- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
“ಪ್ರಜೆಗಳು ಪ್ರಭುಗಳಂತೆ ಇರುವುದೇ ಪ್ರಜಾಪ್ರಭುತ್ವ” ಎಂಬ ಮಾತಿಗೆ ನಾಂದಿ ಹಾಡಿದವರು ಭಕ್ತಿ ಭಂಡಾರಿ ಬಸವಣ್ಣನವರು.ಹನ್ನೆರಡನೆ ಶತಮಾನ ಎಂದರೆ ಥಟ್ ಎಂದು ನೆನಪಾಗುವುದು ವಚನ ಚಳವಳಿ,ಬಸವಣ್ಣ, ಅನುಭವ ಮಂಟಪ, ಅಕ್ಕಮಹಾದೇವಿ. ವಚನಸಾಹಿತ್ಯ ಎಂದರೆ ಬಸವಣ್ಣ ಅವರ ಹೆಸರೇ ನೆನಪಾಗುವುದು. ಪ್ರಾಪಂಚಿಕ ಮಟ್ಟದಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ಸುಧಾರಣೆಗಳ ,ಮೂಲಕ ಗಮನ ಸೆಳೆದವರು ಬಸವಣ್ಣ. ಭಾರತದ ಪ್ರಪ್ರಥಮ ವೈಚಾರಿಕಕ್ರಾಂತಿ ಪುರುಷರಾಗಿ, ಪಾಶ್ಚಾತ್ಯ ದೇಶ ಧರ್ಮ, ಸಂಸ್ಕೃತಿ, ಸಾಹಿತ್ಯಗಳಿಗೆ ಕಾಯಕಲ್ಪ ಚಿಕಿತ್ಸೆ ಮಾಡಿದ ಮಾರ್ಟಿನ್ ಲೂಥರ್ ಹಾಗೆ ಇವರೂ ಕೂಡ ಹನ್ನೆರಡನೆ ಶತಮಾನದಲ್ಲಿ ಸಮಾಜೋ-ಧಾರ್ಮಿಕ ಕ್ರಾಂತಿಗೆ ಮಾಡುತ್ತಾರೆ ಆದ ಕಾರಣ.
“Whatever legends may say about Basavsanna the fact is fully clear that he was the first Indian free thinker, he might be called the Luther of India”.
ಎಂದು Arther Mil ರವರು ಬಸವಣ್ಣನವರನ್ನು ಕುರಿತು ಹೇಳಿದ್ದಾರೆ.
ಅರಿಸ್ಟಾಟಲ್: “ರಾಜ್ಯವು ತನಗಾಗಿ ತಾನು ಆಯ್ಕೆ ಮಾಡಿಕೊಂಡಿರುವ ಜೀವನ ಮಾರ್ಗವೇ ಸಂವಿಧಾನ ಎಂದು ಹೇಳುವಂತೆ ಬಸವಣ್ಣನವರು ತಮಗೆ ಸೂಕ್ತ ಅನ್ನಿಸಿದ ಮಾರ್ಗವನ್ನು ಕಂಡುಕೊಂಡವರು. ಸಂವಿಧಾನವು ಒಂದು ರಾಷ್ಟ್ರದ ಆಡಳಿತವನ್ನು ನಿರ್ದೇಶಿಸುವ ದಿಕ್ಸೂಚಿಯಿದ್ದಂತೆ’’ ಎಂದು ಹೇಳುತ್ತಾರೆ.
ಅನುಭವ ಮಂಟಪದ ಮೂಲಕ ಸಮಾಜೋ-ಧಾರ್ಮಿಕ ಹಿನ್ನೆಲೆಯಲ್ಲಿ ಜಗತ್ತಿನ ಮೊಟ್ಟ ಮೊದಲ ಸಂಸತ್ ಸ್ಥಾಪಿಸಿ ವಿವಿಧ ಪ್ರಕಾರದ ಕಾಯಕ ಜೀವಿಗಳ ಸಮಾಜವನ್ನು ಪ್ರತಿನಿಧಿಸುವ 770 ಶರಣ, ಶರಣೆಯರನ್ನು ಕೂಡಿದ ಪ್ರಜಾಪ್ರಭುತ್ವ ನೆಲೆಯಲ್ಲಿ ಸೃಷ್ಟಿಸಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತೀಕವಾದ ಚರ್ಚೆಗಳನ್ನು ಅಲ್ಲಿ ಏರ್ಪಡಿಸುವ ಮೂಲಕ ಹೊಸ ಜೀವನ ವಿಧಾನಗಳನ್ನು ಕಂಡು ಹಿಡಿದರು.
ನಟವರ ಜನಾಂಗದ ಮೂಲದ ಮಹಾಜ್ಞಾನಿ ಅಲ್ಲಮಪ್ರಭುಗಳನ್ನು ಅನುಭವ ಮಂಟಪದ ಶೂನ್ಯ ಸಿಂಹಾಸನಾಧಿಕಾರಿಯನ್ನಾಗಿ ಮಾಡಿ ವಿಶ್ವದ ಮೊದಲ ಸ್ಪೀಕರ್ ಹುದ್ದೆಯನ್ನು ಇವರಿಗೆ ಆದರ ಪೂರ್ವಕವಾಗಿ ನೀಡಿ ಗೌರವಿಸಲಾಗಿತ್ತು.
ಪ್ರಥಮತಃ ಬಸವಣ್ಣನವರು ಭಾರತದ ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ . ಮ್ಯಾಗ್ನಾಕಾರ್ಟ ಒಪ್ಪಂದಕ್ಕಿಂತ ಅರ್ಧ ಶತಮಾನಕ್ಕಿಂತ ಹಿಂದೆಯೇ ಕಲ್ಯಾಣದಲ್ಲಿ ಇಂಥದ್ದೊಂದು ಪ್ರಯತ್ನ ಮಾಡಿ ಸಮಾಜಸುಧಾರಣೆಗೆ ನಾಂದಿ ಹಾಡಿದವರು.ಆಧುನಿಕ ಕಾಲಘಟ್ಟದಲ್ಲಿ ವಿಶ್ವಸಂಸ್ಥೆ 1948 ರಲ್ಲಿ ಮಾನವಹಕ್ಕುಗಳ 30 ಅಂಶಗಳನ್ನು ಘೋಷಿಸಿತು ಬಸವಣ್ಣನವರು ವಚನಗಳಲ್ಲಿ ಈ ಎಲ್ಲಾ ಅಂಶಗಳನ್ನು12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಕಲ್ಪನೆಯಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿದ್ದುದು ಅವರ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಅನುಭವಮಂಟಪದಲ್ಲಿ ಸ್ತ್ರೀ -ಪುರುಷ ಇಬ್ಬರಿಗು ಸಮಾನ ಅವಕಾಶ ಮತ್ತು ಗೌರವವನ್ನು ಬಸವಣ್ಣನವರು ಅಂದೇ ಕಲ್ಪಿಸಿಕೊಟ್ಟಿದ್ದರು.
ಬಸವಣ್ಣನವರ ಪ್ರಜಾಪ್ರಭುತ್ವ ಕಲ್ಪನೆಯ ವಚನಗಳು
“ವ್ಯಾಧನೊಂದು ಮೊಲವ ತಂದೆಡೆ ಸಲುವ ಹಾಗಕ್ಕೆ ಬೆಲೆಗೈವರಯ್ಯಾ ನೆಲನಾಳ್ವನ ಹೆಣನೆಂದರೆ ಒಂದಡಿಕೆಗೆ ಕೊಂಬರಿಲ್ಲ ನೋಡಯ್ಯಾ” ಎಂದು ಪ್ರಭುತ್ವದ ಮಹತ್ವವನ್ನು ಹೇಳಿ ತಕ್ಷಣವೇ ಪ್ರಭುವಿಗಿಂತ ಪ್ರಜೆಗಳೆ ದೊಡ್ಡವರು ಎನ್ನುತ್ತಾರೆ. ರಾಜ ಎಲ್ಲರಂತೆ ವ್ಯಕ್ತಿ ಮಾತ್ರ ಕರ್ತವ್ಯ,ಅಧಿಕಾರ,ಜವಾಬ್ದಾರಿ ಎಲ್ಲರಿಗೂ ಇರುತ್ತದೆ ಅದನ್ನು ನಿಭಾಯಿಸಬೇಕು ಎನ್ನುತ್ತಾರೆ.
ಎಲ್ಲರೂ ವೀರರು, ಎಲ್ಲರೂ ಧೀರರು
ಎಲ್ಲರೂ ಮಹಿಮರು, ಎಲ್ಲರೂ ಪ್ರಮಥರು
ಕಾಳಗದ ಮುಖದಲ್ಲಿ ಕಾಣಬಾರದು
ಓಡುವ ಮುಖದಲ್ಲಿ ಕಾಣಬಹುದು
ನಮ್ಮ ಕೂಡಲಸಂಗನ ಶರಣರು ಧೀರರು
ಉಳಿದವರೆಲ್ಲರೂ ಅಧೀರರು..
ಅಂದರೆ ಸಮುದಾಯದ ಜನತೆ ಬದುಕುವವರೆಲ್ಲ ಸಮಾನರು . ಸಮಾಜದ ಜನರು ಕ್ರಿಯಾಶೀಲರಾಗಿರಬೇಕಾದರೆ ನಿರ್ದೇಶಕ ತತ್ತ್ವ, ಮೂಲಭೂತ ಕರ್ತವ್ಯಗಳು, ಹಕ್ಕುಗಳು ,ಲೋಕಸಭೆ ರಾಜ್ಯಸಭೆ ಇತ್ಯಾದಿಗಳು ಬೇಕು ಈ ಎಲ್ಲಾ
ಪರಿಪ್ರೇಕ್ಷಗಳ ಸಂಗ್ರಹ ವಚನಚಳವಳಿಯಲ್ಲಿಯೇ ನಮಗೆ ಲಭ್ಯವಿವೆ. ಕಳಬೇಡ, ಕೊಲಬೇಡ,ಹುಸಿಯ ನುಡಿಯಲುಬೇಡ, ಮುನಿಯಬೇಡ,ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ ಸಪ್ತಶೀಲವನ್ನು ಹೇಳುವ ವಚನವಿದು ಶರಣರ ಪರಿಪೂರ್ಣವಿಚಾರಧಾರೆ ಇಲ್ಲಿ ಅಡಗಿದೆ.ಪಾಪಪುಣ್ಯವನ್ನು ಪರೋಕ್ಷವಾಗಿ ಉಲ್ಲೇಖಿಸುತ್ತ ನೀತಿ ಸಂಹಿತೆಯನ್ನು ಹೇಳುವ ವಚನ ಇದಾಗಿದೆ. ‘ಕಳ’ ಎಂಬುದು ‘ಯುದ್ಧ’ ಮತ್ತು ‘ಕಳ್ಳ’ತನ ಎಂಬ ಎರಡೂ ಅರ್ಥವನ್ನು ಇಲ್ಲಿ ಸ್ಫುರಿಸುತ್ತವೆ. ಕಳ ಬೇಡ ಎಂಬಲ್ಲಿ ವಿಶ್ವ ಶಾಂತಿಯನ್ನು ಬಯಸಿದ ಮಹತಿಯನ್ನು ಕಾಣಬಹುದು.
ಸುಳ್ಳು,ಕೋಪ,ಅಸಹ್ಯ,ಅಸೂಯೆ, ಹೊಗಳಿಕೆ,ನಿಂದನೆ ಇತ್ಯಾದಿಗಳು ಬೇಡ ಇವುಗಳಿಂದ ದೂರವಿದ್ದಷ್ಟು ಅಂತರಂಗ ಬಹಿರಂಗ ಶುದ್ಧವಾಗಿರುತ್ತದೆ ಎನ್ನುತ್ತಾರೆ. ಒಂದರ್ಥದಲ್ಲಿ ಬದುಕಿನ ಮೂಲದ್ರವ್ಯ ನೈತಿಶಕ್ತಿಯನ್ನು ತುಂಬುವ ವಚನ ಇದೆಂದು ಹೇಳಬಹುದು. ಇನ್ನೂ ಮುಂದುವರೆದು ಹೇಳುವುದಾದರೆ ಸಾಮಾಜಿಕ ಮೌಲ್ಯಗಳನ್ನು ಧರ್ಮದ ಮೌಲ್ಯಗಳನ್ನಾಗಿ ಪ್ರತಿಪಾದಿಸಿರುವುದು ಬಸವಣ್ಣನವರ ಸಾರ್ವಕಾಲಿಕ ಚಿಂತನಾಕ್ರಮವನ್ನು ತೋರಿಸುತ್ತದೆ.
ಸಂವಿಧಾನದ ಪ್ರಸ್ತಾವನೆಯಲ್ಲಿ ಬರುವ ಅಮೂಲ್ಯ ಮಾತುಗಳು ಇಡೀ ಸಂವಿಧಾನಕ್ಕೆ ಹಿಡಿದ ಕೈಗನ್ನಡಿಯಾಗಿರುತ್ತವೆ. ನಮ್ಮ ದೇಶದ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತೀಯರಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಪರಿವರ್ತಿಸಲು ಮತ್ತು ಎಲ್ಲಾ ಪೌರರಿಗೂ ನ್ಯಾಯ:ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯ: ವಿಚಾರ, ಅಭಿವ್ಯಕ್ತಯಿ,ನಂಬಿಕೆ ಮತ್ತು ಆರಾಧನೆ
ಸಮಾನತೆ: ಸ್ವಾಭಿಮಾನ ಮತ್ತು ಅವಕಾಶ ಇವುಗಳನ್ನು ದೊರಕಿಸಲು ಭ್ರಾತೃತ್ವ: ವ್ಯಕ್ತಿಗೌರವ ಹಾಗು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಿ ಬ್ರಾತ್ರತ್ವ ಮನೋಭಾವನೆಯನ್ನು ಮೂಡಿಸಲು ದೃಢಸಂಕಲ್ಪ ಮಾಡಿ ನಮ್ಮ ಸಂವಿಧಾನವನ್ನು ನವೆಂಬರ್ 26 1949 ರಂದು ಅಂಗೀಕರಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಎಂದಿದೆ ಇವೇ ಆಶಯಗಳನ್ನು ಹೊಂದಿರುವ ಕೆಲ ವಚನಗಳನ್ನು ತೌಲನಿಕವಾಗಿ ನೋಡೋಣ.
1. ಜಾತ್ಯಾತೀತತೆಯನ್ನು ಕುರಿತು:
ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನತಾನರಿದವಂಗೆ
ಫಲವೊಂದೆ ಷಡ್ದರ್ಶನ ಮುಕ್ತಿಗೆ
ನಿಲುವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ
ಒಂದೇ ನೆಲವಾದರೂ ಅಲ್ಲಿ ಶಿವಾಲಯ ನಿರ್ಮಿಸಿದರೆ ಪುಣ್ಯಕ್ಷೇತ್ರವಾಗುತ್ತದೆ. ಅದೇ ದುರಾಚಾರಗಳನ್ನು ಮಾಡಿದರೆ ಹೊಲಗೇರಿಯಾಗುತ್ತದೆ. ಹಾಗೆ ಜಲವನ್ನು ತೀರ್ಥವೆಂದು ಬಳಸಿದರೆ ತೀರ್ಥವಾಗುತ್ತದೆ. ಶೌಚಕ್ಕೆ ಬಳಸಿದರೆ ಮೈಲಿಗೆ ಅನ್ನುವ ಅರ್ಥದಲ್ಲಿ ಬರುತ್ತದೆ. ಕುಲವೆಂದರೆ ಲೌಕಿಕದಲ್ಲಿ ಇರುವ ಜಾತಿಯಲ್ಲ ಉತ್ತಮ ಸಂಸ್ಕಾರದಿಂದ ಕಂಡುಕೊಂಡ ನೈತಿಕ ಮೌಲ್ಯವುಳ್ಳ ಮಾರ್ಗ ಎನ್ನಬಹುದು.
2. ಸ್ವಾತಂತ್ರ್ಯದ ಹಕ್ಕು
ಆಳಿಗೊಂಡಿಹೆನೆಂದು ಅಂಜಲದೇಕೆ?
ನಾಸ್ತಿಕವಾಡಿಹರೆಂದು ನಾಚಲದೇಕೆ?
ಆರಾದಡಾಗಲಿ ಶ್ರೀ ಮಹದೇವಂಗೆ ಶರಣೆನ್ನಿ
ಏನೂ ಅರಿಯೆನೆಂದು ಮೌನಗೊಂಡಿರಬೇಡ
ಕೂಡಲಸಂಗಮದೇವನ ಮುಂದೆ ದಂದಣ ಎನ್ನಿ ದತ್ತಣ ಎನ್ನಿ
ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಇಲ್ಲಿ ಮಾಹಿತಿ ದೊರಕುತ್ತದೆ. ಯಾರೋ ಏನೋ ಹೇಳುತ್ತಾರೆಂದು ನಮ್ಮ ಭಾವನೆಗಳನ್ನು ಹತ್ತಿಕ್ಕಿಕೊಳ್ಳುವುದು ಬೇಡ. ನಮ್ಮ ಮಾತುಗಳಿಗೆ ತರ್ಕವಿದೆ ಎಂದಾದಲ್ಲಿ ಮೌನದಿಂದ ಇರುವುದು ನಮ್ಮ ಅನಿಸಿಕೆಗಳನ್ನು ನಮ್ಮಲ್ಲೇ ಭಾವಸಮಾಧಿ ಮಾಡಿಕೊಳ್ಳುವುದಕ್ಕಿಂತ ಆ ಮಹಾದೇವನ ಎದಿರು ಉತ್ಕಂಠಿತವಾಗಿ ಹೇಳಿದರಾಯಿತು ನ್ಯಾಯ ಅನ್ನುವ ಚೌಕಟ್ಟನ್ನು ಮೀರದೆ ಇದ್ದಾಗ ನಮಗೆ ನಮ್ಮ ತರ್ಕಗಳನ್ನು ಅನಿಸಿಕೆಗಳನ್ನು ಇತರರಲ್ಲಿ ಹೇಳಿಕೊಳ್ಳುವಲ್ಲಿ ಖಂಡಿತಾ ಸಂಶಯವಿರಬಾರದು ಎನ್ನುತ್ತಾರೆ. ತಮ್ಮ ಆಭಿವ್ಯಕ್ತಿಗೂ ಅವಕಾಶ ಬೇಕು ಪರವಾನಿಗೆ ಬೇಕು ಎನ್ನುವ ಕಾರಣಕ್ಕೆ 17ನೆ ಶತಮಾನದಲ್ಲಿ ‘ಏರಿಯೋಪೆಗೆಟಿಕಾ’ ಎಂಬ ಪ್ರಬಂಧವನ್ನು ಬರೆಯುವುದರ ಮೂಲಕ ಜಾನ್ ಮಿಲ್ಟನ್ ಇಂಗ್ಲೆಂಡಿನ ಸಂಸತ್ತಿಗೆ ತನ್ನ ಮನದಿಂಗಿತವನ್ನು ಬರೆಯುತ್ತಾನೆ. ಆದರೆ 12ನೆ ಶತಮಾನದಲ್ಲಿ ರಾಜಪ್ರಭುತ್ವದ ಚೌಕಟ್ಟಿನಲ್ಲೇ ಸ್ವಾತಂತ್ರ್ಯವನ್ನು ಚಳವಳಿಗಾರರು ಪಡೆದಿದ್ದರು ಎಂಬುದಕ್ಕೆ ಅವರ ವಚನಗಳೇ ಸಾಕ್ಷಿಯಾಗುತ್ತವೆ.
ಏತಕ್ಕೆ ಮುನಿದಿರಿ ಮಾತಾಡಿದಡೆ ಕೆಯ್ಯ ಬೆಳಸೆಂಬುದನರಿಯಿರೆ ಅಯ್ಯಾ ಮಾತು ಕೆಟ್ಟಲ್ಲದೆ ತಾನಾಗಬಾರದು. ಕೂಡಲಸಂಗಮದೇವಯ್ಯಾ ಮಾತಿಂದ ಬರ್ಕು ಭವಭಾರಘೋರ.
ಮಹಾಮನೆಯಲ್ಲಿ ಮಾತನಾಡಲು ,ಪ್ರತಿಕ್ಇಯೆ ನೀಡಲು ಅವ ಕಾಶವಿತ್ತು. ಮಾತುಗಳು ವಿಪರೀತಕ್ಕೆ ಹೋಈಗವಾರದು ವಿವಚಾರ ಮಥಣ ನಡೆದು ಸಮಸ್ಯೆಗಳಿಗೆ ಪರಿಹಾರ ಸಿಗಲಿ ಎಂಬ ಸೂಕ್ತ ಪರಿಹಾರ ಕಂಡುಕೊಳ್ಳುವುದೂ ಒಂದು ಸ್ವಾತ್ಂತ್ರ್ಯ ಎಂಬ ವಿಚಾರವನ್ನು ಈ ವಚನ ತಿಳಿಸುತ್ತದೆ.
3. ಸಮಾನತೆಗೆ ಸಂಬಂಧಿಸಿದ ವಚನಗಳು.
ಸಂವಿಧಾನದ 14ರಿಂದ 18ನೆ ವಿಧಿಗಳು ಸಮಾನತೆಯ ಹಕ್ಕಿಗೆ ಸಂಬಂಧಿಸಿವೆ.
ಸೆಟ್ಟಿಯೆಂಬೆನೆ ಸಿರಿಯಾಳನ ಮಡಿವಾಳನೆಂಬೆನೆ ಮಾಚಯ್ಯ
ಡೋಹರನೆಂಬೆನೆ ಕಕ್ಜಕಯ್ಯನ ಮಾದಾರನೆಂಬೆನೆ ಚನ್ನಯ್ಯ
ಆನು ಹಾರುವನೆಂದರೆ ಕೂಡಲಸಂಗ ನಗುವನಯ್ಯಾ
ಇವರು ಮೇಲುವರ್ಗ ಇವರು ಕೀಳುವರ್ಗ ಎಂದು ಹೇಳಿದರೆ ದೇವರು ನಗುವನ್ನು ನಮಗಿಂತ ಶ್ರೇಷ್ಟರಾದ ಅದೆಷ್ಟೋ ಶರಣರು ನಮ್ಮಲ್ಲಿದ್ದಾರೆ ಅವರ ಸೂಳ್ನುಡಿಗಳ ಮಾರ್ಗದರ್ಶನ ನಾವು ಪಡೆಯಬೇಕು ಎಂಬ ಸದಾಶಯವನ್ನು ವ್ಯಕ್ತಪಡಿಸುತ್ತಾರೆ.
4. ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿಯುವ ವಚನ
ಹೊನ್ನಿನ ಆಪ್ಯಾಯಕ್ಕೆ ಬೋಳಾದವನಲ್ಲ,
ಮಣ್ಣಿನ ಆಪ್ಯಾಯಕ್ಕೆ ಬೋಳಾದವನಲ್ಲ
ಹೆಣ್ಣಿನ ಆಪ್ಯಾಯಕ್ಕೆ ಬೋಳಾದವನಲ್ಲ
ಕೂಡಲ ಸಂಗಮದೇವರಲ್ಲಿ ಎನಗಾರು ಎಲ್ಲವೆಂದು
ಬೋಳಾದನೆನ್ನ ಪ್ರಭುದೇವರು
ಬಸವಣ್ಣನವರು ಮೇಲು-ಕೀಳು ಇತ್ಯಾದ ಗಳನ್ನು ಬಿಟ್ಟು ಹೊನ್ನು -ಮಣ್ಣು -ಹೆಣ್ಣು ಇವುಗಳನ್ನು ಬದಿಗಿರಿಸಿ ಅನುಭವ ಮಂಟಪ, ಮಹಾಮನೆ ಎಂಬ ಅರಿವಿನ ಮನೆಯಲ್ಲಿ ಸಮಾವೇಶಗೊಳ್ಲುತ್ತಿದ್ದ ಎಲ್ಲರಿಗೂ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದುವು. 12ನೆ ಶತಮಾನದಲ್ಲೆ ಸಮಾನತೆಯ ಕಲ್ಪನೆಯನ್ನು ಸಾಕಾರಗೊಳಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.
5. ವಿಶ್ವಭ್ರಾತೃತ್ವ
“ಇವನಾರವ ಇವನಾರವ ಇವನಾರವ….? ಎಂದೆನಿಸದಿರಯ್ಯಾ ಇವ ನಮ್ಮವ, ಇವ ನಮ್ಮವ ನಮ್ಮವನೆಂದೆನಿಸಯ್ಯಾ” ಎಲ್ಲರೊಳಗೆ ಒಂದಾಗಿ ಬೆರೆತು ಬಾಳಬೇಕು “ವಸುದೈವ ಕುಟುಂಬಕಂ” ಎನ್ನುವಂತೆ ಸಾಮರಸ್ಯ ಜೀವನಕ್ಕೆ ಹೆಚ್ಚು ಒತ್ತು ನೀಡಿದವರು.
6. ಸಮಾಜವಾದ ಮತ್ತು ಸಹಕಾರ ತತ್ತ್ವ:
ಕಾಗೆಯೊಂದಗುಳ ಕಂಡರೆ
ಕೂಗಿ ಕರೆಯದೆ ಬಳಗವನು?
ಕೋಳಿಯೊಂದು ಗುಟುಕ ಕಂಡರೆ
ಕೂಗಿ ಕರೆಯದೆ ತನ್ನ ಕುಲವನೆಲ್ಲವನು?
ಶಿವಭಕ್ತನಾಗಿ ಭಕ್ತಿ-ಪಕ್ಷವಿಲ್ಲದಿದ್ದರೆ
ಕಾಗೆ ಕೋಳಿಯಿಂದ ಕರಕಷ್ಟ ಕೂಡಲ ಸಂಗಮದೇವಾ
ಮನುಷ್ಯನ ದುಡಿಮೆಯ ದಾಹ ಅವನ ಅವಶ್ಯಕತೆಗಳಿಗೆ ಮಾತ್ರ ಸೀಮಿತವಾಗಿರಬೇಕು ಅತಿಯಾಸೆಯಿಂದ ದುಡಿದು ಸಂಗ್ರಹ ಮಾಡಿಟ್ಟುಕೊಂಡರೆ ಪ್ರಯೋಜನವಿಲ್ಲ ಹಾಗಾದರೆ ನಮ್ಮಲ್ಲಿ ಉಳ್ಳವರು ಇಲ್ಲದವರು ಎಂಬ ಕಂದಕ ನಿರ್ಮಾಣವಾಗುತ್ತಾ ಹೋಗುತ್ತದೆ. ಅದರ ಬದಲು ಸಹಜೀವಿಗಳೊಂದಿಗೆ ಹಂಚಿ ತಿನ್ನುವುದು ಒಳಿತು, ಸಹಕಾರ ವ್ಯವಸ್ಥೆಯ ಚಿಂತನೆ ಇಲ್ಲಿ ಬರುತ್ತದೆ. ದಾನಕ್ಕಿಂತ ದಾಸೋಹ ಮುಖ್ಯ ಅದು ಅಪಾತ್ರದಾನವಾಗುವುದಿಲ್ಲ ಎಂಬ ಅಭಿಪ್ರಾಯ ಇಲ್ಲಿದೆ.
7. ಭ್ರಷ್ಠಚಾರದ ವಿರುದ್ಧ ಕಾಳಧನದ ಕುರಿತು ಹೇಳುವ ಸಂದರ್ಭದಲ್ಲಿ
ಅನ್ನದೊಳಗೊಂದು ಅಗುಳ
ಹೊನ್ನಿನೊಳಗೊಂದು ಒರೆಯ
ಸಿರೆಯೊಳಗೊಂದು ಎಳೆಯ ಇಂದಿಂಗೆ
ನಾಳಿಂಗೆ ಬೇಕೆಂದೆಡನಾದರೆ ನಿಮ್ಮ ಪ್ರಮಥರಾಣೆ
ಎಂದು ಸಂಪತ್ತಿಗೆ ಆಸೆ ಪಡಬಾರದು ನಶ್ವರವಾದ ಸಂಪತ್ತಿಗೆ ನೈತಿಕತೆಯನ್ನು ಬಿಡುವುದುಂಟೆ ಎನ್ನುತ್ತಾರೆ ಓಂಬಡ್ಸ್ಮೆನ್ ಕಲ್ಪನೆಯನ್ನು ಮೂಡಿಸುವ ವಚನ ಇದಾಗಿದೆ.
8. ಶೋಷಣೆಯ ವಿರುದ್ಧದ ಹಕ್ಕು
ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ
ಜೋಳವಾಳಿಯವ ನಾನಲ್ಲ
ವೇಳೇವಾಳಿಯವ ನಾನಲ್ಲ
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ
ಕೇಳು ಕೂಡಲಸಂಗಮದೇವಾ
ಮರಣವೆ ಮಹಾನವಮಿ.
ಆನೆ ಅಂಕುಶಕ್ಕಂಜುವುದೆ ಅಯ್ಯಾ
ಮಾಣದೆ ಸಿಂಹದ ನಖವೆಂದು ಅಂಜುವುದಿಲ್ಲದೆ
ಆನು ಬಿಜ್ಜಳಂಗಜುವೆನಯ್ಯಾ ಕೂಡಲಸಂಗಮದೇವಾ
ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣ ಮಂತ್ರಿಯಾಗಿದ್ದರೂ ಜನೋಪಯೋಗಿ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದರು ರಾಜಪ್ರಭುತ್ವವನ್ನು ಮೀರಿ ಶಿವ ಶರಣರು ತಾವು ಅಂದುಕೊಂಡಂತೆ ಹೇಗೆ ನಡೆದುಕೊಂಡಿದ್ದರು ಎಂಬುದನ್ನು ಇಲ್ಲಿ ನೋಡಬಹುದು. ಮಾನವನನ್ನು ಮಾನವರಾಗಿ ಬದುಕಲು ಎಡೆ ಮಾಡಿ ಕೊಡದೆ ಹೋರಾಟ ಪ್ರಾರಂಭವಾದಾಗ ಬಸವಣ್ಣ “ಆನು ಬಿಜ್ಜಳಂಗೆ ಅಂಜುವೆನೆ?” ಎಂದು ಹೇಳಿಕೊಂಡು
ನ್ಯಾಯನಿಷ್ಟುರಿ,ದಾಕ್ಷಿಣ್ಯಪರನು ನಾನಲ್ಲ:
ಲೋಕವಿರೋಧಿ,ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ
ಈ ವಚನದಲ್ಲಿ ಸಾಕ್ಷಾತ್ ಆ ಕೂಡಲಸಂಗನ ಅಭಯ ಹಸ್ತವಿರುವಾಗ ನಾನು ಹೆದರುವುದಿಲ್ಲ. ನ್ಯಾಯದ ಹಾಸುಗಂಬಳಿಯಲ್ಲಿ ಒರಗುವೆನೆ ವಿನಃ ನೋಟಕ್ಕೆ ರತ್ನಗಂಬಳಿಯಂತೆ ತೋರುವ ಅನ್ಯಾಯವನ್ನು ನಾನು ಧಿಕ್ಕರಿಸುತ್ತೇನೆ ಎನ್ನುತ್ತಾರೆ.
9. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
ಧರ್ಮ ಮತ್ತು ನೈತಿಕತೆಯನ್ನು ಸಮೀಕರಿಸಿ ಹೇಳುತ್ತಾ ಅಂಧಕಾರದಲ್ಲಿ ಮುಳುಗಿರುವವರಿಗೆ ಹೊಸ ಬೆಳಕನ್ನು ಧರ್ಮ ಕೊಡಬೇಕು ಮತ್ತು ಅದು ಸಮಾಜಮುಖಿಯಾಗಿರಬೇಕೆಂದು ಹೇಳುತ್ತಾರೆ.
ದಯವಿಲ್ಲದ ಧರ್ಮ ಯಾವುದಯ್ಯಾ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ
ದಯವೇ ಧರ್ಮದ ಮೂಲವಯ್ಯಾ
ಎಂದು ಧರ್ಮದ ಹುಟ್ಟಿಗೆ ಹೊಸ ಆಯಾಮದ ಕಲ್ಪನೆಯನ್ನು ಕಟ್ಟಿಕೊಡುತ್ತಾರೆ. ಧರ್ಮದ ಸಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ಇಲ್ಲಿ ಹೇಳಿದ್ದಾರೆ. ರೂಪಿಂಗೆ ಕೇಡುಂಟು ನಿರೂಪಿಂಗೆ ಕೇಡಿಲ್ಲ ಎಂಬಂತೆ ಅರಿವು ಎಂಬುದೇ ಇಲ್ಲಿ ದೈವ.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀ ಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ ಕೂಡಸಂಗಮದೇವಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ
ಎಂಬಲ್ಲಿ ದೈವದ ಪ್ರಾಕೃತಿಕ ಸ್ವರೂಪವನ್ನು ವಿವರಿಸುತ್ತಾರೆ.
ಮರ್ತ್ಯ ಲೋಕವೆಮಬುದು ಕರ್ತಾರನ ಕಮ್ಮಟವಯ್ಯಾ
ಇಲ್ಲಿ ಸಲ್ಲವವರು ಅಲ್ಲಿಉಯೂ ಸಲ್ಲುವರಯ್ಯಾ
ಇಲ್ಲಿ ಸಲ್ಲಸದವರು ಅಲ್ಲಿಯೂ ಸಲ್ಲರಯ್ಯಾಾ.
ವ್ಯಕ್ತಿಯೂ ಜೀವನದಲ್ಲಿ ಒಳ್ಳೆಯ ನಡೆ ನುಡಿ ಉಳ್ಳವನಾಗಿರಬೇಕು ಅದೇ ಕಡೆತನಕ ಅವನ್ನು ಮಾಡಿಕೊಳ್ಳುವ ಆಸ್ತಿ ಇಲ್ಲಿ ಸಂದಾಯವಾದರೆ ಹೋದಲ್ಲಿಯೂ ಆತ ಎಲ್ಲಿಯೂ ಸಂದಾಯವಾಗುತ್ತಾನೆ ಎನ್ನುತ್ತಾರೆ.
10. ಶೈಕ್ಷಣಿಕ ಹಕ್ಕು
ಇಂದಿಗೆ ನಮ್ಮ ಸರಕಾರಗಳು ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿವೆ. “ನಡೆಯ ಕಲಿಸಿದ ಬಸವ,ನುಡಿಯ ಕಲಿಸಿದ ಬಸವ,ಉ ಡಲು ಕಲಿಸಿಒದ ಬಸವ, ಉಣಲು ಕಲಿಸಿದ ಬಸವ ಎಂದು ಜನಪದ ಕವಿಯೊಬ್ಬ ಸ್ಮರಣೆ ಮಾಡಿಕೊಂಡಿರುವುದನ್ನು ನೋಡಿದರೆ ಜ್ಞಾನ ಸಂಪಾದನೆಗೆ ಹೆಚ್ಚು ಆದ್ಯತೆಯನ್ನು ಬಸವಣ್ಣನವರು ಕಲ್ಪಿಸಿಕೊಟ್ಟಿದ್ದರು. ಸರ್ವಾಂಗೀಣ ಸಂಸ್ಕಾರ, ಕಾಯಕ ಸಹಿತ ವಿದ್ಯೆ ಇಂದಿನ skill development ಕೌಶಲಾಧಾರಿತ ಶಿಕ್ಷಣದ ಕಲ್ಪನೆಯ ಜಾಗೃತಿ ಆ ಕಾಲಕ್ಕೆ ಇತ್ತು ಎಂಬುದನ್ನು ತಿಳಿಯಬಹುದು. “ಸಾಧು ಸಾಧೆಲೆ ಬಸವ, ಓದು ಕಲಿಯಿತು ಜಗವು, ಹೋದ ಹೋದಲ್ಲಿ ಹೊಸ ಮಾತು ಕೇಳಿದೆವು, ಮೇದಿನಿಗೆ ಬಂತು ಹೊಸ ಬೆಳಕು “ ಎಂಬಲ್ಲಿ ಬಸವಣ್ಣ ಓರ್ವ ಶಿಕ್ಷಣ ತಜ್ಞ ಎಂಬುದೂ ವೇದ್ಯವಾಗುತ್ತದೆ.
11. ಜನಪ್ರತಿನಿಧಿಗಳ ವಿವೇಕದ ಕುರಿತು
ಹಾವಿನ ಹೆಡೆಯಕೊಂಡು ಕೆನ್ನೆಯ ತುರಿಸುವಂತೆ
ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಾಲನಾಡುವಂತೆ,
ಉರಿವ ಕೊಳ್ಳಿಯ ಕೊಮಡು ಮಂಡೆಯ ಸಿಕ್ಕ ಬಿಡಿಸಿದಂತೆ
ಕೂಡಲಸಂಗನ ಶರಣರೊಡನೆ ಮರೆತು ಸರಸವನಾಡಿದರೆ
ಸುಣ್ಣದ ಕಲ್ಲ ಮಡಿಲಿಗೆ ಕಟ್ಟಿಕೊಂಡು ಮಡುವಿಗೆ ಬಿದ್ದಂತೆ .
ಜನರಿಂದ ಆರಿಸಿಬಂದ ಜನರಿಗೆ ಬಸವಣ್ಣ ಕೊಡುವ ಎಚ್ಚರವಿದು. ಜನಸೇವೆಗೆ ಬಂದು ಅವರನ್ನು ಮರೆತರೆ ಕಡೆಗೆ ಅವರೆ ತಕ್ಕ ಬುದ್ಧಿ ಕಲಿಸುತ್ತಾರೆ ಎಂಬುದನ್ನು ವಚನದ ಮೂಲಕವೇ ಹೇಳುತ್ತಾರೆ. ಜನಪ್ರತಿನಿಧಿಗಳು ಪ್ರಜೆಗಳನ್ನು ಕುರಿತಂತೆ ಅತ್ಯಂತ ಜಾಗರೂಕರಾಗಿರಬೇಕು ಹೇಗಿರಬೇಕು ಎಂಬುದು , ಜನಗಳಿಗೆ ಅಂಜಿ ನಡೆಯಬೇಕು ಉದ್ಧಟತನ ಉಡಾಫೆಯ ಮನೋಭಾವ ಇರಬಾರದು ಎನ್ನುತ್ತಾರೆ.
12. ಆಧುನಿಕ ಸಂಸದೀಯ ಕಾರ್ಯಚಟುವಟಿಕೆಗಳಿಗೆ ತಾಳೆಯಾಗುವ ವಚನ
ಅರಸು ವಿಚಾರ ಸಿರಿಯು ಶೃಂಗಾರ
ಸ್ಥಿರವಲ್ಲಾ ಮಾನವ,
ಕೆಟ್ಟಿತ್ತು ಕಲ್ಯಾಣ, ಹಾಳಾಯಿತು ನೋಡಾ,
ಒಬ್ಬ ಜಂಗಮದ ಅಭಿಮಾನದಿಂದ
ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು
ಸಂದಿತ್ತು ಕೂಡಲಸಂಹಮದೇವ ನಿಮ್ಮ ಕವಳಿಗೆಗೆ
ಜನಾಭ್ದಿಪ್ರಾಯದ ವಿರುದ್ಧ ಹೊದರೆ ಆಗುವ ಅನಾಹುತ ಪ್ರಜೆಗಳೇ ಪ್ರಭುಗಳನ್ನು ಅಧಿಕಾರದಿಂದ ಇಳಿಸಬಲ್ಲರು ಎಂಬ ಕುರುಹು ಇಲ್ಲಿ ಸಿಗುತ್ತದೆ.
13. ಭ್ರಷ್ಟಾಚಾರದ ಕುರಿತ ವಚನ
ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ
ನಾಲಿಯ ಮೊಲೆಯ ಹಾಲು ನಾಲಯಿಗಲ್ಲದಯ್ಯಾ ಪಮಚಾಮೃತಕ್ಕೆ ಸಲ್ಲದಯ್ಯಾ
ನಮ್ಮ ಕೂಡಲಸಂಗನ ಶರಣಿಗರಿಗಲ್ಲದೆ
ಮಾಡುವ ವ್ಯರ್ಥ ಕಂಡಯ್ಯಾ
ಎಂದು ಕಾಳಧನ ಸಂಗ್ರಹ, ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಸತ್ಯ ಶುದ್ಧ ಕಾಯಕದ ಕುರಿತು ಮಾತನಾಡುತ್ತಾರೆ ವಾಮ ಮಾರ್ಗದಲ್ಲಿ ಹಣ ಸಂಗ್ರಹಣೆ ಮಾಡಿ ತನ್ನದ್ದಲ್ಲದಕ್ಕೆ ಆಸೆ ಪಟ್ಟು ಅದನ್ನು ಸಂಗ್ರಹಡಿಕೊಂಡರೆ ಅದು ಒಳ್ಳೆಯ ಕೆಲಸಕ್ಕೆ ಬರುವುದಿಲ್ಲ. ಅಕ್ರಮವಾಗಿ ಸಂಪಾದನೆ ಮಾಡಿ ಇಒದೆಲ್ಲವು ನನ್ನದೇ ಎಂದು ಸಕ್ರಮ ಮಾಡಿಕೊಂಡು ಇದ್ದರೆ ಅದು ನ್ಯಾಯಸಮ್ಮತವಲ್ಲ. ನ್ಯಾಯಮಾರ್ಗದಲ್ಲಿ ಸಂಪಾದನೆ ಮಾಡಿದ ಹಣದಲ್ಲಿ ಚಿಕ್ಕ ಕೆಲಸ ಮಾಡಿದರೂ ಅದು ಭಗವಂತನಿಗೆ ಪ್ರೀತಿ ಎನ್ನುತ್ತಾರೆ.
14. ಪ್ರಕೃತಿಸಂರಕ್ಷಣೆ ಮತ್ತು ಕರ್ತವ್ಯ ಬದ್ಧತೆ
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿಉರಿದಡೆ ನಿಲಲು ಬಾರದು
ಏರಿ ನೀರುಂಬುಡೆ, ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯಮೊಲೆಹಾಲು ನಂಜಾಗಿ ಕೊಲುವೆಡೆ
ಇನ್ನಾರಿಗೆ ದೂರುವೆ ಕೂಡಲ ಸಂಗಮದೇವಾ
ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲೆ ಇರುತ್ತದೆ ಎಂಬುದನ್ನು ದಾರ್ಶನಿಕ ಬಸವಣ್ಣ ಇಲ್ಲಿ ಉಲ್ಲೇಖಿಸಿರುವುದನ್ನು ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸಿ ನೋಡಬಹುದು. ಜಾಗತಿಕ ತಾಪಮಾನದ ದಿಸೆಯಿಂದ ಭೂಮಿಯಲ್ಲಿ ಕೆಲವೆಡೆ ನಿಲ್ಲಲಾಗುತ್ತಿಲ್ಲ ಬಿಸಿಲಿನ ತಾಪ ಸಹಿಸಲಾರದೆ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.. ಭಿತ್ತಿಯಿಲ್ಲದೆ ಬರೆಯಬಹುದೆ ಚಿತ್ತಾರವೆ? ಬಿತ್ತಿ ಬೆಳೆಯಬಹುದೆ ಧರೆಯಿಲ್ಲದೆ? ಎಂಬಂತೆ ಭಿತ್ತಿ ಅರ್ಥಾತ್ ಭೂಮಿಯೇ ಇಲ್ಲದೆ ಇನ್ನೂ ಸರಳವಾಗಿ ಹೇಳುವುದಾದರೆ ಕೃಷಿ ಭೂಮಿಯೇ ಇಲ್ಲವಾದರೆ ನಾವು ಬೆಳೆಯುವುದಾದರು ಏನನ್ನು ಎಂಬ ಪ್ರಶ್ನೆ ಏಳುತ್ತದೆ. ಅಕ್ರಮ ಭೂ ಒತ್ತುವರಿ, ಕೈಗಾರಿಕೆ,ನಿವೇಶನ,ರಸ್ತೆ ಇತ್ಯಾದಿ ಕಾರಣಕ್ಕೆ ಕೃಷಿ ಭೂಮಿ ಸವಕಲಾಗುತ್ತಿದೆ. ಕುಡಿಯುವ ನೀರು,ಸೇವಿಸುವ ವಾಯು ಅರ್ಥಾತ್ ಜೀವಜಲ ಪ್ರಾಣವಾಯುವಿಗೂ ತತ್ವಾರ ಬಂದಿರುವ ಕಾಲವಿದು. ಯದ್ವಾತದ್ವಾ ಬೋರ್ವೆಲ್ಗಳನ್ನು ಕೊರೆದು ನೀರನ್ನು ಪೋಲು ಮಾಡಿ ನೀರಿನ ಕುಡಿಯುವ ನೀರಿನ ಮಾರಾಟ ಪ್ರಾರಂಭವಾಗಿ ದಶಕಗಳೆ ಕಳೆದಿವೆ. ನಮ್ಮ ಅನುಕೂಲಕ್ಕೆ ಮರಗಳನ್ನು ಹನನ ಮಾಡಿ ಪ್ರಕೃತಿಯ ಮೇಲೆ ಮನುಷ್ಯ ವಿಕೃತಅಟ್ಟಹಾಸ ಮೆರೆದಿದ್ದಾನೆ. ಸ್ವಚ್ಛ ಗಾಳಿಗೆ ಆಕ್ಸಿಜನ್ ಸೆಂಟರ್ಗಳಿಗೆ ಹೋಗಬೇಕು ಅನ್ನುವ ಸುದ್ದಿ ಓದಿದ್ದೆವು ಕೇಳಿದ್ದೆವು ಹುಬ್ಬೇರಿಸಿದ್ದೆವು ನಮ್ಮ ಮುಂದಿನ ತಲೆಮಾರಿಗೆ ಇವೆಲ್ಲಾ ಎಂದು ಸುಮ್ಮನಿದ್ದೆವು, ಅದರೆ ಈಗ ಕೊರೊನಾ ಸಂದರ್ಭದಲ್ಲಿ ಈ ಆಮ್ಲಜನಕವೇ ಇಲ್ಲದೆ ಅನೇಕರು ಪ್ರಾಣಬಿಟ್ಟ ಸುದ್ದಿ ನಮ್ಮನ್ನು ಹೈರಾಣಾಗಿಸಿದೆ. ನೂರಾರು ಸಾವಿರಾರು ಟನ್ಗಟ್ಟಲೆ ಆಕ್ಸಿಜನ್ ಉತ್ಪಾದನೆ ಆದರೂ ಅವಶ್ಯಕತೆಗೆ ಲಭ್ಯವಿಲ್ಲದೆ ಇರುವುದು ಖೇದದ ಸಂಗತಿ.
ಏರಿ ಅಂದರೆ ಕೆರೆಯ ನೀರನ್ನು ತಡೆಯುವ ಕಟ್ಟೆ ಎಂಬ ಅರ್ಥದಲ್ಲಿ ತೆಗೆದುಕೊಂಡರೆ ಇಂದಿನ ಸಂದರ್ಭಕ್ಕೆ ಮಾನವ ಸಂಪನ್ಮೂಲವನ್ನು ರಕ್ಷಣೆ ಮಾಡಬೇಕಾಗಿರುವ ಸರಕಾರ ಸರಕಾರದ ಅಂಗ ಸಂಸ್ಥೆಗಳು ಎಂದು ತಿಳಿಯಬಹುದು. ನಿನ್ನೆಯ ವಿದ್ಯಾಮಾನಗಳನ್ನು ನೋಡಿದರೆ ಅತೀವ ದುಃಖವಾಗುತ್ತದೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ. ಜನರನ್ನು ರಕ್ಷಣೆ ಮಾಡುವ ಹೊಣೆ ಹೊತ್ತಿರುವ ವೈದ್ಯಕೀಯ ಸಿಬ್ಬಂದಿಯೇ ಅಕ್ರಮದಲ್ಲಿ ಭಾಗಿಯಾಗಿರುವುದು ಇರುವ ಜೀವರಕ್ಷಕ ಔಷಧಿಗಳನ್ನು ತಾವೇ ಕಳವು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಬೇಸರದ ಸಂಗತಿ. ಕೊರೊನಾ ಸಂದರ್ಭಕ್ಕೆ ಲಸಿಕೆಗಳು ಬಂದಿವೆ ಇವುಗಳ ಅಭಾವವಾದರೆ ನಕಲಿ ಲಸಿಕೆಗಳು ಮಾರುಕಟ್ಟೆಗೆ ಬರುತ್ತವೆ ಎಂಬ ಸುದ್ದಿ ತಿಳಿದು ಜೀವ ರಕ್ಷಕ ಮಾಡುವ ಔಷಧವೂ ಕಲಬೆರಕೆಯೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದನ್ನೆ ಅಲ್ಲವೇ ತಾಯ ಹಾಲು ನಂಜಾಗುವುದು ಎನ್ನುವುದು ಕಾಯುವ ಕೈಗಳೇ ಕೊಡಲಿ ಕಾವಾದಾರೆ ಮಲಗುವ ನೆಲವೆ ಪ್ರಾಣ ರಕ್ಷಣೇ ಮಾಡಬೇಕಾದ ಹಾಸಿಗೆಗಳೆ ಮೃತ್ಯುಕೂಪವಾದರೆ ಇನ್ನೆಲ್ಲಿ ನಮ್ಮ ಸಂಕಷ್ಟಗಳ ಪರಿಹಾರ ಎಂಬ ಪ್ರಶ್ನೆ ಕಾಡುತ್ತದೆ. ಪ್ರಾಕೃತಿಕ ಸಂಪತ್ತನ್ನು ರಕ್ಷಣೆ ಮಾಡುವ ಉತ್ತರದಾಯಿತ್ವ ಎಲ್ಲರದ್ದಾಗಿದೆ ಮತ್ತು ಅಧಿಕಾರ ಹೊಂದಿದ ಕೇಂದ್ರಗಳು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳದೆ ಬದ್ಧತೆಯಿಂದ ಇರಬೇಕು ಎಂಬುದನ್ನು ಇಲ್ಲಿ ಅರ್ಥೈಸಿಕೊಳ್ಳಬಹುದು.
15. ಮೌಢ್ಯ ವಿರೋಧೀ ವಚನಗಳು
ಇತ್ತೀಚೆಗೆ ಸರಕಾರ ಮೌಢ್ಯವಿರೋಧಿ ಕಾನೂನನ್ನು ಜಾರಿಗೆ ತಂದಿದೆ ಆದರೆ ಬಸವಣ್ಣನವರು 12ನೆ ಶತಮಾನದಲ್ಲೆ..
ಹುತ್ತವ ಬಡಿದರೆ ಹಾವು ಸಾಯಬಲ್ಲುದೇ ಅಯ್ಯಾ?
ಕಲ್ಲನಾಗರ ಕಂಡರೆ ಹಾಲನೆರೆ ಎಂಬರಯ್ಯಾ ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ
ಮಾಡಿ ಮಾಡಿ ಕೆಟ್ಟರು ಮನವಿಲ್ಲದೇ ನೀಡಿ ನೀಡಿ ಕೆಟ್ಟರು ನಿಜವಿಲ್ಲದೆೆ..
ಇತ್ಯಾದಿ ವಚನಗಳನ್ನು ಹೇಳುವ ಮೂಲಕ ಮೌಢ್ಯ,ಡಾಂಭಿಕ ಆಚರಣೆಗಳನ್ನು ತೀಕ್ಷ್ಣವಾಗಿ ವಿರೋಧಿಸಿದ್ದಾರೆ.
ಬಸವಣ್ಣನವರು ಸಮಾನತೆ ಮತ್ತು ಜಾತ್ಯಾತೀತತೆಯ ಆಧಾರದ ಮೇಲೆ ಕಟ್ಟಬಯಸಿದ ಸಮಾಜ ಸಾರ್ವಕಾಲಿಕ ಚಿಂತನೆಯಿಂದ ಕೂಡಿರುವಂಥದ್ದು. ಇವರ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು ಮಾತ್ರವಲ್ಲ ಮೊದಲ ಆಧ್ಯಾತ್ಮ ವಿಶ್ವವಿದ್ಯಾಲಯವೂ ಆಗಿತ್ತು ಇದೇ ಕಾರಣಕ್ಕೆ ಕ್ರೈಸ್ತ ಫಾದರ್ ರೆವೆರಂಡ್ ಉತ್ತಂಗಿ ಚೆನ್ನಪ್ಪನವರು ಅನುಭವ ಮಂಟಪ ವಿಶ್ವದ ಪ್ರಪ್ರಥಮ ಧಾರ್ಮಿಕ ಸಂಸತ್ತು ಎನ್ನುತ್ತಾರೆ. ಸಜಲ ಜೀವಾತ್ಮಕ್ಕೆ ಲೇಸನ್ನು ಬಯಸುವ ವಚನಗಳು ಬಸವಣ್ಣನದ್ದಾಗಿದ್ದುವು ಸಂವಿಧಾನದ ಜೀವಾಳವೇ ಆಗಿರುವ ಬಸವಣ್ಣನವರ ವಚನಗಳನ್ನು ಅನುಸಂಧಾನಿಸುವುದು ಏಕ ಕಾಲಕ್ಕೆ ನಮ್ಮ ಸಂವಿಧಾನವನ್ನೂ ಅಂತಾರಾಷ್ಟ್ರೀಯ ಹಕ್ಕುಗಳನ್ನು ಗೌರವಿಸಿದಂತೆಯೂ ಆಗುತ್ತದೆ. ಆಧುನಿಕ ಬದುಕಿಗೂ ಮುಖಾಮುಖಯಾಗುವ ಬಸವಣ್ಣನವರ ವಚನಗಳು ಸಾಮಾಜಿಕ, ರಾಜಕೀಯ, ಆರ್ಥಿಕ,ಧಾರ್ಮಿಕ, ಸಂಸ್ಕೃತಿ,ಸಾಹಿತ್ಯಗಳ ಸಂಹಿತೆ ಎಂದರೆ ತಪ್ಪಿಲ್ಲ.
ಪರಾಮರ್ಶನ ಗ್ರಂಥಗಳು:
ವಚನಧರ್ಮಸಾರ: ಎಂ.ಆರ್. ಶ್ರೀನಿವಾಸಮೂರ್ತಿ
ವಚನ ಸಾಹಿತ್ಯ:ಡಾ ಎಂ ಚಿದಾನಂದ ಮೂರ್ತಿ
ವಚನ ಸಾಹಿತ್ಯ: ಪ್ರೊ.ಜಿ.ಎಸ್ ಸಿದ್ಧಲಿಂಗಯ್ಯ
ಅನುಭಾವ: ಪ್ರಧಾನ ಸಂಪಾದಕರು ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಜಗದಗಲ ಮಂಟಪ: ಪ್ರಧಾನ ಸಂಪಾದಕರು ಡಾ.ಶೀಲದೇವಿ ಮಳೀಮಠ
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ