ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೀಪಾವಳಿ

ವಿನಾಯಕ ಅರಳಸುರಳಿ
ಇತ್ತೀಚಿನ ಬರಹಗಳು: ವಿನಾಯಕ ಅರಳಸುರಳಿ (ಎಲ್ಲವನ್ನು ಓದಿ)

ದೀಪಾವಳೀ.. ದೀಪಾವಳೀ..
ಹಳೆಮನೆಯ ಹಾಳಿರುಳ ದೀಪಾವಳಿ,
ಮಗ ಬರದ, ಸೊಸೆಯಿರದ ದೀಪಾವಳಿ,
ಮುದಿಜೀವದೆದೆಕುದಿಯ ದೀಪಾವಳಿ.

ಹಿಂದೆ ಆ ಗುಡಿಸಲಲಿ ಬಂಧುಗಳ ಬರುವಿನಲಿ
ಎಲ್ಲರೊಳಗೊಂದಾದ ದೀಪಾವಳಿ;
ಇಂದು ಐಶ್ವರ್ಯದಲಿ, ವೈಭವದ ಮಹಲಿನಲಿ
ನಾನಷ್ಟೇ, ನನಗಷ್ಟೇ ದೀಪಾವಳಿ.

ಸಿರಿವಂತ ಸುಟ್ಟಂಥ ಮದ್ದುಗಳ ಬಡಪೋರ
ಮತ್ತೆ ಸಿಡಿಸಿರೆ ಅಂದು ದೀಪಾವಳಿ;
ಇಂದ್ಯಾರೂ ಇಲ್ಲದ ಊರಿನಂಗಳದಲ್ಲಿ
ಮಿಣುಕು ಹುಳುಗಳ ಬೆಳಕೆ ದೀಪಾವಳಿ.

ಒಂದೇ ತೊಟ್ಟಿಲಿನಿಂದ ಎದ್ದು ದೂರಕೆ ನಡೆದ
ಎಲ್ಲರಲು ಅವರವರ ದೀಪಾವಳಿ;
ಮನೆ, ಮಹಲು, ಗುಡಿಸಲು ಎಲ್ಲೆಡೆಗೂ ಬಂದಾಯ್ತು
ಮನಕಷ್ಟೇ ಬಾಕಿಯಿದೆ ದೀಪಾವಳಿ.