ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ ಹುಟ್ಟುವುದಕ್ಕೆ ಹೊತ್ತು ಗೊತ್ತಿಲ್ಲ

ಕು.ಸ.ಮಧುಸೂದನ ರಂಗೇನಹಳ್ಳಿ
ಇತ್ತೀಚಿನ ಬರಹಗಳು: ಕು.ಸ.ಮಧುಸೂದನ ರಂಗೇನಹಳ್ಳಿ (ಎಲ್ಲವನ್ನು ಓದಿ)

ಈಗಿನ್ನು ನಿಂತ ಮಳೆ
ಎದುರು ಮನೆಯಲ್ಲಿ ತಲೆಗೆರೆದು ನಿಂತ ತರಳೆ
ಮಾರುವವರು ಕೂಗುತ್ತಿದ್ದಾರೆ
ಹಳೆ ರೇಡಿಯೋದಲ್ಲಿ,ಹೊಸ ಟಿ.ವಿ.ಯಲ್ಲಿ
ರಸ್ತೆ ಬದಿಯ ಹೋರ್ಡಿಂಗುಗಳಲ್ಲಿ
ಬೇಕೇನು ಹೊಸ ಸರಕು
ಹೊಸ ಮಾಡೆಲ್ಲಿನಲ್ಲಿ

ಹಣಕಿದೆ ಏನೇನಿವೆ?
ಮಾರುಕಟ್ಟೆಯ ಪಟ್ಟಿಯಲಿ
ಬೈಕು ಕಾರು
ಸ್ಮಾರ್ಟ್ ಪೋನು ಕಂಪ್ಯೂಟರು
ಸನಾತನ ಯೋಗ
ಆಧುನಿಕ ರೋಗ
ಸ್ಯಾನಿಟೈಜರು ಮಾಸ್ಕು
ಬಣ್ನಬಣ್ಣದ ಕೆಮಿಕಲ್ ತೊಳೆಯಲು ಕಕ್ಕಸ್ಸು

ಆಗಾಗಿಷ್ಟು ಕಂತಿನಲಿ ಕೊಡಿ ಸಾಕು
ಇನ್ನೂ ಉಪಯೊಗಿಸದ ಡೆಬಿಟ್ ಕಾರ್ಡ್
ಹುಡುಕಿ ತೆಗೆಯುತ್ತೇನೆ
ಬೀದಿಗೆ ಬಂದರೆ ಮುಖವಾಡಗಳ ಮಣರಾಶಿ ಮದ್ಯೆ
ಯಾರೊ ಬಿಕರಿಗಿಟ್ಟಿದ್ದಾರೆ ನನ್ನನ್ನೂ
ನನ್ನೊಂದು ಮಾತೂ ಕೇಳದೆಯೆ!

ಮಾತು ಕೇಳದ ಕವಿತೆ ಮಾರುಕಟ್ಟೆಯಲೇ ಹುಟ್ಟಿತು..

ಕೊಳ್ಲುವವರಿಲ್ಲವೆಂದರೂ ಕೇಳುತಿಲ್ಲ.

ಕು.ಸ.ಮಧುಸೂದನರಂಗೇನಹಳ್ಳಿ
ರಂಗೇನಹಳ್ಳಿ,ತರೀಕೆರೆ-ತಾ., ಚಿಕ್ಕಮಗಳೂರು-ಜಿಲ್ಲೆ.
ದೂ:9483261944,9483568343