- ನಂಬಿಕೆಯ ವರ್ಷಧಾರೆ - ಜುಲೈ 8, 2024
- ಹುಚ್ಚು ಅಚ್ಚುಮೆಚ್ಚಾದಾಗ - ಜನವರಿ 27, 2024
- ಅಪರಿಚಿತರು - ಡಿಸಂಬರ್ 31, 2023
ಹಚ್ಚ ಹಸಿರು ಕಣ್ಮನ ಸೆಳೆಯುವಷ್ಟು ಎಲ್ಲೆಲ್ಲೂ ಪಸರಿಸಿದೆ. ನಭೋವ್ಯೋಮವೆರಡು ದಿಗಂತದಂಚಿನಲ್ಲಿ ಸೇರುವ ಪ್ರಕೃತಿಯ ಆಹ್ಲಾದಿತ ಕ್ಷಣವೂ ಸಹ ಕಪ್ಪಡರಿದ ಮೋಡಗಳ ಹಿಂದೆ ಮುಸುಕಾಗಿ ಮರೆಯಾಗಿದೆ. ಅಂದೆಂದೋ ಮೂಡಿದ್ದ ಕಾಮನಬಿಲ್ಲಿನ ಹಸಿರಿಗೆ, ವಸುಂಧರೆಯ ಒಡಲಾಳದ ಸಂಕಟವು ಅರ್ಥವಾಯಿತೇನೋ ಎಂಬಂತೆ ಇಂದಿಗೆ ಆಕೆಯ ಮಡಿಲಿನ ಹಾಸಾಗಿ, ನೀಲಿಯನ್ನೇ ಅಣಕಿಸುತ್ತಿದೆ, ನಿನಗಿಂತ ಸುಖಿ ನಾನು, ತಾಯ್ಮಡಿಲ ಬೆಚ್ಚಗಿನಲಿ ಎಂಬಂತೆ. ಆಗಸದ ಶ್ವೇತಲತೆಯೊಂದು ಆಮಂತ್ರಣದ ಅನಿವಾರ್ಯತೆಯಿಲ್ಲದೇ, ನಿಷ್ಪಕ್ಷಪಾತವಾಗಿ ಹಸಿರು ಮಡಿಲಿಗೆ ಜಾರಿಬಿದ್ದರೂ ಅಂಬರದಂಚಿನೊಂದಿಗಿನ ನಂಟು ಅಂಟೇನೋ ಎಂಬಂತೆ ಕಣ್ಮರೆಯಾಯಿತು. ತುಂಬಿ ಹರಿವ ವರದೆಯದು ಆರ್ಭಟಿತ ನಡೆ. ಕರಿಗತ್ತಲ ನಡುವಿನ ಮಣ್ಣು ಹಾದಿಯ ಸಂದಿ ಮೂಲೆಯೊಂದರಲ್ಲಿ, ವಟರಗಪ್ಪೆ, ಜೀರುಂಡೆಗಳ ಸದ್ದಿನಲ್ಲಿಯೂ ಸೊಂಪಾಗಿ ತರುಲತೆಗಳ ಮಧ್ಯೆಯಿಂದ ಧುಮ್ಮಿಕ್ಕುವ ಕೇವಲ ಮಳೆಗಾಲದ ಅತಿಥಿಯ ಕರೆ ಕೇಳುತ್ತಿದೆ. ಬಿಳಿಯ ಹಾಲ್ನೊರೆಯೆಂದರೆ, ಬದುಕು ಚೆಲ್ಲುವಷ್ಟು ಅತೀವ ಆನಂದ. ಪ್ರಕೃತಿಯ ಈ ಕೃತಿಗಳಿಗೆ ಅಡಿಪಾಯವಾದರೂ ಏನು! ನಿಯತಿಯ ನೇಮವೇ ಅಥವಾ ನಂಬಿಕೆಯ ಭಾವವೇ?
ಮೂರಕ್ಷರದ ಭಾವನೆಯೊಂದಕ್ಕೆ ಇರುವ ಶಕ್ತಿ ಅತಿಮಾನುಷವೆಂದರೆ ತಪ್ಪಾಗಲಾರದು. ಮೊನ್ನೆ ತಾನೇ ಹುಟ್ಟಿದ ಹಸುಗೂಸಿಗೆ ತಾಯ್ಮಡಿಲಾವುದು ಎಂಬ ಭಾವನೆ,ಸ್ಪರ್ಶದ ಸ್ಪಷ್ಟತೆಯಿಂದಷ್ಟೇಯಲ್ಲ ಮನ ನುಡಿವ ನಂಬಿಕೆಯ ತಂತುವಿನದ್ದು. ಮಳೆಗಾಲದ ಮೊದಲು ಕೂಗುವ ಮಯೂರನ ಶ್ರುತಿಗೆ ಅಂಬರವೇಕೆ ಅಮೃತವನ್ನು ಎರಕ ಹೊಯ್ಯಬೇಕು? ಓಡುವ ಪಯಸ್ವಿನಿಗೆ ಶರಧಿ ತನ್ನನ್ನು ಅಪ್ಪಿಯೇ ತೀರುತ್ತದೆ ಎಂಬ ಅನನ್ಯ ನಂಬಿಕೆ, ಅದಕ್ಕಾಗಿಯೇ ತಾನೇ ಕಾಡು ಮೇಡುಗಳ, ದಿಬ್ಬ ದಿಣ್ಣೆಗಳ ಹಂಗಿಲ್ಲದೆ, ಬಯಲು, ಮಲೆಯ ಬೇಧವಿಲ್ಲದೆ ಕರಾವಳಿಯ ತಟವನ್ನು ಅಪ್ಪುವುದು. ಸಸಿಯಾಗಿದ್ದ ಗಿಡಕ್ಕೆ ಹಾರುವ ಹಕ್ಕಿಯ ಮೇಲೆ ಅತೀವ ನಂಬಿಕೆ. ಪ್ರಾಕೃತಿಕ ಕ್ರಿಯೆಯೊಂದರ ಮಧ್ಯಸ್ಥಿಕೆ ಖಗವೊಂದರದ್ದಲ್ಲವೇ? ವಿಜ್ಞಾನ ಹಲವು ಬಗೆಯ ಕಾರಣಗಳನ್ನು,ವಿಶ್ಲೇಷಣೆಗಳನ್ನು ನೀಡಬಹುದು ಈ ಸಂದರ್ಭಗಳಿಗೆ. ಆದರೆ, ಮನೋವಿಜ್ಞಾನದ ಅಂತರಂಗ ನುಡಿಯುವುದು ಭಾವರಾಗಗಳ ಸಮ್ಮಿಲನವನ್ನು.
ಮನೆಯೊಂದರಲ್ಲಿ ಹಡೆದ ತಾಯಿ ನಾಲ್ಕೇಟು ಹಾಕಿದರೂ ಮತ್ತೊಮ್ಮೆ ಎದೆಗವುಚಿಕೊಂಡಾಗ, ಎದೆಯ ಮುರಳಿ ನುಡಿಸಿದ್ದು ವಾತ್ಸಲ್ಯವೆಂಬ ರಾಗವನ್ನು. ಕೇವಲ ಕಠೋರತೆಯನ್ನು ಕಾರ್ಯಗಳಲ್ಲಿ ಬಿಂಬಿಸುವ ತಂದೆಯ ಪರಿಪಕ್ವತೆಯಲ್ಲಿ ಕಾಣದೆಯೂ ಅಡಕವಾಗಿದ್ದು ಪ್ರೇಮವೆಂಬ ಗುಪ್ತಗಾಮಿನಿ. ಅತಿ ಹಳೆಯ ಗೆಳೆತನವಾದ ಸೋದರತ್ವದಲ್ಲಿ ಪ್ರತಿಫಲಿಸುವ ದಿನನಿತ್ಯದ ಕದನಗಳಲ್ಲಿ ಝೇಂಕರಿಸುವುದು ತನ್ನವರೆಂಬ ನಗಾರಿಯ ಕೂಗು. ಹೆಗಲ ಮೇಲಿನ ಭಾರವನ್ನೆಲ್ಲಾ ಎದೆಯ ಕಂದಕದೊಳಗೆ ನೂಕದಂತೆ, ಕಂಬನಿಯ ರೂಪದಲ್ಲಿ ಹೊರಗೆಡುಹಲು ಊರುಗೋಲಾಗುವ ಸ್ನೇಹಿತರದ್ದು ಪ್ರತಿಫಲಾಪೇಕ್ಷಿತವಲ್ಲದ ನಿಸ್ವಾರ್ಥ ನಂಬಿಕೆಯ ಬಿಂದು. ವಿವರಿಸಲು ನೂರೆಂಟು ನಿದರ್ಶನಗಳೇ ದೊರಕಬಹುದು, ಆದರೆ ಪ್ರತಿ ಭಾವವೊಂದು ಅಂತರಂಗದಲ್ಲಿ ಅಲೆಯಾಗಿ ಹೊಮ್ಮಲು ಕಾರಣವೆಂದರೆ ಆ ವ್ಯಕ್ಕಿ ಅಥವಾ ವಸ್ತುವಿನ ಮೇಲಿರುವ ನಂಬಿಕೆಯಂದರೆ ತಪ್ಪಾದೀತೇ?
ಕಾಣದ ದೇವರಿಗೆ ಕೈ ಮುಗಿಯುವಾಗ ಅಶ್ರುಬಿಂದುಗಳು ಕಪೋಲವ ದಾಟಿ ಭೂತಾಯಿಯ ಒಡಲಿಗೆ ಹನಿಯ ರೂಪದಲ್ಲಿ ಬೀಳುತ್ತದೆ; ದೇವರು ಮನದಲ್ಲಿನ ನಂಬಿಕೆಯ ಅಸ್ತಿತ್ವ ತಾನೇ! ಅಪರಿಚಿತರ ನಗುವಿನಾಳದಲ್ಲಿ ನೋವಿನೆಳೆಯೊಂದು, ಬಿರಿದ ಮಲ್ಲಿಗೆಯ ಒಳಗಿನ ಕುಸುಮದಂತೆ ಕಂಡೂ ಕಾಣದಿದ್ದಾಗ, ಕೆಲವೇ ಕೆಲವು ಸಂಭಾಷಣೆಗಳಲ್ಲಿ ಮನದ ತುಮುಲಗಳನ್ನು ಕಂಡು ಹಿಡಿದು ಮರುಗುವ ಕಲೆಯಿಹುದಲ್ಲಾ, ಭುವನಕರ್ತೃವಿನ ಕೈಚಳಕದ್ದಷ್ಟೇಯಲ್ಲ, ನಂಬಿಕೆಯ ಆಪ್ಯಾಯಮಾನ ತಂತುವಿನದ್ದು. ಸ್ನೇಹಿತರ, ಕುಟುಂಬದವರ, ಅತ್ಯಾತ್ಮೀಯರ ಭಾವನೆಗಳೆಲ್ಲಾ ಅರ್ಥವಾಗಿಬಿಡಬಹುದು ಕೆಲವೊಮ್ಮೆ. ಅಪರಿಚಿತತೆಯ ನೋವನ್ನೂ ಅರ್ಥವಾಗುವಂತೆ ಮಾಡುವ ಅವಿನಾಶಿ ಭಾವವೆಂದರೆ, ಆ ವ್ಯಕ್ತಿತ್ವದ ಮೇಲೆ ತಾನಾಗಿಯೇ ಮೊಳೆವ ನಂಬಿಕೆಯ ಚಿಗುರಿನದ್ದು. ಮೋಸದ ಜಾಲದಲ್ಲಿ ಬೀಳುವುದೂ ಕೂಡ ಇದೇ ತೆರನಲ್ಲಿ. ಆದರೆ, ಬೆಳೆತ ಭಾವದ ಸ್ಪಷ್ಟತೆ ಚಿಗುರಿರುವಾಗಲೇ ಅರಿವಿಗೆ ಬಂದಿರುತ್ತದೆ, ಆಲಿಸುವ ಮನವಿರಬೇಕು.
ಹಾಗಾದರೆ, ನಂಬಿಕೆಯೇ ಅಸ್ತಿತ್ವದ ಮೂಲವೇ? ಅಲ್ಲವೆಂದಳೆಯಲಾಗದೇನೋ ಪ್ರಾಯಶಃ. ಪ್ರಕೃತಿಯ ಪ್ರತಿ ಚಲನ ವಲನದಲ್ಲೂ, ಪ್ರತೀ ವಲಯದಲ್ಲೂ, ವಾಯುವಿನ ವ್ಯಾಪ್ತಿಯಷ್ಟು, ಜ್ಯೋತಿಯ ಕಿಡಿಯಷ್ಟು ತುಂಬಿರುವುದು ನಂಬಿಕೆಯೇ. ಇಂದು ಬೆಳಗಿದ ದೀಪ, ಸಂಜೆಯವರೆಗೂ ಉರಿಯುತ್ತದೆ ಎಂಬ ನಂಬಿಕೆ ನಮಗೆ. ತಾನಿತ್ತ ಎಣ್ಣೆಯು, ಜ್ಯೋತಿಯಾಗಿ ಬತ್ತಿಯಲ್ಲಿ ಹೊಮ್ಮುತ್ತದೆ ಎಂಬ ದೃಢ ಅಚಲತೆ ಎಲ್ಲಿಯವರೆಗೂ ಅಂತರಾತ್ಮದಲ್ಲಿ ತುಂಬಿರುತ್ತದೆಯೋ, ಅಲ್ಲಿಯವರೆಗೂ ತಿಮಿರನ ದೃಷ್ಟಿ ತಾಕುವುದಿಲ್ಲ. ನಂಬಿಕೆಯೆಂಬುದೊಂದು ಅಭದ್ರತೆಯಲ್ಲೂ ಭದ್ರಭಾವವಾಗಿ, ಮನಕೊಂದು ಮಗುವಿನ ನಗು ನೀಡುವ, ಧರೆಗೊಂದು ತಂಪ ನೀಡುವ ವರ್ಷಧಾರೆ..
ಚೆನ್ನಾಗಿ ದೆ