ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬದುಕಿನ ಶಾಲೆ ಮತ್ತು ಮಾಂಟೆಸರಿ

ಲಹರಿ ತಂತ್ರಿ
ಇತ್ತೀಚಿನ ಬರಹಗಳು: ಲಹರಿ ತಂತ್ರಿ (ಎಲ್ಲವನ್ನು ಓದಿ)

ಈ ನಾಲ್ಕು ವರ್ಷಗಳಲ್ಲಿ ಬದುಕಿನ ಬಹಳಷ್ಟು ಭಾಗವನ್ನು ಮಗಳೇ ಆವರಿಸಿಕೊಂಡಿದ್ದಾಳೆ. ಮನೆಯಿಂದ ಮಕ್ಕಳು ಹೊರಜಗತ್ತಿಗೆ ತೆರೆದುಕೊಳ್ಳುವ ಕಿಟಕಿ ಬಣ್ಣಬಣ್ಣದ್ದಾಗಿರಬೇಕು ಎಂಬುದು ಹೇಗೆ ಎಲ್ಲಾ ತಂದೆ ತಾಯಿಯರ ಆಶಯವೋ ಹಾಗೆಯೇ ನಮ್ಮದು ಸಹ. ಪ್ರಪಂಚದೊಂದಿಗೆ ಹೊಂದಿಕೊಳ್ಳುವ, ಸಮಾಜದ ಭಾಗವಾಗುವ ಪ್ರಕ್ರಿಯೆ ನೈಸರ್ಗಿಕವಾಗಿ , ಸಹಜವಾಗಿ ಮಕ್ಕಳಲ್ಲಿ ಮೂಡಬೇಕು ಎಂದು ಸದಾಕಾಲ ನಂಬಿದವಳು ನಾನು.

ಕಳೆದ ವರ್ಷ ಮಗಳ ತಂಟೆ ಜೋರಾಗಿತ್ತು. ಅವಳ ವಯಸ್ಸಿನ ಮಕ್ಕಳೊಂದಿಗೆ ಕುಣಿವ ಖುಷಿ, ಆಸಕ್ತಿ ನೋಡಿ ಶಾಲೆಗೆ ಸೇರಿಸುವ ಯೋಚನೆ ಮೂಡಿತ್ತು. ಆದರೆ ಶಾಲೆ ಅಂದರೆ ಹೇಗಿರಬೇಕು? ಜೀವನದಲ್ಲಿ ಬಹುದೂರ ಸಾಗಿದ ಮೇಲೂ ನೆನೆದರೆ ಖುಷಿ ಕೊಡಬೇಕೇ ಹೊರತು ಕಿರಿಕಿರಿ ಆಗಬಾರದು ಎಂಬುದು ಮೊದಲು ಮೂಡಿದ ಯೋಚನೆ. ಹಾಗೆಯೇ ಬದುಕಿನ ಅತೀ ಅವಶ್ಯಕ ಕೆಲಸಗಳಾದ ಅಡಿಗೆ, ಸ್ವಚ್ಛತೆ, ಕೃಷಿ ಇಂಥವುಗಳನ್ನು ಕಲಿಯುವ ವ್ಯವಸ್ಥೆ ಇರಬೇಕು. ಸಹಾನುಭೂತಿ, ಸೌಹಾರ್ದತೆ, ಪ್ರೀತಿ ಎಲ್ಲವನ್ನೂ ಕ್ರಿಯೆಯ ಮೂಲಕ ವ್ಯಕ್ತಪಡಿಸುವಷ್ಟು ಆತ್ಮವಿಶ್ವಾಸ ಮಕ್ಕಳಲ್ಲಿ ಶಾಲೆ ತುಂಬಬೇಕು. ಇದೆಲ್ಲವನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ಬೆಂಗಳೂರಿನಲ್ಲಿ ಶಾಲೆ ಹುಡುಕುವುದು ಸುಲಭದ ಕೆಲಸವೇ ಅಲ್ಲ. ಆಗ ನೆನಪಾಗಿದ್ದು ಮಾಂಟೆಸರಿ ಶಿಕ್ಷಣ ವಿಧಾನ.

ಮೊದಲು ಮಾಂಟೆಸರಿ ಬಗ್ಗೆ ಕೇಳಿದ್ದು ಎಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಗಲ್ಲಿ ಗಲ್ಲಿ ಸುತ್ತುವಾಗ. ಆಕಸ್ಮಿಕ ಎಂಬಂತೆ ಶಾಲೆಯೊಂದರಲ್ಲಿ ‘ ನೃತ್ಯ ನಾಟಕ’ವನ್ನು ಹೇಳಿಕೊಡಲು ಜೊತೆಯಲ್ಲಿ ಬರುತ್ತೀಯಾ? ಎಂದು ನಮ್ಮ ನಾಟಕ ತಂಡದ ನಿರ್ದೇಶಕರು ಕೇಳಿದ್ದರು. ಆ ಶಾಲೆಯಲ್ಲಿ ಮಕ್ಕಳಿಗೆ ಮಾಂಟೆಸರಿ ಶಿಕ್ಷಣ ವಿಧಾನದಲ್ಲಿ ಹೇಳಿಕೊಡುತ್ತಿದ್ದರು. ಮನೆಯನ್ನು ಶಾಲೆಯಾಗಿ ರೂಪಾಂತರಗೊಳಿಸಿ ಬೇರೆ ಬೇರೆ ಆಟಿಕೆಗಳನ್ನು ಕಪಾಟಿನಲ್ಲಿ ಜೋಡಿಸಿಟ್ಟಿದ್ದರು. ಯಾವತ್ತಿಗೂ ಆ ಬಗೆಯ ಆಟಗಳನ್ನು, ಮಕ್ಕಳು ಹಾಗೇ ಆರಾಮಾಗಿ ತಿರುಗುವುದನ್ನು ನೋಡಿಯೇ ಇರದ ನನಗೆ ಅದೊಂಥರಾ ಆಶ್ಚರ್ಯವೆನಿಸಿತ್ತು. ಕೇಳಿದಾಗ ಇದು ಮಾಂಟೆಸರಿ ಶಾಲೆ ಎಂದಿದ್ದರು. ಆದರೆ, ಈಗ ಯೋಚಿಸುವಾಗ ಅಲ್ಲಿ ಮಾಂಟೆಸರಿ ಪರಿಸರವಿತ್ತೇ ಹೊರತು ಅಲ್ಲಿನ ಶಿಕ್ಷಕಿಯರ ಮನಸ್ಸಿನಲ್ಲಿ ಮಾಂಟೆಸರಿ ಆಳವಾಗಿ ಬೇರೂರಿರಲಿಲ್ಲ. ಅದೇನಾದರೂ ಇರಲಿ, ಈ ಶಾಲೆ ನನ್ನಲ್ಲಿ ಮಾಂಟೆಸರಿಯ ಬಗ್ಗೆ ಓದಲು, ತಿಳಿದುಕೊಳ್ಳಲು ಪ್ರಯತ್ನಿಸಿತು ಎಂದರೆ ತಪ್ಪಾಗಲಾರದು!

ಮರಿಯಾ ಮಾಂಟೆಸರಿ
ಚಿತ್ರ ಕೃಪೆ : https://montessori150.org/maria-montessori/montessori-photos

ಮರಿಯಾ ಮಾಂಟೆಸರಿ ಎಂಬ ಇಟಲಿಯ ವೈದ್ಯೆ ಈ ಶಿಕ್ಷಣ ಪದ್ಧತಿಯನ್ನು ರೂಪಿಸಿದವರು. ಮಕ್ಕಳ ಕ್ರಿಯಾಶೀಲತೆಯನ್ನು ಶಾಲೆಗಳ ಮೂಲಕ ಬೆಳೆಸಬೇಕೇ ಹೊರತು ಕುಂಠಿತಗೊಳಿಸಬಾರದು ಎಂಬುದು ಅವರ ನಿಲುವಾಗಿತ್ತು. ಮಾಂಟೆಸರಿ ಶಿಕ್ಷಣ ವಿಧಾನ ಎನ್ನುವುದು ಸ್ವಯಂ-ನಿರ್ದೇಶಿತ ಚಟುವಟಿಕೆ, ಕಲಿಕೆ ಮತ್ತು ಸಹಯೋಗದ ಆಟದ ಮೇಲೆ ಆಧಾರಿತವಾದ ಶಿಕ್ಷಣದ ವಿಧಾನ. ಇಲ್ಲಿ ಮಕ್ಕಳಿಗೆ ಏನನ್ನಾದರೂ ಕಲಿಸುತ್ತಾರೆ ಎಂಬ ಪದ ಪ್ರಯೋಗಕ್ಕಿಂತ ಮಕ್ಕಳ ಆಸಕ್ತಿಗೆ ತಕ್ಕಂತೆ ಕಲಿಯುವ ಪ್ರಕ್ರಿಯೆಗೆ ಸುತ್ತಲಿನ ಪರಿಸರವನ್ನು ನಿರ್ಮಿಸಿ ನೆರವಾಗುತ್ತಾರೆ ಎನ್ನುವುದು ಹೆಚ್ಚು ಸೂಕ್ತ.

ಇವೆಲ್ಲವೂ ನಮ್ಮ ಯೋಚನೆಗೆ ತಕ್ಕಂತೆ ಇದ್ದುದರಿಂದ ಮಗಳನ್ನೂ ಮಾಂಟೆಸರಿಗೆ ಸೇರಿಸಬೇಕು ಎಂದು ನಿರ್ಧರಿಸಿ ಶಾಲೆಯನ್ನು ಹುಡುಕಲು ಪ್ರಾರಂಭಿಸಿದೆವು. ಒಂದೆರಡು ಶಾಲೆಗಳಲ್ಲಿ ಬೋರ್ಡು ಮಾತ್ರ ಮಾಂಟೆಸರಿ! ಮತ್ತೂ ಒಂದೆರಡು ಕಡೆ ಎಲ್ಲವೂ ಅರ್ಧಂಬರ್ಧ. ಕಡೆಗೆ ಮನೆಯ ಹತ್ತಿರದ ಒಂದು ಮಾಂಟೆಸರಿ ಶಾಲೆಯನ್ನು ಮಗಳು ಸೇರುತ್ತೇನೆಂದು ಒಪ್ಪಿಕೊಂಡಳು. ಅವಳಿಗೆ ಆ ಶಾಲೆಯ ಮೇಲೆ ಒಲವು ಮೂಡಲು ಕಾರಣ ಅಲ್ಲಿದ್ದ ನಾಮೀ-ಮಿಂಚು ಎಂಬ ಎರಡು ನಾಯಿಗಳು. ಹಾಗಂತ ಆ ಪರಿವರ್ತನೆ ಸುಲಭವಾಗಿತ್ತು ಎಂಬುದಲ್ಲ. ಬದಲಾಗಿ ಮನೆಯಲ್ಲಿ ಪೋಷಕರ ಹಾಗೂ ಶಾಲೆಯಲ್ಲಿ ಶಿಕ್ಷಕರ ವರ್ತನೆ ಅದಕ್ಕೆ ಪೂರಕವಾಗಿತ್ತು. ದಿನವೂ ಎದ್ದು ಹೋಗಲೇಬೇಕು ಎಂಬ ದೂಡುವಿಕೆ ಮನೆಯಲ್ಲಿಯೂ ಇರಲಿಲ್ಲ. ರಜೆ ಹಾಕಿಸಲು ಒಪ್ಪಿಗೆ ಪಡೆಯಬೇಕು ಎಂಬ ನಿಯಮ ಶಾಲೆಯವರೂ ಹೇರಿರಲಿಲ್ಲ. ಊರ ಹಬ್ಬಕ್ಕೆ, ಜಾತ್ರೆಗೆ, ಮದುವೆ/ಉಪನಯನಕ್ಕೆ ಎಲ್ಲದಕ್ಕೂ ಮಗಳ ಹಾಜರಿ ಇದ್ದೇ ಇತ್ತು.

ಈ ಊರಿಗೆ (ನ್ಯೂಝಿಲೆಂಡ್) ಬಂದಮೇಲೆ ಮೊದಲು ಹುಡುಕಿದ್ದು ಮಾಂಟೆಸರಿ ಶಾಲೆ! ಇಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವ ಮುಂಚೆ ತಂದೆ ಅಥವಾ ತಾಯಿ ಶಾಲೆಯ ತರಗತಿಗಳಲ್ಲಿ ಸುಮಾರು ೨ ಗಂಟೆ ಕೂತು ಎಲ್ಲವನ್ನೂ ಗಮನಿಸಬೇಕು ಎಂಬುದು ಅವರ ಅಡ್ಮಿಷನ್ ಪ್ರಕ್ರಿಯೆಯ ಭಾಗ. ತರಗತಿಗೆ ಹೋಗುವ ಹಿಂದಿನ ದಿನ ನಮ್ಮನ್ನು ಕೂರಿಸಿಕೊಂಡು ಮಗಳಿಗೆ ಯಾವುದರಲ್ಲಿ ಆಸಕ್ತಿ? ಅವಳ ಗುಣ ಸ್ವಭಾವಗಳೇನು, ಅಮ್ಮ ನೆನಪಾದಾಗ ಅಥವಾ ಮನೆಗೆ ಹೋಗಬೇಕು ಅನಿಸಿದಾಗ ನಾವು ಹೇಗೆ ಸಮಾಧಾನ ಪಡಿಸುವುದನ್ನು ಅವಳು ಇಷ್ಟಪಡುತ್ತಾಳೆ ಎಂಬುದೆಲ್ಲವನ್ನೂ ಬರೆದುಕೊಂಡು ಅದಕ್ಕೆ ತಕ್ಕ ಹಾಗೆ ಸಿದ್ಧತೆ ನಡೆಸಿದ್ದಲ್ಲದೇ, ಅವಳ ಮಾತೃಭಾಷೆಯಲ್ಲಿ ಕೆಲವು ಸಾಮಾನ್ಯ ಪದಗಳನ್ನೂ ಮಾರನೆಯ ದಿನದ ಒಳಗೆ ಕಲಿತು ‘ಶುಭೋದಯ’ ಎಂತಲೇ ಸ್ವಾಗತಿಸಿದಾಗ ನಂಗೂ ಮಗಳಿಗೂ ಅಚ್ಚರಿ. ಮಗಳು ದಿನವೂ ಕುಣಿಯುತ್ತಾ ಶಾಲೆಗೆ ಹೋಗುವುದನ್ನು ನೋಡುವುದೇ ಖುಷಿಯ ಸಂಗತಿ.
ಮಗಳಿಗೆ ಇಲ್ಲಿಯವರೆಗೂ ಒಂದು ದಿನವೂ ಹೋಮ್ ವರ್ಕ್ ಬರೆಸಿದ್ದಿಲ್ಲ, ಮನೆ ಪಾಠ ಹೇಳಿಕೊಟ್ಟಿದ್ದಿಲ್ಲ, ಹಾಡು/ ನೃತ್ಯ ಮತ್ತೊಂದರಲ್ಲಿ ಬಲವಂತವಾಗಿ ತುರುಕಿದ್ದಿಲ್ಲ. ಬದಲಾಗಿ ಅವಳು ಅಡಿಗೆ ಮನೆಯಲ್ಲಿ ಜೊತೆ ನಿಂತು ಸಣ್ಣ ಪುಟ್ಟ ಕೆಲಸಗಳನ್ನು ಮಾಡಲು ನೆರವಾಗುತ್ತಾಳೆ, ತಾನು ಆಡಿದ ಆಟಗಳಿಂದ ಅಸ್ತವ್ಯಸ್ತವಾದ ಮನೆಯನ್ನು ಮತ್ತೆ ಸರಿಜೋಡಿಸಲು ನಿಲ್ಲುತ್ತಾಳೆ, ಹೊರಹೊರಟಾಗ ತನಗೆ ಬೇಕಾದ ವಸ್ತುಗಳನ್ನು ಬ್ಯಾಗಿಗೆ ತುಂಬಿಕೊಂಡು ಕಾರು ಹತ್ತುತ್ತಾಳೆ. ಹಾಗೆಂದು ರಚ್ಚೆ ಹಿಡಿಯುವುದು, ಹಠ ಮಾಡುವುದು ಇಲ್ಲವೇ ಇಲ್ಲ ಎಂದಿಲ್ಲ. ಅನುಪಾತ ಕಮ್ಮಿಯಷ್ಟೇ.

ಪ್ರಕೃತಿ ಕರೆಗಳಿಗೂ ಶಿಕ್ಷಕರ ಅನುಮತಿಗೆ ಕಾಯ್ದು, ಅವರ ಆ ದಿನದ ಮನಃಸ್ಥಿತಿಗೆ ಅನುಗುಣವಾಗಿ ಪಾಠವನ್ನು ಕೇಳಿ, ಬೆಂಚಿನ ಮೇಲೆ ಇಡೀ ದಿನ ಒಂದೇ ಕಡೆ ಕುಳಿತು ಪಕ್ಕದ ಗೆಳೆಯ, ಗೆಳತಿಯರೊಂದಿಗೆ ಅಕಸ್ಮಾತ್ ಮಾತನಾಡಿದರೂ ಉಗ್ರ ಶಿಕ್ಷೆ ಅನುಭವಿಸುತ್ತಾ ಶಿಸ್ತಿನ ಸಿಪಾಯಿಗಳಂತೆ ಬೆಳೆದವರು ನಾವು. ಮಕ್ಕಳು ಆ ಆ ದಿನದ ಭಾವಕ್ಕೆ ತಕ್ಕ ಹಾಗೆ ಅವರಿಗಿಷ್ಟ ಬಂದ ವಿಷಯವನ್ನು ಆಯ್ಕೆ ಮಾಡಿಕೊಂಡು ಕಲಿಯುವುದನ್ನು ನೋಡುವಾಗಿನ ಖುಷಿ ಅನುಭವ ವೇದ್ಯ.

ಮಗಳ ಶಾಲೆಯಲ್ಲಿ ನಡೆದ ಇದೊಂದು ಘಟನೆ ಹೇಳಲೇಬೇಕು.
ಇಲ್ಲಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಲೆಂದೇ ಪ್ರತಿದಿನ ಶಿಕ್ಷಕ, ಶಿಕ್ಷಕಿಯರು ಗೇಟಿನಲ್ಲಿ ನಿಂತಿರುತ್ತಾರೆ. ಹೊಸ ಶಾಲೆ ಮತ್ತು ಭಾಷೆಯ ಬದಲಾವಣೆ ಇದ್ದಿದ್ದರಿಂದ ಒಂದೆರಡು ದಿನ ಮಗಳಿಗೆ ಕಿರಿಕಿರಿ. ನನಗೂ ಅದೇನೋ ಆತಂಕ! ಅಳುವ ಮಗುವನ್ನು ತರಗತಿಯ ಬಾಗಿಲಿನ ತನಕ ಬಿಟ್ಟು ಬರುವಾಗಿನ ತಲ್ಲಣ ವಿವರಿಸಲಾಗದ್ದು. ಗೇಟು ದಾಟುವಾಗ ನಿಂತಿದ್ದ ಶಿಕ್ಷಕಿಯೊಬ್ಬರು “Are you all okay?” ಎಂದರು.. ಮಗಳ ಬಗ್ಗೆ ಕೇಳುತ್ತಿರಬಹುದು ಎಂದು “Oh yeah.. She’s bit stressed” ಎಂದೆ. ನನ್ನನ್ನು ತಿದ್ದಿ, “Oh she’ll be playing happily in a minute or two. I was just worried about you. It must be difficult for you right? I understand. Take care”. (ಮಗಳು ಇನ್ನೊಂದೆರಡು ನಿಮಿಷದಲ್ಲಿ ಖುಷಿಯಾಗಿ ಆಡಲು ನಿಲ್ಲುತ್ತಾಳೆ. ನಿಮಗೆ ಮಗಳನ್ನು ಬಿಟ್ಟು ಹೋಗಲು ಕಷ್ಟ ಎನಿಸುತ್ತಿರಬಹುದು ಅಲ್ಲವಾ? ನಂಗರ್ಥವಾಗತ್ತೆ. ಜೋಪಾನ) ಎಂದರು. ಆ ಕ್ಷಣದವರೆಗೂ ಸುತ್ತಲಿನವರು ಶಾಲೆಗೆ ಹೋಗಲು ಮಗಳಿಗೆ ಕಷ್ಟವಾಗಬಹುದು ಎಂದು ಕನಿಕರ ತೋರಿಸಿದ್ದರೇ ಹೊರತು ಅಮ್ಮನಿಗೂ ಅದು ಸಂಕಟದ ಸಮಯ ಎಂದು ಅರ್ಥ ಮಾಡಿಕೊಂಡ ಉದಾಹರಣೆಗಳಿರಲಿಲ್ಲ. ಇದೇ ಶಿಕ್ಷಕಿ ಮತ್ತೆರಡು ತಿಂಗಳ ನಂತರ ಯಾವುದೋ ಹಾಡಿಗೆ ಹೆಜ್ಜೆ ಹಾಕುತ್ತಾ ಖುಷಿಯಲ್ಲಿ ಒಳ ನಡೆದ ನಮ್ಮಿಬ್ಬರನ್ನು ಕಂಡು “ಖುಷಿಯಾಗಿರುವ ಅಮ್ಮ ಯಾವತ್ತಿಗೂ ಮಕ್ಕಳ ಮನಸ್ಸಿನಲ್ಲಿ ಖುಷಿಯನ್ನೇ ಸೃಷ್ಟಿಸುತ್ತಾಳೆ” ಎಂದು ಉದ್ಗರಿಸಿದರು.

ಇದಿಷ್ಟೂ ನನ್ನ ಅನುಭವ ಹಾಗೂ ಜ್ಞಾನಕ್ಕೆ ದಕ್ಕಿದ್ದು. ಇದರ ಹೊರತಾಗಿ ಒಳಿತೂ ಕೆಡಕೂ ಇರಬಹುದಾದ ಎಲ್ಲ ಸಾಧ್ಯತೆಗಳೂ ಇವೆ. ಮಾಂಟೆಸರಿ ಶಾಲೆಗೆ ಸೇರಿಸುತ್ತೇನೆ ಎಂದಾಗ “ನಮ್ಮ ಮಕ್ಕಳೆಲ್ಲಾ ಮಾಮೂಲಿ ಶಾಲೆಗಳಲ್ಲೇ ಓದಿದ್ದು. ಈಗ ಬೆಳೆದು ದೊಡ್ಡವರಾಗಿಲ್ವ? ನೀವೂ ಹಾಗೇ ಓದಿದ್ದು. ಒಳ್ಳೆ ಕೆಲಸ ಸಿಕ್ಕಿಲ್ವಾ? ಸುಮ್ಮನೆ ಇಲ್ದೇ ಇರೋದೇನೋ ಮಾಡೋಕೆ ಹೋಗಿ ಮಕ್ಕಳ ಭವಿಷ್ಯ ಹಾಳು ಮಾಡಬೇಡ” ಅಂದವರೇ ಹೆಚ್ಚು. ಶೈಕ್ಷಣಿಕವಾಗಿ ಮುಂದುವರೆಯುವುದು ಎಂದರೆ ಬರೀ ವಿಷಯ ಜ್ಞಾನವಷ್ಟೇ ಅಲ್ಲದೆ ದೈಹಿಕ ಮಾನಸಿಕವಾಗಿಯೂ ಬಲಿಷ್ಠ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಎಂಬುದನ್ನು ಇಲ್ಲಿಯವರೆಗೂ ಬಹಳಷ್ಟು ಜನರಿಗೆ ಅರ್ಥ ಮಾಡಿಸಲು ಸಾಧ್ಯವಾಗದೇ ಈಗ ಅಂತಹ ಪ್ರಯತ್ನಗಳನ್ನೇ ಬಿಟ್ಟಿದ್ದೇನೆ. ಆದರೆ ಹೀಗೇನಾದರೂ ಅನುಭವಗಳನ್ನು ಬರೆದಾಗ ಅದರಿಂದ ಒಂದಿಬ್ಬರಾದರೂ ಪ್ರೇರಿತರಾಗಿ ಮಕ್ಕಳಿಗೆ ಅವರಿಷ್ಟದ ಆಟ ಪಾಠ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ಕೊಟ್ಟಲ್ಲಿ ನಂಗೊಂದು ಸಾರ್ಥಕ್ಯ ಭಾವ ಸಿದ್ಧಿಸುತ್ತದೆ. ಬೆಳೆಯುವ ಸಿರಿಗೆ ಅಂತಃಸತ್ವದ ಜೊತೆಯಲ್ಲಿ ಸುತ್ತಲಿನ ಪರಿಸರವೂ ಮುಖ್ಯವಾಗುವುದನ್ನು ನಾವು ಅರಿತುಕೊಳ್ಳಬೇಕಷ್ಟೇ.