವಿರುದ್ಧದ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದ ರಾವತ್ , ಕಠಿಣ ಪರಿಸ್ಥಿತಿಯಲ್ಲಿ ಕ್ರಮ ಜರುಗಿಸುವ ಬಗ್ಗೆ ವಿಶ್ವ ಸಂಸ್ಥೆಯ ಮೀನಾಮೇಷಗಳ ಬಗ್ಗೆ ಲಂಡನ್ ನ ಟೆಲಿಗ್ರಾಪ್ ಪತ್ರಿಕೆಯ ಸಂದರ್ಶನವೊಂದರಲ್ಲಿ ನೇರವಾಗಿ ಟೀಕಿಸಿದ್ದರು. ಕಾಶ್ಮೀರದಲ್ಲಿ, ಸೈನಿಕರ ಮೇಲೆ ವೀಪರೀತ ಕಲ್ಲು ತೂರಾಟವಾಗಿ ಮಾರಣಾoತಿಕ ಮಟ್ಟಕ್ಕೆ ಹೋದಾಗ, ‘ ರಾವತ್ ಕೋಪದಿಂದ “ಕಲ್ಲಿನ ಬದಲು ಇವರು ಕೋವಿ ಹಿಡಿದು ಬರಲಿ ನೋಡುವ.. ಆಗ ನಾವು ಏನೆಂಬುದನ್ನು ತೋರಿಸುತ್ತೇನೆ ..” ಎಂದು ಗುಡುಗಿದ್ದು ವಿವಾದ ಸೃಷ್ಟಿಸಿತ್ತು. ತಾಲಿಬಾನ್ ಜೊತೆಗೆ ಮಾತುಕತೆ ಆರಂಭಿಸುವ ಅವಶ್ಯಕತೆಯನ್ನು ವರ್ಷಗಳ ಹಿಂದೆಯೇ ಹೇಳಿದ್ದು, ಇದೀಗ ನಿಜವಾಗುತ್ತಿರುವುದು ಅವರ ಅಂತಾರಾಷ್ಟ್ರ ವಿಷಯಗಳ ಬಗೆಗಿನ ತಜ್ಞತೆ ,ದೂರದರ್ಶಕತ್ವವನ್ನು ತೋರಿಸುತ್ತದೆ. .. ಸೈನೋ-ವಹಾಬಿ ಕೂಟ ಜಾಲದ ಬಗ್ಗೆ ಇವರ ಮುಕ್ತ ಹೇಳಿಕೆಗೆ ವಿದೇಶಾಂಗ ಸಚಿವ ಜೈಶಂಕರ್ ಚೀನಾಗೆ ಅಧಿಕೃತ ಸ್ಪಷ್ಟನೆ ನೀಡಬೇಕಾಗಿ ಬಂತು.

ಇನ್ನೂ ಬಿಪಿನ್ ರಾವತ್ ರ ಕಾರ್ಯ ಶೈಲಿಯ ಬಗ್ಗೆ ಎರಡು ಮಾತಿಲ್ಲ. ಉದಾರಹರಣೆಗೆ, ಅರುಣಾಚಲ ಪ್ರದೇಶದಲ್ಲಿ ಸೈನ್ಯದ ಅಗತ್ಯಕ್ಕೆ ರಸ್ತೆ ಮಾಡುವ ಬಗ್ಗೆ ಒಂದು ಮಧ್ಯಾಹ್ನ ಬೇಡಿಕೆ ಬಂದಾಗ, ಅವತ್ತೇ ಸಂಜೆಯ ವರೆಗೆ ಈ ಬಗ್ಗೆ ಕ್ಷಿಪ್ರ ಅಧಿಸೂಚನೆ ಹೊರಡಿಸಲಾಗಿತ್ತು. ಇಂತಹ ಮಿಂಚಿನ ವೇಗದ ಬಿಪಿನ್ ರಾವತ್ ರನ್ನು ಮೋದಿ ಸರಕಾರ ಥಿಯೇಟರ್ ಕಮಾಂಡ್ ರಚಿಸುವ ಸಾಹಸಕ್ಕೆ ಪೂರಕವಾಗಿ CDS ಮಾಡಿದ್ದು ಆಶ್ಚರ್ಯವಲ್ಲ ತಾನೇ..

ಈ ಲೇಖನ ಬರೆಯುವ ಹೊತ್ತಿಗೆ ಎರಡು ಥಿಯೇಟರ್ ಕಮಾಂಡ್, ಪ್ರಯಾಗರಾಜದ ಏರ್ ಡಿಫೆನ್ಸ್ ಕಮಾಂಡ್ ಮತ್ತು ನಮ್ಮದೇ ಕರ್ನಾಟಕದ ಜಿಲ್ಲೆ ಕಾರವಾರ(ನನ್ನ ಸ್ವಂತ ಜಿಲ್ಲೆ ಕೂಡ) ಮರಿಟೈಮ್ ಥೇಟರ್ ಕಮಾಂಡಗಳು ಮೊದಲ ಹಂತದಲ್ಲಿ ನಿರ್ಮಾಣ ಗೊಳ್ಳುತ್ತಿವೆ. ೨೦೨೨-೨೩ ರ ಹೊತ್ತಿಗೆ ಎಲ್ಲ ಆರೂ ಕಮಾಂಡ್ ಗಳು ಕಾರ್ಯ ನಿರತವಾಗುವಂತಹ ರೂಪು ರೇಷೆ ಸಿದ್ದಗೊಂಡಿದೆ. ಮುಂಚೆ ಹರಿದು ಹಂಚಿಹೋದ, ಉಪಯೋಗಿಸದ ಸಾಧನ ಸಂಪನ್ಮೂಲಗಳನ್ನು ಕ್ರೋಡೀಕರಿಸುವ, ಅನವಶ್ಯಕ ವೆಚ್ಚಗಳನ್ನು ಕಡಿತಗೊಳಿಸುವ, ಒಂದೇ ತೆರನಾದ ಖರೀದಿ ವ್ಯವಸ್ಥೆ – ಇವೆಲ್ಲವುಗಳೂ ಜಾರಿ ಬರಲಿದ್ದು, ಭಾರತ ಹೊಸ ಭರವಸೆಯ ರಕ್ಷಣಾ ವ್ಯವಸ್ಥೆ ರೂಪುಗೊಳ್ಳಲು ಸಹ ಸಹಕಾರಿಯಾಗಲಿದೆ. ಹಿಂದಿನ ಸಮ್ಮಿಶ್ರ ಎನ್ ಡಿಯೇ ಸರಕಾರ ದಿಂದ ಹಿಡಿದು ನಂತರದ ಮನಮೋಹನ್ ಸರಕಾರದವರೆಗೆ ಕೂಡ, ಅರ್ಧ ಶತಮಾನದ, ದೇಶದ ರಕ್ಷಣಾ ವ್ಯವಸ್ಥೆಯ ಕಮಿಷನ್ ಲಾಬಿ ಈಗ ಮರೆಯಾಗಿ, ಖರೀದಿ ವ್ಯವಸ್ಥೆ ಪಾರದರ್ಶಕವಾಗುತ್ತಿರುವುದಲ್ಲದೇ , ಡಿಫೆನ್ಸ್ ಬಜೆಟ್ ಕೂಡ ಖಡಿತಗೊಳಿಸಿ ದೇಶದ ಇತರ ಅಭಿವೃದ್ಧಿ ಕೆಲಸಕ್ಕೆ ಅನುವು ಮಾಡಿಕೊಡುವಂತ ಯೋಚನೆಗಳು,ಯೋಜನೆಗಳು ಬರುತ್ತಿರುವುದು ಸ್ವಾಗತಾರ್ಹ.

ಹೀಗೆ ರಕ್ಷಣಾ ಸುಧಾರಣೆ ಮತ್ತು ನಿರ್ದಿಷ್ಟವಾಗಿ ಥಿಯೇಟರೈಜೆಶನ್ , ಕೋಲ್ಡ್ ಸ್ಟಾರ್ಟ್ ಅಂತಹ ಮುಖ್ಯ ತಂತ್ರಗಾರಿಕೆಯ ಸಮಯದಲ್ಲಿ, ಎಲ್ಲ ವಿಷಯಗಳ ಅರಿವಿದ್ದ, ಯೋಜನೆಯ ಪ್ರಗತಿಯಲ್ಲಿಯೇ, ಬಿಪಿನ್ ರಾವತ್ ನಿರ್ಗಮನ ಸರಕಾರಕ್ಕೆ, ದೇಶಕ್ಕೆ ಒಂದು ದೊಡ್ಡ ನಷ್ಟ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.. ಮುಂದಿನ CDS ಬಗ್ಗೆ ಸಮಾಲೋಚನೆಗಳು ಆರಂಭ ಆಗಿದ್ದು, ಯಾವುದೇ ಸಮಯ ಅಧಿಕೃತ ಪ್ರಕಟಣೆ ಬರಬಹುದು. ಈ ಎಲ್ಲ ಮಹಾತ್ವಾಕಾಂಕ್ಷಿ ಯೋಜನೆಗಳು ಮುಂದುವರೆಯಲಿದೆ ಎಂಬ ಆಶಾಭಾವ ಇದೆ.

Mi-17V-5 ಹೆಲಿಕಾಪ್ಟರ್

Coonoor crash 2nd high-profile accident involving Mi-17V5 | Latest News  India - Hindustan Times

ಇನ್ನೂ ಬಿಪಿನ್ ರಾವತ್ ಮತ್ತು ಇತರ ಸೇನಾ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದ ಹೆಲಿ ಕಾಪ್ಟರ್ ದುರ್ಘಟನೆ ಬಗ್ಗೆ. ಹೇಗಾಯ್ತು ಎಂಬ ಬಗ್ಗೆ ಸಾಕ್ಷಿ ಪುರಾವೆಗಳಿಲ್ಲದೇ, ಇಲ್ಲ ಸಲ್ಲದ ಉಹಾಪೋಹಗಳ ಅವಶ್ಯಕತೆ ಇಲ್ಲ. ಆದರೆ ಇಲ್ಲಿ ಕೆಲ ವಿಷಯಗಳನ್ನು ಗಮನಿಸಬೇಕು. ಅವರು ಪ್ರಯಾಣಿಸುತ್ತಿದ್ದದ್ದು Mi-17V-5 ಹೆಲಿಕಾಪ್ಟರ್. ರಶಿಯಾದ ಕಜಾನ್ ಎಂಬ ಕಂಪನಿ ನಿರ್ಮಿತ, ಜಗತ್ತಿನಲ್ಲಿ ದೊರಕುತ್ತಿರುವ ಉತ್ತಮ ಉತ್ಕೃಷ್ಟ ಗುಣ ಮಟ್ಟದ ಚಾಪ್ಪರ್ ಎಂಬ ಬಗ್ಗೆ ಅನುಮಾನ ಇಲ್ಲ. ಟರ್ಬೋ ಶಾಫ್ಟ್ ಇಂಜಿನ್ ನ ಜೊತೆಗೆ ನೆಲದಿಂದ ಮೇಲೆ 6 ಕಿಮಿ ಅಷ್ಟು ಎತ್ತರದಲ್ಲಿ ಕೂಡ ಹಾರಬಲ್ಲ, ೨೫೦ ಕಿಮಿ ಪ್ರತಿ ಗಂಟೆ ತಲುಪಬಲ್ಲ ವೇಗದ, ೨೭೦೦ ಎಚ್.ಪಿ, ಸಾಮರ್ಥ್ಯದ ಈ ಹೆಲಿ ಕಾಪ್ಟರ್ ನಲ್ಲಿ ಅತ್ಯಾಧುನಿಕ ಕಾಕ್ ಪಿಟ್ ವ್ಯವಸ್ಥೆ, ಹವಾಮಾನ ಕುರಿತ ಮಾಹಿತಿ, ಅಗತ್ಯ ಬಿದ್ದರೆ ಸ್ವಯಂ ಚಾಲಿತ ಪೈಲಟ್ ವ್ವಯಸ್ಥೆ ಕೂಡ ಇತ್ತು. ರಾವತ್ ಉಪಯೋಗಿಸಿದ, ಟ್ಯಾಂಕ್ ನಂತಹ ಈ ವಿ5 ಮಾಡೆಲ್ ಅನ್ನು ಒಂದು ಬಾಲಿಸ್ಕ್ಟಿಕ್ ಕ್ಷಿಪಣಿ ಕೂಡ ಅಷ್ಟು ಸುಲಭವಾಗಿ ಹತ್ತಿಕ್ಕುವ ಹಾಗಿರಲಿಲ್ಲ. ಜಗತ್ತಿನ ಎಲ್ಲ ರಾಷ್ಟ್ರಗಳೂ ಉಪಯೋಗಿಸಿದ ಈ ಹೆಲಿಕಾಪ್ಟರ್ ನ ಸುತ್ತ ನಡೆದ ದುರ್ಘಟನೆಗಳೂ ಕೂಡ ಕಮ್ಮಿಯೇನಿಲ್ಲ . ಆದರೆ,ಆ ಹಿಂದಿನ ಬಹುತೇಕ ಪ್ರಕರಣಗಳನ್ನು ಒಮ್ಮೆ ಕಣ್ಣು ಹಾಯಿಸಿದರೆ, ಸಿಕ್ಕ ಕಾರಣಗಳು ಬಹುತೇಕ.. ನೆಲದಿಂದ ಮಿಸೈಲ್ ಬಿಟ್ಟು ಉರುಳಿಸಿದ್ದು, ಹಾರುವಾಗ ಮರ ಬೆಟ್ಟಗಳಿಗೆ ಅಪ್ಪಳಿಸಿ ಉರಿದಿದ್ದು, ಇಲ್ಲವೇ ಲ್ಯಾಂಡ್ ಮಾಡುವಾಗ ನೆಲಕ್ಕೆ ಅಪ್ಪಳಿಸಿದ್ದು, ಹೀಗೆ ಕ್ರಾಶ್ ಆದ ಮೇಲೆಯೇ ಬೆಂಕಿ ಹತ್ತಿ ಉರಿದ ಪ್ರಕರಣಗಳು ಜಾಸ್ತಿ. ಆದರೆ, ಮೊದಲೇ ಬೆಂಕಿ ಹತ್ತಿ ಕ್ರಾಶ್ ಆಗಿದ್ದ ಕೇಸ್ ಗಳು ನನಗೆ ಅಷ್ಟಾಗಿ ಕಾಣಲಿಲ್ಲ. ಅವತ್ತು ನೋಡಿದ ಪ್ರತ್ಯಕ್ಷ ದರ್ಶಿಗಳ ಪ್ರಕಾರ ದಟ್ಟ ಮಂಜಿನ ಪ್ರದೇಶಕ್ಕೆ ಪ್ರವೇಶಿದ ಕೆಲವು ಸೆಕಂಡುಗಳಲ್ಲಿ ಬೆಂಕಿ ಹತ್ತಿಸಿಕೊಂಡ ದೇಹಗಳು ಕೆಳಗುರುಳಿದವು ಎನ್ನುವುದು.. ಇಂಧನ ಟ್ಯಾಂಕ್, ಶಾರ್ಟ್ ಸರ್ಕ್ಯುಟ್ ಹೇಗೆ ಸ್ಫೋಟ ವಾಯಿತು.. ಯಾವುದಕ್ಕೂ ಡಿಕ್ಕಿ ಹೊಡೆದದ್ದೂ ಅಲ್ಲ. ಪೈಲಟ್ ನ ತಪ್ಪು ಇರಬಹುದೇ ? .. ಬ್ಲಾಕ್ ಬಾಕ್ಸ್ ನಿಂದ ಹೆಚ್ಚಿನ ಮಾಹಿತಿ ಬೇಕು. ಹೇಗಿದ್ದರೂ ತನಿಖೆಗೆ ನೀಡಲಾಗಿದೆ. ಈ ವಿವರಗಳಿಂದ, ಮುಂದೆ ಪ್ರಧಾನಿ ಸೇರಿದಂತೆ ಅನೇಕರು ಉಪಯೋಗಿಸುವ ಈ ಹೆಲಿಕಾಪ್ಟರ್ ಬಗ್ಗೆ ಜಾಗೃತವಾಗಿ ಇರುವುದು ಮುಖ್ಯ.

ಇನ್ನೊಂದು ವಿಷಯ

ಥಿಯೇಟರ್ ಕಮಾಂಡ್ಸ್, ಬಿಪಿನ್ ರಾವತ್ ಮತ್ತು ಇನ್ನೊಂದು ವಿಷಯ…! ಅಂದಿದ್ದೆನಷ್ಟೇ .. ಆ ಇನ್ನೊಂದು ವಿಷಯಕ್ಕೆ ಬರೋಣ…. ಒಂದು ದೇಶದ ಸೈನ್ಯದ ಮುಖ್ಯಸ್ಥ ಅಕಾಲಿಕ ದುರ್ಘಟನೆಗೆ ಈಡಾದಾಗ, ಆ ದೇಶದ ನಾಗರಿಕರು ಹೇಗೆ ಪ್ರತಿಕ್ರಯಿಸುತ್ತಾರೆ ಎನ್ನುವುದು.

ಯಾವತ್ತೂ ಒಂದು ದೇಶದ ರೈತರು, ವೈದ್ಯರು, ಕಾರ್ಮಿಕರು,ಶಿಕ್ಷಕರು, ಕಲಾವಿದರು,ರಾಜ ಕಾರಣಿಗಳು, ಧರ್ಮ ಗುರುಗಳು ಇವರೆಲ್ಲ ಒಂದು ಕಡೆಯಾದರೆ,ಆ ದೇಶದ ಎಲ್ಲರನ್ನೂ ಕಾಯುವ, ಜೀವ ಕೈಲಿ ಹಿಡಿದು, ಅರೆ ಕ್ಷಣವೂ ಮೈ ಮರೆವೆಗೆ ಅವಕಾಶ ಕೊಡದೆ , ತಮ್ಮೆಲ್ಲ ಸುಖ ನೆಮ್ಮದಿಗಳನ್ನು, ಪ್ರೀತಿ ಪಾತ್ರರನ್ನೂ ಬಿಟ್ಟು, ಯಾವುದೇ ಕ್ಷಣದಲ್ಲೂ ಅಮೂಲ್ಯ ಬದುಕನ್ನು ಬಲಿ ಕೊಟ್ಟು ಹೋಗುವ, ಮಹಾತ್ಯಾಗದ ಸೈನಿಕ ವರ್ಗ ಎಲ್ಲಕ್ಕಿಂತ ಉನ್ನತ ಮಟ್ಟದ್ದು.

Gen Bipin Rawat Death News LIVE Updates: CDS' Final Journey Today; PM Modi,  Rajnath Singh Pay Tribute - polkhol samachar

ಎಲ್ಲ ಅಭಿಮಾನ, ದುರಭಿಮಾನಗಳು ಚರ್ಚಾರ್ಹವಾದರೂ, ನಮ್ಮನ್ನು ಕಾಯುವ ಸೈನಿಕರ, ನಮ್ಮ ಸೈನ್ಯದ ವಿಷಯದಲ್ಲಿ ಮಾತ್ರ ಯಾವುದೇ ಷರತ್ತುಗಳಿಲ್ಲದ ಅಭಿಮಾನ, ಭಾವೋದ್ವೇಗ, ಗೌರವ, ಕೃತಜ್ಞತೆ ಇರಲೇಬೇಕು. ಇದು ಇಲ್ಲದಿದ್ದರೆ ಏನಾಗಬಹುದು ಎಂಬುದಕ್ಕೆ ಇಪ್ಪತ್ತು ವರ್ಷಗಳಲ್ಲಿಯೇ ಮತ್ತೆ ದಾಸ್ಯಕ್ಕೆ ಮರಳಿದ ಆಫ್ಘನ್ ಉದಾಹರಣೆ ಇದೆ. ಇಲ್ಲಿ ಯಾವ ಚರ್ಚೆಗೂ ಆಸ್ಪದ, ಅವಶ್ಯಕತೆ ಇರುವುದಿಲ್ಲ. ಮಿಲಿಯ ಗಟ್ಟಲೆ ವರ್ಷಗಳ ಹಿಂದೆ ಹಸಿವಿನ ಜೊತೆ ಜೊತೆಗೆ ಸ್ವರಕ್ಷಣೆ (Self Defence) ಎನ್ನುವ ವಿಷಯ , ಮಾನವ ಸಹಿತ ಪ್ರಾಣಿಗಳ ಜೀವ ಸಂಕುಲ ಉಗಮವಾದಾಗಿನಿಂದಲೇ ಇರುವ ಪ್ರಮುಖವಾದ ಟಾಪಿಕ್, ಮೂಲಭೂತ ಹಕ್ಕು.

ಇಂತಹ ಸೈನ್ಯದ, ಹೆಮ್ಮೆಯ ಸೇನಾಧಿಕಾರಿ ದುರಂತ ಸಾವಿಗೀಡಾದಾಗ ಕೂಡ ಸಂಭ್ರಮಿಸುವ ಪ್ರಜೆಗಳು ಇದ್ದಾವಲ್ಲ… ಅದು ನಿಜಕ್ಕೂ ನಾಚಿಕೆಗೇಡಿನ ಸಂಗತಿ..

ಸಾಮಾನ್ಯವಾಗಿ ಭಾರತದಲ್ಲಿ ವೈವಿಧ್ಯತೆಯಿಂದಾಗಿಯೇ ಪ್ರಜಾ ಪ್ರಭುತ್ವ ಸಶಕ್ತವಾಗಿದೆ. ಜೊತೆಗೆ ಧರ್ಮ, ಪಂಥ, ಜಾತಿ, ಆಹಾರ, ಭಾಷೆಗಳ ವಿಷಯದಲ್ಲಿ ಅನೇಕ ಭಿನ್ನಾಭಿಪ್ರಾಯ ಇರಬಹುದು. ಅಲ್ಲೆಲ್ಲ ಕಡೆ ದೇಶ ದ್ರೋಹದ ತೀರ್ಮಾನ ಮಾಡಲು ಆಗುವುದಿಲ್ಲ. ಆದರೆ, ಒಂದು ದೇಶ , ಒಂದು ಸೈನ್ಯ ಅಂತ ಬಂದಾಗ ನೂರೈವರಾವಲ್ಲವೇ ಎಂಬ ಐಕ್ಯತೆ ಖಂಡಿತ ಮುಖ್ಯ. ಇಂತಹ ಒಂದು ಪರಿಸ್ಥಿತಿ ಇದ್ದರೂ ರಾವತ್ ರಂತ ದೇಶದ ಹೆಮ್ಮೆಯ ಸೇನಾನಿಯ ವಿಷಯ ದಲ್ಲಿ ಕೆಲವರು ಸೋಶಿಯಲ್ ಮಾಧ್ಯ್ಯಮದಲ್ಲಿ ಆಡಿಕೊಂಡ ರೀತಿ ನಾಚಿಕೆಗೇಡಿನ ಸಂಗತಿ. ಬೇರೆಲ್ಲ ವಿಷಯ ಬದಿಗಿಟ್ಟು, ಇಂತಹ ರಾವತ್ ನಿಧನವನ್ನು ಸಂಭ್ರಮಿಸಿದವರನ್ನು ದೇಶ ದ್ರೋಹಿಗಳು ಎಂದು ನಿಖರವಾಗಿ, ಸ್ಪಷ್ಟವಾಗಿ ಗುರುತಿಸುವ ಕಾಲ ಈಗ ಬಂದಿದೆ. ಆದರೆ, ಹೋದರೆ ಎನ್ನುವ ಚರ್ಚೆ ಕೂಡ ಅಗತ್ಯವಿಲ್ಲ. ನಮ್ಮ ದೇಶ, ನಮ್ಮ ಸೇನೆ, ನಮ್ಮ ಸೇನೆಯ ಮುಖ್ಯಸ್ಥ, ನಮ್ಮ ಜನ, ನಮ್ಮ ರಕ್ಷಣೆ ಎಂಬ ಮಂತ್ರ ಅಗತ್ಯ. ಹಸಿರು ಸೊಪ್ಪುಗಳ ಮೇಲೆ ಉಪ್ಪು ಸಿಂಪಡಿಸಿದ ಕೂಡಲೇ, ಪ್ರತ್ಯಕ್ಷವಾಗುವ ಹುಳು ಹುಪ್ಪಡಿಯ ಹಾಗೆ ಇಂತ ಪರಿಸ್ಥಿತಿಯಲ್ಲಿ ದೇಶದ್ರೋಹಿಗಳು ನಿಚ್ಚಳವಾಗಿ ಗೋಚರಿಸುತ್ತಾರೆ. ಅಂತವರನ್ನು ದೂರ ಇರಿಸುವುದರಲ್ಲಿ ಸಕ್ರಮರಾಗುವ ಅಗತ್ಯ ಇದೆ. ಅಂದ ಹಾಗೆ, ನಿಮ್ಮ ಇತರ ಧರ್ಮ, ಜಾತಿ, ಪಂಥ, ಆಹಾರದ ವಿಷಯಗಳನ್ನು ಅಜೆಂಡಾ ಇಲ್ಲಿ ತಂದು ಗೋಜಲು ಸೃಷ್ಟಿಸುವ ಅಗತ್ಯ ಕೂಡ ಇಲ್ಲ. ಎಲ್ಲಕ್ಕಿಂತ ದೇಶ ದೊಡ್ಡದು. ಸುತ್ತಾಡಿ, ಕಿತ್ತಾಡಿ.. At the end it is always nation first.. ನೆನಪಿರಲಿ..long live India and Indian army.