- ವಿನಾಯಕರ ಪ್ರತಿಜ್ಞೆ ಎಂಬ ಕವಿತೆ - ಆಗಸ್ಟ್ 9, 2021
- ಒಲವಿಲ್ಲದ ಪೂಜೆ - ಮೇ 14, 2021
- ಪರಿವಾರ ಪ್ರಿಯನಲ್ವೆ ಇಕ್ಷ್ವಾಕು ಸಂಜಾತ? - ಏಪ್ರಿಲ್ 20, 2021
ಮನೆಯ ನಿರ್ವಹಣೆಯನ್ನು ಕೆಲವರು ಸೀಮಿತ ಚಟುವಟಿಕೆಯೆಂದು ಭಾವಿಸಿ ನಿಕೃಷ್ಟವಾಗಿ ಕಾಣುತ್ತಾರೆ ಹಾಗೂ ಕಡೆಗಣಿಸುತ್ತಾರೆ. ಆದರೆ ಮನೆ ಎನ್ನುವುದು ಹಲವಾರು ಸಾಮಾಜಿಕ ಸಮಸ್ಯೆಗಳ ಉಗಮಕ್ಕೆ ಅದೇ ರೀತಿ ನಿವಾರಣೆಗೆ ಮೂಲ ನೆಲೆಯಾಗಿರುತ್ತದೆ…….!
ಪ್ರಜ್ಞಾ ಮತ್ತಿಹಳ್ಳಿ
ಸಮಾಜ ಜೀವಿಯಾದ ಮನುಷ್ಯ ತನ್ನ ಕುಟುಂಬದ ವಾಸಕ್ಕಾಗಿ ಕಲ್ಪಿಸಿಕೊಂಡ ಚೌಕಟ್ಟಿನ ಪರಿಧಿಯನ್ನು ಮನೆ ಎನ್ನುತ್ತೇವೆ. ಮನೆ ಎಂಬ ಕೌಟುಂಬಿಕ ವಿಶ್ವದಲ್ಲಿ ಪ್ರತಿಯೊಬ್ಬನಿಗೂ ತನ್ನದೇ ಆದ ಕರ್ತವ್ಯಗಳಿರುತ್ತವೆ. ತಂದೆ-ತಾಯಿ-ಅಣ್ಣ-ತಂಗಿ-ಮಗ-ಮಗಳು ಹೀಗೆ ನಿರ್ದಿಷ್ಟ ಪಾತ್ರ ನಿರ್ವಹಣೆಯ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದರೆ ಮಾತ್ರ ಈ ಕೌಟುಂಬಿಕ ಹಡಗು ತನ್ನ ಸಮತೋಲನವನ್ನು ಕಾಯ್ದುಕೊಂಡು ಭವಸಾಗರದಲ್ಲಿ ತೇಲಾಡುತ್ತದೆ. ಅದನ್ನೇ ಮನೆಗೆಲ್ಲುವುದು ಎಂದು ಸಾಂಕೇತಿಕವಾಗಿ ಕರೆಯುತ್ತಾರೆ. ವ್ಯಕ್ತಿಯೊಬ್ಬ ತನ್ನ ಸುತ್ತಲಿನ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳುವುದಕ್ಕೆ ಮಾರುಗೆಲ್ಲುವುದು ಎನ್ನುತ್ತಾರೆ.
ಇದು ವೈಯಕ್ತಿಕ ಬದುಕಿನ ವಿಸ್ತರಣೆಯಾಗಿರುತ್ತದೆ. ಸಾಮಾಜಿಕವಾಗಿ ತೊಡಗಿಕೊಂಡಾಗ ಬಹಳ ಸಲ ಗೌರವ, ಪ್ರಸಿದ್ಧಿಗಳು ದೊರೆತು ವ್ಯಕ್ತಿ ಖ್ಯಾತನಾಗುತ್ತಾನಾದ ಕಾರಣ ಬಹಳಷ್ಟು ಜನರಿಗೆ ಈ ಮಾರು ಗೆಲ್ಲುವಿಕೆಯ ಕುರಿತು ಆಸಕ್ತಿ ಆಕರ್ಷಣೆಗಳು ಹೆಚ್ಚಾಗಿರುತ್ತದೆ.
“ಮನ್ನಣೆಯದಾಹವೀಯೆಲ್ಲಕುಂ ತೀಕ್ಷ್ಣತಮ । ತಿನ್ನುವುದಾತ್ಮವನೆ ..ಮಂಕುತಿಮ್ಮ“ ಎಂಬ ಕವಿವಾಣಿಯಂತೆ ಪ್ರಸಿದ್ಧಿಯ ಆಸೆಯಿಂದ ಸಮಾಜಮುಖಿಯಾಗುವಾತ ತನ್ನ ವ್ಯಕ್ತಿತ್ವದ ಬೆಳವಣಿಗೆಯನ್ನು ಹಾಗೂ ಕುಟುಂಬದ ಸೌಖ್ಯವನ್ನೂ ಬಲಿ ಕೊಟ್ಟು ಬಿಡುತ್ತಾನೆ. ಆದರೆ ಸಾಮಾಜಿಕ ಹೊಣೆಗಾರಿಕೆಯೆಂಬುದು ಸೀಮಾತೀತವಾದ ಸಮುದ್ರ. ಅದಕ್ಕೆ ಎಲ್ಲೆಗಳಿಲ್ಲ. ಈಜಿದಷ್ಟೂ ದಡ ದೂರವಾಗುವ ಕಡಲಿಗೆ ಇಳಿದರೆ ಈಜುಗಾರ ತನ್ನ ಶಕ್ತಿಯುಡುಗುವ ತನಕವೂ ಈಜುತ್ತಿರುತ್ತಾನೆಯೇ ಹೊರತು ಅಲ್ಲಿ ಸಂಪೂರ್ಣತೆ ಅಥವಾ ಮುಕ್ತಾಯ ಎಂಬ ಮಾತಿರುವುದಿಲ್ಲ. ಹೀಗಾಗಿ ಯಾವುದೇ ವ್ಯಕ್ತಿ ತನ್ನ ವೈಯಕ್ತಿಕ ಜವಾಬ್ದಾರಿಗಳ ನಿರ್ವಹಣೆಯ ನಂತರದಲ್ಲಿ ಸಾಮಾಜಿಕ ಕೆಲಸಗಳನ್ನು ನಡೆಸುವುದು ಸರಿಯಾದ ಕ್ರಮ.
ಮನೆಯ ನಿರ್ವಹಣೆಯನ್ನು ಕೆಲವರು ಸೀಮಿತ ಚಟುವಟಿಕೆಯೆಂದು ಭಾವಿಸಿ ನಿಕೃಷ್ಟವಾಗಿ ಕಾಣುತ್ತಾರೆ ಹಾಗೂ ಕಡೆಗಣಿಸುತ್ತಾರೆ. ಆದರೆ ಮನೆ ಎನ್ನುವುದು ಹಲವಾರು ಸಾಮಾಜಿಕ ಸಮಸ್ಯೆಗಳ ಉಗಮಕ್ಕೆ ಅದೇ ರೀತಿ ನಿವಾರಣೆಗೆ ಮೂಲ ನೆಲೆಯಾಗಿರುತ್ತದೆ. ಬಾಲ್ಯದಲ್ಲಿ ಪಡೆಯುವ ಶಿಕ್ಷಣ, ತಿಳುವಳಿಕೆ, ನೈತಿಕತೆ, ಸಂಸ್ಕಾರ ಇವೆಲ್ಲವೂ ಪ್ರತಿಯೊಬ್ಬರ ವ್ಯಕ್ತಿತ್ವದ ತಳಹದಿಯಾಗಿದ್ದು ಇಡೀ ಜೀವನಕ್ಕೆ ಬೇಕಾಗುವ ಸರಕು ಸಾಮಗ್ರಿಗಳ ಉಗ್ರಾಣವೇ ಮನೆ ಎಂದರೂ ತಪ್ಪಾಗುವುದಿಲ್ಲ. ಮನೆಯಲ್ಲಿ ಸರಿಯಾದ ಪಾಲನೆ ಪೋಷಣೆ ನೆಮ್ಮದಿ ಪಡೆಯುವ ವ್ಯಕ್ತಿ ಧನಾತ್ಮಕ ಚೈತನ್ಯವನ್ನು ಹೊಂದಿ ಸಮಾಜದ ಪ್ರಗತಿಪರವಾದ ಚಟುವಟಿಕೆಗಳಲ್ಲಿ ವ್ಯಸ್ತನಾಗುತ್ತಾನೆ. ಇದಕ್ಕೆ ವಿರುದ್ಧವಾಗಿ ಮನೆಯ ಅಶಾಂತಿ, ಕಲಹ, ಅತೃಪ್ತಿಗಳಿಂದ ಋಣಾತ್ಮಕ ಪ್ರೇರಣೆ ಪಡೆಯುವ ವ್ಯಕ್ತಿ ಜನವಿರೋಧಿ ಕೆಲಸಗಳನ್ನು ಮಾಡುತ್ತ ಅಪರಾಧಿಯಾಗಿ ರೂಪುಗೊಳ್ಳುತ್ತಾನೆ. ಈ ಕಾರಣಕ್ಕಾಗಿಯೇ ಮನೆ ಎನ್ನುವುದು ಸಮಷ್ಟಿ ಚಿಂತನೆಯಲ್ಲಿ ಎಷ್ಟೇ ಸಣ್ಣ ಘಟಕವಾಗಿದ್ದರೂ ಅದೇ ಬಾಳ ಯಾತ್ರೆಯ ಮೊದಲ ಹೆಜ್ಜೆಯಾದ್ದರಿಂದ ಅದನ್ನು ಸರಿಯಾಗಿ ನಿರ್ವಹಿಸಬೇಕು. ಅಲ್ಲಿ ಒಂದು ಮಟ್ಟದ ಪೂರ್ಣತೆ ಪ್ರಾಪ್ತಿಯಾದ ಬಳಿಕವೇ ಇತರ ವಿಚಾರಗಳಿಗೆ ಗಮನ ಕೊಡುವುದು ಸೂಕ್ತ. ಉದ್ಧರಿಸುವೆನು ಜಗವನೆನ್ನುತಿಹ ಸಖನೆ ನಿನ್ನುದ್ಧಾರವೆಷ್ಟಾಯ್ತೊ? ಎಂಬ ಕವಿವಾಣಿಯಂತೆ ಮೊದಲು ಆತ್ಮೊದ್ಧಾರಕ್ಕೆ ಆದ್ಯತೆ. ಪ್ರತಿಯೊಬ್ಬನೂ ತನ್ನ ಯೋಗ್ಯತೆಯನ್ನು ಬೆಳೆಸಿಕೊಳ್ಳುವ, ಸರಿಪಡಿಸಿಕೊಳ್ಳುವ, ತಿದ್ದಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಿದರೆ ಊರು ಉದ್ಧಾರ ತಾನೇ ಆಗುತ್ತದೆ. ವೈಯಕ್ತಿಕ ಜವಾಬ್ದಾರಿಗಳ ನಿರ್ವಹಣೆ ಅವರವರದ್ದೇ ಹೊರೆ. ಅದನ್ನು ಅವರವರೇ ಹೊರುವುದು ನ್ಯಾಯ. ತನ್ನ ಶಿಲುಬೆಯ ತಾನೇ ಹೊತ್ತನಲ ಗುರು ಏಸು? ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು ಬೆನ್ನಿನಲಿ ಹೊತ್ತುನಡೆ ಎಂಬ ಮಾತಿನಂತೆ ನಮ್ಮ ಪಾಲಿಗೆ ಬಂದಿರುವ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಅದು ಅನೇಕ ಸಮಸ್ಯೆಗಳು ಹುಟ್ಟದಿರುವಂತೆ ಮಾಡುತ್ತದೆ.
ವ್ಯಕ್ತಿಯೊಬ್ಬ ಮಗನೊ ಮಗಳೊ ಆಗಿದ್ದು ತನ್ನ ತಂದೆ ತಾಯಿಗೆ ಮಾಡಬೇಕಾದ ಕರ್ತವ್ಯಗಳನ್ನು ಸರಿಯಾಗಿ ಮಾಡಿದರೆ ಅದು ಊರಿಗೆ ಉಪಕಾರವೂ ಹೌದು. ಏಕೆಂದರೆ ಮಕ್ಕಳಿಂದ ಅನಾದರಿಸಲ್ಪಟ್ಟ ವೃದ್ಧರನ್ನು ನೋಡಿಕೊಳ್ಳಲು ವೃದ್ಧಾಶ್ರಮಗಳು ಬೇಕಾಗುತ್ತವೆ. ಹಿರಿಯ ನಾಗರಿಕರ ಅಭದ್ರ ಜೀವನ ಅನೇಕ ಸಾಮಾಜಿಕ ಅಪರಾಧಗಳಿಗೆ ಎಡೆ ಮಾಡಿಕೊಡುತ್ತದೆ. ಅದೇ ರೀತಿ ಗಂಡ ಹೆಂಡತಿಯರು ತಮ್ಮ ಕುಟುಂಬದ ಕಾಳಜಿ ನಿರ್ವಹಿಸಿದರೆ ಪರಸ್ಪರರ ಶಕ್ತಿ- ಪ್ರತಿಭೆಗಳು ಪುಷ್ಟಿಗೊಂಡು ಅವರಿಂದ ಅನೇಕ ಸಮಾಜಮುಖಿ ಕಾರ್ಯಗಳು ಸಾಧ್ಯವಾಗುತ್ತವೆ. ಸಂಸಾರದಲ್ಲಿ ಮನೆ ಎಂಬುದು ತುಂಬಾ ವಿಶಾಲ ವ್ಯಾಪ್ತಿಯುಳ್ಳ ಹರಹು. ಅಲ್ಲಿಯ ನಿವಾಸಿಗಳಿಗೆ ಆಕಾಶದಷ್ಟೇ ಅವಕಾಶ. ದಣಿದು ಬಂದವರಿಗೆ ಚೇತನವನ್ನು, ಬೇಸತ್ತು ಮರಳಿದವರಿಗೆ ಉಲ್ಲಾಸವನ್ನು, ಭಯಗೊಂಡವರಿಗೆ ವಾತ್ಸಲ್ಯದ ಶ್ರೀರಕ್ಷೆಯನ್ನು ನೀಡುವ ಸುಧಾ ಸಮುದ್ರವೇ ಮನೆ. ಸರ್ವಜ್ಞನ ವಚನದಲ್ಲಿ ಬರುವ ಬೆಚ್ಚನಾ ಮನೆಯಾಗೆ ಎಂಬ ಸಾಲಿನಲ್ಲಿ ಬರುವ ಮನೆ ಈ ಲಕ್ಷಣಗಳನ್ನು ಹೊಂದಿರುವ ಕಾರಣಕ್ಕಾಗಿಯೇ ಸ್ವರ್ಗವನ್ನು ಸುಡುವಷ್ಟು ಅಂದರೆ ತಿರಸ್ಕರಿಸಿ ಬದುಕುವಷ್ಟು ಆತ್ಮವಿಶ್ವಾಸ ಹುಟ್ಟಿಸುತ್ತದೆ. ಅಂತಹ ವಾತಾವರಣದಲ್ಲಿ ಸಲಹಲ್ಪಟ್ಟ ಮಕ್ಕಳೂ ಕೂಡ ತಿಳುವಳಿಕೆ ಜಾಣ್ಮೆಗಳ ಜೊತೆಗೆ ಮಾನಸಿಕ ಭದ್ರತೆಯನ್ನು ಪಡೆದುಕೊಂಡು ಜೀವನ್ಮುಖಿಯಾದ ನಿಲುವನ್ನು ಹೊಂದಿರುತ್ತಾರೆ. ಅವರಿಂದ ಹಲವು ಬಗೆಯ ಸಮಾಜಮುಖಿ ಚಿಂತನೆಗಳು, ಕೆಲಸಗಳು ನಡೆದು ಊರು ಉದ್ಧಾರ ಅಥವಾ ಜಗದುದ್ಧಾರ ತಾನೇ ತಾನಾಗಿ ಆಗುತ್ತದೆ.
ತಂದೆ-ತಾಯಿಗಳು ಬಾಹ್ಯ ಚಟುವಟಿಕೆಗಳಲ್ಲಿ ವ್ಯಸ್ತರಾಗಿ ಅವರಿಂದ ಅಲಕ್ಷಿಸಲ್ಪಟ್ಟ ಮಕ್ಕಳಿಗೆ ಎಷ್ಟೇ ಒಳ್ಳೆಯ ಶಿಕ್ಷಣ ಕೊಟ್ಟರೂ ಅವರು ಬದುಕಿನ ಕುರಿತು ಸಕಾರಾತ್ಮಕವಾಗಿ ಯೋಚಿಸುವುದಿಲ್ಲ. ಮಾನಸಿಕವಾಗಿ ಗಾಯಗೊಂಡ ಅವರ ವ್ಯಕ್ತಿತ್ವ ಯಾವಾಗಲೂ ಅಂಗವಿಕಲವಾಗಿಯೇ ಉಳಿದುಬಿಡುತ್ತದೆ. ಅವರು ಬೇರು ಸತ್ತ ಗಿಡದಂತೆ ಒಳಗೊಳಗೇ ಗೆದ್ದಲು ಹಿಡಿದ ಕಂಬದಂತೆ ವಿನಾಶಕಾರಿ ಆಲೋಚನೆಗಳಲ್ಲಿ ಅಥವಾ ದಮನಕಾರೀ ಪ್ರವೃತ್ತಿಯಲ್ಲಿ ನಂಬಿಕೆಯುಳ್ಳವರಾಗಿದ್ದು ಅವರಿಂದ ಯಾವ ಕಟ್ಟುವ ಕೆಲಸವೂ ಸಾಧ್ಯವಿರುವುದಿಲ್ಲ. ಇಂತಹ ಯುವ ಜನಾಂಗ ದೇಶವಿದ್ರೋಹದ ಕೆಲಸಗಳಲ್ಲಿ, ಅಪರಾಧಗಳಲ್ಲಿ ತೊಡಗಿಕೊಳ್ಳುತ್ತದೆ. ಅನೇಕ ಕಿಡ್ನ್ಯಾಪ್ ಪ್ರಕರಣಗಳಲ್ಲಿ ಭಾಗಿಯಾದ ಯುವಕರ ಹಿನ್ನೆಲೆ ಗಮನಿಸಿದಾಗ ಅಚ್ಚರಿ ಹುಟ್ಟಿಸುವ ಸತ್ಯಾಂಶಗಳು ಕಂಡು ಬರುತ್ತವೆ.
ಬಹುತೇಕ ಯುವಕರು ಸುಶಿಕ್ಷಿತ, ಸಿರಿವಂತ ತಂದೆ-ತಾಯಿಗಳ ಮಕ್ಕಳಾಗಿದ್ದು ಪಾಲಕರ ಸಮಯಾಭಾವದಿಂದ ನೌಕರರ ಮಡಿಲಲ್ಲಿ ಅಥವಾ ಹಾಸ್ಟೆಲುಗಳಲ್ಲಿ ಬೆಳೆದವರು. ಅವರು ತಮ್ಮ ಕುಟುಂಬದಿಂದ ಪಡೆಯದೇ ಉಳಿದ ಸಕಾರಾತ್ಮಕ ಶಕ್ತಿಯನ್ನು ಕೆಟ್ಟ ಚಟಗಳಲ್ಲಿ ಹುಡುಕಿ ವ್ಯಸನಿಗಳಾಗಿರುತ್ತಾರೆ. ಕ್ರೂರಿಗಳಾಗಿರುತ್ತಾರೆ. ಮನೆ ಮನುಷ್ಯ ಸಂಬಂಧಗಳು ಶುರುವಾಗುವ ಪೂರ್ವರಂಗ. ಗುರುಗಳು-ಹಿರಿಯರು-ದೊಡ್ಡವರು-ಚಿಕ್ಕವರು-ಹೆಣ್ಣುಮಕ್ಕಳು-ವಯಸ್ಸಾದವರು ಇತ್ಯಾದಿ ತಾರತಮ್ಯಗಳನ್ನು, ಎದುರಿಗಿನ ವ್ಯಕ್ತಿಯನ್ನು ಗಮನಿಸಿ ಸೂಕ್ತವಾಗಿ ನಡೆದುಕೊಳ್ಳುವ, ಮಾತಾಡುವ ತಾಲೀಮಿನ ಸ್ಥಳವೇ ಮನೆ. ಈ ತಾಲೀಮು ಸರಿಯಾಗಿ ಸಿಕ್ಕ ಮನುಷ್ಯ ಸಮಾಜದಲ್ಲಿ ಯೋಗ್ಯವಾಗಿ ವ್ಯವಹರಿಸುತ್ತಾನೆ.
ಮನೆ ಗೆಲ್ಲಬೇಕು ಎಂದಾಕ್ಷಣ ಮಾರು ಅಂದರೆ ಊರನ್ನು ಮರೆಯಬೇಕು ಅಥವಾ ಗಮನಿಸಬಾರದು ಎಂದರ್ಥವಲ್ಲ. ಮನೆಯ ಕಾಳಜಿಯ ತರುವಾಯದಲ್ಲಿ ಅಥವಾ ಜೊತೆಜೊತೆಯಾಗಿ ಸಮುದಾಯದ ಕಾಳಜಿ-ಚಿಂತನೆ ನಡೆಸಿದರೆ ಸೂಕ್ತವಾಗಿರುತ್ತದೆ. ಮನೆ ಜನರ ಪ್ರೀತಿ ವಿಶ್ವಾಸ ಗಳಿಸಿದ ವ್ಯಕ್ತಿ ಸಮಾಜದ ಕಾರ್ಯ ನಡೆಸುವಾಗ ಮನೆಜನರ ಬೆಂಬಲ ಖಂಡಿತವಾಗಿ ಸಿಗುತ್ತದೆ. ಆಗ ಅವನ ಸಮಾಜ ಸೇವೆಯೂ ಸಾಂಗವಾಗಿ ನೆರವೇರುತ್ತದೆ. ಅವನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಬಹುದು. ಹೀಗೆ ಮಾಡುವಾಗ ಅಂಥಹ ವ್ಯಕ್ತಿಗೆ ಎರಡೂ ಕಡೆ ಸಮತೋಲನ ಸಾಧಿಸುವ ಚಾಕಚಕ್ಯತೆ ಇರಬೇಕಾಗುತ್ತದೆ. ಮುಖ್ಯವಾಗಿ ಅಪಾರ ತಾಳ್ಮೆ ಮತ್ತು ಪರಿಶ್ರಮವಹಿಸುವ ಸಹಿಷ್ಣು ಸ್ವಭಾವ ಬೇಕು. ಸಮಯ-ಸಂದರ್ಭ-ಸನ್ನಿವೇಶಗಳಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ ಬೇಕು. ಹೊತ್ತು-ಗೊತ್ತು ನೋಡಿಕೊಂಡು ಮನೆಯೋ-ಮಾರೋ ಎಂದು ಅವುಗಳ ಕಾರ್ಯದ ಮಹತ್ವದ ಮೇಲಿಂದ ಪ್ರಾಮುಖ್ಯತೆ ಕೊಡುತ್ತೇವಾದರೆ ಎರಡೂ ಕಡೆ ಜೋಲಿ ಹೋಗದ ಹಾಗೆ ಸಂಭಾಳಿಸಬಹುದು. ಮಮತೆ- ಅಂತ:ಕರಣ ಇರುವ ಮನುಷ್ಯ ಮನೆ-ಮಾರುಗಳೆರಡನ್ನೂ ಗೆದ್ದು ಇಹ-ಪರಗಳೆರಡರಲ್ಲೂ ಸ್ವರ್ಗ ಸೃಷ್ಟಿಸಿಕೊಂಡು ಸುಖಿಯಾಗಿರುತ್ತಾನೆ.
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!
ಹುಚ್ಚು ಅಚ್ಚುಮೆಚ್ಚಾದಾಗ