ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬೆದೆ ನಾಯಿ

ತಿರುಪತಿ ಭಂಗಿ
ಇತ್ತೀಚಿನ ಬರಹಗಳು: ತಿರುಪತಿ ಭಂಗಿ (ಎಲ್ಲವನ್ನು ಓದಿ)

ತಪ್ಪ ತನ್ನ ನಾಯಿಯಿಂದ ಆದದ್ದು ಗೊತ್ತಿದ್ದ ರಂಗಜ್ಜಿಗೆ ದನಿಯಾರಿಗೆ ದುಸರಾ ಮಾತಾಡು ಮಾತಗಳೇ ಇಲ್ಲದಕ್ಕ ತುಟಿಪಿಟಕ್ಕ ಅನ್ನದೇ ನೆಲದ ಕಡೆಗೆ ಮೋತಿ ಮಾಡ್ಕೊಂಡ ಸುಮ್ಮ ನಿಂತಿದ್ಳು. ನಿನ್ನ ಹಲಕಟ್ಟ ನಾಯಿ ಸಿಕ್ಕ ಮ್ಯಾಲ ತುಂಡ ತುಂಡಾಗಿ ಕತ್ತರ್ಸಿ ಹದ್ದ ಕಾಗಿಗೆ ಹಾಕ್ತಿನಿ, ಇನ್ನೂ ಏನೇನೋ ಕೆಟ್ಟಕೆಟ್ಟ ಪದಗಳಿಂದ ದನಿಯಾರು ರಂಗಜ್ಜಿನ ಮತ್ತ ಅಕಿ ನಾಯಿನ ಬೈದು ಬೈದು ತಮ್ಮ ಸಿಟ್ಟು ಕಡಿಮಿ ಮಾಡ್ಕೊಂಡ್ರು…

‘ಬೆದೆ ನಾಯಿ ‘ ಕಥೆಯಿಂದ..

ಮನಿ ಅಂಗಳದಾಗಿದ್ದ ಕೋಳಿ ಪಿಳ್ಳಿಗೋಳು ಒಮ್ಮಿಂದೊಮ್ಮೆಲೆ ಕೊರ್ ಕೊರ್ ಅಂತ ಕೊರಗುಡಾಕತ್ತಿದ್ದು. ಈ ಹಾಟ್ಯಾನ ಬೆಕ್ಕೊಂದ ಏನ್ ಜೋಡಾಗೆತೆವ್ವಾ ದಿನಾ ಒಂದ ಪಿಳ್ಳಿ ಗಪ್ ಮಾಡದತೈತಿ. ಯಾವ ಹಾದರಗಿತ್ತಿ ಸಾಕಿದ್ದೋ ಅಕಿಮನಿಗೆ ಮುಳ್ಳಗಂಟಿ ಬಡಿಲೆಂದು ಒಲಿಮುಂದ ರೊಟ್ಟಿಮಾಡ್ಕೊಂತ ಕುಂತಿದ್ದ ರಂಗಜ್ಜಿ ಅಂಗಳಕ ಬಂದ ಕಿರಚ್ಯಾಡಕತ್ತಿದ್ಳು.
ಈ ಮುದಮೂಳಿ ಕಿರಚಾಡ್ಯಾಕ ಹತ್ತಿದ್ರ ಮುಗೀತಿ ಸೋಲ ಬಿಡೂದಿಲ್ಲ, ಎದರಿಗಿದ್ದಾವ್ರ ತಪ್ಪ ಮಾಡ್ಯಾರ ಅನ್ನುವಂಗ ಹಚ್ಚಿ ಜಾಡ್ಸಾಕ ಚಾಲೂಮಾಡ್ತಾಳ , ಹಿಂಗ ಅನಕೋತ ಕಟ್ಟಿಮ್ಯಾಲ ಕುಂತ ಚಿಲಮಿ ಸೇದುತ್ತಿದ್ದ ಸಿದ್ದಪ್ಪಜ್ಜ ಮೆಲಕಾಸ ಹೋಗಿ ಮನಿಗ್ವಾಡಿ ಹಿಂದ ಸರದ.
ಯಾವ ಹಡಬಿಟ್ಟಿದ ಬೆಕ್ಕೈತಿ ಅದು ನನ್ನ ಕೋಳಿ ಮರಿನ ದಿನಾ ಒಂದ ತಿಂದ ಹೊಂಟೈತಿ, ನಾ ಕೋಳಿನ ಕೋಳಿಮರಿನ ಅದಕಾಗೇ ಸಾಕಿನೇನ? ನನ್ನ ಕೈಯಾಗ ಸಿಕ್ಕರ ಆ ಬೆಕ್ಕಿಗೆ ಒಂದ ಗತಿ ಕಾಣಸ್ತಿನಿ, ರಂಗಜ್ಜಿ ತುಂಬಿಬಂದ ತನ್ನ ಸಿಟ್ಟು ಕೋಪವನ್ನ ಬೈಗಳದಾಗ ಹೊರಗ ಹಾಕಿ, ಮತ್ತ ರಂಗಜ್ಜಿ ತನ್ನ ಪತ್ರಾಸ ಮನ್ಯಾಗ ಹ್ವಾದ್ಳು.

ರಂಗಜ್ಜಿ ತಮ್ಮ ಪರಾವೈಸ್ಕೊಂಡ ಬೆಕ್ಕಿನ ಹಿಗ್ಗಾಮುಗ್ಗಾ ಬೈದ್ಳು ಅನ್ನು ಖುಷ್ಯಾಗ ಅಂಗಳದಾಗ ಹೆದರಿಕೊಂಡ ನಿಂತ ಕೋಳಿ ಪಿಳ್ಳಿಗೋಳು ಅಂಗಳದ ದಂಡ್ಯಾಗಿದ್ದ ಕಸದ ಗುಂಪೀನ ತಮ್ಮ ಕಾಲಿನಿಂದ ಕೆಬರ್ಯಾಡುತ್ತ ಕೊರ್ ಕೊರ್ ದನಿ ಮಾಡ್ಕೊತ ಸಿಕ್ಕ ಕಾಳಾ, ಕಡಿ, ಹುಳಾ ಹುಪ್ಪಡಿ ತಮ್ಮ ಗಂಟಲ್ಕ ಇಳಸ್ಕೊತಿದ್ದು.
ಒಲಿ ಒಂದ ಸವನ ದಂಗದಂಗ ಉರ್ಯಾಕ ಹತ್ತಿತ್ತು. ಈ ಬೆಕ್ಕಿನ ಸಲಾಗಿ ಇದ್ದಬಿದ್ದ ಹ್ವಾರೇವ ಬಿಟ್ಟ, ಮುಂಜಮುಂಜಾನೆ ಎದ್ದ ಬರೀ ಗಂಟ್ಲಾನ ಹರ್ಕೊಳ್ಳುದಾತ, ಒಲ್ಯಾಗಿನ ಕಟಗೀನೂ ಹಾಳಾ, ಇತ್ತಾಗ ಮನಸನ್ಯಾಗಿನ ನೆಮ್ಮದಿನೂ ಹಾಳಾ ಅನ್ಕೋತ ರಂಗಜ್ಜಿ ಕಟಗಿ ಒಲಿ ಒಳಗ ಸರಿಸಿ, ಮತ್ತ ಡಬ್ಯಾಗಿನ ಹಿಟ್ಟ ತಗೊಂದ ಚರಾಚರಾ ನಾದ್ಕೊಂಡ ಟುಬುಟುಬು ರೊಟ್ಟಿ ಬಡ್ಯಾಕ ಹತ್ತಿದ್ಳು.

“ಏ ಅಜ್ಜಿ ನಿಮ್ಮ ನಾಯಿನ ದನ್ಯಾರ ಕೊಲ್ಲಸಾಕ ಹೇಳ್ಯಾರ, ಅದೇನ ಅವರ ನಾಯಿ ಜೋಡಿ ಪೀಟಿ-ಪೀಟಿ ಬಿದ್ದಿತಂತ,ಅದಕ್ಕ ಶೀನಪ್ಪ ದನ್ಯಾರು ತಮ್ಮ ಆಳಗೊಳ ಹಚ್ಚಿ ನಾಯಿ ಕೊಲ್ಲಸಾಕ ಹತ್ಯಾರ, ದನ್ಯಾರ ಆಳ ಮನಷ್ಯರು ನಿಮ್ಮ ನಾಯಿನ ಅಟ್ಟಸ್ಕೊಂಡ ಊರತುಂಬಾ ಓಡ್ಯಾಡಾಕ ಹತ್ತಿದ್ರು. ಅದು ಅವ್ರ ಕೈಗೆ ಸಿಗದ ಬಂವ್ ಅಂತ ಹರಿಗಲ್ ಬಿದ್ದ ಕೆಂಚವ್ವನ ಗುಡ್ಡದಕಡೆ ಓಡಿ ಹೋತು” ಎಂದು ರಂಗಜ್ಜಿ ಮನಿ ಮಗ್ಗಲಕ ಇದ್ದ ಚಿಕ್ಕಪ್ಪನ ಮಗಾ ಧರಿಯಾ ಓಡ್ಕೋತ ಓಡ್ಕೋತ, ಏದುಸಿರ ಬಿಟ್ಕೋತ, ದಸಾ ದಸಾ ತೇಕ್ಕೋತ, ರಂಗಜ್ಜಿ ಮುಂದ ಹೇಳೂದ ತಡಾ, ಆಗ ರಂಗಜ್ಜಿ ಮುದಿಗಣ್ಣಾಗ ನೀರಸೋರ್ಯಾಡಕ ಹತ್ತಿದು.

ಅಯ್ಯೋ..! ಅದರ ಬೇಬರ್ಸಿ ಹಳೆ ಬೆಬರ್ಸಿ ಅದಕೇನ ಅಳಗಾಲ ಬಂತ ಯಪ್ಪಾ.. ಊರಾಗ ರಗಡ ಹೆಣ್ಣಾಯಿ ಇದ್ದುವಲ್ಲಾ? ಅವ್ನ ಬಿಟ್ಟ ಹೋಗಿ ಹೋಗಿ..ಆ ದನಿಯಾರ ನಾಯಿ ಕಚ್ಯಾಗ್ಯಾಕ ಮೂಸಿನೋಡಾಕ ಹೋತು? ಮೊದಲ ಅಂವ ಕೆಟ್ಟ ದನಿಯಾ ಶೀನಪ್ಪ, ಅವ್ರ ನಾಯಿನ ಬಸರಮಾಡಿ ಬಂದೈತೆಂದ್ರ ಅಂವಾ ಕಂಡಿತಾ ನಮ್ಮ ನಾಯಿನ ಜೀವಂತ ಬಿಡುದಿಲ್ಲ, ಅದನ್ನ ಕೊಂದ ಬಿಡ್ತಾನೆಂದು ರೊಟ್ಟಿ ಮಾಡುತ್ತಿದ್ದ ರಂಗಜ್ಜಿ ,ರೊಟ್ಟಿ ಮಾಡೂದ ಬಿಟ್ಟಾಕಿನ, ಹಿಟ್ಟಗೈ ತನ್ನ ಸಿರಿ ಸೆರಗಿಗೆ ವರಸ್ಕೋತ, ಅಂಗಳಕ ಬಂದ ನಿಂತು ರಾಜಾ.. ರಾಜಾ..ರಾಜಾ ಬಾ..ಬಾ.. ಬಾರೋ ರಾಜಾ ರಾಜಾ ..ಬಾ..ಬಾ..ಬಾರೋ ಎಂದು ಕೂಗತೊಡಗಿದ್ಳು. ರಂಗಜ್ಜಿ ಎಷ್ಟ ಒದರಿದ್ರು ಅಕಿ ನಾಯಿ ಬರಲೇ ಇಲ್ಲ. ಅಯ್ಯೋ.. ದೇವ್ರ .. ಶೀನಪ್ಪ ದನಿ ಕೊಂದಬಿಟ್ಟಿರ್ಬೇಕ, ಅಂವ್ನ ಕೈಗೆ ಕರಿನಾಗರ ಕಚ್ಚಲಿ, ಅಂವ್ನ ಕೈ ಬಿದ್ದಹೋಗ್ಲಿ ಅಂಯ ಮನಸನ್ಯಾಗ ಅಂದ್ಕೋತ ಮತ್ತ ರಂಗಜ್ಜಿ ಹಳಹಳಸ್ಕೋತ ತನ್ನ ಪತ್ರಾಸ ಮನ್ಯಾಗ ಬಂದ ಕುಂತ್ಳು. ಆಗ ಒಲಿ ಶಾಮತವಾಗಿತ್ತು. ಹುಡುಗ ದರಿಯಾ ಬಾಗಲದಾಗ ನಿಂತಿದ್ದ.

“ಅಜ್ಜಿ ಅಜ್ಜಿ.. ನಿಮ್ಮ ನಾಯಿ ಐತೆಲಾ ಇನ್ನ ದನಿಯಾರ ಆಳಮನಷ್ಯಾರ ಕೈಗೆ ಸಿಕ್ಕಿಲ್ಲ, ಅದನ್ನ ಅವ್ರ ಇನ್ನ ಸಾಯಿಸಿಲ್ಲ” ದರಿಯಾ ಪಟಾಪಟಾ ಪಟಾಗಸಿ ಹೊಡದ್ಹಂಗ ರಂಗಜ್ಜಿ ಮುಂದ ಹೇಳಿದ. ಆಗ ಧರಿಯಾನ ಮಾತ ಕೇಳಿದ ರಂಗಜ್ಜಿ ಮೆಲ್ಲಾಕಾಸ ಮ್ಯಾಲೆದ್ದು ಬಾಗಲ್ಕಡೆ ಹೋಗಿ, ಧರಿಯಾನ ಪ್ರೀತಿಯಿಂದಾ ತಲಿ ಸವರುತ್ತ, “ಅದು ಸಾಯಬಾರದಪ್ಪೋ ದರಿಯಪ್ಪಾ.. ಅದ ನನ್ನ ಮಗಾ ಇದ್ದಂಗ..ಅದ ನನಗ ದೊಡ್ಡ ಆಸ್ರ, ಮಕ್ಕಳಿಲ್ಲದ ಮರಿಯಿಲ್ಲದ , ನನ್ನವರಿಲ್ಲದ,ತನ್ನವರಿಲ್ಲದ ಕುಂತಿನಿ ನಾನು, ನನಗ ಅದ ಮಗಾ ಇದ್ದಂಗ” ಅಂತ ರಂಗಜ್ಜಿ ಹುಡುಗ ಧರಿಯಾನ ತಬ್ಬಕೊಂಡ ಮತ್ತೊಮ್ಮೆ ಕಣ್ಣು ತೋಸ್ಕೊಂಡ್ಳು.

“ಏ.. ಯಮ್ಮಾ.. ನೀ ಏನ್ ಚಿಂತಿಮಾಡಾಕ ಹೋಗಬ್ಯಾಡ.. ಆ ನಾಯಿನ ಕೊಲ್ಲಾಕ ಯಾರ್ಗೂ ಆಗೂದಿಲ್ಲ. ಇಬ್ರು ಮೂರಮಂದಿ ಅದರ ಮುಂದ ಹ್ವಾದ್ರ ಅವರ್ನ್ ಗಬಕ್ ಗಬಕ್ ಅಂತ ಕಚ್ಚಿ ಮೈಯಾಗೀನ ಚರ್ಮಾ ಸುಲಿತೈತಿ, ದನಿಯಾರ ಮಾತ ಕೇಳಿ ಅವ್ರ ಆಳಗೋಳು ದನಿಯಾರ ಮುಂದ ಸುಮ್ಮ ಸುಮ್ಮನ ನಿಮ್ಮ ನಾಯಿ ಹಿಡ್ಯಾಕ ಹ್ವಾದಾರಗತೆ ಮಾಡಿ, ಅಂಜಿ ಹೇತ್ಕೊಂಡಾರ. ಅದರಾಗ ಜ್ಯಾಡ್ಯಾ ಅಂತು ಹೆದರಿ ಸತ್ತಾನ, ದುಂಡ್ಯಾನ ಬಾ ಬಾರ್ಲೇ ಅದೇನ ಹುಲಿನೋ ಸಿಂಹನೋ ಅಂತ ಅಂವ್ನ ಬಲವಂತ ಮಾಡಿ ಕರ್ಕೊಂಡ ಹೋಗ್ಯಾನ. ಅವ್ರು ಈಗ ನಾಯಿ ಹುಡ್ಕೋದ ಬಿಟ್ಟ ಪಾರ್ವತೆವ್ವನ ಸೆರೆದ ಅಂಗಡ್ಯಾಗ ಸೆರೆಕುಡದ ನೆಲದ ಮ್ಯಾಲ ನಿಲ್ಲದಂಗ ಆಗಿ , ಅಲ್ಲೇ ಗುಡ್ಡದ ಪದಿಯೊಳಗ ಮಕಾಡೆ ಮಕ್ಕೊಂಡಾರ, ನೀನ ಹೇಳ ಅಜ್ಜಿ ದನ್ಯಾರ ಆಳ ಮನಿಷ್ಯಾರ್ಗೆ ನಿಮ್ಮ ನಾಯಿ ಯಾವ ಜನ್ಮಾಕ್ಕಾದ್ರೂ ಸಿಕ್ಕಿತು?” ಅಂತ ಧರಿಯಾ ರಂಗಜ್ಜಿಗೆ ದನ್ಯಾರ ಮನ್ಯಾಗ ನಡೆದ ಸುದ್ದೀನ ರಂಗಜ್ಜಿಮುಂದ ಇದ್ದಕಿದ್ದಂಗ ಒಪ್ಪಿಸಿದಾಗ ಆಗ ರಂಗಜ್ಜಿಗೆ ಒಂದಿಷ್ಟು ಸಮಾಧಾನ ಆದಾಂಗಾತು.

ಆದ್ರ ರಂಗಜ್ಜಿ ಒಳಮನಸನ್ಯಾಗ ಭಯಾ ಇದ್ದ ಇತ್ತು. ಮೊದಲ ಮಡಿವಂತ ಕುಲಕರ್ಣಿ ಭಲ್ಲಂಗ ರೊಕ್ಕಾ ಸುರ್ದ ಪ್ಯಾಟ್ಯಾಗಿಂದ ನಾಯಿ ತಂದಾನ. ಅದು ಹುಲಿಯಂತಾ ನಾಯಿ, ಅದರ ಮೈತುಂಬ ಗೇನ ಗೇನ ಉದ್ದ ಕೂದ್ಲಾ ಅದಾವ ಅಂತ, ಅದರ ಬಾಯಿ ಬೋಗಾನಿಯಷ್ಟ ಅಗಲೈತೆಂತ, ಒಂದ ಹೊತ್ತಿಗೆ ನಾಕೈದ ಮಂದಿ ತಿನ್ನುವಷ್ಟು ಊಟಾ ತಿಂತೈತೆಂತ, ಹಂತಾ ನಾಯಿ ಸಾಕಾಕ ಸಾಮಾನ್ಯ ಜನರಿಗೆ ನೀಗೂ ಮಾತರಾ ಮಾತೇನ..? ಏನಿದ್ರು ದನಿಯಾರಂತಾ ಶ್ರೀಮಂತ್ರ ಸಾಕ್ಬೇಕು. ಅದನ ದಿನಾ ಒಂದಕೂ ಹೆಲಸಾಕ, ಉಚ್ಚಿ ಹೋಸಾಕ ಒಬ್ಬ ಆಳ ಮನಷ್ಯಾ ಪಿಕ್ಷ್ ಇರ್ತಾನಂತ, ಅಂತ ದೆವ್ವಿನಂತ ನಾಯಿನ ನಮ್ಮ ಹಲಕಟ್ಟ ನಾಯಿ ಅವ್ರ ಕಂಪೌಂಡ ಜಿಗದ ಹೋಗಿ, ಅದರ ಮೆತ್ತಾನ ಪಲವತ್ತಾದ ಮೈಯಾಗ ತನ್ನ ಬೀಜಾ ಬಿಟ್ಟ ಬಂದೈತೆಂದ್ರ.. ದನಿಯಾ ಹ್ಯಾಂಗ ಸುಮ್ನಾದಾನಾ? ರಂಗಜ್ಜಿಗೆ ಕುಂತ ನಿಂತಲ್ಲಿ ಬರೀ ನಾಯಿದೇ ದ್ಯಾಸ ಇತ್ತು. ಸಣ್ಣ ಕುನ್ನಿ ಇದ್ದಾಗಿನ ನೆನಪು ರಂಗಜ್ಜಿ ಕಣ್ಣ ಪರದೆಯ ಮೇಲೆ ಸಿನಿಮಾ ರೀಲಿನಂತೆ ಎಳೆ ಎಳೆಯಾಗಿ ಬಿಚ್ಚತೊಡ್ಗಿತು.


ಅಂದ ಮಟಾಮಟಾ ಮದ್ಯಾನದಾಗ ಧೋ… ಅಂತ ಒಂದ ಸಮನ ಮಳಿ ಸುರಿಯಾಕ ಹತ್ತಿತ್ತು. ಊರ ಬಿಟ್ಟ ದೂರ ಇದ್ದ ಕೇರಿಯೊಳಗಿನ ನನ್ನ ಪತ್ರಾಸ ಮನಿಹಿಂದ ಏನೋ ಒಂದ ಕುಂಯ್.. ಕುಂಯ್.. ರಾಗ ಕೇಳಾಕತ್ತಿತ್ತು. ಎಷ್ಟೊತ್ತಿನಿಂದ ಕುಂಯ್.. ಕುಂಯ್.. ದನಿ ಕೇಳಾಕತ್ತಿತ್ತು. ಏನ ಇರ್ಬೇಕಂತ ಚಟಕ್ನ ಎದ್ದ ಧೋ ಅಂತ ಸುರು ಮಳಿಯಾಗ ಒಂದ ಗೊಬ್ಬರ ತಲಿಮ್ಯಾಲ ಹಾಕ್ಕೊಂದ ಮೆಲ್ಲಕ ಹೋಗಿ ಮನಿ ಹಿಂದ ಹಣಿಕಿ ಹಾಕಿದ್ಯಾ, ಆಗ ಅಲ್ಲಿ ಸಣ್ಣ ನಾಯಿ ಮರಿ, ಮಳಿಯಾಗ ತಪ್ಪನ ತೋಸ್ಕೊಂಡ ಕುಂಯ್ಗುಡಾಕತ್ತಿತ್ತು. ಅಯ್ಯೋ ಪಾಪ..! ಅಂದಾಕಿನ ಗಬಕ್ನ ಆ ನಾಯಿ ಮರಿ ಹಿಡ್ಕೊಂಡ ಮನ್ಯಾಗ ಬಂದ್ಯಾ.

ತೊಸ್ಕೊಂಡ ಗದಾಗದಾ ನಡಗಾಕ ಹತ್ತಿದ ನಾಯಿ ಮರಿ ಕೈಯಾ ಮೈಯ್ಯಾ ಒಂದ ವಣಾ ಅರಬಿ ತಗೊಂಡ ವರಸಿದ್ಯಾ. ಒಲಿ ಮುಂದ ಹೋಗಿ ಬೆಂಕಿಕಾಸ್ಖೊತ ಅದರ ಜಾಳಾ ನಾಯಿ ಕುನ್ನಿಗೂ ಒಂದೀಟ ಒಂದೀಟ ತಾಗುವಂಗ, ಅದರ ಮೈಯಾಗಿದ್ದ ಚಳಿ ಬಿಟ್ಟ ಹೋಗುವಂಗ ಬೆಂಕಿ ಕಾವ ಕೊಟ್ಟು ಅದರ ತಲಿ ಸಾವ್ರಕೋತ ಕುಂತ್ಯಾ. ಆ ಪರದೇಸಿ ನಾಯಿ ಮರಿ ನನ್ನ ತೊಡಿಮ್ಯಾಲ ಹಸುಗೂಸು ಮಲಗಿದಂಗ ಮಲಗಿಕೊಂಡಿತು. ಅಂದಿನಿಂದ ಆ ನಾಯಿ ಮರಿ ದಿಕ್ಕು ದಸೆ ಇಲ್ಲದ ನನಗೂ ಒಬ್ಬ ಮಗನಂತೆ ಜೋಡಾತು.
ಆಡಿನ ಹಾಲು, ನಾ ಮಾಡಿದ ದಪ್ಪ ದಪ್ಪಾದ ರೊಟ್ಟಿ ತಿನ್ಕೋತ ಎದೆ ಎತ್ತರಕ ಬೆಳದ ನಿಂತಿ. ಊರಾಗಿರೋ ಗರಡಿ ಮನಿ ಕುಸ್ತಿ ಪೈಲ್ವಾನರ ಗತೆ ಮೈ-ಕೈ ತುಂಬಕೊಂಡ ಭಾಳ ಚಂದ ಕಾಣ್ತಿತ್ತು.

“ಈ ನಾಯಿಗೆ ಏನ್ ಊಟಾ ಹಾಕಿಯವ್ವಾ ರಂಗಜ್ಜಿ, ಮನಗಂಡ ಆಗೇತಿ, ನೋಡಾಕ ಹುಲಿ ಕಂಡಂಗ ಕಾಣ್ತೈತಿ ಅಂತ ಊರಾಗಿನ ಮಂದಿ ಕೇಳಿದ್ರ, ಅದಕೇನ ಹಾಕಲೆವ್ವಾ ನಾನು ಏನ್ ತಿಂತಿನೋ ಅದಕ್ಕೂ ಅದನ್ನ ಒಂದ ತುತ್ತ ಹಾಕ್ತಿನಿ ಅಂತ ಹೇಳತಿದ್ಯಾ..?
ಯಾರ್ದರಾ ಕಣ್ಣ ದೃಷ್ಠಿ ಹತ್ತಿಗಿತ್ತಿತು ಅಂತ ಭಯಗೊಂಡು ನಾನು ಆಗಾಗ ನನ್ನ ನಾಯಿಗೆ ಒಂದ ಚಿಟಗಿ ಉಪ್ಪಾ, ಒಂದೆರ್ಡ ಕಸಬರಗಿ ಕಡ್ಡಿ ತಗೊಂದ ನೆದರ ತಗಿತೆದ್ಯಾ. ಹುಲಿಯಂತ ನನ್ನ ನಾಯಿ ಇರೂದ್ರಿಂದ ನನ್ನ ಆಡಿಗೆ, ಆಡಮರಿಗೆ ಯಾವ ಭಯಾನೂ ಇರ್ತಿದ್ದಿಲ್ಲಾ. ಆಗಾಗ ಕೋಳಿಗೊಂದ ಬೆಕ್ಕ ಗಂಟ ಬಿದ್ದಿತ್ತು, ಆ ಹಲಕಟ್ಟ ಬೆಕ್ಕಾ ಹೆಂಗರ ಮಸಲತ್ತ ಮಾಡಿ,ನಮ್ಮ ಕೋಳಿ ಪಿಳ್ಳಿಗೊಳ್ನ ಹಿಡಕೊಂಡ ಹೊಕ್ಕಿತ್ತು. ದೇವ್ರ ಅದಕ್ಕೂ ಒಂದ ಹೊಟ್ಟಿ ಕೊಟ್ಟಾನ, ತಿಂದ ಹಾಳಾಗಿ ಹೋಗ್ಲಿ ಅಂತ ಬೈದು ಸುಮ್ಮ ಅಕ್ಕಿದ್ಯಾ.

ನನ್ನ ಹಿರಿಮಗನ ಸ್ಥಾನದಾಗ ಇದ್ದ ನನ್ನ ನಾಯಿಗೆ ರಾಜಾ ಅಂತ ಪ್ರೀತಿಯಿಂದ ಕರಿತಿದ್ಯಾ, ಇಂದ ನೋಡಿದ್ರ, ಈ ನಮ್ಮ ಹಲಕಟ್ಟ ರಾಜಾ ಆ ಕುಲಕರ್ಣಿ ಶೀನಪ್ಪ ದನ್ಯಾರ ಬೆದಿಗ ಬಂದ ನಾಯಿ ಕಚ್ಯಾಗ ತನ್ನ ಲಿಂಗಾ ತುರಕಿ ದೊಡ್ಡ ಅನಾಹುತಾ ಮಾಡ್ಕೊಂಡೈತಿ ಅಂತ ರಂಗಜ್ಜಿ ಕುಂತ ಕುಂತಲ್ಲೆ ಹಿಂದೆ ನಡೆದ ಕತಿಯನ್ನು ನೆನೆಯುತ್ತಿದ್ಳು. ಆಗ ಧರಿಯಾ ಅಜ್ಜಿ ನಾ ಮನಿಗೆ ಹೊಕ್ಕಿನಿ ಅಂತ ಕೂಗಿದಾಗ ರಂಗಜ್ಜಿ ಪಟಕ್ನ ಹಗಲಗನಸಿನಿಂದ ಹೊಡಮರಳಿ ವಾಸ್ತವಕ್ಕ ಬಂದ್ಳು.

“ಏ ರಂಗಜ್ಜಿ ಮನ್ಯಾಗ ಅದಿಯೋ ಇಲ್ಲೋ” ಅಂಗಳದಾಗ ನಿಂತ ಗಂಟ್ಲ ಹರದ ಹೋಗುವಂಗ ಒಂದ ಸವನ ದನ್ಯಾರ ಆಳ ಮನಷ್ಯಾ ಒದರ್ತಿದ್ದ. ಆಗ ರಂಗಜ್ಜಿ ಆ ದನಿ ಕೇಳಿ ದಡಗ್ನ ಹಾಸಗ್ಯಾಗಿಂದ ಕಿತಗೊಂದ ಹಾಳಮಾರಿಲೆ ಕದಾ ತಗದ ಅಂಗಳಕ ಬಂದು ಯಾಕಪ್ಪಾ ತಮ್ಮಾ.. ಹಂಗ್ಯಾಕ ಕಿರಚಾಕತ್ತಿ ಅಂತ ಸಿರಿ ಸೆರಗಿಂದ ಕಣ್ಣ ವರಸ್ಕೋತ ಎದುರಿಗಿದ್ದ ದನ್ಯಾರ ಆಳ ಮನಷ್ಯಾಗ ಕೇಳಿದ್ಳು. ಅಂವ ಪಕ್ಕಾ ದನಿಯಾರ ಆಳ ಮನಷ್ಯಾ ಅನ್ನುದ ಗೊತ್ತ ಆದದ್ದ ತಡಾ ರಂಗಜ್ಜಿ ಕೈಕಾಲು ಥರಾ ಥರಾ ನಡಗಾಕ ಹತ್ತಿದ್ವು.
ಏ ರಂಗಜ್ಜಿ ನಿನ್ನ ದನ್ಯಾರ ಕರಿಯಾಕ ಹತ್ಯಾರ, ಲಗೂನ ಬಾ ಅಂತ ಹೇಲಿಕಳಿಸ್ಯಾರ, ದನಿಯಾರ ದಾಟಿಯಲ್ಲಿಯೇ ಅವರ ಆಳಮಗಾ ಜ್ಯಾಡ್ಯಾ ಅಬ್ಬರಿಸಿ ಹೋದ. ಬರ್ತಿನ್ರೀ ಅಪ್ಪಾರ ಅಂತ ರಂಗಜ್ಜಿ ದೈನದಿಂದ ಅಂವಗ ಕೈಮುಗದ್ಳು.ರಂಗಜ್ಜಿಯ ಆಡಮರಿಗಳು ಬ್ಯಾ..ಬ್ಯಾ ಅನ್ನುತ್ತ ಅಕಿಗೆ ಬೆಳಗಿನ ಶುಭಾಶಯ ಹೇಳುತ್ತಿದ್ದವು. ರಂಗಜ್ಜಿ ಪ್ಲಾಸ್ಟಿಕ್ ಕೊಡದಾಗ ಕೈ ಹಾಕಿ ಒಂದ ಬಗಸಿ ನೀರ ತಗೊಂದು ಮೋತಿಮ್ಯಾಲ ಕೈಯಾಡಸ್ಕೊಂಡು, ಒಂದ ಸಣ್ಣ ಬುಟ್ಯಾಗ ನಾಕ ಬಗಸಿ ಸಜ್ಜಿಕಾಲ ಹಕ್ಕೊಂಡ ಹೋಗಿ ಆಡ ಮರಿ ಮುಂದ ಇಟ್ಳು. ಆಡಮರಿಗೊಳು ದಡಬಡಿಸಿ ಗಬಾಗಬಾ ಸಜ್ಜಿಕಾಳ ಮುಕ್ಕತೊಡಗಿದ್ವು. ದಿನಾ ನಾಯಿ ಅಂಗಳದಾಗ ಇರ್ತಿತ್ತು. ಈಗ ಎಲ್ಲಿ ಹೋತೋ.. ಈ ನಾಯಿ ಇಂದ ನನಗ ಇವತ್ತ ದೊಡ್ಡ ಚೀಮಾರಿ ಐತಿ ಅಂತ ಹಳಹಳಿಸುತ್ತ ಮುಂಜಮುಂಜಾಲೇ ಮನಿ ಬಾಗ್ಲಾ ಮುಚ್ಚಿದ್ಳು. ಕಿತ್ತ ಹ್ವಾದ, ಹವಾಯಿ ಉಂಗಟಕ್ಕ ಪಿನ್ನ ಚುಚ್ಚಿ ಅದನ್ನ ಸರಿ ಮಾಡ್ಕೊಂಡ, ಕಾಲಾಗ ಮೆಟಗೊಂದ ಕಾಲ ಎಳಕೋತ ಊರಾಗ ನಟ್ಟ ನಡಬರಕ ಇದ್ದ ಕುಲಕರ್ಣಿ ಶೀನಪ್ಪನ ಮನಿಕಡೆ ರಂಗಜ್ಜಿ ನಿದಾನ್ಕ ಕಾಲ ಎಳ್ಕೋತ ನಡದ್ಳು.
ಆಜುಬಾಜು ಮನಿಯವರು ರಂಗಜ್ಜಿ ಹೋಗುದನ್ನ ಕಿಂಡಕ್ಯಾಗನಿಂತ, ಬಾಗಲ ಸಂದ್ಯಾಗ ನಿಂತ ನೋಡ್ತಿದ್ರು. ಈ ಮುಕಿದು ಸೊಕ್ಕ ಭಾಳ ಆಗಿತ್ತು. ಈಗ ದನಿಯಾರ ಕೈಯಾಗ ಸಿಕ್ಕಾಕೊಂಡಾಳ, ಅಕಿ ಸೊಕ್ಕ ಈಗ ಮುರಿತೈತಿ ಅಂತ ರಂಗಜ್ಜಿ ಬದ್ದ ವೈರಿಯಾಗಿದ್ದ ಕರಿಯವ್ವ ಕೊಕ್ಕಾಡಸಿ ನಗತಿದ್ಳು.

ದನಿಯಾರಿಗೆ ಬುದ್ದಿಗಿದ್ದಿ ಐತೋ ಇಲ್ಲೋ.. ರಂಗಜ್ಜಿ ನಾಯಿ ಹೋಗಿ ಅಂವ್ನ ನಾಯಿನ ಹಾರಿ ಬಂದ್ರ ಪಾಪ..! ಇಕೇನ ಮಾಡ್ಬೇಕು? ನಾಯಿ ಮಾಡಿದ್ರ ಈ ದನಿಯಾ ಇಷ್ಟ ಉರ್ಕೊಳ್ಳಾಕತ್ಯಾನ, ಇನ್ನ ಮನಷ್ಯಾರ ಗಿನಷ್ಯಾರ ಮಾಡಿದ್ರ ಅವ್ರ ಗತಿ ಹೆಂಗಿತ್ತೋ ದೇವ್ರೆ ಬಲ್ಲಾ..? ತಪ್ಪು ಒಪ್ಪು ಗೊತ್ತಿದ್ದೂ ಬಾಯಮುಚಗೊಂದ ಮಲ್ಲೇಶಿ ತನ್ನಷ್ಟಕ್ಕೆ ತಾನು ರಂಗಜ್ಜಿ ಹೋಗುದನ್ನ ಪಿಳಿಪಿಳಿ ಕಣ್ಣ ಬಿಟಗೋತ ನೋಡ್ಕೋತ ಕುಂತ.

ದನಿಯಾ ಅಂದ್ರ ನಾಡ ಕಂತ್ರಿ ಬುದ್ದಿ ಮನಷ್ಯಾ ಅನ್ನೂದ ಸುತ್ತಮುತ್ತ ಹಳ್ಯಾಗೂ ಗೊತ್ತಿತ್ತು. ಊರಾಗಿನ,ಗೌಡ್ರು, ದೇಸಾಯಾರು, ಪಾಟೀಲ್ರು ಅಂವ್ನ ಬಾಲಂಗೋಸಿಯಾಗಿದ್ರು, ಅದಕ್ಕ ಮತ್ತಷ್ಟ ಯಮಕ, ತೋರಸ್ತಿದ್ದ, ಬಾಳ ಪುರಾಣಾ ಪುಣ್ಯಕತೆ ಓದಿ, ಸಾಮನ್ಯ ಜನರನ್ನೂ ನಂಬಸಿದ್ದ.

ದನಿಯಾ ಮೂರ ಹೋಗಿ ಆರಮಾಡ್ತಾನ, ಹೆಂಗಸಿನೋದ ಗಂಡ್ಸಿಸೀನ ಮಾಡ್ತಾನಾ, ನರಿ ಹಂಚಿಗಿ ಮಾಡಿ, ಯಾರನ ಬೇಕಾದವ್ರನೂ ತಪ್ಪನ್ಯಾಗ ಹೆಂಗ ಸಿಗಸ್ಬೇಕು, ಅನ್ನುವ ಕುತಂತ್ರ ಕಲೆ ಭಲ್ಲಂವ ಅನ್ನುದು ಎಲ್ಲರಿಗೂ ತಿಳದ ವಿಷ್ಯಾ ಆಗಿತ್ತು. ಅಂವ್ನ ಕಂಡ ಬಿಲ್ಲಿನಂತೆ ಬಾಗಿ ನಮಸ್ಕಾರ ಮಾಡಿದವ್ರ ಮ್ಯಾಲ ಅಂವಗ ಒಂದ ತರದ ಪ್ರೀತಿ ಇರ್ತಿತ್ತು. ಅಂವ್ನ ಮುಂದ ಎದಿ ಸೆಟಸ್ಕೊಂಡ ಅಡ್ಯಾಡಿದ್ರ ಸಾಕು, ಅಂತವರ್ನ ಹೊತ್ತ ನೋಡಿ ಕತ್ತ ಕೊಯ್ತಿದ್ದಾ. ಹಿಂಗಾಗಿ ಊರ ಮಂದಿಯಲ್ಲಾ ಹೆಲಮ್ಯಾಲ ಕಲ್ಲ ಒಗದ ಮಾರಿ ಮ್ಯಾಲ ಯಾಕ ಸಿಡಸ್ಕೊಳ್ಳೊದು ಅಂತ ಅಂವಗ ತಗ್ಗಿ ಬಗ್ಗಿ ನಡದವ್ರ ಗತೆ ನಾಟಕ ಮಾಡ್ತಿದ್ರು.

ದನಿಯಾ, ಲಕ್ಷಾಂತರ ರೂಪಾಯಿ ಕೊಟ್ಟು ತಂದ ಬೆಲೆಬಾಳು ನಾಯಿ ಬೆದಿಗೆ ಬಂದು ಚಿಟಬುಡಸಾಕ ಹತ್ತಿತ್ತು, ಜ್ಯಾಡ್ಯಾ ಅದರ ಹಾವಾಭಾವ ಕಂಡ, ದನ್ಯಾರ ನಾಯಿ ಬೆದಿಗೆ ಬಂದೈತ್ರಿ ಅಂತ ಹೇಳಿದ್ದ. ನಾಳೆ ಕಾರನ್ಯಾಗ ಹಕ್ಕೊಂಡ ಪ್ಯಾಟಿಗೆ ಹೋಗಿ, ಅದರ ಬೆದಿ ತುಂಬಸ್ಕೊಂಡ ಬರುನು ಅಂತ ಹೇಳಿ, ಅವತ್ತು ಯಾವದೋ ಕೆಲಸದ ಮ್ಯಾಲ ಪ್ಯಾಟಿಗೆ ಹೋಗಿದ್ದ. ಹೊಡಮರಳಿ ದನಿಯಾ ಮನಿಗೆ ಬರಗೊಡ್ದ, ರಂಗಜ್ಜಿ ನಾಯಿ ಎಲ್ಲರ ಕಣ್ಣ ತಪ್ಪಿಸಿ, ಕಂಪೌಡ ಹಾರಿ ಹೋಗಿ ದನಿಯಾರ ನಾಯಿನ ಅವ್ರ ಕಂಪೌಂಡದಾಗ ಬಲ್ಲಂಗ ತಿರುವ್ಯಾಡಿ, ತಿರುವ್ಯಾಡಿ, ಓಡಾಡ್ಸಿ ಓಡಾಡ್ಸಿ, ಅದರ ಕಚ್ಚಿ ನೆಕ್ಕುತ್ತ, ಅದರ ಮೋತಿಗೆ ತನ್ನ ಮೋತಿ ಒತ್ತಿ ಮುದ್ದು ಮಾಡ್ಕೋತ, ಅದನ್ನ ಪಳಗಿಸಿ, ಅದರ ಬೆನ್ನ ಮ್ಯಾಲ ತನ್ನ ಕಾಲ ಹಾಕಿ, ತನ್ನ ಲಿಂಗವನ್ನು ಅದರ ಹೂವಿನಂತ ಕಚ್ಚಿಯೊಳಗೆ ಸೇರಿಸಿ, ಹುರುಪುಗೊಂಡು ಕುಣಿದಾಡಿತು. ಕ್ಷಣ ಹೊತ್ತನ್ಯಾಗ ಎರಡೂ ನಾಯಿಗೋಳು ಮೋತಿ ತಿರಗಿಸಿ ಅತ್ತಾಗೊಂದ ಇತ್ತಾಗೊಂದ ಆದವು. ಜ್ಯಾಡ್ಯಾ ಹಚಾ ಹಚಾ ಅಂತ ಕೂಗ್ಯಾಡುದನ್ನು ಕಂಡು, ದನಿಯಾನ ಹೆಂಡತಿ ಅನಸುಯಾ, ಮತ್ತ ಅಂವ್ನ ಮಗಳು ಲಕ್ಷ್ಮೀ ಇಬ್ಬರೂ ಗಾಬರಿಗೆಟ್ಟು ಹೊರಗ ಬಂದ ನಿಂತಕೊಂಡು ಪಿಟಿಪಿಟಿ ಬಿದ್ದ ನಾಯಿಗಳನ್ನು ನೋಡ್ಕೋತ ಒಳಗೊಳಗ ನಾಚ್ಕೊಂಡ್ರು, ಲಕ್ಷ್ಮೀಗಂತು ಎಂತದ್ದೋ ಒಂದು ಮಜಾ ಅನಿಸಿತು. ಜ್ಯಾಡ್ಯಾ ಅವುಗಳನ್ನ ಹುಷ್ಯಾ ಹುಷ್ಯಾ ಅಂತ ಹೊಡಿಯುತ್ತಿದ್ದ, ಎರಡೂ ನಾಯಿಗಳು ನೋವಿನಿಂದ ಕುಂಯ್ ಗುಡುತ್ತಿದ್ದವು, ಒಂದು ನಾಯಿ ಹಿಂದಕ್ಕೆ ಎಳೆದರೆ ಮತ್ತೊಂದು ನಾಯಿ, ಮತ್ತೆ ಮುಂದಕ್ಕೆ ಎಳಿಯುತ್ತಿತ್ತು. ಜ್ಯಾಡಿನಿಗೆ ನೋಡಿ ನೋಡಿ ಸಾಕಾಗಿ, ದನಿಯಾರ್ನ ಪಟಕ್ನ ನೆನಸ್ಕೊಂಡು, ಅಯ್ಯಪ್ಪೋ.. ಆ ನಾಯಿ ಬಂದ ಹಂಗ ಮಾಡುವುವಾಗ ನೀ ಎಲ್ಲಿ ಹಾಳಾಗಿ ಹೋಗಿದ್ದಿ ಅಂತ ಬೈತಾರನ್ನುದು ಗೊತ್ತಾಗಿ, ದೊಡ್ಡದೊಂದು ಕೋಲು ತಗೆದುಕೊಂಡು, ರಂಗಜ್ಜಿ ನಾಯಿಯ ಕುಂಡಿಮ್ಯಾಲೊಂದು ಏಟು ಹೊಡದ್ದಿದ್ದೆ ತಡಾ, ರಂಗಜ್ಜಿ ನಾಯಿ ತನ್ನ ಲಿಂಗವನ್ನು ಕಿತ್ತಕೊಂಡು ಸತ್ನೋ ಯಪ್ಪಾ ಅಂತ ಕಬರಗೆಟ್ಟು ಕಂಪೌಂಡ ಜಿಗದ ಓಡಿ ಹೋತು. ದನಿಯಾರ ನಾಯಿ ಕುಂಯ್ ಕುಂಯ್ ಅನಕೋತ, ತನ್ನ ಕಚ್ಚಿಯಿಂದ ಜಿನಗುತ್ತಿದ್ದ ರಕ್ತವನ್ನು ತನ್ನ ನಾಲಿಗೆಯಿಂದ ನೆಕ್ಕಿ ಸಮಾಧಾನ ಪಡುತ್ತಿತ್ತು.
ಅವ್ವಾರ ಅದ ಹೊಲ್ಯಾರ ರಂಗಜ್ಜಿ ನಾಯಿ ರೀ, ಅಂತ ಹೇಳಿದ್ದ ಕೇಳಿದ ದನಿಯಾನ ಹೆಂತಿ ಅಯ್ಯೋ ಎಲ್ಲ ಮುಟಚಟ್ಟ ಆತೋ ಅಂತ ಹಲಬತೊಡಗಿದ್ಳು. ಜ್ಯಾಡ್ಯಾನ ಕೈಕಾಲು ತರಾ ತರಾ ನಡಗತಿದ್ದು.
ಪ್ಯಾಟಿಗೆ ಹೋಗಿದ್ದ ದನಿಯಾ ಮನಿಗೆ ಬಂದ ಮೇಲೆ ಸುದ್ದಿ ಕೇಳಿ, ಊರಿಯಂತೆ ಉರಿಯತೊಡಗಿದ, ಜ್ಯಾಡ್ಯಾನನ್ನು ಜಾಡಿಸಿ ಒದ್ದು ಹಲಕಟ್ಟ ನನ್ನ ಮಗನೇ ಅದು ಬಂದ ಮಾಡುವಾಗ ನೀ ಏನ್ ಮಾಡ್ತಿದ್ದೆ ಎಂದು ಅಬ್ಬರಿಸಿದ.

ಕಡಿಮಿ ಜ್ಯಾತ್ಯಾರ ನಾಯಿ ಬಂದ, ಮ್ಯಾಲ ಜ್ಯಾತ್ಯಾರ ನಾಯಿನ ಹಾರಿ ಹೋಗೇತಂದ್ರ ಏನ್ ಲೆಕ್ಕ. ಹಿಂಗ ಬಿಟ್ರ ಇಂದ ನಾಯಿ ಬಂದ ಹಾರಿ ಹೋದಂಗ, ನಾಳೆ ಮತ್ತೊಂದು. ಥೂ..ಥೂ.. ನೆನಸ್ಕೊಂಡ್ರ ಮಹಾ ಹೆಸ್ಗಿ ಅನಸ್ತೈತಿ, ದನಿಯಾ ಬಾಲ ಸುಟ್ಟ ಬೆಕ್ಕಿನಂತೆ ಮನಿತುಂಬ ಅಡ್ಡಾಡತೊಡಗಿದ. ರಂಗಜ್ಜಿ ನಾಯಿಯಿಂದ ಬೆದೆ ನಿಲ್ಲಿಸಿಕೊಮಡ ತನ್ನ ನಾಯಿಯನ್ನು ದುರಗುಟ್ಟಿ ನೋಡಿ, ಅದನ್ನು ಹೋಗಿ ರಪಾ ರಪಾ ಹೊಡೆದ. ಅದು ನೋವಿನೊಂದಿಗೆ ಮತ್ತಷ್ಟು ನೋವು ಅನುಭವಿಸುತ್ತ ಮತ್ತೊಂದು ಕೋಣಿಯೊಳಗೆ ಹೋಗಿ ಅಡಗಿಕೊಂಡಿತು.
ಹೋಗರ್ಲೆ ಆ ಹಲಕ್ಕಟ್ಟ ಜ್ಯಾತಿ ಜನರ ನಾಯಿನ ಕೊಂದ ಹಾಕ್ರಿ, ಆ ರಂಗೀನ ನಾಳೆ ಮುಂಜ್ಯಾನೆದ್ದ ಕರ್ಕೊಂಡ ಬರ್ರೀ ಎಂದು ಕೊತಕೊತ ಕುದಿಯುತ್ತ ದನಿಯಾ ಆಳುಗಳಿಗೆ ಆಜ್ಞೆ ಮಾಡಿದ.

ರಂಗಜ್ಜಿ ನಡಗುವ ಚಳಿಯಾಗ ಗದಗದ ನಡಗಕೋತ, ದನಿಯಾರ ಮನಿ ಕಂಪೌಂಡನ್ಯಾಗ ಒಂದ ಮೂಲ್ಯಾಗ ನಿಂತ್ಕೊಂಡ್ಳು. ದನಿಯಾರ ಬರ್ತಿದ್ದಂಗ ಬಿಲ್ಲನಂತೆ ತನ್ನ ಹಣ್ಣಾದ ದೇಹವನ್ನು ಬಾಗಿಸಿ ಎರಡೂ ಕೈ ಜೋಡಿಸಿ ಅಡ್ಡ ಬಿದ್ದಿನ್ರೀ ನಿಮ್ಮ ಪಾದಕ್ಕ ಅಂತ ಹೇಳಕ್ಕೋತ ಎದರಿಗೆ ಆರಾಮ ಕುರ್ಚಿಮ್ಯಾಲ ಕುಂತ ದನಿಯಾರಗೆ ನಮಸ್ಕರಿಸಿದ್ಳು. ಲೇ ಮೂದಿಮೂಳಿ, ನಿನ್ನ ನಮಸ್ಕಾರಕ್ಕ ಕೈಗೆ ನನ್ನ ಚಪ್ಪಲಿ ಇಡಾ, ನಿನ್ನೆ ನಿನ್ನ ನಾಯಿ ಏನ್ ಮಾಡೇತ ಅನ್ನೂದ ಗೊತ್ತೈತಿಲ್ಲೋ… ಅಂತಾ ಹಲಕಟ್ಟ ನಾಯಿ ಸಾಕಿದ ನಿನಗ ಸಾಯಿರ ರೂಪಾಯಿ ದಂಡಾ ಹಾಕ್ತಿನಿ, ಮೂದಿಸೂಳಿ ಅಂತ ಕಣ್ಣು ಕೆಂಡದಂತೆ ಮಾಡಿಕೊಂಡು ದನಿಯಾ ಗುಡಗುಡು ಗುಡಗಿದ.

ತಪ್ಪ ತನ್ನ ನಾಯಿಯಿಂದ ಆದದ್ದು ಗೊತ್ತಿದ್ದ ರಂಗಜ್ಜಿಗೆ ದನಿಯಾರಿಗೆ ದುಸರಾ ಮಾತಾಡು ಮಾತಗಳೇ ಇಲ್ಲದಕ್ಕ ತುಟಿಪಿಟಕ್ಕ ಅನ್ನದೇ ನೆಲದ ಕಡೆಗೆ ಮೋತಿ ಮಾಡ್ಕೊಂಡ ಸುಮ್ಮ ನಿಂತಿದ್ಳು. ನಿನ್ನ ಹಲಕಟ್ಟ ನಾಯಿ ಸಿಕ್ಕ ಮ್ಯಾಲ ತುಂಡ ತುಂಡಾಗಿ ಕತ್ತರ್ಸಿ ಹದ್ದ ಕಾಗಿಗೆ ಹಾಕ್ತಿನಿ, ಇನ್ನೂ ಏನೇನೋ ಕೆಟ್ಟಕೆಟ್ಟ ಪದಗಳಿಂದ ದನಿಯಾರು ರಂಗಜ್ಜಿನ ಮತ್ತ ಅಕಿ ನಾಯಿನ ಬೈದು ಬೈದು ತಮ್ಮ ಸಿಟ್ಟು ಕಡಿಮಿ ಮಾಡ್ಕೊಂಡ್ರು, ಏನ್ ಗರಡ ಗಂಬದ ಗತೆ ನಿಂತಿ ಹೋಗ ಹೋಗಿನ್ನ ಅಂತ ದನಿಯಾರ ಆಳ ಮನಷ್ಯಾ ದನಿಯಾರ ಮಾತಿನ ಗತ್ತಿನ್ಲಿಯೇ ಗುಡಗಿದ. ರಂಗಜ್ಜಿ ದನಿಯಾರ ಕಡೆ ಬೈಸ್ಕೊಂಡ, ಮೋತಿ ವನಗಸ್ಕೊಂಡ ಮನಿಕಡೆ ತಿರಗಿದ್ಳು. ಸಾಯಿರ ರೂಪಾಯಿ ದಂಡಾ ಹೆಂಗ ಕೊಡ್ಲೋ ದ್ಯಾವ್ರ ಅಂತ ಕಣ್ಣೀರಿಡುತ್ತ ಮನೆ ಮುಟ್ಟಿದ್ಳು.


ಆ ನಾಯಿ ಹೆಣ ತರುಮಟಾ ನಿಂವ ಮನಿಗೆ ಬರಬ್ಯಾಡ್ರಿ, ಅದೆಲ್ಲಿ ಐತೋ ಹುಡಕ್ರಿ, ಅದನ ತುಂಡ ತುಂಡ ಕತ್ತರ್ಸಿ ತಗೊಂದ ಬರ್ರಿ, ತಗೋರಿ ಮನಷ್ಯಾಗ ಒಂದೊಂದ ಸಾವಿರ ರೂಪಾಯಿ ಕರ್ಚಿಗೆ ಇಟಗೋರಿ, ಅಂತ ದನಿಯಾ, ತಮ್ಮ ಆಳ ಮನಷ್ಯಾರಾದ ದುಂಡ್ಯಾಗ, ಜ್ಯಾಡ್ಯಾಗ ರೊಕ್ಕಾ ಕೊಟ್ರು.

ಯಪ್ಪಾ ನಮ್ದ ಏನ್ ನಶಿಬೋ ಮಾರಾಯಾ.. ದನಿಯಾರ ಮನಿ ಆಕಳ ದನಗೊಳ ಜೋಡಿ ದಿನಾ ಗುದ್ದ್ಯಾಡಿ ಸಾಕಾಗಿತ್ತು. ಇವತ್ತ ರಂಗಜ್ಜಿ ನಾಯಿ ಪುಣ್ಯಾದಿಂದ ಕೈಯಾಗ ಸಾವಿರೂಪಾಯಿ, ಹೊರಗ ಊರ ಊರ ಸುತ್ತು ಕೆಲಸಾ.. ನನಗಂತು ಸ್ವರ್ಗ ಸುಖಾ ಸಿಕ್ಕಾಂಗಾತು ಅಂತ ದುಂಡ್ಯಾ ಜ್ಯಾಡ್ಯಾನ ಮುಂಗೈಯ್ ಹಿಡ್ಕೊಂಡ ಕುಣದಾಡಿದ, ಲೇ ಹುಚಮೂಳಾ.. ಆ ನಾಯಿ ಏನಾರ ಸಿಗಲಿಲ್ಲಂದ್ರ ನಮ್ಮನ ಆ ನೀಚ ದನಿಯಾ ಕೊಂದ ಹಾಕ್ತಾನ, ಅಂತ ಜ್ಯಾಡ್ಯಾ ಖುಷಿಲೆ ಕುಣದಾಡ್ತಿದ್ದ ದುಂಡ್ಯಾಗನ ಕುಂಡಿಗೆ ಮುಳ್ಳ ಚುಚ್ಚಿದಂಗ ಮಾತಾಡಿದ. ಆಗ ದುಂಡ್ಯಾ ಹೌದಪಾ .. ಆ ಹಲಕಟ್ಟ ಹಂಗ ಮಾಡಿದ್ರೂ ಮಾಡಾಂವ್ನ. ಅದೇನಾರ ಆಗ್ಲಿ ಇವತ್ತ ಪಾರ್ವತಿ ಮನಿಗೆ ಹೋಗೂದ, ಒಂದ ಕಾಯಿ ಸೆರೆ ಕುಡಿಯೂದ, ಅಂತ ದುಂಡ್ಯಾ ತನ್ನ ಆಸೆಯ ಬುತ್ತಿಗಂಟು ಜ್ಯಾಡ್ಯಾನ ಮುಂದೆ ಬಿಚ್ಚಿಟ್ಟ. ಜ್ಯಾಡ್ಯಾನೂ ನಡಿ ನಡಿ ಬಾಳ ದಿನಾ ಆತು ಕುಡಿಲಾರ್ದ, ರಂಗಜ್ಜಿ ನಾಯಿ ಪುಣ್ಯಾದಿಂದ ಪಾರ್ವತಿ ಮನಿ ಬಾಗಲಾ ತಟ್ಟುನು ಅಂತ ಕಿಸಿಕಿಸಿ ಜ್ಯಾಡ್ಯಾ ಹಲ್ಲ ಕಿಸದ.

ಜ್ಯಾಡ್ಯಾ ಮತ್ತ ದುಂಡ್ಯಾ ಇಬ್ರೂ ಕುಡ್ಕೊಂಡ ಪಾರ್ವತಿ ಮನಿಗೆ ಹೋಗಿ, ತಾಲಾಗ ಒಂದ ಕಾಯಿ ಸೆರೆ ಕುಡದ, ಮತ್ತೊಂದೊಂದ ಕಾಯಿ ತಗೊಂದ ಊರ ಬಿಟ್ಟ ದೂರಿದ್ದ ಕೆಂಚವ್ವನ ಗುಡಿ ಹಿಂದ ಹೋಗಿ ಕುಂಡಿ ಊರಿದ್ರು. ಮನಿಯಿಂದ ಕಟಗೊಂದ ಹೋಗಿದ್ದ ಬುತ್ತಿ ಬಿಚಗೊಂಡ ತಿಂದ, ಬೇವಿನ ಗಿಡದ ನೆಳ್ಳಿಗೆ ಗಡದ ಬಾರ ಮಲಗಿ ನಿದ್ದಿ ಹೊಡಿಯಾಕ ಹತ್ತಿದ್ರು.

ಎಚ್ಚರಾದಾಗ ಸೂರ್ಯಾ ತಾಯಿ ಹೊಟ್ಯಾಗ ಹೋಗಿ,ಎರಡ ಮೂರ ತಾಸ ಆಗಿತ್ತ, ಅಲಾ ಇವನೌವ್ನ ಹೊತ್ತ ಮುನಗೇತಲ್ಲೋ.. ಜ್ಯಾಡ್ಯಾ ಅಂತ ದುಂಡ್ಯಾ ಕಪ್ಪರಸ್ಕೊಂದ ಎದ್ದ ಗಸಾಗಸಾ ಕಣ್ಣ ತಿಕ್ಕೋತ ಮೈ ಮೂರದ, ದನ್ಯಾರಿಗೆ ಏನ್ ಹೇಳ್ಬೇಕಪೋ ಮೊದಲ ಹೇಳು. ಮೊದಲ ದನಿಯಾ ಕಂತ್ರಿ ಬುದ್ದಿಯಾಂವ, ಯಾವಾಗ ಯಾವಾಗ ಎಲ್ಲೆಲ್ಲಿದ್ರಿ, ಏನೇನ ಮಾಡಿದ್ರಿ ಅಂತ ಕೇಳಿದ್ರ ಏನೇನ್ ಹೇಳ್ಬೇಕು? ಮೊದಲ ಹಂಚಗಿ ಹಕ್ಕೋ.. ಅಂತ ಜ್ಯಾಡ್ಯಾ ದುಂಡ್ಯಾನಿಗೆ ಅರ ನಿಶೆಯಲ್ಲಿ ಹೇಳುತ್ತಿದ್ದ. ಅವನೌವ್ನ ನಾಯಿ ಸಿಕ್ಕಿಲ್ಲ ಅಂತ ಹೇಳುನು, ಅಂತರಕಿಲೇ ಆ ಮಗಾ ನಮ್ಮನ್ನೇನ ಗುಂಡ ಹಾರಿಸಿ ಕೊಲ್ಲತಾನೇನ? ಅಂತ ದುಂಡ್ಯಾನೂ ಅರ ನಿಶೆಯಲ್ಲಿಯೇ ಗುಣಗಿದ.

ದನಿಯಾರ ಮನಿಗೆ ಬಂದಾಗ ಅವರು ಎಲ್ಲೋ ಹೊರಗ ಹೋಗ್ಯಾರ ಅನ್ನುದ ಗೊತ್ತಾಗಿ, ಅವ್ವಾರ ಇಂದ ಎಷ್ಟ ಹುಡಕ್ಯಾಡಿದ್ರೂ ಆ ಹೊಲಸ ನಾಯಿ ನಮ್ಮ ಕಣ್ಣಿಗೆ ಎಲ್ಲೂ ಬಿಳಲಿಲ್ಲರೀ.. ಒಂದಲ್ಲ ಎರಡಲ್ಲ ಮೂರನಾಕ ಊರ ಸೀಮಿ ಸುತ್ತಾಡಿದ್ರೂ.. ಸಿಗಲಿಲ್ಲ ಅಂತ ಜ್ಯಾಡ್ಯಾ ದನಿಯಾನ ಹೆಂತಿಗೆ ಒಂದ ಬುಟಾಳ ಮಾತ ಹೇಳಿದ. ಆದ್ರ ಆತ ನಾಳೆ ಅರ ಅದನ ಹುಡ್ಕೊಂಡ ಬರ್ರಿ ದನ್ಯಾರೂ ಅದರ ಸಮಂದ ಊಟಾ ನಿದ್ದಿ ಸರಿಯಾಗಿ ಮಾಡವಲ್ಲರು, ಭಾಳ ಮನಸಿಗೆ ತಗೊಂದಾರಂತ ದನಿಯಾನ ಹೆಂಡತಿ ಇಬ್ಬರಿಗೂ ಹೇಳುತ್ತ ಒಳಮನಿಗೆ ಹ್ವಾದ್ಳು. ಜ್ಯಾಡ್ಯಾ ಮತ್ತ ದುಂಡ್ಯಾ ಒಬ್ಬರ ಮೋತಿ ಒಬ್ಬರ ನೋಡಿ ಕಿಸಿಕಿಸಿ ನಕ್ಕೋತ ತಮ್ಮ ತಮ್ಮ ಮನಿ ಹಾದಿ ಹಿಡದ್ರು.

ದನಿಯಾ ಮನಿಗೆ ಬಂದ ಮ್ಯಾಲ ಅವ್ನ ಹೆಂಡತಿ ಜ್ಯಾಡ್ಯಾ ಮತ್ತ ದುಂಡ್ಯಾ ಹೇಳಿದ ಮಾತ ಇದ್ದಕಿದ್ದಂಗ ಹೇಳಿದ್ಳು. ಒಂದ ಪುಟಪೋಶಿ ನಾಯಿ ಹುಡಕಾಕ ಆಗವಲ್ದ ಅಂದ್ರ ಈ ನನ್ನ ಮಕ್ಕಳಿಗೆ ಏಸ ಜೋಡ ಕೊಳ್ಳಾಗ ಕಟ್ಟಬೇಕು ಅಂತ ಒಟಗುಡುತ್ತ, ಈ ನೀಚ ನಾಯಿಗೆ ಕೂಳ ಹಾಕಬ್ಯಾಡ್ರೀ , ನೀರೂ ಕೊಡಬ್ಯಾಡ್ರೀ, ಅಂತ ಆಜ್ಞೆ ಮಾಡಿದ್ರು. ಅವರಪ್ಪನ ತುಡಗಿಲೇ ದನಿಯಾನ ಮಗಳು ಆ ನಾಯಿಗೆ ಕದ್ದು ಮುಚ್ಚಿ ಊಟಾ, ನೀರು ಕೊಡುತ್ತಿದ್ಳು. ಆ ಒಂದು ಕಾರಣಕ್ಕೇ ಆ ನಾಯಿ ಬದುಕಿತ್ತು.


ದನಿಯಾನಿಂದ ಬೈಸ್ಕೊಂಡ ಬಂದ ಮ್ಯಾಲ ರಂಗಜ್ಜಿ ನಾಯಿ ಚಿಂತ್ಯಾಗ ಊಟಾ ನಿದ್ದಿ ಇಲ್ದ, ಆಡಮರಿಗಳಿಗೆ ಕಾಳುಕಡಿ ಇಡುವ ನೆನಪಿಲ್ಲದೇ, ಮಲಗಿದ್ದಲ್ಲಿಯೇ ಮಲಗಿಕೊಂಡಿದ್ದಳು. ನಡುರಾತ್ರಿ ಹೊತ್ತನ್ಯಾಗ ಇದ್ದಕಿದ್ದಂತೆ ತನ್ನ ಹಿರಿಮಗನಂತೆ ಇದ್ದ ತಾನು ಸಾಕಿದ ರಾಜಾ, ಬಾಗಿದಲ್ಲಿ ಬಂದ ನಿಂತ್ಕೊಂಡ ಕುಂಯ್ ಕುಂಯ್ ಅಂತ ರಾಗಾಮಾಡು ದನಿ ಕೇಳಿದ್ದ ತಡಾ, ರಂಗಜ್ಜಿ ಎರ್ಡ ಹೆಜ್ಯಾಗ ಹಸಗ್ಯಾಗಿಂದ ದಡಬಡಿಸಿಕೊಂಡ ಹೋಗಿ ಬಾಗ್ಲಾ ತಗದ್ಳು. ದೊಡ್ಡ ತಪ್ಪ ಬಾಡಿದಾರಗತೆ ರಾಜಾ ಸುಮ್ನ ನಿಂತಿತ್ತು, ಏ ಹುಚ್ಚಾ ಎಲ್ಲಿಗೆ ಹೋಗಿದ್ದಿ, ನನ್ನ ಒಂದನ್ನ ಬಿಟ್ಟ ಅಂತ ಅದರ ಮೋತಿಗೊಂದ ಪ್ರೀತಿ, ಅಕ್ಕರೆಯಿಂದ ಪಟಾಪಟಾ ಬಡೆದ್ಳು, ಆಗ ನಾಯಿ ಅಕಿ ಕೈಯಾ, ಮೋತಿ, ನೆಕ್ಕುತ್ತ ತಪ್ಪಿತಸ್ತನಂತೆ ಮೂಖರಾಗ ಹಾಡಿತು. ಏನ್ ಅನಾಹುತಾ ಮಾಡಿದಪೋ ನೀನು, ಒಂದ ತಟಗ ಸುಕಕ್ಕ ಇಡೀ ನಿನ್ನ ಜೀವನಾನ ಹಾಳ ಮಾಡ್ಕೊಂಡಿ ಎಂದು ಕಣ್ಣೀರಿಟ್ಟಳು. ತನ್ನ ತಾಯಿಯಂತಿದ್ದ ರಂಗಜ್ಜಿ ಕಣ್ಣಲ್ಲಿ ನೀರು ಉದರುದ ಕಂಡು ನಾಯಿನೂ ವೊ..ವ್‍ವ್ ಎಂದೂ ಕೂಗುತ್ತ ಒಂದೆರ್ಡ ಹನಿ ಕಣ್ಣಿರು ಹಾಕಿತು.

ಸುಮ್ನ ಇರ್ಲೆ ಬಾಯ ಮಾಡಬ್ಯಾಡ, ಅಂತ ರಂಗಜ್ಜಿ, ಅದರ ಕಪಾಳಿಗೊಂದ ಒಂದೇಟ ಹಾಕಿದ್ಳು. ಆಗ ನಾಯಿ ಸುಮ್ನ ಆಗಿ ಅಕಿ ತೊಡಿಮ್ಯಾಲ ಮೋತಿ ಇಟ್ಟ ಸಣ್ಣ ಮಗುವಿನಂಗ ಮಕ್ಕೊಂತು. ರಂಗಜ್ಜಿ ಅದರ ತಲಿ ಸವರುತ್ತ, ಮೈಮ್ಯಾಲ ಕೈಯಾಡಸುತ್ತ, ಬಿಟ್ಟು ಬಿಡದ ರಂಗಜ್ಜಿ ಅಳುತಿದ್ಳು.
ಥಟ್ಟನೇ ಎದಾಕಿನ ರಂಗಜ್ಜಿ ಅಯ್ಯೋ.. ನನ್ನ ರಾಜಾ ನೀನು ಎರ್ಡ ದಿನದಿಂದ ಊಟಾನ ಮಾಡಿಲ್ಲ. ನಿನಗ ಹೊಟ್ಟಿ ಹಸದಿರ್ಬೇಕು ಅಂದಾಕಿನ ನಾಕೈದ ಕಟಕ ರೊಟ್ಟಿ, ಕಟಾಕಟಾ ಮುರದ, ಒಂದ ತಾಟಿಗೆ ಹಾಕಿದ್ಳು. ಅದರ ಮ್ಯಾಲ ಒಂದ ಚರಗಿ ಆಡಿನ ಹಾಲ ಸುರ್ದ, ತಿನ್ನು ಅಂತ ನಾಯಿಗೆ ಸನ್ನಿ ಮಾಡಿದ್ಳು. ನಾಯಿ ಅಕಿ ಮೋತಿ ಹುಳುಹುಳು ನೋಡ್ಕೋತ ನಿಂತಿ. ತಿನ್ನ ತಿನ್ನ ಹೊಟ್ಟಿ ಹಸ್ಕೊಂಡಿ ಅಂತ ಅದರ ತೆಲಿಮ್ಯಾಲ ಕೈಯಾಡಿಸದ್ಳು. ಆಗ ನಾಯಿ ಮೆಲ್ಲಕಾಸ ಕುಟಮ್ ಕುಟಮ್ ಅಂತ ರೊಟ್ಟಿ ತಿನ್ನಾಕ ಹತ್ನಾಯಿ ರೊಟ್ಟಿತಿನ್ನುದ ಆದ ಮ್ಯಾಲ ಬಾಗಲ ಹೊರಗ ಹೋಗಿ ಕಾಲ ಎತ್ತಿ ಉಚ್ಚಿ ಹೋದು, ಅಂಗಳದಲ್ಲಿ ನಿಂತು ಆ ಕಡೆ –ಈ ಕಡೆ ನೋಡಿ ಬೊ..ವ್ ವ್ ಎಂದು ರಾಗ ತಗೆಯಿತು. ಲೇ ಬೆಬರ್ಸಿ ಹಳೆ ಬೆಬರ್ಸಿ ಮೊದಲ ಒಳಗ ಬಾ, ಅಂದಾಕಿನ ರಂಗಜ್ಜಿ ನಾಯಿ ಕಿವಿ ಹಿಡ್ಕೊಂಡ ದರಾ ದರಾ ಎಳ್ಕೊಂಡ ಒಳಗ ಹ್ವಾದ್ಳು. ನೀ ಮಾಡಿದ್ದ ಗನಾಂದಾರಿ ಕೆಲಸಕ್ಕ ನಿನ್ನ ಮ್ಯಾಲ ದೊಡ್ಡ ಅಪಾದನೆ ಐತಿ, ಅದು ಗೊತ್ತಿದ್ದು ಗೊತ್ತಿದ್ದು ಹೊರಗ ನಿಂತ ಯಾಂವ ಏನ್ ಮಾಡ್ತಿರಿ ಅನ್ನುವಾರಗತೆ ಕೂಗಬ್ಯಾರೆ ಹೊಡಿಯಾಕತ್ತಿಯಾ? ಎಂದು ನಾಯಿಯನ್ನು ಬೈಯುತ್ತ ರಂಗಜ್ಜಿ ಬಾಗಿಲ ಮುಚ್ಚಿದ್ಳು. ನಾಯಿಗೆ ತನ್ನ ಕಾಲದಸಿ ಒಂದ ತಟ್ಟ ಹಾಸಿದ್ಳು. ಅದು ಅಲ್ಲೇ ಗುಡಕ್ನ ಉಳ್ಳಿ ನಿದ್ದಿ ಹೊಡಿಯಾಕತ್ತಿ, ರಂಗಜ್ಜಿನೂ ರಾಜ ಹತ್ತಿರದಲ್ಲಿದ್ದ ಕಾರಣದಿಂದ ಅವಳ ಕಣ್ಣರೆಪ್ಪೆಗಳೂ ಲಗೂನ ಮುಚ್ಚಿದ್ವು.

‘ಏ ಮುದಕೀ ಬಾಗ್ಲಾ ತಗಿ, ತಗಿತಿಯೋ ಒದ್ದ ಬಾಗ್ಲಾ ಮುರಿಯಂದೋ’ ರಂಗಜ್ಜಿ ಅಂಗಳದಾಗ ನಿಂತ ದನಿಯಾರ ಆಳ ಮನಷ್ಯಾ ಜ್ಯಾಡ್ಯಾ ಒಂದ ಸವ್ನ ಗಂಟ್ಲಾ ಹರ್ಕೋತಿದ್ದ. ರಂಗಜ್ಜಿ ಮಲಗಿದಲ್ಲಿಯೇ ನಡುಗಿದ್ಳು, ತನ್ನ ಕಾಲ ದಸಿ ಇದ್ದ ನಾಯಿ, ಜ್ಯಾಡ್ಯಾ ಕೂಗಿದ ದನಿ ಕೇಳಿ “ನೀ ಯಾಂವ ಲೇ ನಮ್ಮ ಅಂಗಳದಾಗ ಬಂದ ಮುಂಜಮುಂಜಾನೇ ಕೂಗ್ಯಾಡಾಂವಾ” ಅನ್ನುವವರಂತೆ ಬೌವಗುಡುತೊಡಗಿತು. ಸುಮ್ನಿರೋ ಅವ್ರು ನಿನ್ನ ಸಾಯಿಸ್ತಾರೋ ಎಂದು ಗಳಗಳಾ ಅಳಕೋತ ನಾಯಿಯನ್ನು ಮತ್ತೊಮ್ಮೆ ತಬ್ಬಿಕೊಂಡು ಅಳುತ್ತಲಿದ್ಳು. ರಂಗಜ್ಜಿ ಲಗೂನ ಬಾಗ್ಲಾ ತಗಿಲಾಲಾರ್ದಕ್ಕ ಪುಂಡ್ಯಾ ಜಾಡ್ಸಿ ಅಕಿ ಮನಿ ಬಾಗ್ಲಾ ಒದ್ದಾ. ಮೊದಲ ಹುಳಕ ಹಿಡದ ಮನಿ ಬಾಗ್ಲಾ, ದುಂಡ್ಯಾನ ಬಲವಾದ ಶಕ್ತಿಗೆ ಮುರ್ಕೊಂದ ಪಳ್ ಅಂತ ಬಿತ್ತು. ಆಗ ನಾಯಿಗೆ ಎಲ್ಲಿತ್ತೋ ಸಿಟ್ಟ ಗೊತ್ತಿಲ್ಲ. ಮಗನಾ ನಮ್ಮ ಮನಿ ಬಾಗ್ಲಾ ಮುರಿತಿಯಾ ಅನ್ನುವ ರೀತಿಯಲ್ಲಿ ಒಮ್ಮಿಂದೊಮ್ಮೆಲೇ ದುಂಡ್ಯಾನ ಮ್ಯಾಲ ಎರಗಿ ಅವ್ನ ಕೈ-ಮೈ ಗಪಾಗಪಾ ಹಿಡಿಯತೊಡಗಿತು. ತಳಗ ಬಿದ್ದ ಒದ್ದಾಡುತ್ತಿದ್ದ ದುಂಡ್ಯಾ ಒಂದ ಸವ್ನ ಸತ್ನೋ.. ಯಪ್ಪಾ.. ಯಾರಾದ್ರೂ ಉಳಸ್ರೋ.. ರಂಗಜ್ಜೀ.. ನಾಯಿ ಕರ್ಕೋ ಯವ್ವಾ ಎಂದು ಹಲಬತೊಡಗಿದ. ಆಗ ಮಾರೂದ್ದ ದೂರದಲ್ಲಿದ್ದ ಜ್ಯಾಡ್ಯಾ ತನ್ನ ಕೈಯಾಗಿದ್ದ ದೊಡ್ಡ ಕಬ್ಬಿನ ರಾಡ ತಗೊಂದ ನಾಯಿ ಬೆನ್ನಿಗೊಂದು ಹಾಕಿದ. ನಾಯಿ ಆಗ ದುಂಡ್ಯಾನ ಬಿಟ್ಟ ಜ್ಯಾಡ್ಯಾನ ಮ್ಯಾಲ ಎರಗಿ ಬಲ್ಲಂಗ ಕಡಿತು. ಅಷ್ಟೊತ್ತಿಗಾಗ್ಲೆ ದನಿಯಾ ಕೈಯಾಗೊಂದ ಬಂದೂಕ ಹಿಡ್ಕೊಂಡ ಬಂದಿದ್ದ. ನೇರವಾಗಿ ಗುರಿ ಇಟ್ಟ ದಡಮ್ ಅಂತ ಒಂದ ಗುಂಡು ನಾಯಿ ಹೊಟ್ಟಿಗೆ ಹೊಡೆದ. ನಾಯಿ ಮಾರೂದ್ದ ದೂರ ಸರಿದು ಬಿದ್ದು, ಲಟಾಪಟಾ ಒದ್ದಾಡುತ್ತ, ಜೀವ ಬಿಟ್ಟಿತು. ಆಗ ದನಿಯಾ ದೊಡ್ಡ ಸಾಮ್ರಾಜ್ಯವನ್ನು ಗೆದ್ದವರಂತೆ ಗೆಲವಿನ ನಗೆ ಬೀರ್ಕೋತ ಹ್ವಾದ. ರಂಗಜ್ಜಿ ಅಂಗಳದಲ್ಲಿ ಅನಾಥವಾಗಿ ಬಿದ್ದ ನಾಯಿಯನ್ನು ತಬ್ಬಿಕೊಂಡು ಮುಗಿಲು ಹರಿದು ಬೀಳುವಂತೆ ಕಿರಚುತ್ತ, ಅಳತೊಡಗಿದಳು.
ದುಂಡ್ಯಾ ಮತ್ತ ಜ್ಯಾಡ್ಯಾ ಸತ್ತ ನಾಯಿ ಕಾಲಿಗೆ ನೂಲಿನ ಹಗ್ಗಾ ಕಟ್ಟಿ, ಅದನ ದರಾದರಾ ಓನ್ಯಾಗ ಎಳ್ಕೋತ ಹೋಗುದನ್ನ ಊರ ಜನರೆಲ್ಲ ನಿಂತ ನೋಡ್ತಿದ್ರು. ಆಗ ರಂಗಜ್ಜಿ ಅಂಗಳದಲ್ಲಿ ಕುಸಿದು ಕುಂತಳು.


ದನಿಯಾಗ ರಂಗಜ್ಜಿ ನಾಯಿನ ಕೊಂದ್ರೂ ಅವ್ನ ಸಿಟ್ಟ ಇನ್ನ ಕಮ್ಮಿ ಆಗಿರಲಿಲ್ಲ. ತಾನು ಲಕ್ಷಾನಗಟ್ಟಲೇ ರೊಕ್ಕಾ ಸುರ್ದ ಮನಿ ಮಗಳಂಗ ತಿನಿಸಿ, ಉಣಿಸಿದ ತನ್ನ ನಾಯಿ ಹಿಂಗತಿ ಬೆದಿಗೆ ಬಂದು, ಕಡಮಿ ಕುಲದ ಮಂದಿ ನಾಯಿ ನಜೋಡಿ ಇಂತಾ ಹಾದ್ರಾ ಮಾಡ್ತೈತಿ ಅಂತ ಕನಸ ಮನಸನ್ಯಾಗೂ ಅಂದ್ಕೊಂಡಿರಲಿಲ್ಲ. ಯಾವಾಗ ರಂಗಜ್ಜಿ ನಾಯಿ ಜೋಡಿ ತನ್ನ ನಾಯಿ ಹಾದ್ರಕ್ಕ ಇಳಿತೋ ಅಂದ ದನಿಯಾನ ಎದಿಯಾಗಿದ್ದ ಅದರಮ್ಯಾಲಿನ ಪ್ರೀತಿಯೂ ಸತ್ತು ಹೋತು. “ಅದಕ್ಕ ಕೂಳಾ ನೀರಾ ಕೊಡದ ಸಾಯಿಸಬ್ಯಾಡ್ರೀ ಯಾರಿಗಾರ ಕೊಟ್ಟ ಬಿಡ್ರೀ” ಅಂತ ದನಿಯಾನ ಹೆಂಡತಿ ದನಿಯಾಗ ದೈನಾಸಬಿಟ್ಟ ಹೇಲಿದ್ಳು. ಹಿಂತಾ ಹಲಕಟ್ಟ ನಾಯಿನ ಮನಿಯಾಗ ಇಟಗೊಳ್ದ ಬ್ಯಾಡ ಅಂತ ದನಿಯಾ ತನ್ನ ಆಳ ಮನಷ್ಯಾ ಜ್ಯಾಡ್ಯಾ ಆ ನಾಯಿನ ಕೊಟ್ಟು ಅದರ ಸಂಬಂಧಾ ಕಳಕೊಂಡ.
ಜ್ಯಾಡಿನಿಗೆ ದನಿಯಾರು ಲಕ್ಷಾನೂಗಟ್ಟಲೇ ಬೆಲೆಬಾಳು ನಾಯಿನ ಕೊಟ್ಟದ್ದು ಇಡೀ ಊರಿಗೂರೇ ಮಾತಾಡತೊಡಗಿತು. ಏನೋ ಜ್ಯಾಡಪ್ಪಾ ನಿನ್ನ ರೊಟ್ಟಿ ತುಪ್ಪದಾಗ ಬಿತ್ತು, ಒಂದ ಕುನ್ನಿಗೆ ಹತ್ತ ಹದಿನೈದು ಸಾವಿರ ಕೊಟ್ಟ ಕರಿದಿ ಮಾಡ್ತಾರ.. ಅಂತ ನಾಯಿ ಬಗ್ಗೆ ಜನ ಮಾತಾಡಿದಾಗ ಜಾಡ್ಯಾನಿಗೆ ಹಿಗ್ಗೋ ಹಿಗ್ಗು.
ಇದು ಹಾಕು ನಾಯಿ ಮರಿಗೆ ಸಿಕ್ಕಾಪಟಿ ರೊಕ್ಕ ಬರ್ತೈತಂತಲ್ಲರೀ ಊರ ಮಂದಿಯಲ್ಲ ನನಗ ಹಿಂಗಿಂಗ ಕೇಳ್ತಾರ, ಹೌದೇನ್ರೀ ಅಂತ ಜ್ಯಾಡ್ಯಾನ ಹೆಂತ ಹಿಗ್ಗಿಸತ್ತ ಕೇಳಿದಾಗ ಜಾಡ್ಯಾ ಹೌದೌದು ಅಂತ ಗೋನು ಹಾಕಿದ.
ಹಿಂಗಾಗಿ ಜ್ಯಾಡ್ಯಾ ತಾನು ತಿನ್ನು ಊಟಾ ಬಿಟ್ಟ ಮದಲ ನಾಯಿಗೆ ಹಾಕ್ತಿದ್ದ. ನಾಯಿ ಜ್ಯಾಡ್ಯಾ ಹಾಕಿದ ರೊಟ್ಟಿ ಪಲ್ಯಾ ಮೊದ ಮೊದಲು ತಿನ್ನಾಕ ಹಿಂದ ಮುಂದ ನೋಡ್ತಿ, “ಯವ್ವಾ ತಾಯಿ.. ಇದನೇನ ದನಿಯಾರ ಮನಿ ಮಾಡಿಯೇನ್, ನಿನಗ ಬ್ರೆಡ್ಡಾ, ಬಿಸ್ಕಿಟಾ, ಚಪಾತಿ, ತುಪ್ಪಾ, ಸಕ್ಕರಿ ಹಾಕಾಕ, ನಾವೂ ಇದ ಕಟಕ ರೊಟ್ಟಿ, ನುಚ್ಚಾ, ತಿಂತಿವಿ, ನೀನೂ ಇದನ ತಿನ್ನವ್ವಾ” ಜ್ಯಾಡ್ಯಾ ನಾಯಿ ತೆಲಿಮ್ಯಾಲ ಕೈಯಾಡಿಸುತ್ತ ಅದಕ್ಕ ವಿನಂತಿ ಮಾಡ್ಕೊಂಡ. ಜ್ಯಾಡ್ಯಾನ ಮೋತಿ ನೋಡ್ಕೋತ ಒಂದೊಂದ ತುತ್ತ ನಾಯಿ ತಿನ್ನಾಕ ಹತ್ತಿ, ಆಗ ಜ್ಯಾಡ್ಯಾ ಆನಂದಿತನಾದ.

ದಿನಾ ಕಳದಂಗ ನಾಯಿ ಹೊಟ್ಟಿ ದೊಡ್ಡದಾಗಾಕ ಹತ್ತಿ. ಇದರ ಹೊಟ್ಯಾಗ ಐದಾರ ಮರಿ ಇರ್ಬೇಕು, ಒಂದ ಮರಿಗೆ ಹತ್ತ ಸಾವಿರಾದ್ರೂ ಐದಕ್ಕ ಐವತ್ತ ಸಾವಿರ ಅಕ್ಕೈತಿ ಅಂತ ಜ್ಯಾಡ್ಯಾ ಮತ್ತ ಅವ್ನ ಹೆಂತೆ ಲೆಕ್ಕಾಚಾರ ಮಾಡಿದ್ರು

ಅವತ್ತ ಮುಂಜಾನೆ ನಾಯಿ ನಾಕ ಮರಿಗೆ ಜನ್ಮಾ ಕೊಟ್ಟಿತ್ತು. ಮೂರು ಹೆಣ್ಣ ಕುನ್ನಿಗಳು ಒಂದ ರೂಪಾ, ಒಂದ ಬಣ್ಣಾ, ಒಂದ ನಮೂನಿ ಇದ್ದವು. ಆದ್ರ ಗಂಡ ಕುನ್ನಿ ಒಂದ ಬ್ಯಾರೆ ಬಣ್ಣದ್ದು ಇತ್ತು. ಜ್ಯಾಡ್ಯಾನಿಗೆ ನಾಯಿ ಇಳದದ್ದು ದೊಡ್ಡ ಸಂಭ್ರಮದಂತೆ ಅನಿಸಿತು. ಓನ್ಯಾಗಿದ್ದವ್ರು ಸಣ್ಣಾವ್ರು, ದೊಡ್ಡಾವ್ರು, ಹೆಂಗಸ್ರು,ಗಂಡಸ್ರು ಎಲ್ಲಾರೂ ಆ ನಾಯಿ ಮರಿಗಳಿಗೆ ತಮ್ಮ ಕೈಯಾಗಿದ್ದ ತಿನಸೂದು, ಉಣಸೂದು ಮಾಡ್ತಿದ್ರು. ಎಲ್ಲಾರ ಕೈಯಾನ ಅನ್ನದ ಅಗಳ ತಿಂದ ನಾಯಿ ಕುನ್ನಿಗೊಳು ದಿನಾ ಕಳದಂಗ ದೊಡ್ಡು ಆದ್ವು.
ರಂಗಜ್ಜಿ ಮಟಾಮಟಾ ಮದ್ಯಾನದಾಗ ತೋಳಾಗ ಹರದಿದ್ದ ತನ್ನ ಕುಬಸಕ್ಕ ಸೂಜಿದಾರ ಪೋನಿಸಿ ಚಿಟಗ ಹೊಲಗಿ ಹಾಕಾಕ ಹತ್ತಿದ್ಳು. ಅಂಗಳದಾಗ ನಿಂತಕೊಂಡ ನಾಯಿ ಕುನ್ನಿ ‘ಒವ್ ಒವ್ ಒವ್’ ಅಂತ ಒದರಾಕ ಹತ್ತಿತ್ತು. ರಂಗಜ್ಜಿ ಸೂಜಿದಾರ ಅಲ್ಲೇ ಕೈಬಿಟ್ಟ ಮೆಲ್ಲಕಾಸ ಹೊರಗ ಬಂದ್ಳು. ಥೇಟ್ ರಾಜನಂತೆ ಕಣ್ಣು, ಮೂಗು, ಬಣ್ಣ ರೂಪ ಇದ್ದ ನಾಯಿ ಮರಿ ನೋಡಿದ ರಂಗಜ್ಜಿ ನಕ್ಕೊಂತ ಮ್ಯಾಲ ಎತಗೊಂದ ಮುದ್ದಮಾಡಾಕ ಹತ್ತಿದ್ಳು. ಅಯ್ಯೋ ದೇವ್ರ ನೋಡಾಕ ನಮ್ಮ ರಾಜಾನ ಗತೆನ ಐತಿಲ್ಲಾ ಇದು ಅಂತ ರಂಗಜ್ಜಿ ಹಿಗ್ಗಿದ್ಳು. ಕೊಡಬೇ ರಂಗಜ್ಜಿ ಅದು ನಮ್ಮ ನಾಯಿ ಕುನ್ನಿ ಅಂತ ಜ್ಯಾಡ್ಯಾ ಹಿಂದಿನಿಂದ ಬಂದು ದನಿಗರೆದ. ರಂಗಜ್ಜಿ ಹಾಂ ಹೂಂ ಅನ್ನದೇ ಜ್ಯಾಡ್ಯಾನ ನೋಡ್ಕೋತ ನಿಂತ್ಳು. ಜ್ಯಾಡ್ಯಾ ಅದ್ಯಾಕೋ ಜ್ಯಾಡ್ಯಾ ಅಂದು ರಂಗಜ್ಜಿ ಮುಂದ ತಲೆ ತಗ್ಗಿಸಿದ.

ದನ್ಯಾರ ನನಗ ನಾಯಿ ಕೊಟ್ಟಾರಲ್ಲಾ ಅದರ ಕುನ್ನಿ ಇದು. ನಿಮ್ಮ ನಾಯಿಗೆ ಹುಟ್ಟಿದ್ದು, ನೋಡಾಕ ಹಂಗ ಐತಿ, ಇದ ಬಾಳ ಬೆರಿಕಿ ಐತೆವ್ವಾ, ಹೆಂಗರ ಕಣ್ಣ ತಪ್ಪಿಸಿ ಸನೆ ಅಲ್ಲಾ ಸಾರಲ್ಲ ನಿಮ್ಮ ಮನಿಕಡೆಗೆ ಬಂದೈತಿ ನೋಡ ಅನಕೋತ ರಂಗಜ್ಜಿ ಕೈಯಾಗಿದ್ದ ಕುನ್ನಿಯನ್ನು ಎಳೆದುಕೊಳ್ಳತೊಡಗಿದ, ಆ ಕುನ್ನಿ ಹಟ ಹಿಡಿದು ಬರಲಾರೆ ಅಂತ ರಂಗಜ್ಜಿಯ ಮೈಯೊಳಗೆ ಅಡರತೊಡಗಿತು, ಜ್ಯಾಡ್ಯಾ ಕಸುವಿನಿಂದ ಅದನ್ನು ರಂಗಜ್ಜಿಯ ಕೈಗಳಿಂದ ಕಿತ್ತುಕೊಂಡು ತನ್ನ ಮನೆಯತ್ತ ಹೆಜ್ಜೆ ಬೆಳಿಸಿದ. ನಾಯಿ ಕುಣ್ಣಿ ಒಂದೇ ಸಮನೇ ಕುಂಯ್ ಕುಂಯ್ ರಾಗ ಎಳೆಯುತ್ತ, ಜ್ಯಾಡ್ಯಾನ ಕೈಮ್ಯಾಲೆ ಕುಳಿತು ತಿರುತಿರುಗಿ ರಂಗಜ್ಜಿಯನ್ನು ನೋಡುತ್ತಿತ್ತು.
ನಮ್ಮ ರಾಜಾ ಮತ್ತ ಹುಟ್ಟಿ ಬಂದಾನ ಅಂತ ರಂಗಜ್ಜಿ ತನ್ನ ಮೋತಿ ತುಂಬ ನಗಿ ತುಂಬ್ಕೊಂಡ್ಳು. ಅಕಿ ನಗಿವಳಗ ಕಣ್ಣೀರು ಹೊರಚಿಮ್ಮುತ್ತಿದ್ದವು.


✍️ ಕಥೆಗಾರರು: ತಿರುಪತಿ ಭಂಗಿ, ಫೋನ್ 6363115463