ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬೆರಳ ತುದಿಯಲ್ಲಿ ಹಣಪಾವತಿ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

“ಅಪ್ಪಾ! ಈ ಫೋನ್ ಪೇ, ಗೂಗಲ್ ಪೇಗಳಿಂದ ಹಣ ಪೇಮೆಂಟ್ ಮಾಡೋದು ಎಷ್ಟು ಸುಲಭ ಅಲ್ಲ! “ ಅಮೆರಿಕದಿಂದ ಬಂದ ಮಗಳ ವಿಸ್ಮಯಗೊಂಡ ಉದ್ಗಾರ ಇದು. ನಮ್ಮಲ್ಲಿರುವ ಈ ತರದ ಹಣ ಪಾವತಿ ಸವಲತ್ತು ತಂತ್ರಜ್ಞಾನದ ವಿಷಯದಲ್ಲಿ ಬಹಳ ಮುಂದುವರೆದ  ಅಮೆರಿಕದಲ್ಲಿ ಇಲ್ಲವಂತೆ. ಕಾರಣ ಅವರಿಗೇ ಗೊತ್ತಿರಬೇಕು ! 

ಭಾರತದಲ್ಲಿ ಎಲ್ಲ  ಸೇವೆಗಳನ್ನು ಮತ್ತು ವ್ಯವಹಾರಗಳನ್ನೂ ಡಿಜಿಟಲೀಕರಣ ಮಾಡಬೇಕೆನ್ನುವ ಸಂಕಲ್ಪ ೨೦೧೫ರಲ್ಲಿ ಹುಟ್ಟು ಹಾಕಲಾಯಿತು. ಅದೇ ಸಮಯದಲ್ಲಿ ಅಥವಾ ಸ್ವಲ್ಪ ಮುಂಚೆ ಮುಖೇಶ್ ಅಂಬಾನಿಯವರು ಪ್ರಚಲಿತಕ್ಕೆ ತಂದ ತಂತ್ರಜ್ಞಾನದ ಕ್ರಾಂತಿಯಿಂದ ಚರವಾಣಿ ಇರುವ ಎಲ್ಲರ ಕೈಯಲ್ಲೂ ಅಂತರ್ಜಾಲ ಉಪಯೋಗಿಸಿಕೊಳ್ಳುವ ಅನುಭವವಾಯಿತು. ಆ ಅನುಭವ ಈ ರೀತಿಯ ಆನ್ ಲೈನ್ ಪಾವತಿಗಳನ್ನು ಸುಲಭವಾಗಿಸಲು ದಾರಿ ಮಾಡಿ ಕೊಟ್ಟಿತು. ಸರಕಾರವೂ ತನ್ನ ಈ ಅಭಿಯಾನವನ್ನು ಯಶಸ್ವಿಯಾಗಿಸಲು ಸಾಕಷ್ಟು ಪ್ರಚಾರ ಮಾಡಿ ಈ ಆನ್ ಲೈನ್ ಪಾವತಿಗಳನ್ನು ದೇಶದ ನಾಲ್ಕೂ ಕಡೆಯ ಜನರಿಗೆ ಸಂದೇಶ ತಲುಪುವಂತೆ ಮಾಡಿತು.  

ಕೈಯಲ್ಲಿ ಸದಾ ಮೊಬೈಲು ಹಿಡಿದು ತಿರುಗುತ್ತ ಸಾಗುವ ಮತ್ತು ಎಲ್ಲವನ್ನೂ ಮೊಬೈಲುಗಳ ಮೂಲಕ ಮಾಡುವುದು ಅನುಕೂಲ ಎಂದು ಭಾವಿಸುವ ಯುವ ಪೀಳಿಗೆ, ಟೇಬಲ್ ವರೆಗೂ ಹೋಗಿ ತಮ್ಮ ಗಣಕ ಯಂತ್ರಗಳ ಮೂಲಕ ಹಣ ಕಳಿಸುವ ಪದ್ಧತಿಗೆ ಬದಲಾಗಿ ಮೊಬೈಲುಗಳಲ್ಲಿ ಹಣ ಪಾವತಿಸುವ ಈ ರೀತಿಯ ಪಾವತಿಯನ್ನು ಸ್ವಾಗತಿಸಿತು. ಮತ್ತು ಅದನ್ನು ಮೇಲಿಂದ ಮೇಲೆ ಉಪಯೋಗಿಸಲು ಶುರುಮಾಡಿತು.  ಈ ಸವಲತ್ತಿನಿಂದ ನಗದನ್ನು ಮತ್ತು ಕ್ರೆಡಿಟ್ ಕಾರ್ಡುಗಳನ್ನು ಕಿಸೆಯಲ್ಲಿಟ್ಟುಕೊಂಡು ತಿರುಗಬೇಕಾದ ಅವಶ್ಯಕತೆ ಇಲ್ಲಂದತಾಯಿತು.  ಆ ಸಮಯದಲ್ಲಿ ಈ ರೀತಿಯ ಪಾವತಿಗಳಿಗೆ ಪೇಟೀಎಮ್ ವೇದಿಕೆ ತುಂಬಾ ಬಳಕೆಯಲ್ಲಿ ಬಂದಿತು. ಕಾಲಕ್ರಮೇಣ ಫೋನ್ ಪೇ, ಗೂಗಲ್ ಪೇ, ಅಮೆಜಾನ್ ಪೇ, ಏರ್ ಟೆಲ್ ಪೇ ಮೊದಲಾದ ಹಣ ಪಾವತಿಸುವ ವೇದಿಕೆಗಳು ಶುರುವಾದವು. ಈಗೀಗ ಎಲ್ಲರ ಮೊಬೈಲಲ್ಲೂ ಒಂದಲ್ಲ ಎರಡು ಅಥವಾ ಮೂರು ಈ ತರದ ಹಣ ಪಾವತಿಯ ವೇದಿಕೆಗಳಿದ್ದು ಎಲ್ಲರೂ ಅವುಗಳನ್ನು ಹೇರಳವಾಗಿ ಬಳಸುತ್ತ ಹಣವನ್ನು ಪಾವತಿಸುತ್ತಿದ್ದಾರೆ. ಬೆಂಗಳೂರಿನಂಥ ನಗರಗಳಲ್ಲಂತೂ ನೋಟುಗಳ ಬಳಕೆಯೇ ಕಮ್ಮಿಯಗಿದೆ. ಆಟೋದವರು, ಕ್ಯಾಬಿನವರು, ಮಾಲ್ ಗಳಲ್ಲಿ ಎಲ್ಲೆಲ್ಲೂ ಈ ತರದ ಹಣ ಪಾವತಿಯೇ ಜಾಸ್ತಿಯಾಗಿದೆ. ಈಗೀಗ ರೈಲಿನ ಟಿಕೆಟ್ ಬುಕ್ ಮಾಡಲು, ವಿಮಾನಗಳಲ್ಲಿ ಟಿಕೆಟ್ ಮಾಡಿಸಲು ಕೂಡಾ ಈ ವೇದಿಕೆಗಳ ಬಳಕೆಯಾಗುತ್ತಿದೆ.  ಕೊನೆಗೆ  ಕೊತ್ತಂಬ್ರಿ ಸೂಡಿನ ಹತ್ತು ರುಪಾಯಿ ಸಹ ಇದರಲ್ಲೇ ಪೇಮೆಂಟ್ ಮಾಡುವ ಸವಲತ್ತು ಇದೆ. 

ಜಾಸ್ತಿ ತಂತ್ರಜ್ಞಾನದ ವಿವರಗಳಿಗೆ ಹೋಗದೆ ಈ ವೇದಿಕೆಗಳ ಹಿನ್ನೆಲೆ ಎಂದು ಒಮ್ಮೆ ಕಣ್ಣು ಹಾಯಿಸೋಣ. ಈ ವೇದಿಕೆಗಳೆಲ್ಲವೂ ರಾಷ್ಟ್ರೀಯ ಪಾವತಿಗಳ ನಿಗಮಕ್ಕೆ (National Payment Corporation of India) ಒಳಪಟ್ಟು ಕೆಲಸ ಮಾಡುತ್ತವೆ. ಇದು ಭಾರತೀಯ ರಿಜರ್ವ್ ಬ್ಯಾಂಕಿನ ಒಂದು ಅಂಗವಾಗಿದೆ. ೨೦೦೯ರಲ್ಲಿ ಈ ರೀತಿ ಭಾರತದಲ್ಲಾಗುವ ಎಲ್ಲ ಪಾವತಿಗಳನ್ನು ಕ್ರೋಡೀಕರಿಸುವ ಒಂದು ಆಲೋಚನೆಯೇ ಈ ನಿಗಮದ ಉಗಮ.  ೨೦೧೬ ರಲ್ಲಿ ಯುಪಿಐ (ಏಕೀಕೃತ ಪಾವತಿಗಳ ಮುಖಾಮುಖಿ) ಪ್ರಾರಂಭವಾಯಿತು.

ಶ್ರೀ ದಿಲೀಪ್ ಅಸ್ಬೆಯವರು ಇದರ ಹರಿಕಾರರಾದರೆ, ಶ್ರೀ ನಂದನ್ ನಿಲೇಕಾಣಿಯವರು ಇದನ್ನು ವಿಸ್ತರಿಸುವಲ್ಲಿ ತುಂಬಾ ಕೆಲಸ ಮಾಡಿದ್ದಾರೆ.  ಇವರು ಎಲ್ಲ ಬ್ಯಾಂಕುಗಳನ್ನು ಈ ಪಾವತಿ ವಿಧಾನಕ್ಕೆ ಒಪ್ಪಿಸುವುದಲ್ಲದೇ ರಿಜರ್ವ್ ಬ್ಯಾಂಕನ್ನು ಈ ಆಲೋಚನೆಯನ್ನು ಬೆಂಬಲಿಸುವಂತೆ ಮಾಡಿದರು. ಈ ವಿಧಾನದಿಂದ ನಮ್ಮ ಕೈಗಳಲ್ಲಿದ್ದ ಮೊಬೈಲ್ ಸೆಟ್  ನಿಂದ ಆ್ಯಪನ್ನು ಹಾಕಿಕೊಂಡು ನಮ್ಮ ಬ್ಯಾಂಕಿನ ಖಾತೆಗೆ ಅನುಸಂಧಾನಿಸಿಕೊಂಡು ವ್ಯಕ್ತಿಗಳಿಗೆ, ಸಂಸ್ಥೆಗಳ ಖಾತೆಗಳಿಗೆ ಹಣವನ್ನು ಪಾವತಿಸಬಹುದಾಗಿದೆ.  ಈ ರೀತಿಯ ಹಣ ಪಾವತಿ ತುಂಬಾ ತಕ್ಷಣವಾಗಿದ್ದು, ಹಣ ಪಾವತಿಸುವ ಮತ್ತು ಹಣ ಪಡೆಯುವ ಪಕ್ಷಗಳು ಹಣದ ವ್ಯವಹಾರದ ಬಗ್ಗೆ ಒಂದು ಸ್ಪಷ್ಟತೆಯನ್ನು ಪಡೆಯುತ್ತಾರೆ. ಬ್ಯಾಂಕಿನ ಖಾತೆಯನ್ನ ಲಿಂಕ್ ಮಾಡಲು ಇಚ್ಛಿಸದವರು ಈ ಆ್ಯಪ್ ಗಳಲ್ಲಿರುವ ವ್ಯಾಲೆಟ್ ಗಳಲ್ಲಿ ಆಗಾಗ ಹಣ ತುಂಬಿ ಅಲ್ಲಿದ್ದ ಹಣದಿಂದ ಪಾವತಿ ಮಾಡುವ ಅನುಕೂಲವೂ ಇದೆ. ಇದು ಸುರಕ್ಷಿತ ಮತ್ತ ತಕ್ಷಣದ ಪಾವತಿ ವಿಧಾನ ಆಗಿರುವುದರಿಂದ ಇದನ್ನು ಬಳಸಿ ಮಾಡುತ್ತಿರುವ ಪಾವತಿಗಳು ದಿನೇ ದಿನೇ ಹೆಚ್ಚುತ್ತಿವೆ. ಬರೀ ನಗರಗಳಲ್ಲೇ ಅಲ್ಲದೆ, ಜಿಲ್ಲೆ ಮತ್ತು ತಾಲ್ಲೂಕು ಪ್ರದೇಶಗಳಲ್ಲೂ ಇವುಗಳ ಬಳಕ ಹೆಚ್ಚುತ್ತಿದೆ. ಜನರೆಲ್ಲ ತಮ್ಮ ಸಂಭಾಷಣೆಗಳಿಗೆ ಬಹುತೇಕ ಬಳಸುತ್ತಿರುವ ವಾಟ್ಸಪ್ ಸಹ ತನ್ನದೇ ಆದ ಪಾವತಿಗಳ ಆ್ಯಪ್ ನಿಂದ ಪಾವತಿಗಳನ್ನು ಮಾಡಿಸುತ್ತಿದೆ.  ಸ್ವತಃ ಎನ್ ಪಿ ಸಿ ಐ ತನ್ನದೇ ಆದ ಭೀಮ್ ಎನ್ನುವ ಆ್ಯಪ್ ಹೊಂದಿದೆ. ಈ ತರದ ಆನ್ ಲೈನ್ ಪಾವತಿಗಳು ೨೦೨೩ರ ಕೊನೆಗೆ ೧೮೨ ಲಕ್ಷ ಕೋಟಿಯಷ್ಟಾಗಿವೆ. ಇದು ಒಟ್ಟು ಆನ್ ಲೈನ್ ಪಾವತಿಗಳ ಶೇಕಡಾ ೪೬ರಷ್ಟು ಆಗಿದೆ.

ಈ ಯುಪಿಐ ಪಾವತಿಗಳಿಂದ ಹಣ ಕಳಿಸುವುದು ಮತ್ತು ಪಡೆಯುವುದು ಸುಲಭವಾಗಿದೆ. 

ಹಣ ಕಳಿಸಲು ಬೇಕಾಗುತ್ತಿದ್ದ ಬ್ಯಾಂಕಲ್ಲಿಯ ಖಾತೆ ನಂಬರು, ಬ್ಯಾಂಕಿನ ಹೆಸರು, ಶಾಖೆ, ಅದರ ನಂಬರು ಇವ್ಯಾವೂ ಈಗ ಬೇಡ. ಮತ್ತೆ ಅವುಗಳನ್ನು ಬಳಸುವಾಗ ಒಂದು ಅಂಕೆ ತಪ್ಪಾದರೂ ಕಳಿಸಿದ ಹಣ ವಾಪಸ್ ಬರುವುದು, ಅಥವಾ ಆಚೆ ಖಾತೆದಾರ ಹಾರಾಡುವುದು ಈಗ ಇರುವುದಿಲ್ಲ. ಹಾಗಾಗಿ ಪಾವತಿಗಳು ಸುಲಭವೆನಿಸುತ್ತವೆ. ಮತ್ತು ಬರೀ ಮೊಬೈಲ್ ನಂಬರಿನ ಸಹಾಯದಿಂದಲೇ ಹಣ ಪಾವತಿ ಮಾಡುವ ಸವಲತ್ತಿನಿಂದ ಖಾತೆಯ ವಿವರಗಳು ಬಹಿರಂಗವಾಗುವುದಿಲ್ಲ. ಇಷ್ಟೇ ಅಲ್ಲದೆ, QR ಕೋಡ್ ಬಳಸಿ ಸಹ ಪಾವತಿ ಮಾಡಬಹುದಾದ ಅನುಕೂಲವೂ ಇರುವುದು ಮತ್ತೊಂದು ವರವಾಗಿದೆ.   

ಈ ಮೂಲಕ ದಿನದ ಇಪ್ಪತ್ತುನಾಲ್ಕು ಗಂಟೆಗಳಲ್ಲೂ ಹಣ ಪಾವತಿಸಬಹುದಾಗಿದೆ. ಕೈಯಲ್ಲಿ ಮೊಬೈಲ್ ಮತ್ತು ಅದರಲ್ಲಿ ಈ ಯುಪಿಐ ಆ್ಯಪ್ ಇದ್ದರಾಯ್ತು. 

ಹಣದ ವ್ಯವಹಾರಗಳು ಶುಲ್ಕರಹಿತವಾಗಿರುವುದು ಇವುಗಳ ಬಳಕೆ ಜಾಸ್ತಿಯಾಗಿರುವುದರ ಆಕರ್ಷಣೆಯಾಗಿದೆ.

ಯುಪಿಐಗಳ ಆ್ಯಪ್ ಗಳು ಖಾತೆದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಕೆಲವಾರು ಆಕರ್ಷಕ ಬಹುಮಾನಗಳು ಕೊಡುತ್ತಿರುವುದು ಸಹ ಇವುಗಳ ಹೆಚ್ಚಿನ ಬಳಕೆಗೆ ಪೂರಕವಾಗುತ್ತಿದೆ. 

ಬ್ಯಾಂಕುಗಳಲ್ಲಿ ಕೊಡುವ ಚೆಕ್ಕು ಪುಸ್ತಕಗಳು, ಕ್ರೆಡಿಟ್ ಕಾರ್ಡುಗಳ ಬಿಲ್ಲುಗಳ ಬಳಕೆ ಕಮ್ಮಿಯಾಗಿ ಕಾಗದದ ಬಳಕೆ ಕಮ್ಮಿಯಾಗಿದೆ. ಇದರಿಂದ ಕಾಗದಕ್ಕೆ ಬೇಕಾಗುವ ಮರಗಳ ಕಡಿತ ಕಮ್ಮಿಯಾಗಿ ಇದು ಪರೋಕ್ಷವಾಗಿ ಪರಿಸರ ಸಂರಕ್ಷಣಕ್ಕೆ ಪೂರಕವಾಗಿದೆ. 

ಈ ಪಾವತಿಗಳಿಂದ ನಗದು ವ್ಯವಹಾರ ಕಮ್ಮಿಯಾಗಿದೆ. ಇವುಗಳ ಬಳಕೆ ಜಾಸ್ತಿಯಾದ ಮೇಲೆ ನಗದಿನಲ್ಲಿ ಮಾಡುವ ವ್ಯವಹಾರ ಕಮ್ಮಿಯಾಗಿ, ನಾಣ್ಯಗಳ ಮತ್ತು ನೋಟುಗಳ ಅವಶ್ಯಕತೆ ಇಳಿಮುಖವಾಗಿದೆ. ಅವುಗಳ ಮುದ್ರಣ ವೆಚ್ಚವೂ ಖಜಾನೆಗೆ ಉಳಿದು ಹೋಗಿದೆ. ನಗದನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆಗೆದುಕೊಂಡು ಹೋಗುವಾಗ ಆಗುವ ಅನಾಹುತಗಳು ಇರುವುದಿಲ್ಲ. 

ನಗದು ವಹಿವಾಟಿನಿಂದ ತೆರಿಗೆಯ ವ್ಯಾಪ್ತಿಗೆ ಬಾರದೆ ಉಳಿದ ವ್ಯವಹಾರಗಳು ಈಗ ತೆರಿಗೆಯ ವ್ಯಾಪ್ತಿಯೊಳಗೆ ಬರುತ್ತಿವೆ. ಇತ್ತೀಚೆಗೆ ಒಬ್ಬ ಸಮೋಸ ಮಾರುವ ವ್ಯಾಪಾರಿಗೆ ಅವನ ವ್ಯವಹಾರ ೪೦ ಲಕ್ಶಕ್ಕೂ ಮೇಲ್ಪಟ್ಟು ಆಗಿದೆ ಎಂದು ತೆರಿಗೆ ಕಟ್ಟಲು ಹೇಳಲಾಗಿದೆ. ಇದರಿಂದ ಸರಕಾರಕ್ಕೆ ಬರುವ ತೆರಿಗೆ ಹಣ ಏರುತ್ತದೆ. ಕಪ್ಪುಹಣ ಕಮ್ಮಿಯಾಗುತ್ತದೆ. 

ಬಿಲ್ ಪಾವತಿಸುವುದು ಇನ್ನಷ್ಟು ಸುಲಭವಾಗಿದೆ. ಕರೆಂಟು ಬಿಲ್ಲು, ನೀರಿನ ಬಿಲ್ಲು, ದೂರವಾಣಿಗಳ ಬಿಲ್ಲು ಇವೆಲ್ಲವೂ ಒಂದು ಬೆರಳಂಚಿನಿಂದ ಪಾವತಿಸಬಹುದಾಗಿದೆ. ಇದರಿಂದ ಇಲಾಖೆಗಳ ಕೌಂಟರ್ ಗಳ ಹತ್ತಿರ ಸರತಿಗಳಲ್ಲಿ ನಿಲ್ಲುವ ತೊಂದರೆ ತಪ್ಪಿದೆ. 

ಈ ಪಾವತಿಗಳಲ್ಲಿ ಹಣ ಕೊಡಲು ಸಮಕ್ಷಮ ಬೇಕಾಗಿಲ್ಲ. ಬರೀ ಒಂದು ಫೋನ್ ಕರೆಯ ಮೇಲೂ ಸಹ ಹಣ ಪಾವತಿಸಬಹುದು. 

ಹಣ ಕಳಿಸಿದ್ದಕ್ಕೆ ಒಂದು ಸ್ಕ್ರೀನ್ ಷಾಟ್ ಕಳಿಸಿ, ಕಳಿಸಿದ್ದರ ಬಗ್ಗೆ ಧೃಢೀಕರಿಸ ಬಹುದಾದ ಸವಲತ್ತು ಸಹ ಇವುಗಳಲ್ಲಿ ಸಿಗುತ್ತದೆ. 

ಬೇರೇ ಬೇರೇ ಯುಪಿಐಗಳನ್ನ ಒಂದೇ ಖಾತೆಗೆ ಅಥವಾ ಒಂದಕ್ಕಿಂತ ಜಾಸ್ತಿ ಖಾತೆಗಳನ್ನ ಒಂದೇ ಯುಪಿಐಗೆ ಲಿಂಕೆ ಮಾಡುವ ಸೌಲಭ್ಯವಿದೆ.

ಪಾವತಿ ಮಾಡುವ ತುಂಬಾ ಸುಲಭವಾದ್ದರಿಂದ ಹಳ್ಳಿಗಳಲ್ಲೂ ಈಗ ಈ ತರದ ಪಾವತಿಗಳು ಶುರುವಾಗಿದ್ದು ಭಾರತದ ಗ್ರಾಮೀಣ ಜನತೆಯೂ ದೇಶದ ಡಿಜಿಲೀಕರಣದ ವ್ಯಾಪ್ತಿಗೆ ತಲುಪಿದ್ದಾರೆ. 

ಎಷ್ಟು ಸವಲತ್ತು ಹೆಚ್ಚಾಗುತ್ತದೋ ಅದಕ್ಕೆ ಸಮನಾಗಿ ಹಗರಣಗಳು, ಮೋಸಗಳು ಸಹ ಬೆಳೆಯುತ್ತವೆ. 

ಮೊಬೈಲುಗಳಲ್ಲಿ ಎಲ್ಲ ಮಾಹಿತಿ ಲಭ್ಯವಿರುವುದರಿಂದ ಆನ್ ಲೈನ್ ಮೋಸಗಳು ಜಾಸ್ತಿಯಾಗಿವೆ. ವಂಚಕರು ಮುಗ್ಧ ಖಾತೆದಾರರನ್ನು ವಂಚಿಸಿ ಹಣ ಅಪಹರಿಸಲು ಅನೇಕ ವಿಧಗಳಲ್ಲಿ ಪ್ರಯತ್ನಿಸುವುದು ಶುರುವಾಗಿದೆ. ಬ್ಯಾಂಕು ಖಾತೆಗಳ ಮಾಹಿತಿ ಪಡೆಯುವುದು ತುಂಬಾ ಸುಲಭವಾಗಿದೆ. ಒಮ್ಮೆ ಖಾತೆಯನ್ನು ಈ ವಂಚಕರು ತಲುಪಿದರೆ ಅಲ್ಲಿರುವ ಹಣವನ್ನೆಲ್ಲಾ ಸೆಕೆಂಡುಗಳಲ್ಲಿ ಅವರ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. 

ಆಗಾಗ ನೆಟ್ ವರ್ಕ್ ಸಿಗದಿರುವುದು,ತಡವಾಗುವುದು,ತಪ್ಪಿ ಇತರರ ಖಾತೆಗೆ ಹಣ ಹೋಗುವುದು,ಸಮಾರಂಭ, ಸಮ್ಮೇಳನಗಳಲ್ಲಿ ತುಂಬಾ ಜನ ಉಪಯೋಗಿಸುವಾಗ ಅಡೆತಡೆಗಳು ಬರುವುದು ಇವು ಹಣ ಪಾವತಿಸುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳಾಗಿವೆ. ತಪ್ಪಿ ಮತ್ತೊಬ್ಬರ ಖಾತೆಗೆ ಹಣ ಪಾವತಿಸಿದಲ್ಲಿ ಆ ಹಣ ಮತ್ತೆ ಸಿಗುವಲ್ಲಿ ಆಗುವ ವಿಳಂಬ ಸಹ ಒಂದು ಆತಂಕದ ಕಾರಣವಾಗಿದೆ.    ಎನ್ ಸಿ ಪಿ ಇ ಇವುಗಳ ಬಗ್ಗೆ ಗಮನ ಹರಿಸುತ್ತಿದ್ದು ಮತ್ತಷ್ಟು ಇದರ ಬಗ್ಗೆ ಸುಧಾರಣೆಗಳನ್ನು ತರುತ್ತಿದೆ. 

ಒಟ್ಟಾರೆ ಯುಪಿಐ ಪಾವತಿಗಳ ಮೂಲಕ  ಸರಕಾರ ಭಾರತದ ಪ್ರಜೆಗಳನ್ನು ಡಿಜಿಲೀಕರಣದ ವೇದಿಕೆಯಡಿ ತರುವುದರಲ್ಲಿ ಒಂದು ಯಶಸ್ವಿ ಹೆಜ್ಜೆ ಹಾಕಿದೆ ಎನ್ನಬಹುದಾಗಿದೆ. ಒಂದು ಮಹತ್ವದ ವಿಷಯವೆಂದರೆ ಈ ರೀತಿಯ ಕ್ಷಿಪ್ರ ಪಾವತಿಗಳಲ್ಲಿ ಭಾರತವೇ ವಿಶ್ವದಲ್ಲಿ ಮೊದಲ ಸ್ಥಾನ ಪಡೆದಿದೆ.