- ನಂಬಿಕೆಯ ವರ್ಷಧಾರೆ - ಜುಲೈ 8, 2024
- ಹುಚ್ಚು ಅಚ್ಚುಮೆಚ್ಚಾದಾಗ - ಜನವರಿ 27, 2024
- ಅಪರಿಚಿತರು - ಡಿಸಂಬರ್ 31, 2023
ತಮದಲ್ಲಿ ಬೆಳಗುವ ತಾರೆಗಳು, ಬಾಂದಳದಲ್ಲಿ ಇಣುಕುತ್ತಿರುವ ಹೊತ್ತದು, ಸಂಧ್ಯೆಯೆಂಬ ಸೋಜಿಗದ ಸಮಯ. ಆಗಸದ ತುಂಬಾ ದಿನನಿತ್ಯದ ಕೆಲಸ ಮುಗಿಸಿ, ಹಳೆಯದಾದರೂ ನವನವೀನತೆಯಿಂದ ಕಂಗೊಳಿಸುವ ಭಾಸ್ಕರನು ಭುವಿಯ ಈ ಗೋಳಕ್ಕೆ ವಿದಾಯ ಹೇಳುವ ಗೋಧೂಳಿಯ ಪವಿತ್ರ ಕ್ಷಣ. ಬಹುಶಃ ಮನದ ಕಾನನದಲ್ಲರಳಿ, ಹೂವಾಗಿ, ಮುದುಡಿ, ಕೊಳೆಯುವ ನೈದಿಲೆಗಳ ಬದುಕಿನ ಮುನ್ನೋಟ ಸ್ಮೃತಿಪಟಲದಲ್ಲಿ ಚಿತ್ರಣವಾಗಿ, ಚಿತ್ತವನ್ನೇ ಚಿತ್ತೈಸದಿರುವಂತೆ ಚಾಂಚಲ್ಯತೆಯ ರೂಪಕ ನಯನದ್ವಯಗಳಲ್ಲಿ ನಟಿಸುವಂತೆ ಮಾಡುವ ಹೊತ್ತಿಗೆ ಸಂಧ್ಯೆಯೆಂಬ ಹೆಸರಿರಬೇಕು.
ಕಾಡುವ ನೆನಪುಗಳ ಅದ್ವಿತೀಯ ರೂಪುರೇಷೆಗೆ ಮಸ್ತಕದ ಪುಟಗಳಲ್ಲಿ ಜಾಗವಿಟ್ಟು ಬದುಕ ಪಯಣದಲ್ಲಿ ಸಾಗುತಿರುವಾಗ, ಹಿಂದೊಮ್ಮೆ ಕಂಡ ಕನಸುಗಳ ಅಧ್ಯಾಯದಿಂದ ಅದೆಷ್ಟು ಕವನಗಳು ನೈಜತೆಯ ರೂಪ ಪಡೆದಿವೆ ಎಂದು ನೋಡುವ ಭರದಲ್ಲಿ ಪುಸ್ತಕದ ಪುಟ ತೆರೆದಿಟ್ಟಾಗ ಥಟ್ಟೆಂದು ಲೀಲಾಜಾಲವಾಗಿ ನಗುತ್ತಾ ಕಾಣುವುದು ಮುಖಪುಟವು, ಪರಿವಿಡಿಯೊಂದಿಗೆ.
ಅಂತ್ಯವಿರದ ಶರಧಿಯ ತಟದಲ್ಲಿ ಅಥವಾ ತೀರ ಪರಿಚಿತವೆಂದೆನಿಸುವ ವನಸುಮದ ಬುಡದಲ್ಲಿನ ಕಲ್ಲೊಂದರ ಮೇಲೆ ಅಥವಾ, ದಟ್ಟ ಜನಜಂಗುಳಿಯ ಪಕ್ಷಿನೋಟವನೀವ ಬಾಲ್ಕನಿಯಿಂದ,ಅಥವಾ ಏಕಾಂತವನ್ನು ಹೇರಳವಾಗಿ ಕೊಡುವ ಉಪ್ಪರಿಗೆಯ ಮರದ ಕುರ್ಚಿಯಲ್ಲಿ ಅಥವಾ ಗುಂಯ್ಗುಡುವ ಜೀರುಂಡೆಗಳ ನಾದದೊಂದಿಗೆ ತೀರ ಸನಿಹವೆನಿಸುವ ಹೊಳೆಯ ದಡದಲ್ಲಿ ಅಸ್ತಮಿಸುವ ಮಿಹಿರನ ಮೋಜು ಸೋಜಿಗವಾಗಿ ಮುಗಿಯುವ ಹೊತ್ತಿಗಲ್ಲವೇ ಸಾಮಾನ್ಯವಾಗಿ ನೆನಪಿನ ಜೋಳಿಗೆ ತೆರೆಯುವುದು? ಜೋಳಿಗೆಯ ತುಂಬಾ ಹೋಳಿಗೆಯೋ, ಕಜ್ಜಾಯವೋ, ಹಸಿಗಂಜಿಯೋ, ಸೂಜಿಮೆಣಸಿನ ಚಟ್ನಿಯೋ, ಹುಣಸೇಕಾಯಿಯ ಗೊಜ್ಜೋ ಬಲ್ಲವರಾರು, ಬುತ್ತಿ ತೆರೆಯುವ ಮೊದಲು!
ಪಾತ್ರ ಪರಿಚಯದ ಮೊದಲನೇ ಅಧ್ಯಾಯದಲ್ಲಿ ಹೊಸತೇನಿರದು. ತಿಳಿಯಾದ ಸರೋವರದಲ್ಲಿ ತುಂಬಿರುವ ತಾವರೆಯ ಸಮೂಹದಂತೆ ಎಲ್ಲವೂ ಅಂದವೇ, ಚಂದವೇ. ಪುಟ ತೆರೆದಂತೆ, ಮುದುಡಿ ಮತ್ತೊಮ್ಮೆ ಅರಳುವುದಲ್ಲವೇ ಮಂದಹಾಸ? ಅಧ್ಯಾಯಗಳ ಪೂರ್ಣ ಚಿತ್ರಣ ಕಣ್ಮುಂದೆ ರಾರಾಜಿಸಿದರೂ, ಮಧ್ಯದೊಂದು ಅಧ್ಯಾಯ ತೀರಾ ಆಪ್ತವೆನಿಸುವುದಲ್ಲವೇ?
ಬೀಳುವ ಏಟಿಗೆ ಹೆದರಿ, ಅಮ್ಮನ ಸೀರೆಯ ಸೆರಗಿನ ಹಿಂದೆ ನಿಂತು, ಮತ್ತೊಮ್ಮೆ ಸಹೋದರನಿಗೆ ನಕ್ಕು ಅಣಕಿಸಿದ್ದು, ಅಪ್ಪ ನೋಡಿ ಬೆತ್ತ ತಂದಿದ್ದು ಇಂದಿಗೆ ನೆನಪಾಗಿ ಉಳಿಯುತ್ತದೆ, ಅಮರವಾಗಿ. ಒಗ್ಗೂಡಿ ಮಾಡಿದ ತರಲೆಗಳು ತಕರಾರುಗಳೊಂದಿಗೆ ಮುಕ್ತಾಯವಾಗುತ್ತಿದ್ದ ಬಾಲ್ಯದ ಬಾಲಂಗೋಚಿಗಳ ನೆನಪು ಜೇನಿನಲ್ಲಿ ಅದ್ದಿ ತೆಗೆದ ಸಿಹಿಯಲ್ಲವೇ? ಬಾಲ್ಯದಿಂದಲೂ ಸ್ನೇಹವಲ್ಲದ, ಮೊನ್ನೆ ಮೊನ್ನೆಯಷ್ಟೇ ಕೈಹಿಡಿದು ನಡೆದಂತಿರುವ ಗೆಳೆಯರ ಬಣವೊಂದು ಅತ್ಯಾಪ್ತವಾಗಿದ್ದು ಹೇಗೆ ಎಂಬ ಪ್ರಶ್ನೆಯೊಂದಿಗೆ, ಉರಿವ ಲಾಂದ್ರದ ಯಾವ ಬತ್ತಿಯು ಸರಿದು ದೀಪವಾರಿತೆಂಬುದು ಅರಿಯಲಾಗದ ಪ್ರಶ್ನೆಯಾಗುತ್ತದೆ, ಉತ್ತರ ಮಾತ್ರ ತುಸು ದೂರವೇ! ಬಯಸದಿದ್ದರೂ ಬಾಗಿಲಲಿ ನಿಂತು, ನೀ ಎನ್ನ ಶ್ರೀರಕ್ಷೆಯಾಗಿ ನಿಲ್ಲುವೆಯಾ ಎಂಬ ಪ್ರಶ್ನೆಗೆ ಉತ್ತರಿಸುವಾಗ ಕಂಬನಿಯೊಂದು ಕಣ್ರೆಪ್ಪೆಯ ತುದಿಯಲ್ಲಿ ಜಿನುಗಿ ಮರೆಯಾಗಿ, ನೂಲು ಹುಣ್ಣಿಮೆಯ ಗಳಿಗೆಯಲ್ಲಿ ಅದೇ ಶ್ರೀರಕ್ಷೆಯನ್ನು ರಾಖಿ ಎಂಬ ಬಾಂಧವ್ಯದ ನೂಲಿನಲ್ಲಿ ಕಟ್ಟಿ ಕೇಳುವಾಗ, ಆಕೆಯ ಕಂಗಳಲ್ಲೂ ಮೂಡುವ ಹನಿಯೊಂದರ ಪ್ರೇಮ ನೆನಪಾಗುತ್ತದೆ, ನೆನಪಳಿಯದಂತೆ. ಜೊತೆಯಾಗಿ ದಾರಿಗಳ ಸವೆದು, ಕನಸುಗಳ ಹಂಚಿಕೊಂಡು, ಕೈಹಿಡಿದು ನಡೆವಾಗ, ನೂರೆಂಟು ವಸಂತಗಳು ಹೀಗೆಯೇ ಪ್ರೀತಿಯ ನಾವೀನ್ಯತೆಯಿಂದ ತುಂಬಿರಲಿ ಎಂದು ಅಶ್ವಿನಿ ದೇವತೆಗಳಲ್ಲಿ ಬೇಡಿಕೆಯ ಪಟ್ಟಿಯನ್ನಿಟ್ಟ ನೆನಪು, ಅಂತ್ಯವರಿಯದ್ದು. ಹೊಂಗನಸ ಹೊತ್ತು ಹೊಂಗಿರಣಕ್ಕೆ ಮುಖ ಮಾಡಿ ಕೇಳಿದ ಅದೆಷ್ಟೋ ಅನವರತ, ಅಸಂಖ್ಯಾತ ಪ್ರಾರ್ಥನೆಗಳಲ್ಲಿ ನನಸಾಗಿರುವ ನೂರೆಂಟನ್ನು ಆಲಂಗಿಸಿದ್ದು ಅಮೃತ ತೆರದ ನೆನಪೇ, ಅನಂತವೇ.
ಇವುಗಳಲ್ಲಿ ಕೇವಲ ನೆನಪಾಗುಳಿದಿದ್ದೆಷ್ಟು? ಇಂದಿಗೂ ಜೀವಂತಿಕೆಯಿಂದ ಚಿಗುರುವ ಆ ನೆನಪನ್ನು ಹಂಚಿಕೊಳ್ಳಲು ಅದೇ ಜೀವಗಳು ಜೊತೆಯಾಗಿರುವುದೆಷ್ಟು.?ಕೆಲವನ್ನು ಉಳಿಸಿಕೊಳ್ಳುವ ಭರದಲ್ಲಿ ಅಳಿಸಿಹೋದ ಹತ್ತು ಹಲವಾರು ಬಾಂಧವ್ಯಗಳ ಬಿಗಿಯು ಉಸಿರುಗಟ್ಟುವಂತಾಗಲಿಲ್ಲವೇ? ಮಂದಹಾಸ ಹೊತ್ತು ತರುತ್ತಿದ್ದ ಕೆಲವೇ ಕೆಲವು ಕೈಗಳು ಇಂದಿಗೂ ಹೆಗಲನ್ನಪ್ಪುತ್ತಿವೆಯಲ್ಲಾ, ಅವುಗಳೊಮ್ಮೆ ಜೊತೆಯಾಗಿರದಿದ್ದರೆ ಬದುಕು ಅಸಹನೀಯವಾಗುತ್ತಿತ್ತೇನೋ ಎಂಬ ಭಾವ ನಾಭಿಯಾಳದಿಂದ ಹುಟ್ಟಿ ಕಂಬನಿಯಾಗಿ ಕಾಣುತ್ತದೆ. ಅದೆಷ್ಟೋ ಪ್ರಮಾಣಗಳು ಆಹುತಿಯಾಗಿ ಅಶ್ಮವಾದರೂ, ಕರ್ತವ್ಯದ ಹೆಸರೊಂದಿಗೆ, ಒಂಟಿ ಪಯಣಿಗನ ದಾರಿಯಂತೆ, ಮೊಗವೊಂದನು ನಗುವಿನಿಂದ ತುಂಬಿಸಿ ಬಾಳ ನೇಗಿಲಿಗೆ ನೊಗವನ್ನಾಗಿಸಿ ಹೊರಡುವ ಯಾತ್ರೆಯಲ್ಲಿ ಅನಿರ್ದಿಷ್ಟ ಮೌನ ಜೊತೆಯಾಗಿರುತ್ತದೆಯಲ್ಲವೇ?
ಇವುಗಳಲ್ಲಿ ಕೇವಲ ನೆನಪಾಗುಳಿದಿದ್ದೆಷ್ಟು? ಇಂದಿಗೂ ಜೀವಂತಿಕೆಯಿಂದ ಚಿಗುರುವ ಆ ನೆನಪನ್ನು ಹಂಚಿಕೊಳ್ಳಲು ಅದೇ ಜೀವಗಳು ಜೊತೆಯಾಗಿರುವುದೆಷ್ಟು.?ಕೆಲವನ್ನು ಉಳಿಸಿಕೊಳ್ಳುವ ಭರದಲ್ಲಿ ಅಳಿಸಿಹೋದ ಹತ್ತು ಹಲವಾರು ಬಾಂಧವ್ಯಗಳ ಬಿಗಿಯು ಉಸಿರುಗಟ್ಟುವಂತಾಗಲಿಲ್ಲವೇ? ಮಂದಹಾಸ ಹೊತ್ತು ತರುತ್ತಿದ್ದ ಕೆಲವೇ ಕೆಲವು ಕೈಗಳು ಇಂದಿಗೂ ಹೆಗಲನ್ನಪ್ಪುತ್ತಿವೆಯಲ್ಲಾ, ಅವುಗಳೊಮ್ಮೆ ಜೊತೆಯಾಗಿರದಿದ್ದರೆ ಬದುಕು ಅಸಹನೀಯವಾಗುತ್ತಿತ್ತೇನೋ ಎಂಬ ಭಾವ ನಾಭಿಯಾಳದಿಂದ ಹುಟ್ಟಿ ಕಂಬನಿಯಾಗಿ ಕಾಣುತ್ತದೆ. ಅದೆಷ್ಟೋ ಪ್ರಮಾಣಗಳು ಆಹುತಿಯಾಗಿ ಬೂದಿಯಾದರೂ, ಕರ್ತವ್ಯದ ಹೆಸರೊಂದಿಗೆ, ಒಂಟಿ ಪಯಣಿಗನ ದಾರಿಯಂತೆ, ಮೊಗವೊಂದನು ನಗುವಿನಿಂದ ತುಂಬಿಸಿ ಬಾಳ ನೇಗಿಲಿಗೆ ನೊಗವನ್ನಾಗಿಸಿ ಹೊರಡುವ ಯಾತ್ರೆಯಲ್ಲಿ ಅನಿರ್ದಿಷ್ಟ ಮೌನ ಜೊತೆಯಾಗಿರುತ್ತದೆಯಲ್ಲವೇ?
ಬದುಕ ಚಕ್ರದಲ್ಲಿ ಕೆಲವು ಬಾಂಧವ್ಯಗಳು ಮರೆಯಾಗುತ್ತವೆ ತಾರೆಗಳಂತೆ. ಸ್ನೇಹಿತರ ದಿನದಂದು ಕೈಲಿರದ ಫ್ರೆಂಡ್ಶಿಪ್ ಬ್ಯಾಂಡ್, ಜೊತೆಗಿರದ ಕನಸು ಹಂಚಿಕೊಂಡ ಜೀವ, ರಕ್ಷಾಬಂಧನದಂದು ಕೈ ಸೇರದ ಅದೊಂದು ಅತ್ಯಾತ್ಮೀಯ ರಾಖಿ, ಮನೆಯಲ್ಲೊಂದು ನೀರವತೆ. ಇವೆಲ್ಲದರ ಮಧ್ಯೆ ಕೆಲವು ಪುಟಗಳು ಖಾಲಿ ಉಳಿದಿರುತ್ತವೆ, ಹಾಗೂ ಚಂದದ ರಂಗಿನಿಂದ ತುಂಬಲ್ಪಡುತ್ತವೆ ಮುಂದೊಂದು ದಿನ. ಕಳೆದುದರ ಜಾಗದಲ್ಲಿ ಆ ರಂಗು ತುಂಬದೇ ಮತ್ತೊಂದು ಜಾಗವ ಅಲಂಕರಿಸುತ್ತದೆ. ಮಲ್ಲಿಗೆಯೊಂದು ಕೆಂಗುಲಾಬಿಯ ಸ್ಥಾನವನ್ನೆಂದಿಗೂ ಅಲಂಕರಿಸದು. ಆದರೆ, ಮಲ್ಲಿಗೆಯ ಕಂಪು, ಕೆಂಗುಲಾಬಿಯ ಸವಿ ನೆನಪುಗಳನ್ನಷ್ಟೇ ಜೊತೆಯಾಗಿಸಬಹುದು ಬಾಳ ತುಂಬಾ.
ಕರಗುವ ಮೇಣದ ಕೊನೆಯ ಬಿಂದುವಿನಂತೆ, ಮುಸಲಧಾರೆಯೊಂದರ ಕೊನೆಯ ಹನಿಯಂತೆ, ಕವನದ ಸಾಲಿನ ಕೊನೆಯದೊಂದು ಪದದಂತೆ, ಉರಿವ ಲಾಂದ್ರದ ಕೊನೆಯ ಜ್ಯೋತಿರ್ಬಿಂದುವಿನಂತೆ, ಪುಸ್ತಕದ ಸಾಲುಗಳಲ್ಲಿನ ಕೊನೆಯ ವಿರಾಮದಂತೆ, ಬುತ್ತಿಯೊಂದರ ಕೊನೆಯ ತುತ್ತಿನಂತೆ, ಕೆಲವು ಬಂಧ ಬಂಧನಗಳು ಕೊನೆಯಾಗುತ್ತವೆ ತಿಳಿದೋ ತಿಳಿಯದೆಯೋ… ಉಳಿಯುತ್ತವೆ ಬಯಸಿಯೋ, ಬಯಸದೆಯೋ..
ಬದುಕಬುತ್ತಿಯ ಹೂರಣವಿದು ಭಾವಬುತ್ತಿ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ