ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

"ಹೊತ್ತು ಕಂತಿದ ಮೇಲೆ ದಿಕ್ಕುಗಳ ಗುರುತಿಸಲಾಗುವುದಿಲ್ಲ... "ಎಂದು ಆರಂಭಿಸುವ ಕವಿ ಮಧುಸೂದನ ರಂಗೇನಹಳ್ಳಿ ಅವರ ಈ ಕವಿತೆಯಲ್ಲಿ "ನಡುವಿನವ" ಸಂಕಟವನ್ನು ಇಷ್ಟು ಶಕ್ತವಾಗಿ ಚಿತ್ರಿಸಿದ್ದು ಓದಿಯೆ ಸವಿಯಬೇಕು.. ಈ ಕ್ಲಾಸ್ಸಿಕ್ ಕವಿತೆ ನಿಮಗಾಗಿ..
ಕು.ಸ.ಮಧುಸೂದನ ರಂಗೇನಹಳ್ಳಿ
ಇತ್ತೀಚಿನ ಬರಹಗಳು: ಕು.ಸ.ಮಧುಸೂದನ ರಂಗೇನಹಳ್ಳಿ (ಎಲ್ಲವನ್ನು ಓದಿ)

ಹೊತ್ತು ಕಂತಿದ ಮೇಲೆ
ದಿಕ್ಕುಗಳ ಗುರುತಿಸಲಾಗುವುದಿಲ್ಲ.

ಪುರಾಣ
ಇತಿಹಾಸಗಳ ಕಲಸು ಮೇಲೊಗರದಲಿ
ವರ್ತಮಾನಕೊಂದು ಸ್ಪಷ್ಟತೆಯಿರುವುದಿಲ್ಲ.

ಎಡಬಲಗಳ
ಆಡಂಬೋಲದಲ್ಲಿ
ನಡುವಿನವನ ಮಾತುಗಳಿಗೆ
ಕವಡೆ ಕಿಮ್ಮತ್ತಿರುವುದಿಲ್ಲ.

ಪಂಥೀಯರುಗಳ
ಪಂಥಾಹ್ವಾನದ ಸಂತೆಯೊಳಗೆ
ದಿಕ್ಕಟ್ಟು ನಿಂತ ಅನಾಥ ಮಗು
ಹಾಲು ಕುಡಿಸುವವರಿಲ್ಲ.

ನಿನ್ನೆಯವರೆಗು
ನಿಜವೆಂದುಕೊಂಡಿದ್ದ ನಂಬಿಕೆಗಳೀಗ
ಮಿಥ್ಯವೆನಿಸುತಿವೆ.

ನಾಳೆಗಾಗಿಯೆಂದು
ಹರಿವಾಣದಲ್ಲಿಟ್ಟು ಬಡಿಸಿದ
ಹೊಸ ಸಿದ್ದಾಂತಗಳು
ಭರವಸೆ ಮೂಡಿಸುತಿಲ್ಲ.

ಕಂಗಾಲಾಗಿ ನಿಂತವನಿಗೀಗ
ನೆರಳೂ
ನಿಜ ನುಡಿಯುತಿಲ್ಲ.