ಅರಸೀಕೆರೆ ತಾಲ್ಲೂಕು ೫ನೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪಡೆದಿದ್ದ ಶ್ರೀಯುತರು ವೃತ್ತಿಯಿಂದ ಭಾರತೀಯ ಜೀವ ವಿಮಾ ನಿಗಮದ ಅರಸೀಕೆರೆ ಶಾಖೆಯ ಆಡಳಿತಾಧಿಕಾರಿ.
ಮೂಲತಃ ತರೀಕೆರೆಯವರಾದ ಶ್ರೀಯುತರು ೧೯೯೪ರಿಂದ ಅರಸೀಕೆರೆಯಲ್ಲಿ ನೆಲೆಸಿದ್ದಾರೆ. ಮೊದಲ ಸಂಕಲನ "ಮರೆತ ಮಾತು" (೨೦೦೨) ಕೃತಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಡಿ ಸಿ ಅನಂತ ಸ್ವಾಮಿ ಪ್ರಶಸ್ತಿಯನ್ನೂ ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿಯನ್ನೂ ಪಡೆದವರು. ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯ ಪ್ರಶಸ್ತಿಗೆ(೨೦೦೬)"ಉಳಿದ ಪ್ರತಿಮೆಗಳು" ಹಸ್ತಪ್ರತಿಗೆ ಭಾಜನರಾದ ಹಾಸನ ಜಿಲ್ಲೆಯ ಏಕೈಕ ಕವಿ. ೨೦೧೦ರಲ್ಲಿ ವಿಭಾ ಕಾವ್ಯಪ್ರಶಸ್ತಿ "ತೆರೆದರಷ್ಟೇ ಬಾಗಿಲು" ಸಂಕಲನದ ಹಸ್ತಪ್ರತಿಗೆ ಪಡೆದ ಶ್ರೀಯುತರು ಪ್ರಜಾವಾಣಿ ಪತ್ರಿಕೆಯ ದೀಪಾವಳಿ ಸ್ಪರ್ಧೆಯಲ್ಲಿ ನಾಲ್ಕು ಬಾರಿ ಬಹುಮಾನ ಪಡೆದವರು. ಕನ್ನಡಪ್ರಭದ ಸಂಕ್ರಾಂತಿ ಕಥಾ ಸ್ಪರ್ಧೆಯಲ್ಲಿ ಎರಡು ಬಾರಿ ಬಹುಮಾನ ಪಡೆದುದಲ್ಲದೆ "ಸಂಚಯ" ಸಾಹಿತ್ಯ ಪತ್ರಿಕೆಯ ಕಾವ್ಯ ಸ್ಪರ್ಧೆಯಲ್ಲಿ ಐದು ಬಾರಿ ಬಹುಮಾನ ಪಡೆದವರು ಮತ್ತು ಸಂಚಯ ಪ್ರಕಟಿಸಿದ ಎರಡು ಕವನ ಸಂಕಲನಗಳ ಸಂಪಾದಕರಾಗಿಯೂ ಕೆಲಸ ಮಾಡಿದ್ದವರು.
ಹಾಸನದಿಂದ ಪ್ರಕಟವಾಗುವ ಜನತಾ ಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದ ಅಂಕಣ ಬರಹ ಅನುಸಂಧಾನ ಪುಸ್ತಕವಾಗಿ ೨೦೧೮ರಲ್ಲಿ ಪ್ರಕಟವಾಯಿತು ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಡಾ. ಹಾ.ಮಾ.ನಾಯಕ್ ಅಂಕಣ ಬರಹ ಪುಸ್ತಕ ಪ್ರಶಸ್ತಿಯನ್ನೂ ಪಡೆಯಿತು. ಸುಧಾ ಪತ್ರಿಕೆಯ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ "ಚಂದಿರನೇತಕೆ ಓಡುವನಮ್ಮ" ಪ್ರಬಂಧಕ್ಕೆ ಬಹುಮಾನ ಪಡೆದಿದ್ದ ಇವರ ಪ್ರಬಂಧಗಳ ಜೊತೆಗೆ ವಿಜಯ ಕರ್ನಾಟಕ ಪತ್ರಿಕೆಯ ಓಪೆಡ್ ಪುಟಕ್ಕೆ ಬರೆಯುತ್ತಿದ್ದ ಬರಹಗಳ ಸಂಕಲನ"ಮನೆಯಿಂದ ಮನೆಗೆ" ೨೦೧೮ರಲ್ಲಿ ಪ್ರಕಟವಾಗಿದೆ.
ಹಾಸನ ಭದ್ರಾವತಿ ಮತ್ತು ಮೈಸೂರು ಆಕಾಶವಾಣಿಗಳಿಂದ ೧೫೦ಕ್ಕೂ ಹೆಚ್ಚು ಚಿಂತನಗಳು ಪ್ರಸಾರವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ಹೊಸ ದನಿ ಹೊಸ ಬನಿ ಭಾವಗೀತೆಗಳ ಕಾರ್ಯಕ್ರಮದಲ್ಲಿ ಎರಡು ಬಾರಿ ಇವರ ಗೀತೆಗಳು ತಿಂಗಳ ಹಾಡಾಗಿ ಪ್ರಸಾರವಾಗಿವೆ.
ಗದಗ ಮತ್ತು ಉಡುಪಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದ ಇವರು ದಸರಾ ಕವಿಗೋಷ್ಠಿಯಲ್ಲಿ ಕೂಡ ಆಹ್ವಾನಿತರಾಗಿದ್ದಾರೆ. ಮೂಡಬಿದರೆಯ ಆಳ್ವಾಸ್ ನುಡಿಸಿರಿಯ ಕವಿ ನಮನ ಕವಿ ಸಮಯದಲ್ಲೂ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿವಿಧ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಡಾ.ಯು.ಆರ್.ಅನಂತಮೂರ್ತಿಯವರು ಇವರ ಸಂಕಲನ ಉಳಿದ ಪ್ರತಿಮೆಗಳು ಪುಸ್ತಕಕ್ಕೆ ಬೆನ್ನುಡಿ ಬರೆದಿರುವುದು. ನಾಡಿನ ಶ್ರೇಷ್ಠ ವಿಮರ್ಶಕರಾದ ಎಚ್.ಎಸ್.ರಾಘವೇಂದ್ರ ರಾವ್ ಮತ್ತು ಒ.ಎಲ್.ನಾಭೂಷಣ ಸ್ವಾಮಿ ಇವರ ಉಳಿದ ಎರಡು ಸಂಕಲನಗಳಿಗೆ ಮುನ್ನುಡಿ ಬರೆದಿರುವುದು ಶ್ರೀಯುತರ ಕಾವ್ಯ ಕೃಷಿಗೆ ಸಿಕ್ಕ ಗೌರವವಾಗಿದೆ.
ಎಡಬಿಡದ ಕಛೇರಿ ಕೆಲಸ ಸಾಹಿತ್ಯ ಕೃಷಿಯ ಜೊತೆ ಪ್ರವಾಸದ ಹುಚ್ಚೂ ಇರುವ ಇವರು ಭಾರತಾದ್ಯಂತ ಸಂಚರಿಸಿದ್ದಾರೆ. ಅಂಡಮಾನ್ ಕುರಿತ ಇವರ ಪ್ರವಾಸ ಕಥನ ಅವಧಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.
ಶ್ರೀ ಸ್ವಭಾವ ಕೋಳಗುಂದ ಮತ್ತು ಕೊಟ್ರೇಶ್ ಅಮರಗೋಳ ಮಠ ಇವರು ನಡೆಸುವ ಕುರಿತೋದದೆಯುಂ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುತ್ತಾರೆ. ಜಯಲಕ್ಷ್ಮಿ ಕೋಳಗುಂದ ಮತ್ತು ಕೊಟ್ರೇಶ್ ಅವರ ಸಂಕಲನಗಳಿಗೆ ಮುನ್ನುಡಿಯನ್ನು ಬರೆದಿದ್ದಾರೆ.
ಸದ್ಯ ಸಂಗಾತಿ ಸಾಹಿತ್ಯ ಪತ್ರಿಕೆಯಲ್ಲಿ ಪ್ರತಿ ಗುರುವಾರ ಫೇಸ್ಬುಕ್ ಕವಿಗಳ ಕವಿತೆಗಳ ವಿಮರ್ಶಾ ಲೇಖನಗಳನ್ನು "ಹೊಸ ದನಿ ಹೊಸ ಬನಿ" ಅಂಕಣದ ಮೂಲಕ ಹೊಸ ಕವಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಬುದ್ಧ ಗುರುವಿಗೆ
ಎಲ್ಲರಂತೆ ನಾನು ನಮಿಸುವಾಗಲೂ
ಮುಖದ ಮೇಲಣ ಅವನ ಮಂದಹಾಸದ ಹಿಂದೆ
ಯಶೋಧರೆಯ ದುಃಖದ ಕಡಲು
ತಬ್ಬಲಿ ರಾಹುಲನ ಬಿಕ್ಕು
ಶುದ್ಧೋಧನನ ಪುತ್ರವಾತ್ಸಲ್ಯದ ಕುರುಡು
ದಟ್ಟವಾಗಿ ಕಾಣಿಸುತ್ತವೆ…
ಬುದ್ಧ ಗುರುವಿನ
ಬೋಧನೆಗೆ ಕಿವಿ ತೆರೆದಿಟ್ಟಾಗಲೂ
ಕಿಸಾಗೌತಮಿಯ ತಾಯಿ ಕರುಳಿನ ಸಂಕಟ
ಅಂಗುಲಿಮಾಲನ ಕೋಪ ಪ್ರತೀಕಾರದ ಪಣ
ಆಮ್ರಪಾಲಿಯ ಔತಣದ ಕಾರಣ
ಲುಚ್ಛವಿಯ ರಾಜನ ಅಹಂಕಾರಗಳೂ
ಕಣ್ಮುಂದೆ ಸುಳಿದು ಕಿವಿಯ ಮುಚ್ಚುತ್ತವೆ….
ಬುದ್ಧಂ ಶರಣಂ ಗಚ್ಛಾಮಿ
ಎಂದು ಪಠಿಸುವ ಮೊದಲು ಕತ್ತಿ ಹಿರಿದ ಚಂಡ ಅಶೋಕ
ತುಂಡರಿಸಿದ ಅವನ ಸೋದರರ ಜೀವಗಳು
ಸಂಘಂ ಶರಣಂ ಗಚ್ಛಾಮಿ
ಎನ್ನುತ್ತೆನ್ನುತ್ತಲೇ ನಿರ್ನಾಮವಾದ ಕಳಿಂಗದ ಉಸಿರ ಬಿಸಿ
ತಾಗಿಯೂ ಸಮರಾಂಗಣದಲ್ಲಿ ನೀರು ಹಂಚಿದ ಸಂತ
ತತ್ವೋಪದೇಶಗಳಿಗಿಂತಲೂ ಮಿಗಿಲಾಗಿ ತೋರುತ್ತಾನೆ…
ಬುದ್ಧನೆನ್ನುವುದು ಬರಿಯ ಹಸನ್ಮುಖ ಮುದ್ರೆಯಲ್ಲ
ಬೌದ್ಧಿಕತೆಯನಾವರಿಸುವ ತತ್ವ ಶಾಸ್ತ್ರ ಸಂಕೀರ್ತನೆಯಲ್ಲ
ಅವರಿವರನ್ನು ಕತ್ತಿಯ ಮೊನೆಯಲ್ಲಿ ಹೆದರಿಸುವುದೂ ಸಲ್ಲ
ಶತಮಾನಗಳ ಕೊಳೆ ಸುಲಭಕ್ಕೆ ಜಗ್ಗುವುದಿಲ್ಲ
ಅಂತ ಗೊತ್ತಿದ್ದೂ ಮತ್ತೆ ಮತ್ತೆ ಆಡಿದ ಮಾತಿನ ಅರ್ಥ-
ಇವತ್ತಿಗೂ ದಕ್ಕದೇ ಇನ್ನೂ ಆ ಅದೇ ಕತ್ತಲಲ್ಲೇ
ನರಳುತ್ತಿರುವಾಗ ಕಂಡ ಬೆಳದಿಂಗಳು!!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ