- ಪ್ರಕೃತಿಯ ಸಂದೇಶ - ಜನವರಿ 13, 2024
‘ನೆಲ’ ತನ್ನ ಶಕ್ತಿಯ ತೋರಲು,
ಮಣ್ಣಿನಾಳದಲ್ಲಿ ಹುದುಗಿರುವ ಬೀಜವನ್ನು ಮರವನ್ನಾಗಿ ಮಾರ್ಪಡಿಸಿತು.
ಮರವು ತನ್ನ ಶಕ್ತಿಯ ತೋರಲು,
ಮಣ್ಣಲ್ಲಿ ತನ್ನಯ ಬೇರುಗಳನ್ನೂರಿ ಬೆಳೆದು ನಿಂತಿತು.
‘ಜಲ’ ತನ್ನ ಶಕ್ತಿಯ ತೋರಲು,
ಕಲ್ಲು-ಮುಳ್ಳು-ಮಳೆಯೆಂದು ನೋಡದೇ
ಉರುಳಿ ಓಡಿ, ಕಡಲಾಗಿ ರೂಪುಗೊಂಡಿತು.
ಕಡಲು ತನ್ನ ಶಕ್ತಿಯ ತೋರಲು
ಅಲೆ-ಅಲೆಗಳಂತಹ ತೆರೆಗಳನೆಳೆದು
ಘೋರ ತೂಫಾನನ್ನೇ ನುಂಗಿತು.
‘ಗಾಳಿ’ ತನ್ನ ಶಕ್ತಿಯ ತೋರಲು,
ವರ್ಷಕ್ಕೆ ಒಂದು ಬಾರಿ, ಸುಂಟರಗಾಳಿಯಂತೆ ಮಾರ್ಪಟ್ಟಿತು.
ಸುಂಟರಗಾಳಿ ತನ್ನ ಶಕ್ತಿಯ ತೋರಲು,
ಸುತ್ತ-ಮುತ್ತ ಇರುವುದೆಲ್ಲವ ಸೂರೆಯಾಡಿ ಭಯವನ್ನೆಬ್ಬಿಸಿತು.
‘ಬೆಂಕಿ’ ತನ್ನ ಶಕ್ತಿಯ ತೋರಲು,
ಭಯಾನಕ ಕಾಡ್ಗಿಚ್ಚಾಗಿ ತಿರುಗಿತು.
ಕಾಡ್ಗಿಚ್ಚು ತನ್ನ ಶಕ್ತಿಯ ತೋರಲು,
ಕಾಡನ್ನು ನಾಶ ಮಾಡಿ, ಹೊಗೆ ವಲಯವನ್ನು ಸೃಷ್ಟಿಸಿತು.
‘ಆಕಾಶ’ ತನ್ನ ಶಕ್ತಿಯ ತೋರಲು,
ಮೋಡಗಳನ್ನು ಒಟ್ಟುಗೂಡಿಸಿ ಮಳೆಯನ್ನು ಸುರಿಸಿತು.
ಮಳೆ ತನ್ನ ಶಕ್ತಿಯ ತೋರಲು,
ಕೊಳ-ನದಿ-ಕುಂಟೆಗಳಿಂದ ಹರಿದು ಹಾರಿ ಸಾಗರವ ಸೇರಿತು.
ಪುಟ್ಟ ಮಗು ಕೂಡ ತನ್ನ ಶಕ್ತಿಯ ತೋರಲು
ಎರಡಡಿ ಮಂಡಿಯೂರಿ ಹೇಗೇಗೋ ಪ್ರಯತ್ನಿಸಿ
ಕೊನೆಗೂ ಎದ್ದು ನಿಂತಿತು.
ಆದರೆ, ಈ ಮನುಷ್ಯ ಮಾತ್ರ
ಆರಡಿ ಎದ್ದು ನಿಂತರೂ ನಿಸರ್ಗದ ಆಕ್ರೋಶಗಳನ್ನು
ಎದುರಿಸಲು ಸಾದ್ಯವಾಗುತ್ತಿಲ್ಲ
ಇದಕ್ಕೆ ಕಾರಣ,ಒಂದು ವೇಳೆ
ಉಪ್ಪು ತಿಂದವನು ನೀರು ಕುಡಿಯಲೇ ಬೇಕೆಂಬುದೋ.. ಏನೋ..!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ