- ಪಂಜರದೊಳಗಿನ ಹಕ್ಕಿ ಮತ್ತು ಇತರ ಕವಿತೆಗಳು - ಸೆಪ್ಟೆಂಬರ್ 10, 2021
ಪಂಜರದೊಳಗಿನ ಹಕ್ಕಿ
ಇರಬೇಕಿತ್ತು ಹಕ್ಕಿಯ ಹಾಗೆ
ಪಂಜರದಾಚೆ
ಮಾತು ಬೇಕಾದಾಗ
ಚುಂಚನಗಲಿಸಿ ಧ್ವನಿಯೇರಿಸಿ ಸದ್ದು
ಬರಿಯ ಮುಖವಾಡ ಕಂಡಾಗ
ಕಣ್ಣು ಮುಚ್ಚಿ ನಿದ್ದೆ
ಕಟ್ಟಲಿಕ್ಕಿಲ್ಲ ಸಲಿಕೆ ಗುದ್ದಲಿ
ಹಿಡಿದು ಅಣೆಕಟ್ಟು
ರಸ್ತೆ ರಚಿಸುವ ಕೆಲಸದಲಿ
ಸುರಿಸಬೇಕಿಲ್ಲ ಬೆವರು
ಸಂತೋಷ ದುಃಖಗಳಿಗೆ
ಮಿಡಿಯುವ ಮನಕೆ ಯಾವ ಪಾಲು?
ರೆಕ್ಕೆ ಬಲಿಯದೆ
ಬೇಡ ಪರಿಧಿಯಿಲ್ಲದ ಆಗಸ
ಎಲ್ಲ ನೆನಪುಗಳಿಗೆ
ಗೋರಿಕಟ್ಟಿ ವತ೯ಮಾನವನ್ನಪ್ಟೇ
ತೆರೆದು
ನೋವಿನಲಿ ಹಿಂದೆ ಎಂದೂ ಇರದ
ಕಲ್ಪನೆಯ ಕಾವಿನಲಿ
ತನ್ನದೇ ಸಾಮ್ರಾಜ್ಯದೊಳಗೆ ಸುತ್ತಿ
ಪಂಜರದೊಳಗೆ
ಅಲೆಅಲೆಯಾಗಿ ಬಂದೆ
ಬದುಕೆಂದರೇನೆನ್ನುವ ಪ್ರಶ್ನೆ
ಮೆದುಳ ಕುಟುಕುವುದಕ್ಕೆ
ಮೌನ ಕುಡಿದು
ಬೇಕೆಂದಾಗ ಪಂಜರದ ಬಾಗಿಲು ತೆರೆದು
ಹಾರಲು ಸಿದ್ಧವಾಗುವ ಹಕ್ಕಿಯ
ಹಾಗಿರಬೇಕು
ರೆಕ್ಕೆ ಬಲಿತು
ಶ್ರಮಿಕ
ಮುಂಬಯಿ
ನನ್ ತಾಯಿ….
ನೀ ಗೆಲ್ಲಬೇಕೆಂದು
ನಾ ನಿಂತೆ ಒಳಗೆ.
ದೂರ ದೂರದವರೆಗೆ
ಯಾರು ಇಲ್ಲ ಹೊರಗೆ
ಗಲ್ಲಿ ಗಲ್ಲಿಗಳಲ್ಲಿ ಮೌನ ಮಲಗಿದೆ
ಮಣ್ಣು ಒಣಗಿದೆ
ನನ್ನೆದೆ ಗೂಡು ಒದ್ದೆಯಾಗ್ತಿದೆ
ನಿನ್ನ ಬಿಟ್ಟು ಹೋಗೋಕಾಗಲ್ಲ
ಹೋದ್ರೆ ಹೋದಲ್ಲಿ
ಬದಕೋಕಾಗಲ್ಲ
ನನ್ನ ದಿನ, ನನ್ನ ರಾತ್ರಿ
ನನ್ನ ಸೋಲು, ನನ್ನ ಗೆಲುವು
ಎಲ್ಲವೂ ನೀನೇ
ನೀ ಯಾವತ್ತೂ ಹೀಗೆ
ಮನೆಬಾಗಿಲು ಮುಚ್ಕೊಂಡು
ಮೂಕಿಯಾಗಿದ್ದಿಲ್ಲ.
ಅಂಗಾಂಗ ಸುಟ್ಟುಕೊಂಡಾಗ್ಲೂ
ಮಳೆನೀರು ಮುಳುಗಿಸಿದಾಗ್ಲೂ
ಭಯ ಗೆದ್ದಿಲ್ಲ.
ಇದೀಗ ಏನಾಯ್ತೋ ತಾಯಿ
ಕಾಣದ ವೈರಿಗೆ
ಎಷ್ಟೊಂದು ಸೊರಗಿದೆ.
ಹಳಿತಪ್ಪಿದೆ ನೋಡು ಬದುಕಬಂಡಿ
ಸ್ವಪ್ನನಗರಿಯಲ್ಲೀಗ
ಬದುಕು ಘಮಘಮಿಸುವುದ
ಮರೆತಿದೆ
ಬರಿಗಾಲಲಿ ಬರಿಕಿಸೆಯಲಿ
ಬರಿಹೊಟ್ಟೆಗೆ ಕೈಯನಿಟ್ಟು
ನೆತ್ತಿ ಮೇಲೆರಡು ಪ್ಯಾಂಟು ಶಟು೯
ರಾಶಿ ಬಿಸಿಲ ಸೀಳಿ
ಕಾಲನ್ನೆತ್ತಿ ಹಾಕುತ
ಸಾಗ್ತೇನೆ ನಾನು
ಹೊಸ ಕನಸುಗಳ ನೇಯಲು
ಲೆಕ್ಕಾಚಾರ
ಕಾಲ, ಕೆಲಸ, ಪ್ರೀತಿಯ ಲೆಕ್ಕಾಚಾರ
ದಾಖಲಿಸುವುದು ನನ್ನಿಂದಾಗದು
ಒಂದು ಗೆರೆಯ ಕೆಳಗೆ
ಇನ್ನೊಂದು ಗೆರೆಯ ಮೇಲೆ
ಕೂಡಿಸಿ,ಕಳೆದು
ಕಳೆದದ್ದನ್ನು ಕೂಡಿಸುವುದು
ಕೂಡಿಸಿದ್ದನ್ನುಮತ್ತೆ ಕಳೆಯುವುದು
ಈ ಗಣಿತದ ಕುಣಿತ
ಹಾಜರಾಗಿಲ್ಲ ನನ್ನ ದಿನಚರಿಯಲ್ಲಿ
ಉಳಿಸಿದ್ದನ್ನು, ವ್ಯಯಿಸಿದ್ದನ್ನು
ಕಳೆದುಕೊಂಡುದ್ದನ್ನು
ಗಳಿಸಿದ್ದರಲ್ಲಿ ಕಳೆದು
ಒಂದೊಂದಾಗಿ ಬೆಲೆಕಟ್ಟಿ ನಿಲ್ಲಿಸಲಾಗುವುದೇ
ಇಲ್ಲ
ಮನೆಯೊಳಗೆ ಹೊರಗೆ
ಹಾಗೆ ಗಣಿತದ ಚೌಕಟ್ಟಿಗೆ
ನಿಲುಕಲೇ ಇಲ್ಲ ನನ್ನ ಪಾಡು
ಅಗತ್ಯಗಳಲ್ಲದು ಒಂದಾಗಲೇ ಇಲ್ಲ
ಅದರೂ
ನಾನು ನನ್ನೊಳಗೆ ಕೇಳುವ ಪ್ರಶ್ನೆಗಳ ಲೆಕ್ಕ
ಉತ್ತರ ಸಿಗದೆ ಬೇಸತ್ತ ಸವಾಲುಗಳ ಲೆಕ್ಕ
ಹಗಲಿಡೀ ನನ್ನೊಡನಿದ್ದು ಕತ್ತಲಲ್ಲೆನ್ನ
ಬಿಟ್ಟು ಸರಿವ ನನ್ನದೇ ನೆರಳು
ತೊಡಿಸಿ ಹೋಗುವ ವೇದನೆಗಳ
ಮೌನದ ಲೆಕ್ಕ
ಬಿದ್ದಿವೆ ಲೆಕ್ಕಕ್ಕಿಲ್ಲದ ನನ್ನ ಪಕ್ಕ
ನನ್ನದು ನೆರಳಿಲ್ಲದ ದಾರಿ
ಲೆಕ್ಕಚಾರ ಮುಕ್ತ ಹೆಜ್ಜೆ.
ಜೋಕಾಲಿ ಮತ್ತು ರದ್ದಿ
ಬಹಳ ಹಿಂದೆ
ಕಂಡಿದ್ದ ಕನಸು
ನನ್ನ ಹೊಸ ಗ್ರಹಪ್ರವೇಶದಂದು
ಆಗಸ ಕಾಣುವ ಕೋಣೆಯಲಿ
ಜೋಕಾಲಿ ಬೇಕು
ಅದರಲಿ ಕುಳಿತು ನಾನು
ಕವಿತೆ ಗೀಚುತ್ತಿರಬೇಕು
ಹೊಸಗಾಳಿಗೆ ಕವಿತೆ ಮೈಯೊಡ್ಡುತ್ತಿರಬೇಕು
ಜೋಕಾಲಿ ಬಂದಿದೆ
ಮಗನಿಗದು ಮೀಸಲಾಯ್ತು ಆಟಕೆ
ಆಪೀಸು, ಮನೆಕೆಲಸ ಬಿಡುವಿಲ್ಲ
ಜೋಕಾಲಿಯತ್ತ ಸುಳಿಯಲು.
ಮನೆಬಾಗಿಲಿಗೆ ಬೀಳುವ
ಬೆಳಗ್ಗಿನ ಪತ್ರಿಕೆಯ ಮೇಲೆ
ರಾತ್ರಿ ಕಣ್ಣಾಡಿಸುವ ವೇಳೆ
ಕವಿತೆ, ಕಥೆ ಬದಿಯಲ್ಲಿ ಹುಟ್ಟಿ
ಅಲ್ಲೇ ನಿದ್ದೆ ಹೋಗುವುದು ರೂಢಿಯಾಗಿದೆ.
ದಿನಪತ್ರಿಕೆಗಳು ತಿಂಗಳುಗಟ್ಟಲೆ ಒಟ್ಟಾಗಿ
ರದ್ದಿ ನಾನು ಕಾಲಿಟ್ಟ ಕೋಣೆಯಲಿ
ಎದ್ದೆದ್ದು ನನ್ನ ಅಣಕಿಸುತ್ತಾ
ಬರಬರುತ್ತಾ ನನಗಿಂತಲೂ ಎತ್ತರಕೆ
ಎತ್ತಲಾರದಷ್ಟು
ರದ್ದಿ ಜೋಕಾಲಿ ಏರಿ ಅಧಿಕಾರ ಸ್ಥಾಪಿಸಿದೆ
ನನ್ನ ಕವಿತೆ ನೆಲದ ಮೆಲೆ
ಪರಿದಾಡಿಕೊಂಡೇ ಆಗಸದ
ಚಂದಿರನ ಸೊಬಗ ಉಣ್ಣುತ್ತಿದೆ
ಜೋಕಾಲಿ ಮುಖ ಊದಿಸಿದೆ
ತಿಳಿದಿರಬೇಕು ಅದಕ್ಕೆ
ಕನಸು ಬಣ್ಣ ಬದಲಿಸಿದ್ದು.
ತಿಳಿಯಲೇ ಇಲ್ಲ
ಜಗವ ಪ್ರವೇಶಿಸಿದೆ
ಬದುಕು ಸಾಗಿದೆ
ಹೇಗೆ ಭಾರವಾದೆ
ತಿಳಿಯಲೇ ಇಲ್ಲ
ಜಗದಂಗಣದಿ
ಆಡುತ್ತಲೇ ಇದ್ದೆ
ಹೇಗೆ ನೋವುಂಟು ಮಾಡಿದೆ
ತಿಳಿಯಲೇ ಇಲ್ಲ
ಗಿಡುಗನ ಹಾರಾಟ
ನೋಡುತ್ತಲೇ ಇದ್ದೆ
ಕೋಳಿಮರಿಯ ಹಾರಿಸಿದ್ದು
ತಿಳಿಯಲೇ ಇಲ್ಲ
ಮಣಿಗಳ ಪೋಣಿಸಿ
ಸರವ ಮಾಡಿದೆ
ಮಣಿಗಳು ಜಾರಿ ನೂಲು ಕೈಯಲಿ
ತಿಳಿಯಲೇ ಇಲ್ಲ
ಆಗಸ ನೋಡಿ
ನಕ್ಷತ್ರಗಳೊಂದಿಗೆ ಸುಖಿಸುತ್ತಿದ್ದೆ
ಚಂದ್ರ ಮರೆಯಾದುದು
ತಿಳಿಯಲೇ ಇಲ್ಲ
ಕಾಡು ಮೈಗಗಳ ಹಿಂದೆ
ಓಡುತ್ತಲೇ ಇದ್ದೆ
ಹೇಗೆ ಬದುಕುಳಿದೆ
ತಿಳಿಯಲೇ ಇಲ್ಲ
ಮಾಯೆಯ ಗಲ್ಲಿಗಳಲಿ
ಶಾಂತಿಯ ಹುಡುಕುತ್ತಿದ್ದೆ
ಹೇಗೆ ಕಳೆದು ಹೋದೆ
ತಿಳಿಯಲೇ ಇಲ್ಲ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ