- ಬೆಳಕು - ನವೆಂಬರ್ 3, 2021
ಸಂಜೆಗೆ ಹಚ್ಚಿಟ್ಟ ದೀಪದ ಕುಡಿಗೆ ಅದೆಷ್ಟು ಉತ್ಸಾಹ! ದಿನದ ದಣಿವನ್ನೆಲ್ಲ ತನ್ನಲ್ಲಿ ಹೀರಿಕೊಂಡು ಮತ್ತೊಮ್ಮೆ ಚೇತನ ತುಂಬುವ ಕೆಲಸ ಅದರದು. ಬದುಕು ಹಾಗೆ ಅಲ್ಲವೆ, ಪಟ್ಟ ಕಷ್ಟಗಳನ್ನು ಮೀರಿ ಮತ್ತೊಮ್ಮೆ ಅಸಂಗತ ಚೇತನವಾಗುವ ಪ್ರಯತ್ನ ಪಡುವ ಹುರುಪೇ ಬದುಕು. ದೀಪಗಳೆಂದ ಮೇಲೆ ದೀಪಾವಳಿಗೆ ಸಾಲು ಸಾಲಾಗಿ ಹಚ್ಚಿಟ್ಟ ಹಣತೆಗಳು ನೆನಪಾಗುತ್ತವೆ. ಬಾಲ್ಯದ ಹಚ್ಚ ಹಸಿರು ನೆನಪುಗಳ ಮಡಿಕೆಗಳಲ್ಲಿ ದೀಪಾವಳಿಯ ನೆನಪು ಸುಕ್ಕೇ ಆಗದ ರೇಷ್ಮೆ ಸೀರೆ. ಇನ್ನೂ ಪ್ಯಾಂಟಿಗೆ ಪ್ರಮೋಷನ್ ಆಗದ ಕಾಲವದು, ಚಿಕ್ಕ ಚಡ್ಡಿಯಲ್ಲಿ ಅಪ್ಪನ ಕಿರುಬೆರಳು ಹಿಡಿದುಕೊಂಡು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಆಕಾಶಬುಟ್ಟಿಯನ್ನು ತರಲು ಹೋಗುತ್ತಿದ್ದ ಉತ್ಸಾಹ ಇನ್ನೂ ಈ ಕಾಲುಗಳಿಗೆ ಇದೆಯೆ? ಅವನ್ನೇ ಕೇಳಬೇಕು. ಮಾರುಕಟ್ಟೆಯ ಬೀದಿಯಲ್ಲಿ ಹೊಸ ತರಹದ ಆಕಾಶಬುಟ್ಟಿ ಬಂದಿವೆಯಂತೆ, ಸಮಾಜದ ಹೊಡೆತಕ್ಕೆ ಸಿಲುಕಿ ಯಾವುದೊ ಒಂದು ಐಟಿ ಕಂಪನಿಯ ಮೂಲೆಯೊಂದರಲ್ಲಿ ರಾತ್ರಿಯೆಲ್ಲ ಕುಳಿತು ಕಣ್ಣು ಊದಿಸಿಕೊಂಡು ಕೆಲಸ ಮಾಡುವ ನಮಗೆ ಅದರ ಬಗ್ಗೆ ಅರಿವೆಲ್ಲಿ ಆಗಬೇಕು? ಆ ದಿನಗಳೇ ಚಂದ, ಎಷ್ಟು ವಿಧಗಳ ಆಕಾಶಬುಟ್ಟಿಗಳು!!? ಕೊಳವೆ ಆಕಾರದ ಕೆಂಪು ಬುಟ್ಟಿ, ಮೈಯೆಲ್ಲಾ ತೂತು ಮಾಡಿಕೊಂಡು ತನ್ನೊಳಗಿನ ಪ್ರಭೆಯನ್ನ ಜಗತ್ತಿಗೆ ಪಸರಿಸಲು ಸಿದ್ಧವಾಗಿದ್ದ ನಕ್ಷತ್ರದ ಆಕಾಶಬುಟ್ಟಿ, ನೀಲಿ ಬಣ್ಣದ ಗುಂಡಗಿನ ಬುಟ್ಟಿ, ಷಟ್ಕೋನದ ಹಳದಿ ಬುಟ್ಟಿ ಒಂದೇ ಎರಡೇ, ಎಲ್ಲವನ್ನೂ ಕಣ್ಣಲ್ಲಿ ತುಂಬಿಕೊಂಡು ಕಣ್ಣುಗಳನ್ನೇ ಪುಟ್ಟದಾದ ಹಣತೆ ಮಾಡಿಕೊಂಡು ಮಾರುಕಟ್ಟೆಯ ಬೀದಿ ಬೀದಿಯಲ್ಲಿ ತಿರುಗುತಿದ್ದ ನಮಗೆ ಅಪ್ಪನ ಕಿರುಬೆರಳೇ ಭರವಸೆ. ಚೈನೀಸ್ ಆಕಾಶಬುಟ್ಟಿಗಳನ್ನ ಖರೀದಿಸಬೇಡಿ, ದೇಸೀ ಆಕಾಶಬುಟ್ಟಿಗಳನ್ನೇ ಖರಿದಿಸಿ ಎಂದು ವಾಟ್ಸ್ಯಾಪಿನಲ್ಲಿ ಬೊಬ್ಬೆ ಹೊಡೆಯುತ್ತಿರುವ ನಾವು ಇನ್ನೂ ನಮ್ಮ ಕಣ್ಣುಗಳನ್ನು ನೋಡಿಕೊಂಡಿಲ್ಲ.. ಒಮ್ಮೆ ನಿಮ್ಮ ಕಣ್ಣುಗಳನ್ನು ನೋಡಿಕೊಳ್ಳಿ ಬಾಲ್ಯದಲ್ಲಿ ಹತ್ತಿದ್ದ ಹಣತೆಗೆ ಯಾಕೊ ಎಣ್ಣೆ ಕಡಿಮೆಯಾಗಿದೆ. ಬದುಕಿನ ಎಲ್ಲ ಕೆಲಸಗಳಿಗೂ ಒಂದೊಂದು ಕಾರಣವನ್ನ ಹುಡುಕಿ ಹೊರಟ ನಾವು, ಕಾರಣವಿಲ್ಲದೆ ಖುಷಿಪಡುವ ನಮ್ಮೊಳಗಿನ ಮಗುವನ್ನ ಯಾವುದೋ ಒಂದು ಸಂತೆಯಲ್ಲಿ ಕಳೆದುಕೊಂಡಿದ್ದೇವೆ, ಹಬ್ಬಕ್ಕೆ ತಂದ ಬಟ್ಟೆ ಇನ್ನೂ ಕಪಾಟಿನಲ್ಲೇ ಇದೆ.
ಕೊನೆಗೂ ಎಲ್ಲ ಆಕಾಶಬುಟ್ಟಿಗಳನ್ನು ನೋಡಿ ನಮ್ಮ ಮನೆಯ ಬಾಗಿಲಿಗೆ ಹೊಂದಿಕೆಯಾಗುವ ಆಕಾಶಬುಟ್ಟಿಯೊಂದನ್ನು ಹೆಕ್ಕಿ ತಂದು ಮನೆಯ ಕಡೆಗೆ ಹೊರಟಾಯಿತು, ಯಾಕೊ ಅಪ್ಪ ಪಟಾಕಿಗಳ ಬಗ್ಗೆ ಸೊಲ್ಲೆ ಎತ್ತುತ್ತಿಲ್ಲ, ಮನದಲ್ಲಿ ಗೊಂದಲ, ಭೂಚಕ್ರದ ಕಾಂತಿಯನ್ನು ಅಪ್ಪ ಮರೆತೇ ಹೋದನೆ? ಇನ್ನೂ ಮಾರುಕಟ್ಟೆಯ ಸೆರಗು ಬಂದಿಲ್ಲ, ಈಗಲಾದರೂ ಅವನಿಗೆ ನೆನಪಾಗಬಾರದೆ? ಹೋಗಲಿ ನಾನೇ ನೆನಪಿಸೋಣವೆಂದರೆ ಅವನ ಎದುರು ಮಾತಾಡುವ ಧೈರ್ಯ ನನಗೆಲ್ಲಿದೆ? ಇದೆ ಗೊಂದಲಗಳೊಂದಿಗೆ ಅಪ್ಪನ ಮುಖ ನೋಡಿದರೆ ಅವನು ನಗುತ್ತ ಹೇಳುತ್ತಾನೆ “ಅಲ್ಲಿ ಮೂಲೆ ಅಂಗಡಿಯಲ್ಲಿ ಚೆನ್ನಾಗಿರೊ ಪಟಾಕಿಗಳು ಒಳ್ಳೆಯ ಬೆಲೆಗೆ ಸಿಗ್ತಾವೆ, ಬಾ” ಎಂದು, ಅಪ್ಪ ಅಂದ್ರೆ ಹಾಗೆ ಅಲ್ವ? ಏನನ್ನೂ ಹೇಳದೆ ತಿಳಿದುಕೊಳ್ಳುವ ಜಾದುಗಾರ ಆತ.
ಎಲ್ಲವನ್ನು ಮುಗಿಸಿಕೊಂಡು ಮನೆಗೆ ಹೋದರೆ, ಅಮ್ಮ ಎಲ್ಲಿಂದಲೊ ತಂದ ಮಾವಿನ ಎಲೆಗಳ ರಾಶಿಗಳ ಮಧ್ಯೆ ಕುಳಿತಿರುತ್ತಾಳೆ ಚಂದದ ಲಕ್ಷ್ಮಿಯಂತೆ. ಅಗೋ ನೋಡಿ ಬಂದೆ ಬಿಟ್ಟಿತು, ದೀಪಗಳ ಹಬ್ಬ, ದೀಪಾವಳಿ. ಅಮ್ಮ ತನ್ನ ಹಸಿತೆಲೆಗೆ ಬಟ್ಟೆ ಸುತ್ತಿಕೊಂಡು ನಿದ್ದೆಯ ಮಂಪರಿನಲ್ಲಿದ್ದ ನಮ್ಮನ್ನು ಎಬ್ಬಿಸುತಿದ್ದರೆ, ಅಂದು ಅವಳ ಮುಖದ ಕಳೆ ಯಾಕೊ ದುಪ್ಪಟ್ಟಾಗಿರುತ್ತೆ, ಎಂದಿನಂತೆ ಅಪ್ಪ ತನ್ನ ಬಿಳಿ ಪಂಚೆಯ ಮೇಲೆ ಚೇರಿನ ಮೇಲೆ ಕುಳಿತು ದಿನ ಪತ್ರಿಕೆಯನ್ನ ಓದುತಿದ್ದಾನೆ, ಅವನಿಗೋ ಹಬ್ಬದ ಹುರುಪು ಇದ್ದಂತೆ ಕಾಣುತ್ತಿಲ್ಲ, ಯಾಕೊ ಇಂದು ಮನೆ ಬೆಳಗುತ್ತಿದೆ, ಅಮ್ಮನ ಕಣ್ಣುಗಳನ್ನು ನೋಡಿದಾಗಲೆ ಗೊತ್ತಾಗಿದ್ದು ಅದಕ್ಕೆ ಕಾರಣ. ಅಡುಗೆ ಮನೆಯಲ್ಲಿ ಬೇಳೆ ಬೇಯುತ್ತಿದೆ, ಬಾಗಿಲಿಗೆ ಜೊತೆಯಾಗಲು ಮಾವಿನ ತಳಿರು ತೋರಣ ಸೆಣಬಿನ ಜೊತೆ ಸಿದ್ಧವಾಗಿದೆ, ನಾಚಿ ಹಸಿರಾಗಿದೆ ಆಗತಾನೆ ಮದುವೆಗೆ ತಯಾರಾದ ವಧುವಿನಂತೆ. ಅಂತೂ ಅಮ್ಮನ ನಿಷ್ಕಲ್ಮಶ ಕೈಗಳಿಂದ ಒಂದು ದೈವಿಕ ಜಳಕವೂ ಆಯಿತು, ಕಪಾಟಿನಲ್ಲಿಟ್ಟಿದ್ದ ಹೊಸ ಬಟ್ಟೆ ತೊಟ್ಟಾಯಿತು, ಈಗ ಅಮ್ಮ ಮಾಡಿದ ಹೋಳಿಗೆಯನ್ನು ದೇವರಿಗೆ ಎಡೆಯಿಡುವ ಸಮಯ, ಯಾಕೊ ಹೋಳಿಗೆ ಸೆಳೆಯುತ್ತಿದೆ, ಎಡೆಯಿಡುವ ಮುನ್ನ ಏನನ್ನೂ ತಿನ್ನಬಾರದೆಂಬ ಅಮ್ಮನ ಕಟ್ಟಾಜ್ಞೆಯನ್ನ ಮೀರಿ ಕದ್ದು ಒಂದು ತುಣುಕು ಹೋಳಿಗೆ ತಿಂದಾಯಿತು, ದೇವರು ಕೋಪ ಮಾಡಿಕೊಳ್ಳದಿದ್ದರೆ ಸಾಕು, ಎಡೆಯ ಕಾರ್ಯಕ್ರಮವೂ ಮುಗಿಯಿತು, ಕದ್ದು ತಿಂದ ಹೋಳಿಗೆಯ ತುಣುಕಿನ ಬಗ್ಗೆ ನನಗೆ ಮತ್ತು ದೇವರಿಗೆ ಮಾತ್ರವೇ ಗೊತ್ತು, ಬಹುಷಃ ನಾವಿಬ್ಬರು ಆ ಘಟನೆಯ ಬಳಿಕವೇ ಗೆಳೆಯರಾಗಿರಬೇಕು. ಎಡೆಯಾದ ನಂತರ ಊಟ ಮಾಡಿದರೆ, ಯಾಕೊ ಕದ್ದುತಿಂದ ಹೋಳಿಗೆಯ ತುಣುಕಿಗೆ ಇದ್ದ ರುಚಿ ಈ ಹೋಳಿಗೆಗೆ ಇಲ್ಲ, ದೇವರು ಅಮ್ಮನ ಕೈರುಚಿಯನ್ನೆಲ್ಲ ಎಡೆಯ ಮುಖಾಂತರ ತಿಂದುಬಿಟ್ಟನೇ? ಅದು ದೇವರಿಗೆ ಗೊತ್ತು. ಇನ್ನು ಪಟಾಕಿ ಹಾರಿಸಲು ಸಂಜೆವರೆಗೂ ಕಾಯಬೇಕು, ಹೊಟ್ಟೆತುಂಬ ಊಟ ಮಾಡಿದರೂ ನಿದ್ದೆ ಬರುತ್ತಿಲ್ಲ, ಹಬ್ಬದ ಕೆಲಸದಲ್ಲಿ ದಣಿದಿದ್ದ ಅಪ್ಪ ಅಮ್ಮ ನಿದ್ದೆ ಹೋಗಿದ್ದರು, ಹಿಂದಿನ ದಿನ ಮಾರುಕಟ್ಟೆಯಿಂದ ಕಣ್ಣಲ್ಲಿ ತುಂಬಿಸಿಕೊಂಡು ಬಂದ ಬೆಳಕು ನಿದ್ದೆ ಮಾಡಲು ಬಿಡುತ್ತಿಲ್ಲ.
ಸಂಜೆ ಕಿಟಕಿಗುಂಟ ಹಣತೆಗಳನ್ನು ಸಾಲಾಗಿ ಹಚ್ಚಿ ಮನೆಯ ಮುಂದೆ ತಂದ ಆಕಾಶಬುಟ್ಟಿಯನ್ನು ಕಟ್ಟಿ ಪಟಾಕಿಗೆ ಸಿದ್ಧವಾಗುವ ಹುರಪು ಈಗಲೂ ಮಧುರ, ಎದರು ಮನೆಯ ಪುಟ್ಟ ರಾಧೆ ಪುಟ್ಟ ರೇಷ್ಮೆ ಲಂಗವನ್ನು ತೊಟ್ಟು ಬರುತ್ತಿದ್ದರೆ ಅವಳನ್ನು ನೋಡುವ ಖುಷಿಯೆ ಬೇರೆ, ಪಟಾಕಿ ಹಾರಿಸಲು ಹೆದರುತಿದ್ದ ಕೈಗಳಿಗೆ ಯಾಕೊ ಊದಿನ ಕಡ್ಡಿ ತುಂಬಾ ಭಾರವಾಗಿರುತಿತ್ತು, ಅಪ್ಪ ಬಂದು ಮೊಣಕೈಯನ್ನು ಹಿಡಿದಾಗಲೆ ಮನಸ್ಸಿಗೆ ಕಸು ಬರುತಿತ್ತು. ರಾಧೆ ನನ್ನ ಹೆದರಿಕೆ ನೋಡಿ ನಗುತಿದ್ದಳು, ಅವಳ ಮುಂದೆ ಮಾನ ಉಳಿಸಿಕೊಳ್ಳಲು, ಅಪ್ಪನ ಕೈ ಕೊಸವಿಕೊಂಡು ಪಟಾಕಿ ಹಚ್ಚುವ ಹುಚ್ಚು ಧೈರ್ಯ ಮಾಡಿ ಕೈ ಸುಟ್ಟುಕೊಂಡಾಗ ಅಮ್ಮ ಓಡಿ ಬರುತ್ತಿದ್ದಳು, ತನ್ನ ನಲ್ಮೆಯ ಪ್ರೀತಿಯನ್ನು ಹರಿಸಿ ಗಾಯದ ಕೈಗಳನ್ನು ಮುದ್ದಿಸಲು, ಆ ನಲ್ಮೆಯೆ ಪ್ರೀತಿ, ಅಮ್ಮ ಹಚ್ಚಿಟ್ಟ ಹಣತೆಯ ದೀಪ ಇನ್ನೂ ಹಾಗೆ ಇದೆ ಮನದ ಮುಗಿಲಲ್ಲಿ. ಕೈ ನೋವಿನ ಸುಖದಲ್ಲೆ ರೇಷ್ಮೆ ಲಂಗದ ರಾಧೆ ಸರಿದು ಹೋಗಿದ್ದಾಳೆ, ಗಾಯದ ಗುರುತು ಮಾತ್ರ ಇನ್ನೂ ನನ್ನನ್ನು ಹಂಗಿಸುತ್ತಲೇ ಇರುತ್ತದೆ. ಈಗ ರೇಷ್ಮೆ ಲಂಗದ ರಾಧೆ ದೊಡ್ಡವಳಾಗಿದ್ದಾಳಂತೆ, ಅಮೇರಿಕಾದ ಯಾವುದೊ ಕಂಪನಿಯ ಮೂಲೆಯಲ್ಲಿ ರೇಷ್ಮೆ ಸೀರೆಯನ್ನುಟ್ಟು ಪ್ಲ್ಯಾಸ್ಟಿಕ್ ದೀಪದಿಂದ ದೀಪಾವಳಿ ಆಚರಿಸುತ್ತಿದ್ದಾಳಂತೆ, ಆದರೆ ಇಂದಿಗೂ ಅಮ್ಮ ಹಚ್ಚಿದ ಹಣತೆ ತನ್ನ ಅದೇ ಪ್ರಭೆಯೊಂದಿಗೆ ಬೆಳಗುತ್ತಿದೆ, ಅಮ್ಮ ಉಟ್ಟ ರೇಷ್ಮೆಸೀರೆಗೆ ಸುಕ್ಕು ಬಂದಿಲ್ಲ, ಅವಳ ನಗು ಇನ್ನೂ ಮಾಸಿಲ್ಲ, ಅಮ್ಮನ ಹೋಳಿಗೆಯ ರುಚಿ ಇನ್ನೂ ದೇವರು ಸವಿಯುತ್ತಲೇ ಇದ್ದಾನೆ, ಅಮ್ಮನ ಕಣ್ಣುಗಳು ಇನ್ನೂ ಬೆಳಕಾಗಿ ಮನೆಯನ್ನು ಬೆಳಗುತ್ತಿವೆ, ಬೆಳಕು ಅಂದ್ರೆ ಹಾಗೆ ಅಲ್ವ? ಮನ ಮನೆಯನ್ನು ಬೆಳಗುವ ಕೆಲಸ ಅದರದು, ಅಮ್ಮನೂ ಹಾಗೆ, ಹೆಜ್ಜೆ ಇಟ್ಟಲೆಲ್ಲ ಬೆಳಕಾಗಿಸುವ ಶಕ್ತಿ ಅವಳು, ಅಮ್ಮ ಅಂದ್ರೆ ಬೆಳಕು.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ