ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : ಜೇಸನ್ ಲಿಯುಂಗ್

ಪಯಣ

ಶ್ರೀರಕ್ಷಾ ನಾಯ್ಕ್
ಇತ್ತೀಚಿನ ಬರಹಗಳು: ಶ್ರೀರಕ್ಷಾ ನಾಯ್ಕ್ (ಎಲ್ಲವನ್ನು ಓದಿ)

ಗೊತ್ತಿಲ್ಲದೇ ನಡೆದಿಹ ಈ ಪ್ರತಿ ನಡಿಗೆಯು 
ತಲುಪುವುದೆಲ್ಲಿ ನಾ ಕಾಣೆ

ಒಲವಿನ ಒಡಲಲಿ ಬಂಧಿಯಾಗಿರುವೆ
ಚಳಿಯಲ್ಲೂ ಬೆವರುತ್ತ ಕರಗುತಿರುವೆ…
ಅಂಗೈ ಮೇಲೆ ಆಸರೆ ನೀಡಿದೆ
ಒಂಟಿತನದ ನೋವ ಮರೆಸಿದೆ

ಇನಿಯ ನೀ ಇರಲಾರದೆ
ಅರಿಯೆ ನಾ ಹೇಗಿರುವೆ
ಮನಸ್ಸು ಮತ್ತೆ ವಾಲಿದೆ
ಎನ್ನ ಮಾತು ಕೇಳದೆ…

ಸಮಯವದು ಸಾಗುತಿದೆ ಬಹಳ
ಮೂಡಿರುವ ಮೋಹವದು ಬಹುವಿರಳ..
ಅದರುತಿದೆ ಅಂತಃಕರಣ ಚಿತ್ತವ ತಿಳಿಯಲು
ನಾಚುತಿವೆ ಕಂಗಳು ಮುನ್ನುಡಿಯ ಹೇಳಲು

ನಿನ್ನ ಸ್ಪರ್ಶದ ಸಂಚಲನ
ನಲುಗಿಸಿದೆ ಇನ್ನೂ ನನ್ನನು
ನಿನ್ನ ನುಡಿಗಳ ಸಂಕಲನ
ಪಿಸುಗುಡುತ ರಚಿಸಿದೆ ಕವನ

ನೂತನ ಸೆಳೆತವಿದು ಎನಗೆ
ಏನು ಹೇಳಲಿ ಕೊನೆಗೆ
ನೆಪವಾದೆ ನೀ ನನ್ನ ನಲಿವಿಗೆ
ನೆನೆವಾಗ ಆ ನಿನ್ನ ಕಿರುನಗೆ

ಸಹಚರವಿದು ಸದ್ದಿಲ್ಲದೆ ಸಾಗಲಿ
ಗುನುಗುತ ಹೆಜ್ಜೆ ಹಾಕುತಲಿ…
ಗುರುತುಗಳ ಈ ಪಯಣ
ತಲುಪುವುದೆಲ್ಲಿ ನಾ ಕಾಣೆ