ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾನೂ ಸಾಯುತ್ತೇನೆ!

ಮನು ಗುರುಸ್ವಾಮಿ
ಇತ್ತೀಚಿನ ಬರಹಗಳು: ಮನು ಗುರುಸ್ವಾಮಿ (ಎಲ್ಲವನ್ನು ಓದಿ)

ನಾನೂ ಸಾಯುತ್ತೇನೆ
ಒಂದು ದಿನ;
ನನಗೆ ತಿಳಿಯುವುದಿಲ್ಲ!

ಅಲಾಪ, ಆಕ್ರಂದನ‌, ಅಳು
ಕೇಳಿಸುವುದಿಲ್ಲ ನನಗೆ;
ನೀನು-ನಾನು, ಅವರು-ಇವರು
ಕಾಣಿಸುವುದಿಲ್ಲ !

ಹತ್ತು ಜನ ಹೊರಬಹುದು
ಚಟ್ಟವ; ಹೆಗಲು ಬದಲಿಸಿ
ನಾನು ಮೆಚ್ಚುವುದಿಲ್ಲ !

ದೂರಬಹುದೇನೋ ಕೆಲವರು
ನಿರಾಶಾಭಾವದಿಂದ; ತಿರುಗಿ
ನಾನು ತೆಗಳುವುದಿಲ್ಲ!

ಬೆಂಕಿ ಹಚ್ಚಬಹುದು; ಚಿತೆಯ
ಮೇಲಿರಿಸಿ – ಸುಟ್ಟ ನೆನಪು
ನನಗಿರುವುದಿಲ್ಲ!

ಮಣ್ಣಲ್ಲಿ ಮಣ್ಣಾಗಿಸಬಹುದು;
ಉಸಿರುಗಟ್ಟಿದ ಅನುಭವ
ನನಗಾಗುವುದಿಲ್ಲ !

ಪ್ರೀತಿ ಹಣತೆ‌ಯ ಬೆಳಗಬಹುದು
ಸತ್ತ ದಿನ; ‌ಗೋರಿ ಕಟ್ಟಿ,
ಶಾಸನವೊಂದ‌ ಬರೆಸಲೂಬಹುದು;
ನನಗೆ ಅರಿವಾಗುವುದಿಲ್ಲ !

ಕವಿಯೆಂದೋ, ಗುರುವೆಂದೋ
ಮಗ, ಜಗ, ಸ್ನೇಹಿತನೆಂದೋ
ಕಣ್ಣೀರ ಕರೆದು, ಮತ್ತೆಂದೋ
ನೆನಪು‌ ಮಾಡಿಕೊಳ್ಳಬಹುದು
ನೀವು; ನಾನಿರುವುದಿಲ್ಲ !

ನಾನೂ ಸಾಯುತ್ತೇನೆ
ಕೊನೆಗೊಂದು ದಿನ;
ಯಾರಿಗೂ ತಿಳಿಯುವುದಿಲ್ಲ!