ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನೀಲಿ ಶಾಯಿಯ ಮಧ್ಯ ಕಾಗದದಂಥ…

ಶ್ರೀ ತಲಗೇರಿ
ಇತ್ತೀಚಿನ ಬರಹಗಳು: ಶ್ರೀ ತಲಗೇರಿ (ಎಲ್ಲವನ್ನು ಓದಿ)

ಆ ಕಿಟಕಿಯಾಚೆ
ಒಂದು ಬಿಳಿ ಮೋಡ
ನೀಲಿ ಶಾಯಿಯ ಚೆಲ್ಲಿರಲು
ಮಧ್ಯ ಕಾಗದದ ಚೂರಂತೆ..
ಎಟುಕುವುದಿಲ್ಲ ಬೆರಳುಗಳಿಗೆ
ಮುಖಕ್ಕೆ ಮುದ್ದಿಸಿಕೊಳ್ಳುತ್ತದೆ
ದಿಟ್ಟಿ, ಸರಳುಗಳ ದಾಟಿ

ಯಾವತ್ತೂ ಹಾಗೆಯೇ
ಮುಚ್ಚಿದ ಬಾಗಿಲು ತೆಗೆದಾಗಲೆಲ್ಲಾ
ಅಗಾಧ ಆಕಾಶ
ನಾನು ನೆಲದಿಂದ ಇಷ್ಟೇ ಇಷ್ಟು ಹಾರಿ
ಹೂ ಕೊಯ್ದಂತೆ ನಟಿಸುತ್ತೇನೆ
ರಾಶಿ ಚುಕ್ಕಿ ಕಣ್ಣು ಮಿಟುಕಿಸುತ್ತವೆ
ಈಗ ನನ್ನ ಕಣ್ಣು ಆಕಾಶದ ಮೈ ತುಂಬ..

ಈ ಕೋಣೆ ಪೂರಾ ಬರೀ ಕತ್ತಲೆ
ಅದ್ಯಾವಾಗ ನಾಲ್ಕಕ್ಕೂ ಹೆಚ್ಚು
ಗೋಡೆ ಕಟ್ಟಿಕೊಂಡೆನೋ
ನಕ್ಷತ್ರದ ಚಿತ್ರದ ಚಾದರ
ಅರ್ಧ ಚಂದ್ರನ ಆಕಾರದ ಬಲ್ಬು
ಗೋಡೆ ತುಂಬಾ ನೀಲಿ ಬಣ್ಣ
ಆಗಾಗ ಮಾತ್ರ ಶಾಯಿಯ ಮಧ್ಯ
ಕಾಗದದ ಚೂರಂಥ
ಮೋಡದ ಕನಸು ನಿದ್ರೆಯಲ್ಲಿದ್ದರೂ
ನಿದ್ರೆಯಿಂದ ಎದ್ದಿದ್ದರೂ